ದೇವರಿಗೆ ನಮ್ಮ ಬಗ್ಗೆ ಚಿಂತೆಯಿದೆಯಾ?
ದೇವರಿಗೆ ನಮ್ಮ ಬಗ್ಗೆ ಚಿಂತೆಯಿದೆಯಾ?
ನವೆಂಬರ್ 1, 1755ರ ಮುಂಜಾನೆ—ಪೋರ್ಚುಗಲ್ನ ಲಿಸ್ಬನ್ ನಗರ ಒಂದು ಮಹಾ ಭೂಕಂಪಕ್ಕೆ ತತ್ತರಿಸಿತು. ಅದರ ಬೆನ್ನಲ್ಲೆ ಸುನಾಮಿ, ಅಲ್ಲಲ್ಲಿ ಬೆಂಕಿ, ಎಲ್ಲೆಲ್ಲೂ ನಾಶನ, ಸಾವಿರಾರು ಜೀವಗಳ ನಷ್ಟ.
2010ರಲ್ಲಿ ಹೇಟೀಯಲ್ಲಿ ಆದ ಭೂಕಂಪದ ಹಿನ್ನೆಲೆಯಲ್ಲಿ, ಕೆನಡದ ನ್ಯಾಷನಲ್ ಪೋಸ್ಟ್ ವಾರ್ತಾಪತ್ರಿಕೆ, “ದುರಂತಗಳು ಬಂದೆರಗಿದಾಗ ಅವು ಮಾನವನ ಭಕ್ತಿಯನ್ನು ಪರೀಕ್ಷಿಸುತ್ತವೆ. ಅದರಲ್ಲೂ ಲಿಸ್ಬನ್ನಲ್ಲಾದ ಮಹಾ ದುರಂತದ ಪುನರಾವರ್ತನೆಯಂತಿರುವ ಇಂಥ ವಿಪತ್ತುಗಳು ಅವರ ಭಕ್ತಿಯ ಬುನಾದಿಯನ್ನೇ ಅಲ್ಲಾಡಿಸಿಬಿಡುತ್ತವೆ” ಎಂದಿತು. “ಹೇಟೀಯನ್ನು ದೇವರು ಕೈಬಿಟ್ಟಿದ್ದಾನೋ ಏನೋ” ಎಂದು ಆ ಲೇಖನ ಹೇಳಿ ಮುಗಿಸಿತು.
ಸರ್ವಶಕ್ತ ದೇವರಾದ ಯೆಹೋವನಿಗೆ ಮಾನವನ ಎಲ್ಲಾ ಕಷ್ಟಗಳನ್ನೂ ನೋವುನರಳಾಟಗಳನ್ನೂ ಕೊನೆಗಾಣಿಸುವ ಸೀಮಾತೀತ ಶಕ್ತಿಯಿದೆ. (ಕೀರ್ತನೆ 91:1) ಮಾತ್ರವಲ್ಲ ಆತನಿಗೆ ನಮ್ಮ ಬಗ್ಗೆ ಚಿಂತೆಯಿದೆ ಎಂದು ನಿಸ್ಸಂದೇಹವಾಗಿ ಹೇಳಬಲ್ಲೆವು. ಹೇಗೆ?
ದೇವರ ವ್ಯಕ್ತಿತ್ವ
ಕಷ್ಟದಲ್ಲಿರುವವರನ್ನು ನೋಡಿದಾಗ ದೇವರಿಗೆ ಅನುಕಂಪ ಹುಟ್ಟುತ್ತದೆ. ಈಜಿಪ್ಟಿನವರು ಇಸ್ರಾಯೇಲ್ಯರನ್ನು ಗುಲಾಮರನ್ನಾಗಿ ಮಾಡಿ ಹಿಂಸಿಸುತ್ತಿರುವುದನ್ನು ದೇವರು ನೋಡಿ ಪ್ರವಾದಿ ಮೋಶೆಗೆ ಹೇಳಿದ್ದು: “ಐಗುಪ್ತದೇಶದಲ್ಲಿರುವ ನನ್ನ ಜನರ ದುರವಸ್ಥೆಯನ್ನು ನೋಡೇ ನೋಡಿದ್ದೇನೆ. ಬಿಟ್ಟೀಮಾಡಿಸುವವರ ವಿಷಯದಲ್ಲಿ ಅವರು ಇಟ್ಟ ಮೊರೆಯು ನನಗೆ ಕೇಳಿಸಿತು; ಅವರ ದುಃಖವನ್ನೆಲ್ಲಾ ನಾನು ಬಲ್ಲೆನು.” (ವಿಮೋಚನಕಾಂಡ 3:7) ನೂರಾರು ವರ್ಷಗಳ ನಂತರ ಪ್ರವಾದಿ ಸಮುವೇಲ ಬರೆದದ್ದು: “ಆತನ ಮನಸ್ಸು ಇಸ್ರಾಯೇಲ್ಯರ ಸಂಕಟದ ನಿಮಿತ್ತ ಬಲು ನೊಂದಿತು.” ಇದರಿಂದ ದೇವರು ಕಲ್ಲೆದೆಯವನಲ್ಲ ಎಂದು ತಿಳಿಯುತ್ತದೆ.—ನ್ಯಾಯಸ್ಥಾಪಕರು 10:16.
“ಆತನು ನಡಿಸುವದೆಲ್ಲಾ ನ್ಯಾಯ.” (ಧರ್ಮೋಪದೇಶಕಾಂಡ 32:4) ದೇವರು ಏನೇ ಮಾಡಲಿ ಅದರಲ್ಲಿ ಪಕ್ಷಪಾತ ಭೇದಭಾವ ಇರುವುದಿಲ್ಲ. ಆತನು “ತನ್ನ ಭಕ್ತರ ದಾರಿಯನ್ನು ನೋಡಿಕೊಳ್ಳುವನು.” ಅದೇ ಸಮಯದಲ್ಲಿ ತನ್ನ ಭಕ್ತರಿಗೆ “ಸಂಕಟವನ್ನು ಉಂಟುಮಾಡುವವರಿಗೆ ಪ್ರತಿಯಾಗಿ ಸಂಕಟ” ಕೊಡುವನು. (ಜ್ಞಾನೋಕ್ತಿ 2:8; 2 ಥೆಸಲೊನೀಕ 1:6, 7) ಆತನು “ಅಧಿಪತಿಗಳಿಗೆ ಮುಖದಾಕ್ಷಿಣ್ಯವನ್ನು ತೋರಿಸದೆ ಬಡವರು ಬಲ್ಲಿದರು ಎಂಬ ಭೇದವನ್ನು ಮಾಡದೆ ಇರುವನು; ಅವರೆಲ್ಲರೂ ಆತನ ಸೃಷ್ಟಿಯಾಗಿದ್ದಾರಷ್ಟೆ” ಎಂದು ದೇವರ ನಿಷ್ಪಕ್ಷಪಾತವನ್ನು ಬೈಬಲ್ ಕೊಂಡಾಡುತ್ತದೆ. (ಯೋಬ 34:19) ಮಾನವರ ನೋವಿಗೆ ತಕ್ಕ ಮದ್ದು ಯಾವುದೆಂದೂ ದೇವರಿಗೆ ಚೆನ್ನಾಗಿ ಗೊತ್ತು. ಅದರ ಮುಂದೆ ಮಾನವರು ಕೊಡುವ ಪರಿಹಾರಗಳು, ಗುಂಡೇಟಿಗೆ ಹಾಕಿದ ಚಿಕ್ಕ ಬ್ಯಾಂಡೇಜ್ನಂತಿವೆ. ಬ್ಯಾಂಡೇಜ್ ಗಾಯವನ್ನು ಮರೆಮಾಡಬಹುದು, ವಾಸಿಮಾಡಸಾಧ್ಯವಿಲ್ಲ, ನೋವನ್ನು ನಿವಾರಿಸಸಾಧ್ಯವಿಲ್ಲ.
ಆತನು ‘ಕನಿಕರವೂ ದಯೆಯೂ ಪ್ರೀತಿಯೂ ಉಳ್ಳ ದೇವರು.’ (ವಿಮೋಚನಕಾಂಡ 34:6) ಬೈಬಲ್ ಇಲ್ಲಿ ಬಳಸುವ “ಕನಿಕರ” ಎಂಬ ಪದದಲ್ಲಿ, ಒಬ್ಬನ ನೆರವಿಗೆ ಹೋಗಲು ಪ್ರಚೋದಿಸುವ ಅನುಕಂಪದ ಸಾರ ಇದೆ. “ದಯೆ” ಎಂದು ಭಾಷಾಂತರಗೊಂಡ ಪದಕ್ಕೆ ಹೀಬ್ರುವಿನಲ್ಲಿ “ಹೃತ್ಪೂರ್ವಕವಾಗಿ ಸ್ಪಂದಿಸಿ ಒಬ್ಬನ ಅಗತ್ಯಕ್ಕೆ ತಕ್ಕ ನೆರವನ್ನು ಕೊಡುವುದು” ಎಂಬ ಅರ್ಥವಿದೆ. “ಪ್ರೀತಿ” ಎಂದು ಭಾಷಾಂತರಿಸಿರುವ ಪದಕ್ಕೆ ತಿಯಲಾಜಿಕಲ್ ಡಿಕ್ಷನರಿ ಆಫ್ ದ ಓಲ್ಡ್ ಟೆಸ್ಟಮೆಂಟ್ ಎಂಬ ಪುಸ್ತಕದಲ್ಲಿ, “ಕಷ್ಟದಿಂದ ಅಥವಾ ದುರ್ಘಟನೆಗಳಿಂದ ನರಳುತ್ತಿರುವವನಿಗೆ ನೆರವಾಗುವುದು” ಎಂಬ ಅರ್ಥವೂ ಕೊಡಲಾಗಿದೆ. ನಮ್ಮ ಕಷ್ಟ ನೋಡಿ ಯೆಹೋವ ದೇವರಿಗೆ ನೋವಾಗುತ್ತದೆ ಮಾತ್ರವಲ್ಲ ತನ್ನಲ್ಲಿರುವ ಕನಿಕರ, ದಯೆ, ಪ್ರೀತಿಯ ನಿಮಿತ್ತ ನಮಗೆ ನೆರವು ನೀಡಲು ಮುಂದೆ ಬಂದೇ ಬರುತ್ತಾನೆ. ಆದ್ದರಿಂದ ಕಷ್ಟಕಾರ್ಪಣ್ಯಗಳಿಗೆ ಆತನು ಕೊನೆ ತಂದೇ ತರುತ್ತಾನೆ ಎಂದು ಭರವಸೆಯಿಂದ ಹೇಳಬಲ್ಲೆವು.
ಹಿಂದಿನ ಲೇಖನದಲ್ಲಿ, ಮಾನವನ ಕಷ್ಟಕ್ಕೆ ಕಾರಣವಾಗಿರುವ ಮೂರು ಮುಖ್ಯ ಅಂಶಗಳನ್ನು ನೋಡಿದೆವು. ಯಾವ ರೀತಿಯಲ್ಲೂ ದೇವರಿದಕ್ಕೆ ಕಾರಣನಲ್ಲ ಎನ್ನುವುದು ನಿಶ್ಚಯ. ಈಗ ಆ ಅಂಶಗಳ ಹಿಂದಿರುವ ಕಾರಣ ನೋಡೋಣ. (g11-E 07)
ವೈಯಕ್ತಿಕ ಆಯ್ಕೆಗಳು
ಆದಿಯಲ್ಲಿ ದೇವರ ಆಳ್ವಿಕೆಯಡಿ ಇದ್ದ ಆದಾಮ ಆಯ್ಕೆ ಮಾಡುವ ಸಂದರ್ಭ ಬಂದಾಗ ಅದನ್ನು ನಿರಾಕರಿಸಿ ಸ್ವತಂತ್ರ ಜೀವನ ನಡೆಸಿದರೆ ಏನಾಗಬಹುದೆಂದು ನೋಡಲು ನಿರ್ಧರಿಸಿದನು. ಆಜ್ಞೆ ಮೀರಿದರೆ “ಸತ್ತೇ ಹೋಗುವಿ” ಎಂದು ದೇವರು ಕೊಟ್ಟ ಎಚ್ಚರಿಕೆಯನ್ನು ಅವನು ಕಿವಿಗೆ ಹಾಕಿಕೊಳ್ಳಲಿಲ್ಲ. (ಆದಿಕಾಂಡ 2:17) ಹೀಗೆ ದೇವರ ಪರಿಪೂರ್ಣ ಆಳ್ವಿಕೆಗೆ ಅಧೀನತೆ ತೋರಿಸಲು ಅವನು ನಿರಾಕರಿಸಿದ್ದರಿಂದ ಪಾಪ, ಮರಣ ಮಾನವನ ಇತಿಹಾಸದಲ್ಲಿ ಕಾಲಿಟ್ಟಿತು. “ಒಬ್ಬ ಮನುಷ್ಯನಿಂದ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಪ್ರವೇಶಿಸಿದಂತೆಯೇ, ಎಲ್ಲರೂ ಪಾಪಮಾಡಿದ್ದರಿಂದ ಮರಣವು ಎಲ್ಲರಲ್ಲಿಯೂ ವ್ಯಾಪಿಸಿತು” ಎಂದು ವಿವರಿಸುತ್ತದೆ ಬೈಬಲ್. (ರೋಮನ್ನರಿಗೆ 5:12) ದೇವರು ಪಾಪದ ಎಲ್ಲಾ ದುಷ್ಪರಿಣಾಮಗಳನ್ನು ತೆಗೆದುಹಾಕಲಿದ್ದಾನೆ.
ಅನಿರೀಕ್ಷಿತ ಘಟನೆಗಳು
ಆದಾಮನು ದೈವಿಕ ಮಾರ್ಗದರ್ಶನ ನಿರಾಕರಿಸಿದನು ಎಂದು ನೋಡಿದೆವು. ಹೀಗೆ ನೈಸರ್ಗಿಕ ವಿಪತ್ತಿನಂಥ ಆಪತ್ತುಗಳಿಂದ ಸಂರಕ್ಷಣೆ ನೀಡಬಲ್ಲ ಅತ್ಯಮೂಲ್ಯ ಮಾರ್ಗದರ್ಶನವನ್ನು ತಿರಸ್ಕರಿಸಿದನು. ಅವನನ್ನು ನುರಿತ ವೈದ್ಯರ ಸಲಹೆಸೂಚನೆಗಳನ್ನು ಧಿಕ್ಕರಿಸುವ ರೋಗಿಗೆ ಹೋಲಿಸಬಹುದು. ಈ ರೋಗಿಯ ಆರೋಗ್ಯಕ್ಕಿರುವ ಅಪಾಯ, ಮುಂದೆ ಬರಬಲ್ಲ ಸಮಸ್ಯೆಗಳ ಕುರಿತು ವೈದ್ಯರಿಗೆ ತಿಳಿದಿದೆ. ವೈದ್ಯರ ಸಲಹೆಯನ್ನು ಧಿಕ್ಕರಿಸುವಲ್ಲಿ ಅದರ ಪರಿಣಾಮವನ್ನು ರೋಗಿ ಅನುಭವಿಸಲೇಬೇಕು. ಅದೇ ರೀತಿ ಇಂದು ಮಾನವನು ದೇವರ ಮಾರ್ಗದರ್ಶನವನ್ನು ಕಡೆಗಣಿಸಿ ಪೃಥ್ವಿಯನ್ನು ದುರುಪಯೋಗಿಸುತ್ತಾ, ಅಸುರಕ್ಷಾ ಕಟ್ಟಡಗಳನ್ನು ಕಟ್ಟಿ, ನಿಸರ್ಗದ ಎಚ್ಚರಿಕೆಗಳನ್ನು ಅಸಡ್ಡೆ ಮಾಡುತ್ತಿರುವುದರಿಂದ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಆದರೆ ಪರಿಸ್ಥಿತಿ ಹೀಗೆಯೇ ಮುಂದುವರಿಯಲು ದೇವರು ಬಿಡುವುದಿಲ್ಲ.
“ಈ ಲೋಕದ ಅಧಿಪತಿ”
ಮೊದಲ ಮಾನವ ಜೋಡಿಯ ದಂಗೆಯನ್ನು ಚಿತಾಯಿಸಿದ ಸೈತಾನನಿಗೆ ಈ ವರೆಗೂ ಲೋಕವನ್ನು ಆಳಲು ದೇವರೇಕೆ ಬಿಟ್ಟಿದ್ದಾನೆ? “ಯಾವುದೇ ಸರಕಾರ ಅಧಿಕಾರಕ್ಕೆ ಬಂದ ಹೊಸದರಲ್ಲಿ ಎಲ್ಲಾ ಸಮಸ್ಯೆಗಳಿಗೆ ಮಾಜಿ ಸರಕಾರವೇ ಕಾರಣವೆಂದು ಆರೋಪ ಹೊರಿಸಬಹುದು” ಎನ್ನುತ್ತದೆ ಒಂದು ಮಾಹಿತಿ ಮೂಲ. ‘ಈ ಲೋಕದ ಅಧಿಪತಿಯಾದ’ ಸೈತಾನನಿಗೆ ಆಳಲು ಸಾಕಷ್ಟು ಸಮಯ ಕೊಡದೆ ಹೋಗಿದ್ದಲ್ಲಿ ತನ್ನ ವೈಫಲ್ಯಗಳಿಗೆ ಮುಂಚೆ ಆಳುತ್ತಿದ್ದ ದೇವರೇ ಕಾರಣನೆಂದು ಅವನು ಆರೋಪಿಸುವ ಸಾಧ್ಯತೆಯಿತ್ತು. (ಯೋಹಾನ 12:31) ಆದರೆ ಯೆಹೋವ ದೇವರು ಅದಕ್ಕೆ ಅವಕಾಶ ಕೊಡದೆ ಸೈತಾನನು ತನ್ನ ಅಧಿಕಾರವನ್ನು ಭೂಮಿಯ ಮೇಲೆ ಸಂಪೂರ್ಣವಾಗಿ ಚಲಾಯಿಸಲು ಸಮಯ ಕೊಟ್ಟನು. ಹೀಗೆ ಅಧಿಪತಿಯಾಗಿ ಉಳಿಯುವ ಯೋಗ್ಯತೆ ಸೈತಾನನಿಗಿಲ್ಲ ಎಂದು ರುಜುವಾಯಿತು. ಆದರೆ ಒಂದು ಪ್ರಶ್ನೆ ಬಾಕಿ ಇದೆ: ಕಷ್ಟಕಾರ್ಪಣ್ಯ ಖಂಡಿತ ಕೊನೆಯಾಗಲಿದೆ ಎಂದು ಹೇಗೆ ಹೇಳಬಲ್ಲೆವು?
[ಪುಟ 6ರಲ್ಲಿರುವ ಚಿತ್ರ]
ರಕ್ತ ಒಸರುವ ಗುಂಡೇಟಿಗೆ ವೈದ್ಯರು ಒಂದು ಚಿಕ್ಕ ಬ್ಯಾಂಡೇಜ್ ಹಾಕುವರೆ?