ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನ ನಿಜ ಅನುಯಾಯಿಗಳ ಮೇಲೆ ದ್ವೇಷ ಯಾಕೆ?

ಕ್ರಿಸ್ತನ ನಿಜ ಅನುಯಾಯಿಗಳ ಮೇಲೆ ದ್ವೇಷ ಯಾಕೆ?

ಬೈಬಲಿನ ದೃಷ್ಟಿಕೋನ

ಕ್ರಿಸ್ತನ ನಿಜ ಅನುಯಾಯಿಗಳ ಮೇಲೆ ದ್ವೇಷ ಯಾಕೆ?

“ಜನರು ನಿಮ್ಮನ್ನು ಸಂಕಟಕ್ಕೆ ಒಪ್ಪಿಸಿ ಕೊಲ್ಲುವರು ಮತ್ತು ನನ್ನ ಹೆಸರಿನ ನಿಮಿತ್ತ ನೀವು ಎಲ್ಲ ಜನಾಂಗಗಳ ದ್ವೇಷಕ್ಕೆ ಗುರಿಯಾಗುವಿರಿ.”—ಮತ್ತಾಯ 24:9.

ಯೇಸುವಿನ ಬರ್ಬರ ಹತ್ಯೆಯಾಗುವ ಕೆಲವು ದಿನಗಳ ಮುಂಚೆ ಹೇಳಿದ ಮಾತುಗಳವು. ಆತನ ಮರಣದ ಹಿಂದಿನ ರಾತ್ರಿಯಂದು ಶಿಷ್ಯರಿಗೆ, “ಅವರು ನನ್ನನ್ನು ಹಿಂಸೆಪಡಿಸಿರುವಲ್ಲಿ ನಿಮ್ಮನ್ನೂ ಹಿಂಸೆಪಡಿಸುವರು” ಅಂದನು. (ಯೋಹಾನ 15:20, 21) ಕಷ್ಟನೋವಿನಿಂದ ನರಳುತ್ತಿದ್ದ ಜನರಿಗಾಗಿ ಯೇಸು ತನ್ನ ಬದುಕನ್ನೇ ಸವೆಸಿದವನು, ಬಡವರಿಗೆ ನೆಮ್ಮದಿ ತಂದವನು, ಮನನೊಂದವರಿಗೆ ಆಶಾಕಿರಣ ಆಗಿದ್ದವನು. ಹೀಗಿರುವಾಗ ಆತನ ಹಾಗೇ ಆಗಬೇಕೆಂದು ಆಶಿಸುವ, ಆತನ ಆಜ್ಞೆಗಳನ್ನು ಪಾಲಿಸುವ ಆತನ ನಿಜ ಅನುಯಾಯಿಗಳನ್ನು ಜನರು ದ್ವೇಷಿಸುವುದಾದರೂ ಏಕೆ?

ಇಂಥ ದ್ವೇಷಕ್ಕೆ ಸ್ಪಷ್ಟ ಕಾರಣಗಳನ್ನು ಬೈಬಲ್‌ ಕೊಡುತ್ತದೆ. ಅವುಗಳೆಡೆಗೆ ಒಂದು ನೋಟ ಬೀರುವಾಗ ಯೇಸು ಎದುರಿಸಿದಂಥ ದ್ವೇಷ, ಹಿಂಸೆಗಳಿಗೆ ಆತನ ನಿಜ ಅನುಯಾಯಿಗಳೂ ಗುರಿಯಾಗುತ್ತಿರುವುದೇಕೆ ಎಂದು ತಿಳಿಯುತ್ತದೆ.

ಅಜ್ಞಾನದ ಕಾರಣ

ಯೇಸು ತನ್ನ ಶಿಷ್ಯರಿಗೆ “ನಿಮ್ಮನ್ನು ಕೊಲ್ಲುವ ಪ್ರತಿಯೊಬ್ಬನು ತಾನು ದೇವರಿಗೆ ಪವಿತ್ರ ಸೇವೆಯನ್ನು ಸಲ್ಲಿಸಿದ್ದೇನೆ ಎಂದು ನೆನಸುವ ಗಳಿಗೆಯು ಬರುತ್ತದೆ. ಅವರು [ದೇವರನ್ನಾಗಲಿ] ನನ್ನನ್ನಾಗಲಿ ತಿಳಿಯದಿರುವ ಕಾರಣ ಇದನ್ನೆಲ್ಲ ಮಾಡುವರು” ಎಂದು ಹೇಳಿದನು. (ಯೋಹಾನ 16:2, 3) ಆತನ ಮೇಲೆ ದ್ವೇಷಕಾರುತ್ತಿದ್ದ ಜನರು ಆತನು ಆರಾಧಿಸುತ್ತಿದ್ದ ದೇವರನ್ನೇ ಆರಾಧಿಸುತ್ತಿದ್ದರು ಗೊತ್ತೆ? ಆದರೆ ಅವರು ತಪ್ಪು ಧಾರ್ಮಿಕ ವಿಚಾರಗಳಿಂದ, ಸಂಪ್ರದಾಯಗಳಿಂದ ಪ್ರಭಾವಿತರಾಗಿದ್ದ ಕಾರಣ ಯೇಸುವನ್ನು ದ್ವೇಷಿಸುತ್ತಿದ್ದರು. ಅವರಿಗೆ ‘ದೇವರ ವಿಷಯದಲ್ಲಿ ಹುರುಪಿತ್ತು. ಆದರೆ ಅದು ನಿಷ್ಕೃಷ್ಟ ಜ್ಞಾನಕ್ಕನುಸಾರವಾದುದಲ್ಲ.’ (ರೋಮನ್ನರಿಗೆ 10:2) ಇದಕ್ಕೊಂದು ಉದಾಹರಣೆ ಕ್ರೈಸ್ತ ವಿರೋಧಿಯಾಗಿದ್ದ ಸೌಲನೆಂಬ ವ್ಯಕ್ತಿ.

ಇವನು ತಾರ್ಸ ಎಂಬ ಪಟ್ಟಣದವನು. ರಾಜಕೀಯವಾಗಿ ಬಹು ಪ್ರಭಾವಶಾಲಿಯೂ ಕ್ರೈಸ್ತರ ವಿರೋಧಿಗಳೂ ಆಗಿದ್ದ ಫರಿಸಾಯರು ಎಂಬ ಯೆಹೂದಿ ಧಾರ್ಮಿಕ ಗುಂಪಿಗೆ ಸೇರಿದವನಾಗಿದ್ದ. “ನಾನು ದೇವದೂಷಣೆಮಾಡುವವನೂ ಹಿಂಸಕನೂ ದುರಹಂಕಾರಿಯೂ ಆಗಿದ್ದೆ” ಎಂದು ಕಾಲಾನಂತರ ಅವನೇ ಒಪ್ಪಿಕೊಂಡನು. ‘ನಾನು ಅಜ್ಞಾನಿಯಾಗಿದ್ದು ನಂಬಿಕೆಯ ಕೊರತೆಯಿಂದ ಹೀಗೆ ವರ್ತಿಸಿದ್ದೆ’ ಎಂದೂ ಹೇಳಿದನು. (1 ತಿಮೊಥೆಯ 1:12, 13) ಆದರೆ ಸೌಲ ಮುಂದೆ ದೇವರ ಬಗ್ಗೆ, ಆತನ ಮಗನಾದ ಯೇಸುವಿನ ಬಗ್ಗೆ ಸತ್ಯಸಂಗತಿಗಳನ್ನು ಕಲಿತಾಕ್ಷಣ ತಿದ್ದಿಕೊಂಡು ಒಬ್ಬ ಕ್ರೈಸ್ತನಾಗಿ ಅಪೊಸ್ತಲ ಪೌಲನೆಂದು ಪ್ರಸಿದ್ಧನಾದ.

ನಮ್ಮೀ ಕಾಲದಲ್ಲೂ ಕ್ರೈಸ್ತರನ್ನು ಹಿಂಸಿಸಿದ ಎಷ್ಟೋ ಮಂದಿ ಹೀಗೆ ಬದಲಾಗಿದ್ದಾರೆ. ಅಷ್ಟೇ ಅಲ್ಲ ಇವರಲ್ಲಿ ಕೆಲವರು ಪೌಲನಂತೆ ಜನರ ದ್ವೇಷ ಹಿಂಸೆಗೆ ಸ್ವತಃ ಗುರಿಯಾಗಿದ್ದಾರೆ. ಆದರೂ ಕೇಡು ಬಗೆದವರಿಗೆ ಕೇಡನ್ನು ಬಗೆಯದೆ ಯೇಸು ಹೇಳಿದಂತೆ ‘ವೈರಿಗಳನ್ನು ಪ್ರೀತಿಸುತ್ತಾರೆ, ಹಿಂಸೆಪಡಿಸುವವರಿಗಾಗಿ ಪ್ರಾರ್ಥಿಸುತ್ತಾರೆ.’ (ಮತ್ತಾಯ 5:44) ಇದನ್ನು ಯೆಹೋವನ ಸಾಕ್ಷಿಗಳೆಲ್ಲರೂ ಮಾಡುತ್ತಾರೆ. ಅವರನ್ನು ದ್ವೇಷಿಸುವ ಜನರಲ್ಲಿ ಕೆಲವರಾದರೂ ಸೌಲನಂತೆ ಮನಬದಲಿಸಿಕೊಳ್ಳಬಹುದು ಎಂಬುದು ಅವರ ಆಶಯ.

ಹೊಟ್ಟೆಕಿಚ್ಚಿನ ಕಾರಣ

ಇನ್ನು ಅನೇಕರು ಯೇಸುವನ್ನು ವಿರೋಧಿಸುತ್ತಿದ್ದದ್ದು ಹೊಟ್ಟೆಕಿಚ್ಚಿನ ಕಾರಣ. ರೋಮನ್‌ ಗವರ್ನರ್‌ ಪೊಂತ್ಯ ಪಿಲಾತನಿಗೂ ಗೊತ್ತಿತ್ತೇನೆಂದರೆ, ಯೇಸುವನ್ನು ಕೊಲ್ಲಲು “ಯಾಜಕರು ಮತ್ಸರದಿಂದಲೇ . . . ತನಗೆ ಒಪ್ಪಿಸಿದ್ದಾರೆ” ಎಂದು. (ಮಾರ್ಕ 15:9, 10) ಯೆಹೂದಿ ಧರ್ಮಗುರುಗಳಿಗೆ ಯೇಸುವಿನ ಮೇಲೇಕೆ ಅಷ್ಟೊಂದು ಹೊಟ್ಟೆಕಿಚ್ಚು? ಅವರು ತುಂಬ ಕೀಳಾಗಿ ನೋಡುತ್ತಿದ್ದ ಜನಸಾಮಾನ್ಯರಿಗೆ ಯೇಸು ಅಚ್ಚುಮೆಚ್ಚಿನವನಾಗಿದ್ದ. ಅದು ಒಂದು ಕಾರಣ. “ಇಡೀ ಲೋಕವೇ ಅವನ ಹಿಂದೆ ಹೋಗಿದೆಯಲ್ಲಾ” ಎಂದು ಗೊಣಗುತ್ತಿದ್ದರು ಫರಿಸಾಯರು. (ಯೋಹಾನ 12:19) ಹಾಗೆಯೇ ಸಮಯಾನಂತರ ಕ್ರಿಸ್ತನ ಶಿಷ್ಯರು ಸಾರುವ ಸುವಾರ್ತೆಗೆ ಜನರು ಕಿವಿಗೊಟ್ಟಾಗಲೂ ಮತಾಂಧರು “ಹೊಟ್ಟೆಕಿಚ್ಚಿನಿಂದ ತುಂಬಿದವರಾಗಿ” ಆ ಶಿಷ್ಯರ ಮೇಲೆ ದಾಳಿ ನಡೆಸಿದರು.—ಅಪೊಸ್ತಲರ ಕಾರ್ಯಗಳು 13:45, 50.

ಇನ್ನು ಕೆಲ ವಿರೋಧಿಗಳಿಗೆ ದೇವಜನರ ಒಳ್ಳೇ ನಡತೆ ನೋಡಿ ಪಿತ್ತ ನೆತ್ತಿಗೇರುತ್ತಿತ್ತು. ಯೇಸುವಿನ ಶಿಷ್ಯ ಪೇತ್ರ ತನ್ನಂಥ ಇತರ ಕ್ರೈಸ್ತರಿಗೆ ಹೇಳಿದ್ದು: “ತಮ್ಮ [ಕೆಟ್ಟ ಜನರ] ಕೀಳ್ಮಟ್ಟದ ಪಟಿಂಗತನದಲ್ಲಿ ನೀವು ಅವರೊಂದಿಗೆ ಓಡುವುದನ್ನು ಮುಂದುವರಿಸುವುದಿಲ್ಲವಾದುದರಿಂದ ಅವರು ಆಶ್ಚರ್ಯಪಟ್ಟು ನಿಮ್ಮ ಕುರಿತು ದೂಷಣಾತ್ಮಕ ಮಾತುಗಳನ್ನಾಡುತ್ತಾರೆ.” (1 ಪೇತ್ರ 4:4) ಅದೇ ಪ್ರವೃತ್ತಿ ಇಂದೂ ಜನರಲ್ಲಿದೆ. ಕ್ರಿಸ್ತನ ನಿಜ ಅನುಯಾಯಿಗಳು ಕೆಟ್ಟ ನಡತೆಯನ್ನು ತ್ಯಜಿಸುತ್ತಾರೆ. ಅದೇ ಸಮಯದಲ್ಲಿ ತಾವು ತುಂಬ ಸಂಭಾವಿತರೆಂದು ನೆನಸಿ ಶ್ರೇಷ್ಠರೆಂಬಂತೆ ನಡಕೊಳ್ಳುವುದಿಲ್ಲ. ಹಾಗೆ ಮಾಡಿದರೆ ಅದು ಕ್ರೈಸ್ತ ತತ್ವಗಳಿಗೆ ವಿರುದ್ಧ. ಏಕೆಂದರೆ ಎಲ್ಲಾ ಮಾನವರು ಹುಟ್ಟಿನಿಂದಲೇ ಪಾಪಿಗಳು ಮತ್ತು ದೇವರ ಕರುಣೆಯ ಅಗತ್ಯ ಎಲ್ಲರಿಗಿದೆಯೆಂದು ಅವರಿಗೆ ತಿಳಿದಿದೆ.—ರೋಮನ್ನರಿಗೆ 3:23.

“ಲೋಕದ ಭಾಗವಾಗಿರದ” ಕಾರಣ

“ಲೋಕವನ್ನಾಗಲಿ ಲೋಕದಲ್ಲಿರುವವುಗಳನ್ನಾಗಲಿ ಪ್ರೀತಿಸಬೇಡಿರಿ” ಎನ್ನುತ್ತದೆ ಬೈಬಲ್‌. (1 ಯೋಹಾನ 2:15) ಇಲ್ಲಿ ಬೈಬಲ್‌ ಯಾವ ಲೋಕದ ಬಗ್ಗೆ ಮಾತಾಡುತ್ತಿದೆ? ದೇವರ ಸ್ನೇಹ ಕಡಿದುಕೊಂಡು, “ಈ ಲೋಕದ ಅಧಿಪತಿ” ಆದ ಸೈತಾನನಿಗೆ ಅಡಿಯಾಳಾಗಿರುವ ಮಾನವರ ಬಗ್ಗೆ.—2 ಕೊರಿಂಥ 4:4, ಪರಿಶುದ್ಧ ಬೈಬಲ್‌ *; 1 ಯೋಹಾನ 5:19.

ಈ ಲೋಕವನ್ನು, ಅದರ ದುಮಾರ್ಗಗಳನ್ನು ಪ್ರೀತಿಸುವ ಕೆಲವರು ಬೈಬಲ್‌ ತತ್ವಗಳಿಗನುಸಾರ ಜೀವಿಸಲು ಪ್ರಯತ್ನಿಸುವವರನ್ನು ವಿರೋಧಿಸುತ್ತಾರೆ, ದ್ವೇಷಿಸುತ್ತಾರೆ. ಆದ್ದರಿಂದಲೇ ಯೇಸು “ನೀವು ಲೋಕದ ಭಾಗವಾಗಿರುತ್ತಿದ್ದರೆ ಲೋಕವು ನಿಮ್ಮನ್ನು ತನ್ನವರೆಂದು ಪ್ರೀತಿಸುತ್ತಿತ್ತು. ಆದರೆ ನೀವು ಲೋಕದ ಭಾಗವಾಗಿರದ ಕಾರಣ ಮತ್ತು ನಾನು ನಿಮ್ಮನ್ನು ಈ ಲೋಕದಿಂದ ಆರಿಸಿಕೊಂಡಿರುವ ಕಾರಣ ಲೋಕವು ನಿಮ್ಮನ್ನು ದ್ವೇಷಿಸುತ್ತದೆ” ಎಂದು ತನ್ನ ಶಿಷ್ಯರಿಗೆ ಹೇಳಿದನು.—ಯೋಹಾನ 15:19.

ಭ್ರಷ್ಟಾಚಾರ, ಅನ್ಯಾಯ, ಹಿಂಸಾಚಾರ ತುಂಬಿ ತುಳುಕುತ್ತಿರುವ ಮತ್ತು ಸೈತಾನನು ಆಳುತ್ತಿರುವ ಈ ಲೋಕದ ಸ್ನೇಹ ಬೆಳೆಸಿಕೊಳ್ಳದವರನ್ನು ಅಂದರೆ ಯೆಹೋವನ ಸಾಕ್ಷಿಗಳನ್ನು ಜನರು ದ್ವೇಷಿಸುತ್ತಿರುವುದು ದುಃಖದ ಸಂಗತಿಯಲ್ಲವೇ? ಇಂಥ ಲೋಕವನ್ನು ಸುಧಾರಿಸಲು ಎಷ್ಟೋ ಜನರು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಕಾರಣನಾದ ಲೋಕದ ಅದೃಶ್ಯ ಅಧಿಪತಿಯ ಅಂಕೆಯಿಂದ ಅದನ್ನು ಬಿಡಿಸಿಕೊಳ್ಳಲು ಅವರಿಂದ ಸಾಧ್ಯವಿಲ್ಲ. ಆ ಕೆಲಸ ಯೆಹೋವ ದೇವರಿಗೆ ಮಾತ್ರ ಸಾಧ್ಯ. ಬೆಂಕಿಯಿಂದ ನಾಶಮಾಡಿದರೆ ಹೇಗೋ ಹಾಗೆ ಆತನು ಸೈತಾನನನ್ನು ಸರ್ವನಾಶ ಮಾಡುವನು!—ಪ್ರಕಟನೆ 20:10, 14.

ಈ ವಿಷಯವೇ ಯೆಹೋವನ ಸಾಕ್ಷಿಗಳು ಜಗತ್ತಿನೆಲ್ಲೆಡೆ ಪ್ರಕಟಿಸುತ್ತಿರುವ ‘ರಾಜ್ಯದ ಸುವಾರ್ತೆಯ’ ಪ್ರಮುಖ ಅಂಶ. (ಮತ್ತಾಯ 24:14) ಯೇಸುವಿನ ನೇತೃತ್ವದ ಸರ್ಕಾರವಾದ ದೇವರ ರಾಜ್ಯವೊಂದೇ ಭೂಮಿಯಲ್ಲಿ ಅನಂತ ಶಾಂತಿ-ಸಂತೋಷ ತರಲು ಸಾಧ್ಯವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. (ಮತ್ತಾಯ 6:9, 10) ಆದ್ದರಿಂದ ಅವರು ಆ ಸುವಾರ್ತೆಯನ್ನು ಪ್ರಕಟಿಸುತ್ತಾ ಇರುವರು. ಅವರಿಗೆ ಮನುಷ್ಯರಿಗಿಂತ ದೇವರ ಮೆಚ್ಚುಗೆಯೇ ಹೆಚ್ಚು ಮಹತ್ವದ್ದು. (g11-E 05)

[ಪಾದಟಿಪ್ಪಣಿ]

^ Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

ಈ ಬಗ್ಗೆ ಯೋಚಿಸಿದ್ದೀರೋ?

● ತಾರ್ಸ ಪಟ್ಟಣದ ಸೌಲ ಯಾಕೆ ಕ್ರಿಸ್ತನ ಅನುಯಾಯಿಗಳನ್ನು ದ್ವೇಷಿಸಿದನು?—1 ತಿಮೊಥೆಯ 1:12, 13.

● ಕೆಲವರು ಯೇಸುವನ್ನು ದ್ವೇಷಿಸಲು ಯಾವ ಗುಣ ಕಾರಣವಾಯಿತು?—ಮಾರ್ಕ 15:9, 10.

● ಈ ಲೋಕದ ಬಗ್ಗೆ ಕ್ರಿಸ್ತನ ನಿಜ ಅನುಯಾಯಿಗಳ ನೋಟವೇನು?—1 ಯೋಹಾನ 2:15.

[ಪುಟ 13ರಲ್ಲಿರುವ ಚಿತ್ರ]

ಕೆನಡದ ಕ್ವಿಬೆಕ್‌ನಲ್ಲಿ ದೇವರ ರಾಜ್ಯದ ಸುವಾರ್ತೆ ಪ್ರಕಟಿಸುತ್ತಿದ್ದ ಯೆಹೋವನ ಸಾಕ್ಷಿಗಳ ವಿರುದ್ಧ ಗುಂಪು ಗಲಭೆ, 1945

[ಕೃಪೆ]

Courtesy Canada Wide