ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರು ಹೇಳುವುದೇನು?

ಹೆತ್ತವರು ಹೇಳುವುದೇನು?

ಹೆತ್ತವರು ಹೇಳುವುದೇನು?

ಶಾಲೆಗೆ ಹೋಗುವ ವಯಸ್ಸಾಗದ ಚಿಕ್ಕ ಮಗು ನಿಮಗಿದ್ದರೆ ನೀವು ಕಷ್ಟಕರ ಸವಾಲುಗಳನ್ನು ಎದುರಿಸುತ್ತಿರಬಹುದು. ಉದಾಹರಣೆಗೆ, ಅವನು ರಂಪಮಾಡುವಾಗೆಲ್ಲ ನೀವೇನು ಮಾಡಬೇಕು? ಸರಿ ಯಾವುದು, ತಪ್ಪು ಯಾವುದೆಂದು ಹೇಗೆ ಕಲಿಸುವಿರಿ? ಸಮತೋಲನದಿಂದ ಹೇಗೆ ತಿದ್ದುವಿರಿ? ಕೆಲವು ಹೆತ್ತವರು ಏನು ಮಾಡಿದ್ದಾರೆಂಬುದನ್ನು ಗಮನಿಸಿ.

ರಂಪಾಟ

“ಎರಡು ವರ್ಷ ಪ್ರಾಯದ ಆ ಭಯಂಕರ ಅವಧಿಯಲ್ಲಿ ಮಗು ತಾನು ಕೇಳಿದ್ದೆಲ್ಲ ತನಗೆ ಸಿಗಬೇಕೆಂದು ನಿರೀಕ್ಷಿಸುತ್ತದೆ. ನಮ್ಮ ಮಗನಿಗೂ ಇದೇ ಸಮಸ್ಯೆ ಇತ್ತು. ಅವನು ಕೇಳಿದ್ದನ್ನು ಕೊಡದಿದ್ದರೆ, ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆಯುತ್ತಿದ್ದನು. ಅವನು ನಮ್ಮ ಮೊದಲ ಮಗು. ಆದ್ದರಿಂದ ರಂಪಾಟವನ್ನು ನಿಭಾಯಿಸುವುದರಲ್ಲಿ ನಮಗೆ ಅನುಭವವಿರಲಿಲ್ಲ. ‘ಮಕ್ಕಳು ಹೀಗೆ ಮಾಡುತ್ತಾರೆ, ಅದು ಸಾಮಾನ್ಯ’ ಎಂದು ಇತರರು ಹೇಳಿದ ಮಾತಿನಿಂದ ನಮ್ಮ ಸಮಸ್ಯೆ ಬಗೆಹರಿಯಲಿಲ್ಲ.”—ಸೂಸನ್‌, ಕೆನ್ಯ.

“ಎರಡು ವರ್ಷ ಪ್ರಾಯದಲ್ಲಿ ನಮ್ಮ ಮಗಳು ಸಿಟ್ಟು ಬಂದಾಗಲೆಲ್ಲ ನೆಲದ ಮೇಲೆ ಬಿದ್ದು ಹೊರಳಾಡುತ್ತಾ, ಕಿರುಚುತ್ತಾ, ಅತ್ತು, ಒದೆಯುತ್ತಿದ್ದಳು . . . ನಮಗೆ ಸುಸ್ತಾಗಿ ಹೋಗುತ್ತಿತ್ತು! ಆ ಕ್ಷಣದಲ್ಲಿ ಅವಳೊಂದಿಗೆ ಮಾತಾಡಲೂ ಸಾಧ್ಯವಿರಲಿಲ್ಲ. ಆದ್ದರಿಂದ ನಾನೂ ನನ್ನ ಗಂಡ ಅವಳನ್ನು ಅವಳ ಕೋಣೆಗೆ ಕಳುಹಿಸುತ್ತಿದ್ದೆವು. ಸಿಟ್ಟು ಕಡಿಮೆಯಾದ ನಂತರ ಹೊರಗೆ ಬಂದಾಗ ಮಾತಾಡೋಣ ಅಂತ ಹೇಳುತ್ತಿದ್ದೆವು. ಅವಳು ಶಾಂತವಾದ ಬಳಿಕ ನಾವೇ ಅವಳ ಕೋಣೆಗೆ ಹೋಗಿ ಅವಳ ವರ್ತನೆ ಯಾಕೆ ಸರಿಯಲ್ಲವೆಂದು ಅವಳಿಗೆ ತಿಳಿಹೇಳುತ್ತಿದ್ದೆವು. ಈ ವಿಧಾನ ಫಲಕಾರಿಯಾಗಿತ್ತು. ಒಮ್ಮೆ ಅವಳು ಪ್ರಾರ್ಥಿಸುತ್ತಾ ದೇವರ ಕ್ಷಮೆಕೋರುವುದೂ ನಮ್ಮ ಕಿವಿಗೆಬಿತ್ತು. ಬರಬರುತ್ತಾ ಅವಳ ರಂಪಾಟ ಕಡಿಮೆಯಾಗಿ ಕೊನೆಗೆ ನಿಂತುಹೋಯಿತು.”—ಯೊಲಾಂಡ, ಸ್ಪೇನ್‌.

“ತಮ್ಮ ಹೆತ್ತವರು ಇಟ್ಟಿರುವ ಎಲ್ಲೆಯನ್ನು ಎಷ್ಟರಮಟ್ಟಿಗೆ ಮೀರಬಹುದೆಂದು ಪುಟಾಣಿಗಳು ಪರೀಕ್ಷಿಸಲು ಪ್ರಯತ್ನಿಸುತ್ತಾರೆ. ಮಾಡಬಾರದೆಂದು ನೀವು ಮಗುವಿಗೆ ಸ್ಪಷ್ಟವಾಗಿ ಹೇಳಿದ ಸಂಗತಿಯನ್ನು ಮಾಡುವಂತೆ ಬಿಟ್ಟರೆ ಅದಕ್ಕೆ ಗಲಿಬಿಲಿಯಾಗುತ್ತದೆ. ಆದರೆ ನಾವು ದೃಢವಾಗಿದ್ದು, ಒಮ್ಮೆ ಹೇಳಿದ ಮಾತಿಗೆ ಯಾವಾಗಲೂ ಅಂಟಿಕೊಳ್ಳುತ್ತಿದ್ದೆವು. ಹಾಗಾಗಿ ನಮ್ಮ ಮಕ್ಕಳು ತಾವೆಷ್ಟೇ ಹಠಹಿಡಿದು ಕಿರುಚಿದರೂ ತಮ್ಮ ಹಠ ನಡೆಯುವುದಿಲ್ಲವೆಂದು ಕಲಿತುಕೊಂಡರು.”—ನೀಲ್‌, ಬ್ರಿಟನ್‌.

ಶಿಸ್ತು

“ಐದು ವರ್ಷಕ್ಕಿಂತ ಕಡಿಮೆ ಪ್ರಾಯದ ಮಗು ನಿಮ್ಮ ಮಾತಿಗೆ ಕಿವಿಗೊಡುತ್ತಿದ್ದಾನೊ ಇಲ್ಲವೊ ಎಂದು ತಿಳಿಯುವುದು ಕಷ್ಟ. ಇದಕ್ಕೆ ಪರಿಹಾರ, ಪುನರಾವರ್ತನೆ. ನೀವು ಹೇಳಿದ್ದನ್ನೇ ಪುನಃ ಪುನಃ ಸಾವಿರಾರು ಬಾರಿ ಹೇಳಬೇಕಾದೀತು. ಅದನ್ನು ದೃಢವಾದ ಸ್ವರದಲ್ಲೂ ಹಾವಭಾವದೊಂದಿಗೂ ಮನಗಾಣಿಸಬೇಕು.”—ಸರ್ಜ್‌, ಫ್ರಾನ್ಸ್‌.

“ನಮ್ಮ ನಾಲ್ಕು ಮಂದಿ ಮಕ್ಕಳನ್ನು ಒಂದೇ ರೀತಿಯ ಪರಿಸರದಲ್ಲಿ ಬೆಳೆಸುತ್ತಿದ್ದೆವಾದರೂ, ಅವರಲ್ಲಿ ಪ್ರತಿಯೊಬ್ಬರೂ ಭಿನ್ನರಾಗಿದ್ದರು. ಒಬ್ಬಳು ನಮಗೆ ಇಷ್ಟವಾಗದ ಯಾವುದೋ ಸಂಗತಿ ಮಾಡಿದ್ದಾಳೆಂದು ಗೊತ್ತಾದ ಕೂಡಲೇ ಅತ್ತುಬಿಡುತ್ತಿದ್ದಳು. ಇನ್ನೊಬ್ಬಳು ನಾವಿಟ್ಟ ಎಲ್ಲೆಯನ್ನು ತಾನು ಎಷ್ಟರ ಮಟ್ಟಿಗೆ ಮೀರಿ ಹೋಗಬಹುದೆಂದು ಪರೀಕ್ಷಿಸುತ್ತಿದ್ದಳು. ಕೆಲವೊಮ್ಮೆ ನಾವು ಬರೀ ಬಿರುಗಣ್ಣು ಬಿಟ್ಟರೆ ಅಥವಾ ಬಯ್ದರೆ ಸಾಲುತ್ತಿತ್ತು. ಆದರೆ ಇತರ ಸಂದರ್ಭಗಳಲ್ಲಿ ನಾವೇನಾದರೂ ಶಿಕ್ಷೆ ಕೊಡಲೇಬೇಕಾಗುತ್ತಿತ್ತು.”—ನೇತನ್‌, ಕೆನಡ.

“ನೀವು ಹೇಳಿದ ಮಾತನ್ನು ಬದಲಾಯಿಸದಿರುವುದು ಮುಖ್ಯ. ಅದೇ ಸಮಯ ತಂದೆತಾಯಿ, ಉದ್ಧಟರೂ ಜಗ್ಗದವರೂ ಆಗಿರಬಾರದು. ಕೆಲವೊಮ್ಮೆ ಮಗು ನಿಜವಾಗಿಯೂ ತನ್ನ ತಪ್ಪಿಗಾಗಿ ವಿಷಾದಿಸುತ್ತದೆ. ಆಗ ನಾವು ನ್ಯಾಯವಾಗಿ ಶಿಕ್ಷೆಯನ್ನು ಕಡಿಮೆಗೊಳಿಸುತ್ತೇವೆ.” —ಮಾಟ್ಯೂ, ಫ್ರಾನ್ಸ್‌.

“ನಾನು ನಿಯಮಗಳ ದೊಡ್ಡ ಪಟ್ಟಿಯನ್ನು ಮಾಡುವುದಿಲ್ಲ. ಕೆಲವೊಂದೇ ನಿಯಮಗಳನ್ನು ಮಾಡುತ್ತೇನೆ. ಅವುಗಳನ್ನು ಯಾವುದೇ ಕಾರಣಕ್ಕೂ ಬದಲಾಯಿಸುವುದಿಲ್ಲ. ಅವುಗಳಿಗೆ ವಿಧೇಯನಾಗದಿದ್ದರೆ ಏನು ಶಿಕ್ಷೆ ಸಿಗುವುದೆಂದು ಮೂರು ವರ್ಷದ ನನ್ನ ಮಗನಿಗೆ ಗೊತ್ತು. ಇದರಿಂದಾಗಿ ತನ್ನ ವರ್ತನೆಯನ್ನು ನಿಯಂತ್ರಿಸುತ್ತಾನೆ. ನನಗೆ ಸುಸ್ತಾಗಿರುವಾಗ ಅವನ ತಪ್ಪುಗಳನ್ನು ಅಲಕ್ಷಿಸಿಬಿಡೋಣ ಎಂದನಿಸುತ್ತದೆ. ಆದರೆ ನನ್ನ ದೃಢತೆಯನ್ನು ತೋರಿಸಲಿಕ್ಕಾಗಿ ಅವನನ್ನು ಖಂಡಿತವಾಗಿ ಶಿಕ್ಷಿಸುತ್ತೇನೆ. ದೃಢತೆ ಬಹು ಪ್ರಾಮುಖ್ಯ!”—ನಟಾಲಿ, ಕೆನಡ.

ದೃಢತೆ

“ತನ್ನ ತಪ್ಪುವರ್ತನೆಯ ಬಗ್ಗೆ ಅಪ್ಪ/ಅಮ್ಮ ದೃಢರಾಗಿರದಿರುವ ಪ್ರತಿಯೊಂದು ಸಂದರ್ಭವನ್ನೂ ಮಗು ಚೆನ್ನಾಗಿ ನೆನಪಿನಲ್ಲಿಡುತ್ತದೆ.”—ಮಿಲ್ಟನ್‌, ಬೊಲಿವಿಯಾ.

“ಕೆಲವೊಮ್ಮೆ ನನ್ನ ಮಗ ಒಂದೇ ವಿಷಯವನ್ನು ಬೇರೆ ಬೇರೆ ವಿಧಾನಗಳಲ್ಲಿ ಕೇಳಿ, ನಾವು ಒಂದೇ ರೀತಿಯ ಉತ್ತರ ಕೊಡುತ್ತೇವೊ ಎಂದು ನೋಡಲು ಪ್ರಯತ್ನಿಸುತ್ತಿದ್ದ. ಅಥವಾ ನಾನು ಒಂದು ಹೇಳಿ, ಅವನ ಅಮ್ಮ ಇನ್ನೊಂದನ್ನು ಹೇಳಿದರೆ ಸಾಕು. ನುಣುಚಿಕೊಳ್ಳಲು ಅದನ್ನೇ ಕಾರಣವಾಗಿಟ್ಟು ದುರುಪಯೋಗಿಸುತ್ತಿದ್ದ.”—ಏಂಜಲ್‌, ಸ್ಪೇನ್‌.

“ನಾನು ಒಳ್ಳೇ ಮೂಡ್‌ನಲ್ಲಿದ್ದಾಗ ಕೆಲವೊಮ್ಮೆ ನನ್ನ ಮಗನ ಕೆಟ್ಟ ವರ್ತನೆಯನ್ನು ಅಲಕ್ಷಿಸುತ್ತಿದ್ದೆ, ಆದರೆ ಮೂಡ್‌ ಸರಿಯಿಲ್ಲದಿದ್ದರೆ ಅವನಿಗೆ ಕಠೋರ ಶಿಕ್ಷೆ ಕೊಡುತ್ತಿದ್ದೆ. ಆದರೆ ಹೀಗೆ ಮಾಡುವುದರಿಂದ ಅವನ ಕೆಟ್ಟ ವರ್ತನೆ ಇನ್ನಷ್ಟು ಜಾಸ್ತಿಯೇ ಆಗುತ್ತಿದ್ದದ್ದನ್ನು ಗಮನಿಸಿದೆ.”—ಗ್ಯೊಂಗ್‌-ಓಕ್‌, ಕೊರಿಯ.

“ಯಾವುದಾದರೂ ವರ್ತನೆ ತಪ್ಪೆಂದು ನೀವು ಒಮ್ಮೆ ಹೇಳಿದ್ದರೆ ಅದು ಯಾವಾಗಲೂ ತಪ್ಪೇ ಆಗಿರುವುದು ಎಂಬ ಮಾತು ಎಳೆಯ ಮಕ್ಕಳಿಗೆ ಅರ್ಥವಾಗುವುದು ಮಹತ್ವದ್ದು.”—ಆಂಟೊನ್ಯೊ, ಬ್ರಸಿಲ್‌.

“ಹೆತ್ತವರು ದೃಢರಾಗಿರದಿದ್ದರೆ, ಅಪ್ಪಅಮ್ಮ ಯಾವಾಗ ಹೇಗಿರುತ್ತಾರೊ ಹೇಳಲಿಕ್ಕಾಗುವುದಿಲ್ಲ, ಅವರ ನಿರ್ಣಯಗಳು ಅವರ ಮೂಡ್‌ ಮೇಲೆ ಹೊಂದಿಕೊಂಡಿರುತ್ತವೆಂದು ಮಕ್ಕಳು ನೆನಸುವರು. ಆದರೆ ಹೆತ್ತವರು ತಮ್ಮ ತತ್ತ್ವಗಳಿಗೆ ಅಂಟಿಕೊಂಡರೆ, ಅವರು ಒಮ್ಮೆ ತಪ್ಪೆಂದು ಹೇಳಿದಂಥದ್ದು ಯಾವಾಗಲೂ ತಪ್ಪೇ ಎಂದು ಮಕ್ಕಳಿಗೆ ಮನವರಿಕೆಯಾಗುವುದು. ಹೆತ್ತವರು ಮಕ್ಕಳಿಗೆ ಭದ್ರತೆ, ಪ್ರೀತಿಯನ್ನು ಕೊಡುವ ಒಂದು ವಿಧ ಇದೇ.”—ಜಿಲ್ಮಾರ್‌, ಬ್ರಸಿಲ್‌.

“ಕೆಲವೊಮ್ಮೆ ಮಕ್ಕಳು ಒಂದು ಸನ್ನಿವೇಶವನ್ನು, ಉದಾಹರಣೆಗೆ ನೆಂಟರಿಷ್ಟರು ನಮ್ಮೊಂದಿಗಿರುವ ಸಂದರ್ಭವನ್ನು ದುರ್ಬಳಕೆ ಮಾಡಲು ಪ್ರಯತ್ನಿಸಬಹುದು. ಅಂಥ ಸಂದರ್ಭಗಳಲ್ಲಿ ತಾವೇನಾದರೂ ಕೇಳಿದರೆ ಅಪ್ಪಅಮ್ಮ ಅದನ್ನು ಪೂರೈಸಲೇಬೇಕು ಅವರಿಗೆ ಬೇರೆ ದಾರಿಯೇ ಇಲ್ಲವೆಂದು ಅವರಿಗನಿಸುತ್ತದೆ. ಹಾಗಾಗಿ ನನ್ನ ಮಗನಿಗೆ ನಾನು ಯಾವುದಕ್ಕಾದರೂ ಮೊದಲು ‘ಇಲ್ಲ’ ಅಂತ ಹೇಳಿದರೆ ನಂತರ ಅದನ್ನು ಬದಲಾಯಿಸುವುದಿಲ್ಲ, ಅವನೆಷ್ಟು ಕಾಡಿಬೇಡಿದರೂ ‘ಆಯ್ತು’ ಅನ್ನುವುದಿಲ್ಲವೆಂದು ಸ್ಪಷ್ಟಪಡಿಸುತ್ತೇನೆ.”—ಚಾಂಗ್‌ಸುಕ್‌, ಕೊರಿಯ.

“ತಂದೆತಾಯಿ ಇಬ್ಬರೂ ಒಮ್ಮತದಿಂದಿರಬೇಕು. ನಾನು, ನನ್ನ ಪತ್ನಿ ಯಾವುದೇ ಒಂದು ವಿಷಯದಲ್ಲಿ ಒಮ್ಮತದಿಂದಿರದಿದ್ದರೆ, ಅದರ ಬಗ್ಗೆ ನಾವಿಬ್ಬರೇ ಇದ್ದಾಗ ಮಾತಾಡುತ್ತೇವೆ. ಒಂದು ಸಮಸ್ಯೆಯ ಕುರಿತು ಹೆತ್ತವರು ಒಮ್ಮತದಿಂದಿಲ್ಲ ಎಂಬದನ್ನು ಮಕ್ಕಳು ಪತ್ತೆಹಚ್ಚಬಲ್ಲರು. ಆಗ ಆ ಸನ್ನಿವೇಶದ ಲಾಭ ತೆಗೆದುಕೊಳ್ಳುತ್ತಾರೆ.”—ಕೇಸುಸ್‌, ಸ್ಪೇನ್‌.

“ತನ್ನ ತಂದೆತಾಯಿ ಇಬ್ಬರೂ ಒಂದಾಗಿದ್ದಾರೆ, ತನ್ನ ಚಾಲಾಕಿನಿಂದ ಅವರ ಮನಸ್ಸನ್ನು ಬದಲಾಯಿಸಲು ಸಾಧ್ಯವಿಲ್ಲವೆಂದು ಮಗುವಿಗೆ ಗೊತ್ತಿರುವಾಗ ಅವನಲ್ಲಿ ಭದ್ರತೆಯ ಅನಿಸಿಕೆ ಹುಟ್ಟುತ್ತದೆ. ತಾನು ವಿಧೇಯನಾದರೆ ಏನಾಗಬಹುದು, ಅವಿಧೇಯನಾದರೆ ಏನಾಗಬಹುದೆಂದು ಅವನಿಗೆ ಚೆನ್ನಾಗಿ ತಿಳಿದಿದೆ.”—ಡಮಾರಿಸ್‌, ಜರ್ಮನಿ.

“ನಾನೂ ನನ್ನ ಪತ್ನಿ ಇನ್ನೊಂದು ವಿಷಯದಲ್ಲೂ ದೃಢತೆಯನ್ನು ತೋರಿಸುತ್ತೇವೆ. ಅದೇನೆಂದರೆ ನಮ್ಮ ಮಗಳಿಗೆ ಅವಳ ಒಳ್ಳೇ ವರ್ತನೆಗಾಗಿ ಏನಾದರೂ ಬಹುಮಾನ ಕೊಡುತ್ತೇವೆಂದು ಮಾತು ಕೊಟ್ಟಿದ್ದರೆ ಆ ಮಾತನ್ನು ಖಂಡಿತ ಪಾಲಿಸುತ್ತೇವೆ. ಹೀಗೆ ಅವಳು ನಮ್ಮ ಮಾತಿನ ಮೇಲೆ ಭರವಸೆಯಿಡಬಹುದೆಂಬದನ್ನು ಕಲಿತುಕೊಳ್ಳುತ್ತಾಳೆ.”—ಹೆಂಡ್ರಿಕ್‌, ಜರ್ಮನಿ.

“ನನ್ನ ಧಣಿ ನನ್ನ ಕೆಲಸದ ನಿಯಮಗಳನ್ನು ಯಾವಾಗಲೂ ಬದಲಾಯಿಸುತ್ತಾ ಇದ್ದರೆ ನನಗೆ ಖಂಡಿತ ಕಿರಿಕಿರಿಯಾಗುವುದು. ಮಕ್ಕಳೂ ಹಾಗೆಯೇ. ಹೆತ್ತವರು ಇಟ್ಟಿರುವ ನಿಯಮಗಳಾವುವು, ಆ ನಿಯಮಗಳು ಯಾವ ಕಾರಣಕ್ಕೂ ಬದಲಾಗುವುದಿಲ್ಲ ಎಂದು ಅವರಿಗೆ ಗೊತ್ತಿರುವಾಗ ಭದ್ರತೆಯ ಅನಿಸಿಕೆ ಅವರಿಗಿರುತ್ತದೆ. ಅವಿಧೇಯರಾದರೆ ಶಿಕ್ಷೆಯೇನು ಮತ್ತು ಅದು ಸಹ ಬದಲಾಗುವುದಿಲ್ಲ ಎಂಬುದೂ ಅವರಿಗೆ ತಿಳಿದಿರಬೇಕು.”—ಗ್ಲೆನ್‌, ಕೆನಡ. (g11-E 10)

[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣ್ರೆ]

“ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.”—ಯಾಕೋಬ 5:12

[ಪುಟ 9ರಲ್ಲಿರುವ ಚೌಕ/ಚಿತ್ರಗಳು]

ಕುಟುಂಬ-ಕಥನ

ಅನಿರೀಕ್ಷಿತ ಗರ್ಭಧಾರಣೆಗೆ ಹೊಂದಿಸಿಕೊಂಡೆವು

ಟಾಮ್‌ ಮತ್ತು ಯೂನ್‌ಹೀ ಹಾನ್‌ ಹೇಳಿದಂತೆ

ಟಾಮ್‌: ನಮ್ಮ ಮದುವೆಯಾಗಿ ಬರೇ ಆರು ತಿಂಗಳಾಗುವಷ್ಟರಲ್ಲಿ ನನ್ನ ಪತ್ನಿ ಯೂನ್‌ಹೀ ಗರ್ಭಿಣಿಯಾದಳು. ನನಗೆ ಒಳಗೊಳಗೆ ಗಾಬರಿ, ತಳಮಳ ಇದ್ದರೂ ಹೊರಗಿಂದ ತುಂಬ ಶಾಂತನಾಗಿದ್ದೆ. ಏಕೆಂದರೆ ಯೂನ್‌ಹೀಗೆ ಸಾಂತ್ವನ ಹಾಗೂ ಧೈರ್ಯ ಕೊಡಬೇಕಾಗಿತ್ತು.

ಯೂನ್‌ಹೀ: ನನಗಂತೂ ಆಕಾಶವೇ ಕಳಚಿ ಬಿದ್ದ ಹಾಗಾಯಿತು. ತುಂಬ ಹೆದರಿದೆ! ಬಿಕ್ಕಿ, ಬಿಕ್ಕಿ ಅತ್ತೆ. ಯಾಕೆಂದರೆ ತಾಯಿಯಾಗಲು ಸಿದ್ಧಳೂ ಇರಲಿಲ್ಲ, ಸಮರ್ಥಳೂ ಅಲ್ಲ ಎಂದನಿಸಿತು.

ಟಾಮ್‌: ನಾನು ತಂದೆ ಆಗಲು ತಯಾರಾಗಿರಲಿಲ್ಲ ಎಂಬ ಭಾವನೆ ನನ್ನಲ್ಲಿತ್ತು. ಆದರೆ ಬೇರೆ ಹೆತ್ತವರೊಂದಿಗೆ ಮಾತಾಡಿದ ಬಳಿಕ, ಅನಿರೀಕ್ಷಿತ ಗರ್ಭಧಾರಣೆಗಳು ನಾವೆಣಿಸಿದಷ್ಟು ಅಸಾಮಾನ್ಯವಲ್ಲವೆಂದು ನಮಗೆ ತಿಳಿದುಬಂತು. ಅಲ್ಲದೆ, ತಂದೆ ಅಥವಾ ತಾಯಿ ಆಗಿರುವುದರಿಂದ ಸಿಗುವ ಸಂತೋಷದ ಕುರಿತು ಇತರ ಹೆತ್ತವರು ಮಾತಾಡುವುದನ್ನು ಕೇಳಿ ನಮಗೆ ಸ್ವಲ್ಪ ಹಾಯೆನಿಸಿತು. ನಿಧಾನವಾಗಿ ನನ್ನ ಭಯ, ಅನಿಶ್ಚಿತತೆ ಕರಗಿಹೋಗಿ, ನಮ್ಮ ಮಗುವಿಗಾಗಿ ಎದುರುನೋಡಲಾರಂಭಿಸಿದೆ.

ಯೂನ್‌ಹೀ: ಅಮಾಂಡಾ ಹುಟ್ಟಿದ ನಂತರ ನಮಗೆ ಹೊಸ ಹೊಸ ಸವಾಲುಗಳು ಎದುರಾದವು. ಅವಳು ಯಾವಾಗಲೂ ಅಳುತ್ತಾ ಇರುತ್ತಿದ್ದಳು. ಹಲವಾರು ವಾರಗಳ ತನಕ ನನಗೆ ಸರಿ ನಿದ್ದೆ ಇರಲಿಲ್ಲ. ಹಸಿವೂ ಆಗುತ್ತಿರಲಿಲ್ಲ. ಆದ್ದರಿಂದ ವಿಪರೀತ ಬಳಲಿ ಹೋದೆ. ಮೊದಮೊದಲು ನನಗೆ ಜನರೊಂದಿಗೆ ಬೆರೆಯಲು ಮನಸ್ಸಿರಲಿಲ್ಲ. ಆದರೆ ನಾನು ಹೀಗೆ ಮನೆಯಲ್ಲಿದ್ದು ಎಲ್ಲರಿಂದ ದೂರವಿದ್ದರೆ ಒಳ್ಳೇದಲ್ಲವೆಂದು ಗ್ರಹಿಸಿದೆ. ಆದ್ದರಿಂದ ನನ್ನಂತೆ ಮೊದಲ ಬಾರಿ ತಾಯಿಯಾದವರೊಂದಿಗೆ ಸಮಯ ಕಳೆದೆ. ಅವರೊಂದಿಗೆ ನನ್ನ ಪರಿಸ್ಥಿತಿಯ ಬಗ್ಗೆ ಮಾತಾಡಿದೆ. ಸಮಸ್ಯೆಗಳಿದ್ದದ್ದು ನನಗೊಬ್ಬಳಿಗೇ ಅಲ್ಲವೆಂದು ನನಗಾಗ ಗೊತ್ತಾಯಿತು.

ಟಾಮ್‌: ಕುಟುಂಬವಾಗಿ ಕೆಲವೊಂದು ಚಟುವಟಿಕೆಗಳನ್ನು ತಪ್ಪದೆ ಮಾಡಲು ಶ್ರಮಿಸಿದೆ. ಉದಾಹರಣೆಗೆ ಯೆಹೋವನ ಸಾಕ್ಷಿಗಳಾಗಿರುವ ನಾವು ಶುಶ್ರೂಷೆಗೆ, ಕ್ರೈಸ್ತ ಕೂಟಗಳಿಗೆ ನಿಯಮಿತವಾಗಿ ಹೋಗುತ್ತಿದ್ದೆವು. ಮಗು ಹುಟ್ಟಿದಾಗ ಖರ್ಚುಗಳೂ ಹೆಚ್ಚಾದವು. ಕೆಲವೊಂದಂತೂ ಅನಿರೀಕ್ಷಿತ ಖರ್ಚುಗಳು. ನಮ್ಮ ಆದಾಯಕ್ಕೆ ತಕ್ಕಂತೆ ಜೀವಿಸಲು ಪ್ರಯತ್ನಿಸಿದೆವು. ಏಕೆಂದರೆ ಸಾಲಸೋಲ ಮಾಡಿ ಮಾನಸಿಕ ಒತ್ತಡವನ್ನು ಅನಾವಶ್ಯಕವಾಗಿ ಹೆಚ್ಚಿಸುವುದು ನಮಗೆ ಬೇಕಾಗಿರಲಿಲ್ಲ.

ಯೂನ್‌ಹೀ: ಶುಶ್ರೂಷೆಗೆ ಹೋಗುವುದು ಪ್ರಾಯೋಗಿಕವಲ್ಲ ಏಕೆಂದರೆ ಮಗು ಮಧ್ಯೆ ಮಧ್ಯೆ ತೊಂದರೆಕೊಡುವುದರಿಂದ ಜನರೊಟ್ಟಿಗೆ ಮಾತಾಡಲು ಅಡಚಣೆಯಾದೀತು ಅಂತ ಆರಂಭದಲ್ಲಿ ನನಗನಿಸುತ್ತಿತ್ತು. ಆದರೆ ನಿಜ ಸಂಗತಿಯೇನೆಂದರೆ, ಜನರಿಗೆ ಶಿಶುಗಳನ್ನು ಕಂಡರೆ ಇಷ್ಟ. ಇದನ್ನು ಗ್ರಹಿಸಿದಾಗ ನಾನು ಶುಶ್ರೂಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಮತ್ತು ನನ್ನ ಮಗುವಿನ ಬಗ್ಗೆ ಹೆಚ್ಚು ಸಕಾರಾತ್ಮಕ ಮನೋಭಾವ ಇಟ್ಟುಕೊಳ್ಳಲು ಸಹಾಯವಾಯಿತು.

ಟಾಮ್‌: ಮಕ್ಕಳು “ಯೆಹೋವನಿಂದ ಬಂದ ಸ್ವಾಸ್ತ್ಯ” ಮತ್ತು “ಬಹುಮಾನ”ವೆಂದು ಬೈಬಲ್‌ ಹೇಳುತ್ತದೆ. (ಕೀರ್ತನೆ 127:3) ಒಂದು ಮಗು ಅಮೂಲ್ಯ ಉಡುಗೊರೆಯೆಂದು ನನಗೆ ಆ ಮಾತುಗಳಿಂದ ತಿಳಿದುಬಂತು. ಯಾವುದೇ ಸ್ವಾಸ್ತ್ಯದ ವಿಷಯದಲ್ಲಿ ನಮ್ಮ ಮುಂದೆ ಈ ಆಯ್ಕೆ ಇದೆ: ಅದನ್ನು ಬುದ್ಧಿವಂತಿಕೆಯಿಂದ ನೋಡಿಕೊಳ್ಳುವುದು ಇಲ್ಲವೆ ಅದನ್ನು ಪೋಲುಮಾಡುವುದು. ಮಗುವಿನ ಬೆಳವಣಿಗೆಯ ಪ್ರತಿಯೊಂದು ಹಂತವೂ ಅಪೂರ್ವವಾದದ್ದು ಎಂಬದನ್ನು ಕಲಿಯುತ್ತಾ ಇದ್ದೇನೆ. ಆ ಪ್ರತಿಯೊಂದು ಹಂತದಲ್ಲೂ ನನ್ನ ಮಗಳ ಜೀವನದ ಭಾಗವಾಗಿರಲು ಇಚ್ಛಿಸುತ್ತೇನೆ. ಏಕೆಂದರೆ ಒಮ್ಮೆ ಆ ಹಂತ ದಾಟಿಹೋದರೆ ಆ ಅವಕಾಶ ಮತ್ತೆಂದೂ ಸಿಗಲಾರದು.

ಯೂನ್‌ಹೀ: ಬಾಳಲ್ಲಿ ಅನಿರೀಕ್ಷಿತ ಸಂಗತಿಗಳು ನಡೆಯುತ್ತಿರುತ್ತವೆ. ಅನಿರೀಕ್ಷಿತ ಗರ್ಭಧಾರಣೆಯೂ ಹಾಗೆಯೇ. ಅದು ಕೆಟ್ಟದ್ದಂತೂ ಅಲ್ಲ. ಅಮಾಂಡಳಿಗೆ ಈಗ ಆರು ವರ್ಷ. ಅವಳಿಲ್ಲದ ಬದುಕನ್ನು ನಾನೆಂದೂ ಊಹಿಸಲಾರೆ.

[ಚಿತ್ರ]

ಟಾಮ್‌, ಯೂನ್‌ಹೀ ಮತ್ತವರ ಮಗಳು ಅಮಾಂಡ