ಸಲಿಂಗಕಾಮದ ಬಗ್ಗೆ ಬೈಬಲಿನ ನೋಟವನ್ನು ಹೇಗೆ ವಿವರಿಸಬಲ್ಲೆ?
ಯುವಜನರ ಪ್ರಶ್ನೆ
ಸಲಿಂಗಕಾಮದ ಬಗ್ಗೆ ಬೈಬಲಿನ ನೋಟವನ್ನು ಹೇಗೆ ವಿವರಿಸಬಲ್ಲೆ?
ಒಂದು ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಇಬ್ಬರು ಪ್ರಸಿದ್ಧ ನಟಿಯರು ಪರಸ್ಪರ ಅಭಿನಂದಿಸುತ್ತಾ ಒಬ್ಬರನ್ನೊಬ್ಬರು ಗಾಢವಾಗಿ ಚುಂಬಿಸುತ್ತಾರೆ! ಇದನ್ನು ನೋಡಿ ಪ್ರೇಕ್ಷಕರಿಗೆ ಒಮ್ಮೆಗೆ ಧಕ್ಕೆಬಡಿದಂತಾದರೂ ನಂತರ ಹುಚ್ಚೆದ್ದು ಕೇಕೆಹಾಕಿ ಮೆಚ್ಚುಗೆ ತೋರಿಸುತ್ತಾರೆ. ಇದನ್ನು ಸಲಿಂಗಕಾಮಿಗಳು ತಮ್ಮ ಗೆಲುವು ಎಂದು ಹೇಳಿಕೊಂಡರೆ, ಇನ್ನೂ ಕೆಲವರು ಅದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರ ಎನ್ನುತ್ತಾರೆ. ಅದೇನೇ ಆದರೂ ಆ ಚುಂಬನದ ದೃಶ್ಯ ಮುಂದೆ ಅನೇಕ ದಿನಗಳ ವರೆಗೆ ಟಿವಿ ವಾರ್ತೆಗಳಲ್ಲಿ ಪದೇ ಪದೇ ಪ್ರಸಾರವಾಗಲಿದೆ. ಲಕ್ಷಾಂತರ ಜನರು ಅದನ್ನು ಇಂಟರ್‌ನೆಟ್‌ನಲ್ಲೂ ನೋಡಲಿದ್ದಾರೆ.
ಮೇಲಿನ ಘಟನೆ ತೋರಿಸುವಂತೆ ಒಬ್ಬ ಪ್ರಸಿದ್ಧ ವ್ಯಕ್ತಿ ತಾನು ಸಲಿಂಗಕಾಮಿ ಅಥವಾ ದ್ವಿಲಿಂಗಕಾಮಿ * ಎಂದು ಬಹಿರಂಗವಾಗಿ ಒಪ್ಪಿಕೊಳ್ಳುವಾಗ ಮಾಧ್ಯಮಗಳು ಅದಕ್ಕೆ ಬೇರೆಲ್ಲ ವಿಷಯಗಳಿಗಿಂತ ಸ್ವಲ್ಪ ಜಾಸ್ತಿಯೇ ಪ್ರಚಾರ ಕೊಡುತ್ತವೆ. ಕೆಲವರು ಅಂಥವರ ಧೈರ್ಯವನ್ನು ಹಾಡಿಹೊಗಳುತ್ತಾರೆ. ಇನ್ನು ಕೆಲವರು ಅವರ ನೀತಿಗೆಟ್ಟ ನಡತೆಗೆ ಛೀಮಾರಿ ಹಾಕುತ್ತಾರೆ. ಈ ಎರಡು ಅತಿರೇಕ ಅಭಿಪ್ರಾಯಗಳ ಮಧ್ಯೆ ‘ಸಲಿಂಗಕಾಮ ಬರೇ ಇನ್ನೊಂದು ರೀತಿಯ ಜೀವನಶೈಲಿ ಅಷ್ಟೇ’ ಎಂಬುದು ಇನ್ನೊಂದು ಅಭಿಪ್ರಾಯ. 21 ವರ್ಷದ ಡ್ಯಾನಿಯಲ್ ಹೇಳುವುದು: “ನಾನು ಶಾಲೆಯಲ್ಲಿದ್ದಾಗ ಭಿನ್ನಲಿಂಗಕಾಮಿಗಳು (ಸ್ವಾಭಾವಿಕವಾಗಿ ಭಿನ್ನಲಿಂಗದವರಲ್ಲಿ ಅನುರಕ್ತರಾಗುವವರು) ಸಹ ‘ಯಾರು ಸಲಿಂಗಕಾಮವನ್ನು ಹೇಸುತ್ತಾರೋ ಅವರು ದುರಭಿಪ್ರಾಯದವರೂ ಇತರರಲ್ಲಿ ತಪ್ಪುಹುಡುಕುವವರೂ ಆಗಿದ್ದಾರೆ’ ಎಂದು ಹೇಳುತ್ತಿದ್ದರು.” *
ಪೀಳಿಗೆಯಿಂದ ಪೀಳಿಗೆಗೆ ದೇಶದಿಂದ ದೇಶಕ್ಕೆ ಸಲಿಂಗಕಾಮದ ಕುರಿತ ಮನೋಭಾವದಲ್ಲಿ ವ್ಯತ್ಯಾಸವಿರಬಹುದು. ಕ್ರೈಸ್ತರಾದರೋ ‘ಬೋಧನೆಯ ಪ್ರತಿಯೊಂದು ಗಾಳಿಯಿಂದ ಅತ್ತಿತ್ತ ನೂಕಿಸಿಕೊಂಡು ಹೋಗುವವರ ಹಾಗಿರುವುದಿಲ್ಲ.’ (ಎಫೆಸ 4:14) ಅವರು ಬೈಬಲಿನ ನೋಟಕ್ಕೆ ಅಂಟಿಕೊಳ್ಳುತ್ತಾರೆ.
ಸಲಿಂಗಕಾಮದ ಬಗ್ಗೆ ಬೈಬಲಿನ ನೋಟವಾದರೂ ಏನು? ನೀವು ಬೈಬಲಿನ ನೈತಿಕ ನಿಯಮಗಳನ್ನು ಪಾಲಿಸುವವರಾಗಿರುವಲ್ಲಿ ಇತರರು ನಿಮ್ಮನ್ನು ದುರಭಿಪ್ರಾಯದವರೂ ತಪ್ಪುಹುಡುಕುವವರೂ ಸಲಿಂಗಕಾಮಿ-ದ್ವೇಷಿಗಳೂ ಎಂಬ ಹಣೆಪಟ್ಟಿ ಹಚ್ಚುವಾಗ ನೀವು ಹೇಗೆ ಪ್ರತಿಕ್ರಿಯಿಸಬಹುದು? ಕೆಳಗಿನ ಪ್ರಶ್ನೆಗಳನ್ನೂ ಕೊಡಬಹುದಾದ ಉತ್ತರಗಳನ್ನೂ ಪರಿಗಣಿಸಿ.
ಸಲಿಂಗಕಾಮದ ಬಗ್ಗೆ ಬೈಬಲ್ ಏನನ್ನುತ್ತದೆ? ಲೈಂಗಿಕ ಸಂಬಂಧ ಪುರುಷ ಮತ್ತು ಸ್ತ್ರೀ ನಡುವೆ ಮಾತ್ರ ಇರಬೇಕು, ಅದೂ ವಿವಾಹ ಚೌಕಟ್ಟಿನೊಳಗೆ ಮಾತ್ರ ಇರಬೇಕು ಎನ್ನುವುದು ದೇವರ ಏರ್ಪಾಡೆಂದು ಬೈಬಲ್ ಸ್ಪಷ್ಟವಾಗಿ ತಿಳಿಸುತ್ತದೆ. (ಆದಿಕಾಂಡ 1:27, 28; ಯಾಜಕಕಾಂಡ 18:22; ಜ್ಞಾನೋಕ್ತಿ 5:18, 19) ಬೈಬಲ್ ಜಾರತ್ವವನ್ನು ಖಂಡಿಸುತ್ತದೆ. ಜಾರತ್ವ ಎನ್ನುವಾಗ ಅದು ಸಲಿಂಗ ಹಾಗೂ ಭಿನ್ನಲಿಂಗಕಾಮಿಗಳ ಸ್ವೇಚ್ಛಾಚಾರಕ್ಕೆ ಅನ್ವಯವಾಗುತ್ತದೆ. *—ಗಲಾತ್ಯ 5:19-21.
ಯಾರಾದರೂ ಹೀಗೆ ಕೇಳಿದರೆ: “ಸಲಿಂಗಕಾಮದ ಬಗ್ಗೆ ನಿನ್ನ ಅಭಿಪ್ರಾಯವೇನು?”
ನೀವು ಹೀಗನ್ನಬಹುದು: “ಸಲಿಂಗಕಾಮಿಗಳ ಬಗ್ಗೆ ನನಗೆ
ದ್ವೇಷ ಇಲ್ಲ, ಆದರೆ ಅವರೇನು ಮಾಡುತ್ತಾರೋ ಅದನ್ನು ನಾನು ಒಪ್ಪುವುದಿಲ್ಲ.”✔ ನೆನಪಿಡಿ: ನೀವು ಬೈಬಲಿನ ನೈತಿಕ ನಿಯಮಗಳನ್ನು ಅನುಸರಿಸುತ್ತಿರುವಲ್ಲಿ, ಅದು ನಿಮ್ಮ ಜೀವನಶೈಲಿ, ಅದನ್ನು ಆಯ್ಕೆ ಮಾಡುವ ಹಕ್ಕು ನಿಮಗಿದೆ. (ಯೆಹೋಶುವ 24:15) ನಿಮ್ಮ ಅಭಿಪ್ರಾಯದ ಬಗ್ಗೆ ನಾಚಿಕೆಪಡಬೇಡಿ.—ಕೀರ್ತನೆ 119:46.
ಕ್ರೈಸ್ತರು ಎಲ್ಲರನ್ನೂ ಅಂದರೆ ಭಿನ್ನ ಭಿನ್ನ ಲೈಂಗಿಕಾಸಕ್ತಿ ಉಳ್ಳವರನ್ನೂ ಗೌರವದಿಂದ ಕಾಣಬೇಕಲ್ಲವೇ? ಖಂಡಿತವಾಗಿಯೂ. “ಎಲ್ಲ ರೀತಿಯ ಜನರನ್ನು ಗೌರವಿಸಿರಿ” ಎನ್ನುತ್ತದೆ ಬೈಬಲ್. (1 ಪೇತ್ರ 2:17) ಆದ್ದರಿಂದ ಕ್ರೈಸ್ತರು ಸಲಿಂಗಕಾಮಿ-ದ್ವೇಷಿಗಳಲ್ಲ. ಅವರು ಎಲ್ಲರೊಂದಿಗೆ, ಸಲಿಂಗಕಾಮಿಗಳೊಂದಿಗೂ ಸ್ನೇಹದಿಂದ ವರ್ತಿಸುತ್ತಾರೆ.—ಮತ್ತಾಯ 7:12.
ಯಾರಾದರೂ ಹೀಗೆ ಕೇಳಿದರೆ: “ಸಲಿಂಗಕಾಮ ತಪ್ಪೆಂಬ ನಿನ್ನ ನೋಟವು ಅವರ ಬಗ್ಗೆ ನಿನಗೆ ದುರಭಿಪ್ರಾಯ ಇದೆಯೆಂದು ತೋರಿಸುತ್ತದಲ್ಲವೇ?”
ನೀವು ಹೀಗನ್ನಬಹುದು: “ಖಂಡಿತ ಇಲ್ಲ. ನನಗೆ ತಿರಸ್ಕಾರವಿರುವುದು ಸಲಿಂಗಕಾಮದ ಬಗ್ಗೆ, ಸಲಿಂಗಕಾಮಿಗಳ ಬಗ್ಗೆಯಲ್ಲ.”
✔ ನೀವು ಮತ್ತೂ ಹೇಳಬಹುದು: “ಉದಾಹರಣೆಗೆ, ನಾನು ಸಿಗರೇಟ್ ಸೇದುವುದಿಲ್ಲ. ನಿಜ ಹೇಳಬೇಕೆಂದರೆ ನನಗದು ತುಂಬ ಅಸಹ್ಯವೆನಿಸುತ್ತದೆ. ಆದರೆ ನೀನು ಸಿಗರೇಟ್ ಸೇದುತ್ತೀ, ಅದು ನಿನಗಿಷ್ಟ ಎಂದಿಟ್ಟುಕೋ. ಈ ಕಾರಣಕ್ಕಾಗಿ ನನಗೆ ನಿನ್ನ ಬಗ್ಗೆ ದುರಭಿಪ್ರಾಯ ಇರಬಾರದು. ಹಾಗೆಯೇ ನಿನಗೂ ನನ್ನ ಬಗ್ಗೆ ದುರಭಿಪ್ರಾಯ ಇರಬಾರದು ಅಲ್ವಾ? ಇದೇ ತತ್ವ ಸಲಿಂಗಕಾಮದ ಬಗ್ಗೆ ನಮ್ಮಿಬ್ಬರಿಗಿರುವ ನೋಟಕ್ಕೂ ಅನ್ವಯಿಸುತ್ತದೆ.”
ನಾವು ಎಲ್ಲವನ್ನು ಸಹಿಸಿಕೊಳ್ಳಬೇಕೆಂದು ಯೇಸು ಬೋಧಿಸಿದನಲ್ಲಾ? ಹಾಗಿರುವಾಗ ಕ್ರೈಸ್ತರು ಸಲಿಂಗಕಾಮದ ಬಗ್ಗೆಯೂ ಸಹಿಷ್ಣುಗಳಾಗಿರಬೇಕಲ್ಲಾ? ಯೇಸು ತನ್ನ ಹಿಂಬಾಲಕರಿಗೆ ಯಾವ ಜೀವನಶೈಲಿಯನ್ನು ಬೇಕಾದರೂ ಅನುಸರಿಸಿ ಎಂದು ಕಲಿಸಲಿಲ್ಲ. “ಅವನಲ್ಲಿ ನಂಬಿಕೆಯಿಡುವ” ಪ್ರತಿಯೊಬ್ಬರಿಗೂ ರಕ್ಷಣೆಯ ಮಾರ್ಗ ತೆರೆದಿದೆ ಎಂದು ಕಲಿಸಿದನು. (ಯೋಹಾನ 3:16) ಯೇಸುವಿನ ಮೇಲೆ ನಂಬಿಕೆ ಇಡುವುದರಲ್ಲಿ ದೇವರ ನೈತಿಕ ಮಟ್ಟಗಳನ್ನು ಪಾಲಿಸುವುದು ಸೇರಿದೆ. ಆ ಮಟ್ಟಗಳು ಸಲಿಂಗಕಾಮದಂಥ ಕೆಟ್ಟ ಜೀವನಶೈಲಿಗಳನ್ನು ನಿಷೇಧಿಸುತ್ತವೆ.—ರೋಮನ್ನರಿಗೆ 1:26, 27.
ಯಾರಾದರೂ ಹೀಗಂದರೆ: “ಸಲಿಂಗಕಾಮಿಗಳಿಗೆ ತಮ್ಮ ಲೈಂಗಿಕಾಸಕ್ತಿಯನ್ನು ಬದಲಾಯಿಸಲಿಕ್ಕಾಗುವುದಿಲ್ಲ. ಅವರಿಗದು ಹುಟ್ಟಿನಿಂದಲೇ ಬಂದಿದೆ.”
ನೀವು ಹೀಗನ್ನಬಹುದು: “ಸಲಿಂಗಕಾಮಿಗಳ ಅಂಗರಚನೆ ಹಾಗೂ ಕಾರ್ಯವಿಧಾನದ ಬಗ್ಗೆ ಬೈಬಲ್ ಏನೂ ಹೇಳುವುದಿಲ್ಲ. ಆದರೆ ಜನರಲ್ಲಿ ಕೆಲವು ದುರ್ಗುಣಗಳು ಆಳವಾಗಿ ಬೇರೂರಿವೆ ಎಂದು ಅದು ಹೇಳುತ್ತದೆ. (2 ಕೊರಿಂಥ 10:4, 5) ಕೆಲವರಿಗೆ ತಮ್ಮದೇ ಲಿಂಗದವರ ಕಡೆಗೆ ಲೈಂಗಿಕಾಸಕ್ತಿ ಇದ್ದರೂ, ಕ್ರೈಸ್ತರು ಸಲಿಂಗಕಾಮ ಮಾಡಬಾರದೆಂದು ಬೈಬಲ್ ಹೇಳುತ್ತದೆ.”
✔ ಸಲಹೆ: ಸಲಿಂಗಕಾಮದ ಆಸೆ-ಆಸಕ್ತಿಗಳು ಹುಟ್ಟಿರುವುದು ಹೇಗೆಂಬದರ ಬಗ್ಗೆ ವಾದವಿವಾದಮಾಡುವ ಬದಲು ಸಲಿಂಗಕಾಮದ ಕೃತ್ಯವನ್ನು ಬೈಬಲ್ ಖಂಡಿಸುತ್ತದೆ ಎಂಬುದನ್ನು ಒತ್ತಿಹೇಳಿ. ಇದನ್ನು ಮನವರಿಕೆ ಮಾಡಿಸಲು ಹೀಗನ್ನಬಹುದು: “ಅತಿಯಾದ ಕೋಪಕ್ಕೆ ಆನುವಂಶಿಕತೆ ಕಾರಣವೆಂದೂ ಅದರಿಂದಾಗಿ ಕೆಲವರು ಹಿಂಸಾಚಾರಿಗಳಾಗುತ್ತಾರೆಂದೂ ಅನೇಕರು ಹೇಳುತ್ತಾರೆ. (ಜ್ಞಾನೋಕ್ತಿ 29:22) ಅದನ್ನು ಸತ್ಯವೆಂದು ಇಟ್ಟುಕೋ. ನಿನಗೆ ಗೊತ್ತಿರಬಹುದು, ಕೋಪಕ್ರೋಧ ತಪ್ಪೆಂದು ಬೈಬಲ್ ಹೇಳುತ್ತದೆ. (ಕೀರ್ತನೆ 37:8; ಎಫೆಸ 4:31) ಎಲ್ಲೋ ಕೆಲವರಿಗೆ ಕೋಪಿಷ್ಠ ಸ್ವಭಾವವಿದೆ ಎಂದಮಾತ್ರಕ್ಕೆ ಬೈಬಲಿನ ಮಟ್ಟವೇ ಸರಿಯಲ್ಲವೆಂದು ಹೇಳಬಹುದಾ?”
ಸಮಲಿಂಗದವರು ಒಬ್ಬರನ್ನೊಬ್ಬರು ಮೋಹಿಸುವುದು ತಪ್ಪೆಂದು ದೇವರು ಹೇಗೆ ಹೇಳಸಾಧ್ಯ? ಅದು ಕ್ರೂರತನ. ಅಂಥ ವಾದ ಬಂದಿರುವುದು, ಮಾನವರು ತಮ್ಮ ಲೈಂಗಿಕ ಬಯಕೆಗಳೇನೇ ಆಗಿರಲಿ ಅದನ್ನು ತೀರಿಸಲೇಬೇಕೆಂಬ ತಪ್ಪು ಅಭಿಪ್ರಾಯದಿಂದ. ಬೈಬಲಾದರೊ ಮಾನವರು ನಿಜವಾಗಿ ಬಯಸುವಲ್ಲಿ ತಪ್ಪಾದ ಲೈಂಗಿಕ ಆಸೆಗಳನ್ನು ತೀರಿಸಿಕೊಳ್ಳದಿರುವ ಆಯ್ಕೆ ಮಾಡಶಕ್ತರು ಎಂಬ ಆಶ್ವಾಸನೆ ಕೊಡುವ ಮೂಲಕ ಅವರನ್ನು ಗೌರವಿಸುತ್ತದೆ.—ಕೊಲೊಸ್ಸೆ 3:5.
ಯಾರಾದರೂ ಹೀಗಂದರೆ: “ನೀನು ಸಲಿಂಗಕಾಮಿ ಅಲ್ಲದಿದ್ದರೂ ಸಲಿಂಗಕಾಮದ ಬಗ್ಗೆ ನಿನ್ನ ನೋಟವನ್ನು ಬದಲಾಯಿಸಬೇಕು.”
ನೀವು ಹೀಗನ್ನಬಹುದು: “ನನ್ನ ದೃಷ್ಟಿಯಲ್ಲಿ ಜೂಜಾಟ ತಪ್ಪು, ನಿನ್ನ ದೃಷ್ಟಿಯಲ್ಲಿ ತಪ್ಪಲ್ಲ ಎಂದಿಟ್ಟುಕೊ. ಲಕ್ಷಾಂತರ ಜನರು
ಜೂಜಾಡುತ್ತಾರೆ ಎಂಬ ಕಾರಣಮಾತ್ರಕ್ಕೆ ನಾನು ನನ್ನ ನೋಟವನ್ನು ಬದಲಾಯಿಸಬೇಕೆಂದು ನೀನು ಒತ್ತಾಯಿಸುವುದು ಸರಿಯೋ?”✔ ನೆನಪಿಡಿ: ಹೆಚ್ಚಿನವರಿಗೆ, ಸಲಿಂಗಕಾಮಿಗಳಿಗೂ ಕೆಲವು ತತ್ವಗಳು, ಆದರ್ಶಗಳು ಎಂದಿರುತ್ತವೆ. ಇದರಿಂದಾಗಿ ಅವರು ಮೋಸ, ಅನ್ಯಾಯ, ಯುದ್ಧಗಳಂಥ ಕೆಲವೊಂದು ವಿಷಯಗಳನ್ನು ಖಂಡಿಸುತ್ತಾರೆ. ಅವುಗಳನ್ನು ಬೈಬಲ್ ಕೂಡ ಖಂಡಿಸುತ್ತದೆ. ಹಾಗೆಯೇ ಅದು ಕೆಲವು ಲೈಂಗಿಕ ಕೃತ್ಯಗಳನ್ನೂ ಖಂಡಿಸುತ್ತದೆ ಮತ್ತು ಇವುಗಳಲ್ಲಿ ಸಲಿಂಗಕಾಮವೂ ಸೇರಿದೆ.—1 ಕೊರಿಂಥ 6:9-11.
ಬೈಬಲ್ ನಮ್ಮಿಂದ ಪಾಲಿಸಲಾಗದ್ದನ್ನು ಕೇಳಿಕೊಳ್ಳುವುದಿಲ್ಲ ಮಾತ್ರವಲ್ಲ ದುರಭಿಪ್ರಾಯವನ್ನು ವರ್ಧಿಸುವುದೂ ಇಲ್ಲ. ಭಿನ್ನಲಿಂಗದವರ ಕಡೆಗೆ ಆಕರ್ಷಣೆಯುಳ್ಳವರಿಗೆ ಅದು ಯಾವ ಸಲಹೆ ಕೊಡುತ್ತದೋ ಅದನ್ನೇ ಸಮಲಿಂಗದವರ ಕಡೆಗೆ ಆಕರ್ಷಣೆಯುಳ್ಳವರಿಗೂ ಕೊಡುತ್ತದೆ. ಅದೇನೆಂದರೆ “ಜಾರತ್ವಕ್ಕೆ ದೂರವಾಗಿ ಓಡಿಹೋಗಿರಿ.”—1 ಕೊರಿಂಥ 6:18.
ನಿಜವೇನೆಂದರೆ, ಬೈಬಲಿನ ನಿಯಮಗಳನ್ನು ಪಾಲಿಸಲು ಇಷ್ಟಪಡುವ ಲಕ್ಷಾಂತರ ಭಿನ್ನಲಿಂಗಕಾಮಿಗಳು ಇದ್ದಾರೆ. ಅದೆಷ್ಟೇ ಪ್ರಲೋಭನೆಗಳು ಬಂದರೂ ಅವರು ಸ್ವನಿಯಂತ್ರಣ ತೋರಿಸುತ್ತಾರೆ. ಅವರಲ್ಲಿ ಎಷ್ಟೋ ಮಂದಿ ಅವಿವಾಹಿತರಾಗಿದ್ದು, ಅವರಿಗೆ ಮದುವೆಯಾಗುವ ಸಾಧ್ಯತೆಗಳು ಕಡಿಮೆ. ಇನ್ನು ಅನೇಕರಿಗೆ, ಲೈಂಗಿಕ ಜೀವನ ನಡೆಸಲು ಅಶಕ್ತರಾಗಿರುವ ವಿವಾಹ ಸಂಗಾತಿಗಳಿದ್ದಾರೆ. ಇಂಥವರು ತಮ್ಮ ಲೈಂಗಿಕ ಆಸೆಗಳನ್ನು ತೀರಿಸಿಕೊಳ್ಳದೆಯೂ ಸಂತೋಷವಾಗಿದ್ದಾರೆ. ಸಲಿಂಗಕಾಮದ ಪ್ರಚೋದನೆಯುಳ್ಳವರು ಕೂಡ ಇದನ್ನೇ ಮಾಡಬಲ್ಲರು. ದೇವರನ್ನು ಮೆಚ್ಚಿಸಲು ಬಯಸುವುದಾದರೆ ಅದು ಅವರಿಂದ ಖಂಡಿತ ಸಾಧ್ಯ.—ಧರ್ಮೋಪದೇಶಕಾಂಡ 30:19. (g10-E 12)
“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ಸೈಟ್‌ನಲ್ಲಿವೆ
[ಪಾದಟಿಪ್ಪಣಿಗಳು]
^ ದ್ವಿಲಿಂಗಕಾಮಿ ಅಂದರೆ ಹೆಂಗಸು ಮತ್ತು ಗಂಡಸು ಇಬ್ಬರನ್ನೂ ಕಾಮಿಸುವವರು.
^ ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.
^ ಬೈಬಲಿನಲ್ಲಿ ಬಳಸಲಾದ “ಜಾರತ್ವ” ಎಂಬ ಪದ ಸಂಭೋಗ ಕ್ರಿಯೆಗೆ ಮಾತ್ರವಲ್ಲ ಇನ್ನೊಬ್ಬರಿಗೆ ಹಸ್ತಮೈಥುನ ಮಾಡುವುದು, ಬಾಯಿ ಸೆಕ್ಸ್, ಗುದ ಸೆಕ್ಸ್‌ಗೂ ಅನ್ವಯಿಸುತ್ತದೆ.
ಯೋಚಿಸಿ ನೋಡಿ
● ದೇವರು ಮನುಷ್ಯರಿಗೆ ನೈತಿಕ ನಿಯಮಗಳನ್ನು ವಿಧಿಸಿರುವುದೇಕೆ?
● ಬೈಬಲಿನ ನೈತಿಕ ನಿಯಮಗಳನ್ನು ಪಾಲಿಸುವುದರಿಂದ ನಿಮಗೆ ಯಾವ ಪ್ರಯೋಜನ ಸಿಗುತ್ತದೆ?
[ಪುಟ 12ರಲ್ಲಿರುವ ಚೌಕ]
ದ್ವಿಲಿಂಗಕಾಮದ ಬಗ್ಗೆಯೇನು?
ಹುಡುಗರಲ್ಲಿ ದ್ವಿಲಿಂಗಕಾಮಿಗಳಿದ್ದರೂ, ಇಂದು ಹುಡುಗಿಯರಲ್ಲೇ ದ್ವಿಲಿಂಗಕಾಮಿಗಳು ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಹೀಗಾಗಲು ಕೆಲವೊಂದು ಕಾರಣಗಳನ್ನು ಪರಿಗಣಿಸಿರಿ.
● ಗಮನಸೆಳೆಯಲಿಕ್ಕಾಗಿ
“ಸ್ತ್ರೀ ಸಲಿಂಗಕಾಮಿಗಳು ಹೆಚ್ಚು ಆಕರ್ಷಕರೆಂಬ ತಮ್ಮ ಅನಿಸಿಕೆಯನ್ನು ಹುಡುಗರು ಮುಕ್ತವಾಗಿ ಹೇಳುತ್ತಾರೆ. ಆದ್ದರಿಂದ ಆತ್ಮವಿಶ್ವಾಸವಿಲ್ಲದ ಹುಡುಗಿಯರು ಹುಡುಗರನ್ನು ಸೆಳೆದುಕೊಳ್ಳಲು ಸಲಿಂಗಕಾಮಿಗಳಾಗಲೂ ಸಿದ್ಧರಿರುತ್ತಾರೆ.”—ಜೆಸ್ಸಿಕಾ, 16.
● ಕುತೂಹಲದಿಂದ
“ಹುಡುಗಿ-ಹುಡುಗಿ ಚುಂಬಿಸುವುದನ್ನು ಚಲನಚಿತ್ರ, ಟಿವಿಯಲ್ಲಿ ನೋಡಿ ಅದನ್ನು ವರ್ಧಿಸುವ ಸಂಗೀತಗಳನ್ನು ಕೇಳಿ ಹದಿಹರೆಯದವರು ಅದನ್ನು ಮಾಡಿನೋಡಲು ಮುಂದಾಗುತ್ತಾರೆ. ಅದು ತಪ್ಪಲ್ಲವೆಂದು ಅನಿಸುವಾಗಲಂತೂ ಇನ್ನೂ ಜಾಸ್ತಿ.” —ಲೀಸಾ, 26.
● ಆಕರ್ಷಣೆಯಿಂದಾಗಿ
“ದ್ವಿಲಿಂಗಕಾಮಿಗಳಾದ ಇಬ್ಬರು ಹುಡುಗಿಯರನ್ನು ಒಂದು ಪಾರ್ಟಿಯಲ್ಲಿ ಭೇಟಿಯಾದೆ. ಅವರಿಗೆ ನಾನಿಷ್ಟವಾದೆ ಎಂದು ಆಮೇಲೆ ನನ್ನ ಫ್ರೆಂಡ್‌ನಿಂದ ನನಗೆ ಗೊತ್ತಾಯಿತು. ಹೀಗೆ ಅವರಲ್ಲಿ ಒಬ್ಬಳಿಗೆ ನಾನು ಮೆಸೆಜ್ ಕಳುಹಿಸಲು ಆರಂಭಿಸಿದೆ. ಸಮಯ ಹೋಗ್ತಾ ಹೋಗ್ತಾ ನಾನು ಅವಳಲ್ಲಿ ಅನುರಕ್ತಳಾದೆ.”—ವಿಕೀ, 13.
ನೀವು ದೇವರನ್ನು ಮೆಚ್ಚಿಸಲು ಬಯಸುವುದಾದರೆ ಅಶುದ್ಧವೆಂದು ಬೈಬಲ್ ಹೇಳುವ ವಿಷಯಗಳನ್ನು ಪ್ರಯತ್ನಿಸಿ ನೋಡಲು ಹೋಗಬಾರದು. (ಎಫೆಸ 4:19; 5:11) ಒಂದುವೇಳೆ ಗಂಡುಹೆಣ್ಣು ಇಬ್ಬರೆಡೆಗೂ ನೀವು ನಿಜವಾಗಿಯೂ ಆಕರ್ಷಿತರಾದರೆ ಆಗೇನು? ನೀವು ದ್ವಿಲಿಂಗಕಾಮಿ ಎಂಬುದನ್ನು ಒಪ್ಪಿಕೊಂಡು ಅದನ್ನು ಬಹಿರಂಗಗೊಳಿಸುವಂತೆ ಅನೇಕರು ನಿಮ್ಮನ್ನು ಉತ್ತೇಜಿಸಾರು. ಆದರೆ ಸಮಲಿಂಗದವರೆಡೆಗಿನ ಈ ರೀತಿಯ ಆಕರ್ಷಣೆ ತಾತ್ಕಾಲಿಕವಾಗಿ ಬರುವ ಭಾವನೆಯಲ್ಲದೆ ಬೇರೇನಲ್ಲ ಎಂಬದನ್ನು ನೆನಪಿನಲ್ಲಿಡಿ. ಲಿಸೆಟ್ ಎಂಬ 16ರ ಹರೆಯದ ಹುಡುಗಿಗೆ ಗೊತ್ತಾದದ್ದು ಇದೇ. ಆಕೆ ಹೇಳುವುದು: “ನನ್ನಲ್ಲಿ ಹುಟ್ಟಿದ ಭಾವನೆಗಳನ್ನು ಹೆತ್ತವರ ಬಳಿ ತೋಡಿಕೊಂಡದ್ದರಿಂದ ಮನಸ್ಸಿಗೆ ಹಾಯೆನಿಸಿತು. ಅಲ್ಲದೆ ತಾರುಣ್ಯದಲ್ಲಿ ಹಾರ್ಮೋನುಗಳು ತುಂಬ ಏರುಪೇರಾಗುತ್ತವೆಂದು ನಾನು ಜೀವಶಾಸ್ತ್ರ ಕ್ಲಾಸಿನಲ್ಲಿ ಕಲಿತೆ. ಆದ್ದರಿಂದ ನಾನು ಭಾವಿಸುವುದೇನೆಂದರೆ, ಹೆಚ್ಚಿನ ಯುವಜನರು ತಮ್ಮ ದೇಹದ ಬಗ್ಗೆ ಹೆಚ್ಚೆಚ್ಚಾಗಿ ತಿಳಿದುಕೊಂಡರೆ ಸಮಲಿಂಗದವರ ಆಕರ್ಷಣೆ ತಾತ್ಕಾಲಿಕವಾಗಿ ಇರುವ ಭಾವನೆ ಎಂದು ತಿಳಿದುಕೊಳ್ಳುವರು ಮತ್ತು ತಾವು ಸಲಿಂಗಕಾಮಿಗಳಾಗಲೇ ಬೇಕೆಂದು ಅವರಿಗೆ ಅನಿಸದು.”
ಒಂದುವೇಳೆ ನಿಮ್ಮ ಭಾವನೆಗಳು ಅಲ್ಪಕಾಲದ್ದಾಗಿರದೆ ಆಳವಾಗಿ ಬೇರೂರಿದ್ದರೂ ನೀವು ಮುಟ್ಟಸಾಧ್ಯವಿರುವ ಈ ಗುರಿಯನ್ನು ಬೈಬಲ್ ಮುಂದಿಡುತ್ತದೆ: ತಪ್ಪಾದ ಲೈಂಗಿಕ ಬಯಕೆಗಳನ್ನು ಪೂರೈಸಿಕೊಳ್ಳದಿರುವ ಆಯ್ಕೆ ಮಾಡಬಲ್ಲಿರಿ.
[ಪುಟ 11ರಲ್ಲಿರುವ ಚಿತ್ರ]
ಕ್ರೈಸ್ತರು ಜನಪ್ರಿಯ ಅಭಿಪ್ರಾಯದ ಎದುರಲ್ಲಿ ಧೈರ್ಯದಿಂದ ತಮ್ಮ ನಿಲುವನ್ನು ತೆಗೆದುಕೊಳ್ಳುತ್ತಾರೆ