ಸೋಶಿಯಲ್ ನೆಟ್‌ವರ್ಕಿಂಗ್ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 2
ಯುವಜನರ ಪ್ರಶ್ನೆ
ಸೋಶಿಯಲ್ ನೆಟ್‌ವರ್ಕಿಂಗ್ ಬಗ್ಗೆ ನನಗೆಲ್ಲ ತಿಳಿದಿದೆಯಾ? ಭಾಗ 2
ಕೆಳಗಿನ ವಿಷಯಗಳಿಗೆ ನೀವು ಕೊಡುವ ಆದ್ಯತೆಗನುಸಾರ 1, 2, 3, 4 ಎಂದು ಗುರುತಿಸಿ.
___ ನನ್ನ ಖಾಸಗಿ ವಿವರಗಳು
___ ನನ್ನ ಸಮಯ
___ ನನ್ನ ಹೆಸರು
___ ನನ್ನ ಸ್ನೇಹಿತರು
ಮೇಲೆ ನೀವು ಯಾವುದಕ್ಕೆ ಮೊದಲ ಆದ್ಯತೆ ಕೊಟ್ಟಿರಿ? ನಿಮ್ಮ ಜೀವನದ ಆ ಬಹುಮುಖ್ಯ ಅಂಶ ಮಾತ್ರವೇ ಅಲ್ಲ ಇತರ ಮೂರು ಅಂಶಗಳಿಗೂ ನಿಮ್ಮ ಸೋಶಿಯಲ್ ನೆಟ್‌ವರ್ಕ್ ಬಳಕೆ ಕಂಟಕವಾಗುವ ಸಾಧ್ಯತೆ ಇದೆ.
ನಿಮಗೆ ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಒಂದು ಖಾತೆ ಇರಲೇಬೇಕೇ? ನೀವು ಹೆತ್ತವರ ಜೊತೆಗೆ ವಾಸಿಸುತ್ತಿರುವಲ್ಲಿ ಅವರು ಅದನ್ನು ನಿರ್ಧರಿಸಬೇಕು. * (ಜ್ಞಾನೋಕ್ತಿ 6:20) ಇಂಟರ್‌ನೆಟ್‌ನ ಇನ್ನಿತರ ಬಳಕೆಯಂತೆ ಸೋಶಿಯಲ್ ನೆಟ್‌ವರ್ಕಿಂಗ್‌ನಿಂದ ಒಳಿತೂ ಇದೆ ಕೆಡುಕೂ ಇದೆ. ಖಾತೆ ತೆರೆಯುವುದು ಹೆತ್ತವರಿಗೆ ಇಷ್ಟವಿಲ್ಲದಿದ್ದಲ್ಲಿ ತೆರೆಯಬೇಡಿ, ಅವರ ಮಾತು ಕೇಳಿ.—ಎಫೆಸ 6:1.
ಆದರೆ ಸೋಶಿಯಲ್ ನೆಟ್‌ವರ್ಕ್‌ನಲ್ಲಿ ಖಾತೆ ತೆರೆಯಲು ಹೆತ್ತವರು ಅನುಮತಿ ನೀಡಿರುವಲ್ಲಿ, ನೀವದನ್ನು ಬಳಸುವಾಗ ಅಪಾಯಗಳಿಂದ ಹೇಗೆ ದೂರವಿರಬಲ್ಲಿರಿ? ಖಾಸಗಿ ವಿವರಗಳು ಮತ್ತು ಅಮೂಲ್ಯ ಸಮಯ ಎಂಬ ಅಂಶಗಳನ್ನು ಹಿಂದಿನ ಲೇಖನದಲ್ಲಿ ಚರ್ಚಿಸಿದೆವು. ಈಗ ನಿಮ್ಮ ಹೆಸರು ಮತ್ತು ಸ್ನೇಹಸಂಬಂಧಗಳು ಎಂಬ ಇನ್ನೆರಡು ಅಂಶಗಳ ಬಗ್ಗೆ ಚರ್ಚಿಸೋಣ.
ಒಳ್ಳೇ ಹೆಸರು
ನಿಮಗಿರುವ ಒಳ್ಳೇ ಹೆಸರನ್ನು ಉಳಿಸಿಕೊಳ್ಳುವುದರ ಅರ್ಥ ನಿಮ್ಮ ಬಗ್ಗೆ ತಪ್ಪು ಕಲ್ಪನೆ ಹುಟ್ಟಲು ಆಸ್ಪದ ಕೊಡದಿರುವುದೇ. ಉದಾಹರಣೆಗೆ ನಿಮಗೊಂದು ಹೊಚ್ಚ ಹೊಸ ಕಾರು ಇದೆಯೆಂದು ನೆನಸಿ. ಒಂದೇ ಒಂದು ಗೀರು, ಕಲೆ ಇಲ್ಲದೆ ಫಳಫಳ ಹೊಳೆಯುತ್ತಿದೆ. ಅದು ಹಾಗೇ ಉಳಿಯುವಂತೆ ನೀವು ಬಯಸುವುದಿಲ್ಲವೇ? ನಿಮ್ಮ ಅಜಾಗ್ರತೆಯಿಂದ ಅಪಘಾತ ನಡೆದು ಆ ಕಾರು ನಜ್ಜುಗುಜ್ಜಾದರೆ ನಿಮಗೆ ಹೇಗನಿಸೀತು?
ನಿಮ್ಮ ಒಳ್ಳೇ ಹೆಸರಿಗೂ ಹಾಗಾಗುವ ಸಾಧ್ಯತೆ ಇದೆ ಸೋಶಿಯಲ್ ನೆಟ್‌ವರ್ಕ್‌ನಲ್ಲಿ. ಕ್ಲಾರ ಎಂಬ ಹುಡುಗಿಯ ಪ್ರಕಾರ “ಒಂದೇ ಫೋಟೋ, ಹೇಳಿಕೆ ಸಾಕು ಹೆಸ್ರು ಹಾಳಾಗಲು.” ನಿಮ್ಮ ಹೆಸರಿಗೆ ಕಪ್ಪುಚುಕ್ಕೆ ತರಬಲ್ಲ ಕೆಲವು ವಿಷಯಗಳನ್ನು ಈಗ ಪರಿಗಣಿಸೋಣ.
● ನಿಮ್ಮ ಫೋಟೋಗಳು. “ಎಲ್ಲರ ದೃಷ್ಟಿಯಲ್ಲಿ ಒಳ್ಳೇದಾಗಿರುವುದನ್ನೇ ಮಾಡಿರಿ” ಎನ್ನುತ್ತದೆ ಬೈಬಲ್. (ರೋಮನ್ನರಿಗೆ 12:17) ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಲ್ಲಿ ಬೇರೆಯವರ ಫೋಟೋಗಳನ್ನು ನೋಡಿರುವಲ್ಲಿ ಏನನ್ನು ಗಮನಿಸಿದ್ದೀರಿ?
“ನಾನು ತುಂಬ ಗೌರವಿಸ್ತಿದ್ದ ಕೆಲವು ಜನ್ರು ಕುಡ್ದು ಮತ್ತರಾದ ಸ್ಥಿತಿಯಲ್ಲಿರೋ ಫೋಟೋಗಳನ್ನು ನೋಡಿದ್ದೇನೆ.”—ಅಮೂಲ್ಯ, 19.
“ನನಗೆ ಪರಿಚಯವಿರೋ ಕೆಲವು ಹುಡುಗೀರು ಅಸಹ್ಯವಾಗಿ ಪೋಸ್ ಕೊಟ್ಟಿರೋ ಫೋಟೋಗಳು ಸೋಶಿಯಲ್ ನೆಟ್‌ವರ್ಕ್ ಪೇಜಲ್ಲಿರುತ್ತೆ. ಬೇರೆ ಸಮಯದಲ್ಲಿ ಅವರೆಷ್ಟು ಸಭ್ಯರಾಗಿ ಇರ್ತಾರೆ ಗೊತ್ತಾ!”—ಕ್ಲಾರ, 19.
(1) ಕಾಮ ಪ್ರಚೋದಕ ಉಡುಗೆ ತೊಡುಗೆಯಲ್ಲಿರುವ (2) ಕುಡಿದು ಮತ್ತರಾದ ಸ್ಥಿತಿಯಲ್ಲಿರುವ ವ್ಯಕ್ತಿಯ ಫೋಟೋವನ್ನು ಸೋಶಿಯಲ್ ನೆಟ್‌ವರ್ಕಿಂಗ್ ಸೈಟಲ್ಲಿ ನೋಡಿದಾಗ ನಿಮಗೆ ಅವರ ಬಗ್ಗೆ ಯಾವ ಅಭಿಪ್ರಾಯ ಮೂಡುತ್ತದೆ?
1 ․․․․․
2 ․․․․․
● ನಿಮ್ಮ ಹೇಳಿಕೆಗಳು. “ನಿಮ್ಮ ಬಾಯಿಂದ ಯಾವ ಹೊಲಸು ಮಾತೂ ಹೊರಡದಿರಲಿ” ಎನ್ನುತ್ತದೆ ಬೈಬಲ್. (ಎಫೆಸ 4:29) ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳಲ್ಲಿ ನಡೆಯುವ ಚರ್ಚೆಗಳಲ್ಲಿ ಅಶ್ಲೀಲ ಭಾಷೆ, ಹಾಳು ಹರಟೆ, ಅನೈತಿಕ ವಿಚಾರಗಳು ಒಳನುಸುಳುವುದನ್ನು ಕೆಲವರು ಗಮನಿಸಿದ್ದಾರೆ.
“ಸೋಶಿಯಲ್ ನೆಟ್‌ವರ್ಕಿಂಗ್‌ನಲ್ಲಿ ಜನರು ಮುಲಾಜಿಲ್ಲದೆ ಏನು ಬೇಕಾದ್ರೂ ‘ಪೋಸ್ಟ್’ ಮಾಡ್ತಾರೆ. ಮಾತಾಡ್ವಾಗ ತುಂಬ ಕೆಟ್ಟದಾಗಿ ಅನಿಸುವ ಪದಗಳು ಬರಿವಾಗ ಅಷ್ಟೊಂದು ಕೆಟ್ಟದೆಂದು ಅವರಿಗನಿಸಲ್ಲ. ಅವು ಬೈಗುಳ ಇರಲಿಕ್ಕಿಲ್ಲ ಆದ್ರೆ ಚೆಲ್ಲಾಟ, ಹುಚ್ಚು ಧೈರ್ಯ, ಅಶ್ಲೀಲತೆ ಎಲ್ಲ ಇರುತ್ತೆ.”—ದೀಪಿಕಾ, 19.
ಕಂಪ್ಯೂಟರ್‌ನಲ್ಲಿ ಎಗ್ಗಿಲ್ಲದೆ ಏನು ಬೇಕಾದರೂ ಬರೆಯಬಹುದೆಂದು ಜನರೇಕೆ ನೆನಸುತ್ತಾರೆ? ನಿಮ್ಮ ಅಭಿಪ್ರಾಯವೇನು?
․․․․․
ನೀವು ಹಾಕುವ ಫೋಟೋಗಳು, ಹೇಳಿಕೆಗಳಿಂದ ಏನಾದರೂ ಕೆಡುಕಾಗುವುದೇ? ಹೌದು! 19 ವರ್ಷದ ಜಾಹ್ನವಿ ಹೇಳುತ್ತಾಳೆ: “ಕಾಲೇಜಲ್ಲಿ ಎಲ್ರ ಬಾಯಲ್ಲೂ ಇದೇ ಮಾತು. ಕೆಲ್ಸ ಕೊಡೋರು ಅರ್ಜಿದಾರರ ವೆಬ್ ಪೇಜ್ ನೋಡಿ ಅವ್ರ ಗುಣನಡತೆಯನ್ನು ಅಳಿತಾರೆ ಅಂತ ಮಾತಾಡ್ತಿದ್ದೆವು.”
ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳುವಾಗ ತಾನು ಇದನ್ನೇ ಮಾಡುತ್ತೇನೆಂದು ಡಾ. ಬಿ. ಜೆ. ಫಾಗ್ ಫೇಸ್‌ಬುಕ್ ಫಾರ್ ಪೇರೆಂಟ್ಸ್ ಎಂಬ ಪುಸ್ತಕದಲ್ಲಿ ಹೇಳುತ್ತಾರೆ. “ಕೆಲ್ಸಕ್ಕೆ ಸೇರಿಸಿಕೊಳ್ಳುವ ಮುಂಚೆ ಸರಿಯಾದ ನಿರ್ಣಯಮಾಡಲು ಇದು ತುಂಬ ಸಹಾಯಕಾರಿ. . . . ಒಬ್ಬ ಅರ್ಜಿದಾರನ [ವೆಬ್ ಪೇಜ್] ಪ್ರೊಫೈಲನ್ನು ನೋಡಿದಾಗ ಅದ್ರಲ್ಲಿ ಬೇಡದ ವಿಷಯಗಳೇ ತುಂಬಿಕೊಂಡಿದ್ದರೆ ನಾನು ಇಂಪ್ರೆಸ್ ಆಗಲ್ಲ. ಆ ವ್ಯಕ್ತಿಯನ್ನು ಕೆಲ್ಸಕ್ಕೆ ಇಟ್ಟುಕೊಳ್ಳೋದಿಲ್ಲ. ಏಕೆಂದ್ರೆ ನನ್ನ ಜೊತೆ ಕೆಲ್ಸ ಮಾಡುವವರಿಗೆ ಒಳ್ಳೇ ವಿವೇಚನೆ ಇರಬೇಕೆನ್ನುವುದು ನನ್ನಾಸೆ” ಎನ್ನುತ್ತಾರೆ ಅವರು.
ನೀವೊಬ್ಬ ಯೆಹೋವನ ಸಾಕ್ಷಿಯಾಗಿರುವಲ್ಲಿ ಗಂಭೀರವಾಗಿ ಯೋಚಿಸಬೇಕಾದ ಇನ್ನೊಂದು ವಿಷಯವಿದೆ. ನೀವು ಸೈಟ್‌ನಲ್ಲಿ ಹಾಕುವ ವಿಷಯಗಳು ನಿಮ್ಮ ಜೊತೆ ವಿಶ್ವಾಸಿಗಳ, ಇತರರ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂದು ಪರಿಗಣಿಸಬೇಕು. ಏಕೆಂದರೆ “ನಾವು ಯಾವುದೇ ವಿಧದಲ್ಲಿ ಎಡವಲು ಯಾವುದೇ ಕಾರಣವನ್ನು ಕೊಡುತ್ತಿಲ್ಲ” ಎಂಬದನ್ನು ಖಚಿತಪಡಿಸಿಕೊಳ್ಳಬೇಕು ಎಂದನು ಅಪೊಸ್ತಲ ಪೌಲ.—2 ಕೊರಿಂಥ 6:3; 1 ಪೇತ್ರ 3:16.
ನೀವೇನು ಮಾಡಬಹುದು?
ಸೋಶಿಯಲ್ ನೆಟ್‌ವರ್ಕ್ ಬಳಸಲು ಹೆತ್ತವರು ಅನುಮತಿ ನೀಡಿರುವಲ್ಲಿ ನೀವು ಹಾಕಿರುವ ಫೋಟೋಗಳ ಮೇಲೆ ಮತ್ತೊಮ್ಮೆ ಕಣ್ಣಾಡಿಸಿ ಹೀಗೆ ಕೇಳಿಕೊಳ್ಳಿ: ‘ಈ ಫೋಟೋಗಳು ನನ್ನ ಬಗ್ಗೆ ಜನರ ಮನಸ್ಸಿನಲ್ಲಿ ಯಾವ ಅಭಿಪ್ರಾಯ ಮೂಡಿಸಬಹುದು? ಇದೇ ಅಭಿಪ್ರಾಯ ಮೂಡಬೇಕೆನ್ನುವುದು ನನ್ನಿಷ್ಟವಾ? ಈ ಫೋಟೋಗಳನ್ನು ನನ್ನ ಹೆತ್ತವರು, ಕ್ರೈಸ್ತ ಹಿರಿಯರು, ಭಾವೀ ಧಣಿ ನೋಡಿದರೆ ಅವರ ಮುಂದೆ ನಾನು ತಲೆತಗ್ಗಿಸುವ ಪರಿಸ್ಥಿತಿ ಬರಬಹುದೇ?’ ಈ ಕೊನೆ ಪ್ರಶ್ನೆಗೆ ನೀವು ಹೌದೆಂದು ಉತ್ತರ ಕೊಡುವಲ್ಲಿ ತಕ್ಷಣ ಬೇಕಾದ ಬದಲಾವಣೆ ಮಾಡಿ. 21ರ ಹರೆಯದ ಕೀರ್ತಿ ಕೂಡ ಇದನ್ನೇ ಮಾಡಿದಳು. “ಪ್ರೊಫೈಲಲ್ಲಿ ನಾನು ಹಾಕಿರೋ ನನ್ನ ಫೋಟೋಗಳನ್ನು ನಮ್ಮ ಕ್ರೈಸ್ತ ಸಭೆಯ ಹಿರಿಯರೊಬ್ಬರು ನೋಡಿ ನನ್ನೊಟ್ಟಿಗೆ ಮಾತಾಡಿದ್ರು. ಅವರಿಗೆ ತುಂಬ ಧನ್ಯವಾದ, ಏಕೆಂದ್ರೆ ನನ್ನ ಹೆಸ್ರು ಹಾಳಾಗ್ಬಾರ್ದು ಅನ್ನೋದು ಅವರ ಉದ್ದೇಶವಾಗಿತ್ತು” ಎನ್ನುತ್ತಾಳೆ ಕೀರ್ತಿ.
ನೀವು ವೆಬ್ ಪೇಜ್‌ಗೆ ಹಾಕಿರುವ ಹೇಳಿಕೆಗಳನ್ನು ಮತ್ತು ಬೇರೆಯವರು ನಿಮ್ಮ ಪೇಜ್‌ಗೆ ‘ಪೋಸ್ಟ್’ ಮಾಡಿರುವ ಹೇಳಿಕೆಗಳನ್ನು ಕೂಡ ಜಾಗ್ರತೆಯಿಂದ ಓದಿ. “ಹುಚ್ಚುಮಾತು” ಅಥವಾ “ಅಶ್ಲೀಲವಾದ ತಮಾಷೆ” ನಿಮ್ಮ ಪೇಜಲ್ಲಿ ಕಂಡುಬಂದರೆ ಅಲಕ್ಷ್ಯಮಾಡಬೇಡಿ. (ಎಫೆಸ 5:3, 4) “ಕೆಲವೊಮ್ಮೆ ಜನ್ರು ಕೆಟ್ಟ ಕೆಟ್ಟ, ಡಬಲ್ ಮೀನಿಂಗ್ ಇರೋ ಪದಗಳನ್ನ ನಮ್ಮ ಪೇಜಲ್ಲಿ ಪೋಸ್ಟ್ ಮಾಡಿರ್ತಾರೆ. ಅದನ್ನು ಹಾಕಿದವ್ರು ನಾವಲ್ದಿದ್ರೂ ಅದು ನಮ್ಮ ಪೇಜಲ್ಲಿ ಇರೋದ್ರಿಂದ ನಮ್ಮ ಹೆಸ್ರೆ ಹಾಳಾಗೋದು” ಎನ್ನುತ್ತಾಳೆ ಜಾಹ್ನವಿ.
ನೀವು ಹಾಕುವ ಫೋಟೋ, ಹೇಳಿಕೆಗಳಿಂದಾಗಿ ನಿಮ್ಮ ಹೆಸರು ಹಾಳಾಗದಿರಲು ನಿಮಗೆ ನೀವೇ ಯಾವ ಕಟ್ಟುಪಾಡುಗಳನ್ನು ಇಟ್ಟುಕೊಳ್ಳುವಿರಿ?
․․․․․
ಸ್ನೇಹಿತರು
ಲಿಫ್ಟ್ ಕೇಳುವ ಯಾರನ್ನೇ ಆಗಲಿ ನಿಮ್ಮ ಹೊಚ್ಚ ಹೊಸ ಕಾರಿಗೆ ಹತ್ತಿಸಿಕೊಳ್ಳುವಿರಾ? ಹೆತ್ತವರು ನಿಮಗೆ ಸೋಶಿಯಲ್ ನೆಟ್‌ವರ್ಕ್ ಬಳಸಲು ಅನುಮತಿ ನೀಡಿರುವಲ್ಲಿ ಇಂಥದ್ದೇ ಪ್ರಶ್ನೆಗಳು ನಿಮ್ಮ ಮುಂದೆ ಬರುತ್ತವೆ: ನಿಮ್ಮ ಫ್ರೆಂಡ್ಸ್ ಲಿಸ್ಟ್‌ಗೆ ಯಾರನ್ನೆಲ್ಲ ಸೇರಿಸಿಕೊಳ್ಳುತ್ತೀರಾ? ಎಂಥವರ ಫ್ರೆಂಡ್ಸ್ ಲಿಸ್ಟ್‌ಗೆ ಸೇರುತ್ತೀರಾ?
“ಕೆಲವ್ರಿಗೆ ಆದಷ್ಟು ಹೆಚ್ಚು ಜನ್ರನ್ನು ಫ್ರೆಂಡ್ಸ್ ಮಾಡ್ಕೊಳ್ಳೋದೇ ಒಂದು ಹುಚ್ಚು. ಹೆಚ್ಚು ಫ್ರೆಂಡ್ಸ್ ಇದ್ದಷ್ಟು ಒಳ್ಳೇದು ಅನ್ನೋದು ಅವರೆಣಿಕೆ. ಅದಕ್ಕಾಗಿ ಅವ್ರು ಪರಿಚಯ ಇಲ್ದವ್ರನ್ನೂ ಫ್ರೆಂಡ್ಸ್ ಲಿಸ್ಟ್‌ಗೆ ಸೇರಿಸ್ಕೊಳ್ತಾರೆ.”—ನಯೀಶ, 16.
“ಎಂದೋ ಸಂಪರ್ಕ ಕಳಕೊಂಡ ಜನ್ರನ್ನು ಸೋಶಿಯಲ್ ನೆಟ್‌ವರ್ಕ್ ಹುಡುಕಿಕೊಡ್ತದೆ. ಆದ್ರೆ ಅವ್ರಲ್ಲಿ ಕೆಲವ್ರೊಂದಿಗೆ ಪುನಃ ಸಂಪರ್ಕ ಬೆಳೆಸದಿದ್ರೇನೇ ಒಳ್ಳೇದು.”—ಹೆಲೆನ್, 25.
ನೀವೇನು ಮಾಡಬಹುದು?
ಕಿವಿಮಾತು: ಪಟ್ಟಿಯನ್ನು ಪರಿಷ್ಕರಿಸಿ. ನಿಮ್ಮ ಫ್ರೆಂಡ್ಸ್ ಲಿಸ್ಟ್ ಮೇಲೆ ಕಣ್ಣಾಡಿಸಿ ಅಗತ್ಯವಿದ್ದಲ್ಲಿ ಪರಿಷ್ಕರಿಸಿ. ಪಟ್ಟಿಯಲ್ಲಿರುವ ಒಬ್ಬೊಬ್ಬರ ಬಗ್ಗೆಯೂ ಹೀಗೆ ಕೇಳಿಕೊಳ್ಳಿ:
1. ‘ನಿಜ ಬದುಕಿನಲ್ಲಿ ಈ ವ್ಯಕ್ತಿ ಎಂಥವನು?’
2. ‘ಯಾವ ರೀತಿಯ ಫೋಟೋಗಳನ್ನು, ಹೇಳಿಕೆಗಳನ್ನು ಹಾಕ್ತಾನೆ?’
3. ‘ಇವ್ನು ನನ್ನ ಬದುಕಿನಲ್ಲಿ ಒಳ್ಳೇ ಪರಿಣಾಮ ಬೀರುವವನಾ?’
“ಹೆಚ್ಚಾಗಿ ತಿಂಗಳಿಗೊಮ್ಮೆ ನನ್ನ ‘ಫ್ರೆಂಡ್ಸ್ ಲಿಸ್ಟ್’ ಪರಿಶೀಲಿಸ್ತೇನೆ. ಅದ್ರಲ್ಲಿ ನನಗಿಷ್ಟವಾಗದವ್ರು, ಅಷ್ಟೊಂದು ಪರಿಚಯವಿಲ್ಲದವ್ರು ಇದ್ರೆ ಅಂಥವ್ರ ಹೆಸ್ರನ್ನು ಲಿಸ್ಟ್‌ನಿಂದ ತೆಗೆದುಬಿಡ್ತೇನೆ.”—ವನಿತ, 17.
ಕಿವಿಮಾತು: ಸ್ನೇಹ ಬೆಳೆಸಲೊಂದು ಪಾಲಿಸಿ ಇರಲಿ. ನೀವು ಬೇರೆ ಸಮಯದಲ್ಲಿ ಯಾವ ರೀತಿಯಲ್ಲಿ ಸ್ನೇಹಿತರನ್ನು ಆಯ್ದುಕೊಳ್ಳುತ್ತೀರೋ ಅದೇ ಪಾಲಿಸಿ ಆನ್‌ಲೈನ್‌ನಲ್ಲೂ ಇರಲಿ, ಕೆಲವು ಕಟ್ಟುಪಾಡುಗಳಿರಲಿ. (1 ಕೊರಿಂಥ 15:33) 27ರ ಹರೆಯದ ಲವೀನಳ ಮಾತುಗಳನ್ನು ಕೇಳಿ: “ನನ್ನ ಪಾಲಿಸಿ ಏನೆಂದ್ರೆ, ನನಗೆ ಒಬ್ಬರ ಪರಿಚಯವಿಲ್ಲದಿದ್ರೆ ಫ್ರೆಂಡ್ಸ್ ಲಿಸ್ಟ್‌ಗೆ ಸೇರಿಕೊಳ್ಳೋ ಅವ್ರ ರಿಕ್ವೆಸ್ಟನ್ನು ಸ್ವೀಕರಿಸೋದಿಲ್ಲ. ಅವ್ರ ಪೇಜಲ್ಲಿ ನನಗಿಷ್ಟವಾಗದ್ದು ಏನಾದ್ರೂ ಕಂಡ್ರೆ ಅಷ್ಟೆ, ನನ್ನ ಫ್ರೆಂಡ್ಸ್ ಲಿಸ್ಟ್‌ನಿಂದ ಅವ್ರ ಹೆಸ್ರು ಕಟ್. ಆಮೇಲೆ ಅವ್ರು ಎಷ್ಟೇ ರಿಕ್ವೆಸ್ಟ್ ಕಳಿಸ್ಲಿ ಸ್ವೀಕರಿಸಲ್ಲ.” ಬೇರೆ ಯುವಜನರೂ ಇದೇ ರೀತಿಯ ಕಟ್ಟುಪಾಡುಗಳನ್ನು ಇಟ್ಟುಕೊಂಡಿದ್ದಾರೆ.
“ಸಿಕ್ಕಸಿಕ್ಕವರನ್ನೆಲ್ಲ ನಾನು ಫ್ರೆಂಡ್ ಮಾಡ್ಕೊಳ್ಳಲ್ಲ. ಏಕೆಂದ್ರೆ ಅದ್ರಿಂದ ನನಗೇ ಅಪಾಯ.”—ಆರುಶಿ, 21.
“ನೆಟ್‌ವರ್ಕಿಂಗ್ ಫ್ರೆಂಡ್ ಆಗಲು ನನ್ನ ಹಳೇ ಸ್ಕೂಲ್‌ಮೇಟ್ಸ್ ನನಗೆ ರಿಕ್ವೆಸ್ಟ್ ಕಳಿಸ್ತಾ ಇದ್ರು. ಅವ್ರನ್ನೆಲ್ಲ ಶಾಲೆಯಲ್ಲೇ ದೂರ ಇಟ್ಟಿದ್ದೆ, ಈಗ ಯಾಕೆ ಹತ್ರ ಮಾಡ್ಕೊಳ್ಳಲಿ?”—ಅಲೆಕ್ಸ್, 21.
ಸ್ನೇಹ ಬೆಳೆಸುವ ಬಗ್ಗೆ ನಿಮ್ಮ ಪಾಲಿಸಿ ಏನು? ಕೆಳಗೆ ಬರೆಯಿರಿ.
․․․․․(g11-E 08)
“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್ ಸೈಟ್‌ನಲ್ಲಿವೆ
[ಪಾದಟಿಪ್ಪಣಿ]
^ ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಸೋಶಿಯಲ್ ನೆಟ್‌ವರ್ಕ್ ತಾಣವನ್ನು ಅನುಮೋದಿಸುವುದಿಲ್ಲ, ಖಂಡಿಸುವುದೂ ಇಲ್ಲ. ತಮ್ಮ ಇಂಟರ್‌ನೆಟ್ ಬಳಕೆ ಬೈಬಲ್ ತತ್ವಗಳನ್ನು ಮುರಿಯುವಂತಿರಬಾರದೆಂಬ ಸಂಗತಿಯನ್ನು ಕ್ರೈಸ್ತರು ಸದಾ ನೆನಪಿನಲ್ಲಿಡಬೇಕು.—1 ತಿಮೊಥೆಯ 1:5, 19.
[ಪುಟ 18ರಲ್ಲಿರುವ ಸಂಕ್ಷಿಪ್ತ ವಿವರಣೆ]
ಬೈಬಲಿನ ನಾಣ್ಣುಡಿಯೊಂದು ಹೀಗಿದೆ: “ಬಹುಧನಕ್ಕಿಂತಲೂ ಒಳ್ಳೆಯ ಹೆಸರು ಉತ್ತಮ.”—ಜ್ಞಾನೋಕ್ತಿ 22:1
[ಪುಟ 20ರಲ್ಲಿರುವ ಚೌಕ]
ನಿಮ್ಮ ಹೆತ್ತವರನ್ನು ಕೇಳಿನೋಡಿ
ಈ ಲೇಖನವನ್ನು ಮತ್ತು ಇದರ ಹಿಂದಿನ ಲೇಖನವನ್ನು ನಿಮ್ಮ ಹೆತ್ತವರೊಂದಿಗೆ ಕೂತು ಓದಿ. (1) ನಿಮ್ಮ ಖಾಸಗಿ ವಿವರಗಳ ಗೋಪ್ಯತೆ (2) ನಿಮ್ಮ ಅಮೂಲ್ಯ ಸಮಯ (3) ನಿಮ್ಮ ಹೆಸರು (4) ನಿಮ್ಮ ಸ್ನೇಹಸಂಬಂಧಗಳ ಮೇಲೆ ಇಂಟರ್‌ನೆಟ್ ಬಳಕೆ ಹೇಗೆ ಪರಿಣಾಮ ಬೀರುತ್ತಿದೆಯೆಂದು ಚರ್ಚಿಸಿ.
[ಪುಟ 21ರಲ್ಲಿರುವ ಚೌಕ]
ಹೆತ್ತವರಿಗೆ ಕಿವಿಮಾತು
ಆನ್‌ಲೈನ್ ಪ್ರಪಂಚದ ಬಗ್ಗೆ ನಿಮಗಿಂತ ನಿಮ್ಮ ಮಕ್ಕಳಿಗೆ ಜಾಸ್ತಿ ತಿಳಿದಿರಬಹುದು. ಆದರೆ ಯಾವುದು ಒಳ್ಳೇದು ಯಾವುದು ಕೆಟ್ಟದ್ದು ಎಂಬ ವಿವೇಚನೆ ಅವರಿಗಿಂತ ನಿಮಗೇ ಹೆಚ್ಚು. (ಜ್ಞಾನೋಕ್ತಿ 1:4; 2:1-6) “ಮಕ್ಕಳಿಗೆ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದಿರುತ್ತದೆ. ಆದರೆ ಜೀವನದ ಬಗ್ಗೆ ಹೆಚ್ಚು ತಿಳಿದಿರುವುದು ಹೆತ್ತವರಿಗೆ” ಎನ್ನುವ ಇಂಟರ್‌ನೆಟ್ ಸುರಕ್ಷಾ ಪರಿಣತರಾದ ಪೇರಿ ಅಫ್‌ತಾಬ್‌ರ ಮಾತು ಇಲ್ಲಿಗೆ ಪ್ರಸಕ್ತ.
ಇತ್ತೀಚಿನ ವರ್ಷಗಳಲ್ಲಿ ಸೋಶಿಯಲ್ ನೆಟ್‌ವರ್ಕ್‌ಗಳು ಜನಪ್ರಿಯಗೊಳ್ಳುತ್ತಿವೆ. ನಿಮ್ಮ ಮಕ್ಕಳು ಅದನ್ನು ಬಳಸುವಷ್ಟು ಪ್ರಬುದ್ಧರೇ? ಅದು ಅವರಿಗಿಂತ ನಿಮಗೇ ಚೆನ್ನಾಗಿ ಗೊತ್ತಿದೆ. ಗಾಡಿ ಓಡಿಸುವುದು, ಬ್ಯಾಂಕ್ ಅಕೌಂಟ್ ಇರುವುದು, ಕ್ರೆಡಿಟ್ ಕಾರ್ಡ್‌ಗಳ ಬಳಕೆ ಮುಂತಾದವುಗಳಿಗೆ ಇರುವಂತೆ ಸೋಶಿಯಲ್ ನೆಟ್‌ವರ್ಕಿಂಗ್‌ನಿಂದಲೂ ಒಳಿತು ಕೆಡುಕುಗಳಿವೆ. ಅಂಥ ಕೆಲವು ಕೆಡುಕುಗಳಾವುವು?
ಖಾಸಗಿ ವಿವರಗಳು. ತಮ್ಮ ಬಗ್ಗೆ ಅತಿಯಾದ ಮಾಹಿತಿ ಕೊಡುವುದರಿಂದ ಏನಾಗಬಹುದೆಂಬ ಪರಿಜ್ಞಾನ ಅನೇಕ ಯುವಜನರಿಗಿಲ್ಲ. ಮನೆ ವಿಳಾಸ, ಶಾಲಾ ವಿಳಾಸ, ತಾವು ಮನೆಯಲ್ಲಿರುವ ಸಮಯ, ಮನೆಯಲ್ಲಿರದ ಸಮಯ. . . ಇಂಥ ಮಾಹಿತಿ ಕೊಡುವುದು ನಿಮ್ಮ ಕುಟುಂಬದ ಸುರಕ್ಷೆಯನ್ನೇ ಪಣಕ್ಕಿಡಬಲ್ಲದು.
ನೀವೇನು ಮಾಡಬಹುದು? ಮಕ್ಕಳು ಚಿಕ್ಕವರಾಗಿದ್ದಾಗ ರಸ್ತೆಯ ಎರಡೂ ಕಡೆ ನೋಡಿ ದಾಟಬೇಕೆಂದು ಕಲಿಸಿಕೊಟ್ಟಿರಿ. ಈಗ ಬೆಳೆದು ದೊಡ್ಡವರಾದ ಅವರಿಗೆ ಇಂಟರ್‌ನೆಟ್ ಅನ್ನು ಸುರಕ್ಷಿತವಾಗಿ ಬಳಸುವುದು ಹೇಗೆಂದು ಕಲಿಸಿ. ಖಾಸಗಿ ವಿವರಗಳನ್ನು ಗೋಪ್ಯವಾಗಿಡುವುದರ ಬಗ್ಗೆ ಚರ್ಚಿಸಿದ ಹಿಂದಿನ ಲೇಖನವನ್ನು ಮತ್ತು ಜನವರಿ-ಮಾರ್ಚ್ 2009ರ ಎಚ್ಚರ! ಪತ್ರಿಕೆಯ ಪುಟ 12-17ರಲ್ಲಿರುವ ಲೇಖನ ಓದಿ. ಅದನ್ನು ನಿಮ್ಮ ಹದಿವಯಸ್ಸಿನ ಮಕ್ಕಳೊಂದಿಗೆ ಚರ್ಚಿಸಿ. ಸುರಕ್ಷಿತ ಆನ್‌ಲೈನ್ ಬಳಕೆಗಾಗಿ ‘ಸುಜ್ಞಾನ ಬುದ್ಧಿಯನ್ನು’ ಮಕ್ಕಳಲ್ಲಿ ತುಂಬಿಸಿ.—ಜ್ಞಾನೋಕ್ತಿ 3:21.
ಸಮಯ. ಸೋಶಿಯಲ್ ನೆಟ್‌ವರ್ಕಿಂಗ್‌ನ ಗೀಳುಹತ್ತುವ ಅಪಾಯವೂ ಇದೆ. “ಸೋಶಿಯಲ್ ನೆಟ್‌ವರ್ಕ್ ಖಾತೆಯನ್ನು ತೆರೆದ ಒಂದೆರಡು ದಿನಗಳಲ್ಲೇ ನನಗೆ ಅದ್ರ ಹುಚ್ಚು ಎಷ್ಟು ಹಿಡಿದಿತ್ತೆಂದರೆ ಫೋಟೋ, ಹೇಳಿಕೆಗಳನ್ನು ನೋಡುವುದ್ರಲ್ಲೇ ಗಂಟೆಗಟ್ಟಲೆ ಕಳಿತಿದ್ದೆ” ಎನ್ನುತ್ತಾನೆ 23ರ ಪ್ರಾಯದ ರಾಕೇಶ್.
ನೀವೇನು ಮಾಡಬಹುದು? ಏಪ್ರಿಲ್-ಜೂನ್ 2011ರ ಎಚ್ಚರ! ಪತ್ರಿಕೆಯಲ್ಲಿರುವ “ಯುವಜನರ ಪ್ರಶ್ನೆ . . . ನನಗೆ ಎಲೆಕ್ಟ್ರಾನಿಕ್ ಸಮೂಹ-ಮಾಧ್ಯಮದ ಗೀಳು ಹತ್ತಿದೆಯೋ?” ಲೇಖನವನ್ನು ಮತ್ತು ಆ ಲೇಖನದಲ್ಲಿರುವ “ನನಗೆ ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ನ ಗೀಳು ಹಿಡಿದಿತ್ತು” ಎಂಬ ಪುಟ 18ರ ಚೌಕವನ್ನು ಮಕ್ಕಳೊಂದಿಗೆ ಓದಿ ಚರ್ಚಿಸಿ. ಸೋಶಿಯಲ್ ನೆಟ್‌ವರ್ಕ್ ಅನ್ನು ಮಿತವಾಗಿ ಬಳಸಲು ಮತ್ತು ಇಂಟರ್‌ನೆಟ್ ಬಳಕೆಗಾಗಿ ಸಮಯಮಿತಿ ಇಟ್ಟು ಪಾಲಿಸಲು ಕಲಿಸಿ. (1 ತಿಮೊಥೆಯ 3:2) ಕಂಪ್ಯೂಟರ್ ಇಂಟರ್‌ನೆಟ್ ಇವೇ ಸರ್ವಸ್ವವಲ್ಲ, ಜೀವನದಲ್ಲಿ ಇನ್ನೆಷ್ಟೋ ಪ್ರಾಮುಖ್ಯ ವಿಷಯಗಳಿವೆ ಎಂದು ಮಕ್ಕಳಿಗೆ ಮನದಟ್ಟುಮಾಡಿಸಿ!
ಒಳ್ಳೇ ಹೆಸರು. ‘ಮಕ್ಕಳು ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತಮ್ಮ ಗುಣವನ್ನು ತೋರ್ಪಡಿಸಿಕೊಳ್ಳುವರು’ ಎನ್ನುತ್ತದೆ ಬೈಬಲಿನ ನುಡಿಮುತ್ತು. (ಜ್ಞಾನೋಕ್ತಿ 20:11) ಈ ಮಾತು ಮಕ್ಕಳು ಸೋಶಿಯಲ್ ನೆಟ್‌ವರ್ಕ್ ಬಳಸುವಾಗಲೂ ಸತ್ಯ! ಅದೊಂದು ಸಾರ್ವಜನಿಕ ವೇದಿಕೆ. ಹಾಗಾಗಿ ಮಕ್ಕಳು ಏನನ್ನು ‘ಪೋಸ್ಟ್’ ಮಾಡುತ್ತಾರೋ ಅದರಿಂದ ಅವರ ಹೆಸರಿಗೆ ಮಾತ್ರವಲ್ಲ ಇಡೀ ಕುಟುಂಬದ ಹೆಸರಿಗೆ ಕಪ್ಪುಚುಕ್ಕೆ ಬರುವ ಅಪಾಯವಿದೆ.
ನೀವೇನು ಮಾಡಬಹುದು? ಆನ್‌ಲೈನ್‌ನಲ್ಲಿ ‘ಪೋಸ್ಟ್’ ಮಾಡುವ ವಿಷಯಗಳು ತಮ್ಮ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತೆ ಎಂಬ ಸಂಗತಿಯನ್ನು ಹದಿಹರೆಯದ ಮಕ್ಕಳು ತಿಳಿದಿರಬೇಕು. ತಾವು ಆನ್‌ಲೈನ್‌ನಲ್ಲಿ ಏನೇ ‘ಪೋಸ್ಟ್’ ಮಾಡಿದರೂ ಅದು ಅಲ್ಲೇ ಉಳಿಯುತ್ತದೆ ಎಂದು ಮಕ್ಕಳಿಗೆ ತಿಳಿಹೇಳಬೇಕು. “ಆನ್‌ಲೈನ್‌ಗೆ ಹಾಕುವ ಮಾಹಿತಿ ಶಾಶ್ವತವಾಗಿ ಉಳಿಯುತ್ತದೆ ಎನ್ನುವ ವಿಚಾರ ಮಕ್ಕಳಿಗೆ ಅರ್ಥವಾಗಲ್ಲ, ಆದರೆ ಅದನ್ನವರು ಗ್ರಹಿಸುವುದು ಬಹಳ ಪ್ರಾಮುಖ್ಯ” ಎನ್ನುತ್ತಾರೆ ಡಾ. ಗ್ವೆನ್ ಶೂರ್‌ಗನ್ ಒಕೀಫೀ ಎಂಬವರು ತಮ್ಮ ಪುಸ್ತಕ ಸೈಬರ್‌ಸೇಫ್‌ನಲ್ಲಿ. “ಇದನ್ನು ಮಕ್ಕಳಿಗೆ ಕಲಿಸುವ ಒಂದು ವಿಧಾನ, ಯಾವ ವಿಷಯವನ್ನು ನಾವು ಬೇರೆಯವರಿಗೆ ಖುದ್ದಾಗಿ ಹೇಳುವುದಿಲ್ಲವೋ ಅದನ್ನು ಆನ್‌ಲೈನ್‌ನಲ್ಲೂ ಹೇಳಬಾರದು ಎಂದು ಅರ್ಥಮಾಡಿಸುವ ಮೂಲಕ” ಎನ್ನುತ್ತಾರೆ ಅವರು.
ಸ್ನೇಹಿತರು. “ಹೆಚ್ಚಿನ ಹದಿಹರೆಯದವ್ರು ಅಪರಿಚಿತರನ್ನು, ನಡತೆಗೆಟ್ಟವ್ರನ್ನು ಸಹ ಫ್ರೆಂಡಾಗಿ ಆ್ಯಕ್ಸೆಪ್ಟ್ ಮಾಡ್ಕೊತಾರೆ. ಏಕೆಂದ್ರೆ ಅವರಿಗೆ ತುಂಬ ಫ್ರೆಂಡ್ಸ್ ಬೇಕು” ಎನ್ನುತ್ತಾಳೆ 23ರ ಟಾನ್ಯ.
ನೀವೇನು ಮಾಡಬಹುದು? ಸ್ನೇಹ ಬೆಳೆಸುವ ಪಾಲಿಸಿಯೊಂದನ್ನು ಇಡಲು ನಿಮ್ಮ ಮಕ್ಕಳಿಗೆ ಸಹಾಯಮಾಡಿ. ಉದಾಹರಣೆಗೆ 22ರ ಪ್ರಾಯದ ಆ್ಯಲಿಸ್‌ಳ ಪಾಲಿಸಿ ಏನೆಂದರೆ ಅವಳು ತನ್ನ ಸ್ನೇಹಿತರ ಸ್ನೇಹಿತರನ್ನು ಫ್ರೆಂಡ್ಸ್ ಲಿಸ್ಟ್‌ಗೆ ಸೇರಿಸಿಕೊಳ್ಳುವುದಿಲ್ಲ. ಆಕೆ ಹೇಳುವುದು: “ನೀವು ನನ್ನ ಫ್ರೆಂಡ್‌ನ ಫ್ರೆಂಡ್ ಆಗಿರೋ ಮಾತ್ರಕ್ಕೆ ನಿಮ್ಮನ್ನು ನನ್ನ ಲಿಸ್ಟಿಗೆ ಸೇರಿಸಿಕೊಳ್ಳಲ್ಲ. ಮೊದಲು ನಿಮ್ಮ ಪರಿಚಯ ಆಗ್ಬೇಕು, ನೇರ ಭೇಟಿಯೂ ಆಗ್ಬೇಕು.”
ಟಿಮ್ ಮತ್ತು ಜೂಲ್ಯಾ ಎಂಬ ದಂಪತಿ ಸೋಶಿಯಲ್ ನೆಟ್‌ವರ್ಕ್‌ನಲ್ಲಿ ತಮಗಾಗಿ ಒಂದು ಖಾತೆ ತೆರೆದರು. ಇದರ ಉದ್ದೇಶ ತಮ್ಮ ಮಗಳ ಫ್ರೆಂಡ್ಸ್ ಮತ್ತು ಅವರು ಹಾಕುವ ‘ಪೋಸ್ಟ್‌ಗಳನ್ನು’ ತಿಳಿದು ಮಗಳ ಇಂಟರ್‌ನೆಟ್ ಬಳಕೆಯ ಮೇಲೆ ನಿಗಾ ವಹಿಸುವುದಾಗಿತ್ತು. “ಮಗ್ಳು ನಮ್ಮನ್ನೂ ತನ್ನ ಫ್ರೆಂಡ್ಸ್ ಲಿಸ್ಟ್‌ಗೆ ಸೇರ್ಸಿಕೊಳ್ಳಬೇಕಂತ ಹೇಳಿದೆವು. ಏಕೆಂದ್ರೆ ಅವ್ಳು ಯಾರೊಂದಿಗೆ ಸ್ನೇಹ ಬೆಳೆಸಿಕೊಳ್ತಾಳೊ ಅವ್ರನ್ನು ಒಂದರ್ಥದಲ್ಲಿ ನಮ್ಮ ಮನೆಗೇ ಬರಮಾಡಿಕೊಂಡಂತೆ. ಹಾಗಾಗಿ ನಾವೂ ಅವ್ರ ಬಗ್ಗೆ ತಿಳ್ಕೊಬೇಕು” ಎನ್ನುತ್ತಾರೆ ಜೂಲ್ಯಾ.
[ಪುಟ 19ರಲ್ಲಿರುವ ಚಿತ್ರ]
ಅಜಾಗ್ರತೆಯಿಂದ ಕಾರು ಓಡಿಸಿದರೆ ಕಾರು ಜಖಂ. ಆನ್‌ಲೈನ್‌ನಲ್ಲಿ ಅಸಭ್ಯ ಫೋಟೋ, ಹೇಳಿಕೆಗಳನ್ನು ಹಾಕಿದರೆ ನಿಮ್ಮ ಹೆಸರು ಖತಂ
[ಪುಟ 20ರಲ್ಲಿರುವ ಚಿತ್ರ]
ಅಪರಿಚಿತನೊಬ್ಬ ಲಿಫ್ಟ್ ಕೇಳಿದರೆ ಕಾರಿಗೆ ಹತ್ತಿಸಿಕೊಳ್ಳುವಿರಾ? ಅಂದಮೇಲೆ ಪರಿಚಯ ಇಲ್ಲದವರನ್ನು ಯಾಕೆ ಆನ್‌ಲೈನ್ ಫ್ರೆಂಡ್ ಮಾಡಿಕೊಳ್ಳಬೇಕು?