ದೇಹದಂಡನೆಯಿಂದ ದೇವರನ್ನು ಮೆಚ್ಚಿಸಬಹುದೊ?
ಬೈಬಲಿನ ದೃಷ್ಟಿಕೋನ
ದೇಹದಂಡನೆಯಿಂದ ದೇವರನ್ನು ಮೆಚ್ಚಿಸಬಹುದೊ?
ಸ್ವಂತ ದೇಹವನ್ನು ದಂಡಿಸಿಕೊಳ್ಳುವ ಇಲ್ಲವೆ ಗಾಯಗೊಳಿಸುವ ವಿಚಾರವು ಹೆಚ್ಚಿನವರಿಗೆ ಜಿಗುಪ್ಸೆ ಹುಟ್ಟಿಸುತ್ತದೆ. ಆದರೂ ಚಾವಟಿ ಹೊಡೆತ, ಕಟು ಉಪವಾಸ, ತುರಿಕೆ ಬರಿಸುವ ದೊರಗು-ರೋಮದ ಷರ್ಟುಗಳ ಧರಿಸುವಿಕೆ ಮುಂತಾದವುಗಳಿಂದ ತಮ್ಮ ದೇಹದಂಡಿಸಿದ ಆರಾಧಕರನ್ನು ದೇವಭೀರು ಜನರಿಗೆ ಮಾದರಿಗಳೆಂದು ಹಾಡಿಹೊಗಳಲಾಗಿದೆ. ಈ ರೀತಿಯ ಪದ್ಧತಿಗಳಿದ್ದದ್ದು ಪುರಾತನ ಕಾಲದಲ್ಲಿ ಮಾತ್ರವಲ್ಲ. ಇತ್ತೀಚಿನ ವಾರ್ತಾ ವರದಿಗಳಿಗನುಸಾರ, ಆಧುನಿಕ ಕಾಲದ ಪ್ರಸಿದ್ಧ ಧಾರ್ಮಿಕ ಮುಖಂಡರು ಸಹ ತಮ್ಮನ್ನೇ ಹೊಡೆದುಕೊಂಡು ದೇಹದಂಡಿಸಿದ್ದಾರೆ.
ಈ ರೀತಿಯಲ್ಲಿ ಆರಾಧಿಸುವಂತೆ ಜನರನ್ನು ಪ್ರೇರಿಸುವಂಥದ್ದು ಯಾವುದು? “ನಮ್ಮನ್ನು ಪಾಪದಿಂದ ಬಿಡಿಸಲಿಕ್ಕಾಗಿ ಯೇಸು ಕ್ರಿಸ್ತನು ಸ್ವಇಷ್ಟದಿಂದ ಅನುಭವಿಸಿದ ಬಾಧೆಗಳಲ್ಲಿ ಆತನೊಂದಿಗೆ ಭಾಗಿಗಳಾಗಲು ಜನರು ಸ್ವಇಷ್ಟದಿಂದ ತಮ್ಮ ದೇಹವನ್ನು ದಂಡಿಸುತ್ತಾರೆ” ಎಂಬುದಾಗಿ ಕ್ರೈಸ್ತರೆನಿಸಿಕೊಳ್ಳುವ ಸಂಘಟನೆಯೊಂದರ ವಕ್ತಾರನೊಬ್ಬನು ಹೇಳಿದನು. ಧಾರ್ಮಿಕ ಮುಖಂಡರು ಹೀಗನ್ನುತ್ತಾರಾದರೂ ಬೈಬಲ್ ನಿಜವಾಗಿ ಈ ವಿಷಯದ ಬಗ್ಗೆ ಏನನ್ನುತ್ತದೆ?
ನಿಮ್ಮ ದೇಹವನ್ನು ಸಂರಕ್ಷಿಸಿ
ದೇವರನ್ನು ಆರಾಧಿಸಲಿಕ್ಕಾಗಿ ದೇಹದಂಡನೆ ಮಾಡಬೇಕೆಂದು ಬೈಬಲ್ ಶಿಫಾರಸ್ಸೂ ಮಾಡುವುದಿಲ್ಲ, ಸಮ್ಮತಿಯನ್ನೂ ಕೊಡುವುದಿಲ್ಲ. ನಿಜ ಮಾತೇನೆಂದರೆ, ದೇವಭೀರು ಜನರು ತಮ್ಮ ದೇಹದ ಪರಾಮರಿಕೆ ಮಾಡಬೇಕೆಂದು ಅದು ಸ್ಪಷ್ಟವಾಗಿ ಪದೇ ಪದೇ ಉತ್ತೇಜಿಸುತ್ತದೆ. ಉದಾಹರಣೆಗೆ ಗಂಡಹೆಂಡತಿಯ ನಡುವೆ ಇರಬೇಕಾದ ಪ್ರೀತಿಯನ್ನು ಬೈಬಲ್ ಹೇಗೆ ವರ್ಣಿಸುತ್ತದೆಂದು ಪರಿಶೀಲಿಸಿ. ಪುರುಷನೊಬ್ಬನು ಸಹಜವಾಗಿ ತನ್ನ ಸ್ವಂತ ದೇಹವನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬದಕ್ಕೆ ಸೂಚಿಸುತ್ತಾ ಅದು ಈ ಬುದ್ಧಿವಾದ ಕೊಡುತ್ತದೆ: “ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ. . . . ಯಾವನೂ ಎಂದೂ ಸ್ವಶರೀರವನ್ನು ದ್ವೇಷಿಸಿದ್ದಿಲ್ಲ, ಅವನು ಅದನ್ನು ಪೋಷಿಸಿ ಸಂರಕ್ಷಿಸುತ್ತಾನೆ; ಕ್ರಿಸ್ತನು ಸಹ ಸಭೆಯನ್ನು ಪೋಷಿಸಿ ಸಂರಕ್ಷಿಸುತ್ತಾನೆ.”—ಎಫೆಸ 5:28, 29.
ಭಕ್ತರು ಆರಾಧನೆಯಲ್ಲಿ ತಮ್ಮ ದೇಹಗಳನ್ನು ದಂಡಿಸಿಕೊಳ್ಳಬೇಕಾಗಿದ್ದಲ್ಲಿ, ‘ಹೆಂಡತಿಯನ್ನು ಸ್ವಂತ ದೇಹದಂತೆ ಪ್ರೀತಿಸು’ ಎಂಬ ಆಜ್ಞೆಗೆ ಏನೂ ಅರ್ಥವಿರುತ್ತಿರಲಿಲ್ಲ ಅಲ್ಲವೆ? ಬೈಬಲಾಧರಿತ ಮೂಲಸೂತ್ರಗಳನ್ನು ಪಾಲಿಸುವವರು ತಮ್ಮ ಸ್ವಂತ ದೇಹವನ್ನು ಸಂರಕ್ಷಿಸಬೇಕು ಮತ್ತು ಪ್ರೀತಿಸಬೇಕೆಂದೂ ನಿರೀಕ್ಷಿಸಲಾಗುತ್ತದೆ. ಸ್ವಂತ ದೇಹದ ಮೇಲಿರುವ ಈ ಹಿತಕರವಾದ ಪ್ರೀತಿಯನ್ನು ವಿವಾಹ ಸಂಗಾತಿಗೂ ತೋರಿಸಬೇಕು.
ಸೂಕ್ತವಾಗಿಯೇ, ಬೈಬಲಿನ ಓದುಗರು ತಮ್ಮ ದೇಹವನ್ನು ಸಂರಕ್ಷಿಸುವಂತೆ ಸಹಾಯಮಾಡುವ ಅನೇಕ ಮೂಲಸೂತ್ರಗಳು ಅದರಲ್ಲಿವೆ. ಉದಾಹರಣೆಗೆ, ವ್ಯಾಯಾಮದಿಂದ ಕೆಲವು ಪ್ರಯೋಜನಗಳಿವೆ ಎಂದು ಬೈಬಲ್ ಹೇಳುತ್ತದೆ. (1 ತಿಮೊಥೆಯ 4:8) ಅದು ನಿರ್ದಿಷ್ಟ ಆಹಾರಗಳ ಔಷಧೀಯ ಗುಣವನ್ನು ತಿಳಿಸುತ್ತದೆ ಮತ್ತು ಅನಾರೋಗ್ಯಕರ ಆಹಾರಕ್ರಮದ ದುಷ್ಪರಿಣಾಮಗಳಿಗೆ ಪರೋಕ್ಷವಾಗಿ ಸೂಚಿಸುತ್ತದೆ. (ಜ್ಞಾನೋಕ್ತಿ 23:20, 21; 1 ತಿಮೊಥೆಯ 5:23) ಜನರು ಆರೋಗ್ಯದಿಂದಿರುವಂತೆಯೂ ದೇವರ ವಾಕ್ಯವು ಉತ್ತೇಜಿಸುತ್ತದೆ ಏಕೆಂದರೆ ಆರೋಗ್ಯವಾಗಿದ್ದರೆ ಸಾಧ್ಯವಾದಷ್ಟು ಮಟ್ಟಿಗೆ ಚಟುವಟಿಕೆಯಿಂದಿರಲು ಶಕ್ತರಾಗುವರು. (ಪ್ರಸಂಗಿ 9:4) ಬೈಬಲ್ ತನ್ನ ಓದುಗರಿಗೆ ತಮ್ಮ ಆರೋಗ್ಯವನ್ನು ಈ ಎಲ್ಲ ವಿಧಗಳಲ್ಲಿ ಸಂರಕ್ಷಿಸುವಂತೆ ಹೇಳುವಾಗ ಇನ್ನೊಂದು ಕಡೆ, ಅವರು ತಮ್ಮ ದೇಹಕ್ಕೆ ಹಾನಿಯನ್ನೂ ಮಾಡಬೇಕೆಂದು ಹೇಳಸಾಧ್ಯವೊ?—2 ಕೊರಿಂಥ 7:1.
ಯೇಸುವಿನ ಬಾಧೆಗಳನ್ನು ಕ್ರೈಸ್ತರು ಪುನರಾವರ್ತಿಸಬೇಕೊ?
ಇಂದು ಕೆಲವು ಸಂಘಟನೆಗಳು ದೇಹದಂಡನೆಯನ್ನು ಪ್ರೋತ್ಸಾಹಿಸಲಿಕ್ಕಾಗಿ ಯೇಸು ಮತ್ತು ಆತನ ಆರಂಭದ ಹಿಂಬಾಲಕರು ಅನುಭವಿಸಿದ ಬಾಧೆಗಳಿಗೆ ತಪ್ಪಾದ ಮಹತ್ವಕೊಡುತ್ತಾರೆ. ಆದರೆ ಬೈಬಲಿನಲ್ಲಿ ದೇವರ ಸೇವಕರು ವರ್ಣಿಸಿದ ಆ ಬಾಧೆಗಳು ಯೇಸು ಮತ್ತು ಆತನ ಹಿಂಬಾಲಕರು ಸ್ವತಃ ಮಾಡಿಕೊಂಡಿದ್ದ ದೇಹದಂಡನೆ ಆಗಿರಲಿಲ್ಲ. ಬೈಬಲಿನ ಗ್ರೀಕ್ ಶಾಸ್ತ್ರಗಳನ್ನು ಬರೆದವರು ಕ್ರಿಸ್ತನ ಬಾಧೆಗಳ ಬಗ್ಗೆ ಪ್ರಸ್ತಾಪಿಸಿದ್ದರ ಉದ್ದೇಶ ಕ್ರೈಸ್ತರು ಹಿಂಸೆಯನ್ನು ತಾಳಿಕೊಳ್ಳಲಿಕ್ಕೆ ಪ್ರೋತ್ಸಾಹಿಸಲಿಕ್ಕೆಯೇ ಹೊರತು ತಮ್ಮನ್ನೇ ಹಿಂಸಿಸಿಕೊಳ್ಳಲಿಕ್ಕಾಗಿ ಅಲ್ಲ. ಆದ್ದರಿಂದ ಯಾರು ತಮ್ಮ ಸ್ವಂತ ದೇಹವನ್ನು ದಂಡಿಸಿಕೊಳ್ಳುತ್ತಾರೊ ಅವರು ಯೇಸು ಕ್ರಿಸ್ತನನ್ನು ಅನುಕರಿಸುವುದಿಲ್ಲ ಎಂಬುದು ಸ್ಪಷ್ಟ.
ದೃಷ್ಟಾಂತಕ್ಕೆ: ನಿಮ್ಮ ಮೆಚ್ಚಿನ ಮಿತ್ರನೊಬ್ಬನನ್ನು ಕ್ರೋಧಿತ ದೊಂಬಿಯೊಂದು ಬಾಯಿಗೆ ಬಂದಹಾಗೆ ಬಯ್ಯುತ್ತಾ ಹೊಡೆಯುತ್ತಿರುವುದನ್ನು ನೋಡುತ್ತೀರಿ ಎಂದಿಟ್ಟುಕೊಳ್ಳಿ. ಆದರೆ ನಿಮ್ಮ ಮಿತ್ರನು ಆ ಹಲ್ಲೆಗಾರರ ಮೇಲೆ ಕೈಯೆತ್ತದೆ, ಬಯ್ಯದೆ ಹಲ್ಲೆಯನ್ನು ಶಾಂತವಾಗಿ, ಸಮಾಧಾನದಿಂದ ಸಹಿಸಿಕೊಳ್ಳುತ್ತಾನೆ. ನಿಮ್ಮ ಮಿತ್ರನನ್ನು ನೀವು ಅನುಕರಿಸಲು ಬಯಸುವಲ್ಲಿ, ನಿಮ್ಮನ್ನೇ ಹೊಡೆದುಕೊಳ್ಳಲು ಇಲ್ಲವೆ ಬಯ್ದುಕೊಳ್ಳಲು ಆರಂಭಿಸುವಿರೋ? ಖಂಡಿತ ಇಲ್ಲ! ಹಾಗೆ ಮಾಡಿದರೆ ನೀವು ಆ ಕ್ರೋಧಿತ ದೊಂಬಿಯನ್ನು ಅನುಕರಿಸಿದಂತಾಗುವುದು. ನೀವು ಅಂಥದ್ದೇ ಹಲ್ಲೆಗೊಳಗಾದಾಗ ಪ್ರತಿದಾಳಿ ಮಾಡದಿರುವ ಮೂಲಕ ನಿಮ್ಮ ಮಿತ್ರನನ್ನು ಅನುಕರಿಸುವಿರಿ.
ಅಂತೆಯೇ, ಕ್ರಿಸ್ತನನ್ನು ಪೀಡಿಸಿ, ಕೊಲ್ಲಲು ಯತ್ನಿಸಿದ ಕ್ರೋಧಿತ ದೊಂಬಿಯನ್ನು ಆತನ ಹಿಂಬಾಲಕರು ಅನುಕರಿಸಬೇಕಾಗಿಲ್ಲ. ಹೀಗಿರುವುದರಿಂದ ಅವರು ತಮ್ಮನ್ನೇ ದಂಡಿಸಿಕೊಳ್ಳುವಂತೆ ನಿರೀಕ್ಷಿಸಲಾಗುವುದಿಲ್ಲ ಎಂಬುದು ಸ್ಪಷ್ಟ. (ಯೋಹಾನ 5:18; 7:1, 25; 8:40; 11:53) ಅದರ ಬದಲು ಅವರು ಹಿಂಸೆಯನ್ನು ಅನುಭವಿಸುವಾಗ ಯೇಸು ಮಾಡಿದಂತೆಯೇ ಶಾಂತವಾಗಿ, ಸಮಾಧಾನದಿಂದ ತಾಳಿಕೊಂಡು ಆತನನ್ನು ಅನುಕರಿಸುತ್ತಾರೆ.—ಯೋಹಾನ 15:20.
ಶಾಸ್ತ್ರಾಧಾರವಿಲ್ಲದ ವಿಕೃತ ಪದ್ಧತಿ
ಕ್ರಿಸ್ತ ಶಕಕ್ಕೆ ಮುಂಚೆಯೇ ಯೆಹೂದ್ಯರ ಜೀವನ ಹಾಗೂ ಆರಾಧನೆಯನ್ನು ನಿರ್ದೇಶಿಸುತ್ತಿದ್ದ ಶಾಸ್ತ್ರಗ್ರಂಥಗಳು, ಯೆಹೂದ್ಯರು ತಮ್ಮ ಶರೀರಕ್ಕೆ ಯಾವುದೇ ಹಾನಿಮಾಡದಂತೆ ಪ್ರತಿಬಂಧಿಸಿದ್ದವು. ಉದಾಹರಣೆಗೆ, ಯೆಹೂದ್ಯರು ದೇಹಕ್ಕೆ ಗಾಯಮಾಡಿಕೊಳ್ಳುವದನ್ನು ದೇವರ ನಿಯಮ ಸ್ಪಷ್ಟವಾಗಿ ನಿಷೇಧಿಸಿತ್ತು. ಆ ಪದ್ಧತಿ ಪ್ರಾಚೀನ ಕಾಲದ ಯೆಹೂದ್ಯೇತರ ಜನಾಂಗಗಳಲ್ಲಿ ಸರ್ವಸಾಮಾನ್ಯವಾಗಿತ್ತು. (ಯಾಜಕಕಾಂಡ 19:28; ಧರ್ಮೋಪದೇಶಕಾಂಡ 14:1) ದೇಹಕ್ಕೆ ಗಾಯಮಾಡಬಾರದೆಂದು ದೇವರು ಅಪೇಕ್ಷಿಸುತ್ತಿದ್ದನಾದರೆ, ಅದನ್ನು ಕೊರಡೆಗಳಿಂದ ಹೊಡೆದು ದಂಡಿಸಿಕೊಳ್ಳುವುದನ್ನೂ ಆತನು ಅಪೇಕ್ಷಿಸಿದ್ದಿರಲಾರನು ಖಂಡಿತ. ಬೈಬಲಿನ ಮಟ್ಟ ಸ್ಪಷ್ಟ: ಬೇಕುಬೇಕೆಂದು ಯಾರಾದರೂ ತನ್ನ ಸ್ವಂತ ದೇಹಕ್ಕೆ ಯಾವುದೇ ವಿಧದಲ್ಲಿ ಹಾನಿಮಾಡಿಕೊಳ್ಳುವುದು ದೇವರಿಗೆ ಸ್ವೀಕರಣೀಯವಲ್ಲ.
ಒಬ್ಬ ಕಲಾವಿದನು ತನ್ನ ಕಲಾಕೃತಿಗೆ ಗೌರವ ತೋರಿಸಲ್ಪಡಬೇಕೆಂದು ಬಯಸುವಂತೆಯೇ, ಸೃಷ್ಟಿಕರ್ತನಾದ ಯೆಹೋವ ದೇವರು ತನ್ನ ಕೃತಿಯಾದ ಮಾನವ ದೇಹಕ್ಕೆ ಗೌರವ ತೋರಿಸಲ್ಪಡಬೇಕೆಂದು ಬಯಸುತ್ತಾನೆ. (ಕೀರ್ತನೆ 139:14-16) ನಿಜವೇನೆಂದರೆ, ದೇಹದಂಡನೆಯು ದೇವರೊಂದಿಗಿನ ನಮ್ಮ ಸಂಬಂಧವನ್ನು ಬಲಗೊಳಿಸುವ ಬದಲು ದುರ್ಬಲಗೊಳಿಸುತ್ತದೆ. ಮಾತ್ರವಲ್ಲ ಸುವಾರ್ತಾ ಪುಸ್ತಕಗಳಲ್ಲಿರುವ ಬೋಧನೆಗಳನ್ನು ಅದು ವಿಕೃತಗೊಳಿಸುತ್ತದೆ.
ಮನುಷ್ಯನು ಮಾಡಿರುವ ಈ ರೀತಿಯ ಕಠೋರ ಬೋಧನೆಗಳ ಕುರಿತು, ಯೇಸುವಿನ ಶಿಷ್ಯ ಪೌಲನು ದೇವಪ್ರೇರಣೆಯಿಂದ ಬರೆದದ್ದು: “ಈ ಎಲ್ಲ ಸಂಗತಿಗಳು ಸ್ವಕಲ್ಪಿತ ಆರಾಧನಾ ರೀತಿಯಲ್ಲಿ ಮತ್ತು ಕಪಟ ದೀನತೆಯಲ್ಲಿ ವಿವೇಕದ ತೋರಿಕೆಯುಳ್ಳದ್ದಾಗಿದ್ದು ದೇಹದಂಡನೆಯನ್ನು ಉಂಟುಮಾಡುವಂಥದ್ದಾಗಿವೆ; ಆದರೆ ಶಾರೀರಿಕ ಇಚ್ಛೆಗಳನ್ನು ನಿಗ್ರಹಿಸುವುದರಲ್ಲಿ ಅವು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.” (ಕೊಲೊಸ್ಸೆ 2:20-23) ದೇಹದಂಡನೆಯ ಪದ್ಧತಿಯು ದೇವರನ್ನು ಮೆಚ್ಚಿಸಲು ನಿಜವಾಗಿ ಸಹಾಯಮಾಡುವುದೇ ಇಲ್ಲ. ದೇವರ ಸತ್ಯಾರಾಧನೆಯು ಅವಶ್ಯಪಡಿಸುವಂಥ ವಿಷಯಗಳಾದರೊ ಚೈತನ್ಯಕರವೂ ದಯಾಪರವೂ ಹೌರವೂ ಆಗಿರುತ್ತವೆ.—ಮತ್ತಾಯ 11:28-30. (g11-E 03)
ಈ ಬಗ್ಗೆ ಯೋಚಿಸಿದ್ದೀರೋ?
● ಮನುಷ್ಯ ದೇಹದ ಬಗ್ಗೆ ದೇವರ ನೋಟವೇನು?—ಕೀರ್ತನೆ 139:13-16.
● ದೇಹದಂಡನೆಯಿಂದ ನೀವು ಅಯೋಗ್ಯ ಇಚ್ಛೆಗಳನ್ನು ಹೊಡೆದೋಡಿಸಬಲ್ಲಿರೊ?—ಕೊಲೊಸ್ಸೆ 2:20-23.
● ಸತ್ಯಾರಾಧನೆಯು ಕಠೋರವೂ ಹೊರೆಯೂ ಆಗಿದೆಯೊ?—ಮತ್ತಾಯ 11:28-30.
[ಪುಟ 11ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲಿನ ಮಟ್ಟ ಸ್ಪಷ್ಟ: ಬೇಕುಬೇಕೆಂದು ಯಾರಾದರೂ ತನ್ನ ಸ್ವಂತ ದೇಹಕ್ಕೆ ಯಾವುದೇ ವಿಧದಲ್ಲಿ ಹಾನಿಮಾಡಿಕೊಳ್ಳುವುದು ದೇವರಿಗೆ ಸ್ವೀಕರಣೀಯವಲ್ಲ
[ಪುಟ 10ರಲ್ಲಿರುವ ಚಿತ್ರ]
ಚರ್ಚಿಗೆ ಮೊಣಕಾಲುಗಳಲ್ಲೇ ತೆವಳುತ್ತಾ ಹೋಗುತ್ತಿರುವ ಯಾತ್ರಿಕ
[ಕೃಪೆ]
© 2010 photolibrary.com