ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರು ಹೇಳುವುದೇನು?

ಹೆತ್ತವರು ಹೇಳುವುದೇನು?

ಹೆತ್ತವರು ಹೇಳುವುದೇನು?

ನಿಮ್ಮ ಮಕ್ಕಳು ಬೆಳೆಯುತ್ತಾ ಬರುವಾಗ ವಿಧೇಯತೆಯ ಮಹತ್ವವನ್ನು ಕಲಿಯುವಂತೆ ಹೇಗೆ ಸಹಾಯ ಮಾಡಬಲ್ಲಿರಿ? ಪ್ರೌಢ ವಯಸ್ಸಿನತ್ತ ಸಾಗುತ್ತಿರುವ ಅವರಿಗೆ ವ್ಯಾವಹಾರಿಕ ಕೌಶಲಗಳನ್ನು ಹೇಗೆ ಕಲಿಸಬಲ್ಲಿರಿ? ಭೂಸುತ್ತಲೂ ಇರುವ ಹೆತ್ತವರಲ್ಲಿ ಕೆಲವರು ಈ ಬಗ್ಗೆ ಏನು ಹೇಳಿದ್ದಾರೆಂಬದನ್ನು ಗಮನಿಸಿ.

ಶಿಷ್ಟಾಚಾರ ಮತ್ತು ಗೃಹ ಕೌಶಲಗಳು

“ನಾವು ಜೊತೆಯಾಗಿ ಊಟಮಾಡುತ್ತ ದಿನದ ಚಟುವಟಿಕೆಗಳ ಬಗ್ಗೆ ಚರ್ಚಿಸುವಾಗ ಇತರರಿಗೆ ಕಿವಿಗೊಡುವುದು ಹೇಗೆಂದು ನಮ್ಮ ಮಕ್ಕಳು ಕಲಿಯುತ್ತಾರೆ. ಅಪ್ಪಅಮ್ಮ ತಾಳ್ಮೆಯಿಂದ ಕಿವಿಗೊಡುವುದನ್ನು ನೋಡುವಾಗ ಅದು ಪರಸ್ಪರರ ಕಡೆಗಿನ ಮತ್ತು ಸ್ವತಃ ಅವರ ಗೌರವವನ್ನು ಹೆಚ್ಚಿಸುತ್ತದೆ.”—ರಿಚರ್ಡ್‌, ಬ್ರಿಟನ್‌.

“ನಮ್ಮ ಮಕ್ಕಳು ಪರಸ್ಪರ ಗೌರವದಿಂದ ನಡೆದುಕೊಳ್ಳುವಾಗ ಮತ್ತು ನಮ್ಮ ಸಹಾಯವಿಲ್ಲದೆ ತಮ್ಮ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದನ್ನು ನೋಡುವಾಗ ಹೃದಯ ತುಂಬಿಬರುತ್ತದೆ. ಅವರು ವಯಸ್ಕರೊಂದಿಗೂ ಆತ್ಮವಿಶ್ವಾಸದಿಂದ ಮಾತಾಡುತ್ತಾರೆ.”—ಜಾನ್‌, ದಕ್ಷಿಣ ಆಫ್ರಿಕ.

“ನಾನು ಪರಿಪೂರ್ಣಳಲ್ಲ, ಕೆಲವೊಮ್ಮೆ ತಿಳಿಯದೆ ಮಕ್ಕಳ ಮನಸ್ಸನ್ನು ನೋಯಿಸುತ್ತೇನೆ. ಹಾಗೇನಾದರೂ ಆದರೆ ಕ್ಷಮೆ ಕೇಳುತ್ತೇನೆ. ಅದು ತುಂಬ ಪ್ರಾಮುಖ್ಯ.”—ಜಾನೆಲ್‌, ಆಸ್ಟ್ರೇಲಿಯ.

“ಮನೆಯಲ್ಲಿ ಚಿಕ್ಕಪುಟ್ಟ ಕೆಲಸಗಳನ್ನು ಮಾಡಲು ನಾವು ಮಕ್ಕಳಿಗೆ ತರಬೇತಿ ಕೊಡುತ್ತೇವೆ. ಹೀಗೆ ಇತರರ ಪ್ರಯೋಜನಾರ್ಥವಾಗಿ ಕೆಲಸಮಾಡಲು ಅವರಿಗೆ ಕಲಿಸುವುದರಿಂದ ಕುಟುಂಬದ ಕೆಲಸಗಳು ಸುಗಮವಾಗಿಯೂ ಶಾಂತರೀತಿಯಲ್ಲೂ ಸಾಗುತ್ತವೆ. ಅಲ್ಲದೆ ಮಕ್ಕಳಿಗೂ ಏನನ್ನೋ ಸಾಧಿಸಿದ ಸಂತೃಪ್ತ ಅನಿಸಿಕೆಯಾಗುತ್ತದೆ.”—ಕ್ಲೈವ್‌, ಆಸ್ಟ್ರೇಲಿಯ.

“ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು, ಗೌರವಿಸುವುದು ಮತ್ತು ಕ್ಷಮಿಸುವುದು ಹೇಗೆಂದು ಮಕ್ಕಳಿಗೆ ಕಲಿಸುವುದು ಸುಲಭವಲ್ಲ. ಆದರೂ ಕಲಿಸಲೇಬೇಕು.”—ಯುಕೋ, ಜಪಾನ್‌.

ನೈರ್ಮಲ್ಯ ಮತ್ತು ಆರೋಗ್ಯ

“ಸ್ನಾನ ಮಾಡಿಕೊಳ್ಳಲು ನಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ಕಲಿಸಿದೆವು. ಬೊಂಬೆಯಾಕಾರದ ಸಾಬೂನು, ಕಾರ್ಟೂನ್‌ ಚಿತ್ರವಿರುವ ಶ್ಯಾಂಪೂ ಬಾಟಲ್‌, ಚಿಕ್ಕ ಪ್ರಾಣಿಗಳಾಕಾರದ ಸ್ಪಂಜನ್ನೆಲ್ಲ ಬಳಸುತ್ತ ಸ್ನಾನ ಮಾಡುವುದು ಮೋಜಿನದ್ದಾಗಿರುವಂತೆ ಮಾಡಿದೆವು.”—ಎಡ್ಗಾರ್‌, ಮೆಕ್ಸಿಕೊ.

“ನಲ್ಲಿ ನೀರಿಲ್ಲದ ಸ್ಥಳದಲ್ಲಿ ನಾವು ವಾಸಿಸುತ್ತಿದ್ದಾಗ, ಮನೆಯೊಳಗೆ ಬರುವಾಗ ನಮ್ಮ ಕೈ ತೊಳೆಯಲಿಕ್ಕಾಗಿ ಸೂಕ್ತ ಸ್ಥಳದಲ್ಲಿ ಸಾಬೂನು ಹಾಗೂ ನೀರನ್ನು ಇಡುತ್ತಿದ್ದೆ.”—ಎಂಡ್ಯುರೆನ್ಸ್‌, ನೈಜೀರಿಯ.

“ಪ್ರತಿದಿನ ಮಕ್ಕಳಿಗೆ ಆರೋಗ್ಯಕರ ಊಟ ಕೊಡುತ್ತೇವೆ ಹಾಗೂ ಸಂತುಲಿತ ಆಹಾರ ಏಕೆ ಅಗತ್ಯವೆಂಬುದನ್ನೂ ವಿವರಿಸುತ್ತೇವೆ. ವಿವಿಧ ಭಕ್ಷ್ಯಗಳಲ್ಲಿ ಹಾಕುವ ಬೇರೆ ಬೇರೆ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಮಕ್ಕಳದು. ಆದ್ದರಿಂದ ಅಡಿಗೆ ಮಾಡುವಾಗ ನನಗೆ ಸಹಾಯ ಮಾಡಲು ಹೇಳುತ್ತೇನೆ. ಹೀಗೆ ಒಟ್ಟಿಗೆ ಕೆಲಸಮಾಡುವುದು ಸಂವಾದಕ್ಕೂ ಪೂರಕ.”—ಸ್ಯಾಂಡ್ರ, ಬ್ರಿಟನ್‌.

“ವ್ಯಾಯಾಮ ಅಗತ್ಯ. ಹೆತ್ತವರಾಗಿರುವ ನಾವು ಇದರಲ್ಲಿ ಉತ್ತಮ ಮಾದರಿಯನ್ನಿಡಲು ಪ್ರಯತ್ನಿಸುತ್ತೇವೆ. ಕುಟುಂಬವಾಗಿ ಜಾಗಿಂಗ್‌ ಮಾಡುವುದನ್ನು, ಈಜುವುದನ್ನು, ಟೆನ್ನಿಸನ್ನೋ ಬಾಸ್ಕೆಟ್‌ಬಾಲನ್ನೋ ಆಡುವುದನ್ನು, ಸೈಕಲ್‌ ತುಳಿಯುವುದನ್ನು ನಮ್ಮ ಮಕ್ಕಳು ತುಂಬ ಇಷ್ಟಪಡುತ್ತಾರೆ. ವ್ಯಾಯಾಮ ಪ್ರಾಮುಖ್ಯ ಮಾತ್ರವಲ್ಲ ಅದರಲ್ಲಿ ವಿನೋದವೂ ಇದೆಯೆಂದು ತಿಳಿದುಕೊಳ್ಳುತ್ತಾರೆ.”—ಕೆರೆನ್‌, ಆಸ್ಟ್ರೇಲಿಯ.

“ಹೆತ್ತವರೊಂದಿಗೆ ಸಮಯ ಕಳೆಯುವುದು ಮಕ್ಕಳಿಗೆ ಬಹುಮುಖ್ಯ. ಇದಕ್ಕೆ ಹಣ, ಉಡುಗೊರೆಗಳು, ಪ್ರವಾಸಗಳು ಬದಲಿಯಾಗಿರಲಾರವು. ಮಕ್ಕಳು ಬೆಳಿಗ್ಗೆ ಶಾಲೆಗೆ ಹೋಗುವುದರಿಂದ ಆ ಸಮಯದಲ್ಲಿ ಮಾತ್ರ ನಾನು ಕೆಲಸಕ್ಕೆ ಹೋಗುತ್ತೇನೆ. ಹೀಗೆ ಅವರು ಮಧ್ಯಾಹ್ನ ಮನೆಗೆ ಬರುವಾಗ ನಾನು ಅವರೊಟ್ಟಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ.”—ರೊಮಿನಾ, ಇಟಲಿ.

ಶಿಸ್ತು

“ಯಾವಾಗಲೂ ಒಂದೇ ವಿಧದ ಶಿಸ್ತು ಒಳ್ಳೇದಲ್ಲ, ಸನ್ನಿವೇಶಕ್ಕನುಸಾರ ಅದು ಭಿನ್ನವಾಗಿರಬೇಕು ಎಂದು ಕಂಡುಕೊಂಡಿದ್ದೇವೆ. ಕೆಲವೊಮ್ಮೆ ಶಿಸ್ತು, ಯಥಾರ್ಥವೂ ಗಂಭೀರವೂ ಆದ ಮಾತುಕತೆಯಾಗಿರುತ್ತದೆ ಅಷ್ಟೇ. ಇನ್ನು ಕೆಲವೊಮ್ಮೆ, ಮಗುವಿಗೆ ಇಷ್ಟವಾಗುವ ಒಂದು ವಿಷಯವನ್ನು ಮಾಡಲು ಬಿಡದಿರುವುದೇ ಆಗಿರುತ್ತದೆ.”—ಓಗ್ಬಿಟಿ, ನೈಜೀರಿಯ.

“ನಾವು ಕೊಟ್ಟ ನಿರ್ದೇಶನಗಳು ಮಕ್ಕಳಿಗೆ ಸರಿಯಾಗಿ ಅರ್ಥವಾಗಿವೆಯೋ ಎಂದು ನೋಡಲಿಕ್ಕಾಗಿ ಅವುಗಳನ್ನು ಪುನಃ ಅವರಿಂದ ಹೇಳಿಸುತ್ತೇವೆ. ಆ ನಿರ್ದೇಶನಗಳನ್ನು ಪಾಲಿಸದಿದ್ದರೆ ನಾವು ಎಚ್ಚರಿಸಿದಂತೆಯೇ ಶಿಕ್ಷೆಕೊಡುತ್ತೇವೆ. ನಮ್ಮ ಮಕ್ಕಳು ನಾವು ಹೇಳಿದ್ದನ್ನು ಕೇಳಿ ಅದರಂತೆ ನಡೆಯುವಂಥವರು ಆಗಬೇಕಾದರೆ, ಅವರ ಅವಿಧೇಯತೆಗೆ ತಕ್ಕ ಶಿಕ್ಷೆ ಕೊಡಬೇಕು.”—ಕ್ಲೈವ್‌, ಆಸ್ಟ್ರೇಲಿಯ.

“ಮಕ್ಕಳ ಎತ್ತರಕ್ಕೆ ತಕ್ಕಂತೆ ಬಗ್ಗಿ ನಿಂತೊ ಕುಳಿತೊ ಅವರ ಕಣ್ಣಲ್ಲಿ ಕಣ್ಣಿಟ್ಟು ಬುದ್ಧಿಹೇಳುವುದು ಪರಿಣಾಮಕಾರಿ, ಇದು ನನ್ನ ಅನುಭವ. ಆಗ ಅವರು ನನಗೆ ಪೂರ್ಣ ಗಮನಕೊಡುತ್ತಾರೆ ಮಾತ್ರವಲ್ಲ ನನ್ನ ಮುಖಭಾವವನ್ನೂ ಅವರು ನೋಡಲಿಕ್ಕಾಗುತ್ತದೆ. ನನ್ನ ಮುಖಭಾವ ನನ್ನ ಮಾತುಗಳಷ್ಟೇ ಪರಿಣಾಮಕಾರಿ.”—ಜೆನಿಫರ್‌, ಆಸ್ಟ್ರೇಲಿಯ.

“‘ನೀನು ಯಾವತ್ತೂ ನಮ್ಮ ಮಾತು ಕೇಳೋಲ್ಲ’ ಎಂದು ನಾವು ನಮ್ಮ ಮಕ್ಕಳಿಗೆ ಹೇಳುವುದಿಲ್ಲ. ಆ ಆರೋಪವು ಸರಿಯೆಂದು ಕಂಡಾಗಲೂ ಹಾಗೆ ಹೇಳುವುದಿಲ್ಲ. ಅಲ್ಲದೆ ಅವರ ಒಡಹುಟ್ಟಿದವರ ಮುಂದೆಂದೂ ಅವರನ್ನು ಗದರಿಸುವುದಿಲ್ಲ. ಒಂದೇ ಅವರ ಕಿವಿಯಲ್ಲಿ ಪಿಸುಗುಟ್ಟುತ್ತೇವೆ ಇಲ್ಲವೇ ಪಕ್ಕಕ್ಕೆ ಕರೆದು ಖಾಸಗಿಯಾಗಿ ತಿಳಿಸುತ್ತೇವೆ.”—ರೂಡಿ, ಮೋಸಾಂಬಿಕ್‌.

“ಮಕ್ಕಳು ಸುಲಭವಾಗಿ ಪ್ರಭಾವಿಸಲ್ಪಡುತ್ತಾರೆ ಮತ್ತು ಅವರಿಗೆ ಇತರರನ್ನು ಅನುಕರಿಸಲು ಇಷ್ಟ. ಆದ್ದರಿಂದ ಸಹಪಾಠಿಗಳು, ಮಾಧ್ಯಮ ಮತ್ತು ಸಮಾಜವು ಮಕ್ಕಳ ಮೇಲೆ ಬೀರಬಹುದಾದ ಭ್ರಷ್ಟ ಪ್ರಭಾವವನ್ನು ಹೆತ್ತವರು ಪ್ರತಿರೋಧಿಸಬೇಕು. ಅದಕ್ಕಾಗಿ ಯೋಗ್ಯ ಮೂಲತತ್ತ್ವಗಳ ಮೇಲಾಧರಿತವಾದ ಉತ್ತಮ ನೈತಿಕ ಗುಣಗಳನ್ನು ಬೆಳೆಸಿಕೊಳ್ಳುವಂತೆ ಮಕ್ಕಳಿಗೆ ಸಹಾಯ ಮಾಡಬೇಕು. ಉತ್ತಮ ನೈತಿಕ ತಳಹದಿಯು ಹಾನಿಕರವಾದ ಯಾವುದೇ ವಿಷಯಗಳನ್ನು ಮಾಡದಿರಲು ಅವರಿಗೆ ನೆರವಾಗುತ್ತದೆ.”—ಗ್ರೆಗ್ವಾರ್‌, ಡೆಮೊಕ್ರೆಟಿಕ್‌ ರಿಪಬ್ಲಿಕ್‌ ಆಫ್‌ ದ ಕಾಂಗೊ. (g11-E 10)

“ಶಿಸ್ತು ನ್ಯಾಯಯುತ, ದೃಢ ಆಗಿರಬೇಕು. ಅದನ್ನು ಹಿಂದೆಗೆಯಬಾರದು. ತಪ್ಪು ಮಾಡಿದರೆ ಪರಿಣಾಮವೇನೆಂದು ಮಕ್ಕಳಿಗೆ ಗೊತ್ತಿರಬೇಕು. ನೀವು ಹೇಳಿದಂತೆಯೇ ಮಾಡುತ್ತೀರೆಂದೂ ಅವರಿಗೆ ತಿಳಿದಿರಬೇಕು.”—ಒಯೆನ್‌, ಇಂಗ್ಲೆಂಡ್‌.

[ಪುಟ 14ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಿಮ್ಮ ಮಕ್ಕಳು ಮನಗುಂದಿಹೋಗದಂತೆ ಅವರನ್ನು ಕೆಣಕುತ್ತಾ ಇರಬೇಡಿ.”—ಕೊಲೊಸ್ಸೆ 3:21

[ಪುಟ 15ರಲ್ಲಿರುವ ಚೌಕ/ಚಿತ್ರ]

ಕುಟುಂಬ-ಕಥನ

ಒಂಟಿ ಹೆತ್ತವಳ ಸಾಫಲ್ಯ

ಲುಸಿಂಡ ಫೋರ್‌ಸ್ಟರ್‌ರೊಂದಿಗೆ ಸಂದರ್ಶನ

ಒಂಟಿ ಹೆತ್ತವಳಾದ ನೀವು ಎದುರಿಸುವ ದೊಡ್ಡ ಸವಾಲು ಯಾವುದು?

ಹೆತ್ತವರಾಗಿರುವುದೇ ದೊಡ್ಡ ಜವಾಬ್ದಾರಿಯಾಗಿರುವಾಗ ಒಂಟಿ ಹೆತ್ತವಳಾಗಿರುವ ನನಗಾದರೊ ನನ್ನ ಸಮಯ, ಶಕ್ತಿಯನ್ನು ಸರಿಹೊಂದಿಸುವುದೇ ದೊಡ್ಡ ಸವಾಲು. ಮಕ್ಕಳಲ್ಲಿ ಮೂಲತತ್ತ್ವಗಳನ್ನು ಮತ್ತು ಮೌಲ್ಯಗಳನ್ನು ಬೇರೂರಿಸಲು ಸಮಯ ಮಾಡಬೇಕು, ವಿರಾಮ ಮತ್ತು ವಿನೋದ ವಿಹಾರಕ್ಕೂ ಸಮಯ ಮಾಡಬೇಕು. ಮನೆಕೆಲಸಗಳನ್ನು ಮಾಡಲಿಕ್ಕಾಗಿ ಕೆಲವೊಮ್ಮೆ ನಾನು ನನ್ನ ವಿರಾಮದ ಸಮಯವನ್ನೂ ತ್ಯಾಗಮಾಡಬೇಕಾಗುತ್ತದೆ.

ನಿಮ್ಮ ಹೆಣ್ಮಕ್ಕಳೊಂದಿಗೆ ಒಳ್ಳೇ ಸಂವಾದವನ್ನು ಹೇಗೆ ಮಾಡುತ್ತೀರಿ?

ಹೆತ್ತವರ ವಿವಾಹ ವಿಚ್ಛೇದವಾದಾಗ, ಮಕ್ಕಳಿಗೆ ಅಭದ್ರತೆಯ ಅನಿಸಿಕೆ ಹಾಗೂ ಕೋಪ ಬರಬಹುದು. ನನ್ನ ಮಕ್ಕಳಿಗೆ ಇಂಥ ಸಮಸ್ಯೆಗಳಿರುವಾಗ ಅವರೊಂದಿಗೆ ದೃಷ್ಟಿ ಸಂಪರ್ಕವಿಟ್ಟು, ಶಾಂತ ಸ್ವರದಲ್ಲಿ ಮಾತನಾಡುವುದು ಪ್ರಾಮುಖ್ಯವೆಂದು ನನಗನಿಸುತ್ತದೆ. ಎಲ್ಲರೂ ಶಾಂತರಾಗುವ ತನಕ ಕಾಯುತ್ತೇನೆ. ತದನಂತರ ಸಮಸ್ಯೆಯನ್ನು ದೊಡ್ಡದು ಮಾಡದೆ ನನ್ನ ಚಿಂತೆಯನ್ನು ವ್ಯಕ್ತಪಡಿಸುತ್ತೇನೆ. ಅವರ ಅಭಿಪ್ರಾಯಗಳನ್ನು ಕೇಳಿ ಜಾಗರೂಕತೆಯಿಂದ ಕಿವಿಗೊಡುತ್ತೇನೆ. ಹೀಗೆ ಅವರ ಭಾವನೆಗಳನ್ನು ನಿಜವಾಗಿಯೂ ಮಾನ್ಯಮಾಡುತ್ತೇನೆಂದು ತೋರಿಸುತ್ತೇನೆ. ಅವರ ಶಾಲಾ ಚಟುವಟಿಕೆಗಳಲ್ಲಿ ಆಸಕ್ತಿವಹಿಸಿ ಅವರ ಕೆಲಸಗಳಿಗಾಗಿ ಶ್ಲಾಘಿಸುತ್ತೇನೆ. ಯಾವಾಗಲೂ ಒಟ್ಟಿಗೆ ಕೂತು ಆರಾಮವಾಗಿ ಊಟಮಾಡುತ್ತೇವೆ. ಅಲ್ಲದೆ ಅವರನ್ನು ತುಂಬ ಪ್ರೀತಿಸುತ್ತೇನೆಂದು ಯಾವಾಗಲೂ ಹೇಳುತ್ತಿರುತ್ತೇನೆ.

ಶಿಸ್ತನ್ನು ಹೇಗೆ ಕೊಡುತ್ತೀರಿ?

ಮಕ್ಕಳಿಗಾಗಿ ನಿಯಮಗಳನ್ನಿಡುವುದು ಅಗತ್ಯ. ಅವುಗಳನ್ನು ಸ್ಪಷ್ಟವಾಗಿ ವಿವರಿಸಬೇಕು. ದೃಢತೆ ಆವಶ್ಯಕ. ನಾನು ದಯೆ ತೋರಿಸುತ್ತೇನೆ ಆದರೂ ದೃಢಳಾಗಿರುತ್ತೇನೆ. ಅವರ ನಿರ್ದಿಷ್ಟ ವರ್ತನೆ ಯಾಕೆ ತಪ್ಪು ಎಂಬದನ್ನು ವಿವರಿಸುತ್ತಾ ಅವರ ತಪ್ಪನ್ನು ಮನದಟ್ಟು ಮಾಡುತ್ತೇನೆ. ಅಷ್ಟುಮಾತ್ರವಲ್ಲ ಶಿಕ್ಷೆ ಕೊಡುವ ಮುಂಚೆ ಅವರಿಗೆ ಪ್ರಶ್ನೆಗಳನ್ನು ಕೇಳಿ ಅವರ ಮನಸ್ಸಿನಲ್ಲಿರುವ ವಿಚಾರವನ್ನು ಹೊರತೆಗೆದು ಅವರು ಹಾಗೆ ಮಾಡಿದ್ದೇಕೆ ಎಂಬದನ್ನು ಗೊತ್ತುಮಾಡುತ್ತೇನೆ. ತಪ್ಪು ನನ್ನದಾಗಿರುವಲ್ಲಿ, ಉದಾಹರಣೆಗೆ ಸನ್ನಿವೇಶವನ್ನು ನಾನು ತಪ್ಪಾಗಿ ಅರ್ಥಮಾಡಿಕೊಂಡಿರುವಲ್ಲಿ ಕ್ಷಮೆಯಾಚಿಸುತ್ತೇನೆ.

ಇತರರನ್ನು ಗೌರವಿಸುವಂತೆ ಮಕ್ಕಳಿಗೆ ಹೇಗೆ ಕಲಿಸುತ್ತೀರಿ?

ಇತರರು ನಿಮ್ಮನ್ನು ಹೇಗೆ ಉಪಚರಿಸಬೇಕೆಂದು ಬಯಸುತ್ತೀರೋ ಹಾಗೆಯೇ ನೀವು ಇತರರನ್ನು ಉಪಚರಿಸಿ ಎಂದು ಯೇಸು ಕಲಿಸಿದ್ದನ್ನು ಅವರಿಗೆ ನೆನಪುಹುಟ್ಟಿಸುತ್ತೇನೆ. (ಲೂಕ 6:31) ತಮ್ಮ ತಮ್ಮೊಳಗಿನ ಸಮಸ್ಯೆಗಳನ್ನು ಸಾಧ್ಯವಾದಲ್ಲೆಲ್ಲ ತಾವಾಗಿಯೇ ಬಗೆಹರಿಸುವಂತೆ ಅವರನ್ನು ಉತ್ತೇಜಿಸುತ್ತೇನೆ ಮತ್ತು ಕೋಪಿಸಿಕೊಂಡಿರುವಾಗ ಶಾಂತವಾಗಿ, ದಯೆಯಿಂದ ಮಾತಾಡುವುದರ ಮಹತ್ವವನ್ನು ಅವರಿಗೆ ಕಲಿಸುತ್ತೇನೆ.

ವಿನೋದವಿಹಾರಕ್ಕೆಂದು ನೀವೇನು ಮಾಡುತ್ತೀರಿ?

ರಜಾ ದಿನಗಳಲ್ಲಿ ಪ್ರವಾಸಕ್ಕೆಂದು ದೂರ ದೂರದ ಪ್ರದೇಶಗಳಿಗೆ ಹೋಗುವುದು ನಮ್ಮಿಂದ ಸಾಧ್ಯವಿಲ್ಲ. ಆದ್ದರಿಂದ ಕಡಿಮೆ ಖರ್ಚಿನ ಚಟುವಟಿಕೆಗಳಿಗಾಗಿ ನಾವು ವಾರ್ತಾಪತ್ರಿಕೆಗಳಲ್ಲಿ ನೋಡುತ್ತೇವೆ. ಪಿಕ್‌ನಿಕ್‌ಗೆ ಇಲ್ಲವೇ ಸಸ್ಯೋದ್ಯಾನಗಳಲ್ಲಿನ ಗಿಡಗಳನ್ನು ನೋಡಲೆಂದು ಹೋಗುತ್ತೇವೆ. ಕೆಲವೊಂದು ಸೊಪ್ಪುಗಳನ್ನು ನಮ್ಮ ತೋಟದಲ್ಲಿಯೇ ಬೆಳೆಸುತ್ತೇವೆ ಮತ್ತು ಅಡುಗೆಗಾಗಿ ನಮಗಿಷ್ಟವಾದ ಸೊಪ್ಪನ್ನು ಆರಿಸುತ್ತೇವೆ. ಸ್ಥಳೀಯ ಉದ್ಯಾನವನದಲ್ಲೇ ಸಮಯ ಕಳೆದರೂ ಸರಿ, ವಿನೋದವಿಹಾರ ಪ್ರಾಮುಖ್ಯ.

ಯಾವ ಆನಂದಗಳು, ಪ್ರತಿಫಲಗಳು ನಿಮಗೆ ಸಿಕ್ಕಿವೆ?

ನಮ್ಮ ಜೀವನ ಕಷ್ಟಕರವಾಗಿದ್ದರೂ ಪರಸ್ಪರ ಆಪ್ತರಾಗಿದ್ದೇವೆ ಮತ್ತು ದೇವರು ನಮಗೆ ಕೊಟ್ಟಿರುವ ಆಶೀರ್ವಾದಗಳಿಗಾಗಿ ಕೃತಜ್ಞರಾಗಿರಲು ಕಲಿತಿದ್ದೇವೆ. ಪ್ರತಿಯೊಂದು ಮಗುವಿನ ವ್ಯಕ್ತಿತ್ವವು ರೂಪುಗೊಳ್ಳುತ್ತಿರುವುದನ್ನು ಕಾಣುವಾಗ ಸಂತೋಷಿಸುತ್ತೇನೆ. ಈ ಪ್ರಾಯದಲ್ಲಿ ಅವರು ನನ್ನೊಂದಿಗೆ ಸಮಯ ಕಳೆಯಲು ಬಯಸುತ್ತಾರೆ ಮತ್ತು ನಾನು ಕೂಡ ಅವರ ಒಡನಾಟದಲ್ಲಿ ಆನಂದಿಸುತ್ತೇನೆ. ನಾನು ಯಾವಾಗ ಸಂತೋಷದಿಂದಿರುತ್ತೇನೆ, ಯಾವಾಗ ದುಃಖದಿಂದಿರುತ್ತೇನೆಂದು ಅವರು ಚೆನ್ನಾಗಿ ಅರಿತವರಾಗಿ ನನ್ನಲ್ಲಿ ಭರವಸೆ ತುಂಬಿಸಲು ಕೆಲವೊಮ್ಮೆ ನನ್ನನ್ನು ತಬ್ಬಿಕೊಳ್ಳುತ್ತಾರೆ. ಅವರ ಪ್ರೀತಿಯ ಅಭಿವ್ಯಕ್ತಿಗಳು ನನಗೆ ಬಹಳಷ್ಟು ಆನಂದವನ್ನು ಕೊಡುತ್ತವೆ. ಎಲ್ಲಕ್ಕಿಂತ ಮಿಗಿಲಾಗಿ ಅನೇಕ ಕಷ್ಟಕರ ಪರಿಸ್ಥಿತಿಗಳಲ್ಲೂ ನಮಗೆ ಸಹಾಯ ಮಾಡಿರುವ ಕಾಳಜಿಯುಳ್ಳ ಸೃಷ್ಟಿಕರ್ತನ ಪ್ರೀತಿಯನ್ನು ಅನುಭವಿಸಿದ್ದೇವೆ. ಒಳ್ಳೇ ಹೆತ್ತವಳಾಗಿರಲು ಬೈಬಲ್‌ ನನಗೆ ಬಲ ಕೊಟ್ಟಿದೆ.—ಯೆಶಾಯ 41:13.

[ಚಿತ್ರ]

ಲುಸಿಂಡ ತನ್ನ ಮಕ್ಕಳಾದ ಬ್ರೇ ಮತ್ತು ಶೇ ಅವರೊಂದಿಗೆ