ಬೈಬಲ್ ಸತ್ಯ ಇವರಿಗೆ ತಂದಿತು ಬಿಡುಗಡೆ
ಬೈಬಲ್ ಸತ್ಯ ಇವರಿಗೆ ತಂದಿತು ಬಿಡುಗಡೆ
“ಸತ್ಯವನ್ನು ತಿಳಿದುಕೊಳ್ಳುವಿರಿ ಮತ್ತು ಸತ್ಯವು ನಿಮ್ಮನ್ನು ಬಿಡುಗಡೆಮಾಡುವುದು” ಎಂದನು ಯೇಸು ಕ್ರಿಸ್ತ ತನ್ನನ್ನು ಆಲಿಸುತ್ತಿದ್ದ ಗುಂಪಿಗೆ. (ಯೋಹಾನ 8:32) ಆ ಬಿಡುಗಡೆಯಲ್ಲಿ ಮಾಂತ್ರಿಕ ವಿದ್ಯೆಯ ಹಿಂದಿರುವ ಸುಳ್ಳಾಡುವ, ವಂಚಿಸುವ ದೆವ್ವಗಳ ಹತೋಟಿಯಿಂದ ಬಿಡುಗಡೆಯೂ ಸೇರಿದೆ. ಇದನ್ನು ಮುಂದಿನ ಉದಾಹರಣೆಗಳು ತೋರಿಸುತ್ತವೆ.—ಯೋಹಾನ 8:44.
ಕೆಳಗಿನ ಪ್ರತಿಯೊಂದು ಅನುಭವವೂ, ಬೈಬಲ್ ಸತ್ಯಕ್ಕೆ ಬಿಡುಗಡೆಮಾಡುವ ಶಕ್ತಿ ಇದೆಯೆಂದು ಎತ್ತಿತೋರಿಸುತ್ತದೆ. ಹೌದು, ಬೈಬಲ್ ಸತ್ಯ ಮಾತ್ರ ಜನರನ್ನು ಬಿಡುಗಡೆಮಾಡುತ್ತದೆ. ಬೈಬಲನ್ನು ನೀವೇ ಪರೀಕ್ಷಿಸಿನೋಡಿ. ಖಂಡಿತ ನಿಮಗೆ ನಿರಾಶೆಯಾಗದು. (g11-E 02)
[ಪುಟ 16ರಲ್ಲಿರುವ ಚೌಕ/ಚಿತ್ರ]
ಪುನರಭಿನಯಿಸಿ ತೆಗೆದ ಚಿತ್ರಗಳು
● ಸೂಸಾನ ಎಂಬಾಕೆ ಬ್ರಸಿಲ್‌ನಲ್ಲಿ ಒಬ್ಬ ಪುರೋಹಿತೆ ಆಗಿದ್ದಳು. ಆಕೆ ತನ್ನ ಅಲೌಕಿಕ ಶಕ್ತಿಗಳನ್ನು ಕಷ್ಟದಲ್ಲಿರುವವರ ಸಹಾಯಾರ್ಥ ಬಳಸಲು ಬಯಸಿದಳು. ಅಷ್ಟುಮಾತ್ರವಲ್ಲ, ‘ತನ್ನ ಮೃತ ತಾಯಿಯೊಂದಿಗೆ ಮಾತಾಡಿ’ ತುಂಬ ಖುಷಿಪಡುತ್ತಿದ್ದಳು. ಆದರೆ ಕಾಲಾನಂತರ, ಆಕೆಯ ‘ತಾಯಿ’ ಸೂಸಾನಳಿಗೆ “ನೀನು ಆತ್ಮಹತ್ಯೆ ಮಾಡಿಕೊ, ಆಗ ನನ್ನೊಂದಿಗೆ ಆತ್ಮಲೋಕದಲ್ಲಿ ಜೀವಿಸಬಹುದು” ಎಂದು ಬೇಡಿಕೊಂಡಳು. ಇದು ಸೂಸಾನಳನ್ನು ಬಹಳವಾಗಿ ಪೀಡಿಸಿತು, ಆಕೆಗೆ ಭಯಾನಕ ಕನಸುಗಳು ಬಿದ್ದವು. ಆಮೇಲೆ ಸೂಸಾನ ಮತ್ತು ಆಕೆಯ ಗಂಡ ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲಿನ ಅಧ್ಯಯನ ಮಾಡಿದರು. ಸೈತಾನನನ್ನು ಎದುರಿಸಲು ಅವರು ತುಂಬ ಹೆಣಗಾಡಬೇಕಾಯಿತು, ಆದರೆ ಕಟ್ಟಕಡೆಗೆ ‘ಅವನು ಅವರಿಂದ ಓಡಿಹೋದನು.’ (ಯಾಕೋಬ 4:7) ಈಗ ಅವರು ನೆಮ್ಮದಿಯಿಂದಿದ್ದಾರೆ. ಸೂಸಾನಳಿಗೆ ಹಿಂದಿನಂತೆ ದುಃಸ್ವಪ್ನಗಳು ಬೀಳುವುದಿಲ್ಲ. “ಯೆಹೋವನಿಗೆ ಕೃತಜ್ಞತೆ ಹೇಳಲು ನನಗೆ ಎಷ್ಟೊಂದು ಸಂಗತಿಗಳಿವೆ. ಆದರೆ ಎಲ್ಲದಕ್ಕಿಂತ ಹೆಚ್ಚಾಗಿ ಆತನು ನಮ್ಮನ್ನು ಆಧ್ಯಾತ್ಮಿಕ ಅಂಧಕಾರದೊಳಗಿಂದ ಹೊರನಡೆಸಿದಕ್ಕಾಗಿ ನಾನಾತನಿಗೆ ತುಂಬ ಆಭಾರಿ” ಎಂದಾಕೆ ಬರೆದಳು.
[ಪುಟ 16ರಲ್ಲಿರುವ ಚೌಕ/ಚಿತ್ರ]
● ತಿಮಥಿ ಪಶ್ಚಿಮ ಆಫ್ರಿಕದ ನಿವಾಸಿ. ಅವನು ಕಿವುಡನೂ, ಮೂಕನೂ ಆಗಿದ್ದಾನೆ. * ಡಾಕ್ಟರರು ಅವನಿಗೆ ಯಾವುದೇ ಉಪಶಮನ ಕೊಡಲು ಶಕ್ತರಾಗದ ಕಾರಣ, ರೋಗವಾಸಿ ಪವಾಡಗಳನ್ನು ನಡೆಸುವವರ ಬಳಿ ಹೋದನು. ಆದರೆ ಅದೂ ವ್ಯರ್ಥವಾಯಿತು. “ಅವರು ಮಾಡುತ್ತಿದ್ದ ಮೋಸ ನೋಡಿ ನನ್ನ ಮನಮುರಿಯಿತು” ಎಂದಾತ ಬರೆದ. ಬಳಿಕ ತಿಮಥಿ ಯೆಹೋವನ ಸಾಕ್ಷಿಗಳ ನೆರವಿನಿಂದ ಬೈಬಲಿನ ಅಧ್ಯಯನ ಮಾಡಿದ. ಎಲ್ಲ ಕಾಯಿಲೆಗಳನ್ನೂ ವಿಕಲತೆಗಳನ್ನೂ ತೆಗೆದುಹಾಕುವ ದೇವರ ಉದ್ದೇಶದ ಬಗ್ಗೆ ಅವರು ಅವನಿಗೆ ವಿವರಿಸಿದರು. ತಿಮಥಿ ಹೇಳಿದ್ದು: “ದೇವರ ನೂತನ ಲೋಕದಲ್ಲಿ ‘ಕಿವುಡರ ಕಿವಿ ಕೇಳಿಸುವ, . . . ಮೂಕನ ನಾಲಿಗೆಯು ಹರ್ಷಧ್ವನಿಗೈಯುವ’ ದಿನಕ್ಕಾಗಿ ನಾನು ಕಾತರದಿಂದ ಎದುರುನೋಡುತ್ತಿದ್ದೇನೆ.” (ಯೆಶಾಯ 35:1-6) ಕಿವುಡರಾದ ಇತರರು ನಿಜವಾದ ಬಿಡುಗಡೆಯನ್ನು ಪಡೆಯುವಂತೆ ಸಹಾಯಮಾಡಲು ಆತನು ಈಮಧ್ಯೆ ತನ್ನ ಚಿಕ್ಕ ಡಿವಿಡಿ ಪ್ಲೆಯರ್ ಅನ್ನು ಬಳಸುತ್ತಾ ಬೈಬಲ್ ಸತ್ಯಗಳನ್ನು ತಿಳಿಸುತ್ತಿದ್ದಾನೆ.
[ಪಾದಟಿಪ್ಪಣಿ]
^ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.
[ಪುಟ 17ರಲ್ಲಿರುವ ಚೌಕ/ಚಿತ್ರ]
● ಇವ್ಲಿನ್ ಎಂಬಾಕೆ ಎಸ್ಟೋನಿಯದ ನಿವಾಸಿ. ಮಂತ್ರವಿದ್ಯೆಯಲ್ಲಿ ತುಂಬ ಒಳಗೂಡಿದ್ದಳು. ಯೇಸು ಜನರನ್ನು ವಾಸಿಮಾಡಿದನಾದ್ದರಿಂದ ತಾನೂ ಅದನ್ನು ಮಾಡಲಿಚ್ಛಿಸಿದಳು. ವಿಶೇಷವಾಗಿ, ದೀರ್ಘ ಸಮಯದಿಂದ ಅಸ್ವಸ್ಥಳಾಗಿದ್ದ ತನ್ನ ಅಮ್ಮನನ್ನು ವಾಸಿಮಾಡಲು ಬಯಸಿದಳು. ಆದ್ದರಿಂದ ಗಂಭೀರ ಕಾಯಿಲೆಗಳನ್ನು ಪತ್ತೆಹಚ್ಚಿ, ಅವುಗಳಿಗೆ ಚಿಕಿತ್ಸೆ ನೀಡುವ ತನ್ನ ಯತ್ನದಲ್ಲಿ ಮಾಂತ್ರಿಕ ಉದ್ದೇಶಗಳಿಗಾಗಿ ಲೋಲಕದಂಡಗಳನ್ನು ಬಳಸುವುದು ಹೇಗೆಂದು ಕಲಿತಳು. ಸಮಯಾನಂತರ ಆಕೆ ಬೈಬಲನ್ನು ಅಧ್ಯಯನಮಾಡಿದಳು. ಪರಿಣಾಮ? “ನಾನೆಷ್ಟು ಮೋಸಹೋಗಿದ್ದೆ ಎಂದು ನನಗರ್ಥವಾಗ ತೊಡಗಿತು. ಆದ್ದರಿಂದ ನನ್ನ ಬಳಿಯಿದ್ದ ಮಂತ್ರತಂತ್ರದ ಸಾಹಿತ್ಯ ಹಾಗೂ ಲೋಲಕದಂಡಗಳನ್ನು ಸುಟ್ಟುಹಾಕಿದೆ” ಎಂದಳಾಕೆ. ಈಗ ಆಕೆ ಇತರರಿಗೆ, ಬಿಡುಗಡೆ ತರುವ ಬೈಬಲ್-ಸತ್ಯಗಳನ್ನು ಕಲಿಸುತ್ತಿದ್ದಾಳೆ.
[ಪುಟ 17ರಲ್ಲಿರುವ ಚೌಕ/ಚಿತ್ರ]
● ಮೇರಿ ಪಪುವ ನ್ಯೂ ಗಿನೀ ದ್ವೀಪಗಳಲ್ಲೊಂದರಲ್ಲಿ ಬೆಳೆದಾಕೆ. ಅಲ್ಲಿನ ಜನರಿಗೆ ಸತ್ತವರೆಂದರೆ ಭಯ. ಮೇರಿಯ ಹಳ್ಳಿಯಲ್ಲಿ ಯಾರಾದರೂ ಸತ್ತಾಗ ಆಕೆ ಬೇರೊಬ್ಬರ ಮಂಚದ ಅಡಿಯಲ್ಲಿ ಮಲಗುತ್ತಿದ್ದಳು. ಏಕೆಂದರೆ, ತಾನೊಬ್ಬಳೇ ಇದ್ದರೆ ಮೃತ ವ್ಯಕ್ತಿಯ ಆತ್ಮ ಬಂದು ತನ್ನನ್ನು ಸತಾಯಿಸುವುದು ಎಂಬ ಭಯ ಆಕೆಗಿತ್ತು. ಆದರೆ ಆಮೇಲೆ ಆಕೆ ಬೈಬಲಿನಿಂದ ಒಂದು ಹೊಸ ವಿಷಯ ಕಲಿತಳು. ಏನೆಂದರೆ, ಸತ್ತವರು ನಿದ್ರೆಯಂಥ ಸ್ಥಿತಿಯಲ್ಲಿದ್ದಾರೆ. ಅವರು ಸಮಾಧಿಯಲ್ಲಿದ್ದು, ಭೂಮಿಯು ಪರದೈಸಿನಂಥ ಉದ್ಯಾನವನವಾದಾಗ ಪುನಃ ಜೀವಂತರಾಗಲು ಕಾಯುತ್ತಿದ್ದಾರೆ. (ಲೂಕ 23:43; ಯೋಹಾನ 11:11-14) ಫಲಿತಾಂಶವಾಗಿ ಈಗ ಆಕೆಗೆ ಮೃತರ ಭಯವಿಲ್ಲ.
[ಪುಟ 17ರಲ್ಲಿರುವ ಚೌಕ/ಚಿತ್ರ]
● ಆಲೀಸ್ಯಾ ಎಂಬಾಕೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಯೆಹೋವನ ಸಾಕ್ಷಿಗಳ ಕುಟುಂಬದಲ್ಲಿ ಬೆಳೆದವಳು. ಆದರೂ ಆಕೆ ಮಂತ್ರತಂತ್ರದ ಪುಸ್ತಕಗಳು, ಚಲನಚಿತ್ರಗಳಲ್ಲಿ ಆಸಕ್ತಿ ವಹಿಸಿದಳು. ಆದರೆ ತಾನು ಹಿಂದೆ ಕಲಿತಿದ್ದ ಬೈಬಲ್ ಸತ್ಯಗಳ ಕುರಿತು ಆಮೇಲೆ ಗಂಭೀರವಾಗಿ ಯೋಚಿಸಲಾರಂಭಿಸಿದಳು. ತಾನು ವಾಸ್ತವದಲ್ಲಿ ‘ಯೆಹೋವನ ಮೇಜು ಮತ್ತು ದೆವ್ವಗಳ ಮೇಜು ಇವೆರಡರಲ್ಲಿಯೂ ಪಾಲುಗಾರಳಾಗಲು’ ಪ್ರಯತ್ನಿಸುತ್ತಿದ್ದೇನೆಂಬ ಗ್ರಹಿಕೆ ಅವಳಿಗಾಯಿತು. ಆದ್ದರಿಂದ ತನ್ನ ಮಾರ್ಗಗಳನ್ನು ಬದಲಾಯಿಸಿದಳು. ಈಗ ದೇವರ ಮುಂದೆ ಆಕೆಯ ಮನಸ್ಸಾಕ್ಷಿ ಶುದ್ಧವಾಗಿದೆ.—1 ಕೊರಿಂಥ 10:21.