ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕರುಳ ಕುಡಿಯನ್ನು ಕ್ಯಾನ್ಸರ್‌ ಕಾಡಿದಾಗ. . .

ಕರುಳ ಕುಡಿಯನ್ನು ಕ್ಯಾನ್ಸರ್‌ ಕಾಡಿದಾಗ. . .

ಕರುಳ ಕುಡಿಯನ್ನು ಕ್ಯಾನ್ಸರ್‌ ಕಾಡಿದಾಗ. . .

“ನನಗೆ ದಿಕ್ಕೇ ತೋರಲಿಲ್ಲ. ನಿಂತ ನೆಲ ಕುಸಿದಂತಾಯಿತು. ನನ್ನ ಪುಟ್ಟಿ ಸತ್ತೇ ಬಿಟ್ಟಿದ್ದಾಳೇನೋ ಅನ್ನುವಷ್ಟು ಶೋಕದಲ್ಲಿ ಮುಳುಗಿದೆ.”—ಮಗಳಿಗೆ ಕ್ಯಾನ್ಸರ್‌ ಇದ್ದದ್ದು ಗೊತ್ತಾದಾಗ ಜೇಲ್ಟನ್‌ ಅನುಭವಿಸಿದ ಭಾವನೆ.

ಮ ಗನಿಗೊ ಮಗಳಿಗೊ ಕ್ಯಾನ್ಸರ್‌ ಇದೆಯೆಂಬ ಸತ್ಯ ಬಿಚ್ಚಿಟ್ಟಾಗ ಅದು ದುಃಸ್ವಪ್ನದಂತೆ ಹೆತ್ತವರನ್ನು ಬೆಚ್ಚಿಬೀಳಿಸುತ್ತದೆ. ಆದರೆ ಮಕ್ಕಳಿಗೆ ಕ್ಯಾನ್ಸರ್‌ ಬರುವ ಪ್ರಮಾಣ ಎಷ್ಟು? ಕ್ಯಾನ್ಸರ್‌ ವಿರುದ್ಧ ಹೋರಾಡುವ ಒಂದು ಅಂತಾರಾಷ್ಟ್ರೀಯ ಸಂಸ್ಥೆಗನುಸಾರ, “ಬೇರೆ ವಿಧದ ಕ್ಯಾನ್ಸರ್‌ಗಳಿಗೆ ಹೋಲಿಸುವಾಗ ಮಕ್ಕಳ ಕ್ಯಾನ್ಸರಿನ ಪ್ರಮಾಣ ತೀರ ಕಡಿಮೆ. ಆದರೆ ಪ್ರತಿ ವರ್ಷ [ಲೋಕದಾದ್ಯಂತ] 1,60,000ಕ್ಕೂ ಹೆಚ್ಚು ಮಕ್ಕಳಿಗೆ ಕ್ಯಾನ್ಸರ್‌ ಇರುವುದನ್ನು ಪತ್ತೆಹಚ್ಚಲಾಗುತ್ತಿದೆ. ಮುಂದುವರಿದ ದೇಶಗಳಲ್ಲಂತೂ, ಮಕ್ಕಳ ಸಾವಿಗೆ ಮೊದಲ ಕಾರಣ ಅಪಘಾತಗಳಾಗಿದ್ದರೆ, ಎರಡನೇ ಕಾರಣ ಕ್ಯಾನ್ಸರ್‌.” ಉದಾಹರಣೆಗೆ ಬ್ರಸಿಲ್‌ ದೇಶದಲ್ಲಿ “ಪ್ರತಿ ವರ್ಷ ಮಕ್ಕಳ ಕ್ಯಾನ್ಸರಿನ 9,000 ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಿವೆ” ಎನ್ನುತ್ತದೆ ಅಲ್ಲಿನ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಕ್ಯಾನ್ಸರ್‌.

ಮಗುವಿಗೆ ಕ್ಯಾನ್ಸರ್‌ ಬಂದಾಗ “ಕುಟುಂಬದಲ್ಲಿರುವ ಎಲ್ಲರೂ ಆ ಆಘಾತದಿಂದ ತತ್ತರಿಸಿಹೋಗುತ್ತಾರೆ” ಎಂದು ಕ್ಯಾನ್ಸರ್‌ ಪೀಡಿತ ಮಗುವಿನ ತಾಯಿಯ ಪಾತ್ರವನ್ನು ಚರ್ಚಿಸುವ ಒಂದು ಪುಸ್ತಕ ಹೇಳುತ್ತದೆ. ಮಗುವಿಗೆ ಕ್ಯಾನ್ಸರ್‌ ಇದೆಯೆಂದು ಪತ್ತೆಹಚ್ಚಿದಾಗ ಬಹುಶಃ ಶಸ್ತ್ರಚಿಕಿತ್ಸೆ ಮಾಡಿಸಬೇಕಾದೀತು. ಜೊತೆಗೆ ಕೀಮೋಥೆರಪಿ ಅಥವಾ ರೇಡಿಯೇಶನ್‌ ಅಥವಾ ಎರಡಕ್ಕೂ ಒಳಗಾಗಬೇಕಾದೀತು. ಇದರ ಅಡ್ಡಪರಿಣಾಮಗಳನ್ನೂ ಮಗು ಸಹಿಸಬೇಕಾಗುತ್ತದೆ. ಇದನ್ನು ನೋಡುವ ಹೆತ್ತವರ ಕರುಳಲ್ಲಿ ಕತ್ತರಿ ಆಡಿಸಿದಂತಾಗುತ್ತದೆ. ಭಯ, ದುಃಖ, ಅಪರಾಧಿಭಾವ, ಸಿಟ್ಟು, ನಿರಾಕರಣೆಯಂಥ ಭಾವನೆಗಳ ಸುಳಿಯಲ್ಲಿ ಸಿಕ್ಕಿಬೀಳುತ್ತಾರೆ. ಇಂಥ ನೋವನ್ನು ಅವರು ಹೇಗೆ ಸಹಿಸಿಕೊಳ್ಳಬಹುದು?

ಕಳಕಳಿ ತೋರಿಸುವ ವೈದ್ಯಕೀಯ ವೃತ್ತಿಪರರು ಹೆತ್ತವರಿಗೆ ತುಂಬ ಸಾಂತ್ವನ ಕೊಡಬಲ್ಲರು. “ಹೆತ್ತವರಿಗೆ ಧೈರ್ಯತುಂಬಿಸುವ ನಿಜಾಂಶಗಳನ್ನು ಅವರು ಹೇಳಬೇಕು. ಅಲ್ಲದೆ ಮಗು ಮುಂದೆ ಅನುಭವಿಸಬಹುದಾದ ಕೆಲವು ಅಡ್ಡಪರಿಣಾಮಗಳ ಬಗ್ಗೆಯೂ ವಿವರಿಸಬೇಕು. ಹೀಗೆ ಆ ಹೆತ್ತವರ ಮನಸ್ಸಿನ ಭಾರವನ್ನು ಸ್ವಲ್ಪ ಹಗುರಮಾಡಬಹುದು” ಎನ್ನುತ್ತಾರೆ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆಕೊಟ್ಟಿರುವ ನ್ಯೂಯಾರ್ಕಿನ ವೈದ್ಯರೊಬ್ಬರು. ಇತರ ಕ್ಯಾನ್ಸರ್‌ ಪೀಡಿತ ಮಕ್ಕಳ ಹೆತ್ತವರಿಂದಲೂ ಸಾಂತ್ವನ ಸಿಗಬಲ್ಲದು. ಇದನ್ನು ಮನಸ್ಸಿನಲ್ಲಿಟ್ಟು ಎಚ್ಚರ! ಪತ್ರಿಕೆ ಬ್ರಸಿಲ್‌ ದೇಶದ ಐದು ಹೆತ್ತವರ ಸಂದರ್ಶನ ನಡೆಸಿತು.

ಜೇಲ್ಟನ್‌ ಮತ್ತು ನೇಯ “ನಮ್ಮ ಮಗಳು ಎರಡೂವರೆ ವರ್ಷದವಳಾಗಿದ್ದಾಗ ಅವಳಿಗೆ ಉಗ್ರರೂಪದ ಲಿಂಫೋಬ್ಲಾಸ್ಟಿಕ್‌ ಲುಕೀಮಿಯ ಇದೆಯೆಂದು ಗೊತ್ತಾಯಿತು.”

ಅವಳಿಗೆ ಎಷ್ಟು ಸಮಯ ಚಿಕಿತ್ಸೆ ಕೊಡಲಾಯಿತು?

“ಸುಮಾರು ಎರಡೂವರೆ ವರ್ಷ ಕೀಮೋಥೆರಪಿ ಚಿಕಿತ್ಸೆ ಪಡೆದಳು.”

ಯಾವ ಅಡ್ಡಪರಿಣಾಮಗಳಾದವು?

“ತುಂಬ ವಾಂತಿಮಾಡುತ್ತಿದ್ದಳು. ಕೂದಲೆಲ್ಲ ಉದುರಿಹೋಯಿತು. ಹಲ್ಲು ಕಪ್ಪಾಯಿತು. ಮೂರು ಸಲ ನ್ಯುಮೋನಿಯಕ್ಕೆ ತುತ್ತಾದಳು.”

ಅದನ್ನೆಲ್ಲ ನೋಡಿ ನಿಮಗೆ ಹೇಗನಿಸಿತು?

“ಮೊದಮೊದಲು ತುಂಬ ಗಾಬರಿಗೊಂಡೆವು. ಅವಳು ಉಳಿಯಲ್ಲವೆಂದೇ ನೆನಸಿದೆವು. ಆದರೆ ಅವಳ ಆರೋಗ್ಯ ಸುಧಾರಿಸುತ್ತಾ ಹೋದಂತೆ ವಾಸಿಯಾಗುವಳೆಂಬ ಭರವಸೆ ಮೂಡಿತು. ಈಗ ಅವಳಿಗೆ ಒಂಬತ್ತು ವರ್ಷ.”

ಅಂಥ ದುಸ್ತರ ಸ್ಥಿತಿಯನ್ನು ಸಹಿಸಲು ನಿಮಗೆ ಯಾವುದು ಸಹಾಯಮಾಡಿತು?

“ಯೆಹೋವ ದೇವರ ಮೇಲಿನ ಭರವಸೆಯೇ. 2 ಕೊರಿಂಥ 1:3, 4ರಲ್ಲಿ ಹೇಳುವಂತೆ ಆತನೇ ‘ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಂತೈಸಿದನು.’ ನಮ್ಮ ಕ್ರೈಸ್ತ ಸಹೋದರ ಸಹೋದರಿಯರೂ ಕೊಟ್ಟ ಬೆಂಬಲ ಅದ್ಭುತ. ಅವರು ನಮ್ಮನ್ನು ಪ್ರೋತ್ಸಾಹಿಸಲು ಪತ್ರ ಬರೆದರು, ಫೋನ್‌ ಮಾಡಿದರು, ನಮಗಾಗಿ ಪ್ರಾರ್ಥನೆಮಾಡಿದರು. ಕೆಲವೊಮ್ಮೆ ನಮ್ಮೊಟ್ಟಿಗೆ ಸೇರಿ ಪ್ರಾರ್ಥನೆಮಾಡಿದರು. ಹಣ ಸಹಾಯ ಸಹ ಮಾಡಿದರು. ನಮ್ಮ ಮಗಳನ್ನು ಇನ್ನೊಂದು ರಾಜ್ಯದಲ್ಲಿರುವ ಆಸ್ಪತ್ರೆಗೆ ಸೇರಿಸಬೇಕಾದಾಗ, ಅಲ್ಲಿನ ಸಾಕ್ಷಿಗಳು ನಮಗೆ ಉಳುಕೊಳ್ಳಲು ಏರ್ಪಾಡು ಮಾಡಿದರು. ಆಸ್ಪತ್ರೆಗೆ ಹೋಗಿಬರಲು ಸಹೋದರರು ಸಹಾಯಮಾಡಿದರು. ಅವರು ನಮಗೆ ಕೊಟ್ಟ ಸಹಾಯವನ್ನು ಮರೆಯಲು ಸಾಧ್ಯವೇ ಇಲ್ಲ.”

ಲೂಯಿಜ್‌ ಮತ್ತು ಫೇಬಿಯಾನ “1992ರಲ್ಲಿ ನಮ್ಮ ಮಗಳಿಗೆ ಅಂಡಾಶಯದ ಕ್ಯಾನ್ಸರ್‌ ಇದೆಯೆಂದು ತಿಳಿದುಬಂತು. ಅದು ಅಪರೂಪದ, ವೇಗವಾಗಿ ಬೆಳೆಯುವ ರೀತಿಯದ್ದು. ಆಗ ಅವಳಿಗೆ 11 ವರ್ಷ.”

ವಿಷಯ ತಿಳಿದಾಗ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು?

“ನಾವು ನಂಬಲೇ ಇಲ್ಲ. ನಮ್ಮ ಮಗಳಿಗೆ ಕ್ಯಾನ್ಸರ್‌ ಇದೆಯೆಂಬ ಮಾತನ್ನು ನಮ್ಮಿಂದ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.”

ಅವಳಿಗೆ ಯಾವ ಚಿಕಿತ್ಸೆ ಕೊಡಲಾಯಿತು?

“ಶಸ್ತ್ರಕ್ರಿಯೆ ಮಾಡಲಾಯಿತು, ಕೀಮೋಥೆರಪಿ ಸಹ ಕೊಟ್ಟರು. ಅದರ ಪರಿಣಾಮಗಳು ನಮ್ಮೆಲ್ಲರನ್ನು ದೈಹಿಕವಾಗಿ ಭಾವನಾತ್ಮಕವಾಗಿ ಬಳಲಿಸಿದವು. ಅವಳಿಗೆ ಎರಡು ಸಲ ನ್ಯುಮೋನಿಯಾ ಬಂತು. ಎರಡನೇ ಸಲವಂತೂ ಸಾವಿನಂಚಿಗೆ ಹೋದಳು. ಅಲ್ಲದೆ, ಅವಳ ರಕ್ತದಲ್ಲಿ ಕಿರುಫಲಕಗಳು ಕಡಿಮೆಯಾಯಿತು. ಇದರಿಂದಾಗಿ ಚರ್ಮ ಹಾಗೂ ಮೂಗಿನಿಂದ ಇದ್ದಕ್ಕಿದ್ದ ಹಾಗೆ ರಕ್ತ ಒಸರುತ್ತಿತ್ತು. ಔಷಧ ಕೊಟ್ಟು ಇದನ್ನು ಕಡಿಮೆಮಾಡಲು ಸಾಧ್ಯವಾಯಿತು.”

ಎಷ್ಟು ಸಮಯ ಚಿಕಿತ್ಸೆ ಕೊಡಲಾಯಿತು?

“ಮೊದಲ ಬಯಾಪ್ಸಿಯಿಂದ ಹಿಡಿದು ಕೊನೆ ಬಾರಿ ಕೀಮೋಥೆರಪಿ ಚಿಕಿತ್ಸೆಯ ವರೆಗೆ ಸುಮಾರು ಆರು ತಿಂಗಳು.”

ತನಗೆ ಕ್ಯಾನ್ಸರ್‌ ಇದೆಯೆಂದು ಗೊತ್ತಾದಾಗ ಮತ್ತು ಚಿಕಿತ್ಸೆ ಬಗ್ಗೆ ಹೇಳಿದಾಗ ಮಗಳಿಗೆ ಹೇಗನಿಸಿತು?

“ಏನಾಗುತ್ತಿದೆ ಎಂದು ಅವಳಿಗೆ ಆರಂಭದಲ್ಲಿ ಗೊತ್ತಾಗಲಿಲ್ಲ. ಡಾಕ್ಟರ್‌ ಅವಳಿಗೆ ‘ನಿನ್ನ ಹೊಟ್ಟೆಯಲ್ಲಿ ಒಂದು ಚಿಕ್ಕ ಚೆಂಡು ಥರ ಇದೆ, ಅದನ್ನು ತೆಗೆಯಬೇಕು’ ಅಂತ ಹೇಳಿದರು. ಆದರೆ ತನಗೇನೊ ಗಂಭೀರ ಕಾಯಿಲೆ ಇದೆಯಂತ ಅವಳಿಗೆ ಗೊತ್ತಾಗಿ ಬಿಟ್ಟಿತು. ‘ಡ್ಯಾಡಿ ನನಗೆ ಕ್ಯಾನ್ಸರ್‌ ಇದೆಯಾ?’ ಅಂಥ ನೇರವಾಗಿ ಕೇಳಿಬಿಟ್ಟಳು. ನನಗಂತೂ ಏನು ಉತ್ತರ ಕೊಡಬೇಕೆಂದು ಗೊತ್ತಾಗಲಿಲ್ಲ.”

ಮಗಳು ನರಳುವುದನ್ನು ನೋಡಿ ನಿಮಗೆ ಹೇಗನಿಸಿತು?

“ನಾವಿಬ್ಬರು ಅನುಭವಿಸಿದ ಭಾವನಾತ್ಮಕ ತೊಳಲಾಟವನ್ನು ಮಾತುಗಳಲ್ಲಿ ವರ್ಣಿಸಲು ಕಷ್ಟ. ಕೆಲವೊಮ್ಮೆ ನನ್ನ ಕಣ್ಮುಂದೆಯೇ ನನ್ನ ಪುಟ್ಟಿ ಕೀಮೋಥೆರಪಿಗೆಂದು ನರ ಹುಡುಕಲು ನರ್ಸ್‌ಗೆ ಸಹಾಯಮಾಡುತ್ತಿದ್ದಳು. ಅದನ್ನು ನೋಡಿದಾಗೆಲ್ಲ ನನ್ನ ಕರುಳು ಕಿತ್ತುಬರುತ್ತಿತ್ತು. ನನಗೆ ತಡಕೊಳ್ಳಲು ಆಗದಿದ್ದಾಗ ಬಾತ್‌ರೂಮಿಗೆ ಹೋಗಿ ಅಳುತ್ತಿದ್ದೆ, ಯೆಹೋವನಲ್ಲಿ ಮನಸ್ಸನ್ನು ತೋಡಿಕೊಳ್ಳುತ್ತಿದ್ದೆ. ಒಂದು ರಾತ್ರಿಯಂತೂ ನಾನೆಷ್ಟು ಹತಾಶನಾದೆನೆಂದರೆ, ನನ್ನ ಪುಟ್ಟಿಯ ಬದಲಿಗೆ ನನ್ನ ಜೀವ ಹೋಗಲಿ ಯೆಹೋವನೇ ಎಂದು ಬೇಡಿಕೊಂಡೆ.”

ಇದನ್ನೆಲ್ಲ ಹೇಗೆ ತಾಳಿಕೊಂಡಿರಿ?

“ನಮ್ಮ ಕ್ರೈಸ್ತ ಸಹೋದರರು ತುಂಬ ಸಹಾಯ ಕೊಟ್ಟರು. ದೇಶದ ಬೇರೆ ಬೇರೆ ಭಾಗಗಳಿಂದ ಕೆಲವರು ಫೋನ್‌ ಮಾಡಿದರು. ಹೀಗೆ ಮಾತಾಡಿದ ಒಬ್ಬ ಪ್ರಿಯ ಸಹೋದರ ನನಗೆ ಬೈಬಲ್‌ ತರುವಂತೆ ಹೇಳಿದರು. ಆಮೇಲೆ ಅವರು ಕೀರ್ತನೆಗಳ ಪುಸ್ತಕದಿಂದ ಕೆಲವು ವಚನಗಳನ್ನು ಓದಿದ ರೀತಿ ನಮಗೆ ನೆಮ್ಮದಿ ತಂದಿತು. ನನಗೂ ನನ್ನ ಪತ್ನಿಗೂ ಅದೇ ಬೇಕಾಗಿತ್ತು. ಏಕೆಂದರೆ ಅದೇ ಸಮಯದಲ್ಲಿ ನಮ್ಮ ಮಗಳಿಗೆ ತುಂಬ ನೋವುತರುವ ಚಿಕಿತ್ಸೆ ನಡೆಯುತ್ತಿತ್ತು.”

ರೋಸಿಮೇರಿ “ನನ್ನ ಮಗಳಿಗೆ ಒಂದು ಬಗೆಯ ರಕ್ತದ ಕ್ಯಾನ್ಸರ್‌ ಇದೆಯೆಂದು ಪತ್ತೆಹಚ್ಚಿದಾಗ ಅವಳಿಗೆ ಬರೀ ನಾಲ್ಕು ವರ್ಷ.”

ಅದನ್ನು ತಿಳಿದಾಕ್ಷಣ ನಿಮ್ಮ ಪ್ರತಿಕ್ರಿಯೆ ಏನಾಗಿತ್ತು?

“ನನ್ನ ಕಿವಿಯನ್ನು ನಾನೇ ನಂಬಲಿಕ್ಕಾಗಲಿಲ್ಲ. ಹಗಲೂರಾತ್ರಿ ಅಳ್ತಾ ಇದ್ದೆ. ಸಹಾಯಮಾಡೆಂದು ದೇವರನ್ನು ಬೇಡುತ್ತಾ ಇದ್ದೆ. ನನ್ನ ಹಿರಿಯ ಮಗಳು ತಂಗಿಯ ಸ್ಥಿತಿ ನೋಡಿ ಭಾವನಾತ್ಮಕವಾಗಿ ಕುಸಿದುಹೋದಳು. ಎಷ್ಟರ ಮಟ್ಟಿಗೆಯೆಂದರೆ ಅವಳನ್ನು ಅಜ್ಜಿ ಮನೆಗೆ ಕಳುಹಿಸಬೇಕಾಯಿತು.”

ನಿಮ್ಮ ಪುಟ್ಟ ಮಗಳಿಗೆ ಚಿಕಿತ್ಸೆಯಿಂದ ಯಾವ ಅಡ್ಡಪರಿಣಾಮಗಳಾದವು?

“ಪ್ರತಿದಿನ ಕೀಮೋಥೆರಪಿ ನಡೆಯುತ್ತಿದ್ದದರಿಂದ ಅವಳಲ್ಲಿ ರಕ್ತಹೀನತೆ ಉಂಟಾಯಿತು. ಕೆಂಪು ರಕ್ತಕಣಗಳ ಸಂಖ್ಯೆ ಹೆಚ್ಚಿಸಲು ಡಾಕ್ಟರರು ಕಬ್ಬಿಣಾಂಶದ ಔಷಧಿಗಳನ್ನೂ ಇರಿತ್ರೋಪಾಯಿಟಿನ್‌ ಎಂಬ ಮದ್ದನ್ನೂ ಕೊಟ್ಟರು. ಅವಳ ರಕ್ತಕಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದದ್ದೇ ದೊಡ್ಡ ಚಿಂತೆಯಾಗಿಬಿಟ್ಟಿತು. ಅಷ್ಟುಮಾತ್ರವಲ್ಲ ಅವಳಿಗೆ ಸೆಳೆವು ಬರುತ್ತಿತ್ತು.”

ಎಷ್ಟು ಸಮಯ ಚಿಕಿತ್ಸೆ ಕೊಡಲಾಯಿತು?

“ಎರಡು ವರ್ಷ ನಾಲ್ಕು ತಿಂಗಳ ವರೆಗೆ ಅವಳಿಗೆ ತೀವ್ರವಾದ ಕೀಮೋಥೆರಪಿ ಕೊಡಲಾಯಿತು. ಆ ಸಮಯದಲ್ಲಿ ಅವಳ ಕೂದಲೆಲ್ಲ ಉದುರಿಹೋಯಿತು. ತುಂಬ ದಪ್ಪಗಾದಳು. ಆದರೆ ಅವಳಿಗೆ ಇದೆಲ್ಲವನ್ನು ಸಹಿಸಲು ಅವಳ ಹಾಸ್ಯ ಪ್ರಜ್ಞೆ ನೆರವಾಯಿತು. ಸುಮಾರು ಆರು ವರ್ಷಗಳ ಬಳಿಕ ಅವಳಲ್ಲಿ ಆ ರೋಗದ ಯಾವುದೇ ಲಕ್ಷಣಗಳು ಉಳಿದಿಲ್ಲವೆಂದು ಡಾಕ್ಟರರು ಹೇಳಿದರು.”

ಅತ್ಯಂತ ಕಷ್ಟಕರವಾದ ಈ ಪರಿಸ್ಥಿತಿಯನ್ನು ನಿಭಾಯಿಸಲು ನಿಮಗೆ ಯಾವುದು ಸಹಾಯಮಾಡಿತು?

“ನನ್ನ ಮಗಳೂ ನಾನೂ ಸೇರಿ ತುಂಬ ಸಲ ಪ್ರಾರ್ಥನೆಮಾಡಿದೆವು. ಬೇರೆ ಬೇರೆ ಕಷ್ಟಗಳನ್ನು ತಾಳಿಕೊಂಡ ದೇವರ ನಿಷ್ಠಾವಂತ ಸೇವಕರ ಬಗ್ಗೆ ಬೈಬಲಿನಲ್ಲಿರುವ ಉದಾಹರಣೆಗಳ ಕುರಿತು ಮನನಮಾಡಿದೆವು. ಮತ್ತಾಯ 6:34ರಲ್ಲಿರುವ ಯೇಸುವಿನ ಮಾತುಗಳನ್ನೂ ಪಾಲಿಸಿದೆವು. ನಾಳೆಯ ಬಗ್ಗೆ ಚಿಂತೆಮಾಡುತ್ತಾ ಇವತ್ತಿನ ಚಿಂತೆಗಳ ಭಾರವನ್ನು ಹೆಚ್ಚಿಸಲಿಲ್ಲ. ಸ್ಥಳೀಯ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯ ಸದಸ್ಯರು ಮಾತ್ರವಲ್ಲ ಇತರ ಜೊತೆ ಕ್ರೈಸ್ತರೂ ತುಂಬ ಸಹಾಯಮಾಡಿದರು. ಜೊತೆಗೆ, ಇಂಥ ಎಷ್ಟೋ ಕೇಸುಗಳನ್ನು ಪ್ರತಿದಿನ ನೋಡುವ ಕಾಳಜಿಪರ ವೈದ್ಯಕೀಯ ಸಿಬ್ಬಂದಿವರ್ಗವೂ ತುಂಬ ನೆರವು ನೀಡಿತು.”

ನಿಮಗೆ ಪರಿಚಯವಿರುವ ಅಥವಾ ನಿಮ್ಮ ಕುಟುಂಬದಲ್ಲೇ ಒಂದು ಮಗುವಿಗೆ ಕ್ಯಾನ್ಸರ್‌ ಇದೆಯೇ? ಹಾಗಿದ್ದರೆ, ನಿಮ್ಮ ದುಃಖ ಸಹಜವಾದದ್ದೇ ಎಂದು ಅರ್ಥಮಾಡಿಕೊಳ್ಳಲು ಈ ಸಂದರ್ಶನಗಳು ನಿಮಗೆ ನೆರವಾಗಲಿ. “ಅಳುವ ಸಮಯ” ಇದೆಯೆಂದು ಬೈಬಲ್‌ ಸಹ ಹೇಳುತ್ತದೆ. (ಪ್ರಸಂಗಿ 3:4) ಎಲ್ಲಕ್ಕಿಂತ ಮಿಗಿಲಾದ ಸಂಗತಿಯೇನೆಂದರೆ, “ಪ್ರಾರ್ಥನೆಯನ್ನು ಕೇಳುವವನು” ಎಂದು ಕರೆಯಲಾಗಿರುವ ಸತ್ಯ ದೇವರಾದ ಯೆಹೋವನು ತನ್ನೆಡೆಗೆ ಯಥಾರ್ಥ ಮನಸ್ಸಿನಿಂದ ಬರುವವರೆಲ್ಲರನ್ನು ಸಂತೈಸುತ್ತಾನೆ.—ಕೀರ್ತನೆ 65:2. (g11-E 05)

[ಪುಟ 23ರಲ್ಲಿರುವ ಚೌಕ]

ಸಾಂತ್ವನ ಕೊಡುವ ಬೈಬಲ್‌ ವಚನಗಳು

“ನಾಳೆಯ ವಿಷಯವಾಗಿ ಎಂದೂ ಚಿಂತೆಮಾಡಬೇಡಿ; ನಾಳೆಯ ದಿನವು ತನ್ನದೇ ಆದ ಚಿಂತೆಗಳನ್ನು ಹೊಂದಿರುವುದು.”—ಮತ್ತಾಯ 6:34.

“ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಕೋಮಲ ಕರುಣೆಯ ತಂದೆಯೂ ಸಕಲ ಸಾಂತ್ವನದ ದೇವರೂ ಆಗಿದ್ದಾನೆ. ನಮ್ಮ ಎಲ್ಲ ಸಂಕಟಗಳಲ್ಲಿ ಆತನು ನಮ್ಮನ್ನು ಸಾಂತ್ವನಗೊಳಿಸುತ್ತಾನೆ.”—2 ಕೊರಿಂಥ 1:3, 4.

“ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”—ಫಿಲಿಪ್ಪಿ 4:6, 7.

“ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

[ಪುಟ 24ರಲ್ಲಿರುವ ಚೌಕ/ಚಿತ್ರ]

ಪ್ರೀತಿಪರ ಏರ್ಪಾಡು

ಯೆಹೋವನ ಸಾಕ್ಷಿಗಳಿಗೆಂದು ಇರುವ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಗಳು ಆಸ್ಪತ್ರೆ ಹಾಗೂ ರೋಗಿಗಳ ಮಧ್ಯೆ ಸಹಕಾರಭಾವಕ್ಕೆ ಇಂಬುಕೊಡುತ್ತವೆ. ‘ರಕ್ತವನ್ನು ವರ್ಜಿಸಿರಿ’ ಎಂಬ ಬೈಬಲ್‌ ಆಜ್ಞೆ ಪಾಲಿಸಬಯಸುವ ಯೆಹೋವನ ಸಾಕ್ಷಿಗಳಿಗೆ ನೆರವಾಗುವ ದಕ್ಷ ಡಾಕ್ಟರರನ್ನು ಹುಡುಕಲು ಸಾಕ್ಷಿಗಳಿಗೆ ಇವು ಸಹಾಯಮಾಡುತ್ತವೆ.—ಅಪೊಸ್ತಲರ ಕಾರ್ಯಗಳು 15:20.

[ಪುಟ 23ರಲ್ಲಿರುವ ಚಿತ್ರ]

ನೇಯ, ಸ್ತೆಫನಿ, ಜೇಲ್ಟನ್‌

[ಪುಟ 23ರಲ್ಲಿರುವ ಚಿತ್ರ]

ಲೂಯಿಜ್‌, ಅಲೀನ್‌, ಫೇಬಿಯಾನ

[ಪುಟ 23ರಲ್ಲಿರುವ ಚಿತ್ರ]

ಅಲೀನ್‌, ರೋಸಿಮೇರಿ