ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಳ್ಳೇ ಮನರಂಜನೆ ಆರಿಸಿಕೊಳ್ಳುವುದು ಹೇಗೆ?

ಒಳ್ಳೇ ಮನರಂಜನೆ ಆರಿಸಿಕೊಳ್ಳುವುದು ಹೇಗೆ?

ಯುವಜನರ ಪ್ರಶ್ನೆ

ಒಳ್ಳೇ ಮನರಂಜನೆ ಆರಿಸಿಕೊಳ್ಳುವುದು ಹೇಗೆ?

ದೇವರ ಬಗ್ಗೆ ಭಯಭಕ್ತಿ ಇರುವ ಯುವ ವ್ಯಕ್ತಿ ನೀವಾಗಿದ್ದರೆ ಯಾವ ಪುಸ್ತಕ ಓದಬೇಕು, ಯಾವ ಸಿನಿಮಾ ನೋಡಬೇಕು, ಯಾವ ಸಂಗೀತ ಕೇಳಬೇಕೆಂಬ ವಿಷಯದಲ್ಲಿ ಕಂಡಕಂಡವರ ಮಾತು ಕೇಳುವುದಿಲ್ಲ. ತುಂಬ ಜಾಗ್ರತೆ ವಹಿಸುತ್ತೀರಿ. ಯಾಕೆಂದರೆ ಇವತ್ತು ಹೆಚ್ಚಿನಾಂಶ ಎಲ್ಲದರಲ್ಲೂ ಅನೈತಿಕತೆ, ಹಿಂಸೆ, ಮಾಟಮಂತ್ರಗಳೇ ತುಂಬಿಕೊಂಡಿವೆ. ಅಂಥದ್ದರಿಂದ ಮಾರು ದೂರ ನಿಲ್ಲುತ್ತೀರಿ. ಹಾಗಾದರೆ ಒಳ್ಳೇ ಮನರಂಜನೆ ಅನ್ನೋದು ಸಿಗೋದೇ ಇಲ್ವಾ? ಹಾಗಲ್ಲ. ಅಂಥವುಗಳನ್ನು ಹುಡುಕಿ ತೆಗೆಯಬೇಕು. ಹೇಗೆ? ಈ ಲೇಖನವನ್ನು ಓದಿ. *

ಸಿನಿಮಾ

ಯಾವ ರೀತಿಯ ಸಿನಿಮಾ ನಿಮಗಿಷ್ಟ? ✔ ಹಾಕಿ.

❍ ಹಾಸ್ಯ

❍ ಕಥೆ ಆಧರಿತ

❍ ಆ್ಯಕ್ಷನ್‌/ಸಾಹಸ

❍ ವೈಜ್ಞಾನಿಕ ಕಲ್ಪನೆ ಆಧರಿತ

❍ ಇತರೆ

ನಿಮಗಿದು ಗೊತ್ತಿತ್ತಾ . . .? ವರ್ಷವೊಂದಕ್ಕೆ ಭಾರತ ಸಾವಿರಕ್ಕೂ ಹೆಚ್ಚು ಚಲನಚಿತ್ರಗಳನ್ನು ಹೊರತರುತ್ತಿದೆ. ಬೇರೆ ಯಾವ ದೇಶವೂ ಇಷ್ಟೊಂದು ಚಿತ್ರಗಳನ್ನು ನಿರ್ಮಿಸುತ್ತಿಲ್ಲ.

ಯಾವುದನ್ನು ನೋಡಬಾರದು? ಬೈಬಲಿನ ನೀತಿನಿಯಮಗಳಿಗೆ ವಿರುದ್ಧವಾದ ವಿಷಯಗಳನ್ನು ಅನೇಕ ಚಲನಚಿತ್ರಗಳು ಹಾಡಿಹೊಗಳುತ್ತವೆ. ಸೆಕ್ಸ್‌, ಹಿಂಸಾಚಾರವನ್ನು ಕೆಲವು ಚಿತ್ರಗಳು ವೈಭವೀಕರಿಸಿದರೆ ಇನ್ನು ಕೆಲವು ಮಾಟಮಂತ್ರ, ಭೂತ-ಪ್ರೇತಗಳ ಬಗ್ಗೆ ಇರುತ್ತವೆ. ಆದರೆ “ಕ್ರೋಧ, ಕೋಪ, ಕೆಟ್ಟತನ, ನಿಂದಾತ್ಮಕ ಮಾತು . . . ಅಶ್ಲೀಲವಾದ ಮಾತು ಇವುಗಳೆಲ್ಲವನ್ನು ನಿಮ್ಮಿಂದ ತೊಲಗಿಸಿಬಿಡಿರಿ” ಎನ್ನುತ್ತದೆ ಬೈಬಲ್‌. (ಕೊಲೊಸ್ಸೆ 3:8) ಇಷ್ಟೇ ಅಲ್ಲ ಮಾಟಮಂತ್ರಕ್ಕೆ ಸಂಬಂಧಪಟ್ಟ ಯಾವುದನ್ನೂ ದೇವರು ಮೆಚ್ಚುವುದಿಲ್ಲ.—ಧರ್ಮೋಪದೇಶಕಾಂಡ 18:10-13.

ಆರಿಸಿ ತೆಗೆಯುವುದು ಹೇಗೆ? “ಸಿನಿಮಾಗಳ ಟ್ರೇಲರ್‌ ನೋಡ್ತೇನೆ. ಅದರಲ್ಲೇನಾದರೂ ಕೆಟ್ಟದಿದ್ರೆ ಆ ಸಿನಿಮಾ ನೋಡಕ್ಕೇ ಹೋಗಲ್ಲ.”—ಜಾಸ್ಮಿನ್‌. *

“ಯಾವುದೇ ಸಿನಿಮಾ ಬಗ್ಗೆ ನನ್ನ ಹಾಗೇ ನೈತಿಕ ಮಟ್ಟಗಳನ್ನ ಇಟ್ಟುಕೊಂಡಿರೋ ವ್ಯಕ್ತಿ ಹೇಳೋ ಮಾತನ್ನ ಮಾತ್ರ ನಂಬ್ತೇನೆ.”—ಕ್ಯಾತ್ರಿನ್‌.

“ಥಿಯೇಟರಲ್ಲಿ ಒಂದು ಫಿಲ್ಮ್‌ ನೋಡ್ತಾ ಇದ್ದೀನಿ ಅಂತ ಇಟ್ಕೊಳ್ಳಿ. ಅದರಲ್ಲಿ ನನಗೆ ಮುಜುಗರ ಆಗೋ ವಿಷ್ಯ ಏನಾದ್ರೂ ಬಂದ್ರೆ ತಕ್ಷಣ ಎದ್ದು ಬಂದ್ಬಿಡ್ತೀನಿ.”—ಮೈನಾ.

“ಯಾವ್ಯಾವ ಸಿನಿಮಾದಲ್ಲಿ ಎಷ್ಟರ ಮಟ್ಟಿಗೆ ಸೆಕ್ಸ್‌, ಹೊಡೆದಾಟ, ಅಶ್ಲೀಲತೆ ಇದೆ ಅಂತ ತಿಳಿಸುವ ಇಂಟರ್‌ನೆಟ್‌ ಸೈಟನ್ನು ಬಳಸಿ ನಾನು ನೋಡಬೇಕೆಂದಿರುವ ಸಿನಿಮಾ ಹೇಗಿದೆ ಅಂತ ತಿಳ್ಕೊಳ್ತೇನೆ.”—ನತಾಶ.

ಹೀಗೆ ಮಾಡಬಹುದಾ? ನೋಡಬಾರದ ವಿಷಯಗಳು ಇಲ್ಲದಿರಬಹುದಾದ ಚಿತ್ರಗಳಿಗಾಗಿ ಹುಡುಕಿ. “ಹಳೇ ಕಾಲದ ಸಿನಿಮಾಗಳೆಂದರೆ ನನಗೆ ತುಂಬ ಇಷ್ಟ” ಎನ್ನುತ್ತಾಳೆ ಮಯೂರಿ ಎಂಬ ಹದಿವಯಸ್ಸಿನ ಹುಡುಗಿ.

ನಿಮ್ಮನ್ನೇ ಕೇಳಿಕೊಳ್ಳಿ

‘ನಾನು ನೋಡೋ ಸಿನಿಮಾಗಳು ಯಾವುದಕ್ಕೆ ಪ್ರೇರೇಪಣೆ ನೀಡ್ತಿವೆ? ಸೆಕ್ಸ್‌, ಹೊಡೆದಾಟ, ಮಾಟಮಂತ್ರದ ಬಗ್ಗೆ ದೇವರು ಕೊಟ್ಟಿರೋ ನಿಯಮಗಳನ್ನು ಮುರಿಯೋದಕ್ಕಾ? ಪಾಲಿಸೋದಕ್ಕಾ?’

ಪುಸ್ತಕ

ಯಾವ ರೀತಿಯ ಪುಸ್ತಕಗಳು ನಿಮಗಿಷ್ಟ? ✔ ಹಾಕಿ.

❍ ಕಾಲ್ಪನಿಕ ಕಥೆಗಳು

❍ ನೈಜ ಕಥೆಗಳು

❍ ಹಳೇ ಕಾಲದ ಕಥೆಗಳು

❍ ಇತರೆ

ನಿಮಗಿದು ಗೊತ್ತಿತ್ತಾ . . .? ಅಮೆರಿಕ ಒಂದರಲ್ಲೇ ಪ್ರತಿವಾರ ಸಾವಿರಕ್ಕಿಂತಲೂ ಹೆಚ್ಚು ಪುಸ್ತಕಗಳು ಬಿಡುಗಡೆಯಾಗುತ್ತವೆ.

ಯಾವುದನ್ನು ಓದಬಾರದು? ಚಲನಚಿತ್ರಗಳಂತೆ ಹಲವಾರು ಪುಸ್ತಕಗಳು ಕೂಡ ಬೈಬಲಿನ ನೀತಿನಿಯಮಗಳಿಗೆ ವಿರುದ್ಧವಾಗಿರುವ ವಿಷಯಗಳನ್ನು ಹಾಡಿಹೊಗಳುತ್ತವೆ. ಕೆಲವು ಅನೈತಿಕತೆಯನ್ನು ಕಣ್ಣಿಗೆ ಕಟ್ಟುವಂತೆ ಬಣ್ಣಿಸಿದರೆ, ಬೇರೆಯವು ಮಾಟಮಾಂತ್ರಕ್ಕೆ ಸಂಬಂಧಿಸಿವೆ. “ಜಾರತ್ವ ಮತ್ತು ಪ್ರತಿಯೊಂದು ರೀತಿಯ ಅಶುದ್ಧತೆ ಅಥವಾ ಲೋಭ ಇವುಗಳ ಪ್ರಸ್ತಾಪವೂ ನಿಮ್ಮಲ್ಲಿರಬಾರದು” ಎನ್ನುತ್ತದೆ ಬೈಬಲ್‌. (ಎಫೆಸ 5:3) ಮಾಟಮಂತ್ರಗಳು “ಯೆಹೋವನ ದೃಷ್ಟಿಯಲ್ಲಿ ಕೆಟ್ಟವು” ಎಂದೂ ಅದು ಹೇಳುತ್ತದೆ.—2 ಅರಸುಗಳು 17:17.

ಆರಿಸಿ ತೆಗೆಯುವುದು ಹೇಗೆ? “ಪುಸ್ತಕದಂಗಡಿಗೆ ಹೋದ್ರೆ ಹಿಂದಿನ ಪುಟವನ್ನು ಮೊದ್ಲು ಓದ್ತೇನೆ, ಆಮೇಲೆ ಅಧ್ಯಾಯಗಳನ್ನೊಮ್ಮೆ ತಿರುವಿ ಹಾಕ್ತೇನೆ. ಅದರಲ್ಲಿ ಕೆಟ್ಟದ್ದು, ಅಸಹ್ಯ ಏನಾದ್ರೂ ಕಂಡ್ರೆ ತಕ್ಕೊಳ್ಳಲ್ಲ.”—ಮಿಲಿ.

“ಮನಸ್ಸಾಕ್ಷಿ ಹೇಳೋದನ್ನ ಕೇಳಬೇಕು ಅಂತ ದೊಡ್ಡವಳಾಗುತ್ತಾ ಬಂದಹಾಗೆ ನನಗೆ ಗೊತ್ತಾಯಿತು. ಯಾವುದಾದರೂ ಪುಸ್ತಕ ಓದ್ತಾ ಇದ್ದಾಗ ಅದು ಒಳ್ಳೇದಿಲ್ಲ, ದೇವರ ಮಟ್ಟಗಳಿಗೆ ವಿರುದ್ಧವಾದದ್ದನ್ನ ಹೇಳ್ತಾ ಇದೆ ಅಂತ ಗೊತ್ತಾದ ಕೂಡ್ಲೆ ಓದೋದನ್ನ ನಿಲ್ಲಿಸಿ ಬಿಡ್ತೀನಿ.”—ಕಂಗನಾ.

ಹೀಗೆ ಮಾಡಬಹುದಾ? ವೈವಿಧ್ಯಮಯವಾದ ವಿಷಯಗಳನ್ನು ಓದಿ. “ಈ ನವನವೀನ ಕಾಲ್ಪನಿಕ ಕಥೆಗಳನ್ನು ಓದೋದಕ್ಕಿಂತ ಹಳೇಕಾಲದ ನಿಜಕಥೆಗಳನ್ನು ಓದೋದು ನನಗೆ ಬಲು ಇಷ್ಟ. ಅದರಲ್ಲಿ ಪದಪ್ರಯೋಗ, ಒಂದೊಂದು ಪಾತ್ರ, ಕಥೆ ಹೆಣೆದಿರೋ ರೀತಿಯೆಲ್ಲಾ ಬೊಂಬಾಟ್‌!” ಎನ್ನುತ್ತಾಳೆ 17ರ ಲಾವಣ್ಯ.

ನಿಮ್ಮನ್ನೇ ಕೇಳಿಕೊಳ್ಳಿ

‘ನಾನು ಓದೋ ಪುಸ್ತಕಗಳು, ದೇವರು ಇಷ್ಟಪಡದ ವಿಷಯಗಳಿಂದ ನನ್ನ ಮನರಂಜಿಸುತ್ತವಾ?’

ಸಂಗೀತ

ಯಾವ ರೀತಿಯ ಸಂಗೀತ ನಿಮಗಿಷ್ಟ? ✔ ಹಾಕಿ.

❍ ರಾಕ್‌

❍ ರ್ಯಾಪ್‌

❍ ಶಾಸ್ತ್ರೀಯ ಸಂಗೀತ

❍ ಹಳೇ ಚಿತ್ರಗೀತೆಗಳು

❍ ಜಾನಪದ

❍ ಇತರೆ

ನಿಮಗಿದು ಗೊತ್ತಿತ್ತಾ . . .? ವರ್ಷಂಪ್ರತಿ ನಾಲ್ಕು ದೊಡ್ಡ ಧ್ವನಿಮುದ್ರಣ ಕಂಪನಿಗಳು 30,000 ಆಲ್ಬಂಗಳನ್ನು ಬಿಡುಗಡೆ ಮಾಡುತ್ತವೆ.

ಯಾವುದನ್ನು ಕೇಳಬಾರದು? ಚಲನಚಿತ್ರ, ಪುಸ್ತಕಗಳಂತೆ ಹೆಚ್ಚಿನ ಹಾಡು-ಸಂಗೀತಗಳಲ್ಲೂ ನೈತಿಕತೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ. ಅಶ್ಲೀಲತೆಯನ್ನು ಬಣ್ಣಿಸುವ ಗೀತೆಗಳು, ಅದನ್ನೇ ಮುಚ್ಚುಮರೆಯಿಲ್ಲದೆ ಬಿಂಬಿಸುವ ವಿಡಿಯೊಗಳು ನೀವು ಕಷ್ಟಪಟ್ಟು ಹತೋಟಿಯಲ್ಲಿಡುತ್ತಿರುವ ಲೈಂಗಿಕ ಆಸೆಗಳನ್ನು ಬಡಿದೆಬ್ಬಿಸುತ್ತವೆ. (1 ಕೊರಿಂಥ 6:18) 21ರ ಲೇಖಾ ಹೇಳುವಂತೆ “ಬೈಬಲಿನ ಕಟ್ಟುಪಾಡುಗಳನ್ನು ಮೀರಿ ನಡೆಯುವಂತೆ ಇಂದು ಹೆಚ್ಚಿನ ಸಂಗೀತ ಕುಮ್ಮಕ್ಕು ಕೊಡುತ್ತಿದೆ.” ಅದರಲ್ಲೂ ಅದರ ತಾಳ ಜನರು ಕಾಮೋದ್ರೇಕದಿಂದ ಕುಣಿಯುವ ಹಾಗೆ ಮಾಡ್ತದೆ.

ಆರಿಸಿ ತೆಗೆಯುವುದು ಹೇಗೆ? “‘ನನ್ನಂತೆ ಯೆಹೋವನ ಸಾಕ್ಷಿಯಾಗಿರುವ ದೊಡ್ಡವರು ಯಾರಾದರೂ ನನ್ನ ಮ್ಯೂಸಿಕ್‌ ಕಲೆಕ್ಷನ್‌ ಅನ್ನು ನೋಡ್ದಾಗ ನಾನು ತಲೆತಗ್ಗಿಸುವಂಥ ಪರಿಸ್ಥಿತಿ ಬರ್ಬಹುದಾ?’ ಅಂತ ನನ್ನನ್ನೇ ಕೇಳಿಕೊಳ್ತೇನೆ. ಇದು ಒಳ್ಳೇ ಸಂಗೀತವನ್ನು ಆರಿಸಿಕೊಳ್ಳಲು ನನಗೆ ಸಹಾಯ ಮಾಡುತ್ತೆ.”—ಲತಿಕಾ.

ಹೀಗೆ ಮಾಡಬಹುದಾ? ಬೇರೆ ಬೇರೆ ರೀತಿಯ ಸಂಗೀತಗಳನ್ನು ಕೇಳಿ ನೋಡಿ. “ಅಪ್ಪಗೆ ಹಳೇ ಕಾಲದ ಸಂಗೀತ ತುಂಬ ಇಷ್ಟ. ಆ ಸಂಗೀತ ಕೇಳ್ತಾ ಬೆಳೆದೆ. ನಾನು ಹಳೇ ಸಂಗೀತದ ಬಗ್ಗೆ ತಿಳ್ಕೊಂಡು, ಪಿಯಾನೊ ಕಲಿಯೋದಿಕ್ಕೆ ಶುರುಮಾಡಿದಾಗ ಒಂದು ಹೊಸ ಲೋಕಕ್ಕೆ ಹೋದ ಹಾಗನಿಸಿತು” ಎನ್ನುತ್ತಾನೆ ಹರೆಯದ ರಾಬರ್ಟೊ. (g11-E 11)

ನಿಮ್ಮನ್ನೇ ಕೇಳಿಕೊಳ್ಳಿ

‘ನಾನು ಕೇಳೋ ಸಂಗೀತ ಲೈಂಗಿಕ ಆಸೆಗಳನ್ನು ಹತೋಟಿಯಲ್ಲಿಡಲು ಸಹಾಯಮಾಡುತ್ತದಾ? ಬಡಿದೆಬ್ಬಿಸುತ್ತದಾ?’

ಇದರ ಬಗ್ಗೆ ಇನ್ನೂ ಓದಬೇಕೇ?

ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಯುವಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು, ಸಂಪುಟ 2ರ (ಇಂಗ್ಲಿಷ್‌) ಅಧ್ಯಾಯ 31, 32 ಓದಿ.

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಎಚ್ಚರ! ಪತ್ರಿಕೆ ಯಾವುದೇ ನಿರ್ದಿಷ್ಟ ಚಲನಚಿತ್ರ, ಪುಸ್ತಕ, ಸಂಗೀತವನ್ನು ಅನುಮೋದಿಸುವುದೂ ಇಲ್ಲ ಖಂಡಿಸುವುದೂ ಇಲ್ಲ. ಬೈಬಲ್‌ ತತ್ವಗಳನ್ನು ಪಾಲಿಸಲು ಪ್ರೇರಣೆ ನೀಡುವ ಮನಸ್ಸಾಕ್ಷಿಯನ್ನು ಬೆಳೆಸಿಕೊಳ್ಳಲು ನೆರವಾಗುವುದೇ ಈ ಲೇಖನದ ಉದ್ದೇಶ.—ಕೀರ್ತನೆ 119:104; ರೋಮನ್ನರಿಗೆ 12:9.

^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

ಬೈಬಲ್‌ ತತ್ವಗಳನ್ನು ಪಾಲಿಸಲು ಪ್ರೇರಣೆ ನೀಡುವ ಮನಸ್ಸಾಕ್ಷಿಯನ್ನು ನೀವು ಅಲಕ್ಷಿಸಿ ಜನಪ್ರಿಯವಾದ ಯಾವುದೇ ಚಲನಚಿತ್ರ, ಪುಸ್ತಕ, ಸಂಗೀತಕ್ಕೆ ಮನಸೋತರೆ ನಷ್ಟವಾಗುವುದು ಮನರಂಜನೆಯ ಉದ್ಯಮಕ್ಕಂತೂ ಅಲ್ಲವೇ ಅಲ್ಲ.

[ಪುಟ 24ರಲ್ಲಿರುವ ಚೌಕ/ಚಿತ್ರ]

“ಇವತ್ತು ಹೆಚ್ಚಾಗಿ ಬರುವಂಥ ಪುಸ್ತಕ, ಸಿನಿಮಾಗಳು ಬೈಬಲ್‌ ನಿಯಮಗಳಿಗೆ ವಿರುದ್ಧವಾಗಿವೆ. ಆದ್ದರಿಂದ ನಾನು ಮೊದಲು ಕಥೆ ಹೇಗಿದೆ ಅಂತ ತಿಳ್ಕೋತೀನಿ. ಬೈಬಲ್‌ ನಿಯಮಗಳಿಗೆ ವಿರುದ್ಧವಾಗಿಲ್ಲದ ಕಥೆಗಳೇ ನನಗೆ ತುಂಬ ಇಷ್ಟ.” ಏಡ್ರಿಯನ್‌

[ಪುಟ 24ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ನಿಮಗೆ ನನ್ನಷ್ಟು ಪ್ರಾಯ ಇದ್ದಾಗಿನಿಂದ ಇಂದಿನ ವರೆಗೆ ಮನರಂಜನೆಯಲ್ಲಿ ಯಾವೆಲ್ಲ ಬದಲಾವಣೆಗಳಾಗಿವೆ? ನಿಮ್ಮ ಹೆತ್ತವರು ತಮ್ಮ ಕಾಲದ ಮನರಂಜನೆಯನ್ನು ನಿಮ್ಮ ಕಾಲದ ಮನರಂಜನೆಗೆ ಹೋಲಿಸಿ ಯಾವ ಬದಲಾವಣೆಗಳಾದವು ಎಂದು ಹೇಳಿದರು?

[ಪುಟ 25ರಲ್ಲಿರುವ ಚೌಕ/ಚಿತ್ರ]

“ಕೆಲವು ಹಾಡುಗಳು ಬೈಬಲಿಗೆ ವಿರುದ್ಧವಾದ ವಿಷ್ಯಗಳ ಬಗ್ಗೆ ಕುತೂಹಲ ಹುಟ್ಟಿಸಿ ನಮ್ಮನ್ನು ತಪ್ಪುದಾರಿಗೆ ಎಳ್ಕೊಂಡು ಹೋಗಿಬಿಡುತ್ತೆ. ಹಾಡುಗಳೇನೋ ಕೇಳೋದಿಕ್ಕೆ ಚೆನ್ನಾಗೇ ಇರಬಹುದು. ಹಾಗಂತ ನಾವ್ಯಾಕೆ ನಮ್ಮ ಒಳ್ಳೇ ಮನಸ್ಸಾಕ್ಷೀನ ಕೆಡಿಸ್ಕೋ ಬೇಕು?” ಜನೀಸ್‌