ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ವಿಶ್ವ-ವೀಕ್ಷಣೆ

ಬ್ರಸಿಲಿನ 10-13 ವಯಸ್ಸಿನ ಶಾಲಾಮಕ್ಕಳಲ್ಲಿ ಶೇ. 17ರಷ್ಟು ಮಕ್ಕಳು ಗೂಂಡಾಗಿರಿಗೆ ಬಲಿಯಾಗುತ್ತಾರೆ ಇಲ್ಲವೆ ತಾವೇ ಗೂಂಡಾಗಿರಿ ಮಾಡುತ್ತಾರೆ.—ಓ ಎಸ್ಟಾಡೊ ಡಾ ಸಾ ಪೌಲೂ, ಬ್ರಸಿಲ್‌.

ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟರಾಲ್‌, ಮೂತ್ರಕೋಶದಲ್ಲಿ ಕಲ್ಲುಗಳು ಮತ್ತು ಯಕೃತ್ತು ಸಮಸ್ಯೆಗಳು—ಇವೆಲ್ಲ ಈಗ 12ಕ್ಕಿಂತ ಕೆಳಗಿನ ಪ್ರಾಯದ ಮಕ್ಕಳಲ್ಲಿ ಪತ್ತೆಹಚ್ಚಲಾಗಿವೆ. ಈ ಸಮಸ್ಯೆಗಳಿಗೆ ಮುಖ್ಯ ಕಾರಣಗಳು? ಜಡ ಜೀವನಶೈಲಿ, ಹಾಳುಮೂಳು ಆಹಾರದ ವಿಪರೀತ ಸೇವನೆ ಮತ್ತು ಅತಿಯಾದ ತೂಕ.—ಎಬಿಸಿ, ಸ್ಪೇನ್‌.

ಒಂದು ಮಗುವನ್ನು ಬೆಳೆಸಲು ತಗಲುವ ಖರ್ಚು—ಯುನೈಟೆಡ್‌ ಸ್ಟೇಟ್ಸ್‌ನ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 2008ರಲ್ಲಿ ಹುಟ್ಟಿರುವ ಮಗುವೊಂದನ್ನು 18 ವರ್ಷದ ವರೆಗೆ ಬೆಳೆಸಲು “ಸುಮಾರು 2,21,190 ಡಾಲರು [ರೂ. 98,91,617] (ಹಣದುಬ್ಬರಕ್ಕೆ ತಕ್ಕಂತೆ ಹೊಂದಿಸಿದಾಗ 2,91,570 ಡಾಲರು [ರೂ. 1,30,39,010]” ಖರ್ಚಾಗುತ್ತದೆ ಎಂದು ಒಂದು ಸರ್ಕಾರಿ ಸಮೀಕ್ಷೆ ಹೇಳುತ್ತದೆ.ಯುನೈಟೆಡ್‌ ಸ್ಟೇಟ್ಸ್‌ ಕೃಷಿ ಇಲಾಖೆ.

ಆಟವಾಡುವುದನ್ನೇ ಮರೆತಿರುವ ಹೆತ್ತವರು

ಬ್ರಿಟನಿನ ಶೇ. 20ರಷ್ಟು ಹೆತ್ತವರು “ತಾವು ಮಕ್ಕಳೊಂದಿಗೆ ಆಡುವುದನ್ನು” ಮರೆತಿದ್ದೇವೆಂದು ಹೇಳುವುದನ್ನು ಇತ್ತೀಚಿನ ಒಂದು ಸಮೀಕ್ಷೆ ತೋರಿಸುತ್ತದೆ. ಶೇ. 33ರಷ್ಟು ಹೆತ್ತವರು ಆಡಲು ಬೋರ್‌ ಆಗುತ್ತದೆಂದೂ ಇತರರು ಸಮಯವಿಲ್ಲ ಇಲ್ಲವೆ ಏನು ಆಟವಾಡಬೇಕೆಂದು ಗೊತ್ತಿಲ್ಲ ಎಂದೂ ಒಪ್ಪಿಕೊಳ್ಳುತ್ತಾರೆ. ಈ ಕಂಡುಹಿಡಿತದ ಬಗ್ಗೆ ಮನಃಶ್ಶಾಸ್ತ್ರಜ್ಞೆ ಪ್ರೊಫೆಸರ್‌ ಟಾನ್ಯಾ ಬೈರಾನ್‌ ಹೇಳುವುದು: “ಹೆತ್ತವರು ಮಕ್ಕಳೊಂದಿಗೆ ಆಟವಾಡುವ ಸಮಯ ಪರಿಣಾಮಕಾರಿ ಆಗಿರಬೇಕಾದರೆ ಅದರಲ್ಲಿ ನಾಲ್ಕು ಮುಖ್ಯ ವಿಷಯಗಳು ಸೇರಿರಬೇಕು. ಅದೇನೆಂದರೆ, ಮಕ್ಕಳು ಹೊಸ ವಿಷಯಗಳನ್ನು ಕಲಿಯಲು, ಸೃಜನಶೀಲರಾಗಿರಲು ಮತ್ತು ಬೇರೆ ಜನರೊಂದಿಗೆ ವರ್ತಿಸುವುದು, ಸಂವಾದಿಸುವುದು ಹೇಗೆಂದು ಕಲಿಯಲು ಶಕ್ತರಾಗಬೇಕು.” ಶೇ. 30ರಷ್ಟು ಹೆತ್ತವರು ತಮ್ಮ ಮಕ್ಕಳೊಂದಿಗೆ ಕಂಪ್ಯೂಟರ್‌ ಗೇಮ್ಸ್‌ ಆಡಲು ಇಷ್ಟಪಡುವುದಾದರೂ ಹೆಚ್ಚಿನ ಮಕ್ಕಳು ಈ ಗೇಮ್ಸ್‌ ಅನ್ನು ಒಂಟಿಯಾಗಿ ಆಡಲು ಇಚ್ಛಿಸುತ್ತಾರೆ. 5ರಿಂದ 15 ವರ್ಷದ ಮಕ್ಕಳು ತಮ್ಮ ಹೆತ್ತವರೊಂದಿಗೆ ಸೇರಿ ಮಾಡಲಿಚ್ಛಿಸುವ ಚಟುವಟಿಕೆಗಳಲ್ಲಿ, ಮನೆಯ ಹೊರಗೆ ಆಡುವುದು ಮತ್ತು ಮಣೆ ಆಟಗಳನ್ನು ಆಡುವುದು ಸೇರಿವೆ.

ಮಲಗುವ ಹೊತ್ತಿನ ಕಥೆಗಳು

ಮಕ್ಕಳು ಮಲಗುವ ಹೊತ್ತಿಗೆ ಅವರೊಟ್ಟಿಗೆ ಇದ್ದು ಕಥೆಗಳನ್ನು ಓದಿಹೇಳಲು ಪುರುಸೊತ್ತಿಲ್ಲದ ಅಪ್ಪಂದಿರಿಗೆ ಒಂದು ಇಂಟರ್‌ನೆಟ್‌ ಸೌಕರ್ಯ ಸಹಾಯಮಾಡಲು ಮುಂದೆಬಂದಿದೆ. “ಉಚ್ಛ ತಂತ್ರಜ್ಞಾನದ ಒಂದು ಸಾಫ್ಟ್‌ವೇರ್‌, ಮೊದಲು ತಂದೆ ಕಥೆ ಓದುವುದನ್ನು ರೆಕಾರ್ಡು ಮಾಡಿ, ಆಮೇಲೆ ಅದಕ್ಕೆ ಸಂಗೀತ ಹಾಗೂ ಬೇರೆ ಸೌಂಡ್‌ ಅಫೆಕ್ಟ್ಸ್‌ ಅನ್ನು ಸೇರಿಸಿ, ಆ ಆಡಿಯೊ ಫೈಲನ್ನು ಮಗುವಿಗೆ ಇ-ಮೇಲಲ್ಲಿ ಕಳುಹಿಸುತ್ತದೆ” ಎಂದು ಸಿಡ್ನಿಯ ಡೇಲಿ ಟೆಲಿಗ್ರಾಫ್‌ ವಾರ್ತಾಪತ್ರಿಕೆ ವಿವರಿಸುತ್ತದೆ. ಆದರೆ ಇದು ಪರಿಣಾಮಕಾರಿಯಲ್ಲವೆಂದು ತಜ್ಞರು ಹೇಳುತ್ತಾರೆ. ಆಸ್ಟ್ರೇಲಿಯದ ನ್ಯೂಕಾಸಲ್‌ ಯುನಿವರ್ಸಿಟಿಯಲ್ಲಿ ಕುಟುಂಬಗಳ ಬಗ್ಗೆ ಸಂಶೋಧನಾ ಕಾರ್ಯಕ್ರಮ ನಡೆಸುವ ಡಾ. ರಿಚರ್ಡ್‌ ಫ್ಲೆಚರ್‌ ಹೀಗನ್ನುತ್ತಾರೆ: “ಮಗುವಿನ ಜೊತೆಯಿದ್ದು ಕಥೆ ಓದಿಹೇಳುವಾಗ ಅದರೊಂದಿಗೆ ಒಳ್ಳೇ ಸಂಬಂಧ ಬೆಳೆಯುತ್ತದೆ.” ಏಕೆಂದರೆ ಕಥೆ ಓದಿಹೇಳುವಾಗ ತಂದೆಯಂದಿರು ಮಕ್ಕಳೊಂದಿಗೆ ಮಾತಾಡುತ್ತಾರೆ, ನಗಾಡುತ್ತಾರೆ ಮುದ್ದುಮಾಡುತ್ತಾರೆ. ಸ್ವತಃ ನೀವೇ ನಿಮ್ಮ ಮಗುವಿನ ಜೊತೆ ಕೂತು ಓದಿಹೇಳುವಾಗ ಸಿಗುವ ಪ್ರಯೋಜನಗಳನ್ನು ಯಾವುದೇ ಇ-ಮೇಲ್‌ನಿಂದ ಪಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಾರೆ ಡಾ. ಫ್ಲೆಚರ್‌. (g11-E 10)