ಹೆತ್ತವರು ಹೇಳುವುದೇನು?
ಹೆತ್ತವರು ಹೇಳುವುದೇನು?
ಮಕ್ಕಳ ತಾರುಣ್ಯದ ವರ್ಷಗಳು ಅನೇಕ ಹೆತ್ತವರ ಮುಂದೆ ಸವಾಲುಗಳ ಒಂದು ಹೊಸ ಗಂಟನ್ನೇ ಬಿಚ್ಚುತ್ತದೆ. ಬದುಕಿನ ಈ ಘಟ್ಟವು ನಿಮಗೂ ನಿಮ್ಮ ಮಗನಿಗೂ ಗೊಂದಲಮಯ ಆಗಿರಬಹುದಾದರೂ ಈ ಘಟ್ಟವನ್ನು ಯಶಸ್ವಿಯಾಗಿ ದಾಟುವಂತೆ ಅವನಿಗೆ ಹೇಗೆ ನೆರವಾಗಬಲ್ಲಿರಿ? ಭೂಸುತ್ತಲೂ ಇರುವ ಹೆತ್ತವರಲ್ಲಿ ಕೆಲವರು ಈ ಬಗ್ಗೆ ಏನು ಹೇಳಿದ್ದಾರೆಂಬದನ್ನು ಗಮನಿಸಿ.
ಬದಲಾವಣೆಗಳು
“ನನ್ನ ಮಗ ಚಿಕ್ಕವನಿದ್ದಾಗ ನನ್ನ ಸಲಹೆಯನ್ನು ಮರುಮಾತಿಲ್ಲದೆ ಸ್ವೀಕರಿಸುತ್ತಿದ್ದ. ಆದರೆ ಹದಿಹರೆಯದವನಾದಾಗ ನನ್ನ ಅಧಿಕಾರದಲ್ಲಿ ಅವನಿಗಿದ್ದ ಭರವಸೆ ಮಾಯವಾದಂತೆ ತೋರಿತು. ನಾನು ಏನಾದರೂ ಹೇಳಿದರೆ, ನನ್ನ ಮಾತನ್ನೂ ಅದನ್ನು ಹೇಳಿದ ರೀತಿಯನ್ನೂ ಪ್ರಶ್ನಿಸುತ್ತಿದ್ದ.”—ಫ್ರ್ಯಾಂಕ್, ಕೆನಡ.
“ನನ್ನ ಮಗ ಮುಂಚೆ ಮಾತಾಡುತ್ತಿದ್ದಷ್ಟು ಹೆಚ್ಚು ಮಾತಾಡುವುದಿಲ್ಲ. ಅವನೇ ಬಂದು ಹೇಳುತ್ತಾನೆಂದು ಕಾಯುವ ಬದಲು ಈಗ ನಾನೇ ಅವನ ಮನಸ್ಸಿನಲ್ಲೇನಿದೆ ಎಂದು ಕೇಳಬೇಕಾಗುತ್ತದೆ. ಕೇಳಿದ ಪ್ರಶ್ನೆಗೆ ಅವನಿಂದ ಉತ್ತರ ಬರಿಸುವುದೂ ಸುಲಭವಲ್ಲ. ಉತ್ತರ ಕೊಡುತ್ತಾನೆ ಆದರೆ ಕೂಡಲೇ ಅಲ್ಲ.”—ಫ್ರಾನ್ಸಿಸ್, ಆಸ್ಟ್ರೇಲಿಯ.
“ತಾಳ್ಮೆ ಬಹು ಮುಖ್ಯ. ಒಮ್ಮೊಮ್ಮೆ ಮಕ್ಕಳನ್ನು ಸರಿಯಾಗಿ ಬಯ್ದುಬಿಡೋಣ ಅಂತ ಅನಿಸುತ್ತದೆ. ಆದರೆ ಸಿಟ್ಟನ್ನು ನುಂಗಿ ಶಾಂತತೆಯಿಂದ ಅವರೊಂದಿಗೆ ಮಾತಾಡುವುದೇ ಒಳ್ಳೇದು!”—ಫೆಲಿಶಾ, ಯುನೈಟೆಡ್ ಸ್ಟೇಟ್ಸ್.
ಸಂವಾದ
“ಹದಿಹರೆಯದ ನನ್ನ ಮಗಳು ತಾನೇ ಸರಿ ಎಂದು ಕೆಲವೊಮ್ಮೆ ತುಂಬ ಸಮರ್ಥಿಸಿಕೊಳ್ಳುತ್ತಾಳೆ. ನಾನು ಅನಾವಶ್ಯಕ ಟೀಕಿಸುತ್ತೇನೆಂದು ಅವಳಿಗೆ ಒಮ್ಮೊಮ್ಮೆ ಅನಿಸುತ್ತದೆ. ಆದ್ದರಿಂದ, ಅವಳನ್ನು ತುಂಬ ಪ್ರೀತಿಸುತ್ತೇನೆ, ಅವಳ ಒಳಿತನ್ನೇ ಬಯಸುತ್ತೇನೆಂದು ನೆನಪುಹುಟ್ಟಿಸುತ್ತಾ ಇರುತ್ತೇನೆ!”—ಲೀಸಾ, ಯುನೈಟೆಡ್ ಸ್ಟೇಟ್ಸ್.
“ನನ್ನ ಮಕ್ಕಳು ಚಿಕ್ಕವರಿದ್ದಾಗ ನನ್ನೊಂದಿಗೆ ಮನಬಿಚ್ಚಿ ಮಾತಾಡುತ್ತಿದ್ದರು. ಅವರ ಮನಸ್ಸಿನಲ್ಲೇನಿದೆ ಎಂದು ತಿಳಿದುಕೊಳ್ಳುವುದು ಸುಲಭವಾಗಿತ್ತು. ಈಗ ನಾನು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು. ಅವರನ್ನು ಪ್ರತ್ಯೇಕ ವ್ಯಕ್ತಿಗಳಾಗಿ ಗೌರವಿಸುತ್ತೇನೆಂದು ತೋರಿಸಬೇಕು. ಹಾಗೆ ಮಾಡಿದರೆ ಮಾತ್ರ ಅವರು ನನ್ನೊಂದಿಗೆ ಮನಬಿಚ್ಚಿ ಮಾತಾಡುತ್ತಾರೆ.”—ನಾನ್‌ಹೀ, ಕೊರಿಯ.
“ಹದಿಹರೆಯದವರಿಗೆ ನಿರ್ದಿಷ್ಟ ಸಂಗತಿಗಳನ್ನು ಮಾಡಬಾರದೆಂದು ಹೇಳಿದರೆ ಸಾಲದು. ಏಕೆ ಮಾಡಬಾರದೆಂದು ವಿವರಿಸಿ ಹೇಳಬೇಕು ಹಾಗೂ ಮನಸ್ಪರ್ಶಿಸುವ ರೀತಿಯಲ್ಲಿ ಸಂವಾದ ಮಾಡಬೇಕು. ಅವರು ತಮ್ಮ ಮನಸ್ಸಿನಲ್ಲಿದ್ದದನ್ನು ನಮಗೆ ಹೇಳಬೇಕಾದರೆ, ಅವರಿಗೇನು ಹೇಳಲಿಕ್ಕಿದೆಯೊ, ನಮಗೆ ಕೇಳಲು ಇಷ್ಟವಾಗದ ಸಂಗತಿಗಳಿದ್ದರೂ ಸರಿ ಅದಕ್ಕೆ ಕಿವಿಗೊಡಲು ನಾವು ಸಿದ್ಧರಿರಬೇಕು.”—ಡಲೀಲಾ, ಬ್ರಸಿಲ್.
“ನನ್ನ ಮಗಳನ್ನು ತಿದ್ದಬೇಕಾಗಿರುವಾಗ ಅವಳೊಬ್ಬಳೇ ಇದ್ದಾಗ ತಿದ್ದುತ್ತೇನೆ, ಇತರರ ಮುಂದೆ ಅಲ್ಲ.”—ಎಡ್ನಾ, ನೈಜೀರಿಯ.
“ನನ್ನ ಮಗನೊಂದಿಗೆ ಮಾತಾಡುತ್ತಿರುವಾಗ ಕೆಲವೊಮ್ಮೆ ಮನೆಯಲ್ಲಿನ ಬೇರೆ ಕೆಲಸಗಳ ಕಡೆಗೆ ನನ್ನ ಮನಸ್ಸು ಹೋಗುತ್ತದೆ. ಅವನಿಗೆ ಪೂರ್ತಿ ಗಮನ ಕೊಡಲಾಗುವುದಿಲ್ಲ. ಅವನಿಗದು ಗೊತ್ತಾಗುತ್ತದೆ. ಅವನು ನನ್ನೊಂದಿಗೆ ಹೆಚ್ಚು ಮಾತಾಡದಿರಲು ಇದು ಒಂದು ಕಾರಣವೆಂದು ನನಗನಿಸುತ್ತದೆ. ಅವನು ನನ್ನೊಂದಿಗೆ ಮುಕ್ತವಾಗಿ ಮಾತಾಡಬೇಕಾದರೆ ಅವನ ಮಾತಿಗೆ ನಾನು ಹೆಚ್ಚು ಗಮನ ಕೊಡಲು ಪ್ರಯತ್ನಿಸಬೇಕು.”—ಮಿರ್ಯಮ್, ಮೆಕ್ಸಿಕೊ.
ಸ್ವಾತಂತ್ರ್ಯ
“ನನ್ನ ಹದಿಹರೆಯದ ಮಕ್ಕಳಿಗೆ ಸ್ವಾತಂತ್ರ್ಯ ಕೊಡುವುದರ ಬಗ್ಗೆ ನನಗೆ ಯಾವಾಗಲೂ ಅಂಜಿಕೆಯಿತ್ತು. ಇದರಿಂದಾಗಿ ನಮ್ಮ ಮಧ್ಯೆ ಸ್ವಲ್ಪ ವಾದವಿವಾದವೂ ಆಗಿದೆ. ಆಗ ನಾನು ವಿಷಯವನ್ನು ಅವರೊಂದಿಗೆ ಮುಕ್ತವಾಗಿ ಚರ್ಚಿಸಿದೆ. ನನಗೆ ಯಾಕೆ ಅಂಜಿಕೆಯೆಂದು ಅವರಿಗೆ ವಿವರಿಸಿದೆ, ಅವರು ತಮಗೇಕೆ ಹೆಚ್ಚು ಸ್ವಾತಂತ್ರ್ಯ ಬೇಕೆಂದು ನಂತರ ನನಗೆ ವಿವರಿಸಿದರು. ಕೊನೆಯಲ್ಲಿ, ನಾನಿಟ್ಟಿದ್ದ ಹಿತಮಿತವಾದ ಮೇರೆಗಳೊಳಗೇ ಅವರಿಗೆ ಹೆಚ್ಚು ಸ್ವಾತಂತ್ರ್ಯವನ್ನು ಕೊಡುವ ಒಂದು ಒಪ್ಪಂದಕ್ಕೆ ಬಂದೆವು.”—ಎಡ್ವಿನ್, ಘಾನ.
“ನನ್ನ ಮಗನಿಗೆ ಒಂದು ಬೈಕ್ ಬೇಕಿತ್ತು. ನನಗೆ ಅದು ಸ್ವಲ್ಪವೂ ಇಷ್ಟವಿರಲಿಲ್ಲ. ಆದ್ದರಿಂದ ನಾನು ಅವನನ್ನು ಗದರಿಸುತ್ತಾ ಇದ್ದೆ, ಬೈಕಿನಿಂದಾಗುವ ಹಾನಿಯ ಬಗ್ಗೆ ಮಾತ್ರ ತಿಳಿಸುತ್ತಿದ್ದೆ. ಅವನಿಗೆ ಮಾತಾಡಲು ಅವಕಾಶವೇ ಕೊಡಲಿಲ್ಲ. ಆದ್ದರಿಂದ ಅವನಿಗೂ ಸಿಟ್ಟು ಬಂತು, ಬೈಕ್ ಖರೀದಿಸಲು ಇನ್ನಷ್ಟು ಹಠತೊಟ್ಟ. ಆಗ ನಾನು ಇನ್ನೊಂದು ವಿಧಾನ ಪ್ರಯತ್ನಿಸಿನೋಡಿದೆ. ನನ್ನ ಮಗನು ಬೈಕಿನ ಬಗ್ಗೆ ಅಂದರೆ ಅದರ ಅಪಾಯಗಳು, ಖರ್ಚು, ಲೈಸೆನ್ಸನ್ನು ಪಡೆಯಲು ಹಾಗೂ ಉಳಿಸಿಕೊಳ್ಳಲು ಬೇಕಾದ ಅರ್ಹತೆಗಳು ಮುಂತಾದವುಗಳ ಕುರಿತು ಮಾಹಿತಿ ಸಂಗ್ರಹಿಸುವಂತೆ ಉತ್ತೇಜಿಸಿದೆ. ಸಭೆಯಲ್ಲಿರುವ ಪ್ರೌಢ ಕ್ರೈಸ್ತರ ಸಲಹೆ ಕೇಳುವಂತೆಯೂ ಹೇಳಿದೆ. ಕಠೋರವಾಗಿ ವರ್ತಿಸುವ ಬದಲು ತನ್ನ ಇಚ್ಛೆಗಳ ಕುರಿತು ಮುಕ್ತವಾಗಿ ಮಾತಾಡುವಂತೆ ನನ್ನ ಮಗನನ್ನು ಉತ್ತೇಜಿಸುವುದು ಉತ್ತಮವೆಂದು ಗ್ರಹಿಸಿದೆ. ಈ ರೀತಿಯಲ್ಲಿ ಅವನ ಮನಮುಟ್ಟಲು ಶಕ್ತಳಾದೆ.” —ಹೇಯಾನ್, ಕೊರಿಯ.
“ನಾವು ಮಕ್ಕಳಿಗೆ ಮಿತಿಗಳನ್ನಿಟ್ಟೆವು. ಆದರೆ ನಿಧಾನವಾಗಿ ಸ್ವಾತಂತ್ರ್ಯವನ್ನೂ ಕೊಟ್ಟೆವು. ಕೊಡಲಾದ ಸ್ವಾತಂತ್ರ್ಯವನ್ನು ಅವರು ಉತ್ತಮವಾಗಿ ಬಳಸುತ್ತಾ ಹೋದಂತೆ ಅವರಿಗೆ ಇನ್ನೂ ಹೆಚ್ಚು ಸ್ವಾತಂತ್ರ್ಯ ಕೊಟ್ಟೆವು. ಸ್ವಾತಂತ್ರ್ಯ ಕೊಡಲು ನಾವೂ ಬಯಸುತ್ತೇವೆಂದು ಸೂಚಿಸುತ್ತಾ ಹೆಚ್ಚು ಸ್ವಾತಂತ್ರ್ಯವನ್ನು ಪಡೆದುಕೊಳ್ಳುವ ಅವಕಾಶಗಳನ್ನು ಅವರಿಗೆ ಕೊಟ್ಟೆವು. ಆದರೆ ಅವರ ಮೇಲೆ ನಾವಿಟ್ಟ ಭರವಸೆಯನ್ನು ಅವರು ದುರುಪಯೋಗಿಸಿದಲ್ಲಿ ತಕ್ಕ ಶಿಕ್ಷೆಯನ್ನೂ ಕೊಡುತ್ತಿದ್ದೆವು.”—ಡಾರಥಿ, ಫ್ರಾನ್ಸ್.
“ನಾನು ನನ್ನ ಮಟ್ಟಗಳನ್ನು ಯಾವತ್ತೂ ಬದಲಾಯಿಸುತ್ತಿರಲಿಲ್ಲ. ಆದರೆ ನನ್ನ ಮಕ್ಕಳು ವಿಧೇಯರಾಗಿರುತ್ತಿದ್ದಾಗ ವಿನಾಯಿತಿಗಳನ್ನು ಮಾಡುತ್ತಿದ್ದೆ. ಉದಾಹರಣೆಗೆ, ಅವರು ಎಂದಿಗಿಂತ ಸ್ವಲ್ಪ ತಡವಾಗಿ ಮನೆಗೆ ಬರಲು ಒಮ್ಮೊಮ್ಮೆ ಬಿಡುತ್ತಿದ್ದೆ. ಆದರೆ ಅನುಮತಿಯಿಲ್ಲದೆ ಒಂದಕ್ಕಿಂತ ಹೆಚ್ಚು ಬಾರಿ ಮನೆಗೆ ತಡವಾಗಿ ಬಂದರೆ ಅವರಿಗೆ ಶಿಕ್ಷೆ ಸಿಗುತ್ತಿತ್ತು.”—ಎಲ್‌ಕನ್, ಕೊರಿಯ.
“ಉದ್ಯೋಗಿಯು ಎಷ್ಟು ವಿಧೇಯತೆ, ಜವಾಬ್ದಾರಿಯಿಂದ ಕೆಲಸಮಾಡುತ್ತಾನೊ ಅವನ ಧಣಿ ಅವನಿಗೆ ಅಷ್ಟೇ ಪರಿಗಣನೆ ತೋರಿಸುವನು. ಅದೇ ರೀತಿ ನನ್ನ ಮಗನು ನಾವಿಟ್ಟ ಮೇರೆಯೊಳಗಿದ್ದು ಹೆಚ್ಚು ವಿಧೇಯತೆ, ಜವಾಬ್ದಾರಿಯಿಂದ ನಡೆದುಕೊಂಡರೆ, ಅವನಿಗೆ ಕ್ರಮೇಣ ಹೆಚ್ಚೆಚ್ಚು ಸ್ವಾತಂತ್ರ್ಯ ಸಿಗುತ್ತದೆಂದು ತಿಳಿದುಕೊಂಡಿದ್ದಾನೆ. ಒಬ್ಬ ಉದ್ಯೋಗಿ ತನ್ನ ಜವಾಬ್ದಾರಿಗಳನ್ನು ಪೂರೈಸದಿದ್ದರೆ ಅವನನ್ನು ಹೇಗೆ ಶಿಕ್ಷಿಸಲಾಗುತ್ತದೊ ಹಾಗೆಯೇ ಮಗ ತನಗೆ ಕೊಡಲಾದ ಸ್ವಾತಂತ್ರ್ಯವನ್ನು ಜವಾಬ್ದಾರಿಯಿಂದ ಬಳಸದಿದ್ದಲ್ಲಿ ಅದನ್ನು ಕಳೆದುಕೊಳ್ಳುವನೆಂದು ಅವನಿಗೆ ತಿಳಿದಿದೆ.”—ರಾಮೊನ್, ಮೆಕ್ಸಿಕೊ. (g11-E 10)
[ಪುಟ 22ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಹೇಗೆ ಬಾಳಬೇಕೆಂದು ಮಕ್ಕಳಿಗೆ ಕಲಿಸಿರಿ, ಜೀವನವಿಡೀ ಅದನ್ನು ನೆನಪಿಡುವರು.”—ಜ್ಞಾನೋಕ್ತಿ 22:6, ಗುಡ್ ನ್ಯೂಸ್ ಟ್ರಾನ್ಸ್‌ಲೇಶನ್
[ಪುಟ 23ರಲ್ಲಿರುವ ಚೌಕ/ಚಿತ್ರಗಳು]
ಕುಟುಂಬ-ಕಥನ
“ಹದಿಹರೆಯದ ಮಕ್ಕಳನ್ನು ಬೆಳೆಸುವುದು ಅದ್ಭುತ ಅನುಭವ”
ಜೋಸೆಫ್: ನನ್ನ ಇಬ್ಬರು ಹಿರೀ ಪುತ್ರಿಯರು ಹದಿಹರೆಯದವರು. ಅವರಿಗೆ ಕಿವಿಗೊಟ್ಟು, ಅವರ ದೃಷ್ಟಿಕೋನಗಳನ್ನು ತಿಳಿದುಕೊಳ್ಳುವುದು ನನಗೆ ಮುಖ್ಯ. ನನ್ನ ಸ್ವಂತ ಕುಂದುಕೊರತೆಗಳ ಕುರಿತು ಪ್ರಾಮಾಣಿಕನಾಗಿದ್ದು, ಅವರೊಂದಿಗೆ ಮಾತಾಡುವಾಗ ಗೌರವ ತೋರಿಸುವುದರಿಂದ ಸಂವಾದದ ದ್ವಾರವನ್ನು ಸದಾ ತೆರೆದಿಡಲು ಸಾಧ್ಯವಾಗುತ್ತದೆ. ಚುಟುಕಾಗಿ ಹೇಳುವುದಾದರೆ, ಹದಿಹರೆಯದ ಮಕ್ಕಳನ್ನು ಬೆಳೆಸುವುದು ಅದ್ಭುತ ಅನುಭವ. ಇದು ಸಾಧ್ಯವಾಗಿರುವುದು, ದೇವರ ವಾಕ್ಯವಾದ ಬೈಬಲಿನಿಂದ ನಮಗೆ ಸಿಗುವ ಮಾರ್ಗದರ್ಶನದಿಂದಾಗಿಯೇ.
ಲೀಸಾ: ನಮ್ಮ ಹಿರಿಯ ಮಗಳು ಹದಿಹರೆಯಕ್ಕೆ ಕಾಲಿಟ್ಟಾಗ ಆಕೆಗೆ ನನ್ನ ಗಮನ ಮುಂಚೆಗಿಂತ ಹೆಚ್ಚು ಬೇಕಾಗಿತ್ತೆಂದು ಗಮನಿಸಿದೆ. ಅವಳಿಗೆ ಕಿವಿಗೊಡಲು, ಅವಳೊಂದಿಗೆ ಮಾತಾಡಲು, ಅವಳಲ್ಲಿ ಧೈರ್ಯ ತುಂಬಿಸಲು ನಾನು ತುಂಬ ಸಮಯ ಕಳೆಯುತ್ತಿದ್ದದ್ದು ನನಗೆ ನೆನಪಿದೆ. ನಮ್ಮ ಪುತ್ರಿಯರು ಯಾವುದೇ ವಿಷಯದ ಬಗ್ಗೆ ನಮ್ಮೊಂದಿಗೆ ಮಾತಾಡಬಹುದು, ನಾವು ಅವರ ಭಾವನೆಗಳನ್ನು ಮಾನ್ಯಮಾಡುವೆವೆಂದು ಅವರಿಗೆ ಹೇಳುತ್ತೇವೆ. ‘ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ನಿಧಾನಿಯೂ ಆಗಿರಬೇಕು’ ಎಂದು ಯಾಕೋಬ 1:19ರಲ್ಲಿರುವ ನುಡಿಮುತ್ತನ್ನು ಅನ್ವಯಿಸಲು ಪ್ರಯತ್ನಿಸುತ್ತೇನೆ.”
ವಿಕ್ಟೋರಿಯ: ನನ್ನ ಅಮ್ಮ ನನ್ನ ಅತ್ಯಾಪ್ತ ಗೆಳತಿ. ಅವರಂಥ ವ್ಯಕ್ತಿಯನ್ನು ಈ ವರೆಗೂ ನೋಡಿಲ್ಲ—ತುಂಬ ಒಳ್ಳೆಯವರು, ತುಂಬ ಅಕ್ಕರೆ ಅವರಿಗೆ. ಎಲ್ಲರೊಂದಿಗೂ ಹಾಗೆಯೇ. ಅವರು ನಿರ್ಮಲ ಮನಸ್ಸಿನಿಂದ ಇತರರ ಕಾಳಜಿವಹಿಸುತ್ತಾರೆ. ಅವರಂಥ ತಾಯಿ ಸಿಗುವುದು ಕಷ್ಟ.
ಓಲಿವ್ಯ: ನನ್ನ ತಂದೆಗೆ ನಮ್ಮ ಬಗ್ಗೆ ತುಂಬ ಕಾಳಜಿ. ಮನಸ್ಸು ತುಂಬ ಉದಾರ. ನಮ್ಮ ಬಳಿ ಏನಿಲ್ಲದಿರುವಾಗಲೂ ಇತರರಿಗೆ ಸಹಾಯಮಾಡಲು ಸದಾ ಸಿದ್ಧರು. ಯಾವಾಗ ಗಂಭೀರವಾಗಿರಬೇಕೆಂದು ಅವರಿಗೆ ಗೊತ್ತು. ಹಾಗೆಯೇ, ವಿನೋದ ಮಾಡುವುದು ಹೇಗೆಂದೂ ಬಲ್ಲರು. ನನ್ನ ಅಪ್ಪ ತುಂಬ ‘ಸ್ಪೆಷಲ್.’ ಅವರೆಂದರೆ ನನಗೆ ತುಂಬ ಹೆಮ್ಮೆ!
“ಬೋರ್ ಆಗಲು ಸಮಯವೇ ಇಲ್ಲ!”
ಸನಿ: ನಮ್ಮ ಹುಡುಗಿಯರಿಗೆ ಏನಾದರೂ ಸಮಸ್ಯೆ ಇದ್ದರೆ ಕುಟುಂಬವಾಗಿ ಕೂತು ಚರ್ಚಿಸುತ್ತೇವೆ. ನಮ್ಮ ಅನಿಸಿಕೆಗಳನ್ನು ಮನಬಿಚ್ಚಿ ಹೇಳುತ್ತೇವೆ, ಬೈಬಲ್ ಸೂತ್ರಗಳ ಆಧಾರದಲ್ಲಿ ನಿರ್ಣಯಗಳನ್ನು ಮಾಡುತ್ತೇವೆ. ನಾನೂ ನನ್ನ ಪತ್ನಿ ಇನೆಸ್ ನಮ್ಮ ಹುಡುಗಿಯರಿಗೆ ಒಳ್ಳೇ, ಪ್ರೌಢ ಒಡನಾಡಿಗಳಿರುವಂತೆ ನೋಡಿಕೊಳ್ಳುತ್ತೇವೆ. ನಮ್ಮ ಸ್ನೇಹಿತರು ಅವರಿಗೂ ಸ್ನೇಹಿತರು, ಅವರ ಸ್ನೇಹಿತರು ನಮಗೂ ಸ್ನೇಹಿತರು.
ಇನೆಸ್: ನಾವು ಯಾವಾಗಲೂ ಕಾರ್ಯತತ್ಪರರಾಗಿರುತ್ತೇವೆ. ಎಲ್ಲವನ್ನೂ ಕುಟುಂಬವಾಗಿ ಮಾಡುತ್ತೇವೆ. ನಾವು ಯೆಹೋವನ ಸಾಕ್ಷಿಗಳಾಗಿರುವುದರಿಂದ ಶುಶ್ರೂಷೆಯಲ್ಲಿ, ವೈಯಕ್ತಿಕ ಹಾಗೂ ಕುಟುಂಬ ಬೈಬಲ್ ಅಧ್ಯಯನ, ವಿಪತ್ತು ಪರಿಹಾರ ಕಾರ್ಯ ಹಾಗೂ ರಾಜ್ಯ ಸಭಾಗೃಹ ನಿರ್ಮಾಣಕಾರ್ಯದಂಥ ಸ್ವಯಂಸೇವೆಯಲ್ಲಿ ಬ್ಯುಸಿ ಆಗಿರುತ್ತೇವೆ. ಇದೆಲ್ಲದರ ಜೊತೆಗೆ ಒಳ್ಳೇ ಮನೋರಂಜನೆಯಲ್ಲೂ ಪಾಲ್ಗೊಳ್ಳುತ್ತೇವೆ. ಹಾಗಾಗಿ ನಮಗೆ ಬೋರ್ ಆಗಲು ಸಮಯವೇ ಇಲ್ಲ!
ಕೆಲ್ಸಿ: ನನ್ನ ಅಪ್ಪ ನಾವು ಮಾತಾಡುವಾಗ ಗಮನಕೊಟ್ಟು ಕೇಳುತ್ತಾರೆ. ಯಾವುದೇ ದೊಡ್ಡ ನಿರ್ಣಯ ಮಾಡುವ ಮುಂಚೆ ಯಾವಾಗಲೂ ಇಡೀ ಕುಟುಂಬದ ಅಭಿಪ್ರಾಯ ಕೇಳುತ್ತಾರೆ. ನನಗೆ ಏನಾದರೂ ಸಹಾಯ ಬೇಕೆಂದರೆ ಅಥವಾ ಸುಮ್ಮನೆ ಮಾತಾಡಬೇಕು ಎಂದನಿಸಿದರೆ ನನ್ನ ಅಮ್ಮ ಯಾವಾಗಲೂ ಇದ್ದಾರೆ.
ಸಮಾಂತಾ: ನನ್ನ ಅಮ್ಮನಿಗೆ ನಾನೆಂದರೆ ತುಂಬ ಪ್ರೀತಿ, ಬಲು ಅಕ್ಕರೆ, ನಾನು ಅವರಿಗೆ ಅಚ್ಚುಮೆಚ್ಚಿನವಳೆಂದು ಅನಿಸುವಂತೆ ಮಾಡುತ್ತಾರೆ. ಹಾಗೆ ಮಾಡುತ್ತಾರೆಂದು ಅವರಿಗೆ ಕೆಲವೊಮ್ಮೆ ಗೊತ್ತೂ ಇರುವುದಿಲ್ಲ. ನಾನು ಮಾತಾಡುವಾಗ ಅವರು ಕಿವಿಗೊಟ್ಟು ಆಲಿಸುತ್ತಾರೆ. ತುಂಬ ಕಾಳಜಿ ವಹಿಸುತ್ತಾರೆ. ಅವರ ಸ್ನೇಹವನ್ನು ಯಾವುದಕ್ಕೂ ಬಿಟ್ಟುಕೊಡಲಾರೆ.
[ಚಿತ್ರಗಳು]
ಕಮೇರಾ ಕುಟುಂಬ: ಜೋಸೆಫ್, ಲೀಸಾ, ವಿಕ್ಟೋರಿಯ, ಓಲಿವ್ಯ ಮತ್ತು ಇಸಬೆಲಾ
ಸಾಪಾಟಾ ಕುಟುಂಬ: ಕೆಲ್ಸಿ, ಇನೆಸ್, ಸನಿ ಮತ್ತು ಸಮಾಂತಾ
[ಪುಟ 22ರಲ್ಲಿರುವ ಚಿತ್ರ]
ಹೆತ್ತವರು ಮಕ್ಕಳಿಗೆ ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯ ಕೊಡಬೇಕು, ಜೊತೆಗೆ ಹಿತಮಿತವಾದ ಮೇರೆಗಳನ್ನೂ ಇಡಬೇಕು