ಬಾಲ್ಯಾವಸ್ಥೆಯಲ್ಲಿನ ಮಕ್ಕಳನ್ನು ಬೆಳೆಸುವುದು
ಬಾಲ್ಯಾವಸ್ಥೆಯಲ್ಲಿನ ಮಕ್ಕಳನ್ನು ಬೆಳೆಸುವುದು
“ಮಕ್ಕಳು ಐದು ವರ್ಷದವರಾಗುವ ತನಕ ಕುಟುಂಬದ ಬೆಚ್ಚಗಿನ ಹಿತಕರ ವಾತಾವರಣದೊಳಗಿರುತ್ತಾರೆ. ಆದ್ದರಿಂದ ಅವರಲ್ಲಿ ಒಳ್ಳೇ ಗುಣಗಳನ್ನು ಬೇರೂರಿಸುವುದು ಸುಲಭ. ಆದರೆ ಅವರು ಶಾಲೆಗೆ ಹೋಗಲು ತೊಡಗಿದಾಗ ಬೇರೆ ಬೇರೆ ವಿಧಗಳಲ್ಲಿ ವಿಷಯಗಳನ್ನು ನಿರ್ವಹಿಸಲು ಹಾಗೂ ಮಾತಾಡಲು ಕಲಿಯುತ್ತಾರೆ.”—ವಾಲ್ಟರ್, ಇಟಲಿ.
ಮ ಕ್ಕಳು ಬೆಳೆಯುತ್ತಾ ಹೋದಂತೆ ಅವರ ಪುಟ್ಟ ಪ್ರಪಂಚ ದೊಡ್ಡದಾಗುತ್ತ ಹೋಗುತ್ತದೆ. ಒಡನಾಡಿಗಳು, ಸಹಪಾಠಿಗಳು, ಕುಟುಂಬ ಸದಸ್ಯರು ಹೀಗೆ ಹೆಚ್ಚೆಚ್ಚು ಜನರ ಸಂಪರ್ಕಕ್ಕೆ ಬರುತ್ತಾರೆ. ಮೇಲೆ ತಿಳಿಸಲಾದ ವಾಲ್ಟರ್ ಹೇಳುವಂತೆ, ಶಿಶುವಾಗಿದ್ದಾಗ ನಿಮ್ಮ ಮಗುವಿನ ಮೇಲೆ ನೀವೊಬ್ಬರೇ ಪ್ರಭಾವಬೀರುತ್ತಿದ್ದಿರಿ. ಆದರೆ ಈಗ ಇತರರೂ ಪ್ರಭಾವಬೀರುತ್ತಾರೆ. ಆದ್ದರಿಂದಲೇ ಬಾಲ್ಯದ ಈ ಅವಧಿಯಲ್ಲಿ ನಿಮ್ಮ ಮಕ್ಕಳಿಗೆ ವಿಧೇಯತೆ ಮತ್ತು ಸದ್ವರ್ತನೆಗಳನ್ನು ಕಲಿಸುವುದು ಪ್ರಾಮುಖ್ಯ. ಸರಿತಪ್ಪಿನ ವಿಷಯದಲ್ಲೂ ಮಾರ್ಗದರ್ಶನ ಕೊಡುವುದು ಅಗತ್ಯ.
ಮೇಲೆ ತಿಳಿಸಲಾದ ಕೌಶಲಗಳು ಮಕ್ಕಳಲ್ಲಿ ಕ್ಷಣಮಾತ್ರದಲ್ಲಿ ಇಲ್ಲವೇ ತಮ್ಮಷ್ಟಕ್ಕೇ ಬರಲಾರವು. ಅದಕ್ಕಾಗಿ ನೀವು ‘ಪೂರ್ಣ ದೀರ್ಘ ಸಹನೆಯಿಂದಲೂ ಬೋಧಿಸುವ ಕಲೆಯಿಂದಲೂ ಖಂಡಿಸಬೇಕಾದೀತು, ಗದರಿಸಬೇಕಾದೀತು, ಬುದ್ಧಿಹೇಳಬೇಕಾದೀತು.’ (2 ತಿಮೊಥೆಯ 4:2) ಇಸ್ರಾಯೇಲ್ಯ ಹೆತ್ತವರಿಗೆ ದೇವರ ನಿಯಮಗಳನ್ನು “ಮಕ್ಕಳಿಗೆ ಅಭ್ಯಾಸಮಾಡಿಸಿ ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ ಇವುಗಳ ವಿಷಯದಲ್ಲಿ ಮಾತಾಡಬೇಕು” ಎಂಬ ಆಜ್ಞೆ ಕೊಡಲಾಗಿತ್ತು. (ಧರ್ಮೋಪದೇಶಕಾಂಡ 6:6, 7) ಈ ವಚನ ತಿಳಿಸುವಂತೆ ನೀವು ಕಲಿಸುತ್ತಾ ಇರುವುದು ಪ್ರಾಮುಖ್ಯ.
ಮಕ್ಕಳನ್ನು ಬೆಳೆಸುವಾಗ ಅನೇಕ ಸವಾಲುಗಳು ಎದುರಾಗುತ್ತವೆ. ಅವುಗಳಲ್ಲಿ ಕೆಲವನ್ನು ನಾವೀಗ ಪರಿಗಣಿಸೋಣ.
ಕಿವಿಗೊಡುವ ಸಮಯ
“ಮಾತಾಡುವ ಸಮಯ” ಇರುವಂತೆಯೇ ಕಿವಿಗೊಡುವ ಸಮಯವೂ ಇದೆಯೆಂದು ಬೈಬಲ್ ಹೇಳುತ್ತದೆ. (ಪ್ರಸಂಗಿ 3:7) ನೀವು ಮಾತಾಡುವಾಗ ಹಾಗೂ ಇತರರು ಮಾತಾಡುವಾಗ ಕಿವಿಗೊಡುವಂತೆ ನಿಮ್ಮ ಮಕ್ಕಳಿಗೆ ಹೇಗೆ ಕಲಿಸಬಲ್ಲಿರಿ? ಒಂದು ವಿಧ ನಿಮ್ಮ ಮಾದರಿಯ ಮೂಲಕವೇ. ನೀವು ಇತರರಿಗೆ, ನಿಮ್ಮ ಮಕ್ಕಳಿಗೆ ಸಹ ಜಾಗರೂಕತೆಯಿಂದ ಕಿವಿಗೊಡುತ್ತೀರೊ?
ಮಕ್ಕಳು ಸುಲಭವಾಗಿ ಅಪಕರ್ಷಿತರಾಗುತ್ತಾರೆ. ಆದ್ದರಿಂದ ಅವರೊಂದಿಗೆ ಮಾತಾಡುವಾಗ ಖಂಡಿತ ನಿಮ್ಮ ತಾಳ್ಮೆಯ ಪರೀಕ್ಷೆಯಾಗುತ್ತದೆ. ಪ್ರತಿಯೊಂದು ಮಗು ಭಿನ್ನ. ಹಾಗಾಗಿ ನಿಮ್ಮ ಮಗುವಿನೊಂದಿಗೆ ಮಾತಾಡಲು ಯಾವ ವಿಧಾನಗಳು ಹೆಚ್ಚು ಕಾರ್ಯಸಾಧಕ ಎಂಬದನ್ನು ಪತ್ತೆಹಚ್ಚಲು ಸದಾ ಮಗುವನ್ನು ಗಮನಿಸುತ್ತಿರಿ. ಉದಾಹರಣೆಗೆ, ಬ್ರಿಟನ್ನ ಡೇವಿಡ್ ಹೇಳುವುದು: “ನಾನು ಹೇಳಿದ್ದನ್ನು ತನ್ನ ಸ್ವಂತ ಮಾತುಗಳಲ್ಲಿ ಹೇಳುವಂತೆ ನನ್ನ ಮಗಳಿಗೆ ಹೇಳುತ್ತಿರುತ್ತೇನೆ. ಹೀಗೆ, ಆಕೆ ದೊಡ್ಡವಳಾಗುತ್ತಾ ಹೋದಂತೆ ನನಗೆ ಹೆಚ್ಚೆಚ್ಚು ಗಮನಕೊಟ್ಟು ಆಲಿಸುತ್ತಿದ್ದಾಳೆ.”
ಯೇಸು ತನ್ನ ಶಿಷ್ಯರಿಗೆ ಉಪದೇಶಿಸುತ್ತಿದ್ದಾಗ “ನೀವು ಹೇಗೆ ಕಿವಿಗೊಡುತ್ತೀರಿ ಎಂಬುದಕ್ಕೆ ಗಮನಕೊಡಿರಿ” ಎಂದು ಹೇಳಿದನು. (ಲೂಕ 8:18) ಇದನ್ನು ವಯಸ್ಕರೇ ಮಾಡಬೇಕಾಗಿದ್ದಲ್ಲಿ, ಮಕ್ಕಳು ಇನ್ನೆಷ್ಟು ಹೆಚ್ಚು ಮಾಡಬೇಕಾದೀತು!
“ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ”
ಬೈಬಲ್ ಹೇಳುವುದು: “ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.” ಕೊಲೊಸ್ಸೆ 3:13) ಕ್ಷಮಾಭಾವ ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ತರಬೇತಿ ನೀಡಬಹುದು. ಅದು ಹೇಗೆ?
(ಕಿವಿಗೊಡುವ ಕೌಶಲದ ಬಗ್ಗೆ ಈ ಮುಂಚೆ ಚರ್ಚಿಸಿದಂತೆ ಈ ವಿಷಯದಲ್ಲೂ ನೀವು ಮಾದರಿಯನ್ನಿಡುವುದು ಅಗತ್ಯ. ಇತರರೊಂದಿಗಿನ ವ್ಯವಹಾರಗಳಲ್ಲಿ ನೀವು ಕ್ಷಮಾಭಾವ ತೋರಿಸುವುದನ್ನು ನಿಮ್ಮ ಮಕ್ಕಳು ನೋಡಲಿ. ರಷ್ಯಾದಲ್ಲಿನ ಮರೀನಾ ಎಂಬ ತಾಯಿ ಇದನ್ನೇ ಮಾಡಲು ಶ್ರಮಿಸುತ್ತಾಳೆ. “ಕ್ಷಮಿಸುವುದು, ಬಿಟ್ಟುಕೊಡುವುದು, ಸಿಟ್ಟುಮಾಡದೆ ಇರುವುದರಲ್ಲಿ ಮಕ್ಕಳಿಗೆ ಉತ್ತಮ ಮಾದರಿಯಾಗಿರಲು ನಾವು ಪ್ರಯತ್ನಿಸುತ್ತೇವೆ. ಅಷ್ಟುಮಾತ್ರವಲ್ಲ, ತಪ್ಪು ನನ್ನದಿರುವಾಗ ಮಕ್ಕಳ ಬಳಿ ಕ್ಷಮೆ ಕೇಳುತ್ತೇನೆ. ಇತರರೊಂದಿಗೆ ಅವರೂ ಹಾಗೆ ನಡೆದುಕೊಳ್ಳಲು ಕಲಿಯಬೇಕೆಂಬುದು ನನ್ನ ಆಶಯ.”
ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವ ಮತ್ತು ಕ್ಷಮಿಸುವ ಸಾಮರ್ಥ್ಯ ಮುಂದೆ ಪ್ರೌಢವಯಸ್ಸಿನಲ್ಲೂ ಅತ್ಯಗತ್ಯ. ಇತರರಿಗೆ ಪರಿಗಣನೆ ತೋರಿಸುವಂತೆಯೂ ತಪ್ಪುಗಳನ್ನು ಮಾಡಿದಾಗ ಅವನ್ನು ಒಪ್ಪಿಕೊಳ್ಳುವಂತೆಯೂ ಮಕ್ಕಳಿಗೆ ಈಗಲೇ ಕಲಿಸಿ. ಹೀಗೆ ಮಾಡುವಲ್ಲಿ ನೀವು ಮಕ್ಕಳಿಗೆ ಅಮೂಲ್ಯ ಉಡುಗೊರೆಯೊಂದನ್ನು ಕೊಡುತ್ತಿದ್ದೀರಿ. ಅವರು ಬೆಳೆಯುತ್ತಾ ಹೋದಂತೆ ಇದು ಅವರಿಗೆ ಉಪಯುಕ್ತವಾಗಿರುವುದು.
“ನೀವು ಕೃತಜ್ಞತಾಭಾವದವರೆಂದು ತೋರಿಸಿರಿ”
‘ನಿಭಾಯಿಸಲು ಕಷ್ಟಕರವಾದ ಈ ಕಠಿನಕಾಲಗಳಲ್ಲಿ’ ಅನೇಕ ಜನರು ‘ಸ್ವಪ್ರೇಮಿಗಳಾಗಿದ್ದಾರೆ.’ (2 ತಿಮೊಥೆಯ 3:1, 2) ಹೀಗಿರುವುದರಿಂದ, ನಿಮ್ಮ ಮಕ್ಕಳು ಚಿಕ್ಕವರಿರುವಾಗಲೇ ಕೃತಜ್ಞತಾಭಾವವನ್ನು ಅವರಲ್ಲಿ ಬೆಳೆಸಿ. “ನೀವು ಕೃತಜ್ಞತಾಭಾವದವರೆಂದು ತೋರಿಸಿರಿ” ಎಂದನು ಯೇಸುವಿನ ಶಿಷ್ಯ ಪೌಲ.—ಕೊಲೊಸ್ಸೆ 3:15.
ಚಿಕ್ಕ ವಯಸ್ಸಿನಿಂದಲೇ ಮಕ್ಕಳು ಸದ್ವರ್ತನೆ ತೋರಿಸಲು ಹಾಗೂ ಇತರರಿಗೆ ಪರಿಗಣನೆ ತೋರಿಸಲು ಕಲಿಯಬಲ್ಲರು. ಹೇಗೆ? ಹೆತ್ತವರು (ಇಂಗ್ಲಿಷ್) ಎಂಬ ಪತ್ರಿಕೆಯಲ್ಲಿ ಡಾ. ಕೈಲ್ ಪ್ರುಯೆಟ್ ಹೇಳಿದ್ದು: “ಕೃತಜ್ಞತೆ ತೋರಿಸಲು ಮಕ್ಕಳಿಗೆ ಕಲಿಸುವ ಅತ್ಯುತ್ತಮ ವಿಧಾನವು, ನೀವು ಮನೆಮಂದಿಗೆ ಸದಾ ಕೃತಜ್ಞತೆ ತೋರಿಸುತ್ತಿರುವುದೇ. ಅಂದರೆ ಇತರರ ಸಹಾಯವನ್ನು ಇಲ್ಲವೇ ಪರಿಗಣನೆಯ ಕ್ರಿಯೆಗಳನ್ನು ನೀವೆಷ್ಟು ಗಣ್ಯಮಾಡುತ್ತೀರೆಂದು ಸದಾ ಹೇಳುತ್ತಿರಬೇಕು. . . . ಇದನ್ನು ರೂಢಿಮಾಡಿಕೊಳ್ಳಬೇಕು.”
ಬ್ರಿಟನ್ನ ರಿಚರ್ಡ್ ಎಂಬ ತಂದೆ ಇದನ್ನೇ ಮಾಡಲು ಪ್ರಯಾಸಪಡುತ್ತಾನೆ. ಅವನನ್ನುವುದು: “ನಮ್ಮೊಂದಿಗೆ ದಯೆಯಿಂದ ವ್ಯವಹರಿಸುವವರಿಗೆ ಅಂದರೆ ಉಪಾಧ್ಯಾಯರು, ಅಜ್ಜಅಜ್ಜಿಯಂದಿರಿಗೆ ಕೃತಜ್ಞತೆ ಸಲ್ಲಿಸುವುದು ಹೇಗೆಂದು ನಾನೂ ನನ್ನ ಪತ್ನಿಯೂ ಮಕ್ಕಳಿಗೆ ತೋರಿಸಿಕೊಡುತ್ತೇವೆ. ಒಂದು ಕುಟುಂಬ ನಮ್ಮನ್ನು ಊಟಕ್ಕೆ ಕರೆದಾಗ ಅವರಿಗೆ ಥ್ಯಾಂಕ್ಯೂ ಕಾರ್ಡನ್ನು ಕೊಡುತ್ತೇವೆ. ಅದರಲ್ಲಿ ನಮ್ಮ ಮಕ್ಕಳು ತಮ್ಮ ಹೆಸರು ಬರೆಯುತ್ತಾರೆ ಇಲ್ಲವೇ ಚಿತ್ರ ಬಿಡಿಸಿರುತ್ತಾರೆ.” ಸೌಜನ್ಯಶೀಲರೂ ಕೃತಜ್ಞತಾಭಾವದವರೂ ಆಗಿರುವುದು ಜೀವನದಲ್ಲಿ ಮುಂದಕ್ಕೆ ಬಾಳುವ, ಆಪ್ತ ಸಂಬಂಧಗಳನ್ನು ಬೆಸೆಯಲು ಮಕ್ಕಳಿಗೆ ಸಹಾಯಮಾಡುತ್ತದೆ.
“ಶಿಕ್ಷೆಗೆ ಹಿಂತೆಗೆಯಬೇಡ”
ಕ್ರಿಯೆಗಳಿಗೆ ತಕ್ಕ ಪರಿಣಾಮಗಳನ್ನು ಅನುಭವಿಸಬೇಕು ಎಂಬುದನ್ನು ನಿಮ್ಮ ಮಕ್ಕಳು ಬೆಳೆಯುತ್ತಾ ಬಂದಂತೆ ಕಲಿಯಬೇಕು. ಮಕ್ಕಳು ಚಿಕ್ಕಂದಿನಿಂದಲೇ ಮನೆಯಲ್ಲಿ ಮಾತ್ರವಲ್ಲ, ಶಾಲೆಯಲ್ಲೂ ಸಮಾಜದಲ್ಲೂ ಅಧಿಕಾರದಲ್ಲಿರುವವರಿಗೆ ಉತ್ತರಕೊಡಬೇಕಾಗುತ್ತದೆ. ಬಿತ್ತಿದ್ದನ್ನು ಕೊಯ್ಯಬೇಕು ಎಂಬ ಮೂಲತತ್ತ್ವವನ್ನು ಕಲಿಯುವಂತೆ ನೀವು ಮಕ್ಕಳಿಗೆ ಸಹಾಯಮಾಡಬಲ್ಲಿರಿ. (ಗಲಾತ್ಯ 6:7) ಹೇಗೆ?
“ಶಿಕ್ಷೆಗೆ ಹಿಂತೆಗೆಯಬೇಡ” ಎನ್ನುತ್ತದೆ ಬೈಬಲ್. (ಜ್ಞಾನೋಕ್ತಿ 23:13) ಇಂತಿಂಥ ತಪ್ಪಿಗೆ ಇಂತಿಂಥ ಶಿಕ್ಷೆಯನ್ನು ಕೊಡುತ್ತೀರೆಂದು ನೀವು ಸ್ಪಷ್ಟವಾಗಿ ಹೇಳಿರುವಲ್ಲಿ ಮಕ್ಕಳು ಆ ತಪ್ಪು ಮಾಡಿದಾಗ ಅದನ್ನು ಕೊಡಲು ತಪ್ಪಬೇಡಿ. ಅರ್ಜೆಂಟೀನಾದಲ್ಲಿನ ನೊರ್ಮಾ ಎಂಬ ತಾಯಿ ಹೇಳುವುದು: “ದೃಢತೆ ಪ್ರಾಮುಖ್ಯ. ಇಲ್ಲದಿದ್ದಲ್ಲಿ ಪರಿಸ್ಥಿತಿಯನ್ನು ದುರುಪಯೋಗಿಸುತ್ತಾ ಮನಬಂದಂತೆ ನಡೆಯಲು ಮಗುವಿಗೆ ಉತ್ತೇಜನ ಸಿಗುವುದು.”
ಮಕ್ಕಳು ಅವಿಧೇಯರಾದ ನಂತರ ಕೂಗಾಡುತ್ತ ಇರುವ ಬದಲು ಅವಿಧೇಯತೆಯ ಪರಿಣಾಮಗಳೇನೆಂದು ಹೆತ್ತವರು ಮೊದಲೇ ಮಕ್ಕಳಿಗೆ ಮನಗಾಣಿಸತಕ್ಕದ್ದು. ಹೆತ್ತವರ ನಿಯಮಗಳೇನು, ಅವುಗಳನ್ನು ಮುರಿದರೆ ಯಾವ ಶಿಕ್ಷೆ ಸಿಗುವುದು ಹಾಗೂ ಶಿಕ್ಷೆಯಿಂದ ಖಂಡಿತ ತಪ್ಪಿಸಿಕೊಳ್ಳಸಾಧ್ಯವಿಲ್ಲ ಎನ್ನುವುದು
ಮಕ್ಕಳಿಗೆ ಗೊತ್ತಿರುವಲ್ಲಿ ಅವರು ಆ ನಿಯಮಗಳನ್ನು ಮುರಿಯುವ ಸಾಧ್ಯತೆಗಳು ತುಂಬ ಕಡಿಮೆ.ಶಿಸ್ತಿನಿಂದ ಮಗುವಿಗೆ ಪ್ರಯೋಜನವಾಗಬೇಕಾದರೆ ಅದನ್ನು ಕೋಪದಿಂದ ಕೊಡಬಾರದು. ಬೈಬಲ್ ಹೇಳುವುದು: “ಎಲ್ಲ ದ್ವೇಷಭರಿತ ವೈಷಮ್ಯ, ಕೋಪ, ಕ್ರೋಧ, ಕಿರಿಚಾಟ ಮತ್ತು ನಿಂದಾತ್ಮಕ ಮಾತುಗಳನ್ನು ಸಕಲ ವಿಧವಾದ ಕೆಟ್ಟತನದೊಂದಿಗೆ ನಿಮ್ಮಿಂದ ತೆಗೆದುಹಾಕಿರಿ.” (ಎಫೆಸ 4:31) ಶಿಸ್ತಿನಲ್ಲಿ ಕ್ರೂರ ಶಿಕ್ಷೆ ಒಳಗೂಡಿರಬಾರದು. ಮಕ್ಕಳಿಗೆ ದೈಹಿಕವಾಗಿ ಅಥವಾ ಭಾವನಾತ್ಮಕವಾಗಿ ಹಾನಿಯಾಗಬಾರದು.
ಆದರೆ ನಿಮ್ಮ ಮಗು ನಿಮ್ಮ ತಾಳ್ಮೆಯನ್ನು ಪೂರ್ತಿ ಕೆಡಿಸಿರುವಲ್ಲಿ ನಿಮ್ಮ ಕೋಪವನ್ನು ಹೇಗೆ ನಿಯಂತ್ರಿಸಬಲ್ಲಿರಿ? ನ್ಯೂಜಿಲೆಂಡ್ನಲ್ಲಿನ ಪೀಟರ್ ಎಂಬ ತಂದೆ ಒಪ್ಪಿಕೊಳ್ಳುವುದು: “ಹಾಗೆ ಮಾಡುವುದು ಯಾವತ್ತೂ ಸುಲಭವಲ್ಲ. ಶಿಕ್ಷೆಯು ತಮ್ಮ ಕ್ರಿಯೆಗಳ ಫಲಿತಾಂಶವಾಗಿ ದೊರೆಯುತ್ತದೆಯೇ ವಿನಾ ಹೆತ್ತವರು ತಮ್ಮ ನಿಯಂತ್ರಣ ಕಳೆದುಕೊಂಡು ಶಿಕ್ಷೆ ಕೊಡುತ್ತಿಲ್ಲ ಎಂಬದನ್ನು ಮಕ್ಕಳು ಕಲಿಯುವ ಅಗತ್ಯವಿದೆ.”
ತಿದ್ದುಪಾಟಿನಿಂದ ಸಿಗುವ ದೀರ್ಘಕಾಲಿಕ ಪ್ರಯೋಜನಗಳನ್ನು ತಿಳಿದುಕೊಳ್ಳುವಂತೆ ಪೀಟರ್ ಮತ್ತವನ ಪತ್ನಿ ಮಕ್ಕಳಿಗೆ ಸಹಾಯಮಾಡುತ್ತಾರೆ. ಅವನನ್ನುವುದು: “ಮಕ್ಕಳು ತುಂಬ ಕೆಟ್ಟದಾದ ವಿಷಯವನ್ನು ಮಾಡಿದಾಗಲೂ ಅವರನ್ನು ಕೆಟ್ಟವರೆಂದು ಕರೆಯುವ ಬದಲು ಹೇಗೆ ಒಳ್ಳೇ ರೀತಿಯ ವ್ಯಕ್ತಿಗಳಾಗಿರಬೇಕು ಎಂದು ಬುದ್ಧಿಹೇಳುತ್ತೇವೆ.”
“ನಿಮ್ಮ ನ್ಯಾಯಸಮ್ಮತತೆಯು . . . ತಿಳಿದುಬರಲಿ”
ದೇವರು ತನ್ನ ಜನರ ತಪ್ಪಿಗಾಗಿ ಕೊಡಲಿದ್ದ ಶಿಕ್ಷೆಯ ಬಗ್ಗೆ ತಿಳಿಸುತ್ತಾ ಅವರನ್ನು “ಮಿತಿಮೀರಿ ಶಿಕ್ಷಿಸೆನು” ಎಂದು ಹೇಳಿದನು. (ಯೆರೆಮೀಯ 46:28) ಮಕ್ಕಳ ತಪ್ಪಿಗೆ ತಕ್ಕದಾದಂಥ ಹಾಗೂ ನ್ಯಾಯವಾದ ಶಿಕ್ಷೆಯನ್ನು ನೀಡುವಲ್ಲಿ ಉತ್ತಮ ಫಲಿತಾಂಶಗಳು ಲಭಿಸುವವು. “ನಿಮ್ಮ ನ್ಯಾಯಸಮ್ಮತತೆಯು . . . ತಿಳಿದುಬರಲಿ” ಎಂದು ಪೌಲನು ಕ್ರೈಸ್ತರಿಗೆ ಬರೆದನು.—ಫಿಲಿಪ್ಪಿ 4:5.
ಶಿಕ್ಷೆ ಕೊಡುವಾಗ ಮಕ್ಕಳನ್ನು ಅವಮಾನಿಸದಿರುವುದೂ ನ್ಯಾಯಸಮ್ಮತತೆಯಲ್ಲಿ ಸೇರಿದೆ. ಇಟಲಿಯಲ್ಲಿನ ಸ್ಯಾಂಟೀ ಎಂಬ ತಂದೆ ಹೇಳುವುದು: “ನನ್ನ ಮಗನನ್ನಾಗಲಿ ಮಗಳನ್ನಾಗಲಿ ನಾನೆಂದೂ ಹೀನೈಸಿ ಮಾತಾಡುವುದಿಲ್ಲ. ಬದಲಾಗಿ ಸಮಸ್ಯೆಯ ಮೂಲಕಾರಣವನ್ನು ಪತ್ತೆಹಚ್ಚಿ ಅದನ್ನು ಸರಿಪಡಿಸಲು ಅವರಿಗೆ ಸಹಾಯಮಾಡುತ್ತೇನೆ. ನನ್ನ ಮಕ್ಕಳನ್ನು ಇತರರ ಮುಂದೆಯಾಗಲಿ ಸಾಧ್ಯವಿದ್ದಲ್ಲಿ ಒಬ್ಬರನ್ನೊಬ್ಬರ ಮುಂದೆಯೂ ಶಿಕ್ಷಿಸುವುದಿಲ್ಲ. ಎಲ್ಲರ ಎದುರಲ್ಲಾಗಲಿ ಖಾಸಗಿಯಲ್ಲಾಗಲಿ ಅವರ ಬಲಹೀನತೆಗಳನ್ನು ಹೇಳಿಕೊಂಡು ಗೇಲಿಮಾಡುವುದಿಲ್ಲ.”
ಈ ಮುಂಚೆ ತಿಳಿಸಲಾದ ರಿಚರ್ಡ್ ಸಹ ನ್ಯಾಯಸಮ್ಮತತೆಯ ಯುಕ್ತತೆಯನ್ನು ಅರಿತಿದ್ದಾನೆ. ಅವನನ್ನುವುದು: “ಶಿಕ್ಷೆ ಕೊಡುವಾಗ ಪ್ರತಿಬಾರಿ ಹಳೆಯ ತಪ್ಪುಗಳನ್ನೆಲ್ಲ ಕೆದಕಿ ಹೇಳಬಾರದು. ಒಮ್ಮೆ ನಿರ್ದಿಷ್ಟ ತಪ್ಪಿಗೆ ಶಿಕ್ಷೆ ಕೊಟ್ಟ ಮೇಲೆ ಅದರ ಬಗ್ಗೆಯೇ ಮಾತಾಡುತ್ತಾ ಇದ್ದು, ಅದನ್ನು ಯಾವಾಗಲೂ ನೆನಪುಹುಟ್ಟಿಸುತ್ತಿರಬಾರದು.”
ಮಕ್ಕಳನ್ನು ಬೆಳೆಸುವುದು ಸ್ವತ್ಯಾಗವನ್ನು ಒಳಗೂಡಿರುವ ಪ್ರಯಾಸದ ಕೆಲಸ. ಆದರೆ ಅದು ಬಹಳಷ್ಟು ಪ್ರತಿಫಲದಾಯಕ. ರಷ್ಯಾದಲ್ಲಿನ ಎಲೆನಾ ಎಂಬ ತಾಯಿಯ ಅನುಭವವೂ ಅದೇ. ಆಕೆ ಹೇಳುವುದು: “ನನ್ನ ಮಗನೊಂದಿಗೆ ಹೆಚ್ಚು ಸಮಯ ಕಳೆಯಲಿಕ್ಕಾಗಿ ನಾನು ಅರೆಕಾಲಿಕ ಕೆಲಸವನ್ನು ಮಾಡುತ್ತಿದ್ದೇನೆ. ಇದಕ್ಕಾಗಿ ಪ್ರಯತ್ನ ಅಗತ್ಯ. ಆರ್ಥಿಕ ನಷ್ಟವೂ ಇದೆ. ಆದರೆ ಇದು ನನ್ನ ಮಗನಿಗೆ ಕೊಡುವ ಆನಂದವನ್ನು ಹಾಗೂ ನಮ್ಮಿಬ್ಬರನ್ನು ಆಪ್ತಗೊಳಿಸುವ ಪರಿಯನ್ನು ನೋಡುವಾಗ ನನ್ನ ತ್ಯಾಗ ಸಾರ್ಥಕವೆನಿಸುತ್ತದೆ.” (g11-E 10)
[ಪುಟ 11ರಲ್ಲಿರುವ ಚಿತ್ರ]
ಮಕ್ಕಳು ಇತರರಿಗೆ ಪರಿಗಣನೆ ತೋರಿಸಲು ಕಲಿಯಬಲ್ಲರು
[ಪುಟ 12ರಲ್ಲಿರುವ ಚಿತ್ರ]
ಮಕ್ಕಳ ತಪ್ಪನ್ನು ತಿದ್ದುವಾಗ ಅವರಿಗೆ ಅವಮಾನವಾಗದಂತೆ ನೋಡಿ