ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧರ್ಮವಿಲ್ಲದಿದ್ದರೆ ಲೋಕಕಲ್ಯಾಣ ಆಗುವುದೇ?

ಧರ್ಮವಿಲ್ಲದಿದ್ದರೆ ಲೋಕಕಲ್ಯಾಣ ಆಗುವುದೇ?

ಧರ್ಮವಿಲ್ಲದಿದ್ದರೆ ಲೋಕಕಲ್ಯಾಣ ಆಗುವುದೇ?

ನವನಾಸ್ತಿಕರು ಧರ್ಮಗಳಿಲ್ಲದ ಲೋಕವೊಂದರ ಕನಸು ಕಾಣುತ್ತಿದ್ದಾರೆ. ಆಗ ಅಲ್ಲಿ ಆತ್ಮಹತ್ಯಾ ದಾಳಿಕೋರರು, ಧರ್ಮ ಯುದ್ಧಗಳು, ಜನರಿಂದ ಹಣ ಸುಲಿಯುವ ಮತಪ್ರಚಾರಕರು ಇರುವುದಿಲ್ಲವಂತೆ. ನಿಮಗೂ ಹಾಗನಿಸುತ್ತದೊ?

ಉತ್ತರಿಸುವ ಮೊದಲು ನಿಮ್ಮನ್ನೇ ಕೇಳಿಕೊಳ್ಳಿ: ‘ಜನರೆಲ್ಲರೂ ನಾಸ್ತಿಕರಾದರೆ ಲೋಕಕಲ್ಯಾಣ ಆಗುವುದು ಎಂಬುದಕ್ಕೆ ಏನಾದರೂ ಪುರಾವೆ ಇದೆಯೋ?’ ಪರಿಗಣಿಸಿರಿ: ಕ್ಯಾಂಬೋಡಿಯದಲ್ಲಿ ‘ಖ್ಮೆರ್‌ ರೂಜ್‌’ ಪಕ್ಷವು ನಾಸ್ತಿಕ ಮಾರ್ಕ್ಸ್‌ವಾದಿ ಸರ್ಕಾರವನ್ನು ಸ್ಥಾಪಿಸಿದಾಗ 15 ಲಕ್ಷ ದೇಶವಾಸಿಗಳು ಸತ್ತರು. ಅಧಿಕೃತ ನಾಸ್ತಿಕ ರಾಷ್ಟ್ರವಾಗಿದ್ದ ಯು.ಎಸ್‌.ಎಸ್‌.ಆರ್‌.ನಲ್ಲಿ ಜೋಸೆಫ್‌ ಸ್ಟ್ಯಾಲಿನ್‌ನ ಆಳ್ವಿಕೆ ಲಕ್ಷಾಂತರ ಜನರ ಸಾವಿಗೆ ಕಾರಣವಾಯಿತು. ಈ ದುರಂತಗಳಿಗೆ ನಾಸ್ತಿಕತೆಯೇ ಕಾರಣವೆಂದು ಆರೋಪಿಸಲು ಸಾಧ್ಯವಿಲ್ಲ ನಿಜ. ಆದರೆ ನಾಸ್ತಿಕ ಆಡಳಿತವು ಶಾಂತಿಸಾಮರಸ್ಯವನ್ನು ತರುವುದಿಲ್ಲವೆಂದು ಇದು ಖಂಡಿತ ತೋರಿಸುತ್ತದೆ.

ಧರ್ಮವು ಬಹಳ ಕಷ್ಟಾಪತ್ತು ತಂದಿರುವುದನ್ನು ಅಲ್ಲಗಳೆಯಲಾಗದು. ಅದಕ್ಕಾಗಿ ದೇವರನ್ನು ದೂಷಿಸಬಹುದೊ? ಇಲ್ಲ! ಹಾಗೆ ಮಾಡಿದರೆ ಅದು, ಕಾರ್‌ ಚಾಲಕನು ಮೊಬೈಲಲ್ಲಿ ಮಾತಾಡುತ್ತಿದ್ದ ಕಾರಣ ನಡೆದ ಅಪಘಾತಕ್ಕೆ ಕಾರ್‌ ತಯಾರಕನನ್ನು ದೂರಿದಂತೆ ಆಗುವುದು. ಮಾನವಕುಲದ ಕಷ್ಟಾಪತ್ತಿಗೆ ಅನೇಕ ಕಾರಣಗಳಿವೆ. ಅವುಗಳಲ್ಲಿ ವ್ಯಕ್ತಿಯೊಬ್ಬನ ನಂಬಿಕೆಗಳಿಗಿಂತ ಹೆಚ್ಚು ಗಾಢವಾದ ಕಾರಣವೊಂದಿದೆ. ಅದನ್ನು ಬೈಬಲ್‌ ಆನುವಂಶಿಕವಾಗಿ ಬಂದಿರುವ ಪಾಪ ಎಂದು ಕರೆಯುತ್ತದೆ. “ಎಲ್ಲರೂ ಪಾಪಮಾಡಿದ್ದಾರೆ ಮತ್ತು ದೇವರ ಮಹಿಮೆಯನ್ನು ಹೊಂದಲು ತಪ್ಪಿಹೋಗಿದ್ದಾರೆ.” (ರೋಮನ್ನರಿಗೆ 3:23) ಈ ಪಾಪಪೂರ್ಣ ಪ್ರವೃತ್ತಿಯು ಸ್ವಾರ್ಥತೆ, ಗರ್ವ, ನೈತಿಕ ಸ್ವೇಚ್ಛಾಚಾರ ಮತ್ತು ಹಿಂಸಾಚಾರಕ್ಕೆ ಇಂಬುಕೊಡುತ್ತದೆ. (ಆದಿಕಾಂಡ 8:21) ಮಾತ್ರವಲ್ಲ, ಜನರು ತಮ್ಮ ತಪ್ಪುಕೆಲಸಗಳನ್ನು ಸಮರ್ಥಿಸುವಂತೆ ಹಾಗೂ ಅವುಗಳಿಗೆ ವಿನಾಯಿತಿ ಕೊಡುವಂಥ ನಂಬಿಕೆಗಳ ಕಡೆಗೆ ವಾಲುವಂತೆಯೂ ಮಾಡುತ್ತದೆ. (ರೋಮನ್ನರಿಗೆ 1:24-27) ಯೇಸು ಕ್ರಿಸ್ತನು ಸೂಕ್ತವಾಗಿಯೇ ಹೇಳಿದ್ದು: “ಹೃದಯದಿಂದ ಕೆಟ್ಟ ಆಲೋಚನೆಗಳು, ಕೊಲೆ, ವ್ಯಭಿಚಾರ, ಹಾದರ, ಕಳ್ಳತನ, ಸುಳ್ಳುಸಾಕ್ಷಿ ಮತ್ತು ದೇವದೂಷಣೆಗಳು ಹೊರಬರುತ್ತವೆ.”—ಮತ್ತಾಯ 15:19.

ಮಹತ್ವಪೂರ್ಣ ವ್ಯತ್ಯಾಸ

ಚರ್ಚೆಯ ಈ ಹಂತದಲ್ಲಿ ಸತ್ಯಾರಾಧನೆ ಅಂದರೆ ದೇವರ ದೃಷ್ಟಿಯಲ್ಲಿ ಸ್ವೀಕರಣೀಯವಾದ ಆರಾಧನೆ ಮತ್ತು ಸುಳ್ಳಾರಾಧನೆಯ ನಡುವಿನ ವ್ಯತ್ಯಾಸಕ್ಕೆ ಗಮನಕೊಡೋಣ. ಸತ್ಯಾರಾಧನೆಯು ಜನರಿಗೆ ತಮ್ಮೊಳಗಿನ ಅನುವಂಶೀಯ ಕೆಟ್ಟ ಪ್ರವೃತ್ತಿಗಳ ವಿರುದ್ಧ ಹೋರಾಡಲು ಸಹಾಯಮಾಡುತ್ತದೆ. ಅದು ಸ್ವತ್ಯಾಗದ ಪ್ರೀತಿ, ಶಾಂತಿ, ದಯೆ, ಒಳ್ಳೇತನ, ಸೌಮ್ಯಭಾವ, ಸ್ವನಿಯಂತ್ರಣ, ದಾಂಪತ್ಯನಿಷ್ಠೆ ಹಾಗೂ ಇತರರಿಗಾಗಿ ಗೌರವವನ್ನು ಉತ್ತೇಜಿಸುತ್ತದೆ. (ಗಲಾತ್ಯ 5:22, 23) ಸುಳ್ಳು ಧರ್ಮವಾದರೋ ಜನರಿಗೆ ಇಷ್ಟವಾಗುವ ಪ್ರವೃತ್ತಿಗಳಿಗೆ ಕುಮ್ಮಕ್ಕುಕೊಟ್ಟು, ಯೇಸು ಖಂಡಿಸಿದಂಥ ಕೆಟ್ಟ ಸಂಗತಿಗಳಲ್ಲಿ ಕೆಲವೊಂದು ನಡೆಯುವಾಗ ಅದರ ವಿರುದ್ಧ ಚಕಾರವೆತ್ತುವುದಿಲ್ಲ. ಹೀಗೆ ಅದು ಬೈಬಲಿನಲ್ಲಿ ಹೇಳಲಾದಂತೆ, ಜನರ ‘ಕಿವಿಗಳನ್ನು ಪುಳಕಗೊಳಿಸುತ್ತದೆ.’—2 ತಿಮೊಥೆಯ 4:3.

ನಾಸ್ತಿಕತೆ ಸಹ ನೈತಿಕತೆಯ ಕುರಿತ ಇಂಥ ಅನಿಶ್ಚಯತೆ ಇಲ್ಲವೆ ಗಲಿಬಿಲಿಗೆ ಕಾರಣವಾದೀತೊ? ನಾಸ್ತಿಕರ ಪ್ರಕಾರ ‘ದೇವರಿಲ್ಲ’ ಎಂದಾದರೆ, ದೈವಿಕ ಅಧಿಕಾರಕ್ಕೆ ನಾವು ಲೆಕ್ಕ ಕೊಡಬೇಕೆಂದಿರುವುದಿಲ್ಲ. ಅಲ್ಲದೆ, ಕಾನೂನಿನ ಪ್ರೊಫೆಸರ್‌ ಫಿಲಿಪ್‌ ಜಾನ್ಸನ್‌ ಹೇಳಿದಂತೆ “ನಾವು ಗೌರವಿಸಲು ಬದ್ಧರಾಗಿರಬೇಕಾದ ನೈತಿಕ ತತ್ವಗಳೇ ಇರುವುದಿಲ್ಲ.” ಹೀಗೆ ನೈತಿಕತೆ ಎಂಬುದು, ಪ್ರತಿಯೊಬ್ಬನು ತನ್ನ ಸ್ವಂತ ಮಟ್ಟಗಳನ್ನು (ಅದನ್ನು ಇಡಲು ಇಷ್ಟಪಡುವಲ್ಲಿ) ತಾನೇ ನಿರ್ಣಯಿಸುವ ಒಂದು ವಿಷಯವಾಗಿಬಿಡುತ್ತದೆ. ಈ ರೀತಿಯ ವಿಚಾರದಿಂದಾಗಿಯೇ ಕೆಲವು ಜನರಿಗೆ ನಾಸ್ತಿಕ ತತ್ತ್ವಜ್ಞಾನವು ತುಂಬ ಹಿಡಿಸುವುದರಲ್ಲಿ ಸಂಶಯವಿಲ್ಲ.—ಕೀರ್ತನೆ 14:1.

ನಿಜ ಸಂಗತಿಯಾದರೋ ಇದು: ದೇವರು ಅಸತ್ಯವನ್ನು, ನಾಸ್ತಿಕ ಅಥವಾ ಧಾರ್ಮಿಕ ಅಸತ್ಯವನ್ನು ಹಾಗೂ ಅದನ್ನು ಪ್ರವರ್ಧಿಸುವವರನ್ನೂ ಸದಾ ಸಹಿಸಿಕೊಳ್ಳುವುದಿಲ್ಲ. * ಆತನು ವಚನವೀಯುವುದು: “ಯಥಾರ್ಥವಂತರು [ನೈತಿಕತೆ ಮತ್ತು ಧಾರ್ಮಿಕ ಸತ್ಯಗಳನ್ನು ಪಾಲಿಸುವವರು] ದೇಶದಲ್ಲಿ ಸ್ವತಂತ್ರರಾಗಿರುವರು, ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು, ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ಇದರ ಫಲಿತಾಂಶ ವಿಶ್ವ ಶಾಂತಿ ಮತ್ತು ಸಂತೋಷ. ಇದನ್ನು ಯಾವ ಮಾನವನಾಗಲಿ, ಮಾನವ ತತ್ತ್ವಜ್ಞಾನವಾಗಲಿ, ಮಾನುಷ ಸಂಘಟನೆಯಾಗಲಿ ಎಂದಿಗೂ ತರಲಾರದು.—ಯೆಶಾಯ 11:9. (g10-E 11)

[ಪಾದಟಿಪ್ಪಣಿ]

^ ದೇವರು ದುಷ್ಟತನವನ್ನೂ ಕಷ್ಟಾಪತ್ತನ್ನೂ ತತ್ಕಾಲಕ್ಕೆ ಅನುಮತಿಸಿರುವುದಕ್ಕೆ ಬೈಬಲ್‌ ಕೊಡುವ ಕಾರಣವನ್ನು ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ? ಎಂಬ ಪುಸ್ತಕದ 11ನೇ ಅಧ್ಯಾಯದಲ್ಲಿ ನೋಡಬಹುದು. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 6ರಲ್ಲಿರುವ ಚೌಕ]

ಧಾರ್ಮಿಕ ದುಷ್ಕೃತ್ಯಗಳ ಬಗ್ಗೆ ದೇವರ ನೋಟ

ಪುರಾತನ ಇಸ್ರಾಯೇಲ್ಯರಿಗೆ ಕೊಡಲಾಗಿದ್ದ ದೇಶದಲ್ಲಿ ಕಾನಾನ್ಯರು ನೆಲೆಸಿದ್ದರು. ಇವರು ಲೈಂಗಿಕ ಅನೈತಿಕತೆಯನ್ನು ನಡೆಸುತ್ತಿದ್ದ ನೀತಿಗೆಟ್ಟ ಜನರಾಗಿದ್ದರು. ಇವರ ದುಷ್ಕೃತ್ಯಗಳಲ್ಲಿ ಅಗಮ್ಯಗಮನ, ಸಲಿಂಗರತಿ, ಪಶುಗಮನ ಮತ್ತು ಮಕ್ಕಳನ್ನು ಬಲಿಕೊಡುವ ಪದ್ಧತಿ ಸೇರಿತ್ತು. (ಯಾಜಕಕಾಂಡ 18:2-27) ಪುರಾತತ್ತ್ವಶಾಸ್ತ್ರ ಮತ್ತು ಹಳೇ ಒಡಂಬಡಿಕೆ ಎಂಬ (ಇಂಗ್ಲಿಷ್‌) ಪುಸ್ತಕ ಹೇಳುವುದೇನೆಂದರೆ ಆ ಪ್ರದೇಶದಲ್ಲಿನ ಅಗೆತಗಳಿಂದ “ವಿಧರ್ಮಿ ಬಲಿಪೀಠಗಳ ಸುತ್ತಲೂ ಇದ್ದ ಸ್ಮಶಾನಗಳಲ್ಲಿ ಕೂಸುಗಳ ಅಸ್ಥಿಪಂಜರದ ಅವಶೇಷಗಳು ಮತ್ತು ಬೂದಿಯ ರಾಶಿಗಳು ದೊರೆತಿವೆ. ಇದು [ಮಕ್ಕಳನ್ನು ಬಲಿಕೊಡುವ] ಪದ್ಧತಿ ಎಷ್ಟು ವ್ಯಾಪಕವಾಗಿತ್ತೆಂದು ತೋರಿಸುತ್ತದೆ.” ಈ ಕಾನಾನ್ಯರು ಲೈಂಗಿಕ ಲೋಲುಪತೆಯಲ್ಲಿ ತೊಡಗುವ ಮೂಲಕ ತಮ್ಮ ದೇವತೆಗಳನ್ನು ಆರಾಧಿಸುತ್ತಿದ್ದರು. ಆ ದೇವತೆಗಳಿಗೇ ತಮ್ಮ ಜ್ಯೇಷ್ಠ ಕೂಸುಗಳನ್ನೂ ಬಲಿಯಾಗಿ ಅರ್ಪಿಸುತ್ತಿದ್ದರು ಎನ್ನುತ್ತದೆ ಒಂದು ಬೈಬಲ್‌ ಕೈಪಿಡಿ. ಅದು ಮತ್ತೂ ಹೇಳುವುದು: “ದೇವರು ಆ ದುಷ್ಟ ಕಾನಾನ್ಯರನ್ನು ನಾಶಮಾಡಿದರೂ ಅಷ್ಟು ಸಮಯದ ವರೆಗೆ ಅವರನ್ನು ಯಾಕೆ ಬಿಟ್ಟುಬಿಟ್ಟನೆಂದು ಕಾನಾನ್ಯ ಪಟ್ಟಣದ ಅವಶೇಷಗಳನ್ನು ಅಗೆಯುವ ಪುರಾತತ್ತ್ವಜ್ಞರು ಆಶ್ಚರ್ಯಪಡುತ್ತಾರೆ.”

ಕಾನಾನ್ಯರನ್ನು ದೇವರು ನಾಶಮಾಡಿದ ಸಂಗತಿಯು, ಇಂದು ಕೂಡ ಆತನ ಹೆಸರಿನಲ್ಲಿ ನಡೆಸಲಾಗುವ ದುಷ್ಕೃತ್ಯಗಳನ್ನು ಆತನು ಸಹಿಸುತ್ತಾ ಇರುವುದಿಲ್ಲ ಎಂಬದನ್ನು ನಮಗೆ ನೆನಪುಹುಟ್ಟಿಸುತ್ತದೆ. “ನಿವಾಸಿತ ಭೂಮಿಗೆ ನೀತಿಗನುಸಾರ ನ್ಯಾಯತೀರಿಸಲಿಕ್ಕಾಗಿ [ದೇವರು] ಒಂದು ದಿನವನ್ನು ಗೊತ್ತುಮಾಡಿದ್ದಾನೆ” ಎನ್ನುತ್ತದೆ ಅ. ಕಾರ್ಯಗಳು 17:31.

[ಪುಟ 7ರಲ್ಲಿರುವ ಚಿತ್ರಗಳು]

ಘೋರ ಅನ್ಯಾಯಗಳನ್ನು ನಡೆಸುವುದರಲ್ಲಿ ಆಸ್ತಿಕರಾಗಲಿ ನಾಸ್ತಿಕರಾಗಲಿ ಹಿಂದೆ ಉಳಿದಿಲ್ಲ

ಹಿಟ್ಲರನಿಗೆ ಚರ್ಚ್‌ ಕೊಟ್ಟ ಬೆಂಬಲ

ಕ್ಯಾಂಬೋಡಿಯದ ಖ್ಮೇರ್‌ ರೂಜ್‌ ಆಳ್ವಿಕೆಗೆ ಬಲಿಯಾದವರ ತಲೆಬುರುಡೆಗಳು

[ಕೃಪೆ]

AP Photo