ಯಾರನ್ನು ನಂಬುವುದು?
ಯಾರನ್ನು ನಂಬುವುದು?
ಅರಿವಳಿಕೆ ಕ್ಷೇತ್ರದಲ್ಲಿ ಭಾರೀ ಸಂಶೋಧನೆ ಮಾಡಿ ಹೆಸರು ಗಳಿಸಿದ ಅರಿವಳಿಕೆ ತಜ್ಞ ಅವನಾಗಿದ್ದನು. ಆದರೆ 1996ರಿಂದ ಹಿಡಿದು 10ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಈ ಪ್ರತಿಷ್ಠಿತ ವೈದ್ಯ ತಾನು ಮಾಡಿದ ಅಧ್ಯಯನಗಳ ಬಗ್ಗೆ ಪ್ರಸಿದ್ಧ ವೈದ್ಯಕೀಯ ಪತ್ರಿಕೆಗಳಲ್ಲಿ ಸುಳ್ಳು ಲೇಖನಗಳನ್ನು ಪ್ರಕಟಿಸಿದ್ದನು.
“ಅ ವನು ಯಾಕೆ ಈ ರೀತಿ ಮಾಡಿದ ಎನ್ನುವುದೇ ನನಗೆ ಅರ್ಥವಾಗದ ವಿಷಯ” ಎಂದು ಹೇಳಿದ ಡಾಕ್ಟರ್ ಸ್ಟೀವನ್ ಎಲ್. ಶಾಫರ್‌ರ ಮಾತನ್ನು ಅನಸ್ತೀಸ್ಯಾಲಜಿ ನ್ಯೂಸ್ ಉಲ್ಲೇಖಿಸುತ್ತದೆ.
ಗೌರವಾನ್ವಿತ ವ್ಯಕ್ತಿಗಳು ಮೋಸಕ್ಕೆ ಕೈ ಹಾಕುವುದೇಕೆ? ನಾಲ್ಕು ಸಂಭಾವ್ಯ ಕಾರಣಗಳನ್ನು ನೋಡೋಣ.
● ಅತಿಯಾಸೆ. ದ ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನ ಮಾಜಿ ಸಂಪಾದಕರಾದ ಡಾಕ್ಟರ್ ಜೆರೋಮ್ ಕಾಸಿರೆರ್ ಹೇಳಿದ್ದನ್ನು ನ್ಯೂ ಯಾರ್ಕ್ ಟೈಮ್ಸ್ ಹೀಗೆ ವರದಿಸಿತು: “ಔಷಧ ತಯಾರಿಸುವ ಕಂಪೆನಿಗಳು ಸಂಶೋಧಕರ ಆದಾಯದ ಮೂಲವಾಗಿರುವಾಗ ಅವರು ಆ ಕಂಪೆನಿಗಳಿಗೆ ಲಾಭವಾಗುವ ರೀತಿಯ ಫಲಿತಾಂಶಗಳನ್ನೇ ತೋರಿಸುತ್ತಾರೆ.”
● ಯಶಸ್ಸಿನ ಹುಚ್ಚು. ಜರ್ಮನಿಯಲ್ಲಿ ಯಶಸ್ಸಿನ ಸಂಕೇತವೆಂದು ಎಣಿಸಲಾಗುವ ಡಾಕ್ಟರ್ ಪದವಿಯನ್ನು “ಸಂಪಾದಿಸಲು” ಅಲ್ಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ತಮ್ಮ ಶಿಕ್ಷಕರಿಗೆ ಸಾವಿರಾರು ಯೂರೋಗಳನ್ನು ಲಂಚವಾಗಿ ಕೊಡುತ್ತಾರೆಂಬ ಸುದ್ದಿಯಿದೆ. ನ್ಯೂ ಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಿತವಾದ ಒಂದು ಅಧ್ಯಯನಕ್ಕನುಸಾರ ನೈತಿಕ ಮಟ್ಟಗಳನ್ನು ಧಿಕ್ಕರಿಸಿದ ಹೆಚ್ಚಿನ ವಿದ್ಯಾರ್ಥಿಗಳು, ಯಶಸ್ಸು ತಮ್ಮ ಮುಡಿಗೇರಿದ ನಂತರ “ನೀತಿತತ್ವಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಇರಾದೆ” ತಮಗಿದೆಯೆಂದು ಹೇಳುತ್ತಾರೆ.
● ಆದರ್ಶ ವ್ಯಕ್ತಿಗಳ ಕೊರತೆ. ಪ್ರೌಢಶಾಲಾ ವಿದ್ಯಾರ್ಥಿಗಳ ಬಗ್ಗೆ ಒಬ್ಬ ಪ್ರೊಫೆಸರ್ ಹೀಗಂದದ್ದನ್ನು ನ್ಯೂ ಯಾರ್ಕ್ ಟೈಮ್ಸ್ ಉಲ್ಲೇಖಿಸುತ್ತದೆ: “ಅವರು ನೈತಿಕ ಮಟ್ಟಗಳ ಪ್ರಜ್ಞೆಯನ್ನೇ ಕಳೆದುಕೊಂಡಿದ್ದಾರೆ ಎಂದು ಹೇಳಬಹುದು . . . ಅದಕ್ಕಿಂತಲೂ ಅವರ ಶಿಕ್ಷಕರು, ಆಪ್ತ ಸಲಹೆಗಾರರು ಮತ್ತು ಸಮಾಜವು ಅವರಲ್ಲಿ ಆ ಪ್ರಜ್ಞೆಯನ್ನು ಬೆಳೆಸಲು ಹಾಗೂ ಅವರಿಗೆ ಅದರಂತೆ ನಡೆಯಲು ಸಹಾಯ ಮಾಡಲೇ ಇಲ್ಲವೆಂದು ಹೇಳಬಹುದು.”
● ಮೌಲ್ಯಗಳಿಗೆ ತದ್ವಿರುದ್ಧವಾದ ಕ್ರಿಯೆಗಳು. ಸುಮಾರು 30,000 ವಿದ್ಯಾರ್ಥಿಗಳ ಅಧ್ಯಯನವೊಂದರಲ್ಲಿ 98% ಮಂದಿ ವೈಯಕ್ತಿಕ ಸಂಬಂಧಗಳನ್ನು ಕಾಪಾಡಿಕೊಳ್ಳಲು ಪ್ರಾಮಾಣಿಕತೆ ಬಹುಮುಖ್ಯ ಎಂದು ನಂಬುವುದಾಗಿ ಹೇಳಿದರು. ಆದರೂ ಅವರಲ್ಲೇ ಪ್ರತಿ 10 ವಿದ್ಯಾರ್ಥಿಗಳಲ್ಲಿ 8 ಮಂದಿ ತಾವು ಹೆತ್ತವರಿಗೆ ಸುಳ್ಳುಹೇಳಿದ್ದೇವೆಂದೂ 64% ಮಂದಿ ಕಳೆದ ವರ್ಷದ ಪರೀಕ್ಷೆಯಲ್ಲಿ ಕಾಪಿಹೊಡೆದಿದ್ದೇವೆಂದೂ ಒಪ್ಪಿಕೊಂಡರು.
ಶ್ರೇಷ್ಠ ನೈತಿಕ ಮೂಲತತ್ತ್ವಗಳು
ಈ ಪುಟದಲ್ಲಿರುವ ಚೌಕಕ್ಕನುಸಾರ ಇನ್ನೊಬ್ಬರ ಮೇಲೆ ನಂಬಿಕೆ ಇಡುವಂಥ ರೀತಿಯಲ್ಲಿ ಮಾನವರನ್ನು ಸೃಷ್ಟಿಸಲಾಗಿದೆ ಎಂದು ತೋರುತ್ತದೆ. ಹಾಗಿದ್ದರೂ “ಮನುಷ್ಯರ ಮನಸ್ಸಂಕಲ್ಪವು ಚಿಕ್ಕಂದಿನಿಂದಲೇ ಕೆಟ್ಟದ್ದು” ಎಂಬ ವಾಸ್ತವಿಕತೆಯನ್ನು ಬೈಬಲ್ ತಿಳಿಸುತ್ತದೆ. (ಆದಿಕಾಂಡ 8:21) ಈ ಮನಸ್ಸಂಕಲ್ಪವನ್ನು ನಿಗ್ರಹಿಸುತ್ತಾ, ಇಂದು ಸರ್ವಸಾಮಾನ್ಯವಾಗಿರುವ ವಂಚನಾತ್ಮಕ ಸ್ವಭಾವ ನಿಮಗೆ ಅಂಟದಂತೆ ಹೇಗೆ ತಡೆಯಬಲ್ಲಿರಿ? ಕೆಳಗಿರುವ ಬೈಬಲ್ ಮೂಲತತ್ತ್ವಗಳು ಸಹಾಯ ಮಾಡುವವು:
● “ನೆರೆಯವನಿಗೆ ಕೇಡನ್ನು ಕಲ್ಪಿಸಬಾರದು, ಅವನು ನಿನ್ನ ಪಕ್ಕದಲ್ಲಿ ನಂಬಿಕೆಯಿಂದ ವಾಸಮಾಡುತ್ತಾನಲ್ಲವೇ.”—ಜ್ಞಾನೋಕ್ತಿ 3:29.
ನೆರೆಯವರ ಮೇಲೆ ಪ್ರೀತಿಯಿದ್ದರೆ ನಾವು ಅವರಿಗೆ ನಂಬಿಕೆದ್ರೋಹ ಮಾಡದೆ ಹಿತವನ್ನೇ ಬಯಸುವೆವು. ಈ ಮೂಲತತ್ತ್ವವನ್ನು ಎಲ್ಲರೂ ಅನ್ವಯಿಸುತ್ತಿದ್ದರೆ ಅತಿಯಾಸೆಯಿಂದಾಗಿ ನಡೆಯುವ ಮಾನವ ಶೋಷಣೆಯ ಕೃತ್ಯಗಳಿಗೆ ತೆರೆ ಬೀಳುತ್ತಿತ್ತು. ಉದಾಹರಣೆಗೆ ಈ ಲೇಖನಮಾಲೆಯ ಆರಂಭದಲ್ಲಿ ತಿಳಿಸಲಾದ ನಕಲಿ ಔಷಧಿಗಳ ನ್ಯಾಯಬಾಹಿರ ಕ್ರಯವಿಕ್ರಯ ಇರುತ್ತಿರಲಿಲ್ಲ.
● “ಸತ್ಯದ ತುಟಿ ಶಾಶ್ವತ; ಸುಳ್ಳಿನ ನಾಲಿಗೆ ಕ್ಷಣಿಕ.”—ಜ್ಞಾನೋಕ್ತಿ 12:19.
ನಿಯತ್ತಿನಿಂದ ನಡೆಯುವವರಿಗೆ ಏನೂ ಲಾಭವಿಲ್ಲ ಎಂಬುದು ಅನೇಕರ ಅಭಿಪ್ರಾಯ. ಆದರೆ, ‘ಯಾವುದು ಹೆಚ್ಚು ಅಮೂಲ್ಯ, ಕ್ಷಣಿಕ ಲಾಭವೋ ಸ್ವಗೌರವ ಸಮೇತ ಸಿಗುವ ಬಾಳುವ ಪ್ರಯೋಜನಗಳೋ?’ ಎಂದು ನಿಮ್ಮನ್ನೇ ಕೇಳಿಕೊಳ್ಳಿ. ಒಬ್ಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಕಾಪಿಹೊಡೆಯುವ ಮೂಲಕ ತನಗಿರುವ ಜ್ಞಾನ ಇಲ್ಲವೆ ಕೌಶಲದ ಬಗ್ಗೆ ಇತರರ ಕಣ್ಣಿಗೆ ಮಣ್ಣೆರೆಚಬಹುದು. ಆದರೆ ಮುಂದೆ ಉದ್ಯೋಗ ಸಿಕ್ಕಾಗ ಅವನ ಪಾಡು ಹೇಗಿರಬಹುದೆಂದು ಯೋಚಿಸಿ.
● “ಸದ್ಧರ್ಮಿಯು ನಿರ್ದೋಷವಾಗಿ ನಡೆಯುವನು; ಅವನು ಗತಿಸಿದ ಮೇಲೆಯೂ ಅವನ ಮಕ್ಕಳು ಭಾಗ್ಯವಂತರು.”—ಜ್ಞಾನೋಕ್ತಿ 20:7.
ಹೆತ್ತವರೇ, ‘ನಿರ್ದೋಷಿಯಾಗಿ ನಡೆದು’ ನಿಮ್ಮ ಮಕ್ಕಳಿಗೆ ಒಳ್ಳೇ ಮಾದರಿಯಿಡಿ. ನಿಯತ್ತಿನಿಂದ ನಡೆದದ್ದರಿಂದ ಗಳಿಸಿದ ಪ್ರಯೋಜನಗಳ ಬಗ್ಗೆ ಅವರಿಗೆ ಹೇಳಿ. ಹೆತ್ತವರು ನಿಯತ್ತಿನಿಂದ ಬಾಳ್ವೆ ನಡೆಸುವುದನ್ನು ಕಂಡು ಮಕ್ಕಳೂ ಅದನ್ನೇ ಅನುಸರಿಸುವ ಸಾಧ್ಯತೆಗಳು ಹೆಚ್ಚು.—ಜ್ಞಾನೋಕ್ತಿ 22:6.
ಮೇಲಿನ ಬೈಬಲ್ ಮೂಲತತ್ತ್ವಗಳು ನಿಜಕ್ಕೂ ಕಾರ್ಯಸಾಧಕವೋ? ನಂಬಿಕೆಗರ್ಹರಾದ ಜನರನ್ನು ಇಂದು ಕಾಣಬಹುದೋ? (g10-E 10)
[ಪುಟ 4ರಲ್ಲಿರುವ ಸಂಕ್ಷಿಪ್ತ ವಿವರಣೆ]
ಲಾ ಫಿಗಾರೋ ವಾರ್ತಾಪತ್ರಿಕೆ ಹೇಳುವಂತೆ, “ಸಮಾಜದಲ್ಲಿನ ಅಂದರೆ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿನ ಹೆಸರಾಂತ ವ್ಯಕ್ತಿಗಳ ಚಾರಿತ್ರ್ಯವೇ ಸರಿಯಿಲ್ಲದಿರುವಾಗ ನಾವೇಕೆ ನಿಯತ್ತಿನಿಂದ ನಡೆದುಕೊಳ್ಳಬೇಕು” ಎಂದು ಹೆಚ್ಚೆಚ್ಚು ಫ್ರೆಂಚರು ನೆನಸುತ್ತಿದ್ದಾರೆ.
[ಪುಟ 5ರಲ್ಲಿರುವ ಚೌಕ]
ನಂಬಿಕೆಯಿಡುವ ರೀತಿಯಲ್ಲಿ ಸೃಷ್ಟಿಸಲ್ಪಟ್ಟಿದ್ದೇವೋ?
ಜರ್ಮನಿಯ ಫ್ರ್ಯಾಂಕ್‌ಫರ್ಟ್ ವಿಶ್ವವಿದ್ಯಾನಿಲಯದ ಬಿಸ್‌ನೆಸ್ ಆ್ಯಡ್‌ಮಿನಿಸ್ಟ್ರೇಷನ್‌ನ ಪ್ರೊಫೆಸರ್ ಮೈಕಲ್ ಕಾಸ್‌ಫೆಲ್ಡ್ ತಾವು ನಡೆಸಿದ ಪ್ರಯೋಗಗಳಿಂದ ಈ ತೀರ್ಮಾನಕ್ಕೆ ಬಂದರು: ನಂಬಿಕೆಯಿಡುವುದು “ಮಾನವ ಸ್ವಭಾವದ ಜೈವಿಕ ರಚನೆಯ ಭಾಗವಾಗಿದೆ.” ಇಬ್ಬರು ವ್ಯಕ್ತಿಗಳು ವ್ಯವಹರಿಸುವಾಗ ಅವರ ಮಿದುಳಲ್ಲಿ ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ ಎಂಬದನ್ನು ಕಾಸ್‌ಫೆಲ್ಡ್ ಕಂಡುಹಿಡಿದರು. ಈ ಹಾರ್ಮೋನ್ ನಂಬಿಕೆಯನ್ನಿಡುವುದನ್ನು ಪ್ರಚೋದಿಸುತ್ತದೆ. ನಂಬಿಕೆಯಿಡುವುದು “ಮಾನವ ಪ್ರಭೇದದ ಒಂದು ವೈಶಿಷ್ಟ್ಯ. ಅದಿಲ್ಲದಿದ್ದರೆ ನಮ್ಮನ್ನು ಮಾನವರಾಗಿಸುವ ಒಂದು ಅಂಶವೇ ಇಲ್ಲವಾಗುತ್ತದೆ” ಎನ್ನುತ್ತಾರೆ ಅವರು.