ದೇವರ ಸ್ನೇಹಿತನಾಗಲು ಇಳಿವಯಸ್ಸು ಅಡ್ಡಬರಲಿಲ್ಲ
ದೇವರ ಸ್ನೇಹಿತನಾಗಲು ಇಳಿವಯಸ್ಸು ಅಡ್ಡಬರಲಿಲ್ಲ
ಒಲಾವಿ ಜೆ. ಮಾಟೀಲಾ ಹೇಳಿದಂತೆ
“ಸೃಷ್ಟಿಕರ್ತನ ಬಗ್ಗೆ ನಿಖರ ಜ್ಞಾನ ಪಡೆಯಲು ಸಾಧ್ಯ ಎಂದು ನೆನಸುತ್ತೀರಾ?” ಯೆಹೋವನ ಸಾಕ್ಷಿ ಒಬ್ಬರು ನನಗೆ ಹಾಕಿದ ಪ್ರಶ್ನೆ ಇದು. ನಾನು ಯೋಚಿಸುವಂತೆ ಮಾಡಿತು. ಆಗ ನನ್ನ ಪ್ರಾಯ 80 ದಾಟಿತ್ತು. ನನ್ನ ಜೀವನದಲ್ಲಿ ಅನೇಕ ದೊಡ್ಡ ವ್ಯಕ್ತಿಗಳ ಪರಿಚಯವಾಗಿತ್ತು, ರಾಜಕೀಯ ಧುರೀಣರ ಒಡನಾಟವೂ ಇತ್ತು. ಆದರೆ 80ರ ಹರೆಯದಲ್ಲಿ ನಾನು ದೇವರ ಕುರಿತು ಕಲಿಯುವುದೇ? ಆತನ ಸ್ನೇಹಿತನಾಗುವುದೇ? ಅದು ಸಾಧ್ಯನಾ?
ನಾ ನು ಹುಟ್ಟಿದ್ದು 1918ರ ಅಕ್ಟೋಬರ್‌ನಲ್ಲಿ. ಫಿನ್‌ಲೆಂಡ್‌ನ ಹುವಿಂಕ ಎಂಬ ಸ್ಥಳದಲ್ಲಿ. ತೀರ ಚಿಕ್ಕ ಪ್ರಾಯದಲ್ಲೇ ನಾನು ಹೊಲಗದ್ದೆ ಕೆಲಸ ಮಾಡಲಾರಂಭಿಸಿದೆ. ದನ, ಕುದುರೆ, ಕೋಳಿ, ಹೆಬ್ಬಾತುಗಳನ್ನು ನಾವು ಸಾಕುತ್ತಿದ್ದೆವು. ಶ್ರಮಜೀವಿಯಾಗಿರಲು, ಯಾವುದೇ ಕೆಲಸವನ್ನು ಕೀಳಾಗಿ ಕಾಣದಿರಲು ಕಲಿತೆ.
ನಾನು ದೊಡ್ಡವನಾದಂತೆ ವಿದ್ಯಾಭ್ಯಾಸದ ಕಡೆ ಗಮನಕೊಡು ಎಂದು ನನ್ನ ಹೆತ್ತವರು ಹೇಳಿದರು. ಕಾಲೇಜಿಗೆ ಹೋಗೋ ಪ್ರಾಯ ಬಂದಾಗ ಮನೆಯಿಂದ ದೂರವಿದ್ದು ವ್ಯಾಸಂಗ ಮುಂದುವರಿಸಿದೆ. ಕ್ರೀಡೆಗಳಲ್ಲೂ ತೊಡಗಿಸಿಕೊಂಡೆ. ಆಗ ನನಗೆ ಉರ್ಹೊ ಕೆಕನನ್‌ರ ಪರಿಚಯ ಆಯಿತು. ಅವರಾಗ ಫಿನ್‌ಲೆಂಡ್‌ನ ಕ್ರೀಡಾಪಟುಗಳ ಸಂಘದ ಅಧ್ಯಕ್ಷರಾಗಿದ್ದರು. ಇವರೇ ಮುಂದೊಂದು ದಿನ ಫಿನ್‌ಲೆಂಡ್‌ನ ಪ್ರಧಾನ ಮಂತ್ರಿಯಾಗುತ್ತಾರೆ, ನಂತರ ರಾಷ್ಟ್ರಾಧ್ಯಕ್ಷರಾಗುತ್ತಾರೆ ಅಂತ ಕನಸು-ಮನಸ್ಸಲ್ಲೂ ನೆನಸಿರಲಿಲ್ಲ. 30 ವರ್ಷಗಳ ತನಕ ಅವರು ಈ ಹುದ್ದೆಗಳಲ್ಲಿದ್ದರು. ಅವರು ನನ್ನ ಜೀವನದ ಮೇಲೆ ಎಷ್ಟು ಪರಿಣಾಮ ಬೀರಲಿದ್ದಾರೆ ಎಂದು ನಾನಾಗ ನೆನಸಿರಲಿಲ್ಲ.
ಪ್ರಖ್ಯಾತಿ, ಪ್ರತಿಷ್ಠೆಯ ಜೀವನ
1939ರಲ್ಲಿ ಫಿನ್‌ಲೆಂಡ್ ಮತ್ತು ಸೋವಿಯತ್ ಒಕ್ಕೂಟದ ಮಧ್ಯೆ ವೈಷಮ್ಯ ಭುಗಿಲೆದ್ದಿತು. ಅದೇ ವರ್ಷದ ನವೆಂಬರ್ ತಿಂಗಳಲ್ಲಿ ನಾನು ಸೈನ್ಯವನ್ನು ಸೇರಬೇಕಾಯಿತು. ಮೊದಲು ಸೈನ್ಯದ ಮೀಸಲುಪಡೆಯ ತರಬೇತುದಾರನಾಗಿ ನೇಮಕಗೊಂಡೆ. ಅನಂತರ ಮೆಷೀನ್‌ಗನ್ ಸೇವಾ ತುಕಡಿಯ ಕಮಾಂಡರ್ ಆದೆ. ಆ ಎರಡೂ ದೇಶಗಳ ಮಧ್ಯೆ ಯುದ್ಧ ನಡೆದದ್ದು ಅವುಗಳ ಗಡಿಪ್ರದೇಶ ಕರೀಲ್ಯ ಎಂಬಲ್ಲಿ. 1941ರ ಬೇಸಗೆಕಾಲದಲ್ಲಿ ವೀಬೊರ್ಗ್ ಎಂಬ ಪಟ್ಟಣದ ಹತ್ತಿರ ಯುದ್ಧದಲ್ಲಿ ತೊಡಗಿದ್ದಾಗ ನಡೆದ ಸಿಡಿಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ನನ್ನನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ನನಗಾದ ಗಾಯಗಳು ನಾನು ಮುಂದೆ ರಣರಂಗಕ್ಕೆ ಕಾಲಿಡದಂತೆ ಮಾಡಿದವು.
1944ರ ಸೆಪ್ಟೆಂಬರ್ ತಿಂಗಳಲ್ಲಿ ನನ್ನನ್ನು ಸೈನ್ಯದಿಂದ ಹಿಂದೆ ಕಳುಹಿಸಲಾಯಿತು. ನಾನು ಪುನಃ ಕಾಲೇಜಿಗೆ ಸೇರಿಕೊಂಡೆ. ಕ್ರೀಡೆಗಳಲ್ಲೂ ಭಾಗವಹಿಸಿದೆ. ಎರಡು ಬಾರಿ ರಿಲೇ ಓಟದಲ್ಲಿ, ಒಮ್ಮೆ ಹರ್ಡಲ್ ಓಟದಲ್ಲಿ ಹೀಗೆ ಮೂರು ಸಾರಿ ರಾಷ್ಟ್ರಮಟ್ಟದ ಚ್ಯಾಂಪಿಯನ್ ಆದೆ. ತಂತ್ರಜ್ಞಾನ ಮತ್ತು ಅರ್ಥಶಾಸ್ತ್ರದಲ್ಲೂ ಪದವಿ ಪಡೆದೆ.
ಈ ಕಾಲಾವಧಿಯಲ್ಲಿ ಉರ್ಹೊ ಕೆಕನನ್‌ರು ರಾಜಕೀಯದಲ್ಲಿ ತಮ್ಮ ಛಾಪು ಮೂಡಿಸಿದ್ದರು. ಅವರು ಪ್ರಧಾನ ಮಂತ್ರಿಯಾಗಿದ್ದಾಗ ಚೀನಾದಲ್ಲಿ ರಾಯಭಾರಿಯಾಗಿ ಕೆಲಸಮಾಡುವಂತೆ ನನ್ನನ್ನು ಕೇಳಿಕೊಂಡರು. ಇದು 1952ರಲ್ಲಿ. ಅಲ್ಲಿದ್ದಾಗ ನಾನು ಅನೇಕ ಸರಕಾರೀ ಅಧಿಕಾರಿಗಳನ್ನು ಭೇಟಿಮಾಡಿದೆ, ಆಗ ಚೀನಾದ ನಾಯಕರಾಗಿದ್ದ ಮಾವೋ ತ್ಸೆ-ಡುಂಗ್ ಕೂಡ ಸಿಕ್ಕಿದ್ದರು. ಆದರೆ ನನಗೆ ಅಲ್ಲಿ ಸಿಕ್ಕಿದ ತುಂಬ ಸ್ಪೆಶಲ್ ವ್ಯಕ್ತಿ ಆನೀಕೀ ಎಂಬ ಸುಂದರ ಚೆಲುವೆ. ಫಿನ್‌ಲೆಂಡ್‌ನ ವಿದೇಶಾಂಗ ಖಾತೆಗಾಗಿ ಕೆಲಸಮಾಡುತ್ತಿದ್ದಳು. 1956ರ ನವೆಂಬರ್‌ನಲ್ಲಿ ನನ್ನ ಬಾಳಸಂಗಾತಿಯಾದಳು.
ಮುಂದಿನ ವರ್ಷ ಅರ್ಜೆಂಟೀನದಲ್ಲಿರುವ ಫಿನ್‌ಲೆಂಡ್‌ನ ರಾಯಭಾರ ಕಛೇರಿಗೆ ನನ್ನ ವರ್ಗಾವಣೆ ಆಯಿತು. ಆ ದೇಶದಲ್ಲಿದ್ದಾಗ ನಮಗೆ ಇಬ್ಬರು ಗಂಡುಮಕ್ಕಳು ಹುಟ್ಟಿದರು. 1960ರ ಜನವರಿಯಲ್ಲಿ ಫಿನ್‌ಲೆಂಡ್‌ಗೆ ಹಿಂದಿರುಗಿದೆವು. ಸ್ವಲ್ಪದರಲ್ಲೇ ನಮಗೆ ಒಂದು ಹೆಣ್ಣುಮಗು ಹುಟ್ಟಿತು.
ದೊಡ್ಡ ಸರಕಾರೀ ಹುದ್ದೆಗಳಲ್ಲಿ
ಹಿಂದೆ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಲಿಲ್ಲವಾದರೂ 1963ರ ನವೆಂಬರ್‌ನಲ್ಲಿ ವಿದೇಶೀ ವ್ಯಾಪಾರದ ಸಚಿವನಾಗುವಂತೆ ರಾಷ್ಟ್ರಾಧ್ಯಕ್ಷ ಕೆಕನನ್ ಕೇಳಿಕೊಂಡರು. ಮುಂದೆ 12 ವರ್ಷಗಳಲ್ಲಿ ಮಂತ್ರಿಮಂಡಲದ ಆರು ಸ್ಥಾನಗಳಲ್ಲಿ ಕೆಲಸಮಾಡಿದೆ, ಇದರಲ್ಲಿ ಎರಡು ಬಾರಿ ವಿದೇಶಾಂಗ ಸಚಿವನಾಗಿದ್ದೆ. ಮಾನವ ಪ್ರಯತ್ನ, ಬುದ್ಧಿವಂತಿಕೆಯಿಂದ ಲೋಕದ ಸಮಸ್ಯೆಗಳನ್ನು ನಿವಾರಿಸಸಾಧ್ಯ ಎಂದು ನಾನು ಬಲವಾಗಿ ನಂಬುತ್ತಿದ್ದ ದಿನಗಳವು. ಆದರೆ ಮಾನವನೆಷ್ಟು ಅಧಿಕಾರದಾಹಿ ಎಂದು ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಪನಂಬಿಕೆ, ಮತ್ಸರದ ದುಷ್ಪರಿಣಾಮಗಳನ್ನು ಕಣ್ಣಾರೆ ನೋಡಿದೆ.—ಪ್ರಸಂಗಿ 8:9.
ಸುಧಾರಣೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ಅನೇಕ ಜನರೂ ಇದ್ದರು. ಆದರೆ ಈ ಸದುದ್ದೇಶವಿದ್ದ ನಾಯಕರಿಗೂ ತಮ್ಮ ಗುರಿಮುಟ್ಟಲು ಸಾಧ್ಯವಾಗುತ್ತಿರಲಿಲ್ಲ.
1975ರ ಬೇಸಗೆಯಲ್ಲಿ ‘ಯೂರೋಪಿನ ಭದ್ರತೆ ಮತ್ತು ಸಹಕಾರ ಕುರಿತ ಸಮ್ಮೇಳನ’ ನಡೆಯಿತು, ಹೆಲ್ಸಿಂಕಿ ನಗರದಲ್ಲಿ. 35 ದೇಶಗಳ ಅಧ್ಯಕ್ಷರು ಬಂದಿದ್ದರು. ನಾನಾಗ ವಿದೇಶ ವ್ಯವಹಾರ ಸಚಿವನಾಗಿದ್ದೆ. ಅಧ್ಯಕ್ಷ ಕೆಕನನ್‌ರ ಆಪ್ತ ಸಲಹೆಗಾರನೂ ಆಗಿದ್ದೆ. ಆ ಸಮ್ಮೇಳನದ ಉಸ್ತುವಾರಿಯನ್ನು ನನಗೆ ವಹಿಸಲಾಗಿತ್ತು. ಆ ಎಲ್ಲ ನೇತಾರರನ್ನು ಭೇಟಿಯಾಗುವ ಅವಕಾಶ ಸಿಕ್ಕಿತ್ತು.
ಸಮ್ಮೇಳನದ ಆ ಕೆಲವೇ ದಿನಗಳಲ್ಲಿ ನಯನಾಜೂಕಿನಿಂದ ಮಾತಾಡಿ ಮಾತಾಡಿ ಸೋತುಹೋದೆ. ಬಂದಿದ್ದ ಸದಸ್ಯರನ್ನು ಅವರವರಿಗೆ ನೇಮಿಸಲಾದ ಆಸನಗಳಲ್ಲಿ ಕುಳಿತುಕೊಳ್ಳುವಂತೆ ಅವರನ್ನು ಒಪ್ಪಿಸುವಷ್ಟರಲ್ಲಿ ಸಾಕುಬೇಕಾಯಿತು! ಅದೇನೇ ಆದರೂ ಆ ಸಮ್ಮೇಳನದಿಂದ, ಅದರ ನಂತರ ನಡೆದ ಇನ್ನಿತರ ಸಭೆಗಳಿಂದ ಸ್ವಲ್ಪಮಟ್ಟಿಗಾದರೂ ಒಳಿತಾಯಿತೆಂದು ನನ್ನಭಿಪ್ರಾಯ. ಮಾನವ ಹಕ್ಕುಗಳಲ್ಲಿ ಸ್ವಲ್ಪ ಸುಧಾರಣೆ ತರಲು, ಶಕ್ತಿಶಾಲಿ ರಾಷ್ಟ್ರಗಳ ನಡುವೆ ಶಾಂತಿ ಕಾಪಾಡಿಕೊಳ್ಳಲು ಇದು ನೆರವಾಯಿತು.
ಆಧ್ಯಾತ್ಮಿಕ ಪ್ರಜ್ಞೆ ಹುಟ್ಟಿಕೊಂಡದ್ದು
1983ರಲ್ಲಿ ನಿವೃತ್ತಿ ಪಡೆದು ಫ್ರಾನ್ಸ್‌ನಲ್ಲಿ ನೆಲಸಿದೆ. ನನ್ನ ಮಗಳು ಅಲ್ಲಿದ್ದಳು. ಅಲ್ಲಿದ್ದಾಗ ಒಂದರಮೇಲೊಂದು ಆಘಾತಗಳು ನಮ್ಮ ಮೇಲೆ ಬಂದೆರಗಿದವು. 1994ರ ನವೆಂಬರ್‌ನಲ್ಲಿ ಆನೀಕೀಗೆ ಸ್ತನ ಕ್ಯಾನ್ಸರ್ ಇದೆ ಎಂದು ತಿಳಿದುಬಂತು. ಅದೇ ವರ್ಷದಲ್ಲಿ ನಾನೊಂದು ಹಣಹೂಡಿಕೆ ಯೋಜನೆಯಲ್ಲಿ ಪಾಲುದಾರನಾದೆ. ಆದರೆ ಆ ಯೋಜನೆ ಜನರ ಹಣ ದೋಚಿ ಮೋಸಮಾಡಿತು. ಆ ಯೋಜನೆಯಲ್ಲಿ ಪಾಲುದಾರನಾಗುವ ನನ್ನ ಈ ಒಂದು ತಪ್ಪು ನಿರ್ಣಯದಿಂದಾಗಿ ನನ್ನ ಇಡೀ ಜೀವಮಾನದಲ್ಲಿ ಕಷ್ಟಪಟ್ಟು ಉಳಿಸಿಕೊಂಡಿದ್ದ ಒಳ್ಳೇ ಹೆಸರಿಗೆ ಮಸಿ ಬಳಿದುಕೊಂಡೆ.
ನನ್ನ ಬದುಕಿನುದ್ದಕ್ಕೂ ಯೆಹೋವನ ಸಾಕ್ಷಿಗಳು ನಮ್ಮ ಮನೆಗೆ ಎಷ್ಟೋ ಸಾರಿ ಬಂದು ಮಾತಾಡಿದ್ದಾರೆ. ಅವರನ್ನು ಸ್ವಾಗತಿಸಿದ್ದೇನೆ, ಅವರು ಕೊಟ್ಟ ಪತ್ರಿಕೆಗಳನ್ನು ತೆಗೆದುಕೊಂಡಿದ್ದೇನೆ. ಆದರೆ ಎಷ್ಟು ಬ್ಯುಸಿಯಾಗಿರುತ್ತಿದ್ದೆ ಎಂದರೆ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಯೋಚಿಸಲು ಸಮಯವೇ ಇರುತ್ತಿರಲಿಲ್ಲ. ಇಸವಿ 2000ದಷ್ಟಕ್ಕೆ ನನಗೆ ಸ್ವಲ್ಪ ಪುರುಸೊತ್ತು ಇತ್ತು, ಬೇರೇನೂ ಕೆಲಸಮಾಡುತ್ತಿರಲಿಲ್ಲ. ಕ್ಯಾನ್ಸರ್‌ನಿಂದ ನರಳುತ್ತಿದ್ದ ಆನೀಕೀಯ ಆರೈಕೆ ಮಾಡುತ್ತಿದ್ದೆ ಅಷ್ಟೆ. 2002ರ ಸೆಪ್ಟೆಂಬರ್‌ನಲ್ಲಿ ಒಬ್ಬ ಯೆಹೋವನ ಸಾಕ್ಷಿ ಮನೆಗೆ ಬಂದರು. ಈ ಲೇಖನದ ಆರಂಭದಲ್ಲಿರುವ ಪ್ರಶ್ನೆಯನ್ನು ನನಗೆ ಕೇಳಿದವರು ಅವರೇ. ಆಗ ನಾನು, ‘ದೇವರ ಬಗ್ಗೆ ನಿಜಾಂಶಗಳನ್ನು ತಿಳಿದುಕೊಳ್ಳಲು ಸಾಧ್ಯವೇ? ದೇವರ ಸ್ನೇಹಿತನಾಗುವುದು ಸಾಧ್ಯನಾ?’ ಎಂದು ಯೋಚಿಸತೊಡಗಿದೆ. ನನ್ನ ಬೈಬಲನ್ನು ಹುಡುಕಿ ತೆಗೆದು ಸಾಕ್ಷಿಗಳ ಜೊತೆ ಕೂತು ನಿಯಮಿತವಾಗಿ ಬೈಬಲ್ ಚರ್ಚೆಗಳಲ್ಲಿ ತೊಡಗಿದೆ.
2004ರ ಜೂನ್ ತಿಂಗಳಲ್ಲಿ ನನ್ನ ಪ್ರಿಯ ಪತ್ನಿ ನನ್ನನ್ನು ಅಗಲಿದಳು, ಏಕಾಂಗಿಯಾದೆ. ಆದರೆ ಮಕ್ಕಳು ನನ್ನ ಕೈಬಿಡಲಿಲ್ಲ, ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ‘ಮನುಷ್ಯ ಸತ್ತಾಗ ಅವನಿಗೇನಾಗುತ್ತದೆ?’ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಯಾವಾಗಲೂ ಇರುತ್ತಿತ್ತು. ಅದನ್ನು ಲೂತರ್ ಪಂಥದ ಇಬ್ಬರು ಪಾದ್ರಿಗಳಿಗೂ ಕೇಳಿದೆ. “ಈ ಪ್ರಶ್ನೆಗಳಿಗೆ ಉತ್ತರ ಹುಡುಕೋದು ತುಂಬ ಕಷ್ಟ” ಎಂದಷ್ಟೇ ಹೇಳಿದರು. ಅದು ಸರಿಯಾದ ಉತ್ತರ ಆಗಿರಲಿಲ್ಲ. ಉತ್ತರ ತಿಳಿಯಲೇ ಬೇಕೆಂಬ ಹಂಬಲ ಹೆಚ್ಚಿತು, ಆಧ್ಯಾತ್ಮಿಕ ಪ್ರಜ್ಞೆ ಹೆಚ್ಚಾಯಿತು.
ಯೆಹೋವನ ಸಾಕ್ಷಿಗಳ ಸಹಾಯದಿಂದ ಬೈಬಲ್ ಅಧ್ಯಯನ ಮಾಡುತ್ತಾ ಹೋದೆ. ನಾನು ತಿಳಿಯಬೇಕೆಂದು ಹಂಬಲಿಸುತ್ತಿದ್ದ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು, ನಿಖರ ಜ್ಞಾನ ಸಂಪಾದಿಸಿಕೊಂಡೆ. ಉದಾಹರಣೆಗೆ, ಮರಣದ ಬಗ್ಗೆ ಬೈಬಲ್ ತಿಳಿಸುವ ನಿಜಾಂಶವನ್ನು ತಿಳಿದುಕೊಂಡೆ. ಸುತ್ತಮುತ್ತ ಏನು ನಡೆದರೂ ಅರಿವೇ ಆಗದಿರುವ ನಿದ್ರೆಯಂಥ ಸ್ಥಿತಿಯೇ ಮರಣ. ಮರಣಪಟ್ಟ ಜನರು ಇದೇ ಭೂಮಿಯಲ್ಲಿ ಪುನಃ ಮನುಷ್ಯರಾಗಿಯೇ ಜೀವಿಸುವ ಹಾಗೆ ದೇವರು ಮಾಡುತ್ತಾನೆ ಎನ್ನುತ್ತದೆ ಬೈಬಲ್. (ಯೋಹಾನ 11:25) ಈ ಸತ್ಯಾಂಶ ನನ್ನ ಹೃದಯದಲ್ಲಿ ಭರವಸೆಯ ಬೆಳ್ಳಿರೇಖೆ ಮೂಡಿಸಿತು. ಅಪಾರ ನೆಮ್ಮದಿ ತಂದುಕೊಟ್ಟಿತು.
ಬೇಗನೆ ಇಡೀ ಬೈಬಲನ್ನು ಓದಿ ಮುಗಿಸಿದೆ. ನನಗೆ ತುಂಬ ಇಷ್ಟ ಆದ ವಚನವೆಂದರೆ ಮೀಕ 6:8: “ನ್ಯಾಯವನ್ನು ಆಚರಿಸುವದು, ಕರುಣೆಯಲ್ಲಿ ಆಸಕ್ತನಾಗಿರುವದು, ನಿನ್ನ ದೇವರಿಗೆ ನಮ್ರವಾಗಿ ನಡೆದುಕೊಳ್ಳುವದು, ಇಷ್ಟನ್ನೇ ಹೊರತು ಯೆಹೋವನು ನಿನ್ನಿಂದ ಇನ್ನೇನು ಅಪೇಕ್ಷಿಸುವನು?” ಅಗಾಧ ವಿಷಯವನ್ನು ಸರಳವಾಗಿ ಬಿಂಬಿಸುವ ಈ ಮಾತುಗಳು ನನ್ನ ಮನಸ್ಪರ್ಶಿಸಿದವು. ಯೆಹೋವ ದೇವರು ಅಪಾರ ಪ್ರೀತಿವಾತ್ಸಲ್ಯದ ನ್ಯಾಯಪರ ವ್ಯಕ್ತಿ ಎನ್ನುವುದನ್ನೂ ಅವು ತೋರಿಸುತ್ತವೆ.
ಭವಿಷ್ಯಕ್ಕೊಂದು ಆಶಾಕಿರಣ
ದೇವರ ಬಗ್ಗೆ ನಿಜಾಂಶಗಳನ್ನು ಕಲಿಯುತ್ತಿದ್ದ ಹಾಗೆ ಆತನ ಮೇಲೆ ನಂಬಿಕೆ, ಭರವಸೆ ಹೆಚ್ಚಾಯಿತು. ನನ್ನ ಸೃಷ್ಟಿಕರ್ತನೊಂದಿಗೆ ಆಪ್ತ ಸ್ನೇಹ ಬೆಳೆಯಿತು! ಆತನು ಯೆಶಾಯ 55:11ರಲ್ಲಿ ಹೇಳಿರುವ ವಿಷಯ ನನ್ನ ಮೇಲೆ ತುಂಬ ಪ್ರಭಾವ ಬೀರಿತು: “ನನ್ನ ಬಾಯಿಂದ ಹೊರಟ ಮಾತು ನನ್ನ ಇಷ್ಟಾರ್ಥವನ್ನು ನೆರವೇರಿಸಿ ನಾನು ಉದ್ದೇಶಿಸಿದ್ದನ್ನು ಕೈಗೂಡಿಸಿದ ಹೊರತು ನನ್ನ ಕಡೆಗೆ ವ್ಯರ್ಥವಾಗಿ ಹಿಂದಿರುಗುವದಿಲ್ಲ.” ಇಂದಿನ ವರೆಗೂ ದೇವರು ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾನೆ, ತಪ್ಪಿದ್ದಿಲ್ಲ. ಮುಂದಕ್ಕೂ ಹಾಗೇ ಮಾಡುವನು. ಮಾನವ ಸರ್ಕಾರಗಳು, ರಾಜಕೀಯ ಸಮಾವೇಶಗಳು ಜನರ ಮನಸ್ಸಿನಲ್ಲಿ ಗಾಳಿಗೋಪುರಗಳನ್ನು ಕಟ್ಟಿವೆ. ಆದರೆ ದೇವರು ತಾನು ಕೊಟ್ಟ ಮಾತನ್ನು ಖಂಡಿತ ನೆರವೇರಿಸುವನು. ಇದಕ್ಕೆ ಒಂದು ಉದಾಹರಣೆ ಕೀರ್ತನೆ 46:9ರಲ್ಲಿ ಹೇಳುವಂತೆ ಆತನು “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿ”ಬಿಡುವನು.
ಯೆಹೋವನ ಸಾಕ್ಷಿಗಳ ಕೂಟಗಳಿಂದ ನನಗಾದ ಪ್ರಯೋಜನದ ಬಗ್ಗೆ ಎಷ್ಟು ಹೇಳಿದರೂ ಸಾಲದು. ನಿಜ ಪ್ರೀತಿ ಹೇಗಿರುತ್ತದೆಂದು ಗೊತ್ತಾಗಿದ್ದೇ ಅಲ್ಲಿ. ಯೇಸುವಿನ ನಿಜ ಅನುಯಾಯಿಗಳಲ್ಲಿ ಇರಬೇಕಾದ ಮುಖ್ಯ ಗುಣ ಇದೇ ತಾನೇ? (ಯೋಹಾನ 13:35) ಈ ಪ್ರೀತಿ ದೇಶದ ಗಡಿಗಳನ್ನು ಮೀರಿ ಎಲ್ಲರನ್ನೂ ಒಂದಾಗಿಸುತ್ತದೆ. ರಾಜಕೀಯ, ವಾಣಿಜ್ಯ ಪ್ರಪಂಚದಲ್ಲಿ ಕಂಡುಕೇಳರಿಯದ ಗುಣವಿದು.
ಸರಿಸಾಟಿಯಿಲ್ಲದ ಸೌಭಾಗ್ಯ
ಈಗ ನನಗೆ 90 ದಾಟಿದೆ. ನಾನೊಬ್ಬ ಯೆಹೋವನ ಸಾಕ್ಷಿ ಆಗಿರುವುದು ನನ್ನ ಜೀವಮಾನದ ಅತಿ ದೊಡ್ಡ ಸೌಭಾಗ್ಯ. ನನ್ನ ಆಧ್ಯಾತ್ಮಿಕ ಹಸಿವು ನೀಗಿದೆ. ಬದುಕಿನ ಉದ್ದೇಶ, ದೇವರ ಬಗ್ಗೆ ನಿಜಾಂಶಗಳನ್ನು ತಿಳಿದುಕೊಳ್ಳುವ ಭಾಗ್ಯ ನನಗೆ ಸಿಕ್ಕಿದೆ.
ಈ ವಯಸ್ಸಿನಲ್ಲೂ ಕ್ರೈಸ್ತ ಕೂಟಗಳಿಗೆ ಹೋಗುತ್ತೇನೆ, ಬೈಬಲಿನ ಸುವಾರ್ತೆಯನ್ನು ನನ್ನಿಂದಾದಷ್ಟು ಸಾರುತ್ತೇನೆ. ನನ್ನ ಜೀವನದಲ್ಲಿ ದೊಡ್ಡದೊಡ್ಡ ವ್ಯಕ್ತಿಗಳ ಒಡನಾಟ ಮಾಡಿದ್ದೇನೆ, ಭಾರಿ ಜವಾಬ್ದಾರಿಗಳನ್ನು ನಿರ್ವಹಿಸಿದ್ದೇನೆ. ಆದರೆ ಸೃಷ್ಟಿಕರ್ತನಾದ ಯೆಹೋವ ದೇವರನ್ನು ತಿಳಿದುಕೊಳ್ಳುವ, ಆತನ ಸ್ನೇಹಿತನಾಗುವ ಸೌಭಾಗ್ಯದೆದುರು ಅವೆಲ್ಲ ಏನೂ ಅಲ್ಲ. ಆತನಿಗೆ ನಾನು ಚಿರಋಣಿ. ದೇವರ “ಜೊತೆಕೆಲಸಗಾರ”ನಾಗುವ ಅವಕಾಶವನ್ನು ನನಗೆ ಕೊಟ್ಟದ್ದಕ್ಕೆ ಆತನನ್ನು ಯಾವಾಗಲೂ ಕೊಂಡಾಡುತ್ತೇನೆ. (1 ಕೊರಿಂಥ 3:9) ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರ ಸ್ನೇಹಿತನಾಗಲು ಇಳಿವಯಸ್ಸು ಅಡ್ಡಬರಲಿಲ್ಲ! (g12-E 01)
[ಪುಟ 21ರಲ್ಲಿರುವ ಚಿತ್ರ]
ಅಧ್ಯಕ್ಷ ಕೆಕನನ್ ಮತ್ತು ಅಮೆರಿಕದ ಅಧ್ಯಕ್ಷ ಫೋರ್ಡ್ ಜತೆ ಹೆಲ್ಸಿಂಕಿ ಸಮ್ಮೇಳನದಲ್ಲಿ, 1975
[ಪುಟ 21ರಲ್ಲಿರುವ ಚಿತ್ರ]
ಅಧ್ಯಕ್ಷ ಕೆಕನನ್ ಮತ್ತು ಸೋವಿಯತ್ ನಾಯಕ ಬ್ರೆಜ್ನೆವ್ ಜತೆ
[ಪುಟ 22ರಲ್ಲಿರುವ ಚಿತ್ರ]
ಕೂಟಗಳಿಗೆ ಹೋಗುತ್ತೇನೆ, ನನ್ನಿಂದಾದಷ್ಟು ಸುವಾರ್ತೆ ಸಾರುತ್ತೇನೆ
[ಪುಟ 21ರಲ್ಲಿರುವ ಚಿತ್ರ ಕೃಪೆ]
ಎಡಬದಿ ಚಿತ್ರ: Ensio Ilmonen/Lehtikuva; ಬಲಬದಿ ಚಿತ್ರ: Esa Pyysalo/Lehtikuva