ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಕಪ್ಪಾ ಸಾಕು ಈ ಕಷ್ಟಗಳು. . .

ಸಾಕಪ್ಪಾ ಸಾಕು ಈ ಕಷ್ಟಗಳು. . .

ಸಾಕಪ್ಪಾ ಸಾಕು ಈ ಕಷ್ಟಗಳು. . .

ಕಿಯೂವಿನ ಕಷ್ಟಗಳ ಸುರಿಮಳೆ ಆರಂಭವಾದದ್ದು ಅವನ ತಂದೆಯ ಕೊಲೆಯಾದಾಗ. ದನಗಳನ್ನು ಪಕ್ಕದ ಹೊಲದಲ್ಲಿ ಮೇಯಲು ಬಿಟ್ಟರೆಂಬ ಕಾರಣಕ್ಕೆ ಅವರನ್ನು ಕೊಲ್ಲಲಾಗಿತ್ತು. ಅವನ ತಾಯಿ, ಇಬ್ಬರು ತಂಗಿಯರು ಕ್ಯಾಂಬೋಡಿಯದ ಖ್ಮೇರ್‌ ರೂಜ್‌ ಕಮ್ಯೂನಿಸ್ಟ್‌ ಪಕ್ಷದ ಕ್ರೌರ್ಯಕ್ಕೆ ಬಲಿಯಾದರು. ಇದರ ಬೆನ್ನಿಗೆ ಕಿಯೂ ನೆಲಬಾಂಬ್‌ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡನು. ನೆರವಿಗಾಗಿ ಕಾಯುತ್ತಾ ದಟ್ಟ ಕಾಡಿನಲ್ಲಿ ಬಿದ್ದುಕೊಂಡಿದ್ದ ಅವನಿಗೆ ನೆರವು ಸಿಕ್ಕಿದ್ದು 16 ದಿನಗಳ ನಂತರ. ಗಾಯಗೊಂಡ ಅವನ ಕಾಲನ್ನು ಕತ್ತರಿಸಿ ತೆಗೆಯಬೇಕಾಯಿತು. “ಸಾವು ಬಂದಿದ್ರೆ ಒಳ್ಳೇದಿತ್ತು ಎಂದು ಆಶಿಸುತ್ತಿದ್ದೆ” ಎನ್ನುತ್ತಾನೆ ಕಿಯೂ.

ಕಷ್ಟಕಾರ್ಪಣ್ಯದಿಂದ ಯಾರೊಬ್ಬರೂ ಮುಕ್ತರಲ್ಲ. ನೈಸರ್ಗಿಕ ವಿಪತ್ತು, ಕಾಯಿಲೆ, ಪಾತಕಗಳಂಥ ಕಷ್ಟಗಳು ಯಾರ ಮೇಲಾದರೂ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಬಂದೆರಗಬಹುದು. ಈ ಎಲ್ಲ ಕಷ್ಟಗಳನ್ನು ನೀಗಿಸಲು, ಕಡಿಮೆಪಕ್ಷ ಹಗುರಗೊಳಿಸಲು ಜನೋಪಕಾರಿ ಸಂಸ್ಥೆಗಳು ಹಗಲುರಾತ್ರಿ ಒಂದುಮಾಡಿ ದುಡಿಯುತ್ತವೆ. ಆದರೆ ಅದರಿಂದ ಎಷ್ಟು ಪ್ರಯೋಜನವಾಗಿದೆ?

ಉದಾಹರಣೆಗೆ ಆಹಾರ ಅಭಾವವನ್ನು ನೀಗಿಸಲು ಸಂಸ್ಥೆಗಳು ಶ್ರಮಿಸುತ್ತಿವೆ. ಟೊರಾಂಟೋ ಸ್ಟಾರ್‌ ವಾರ್ತಾಪತ್ರಿಕೆಗನುಸಾರ ಎಷ್ಟೋ ಜನರು ನೈಸರ್ಗಿಕ ವಿಪತ್ತುಗಳಿಗೆ ತುತ್ತಾಗಿ ಮನೆಮಠ ಕಳೆದುಕೊಂಡು ಹೊಟ್ಟೆಗಿಲ್ಲದೆ ಇದ್ದಾರೆ. “ಹಲವಾರು ಸಂಸ್ಥೆಗಳು ಆ ಜನರಿಗೆ ಆಹಾರ ಒದಗಿಸಲು ಮುಂದೆ ಬಂದರೂ ಅಲ್ಲಿನ ಹಲ್ಲೆ ಆಕ್ರಮಣಗಳಿಂದಾಗಿ ಅವರ ಪ್ರಯತ್ನಗಳಿಗೆ ಅಡ್ಡಿಯಾಗುತ್ತಿದೆ” ಎನ್ನುತ್ತದೆ ಅದೇ ಪತ್ರಿಕೆ.

ರಾಜಕೀಯ, ಸಾಮಾಜಿಕ, ವೈದ್ಯಕೀಯ ರಂಗದ ಮುಂದಾಳುಗಳು ಕೈಲಾದ ಪ್ರಯತ್ನ ಮಾಡಿದರೂ ಕಷ್ಟಗಳು ಮಾನವನ ಬೆನ್ನುಬಿಟ್ಟಿಲ್ಲ. ಆರ್ಥಿಕ ಅಭಿವೃದ್ಧಿಗಾಗಿ ಎಷ್ಟೋ ಕ್ರಮಗಳು ಜಾರಿಗೆ ಬಂದಿವೆ ಬಡತನವಂತೂ ನಿರ್ಮೂಲವಾಗಿಲ್ಲ. ನವನವೀನ ಲಸಿಕೆಗಳು, ಔಷಧಿಗಳು, ಶಸ್ತ್ರಚಿಕಿತ್ಸೆಯ ಆಧುನಿಕ ವಿಧಾನಗಳನ್ನು ಕಂಡುಹಿಡಿಯಲಾಗಿದೆ, ಕಾಯಿಲೆಯಂತೂ ಕೊನೆಗೊಂಡಿಲ್ಲ. ಶಾಂತಿ ಪಡೆಗಳು, ಪೊಲೀಸರು ಕಾನೂನು-ಶಿಸ್ತನ್ನು ಕಾಪಾಡಲು ಶ್ರಮಿಸುತ್ತಿದ್ದರೂ ಎಲ್ಲೆಮೀರುತ್ತಿರುವ ಕ್ರೂರ ಪಾತಕಗಳನ್ನು ತಡೆಯಲಾಗದೆ ಕೈಚೆಲ್ಲಿ ಕುಳಿತಿದ್ದಾರೆ.

ಯಾಕಿದೆ ಇಷ್ಟೆಲ್ಲಾ ಕಷ್ಟ-ನೋವು? ಮಾನವನ ನರಳಾಟ ನೋಡಿ ದೇವರಿಗೆ ಏನೂ ಅನಿಸುವುದಿಲ್ಲವೇ? ಜನರನ್ನು ಕಾಡುತ್ತಿರುವ ಈ ಪ್ರಶ್ನೆಗಳಿಗೆ ಬೈಬಲ್‌ನಲ್ಲಿ ಉತ್ತರವಿದೆ. ಲಕ್ಷಗಟ್ಟಲೆ ಜನರಿಗೆ ಸಾಂತ್ವನ ಕೊಟ್ಟ ಈ ಉತ್ತರಗಳನ್ನು ನಾವೀಗ ನೋಡೋಣ. (g11-E 07)