ಪ್ರಾಮಾಣಿಕತೆ ಅಭಿವೃದ್ಧಿಯ ಮಂತ್ರ
ಪ್ರಾಮಾಣಿಕತೆ ಅಭಿವೃದ್ಧಿಯ ಮಂತ್ರ
“ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.”—ಲೂಕ 12:15.
ನಮ್ಮನ್ನೂ ನಮ್ಮ ಕುಟುಂಬವನ್ನೂ ನೋಡಿಕೊಳ್ಳುವ ಹೊಣೆಯನ್ನು ದೇವರು ನಮಗೆ ಕೊಟ್ಟಿದ್ದಾನೆ. (1 ತಿಮೊಥೆಯ 5:8) ಅದಕ್ಕಾಗಿ ನಾವು ನಾಲ್ಕು ಕಾಸು ಸಂಪಾದಿಸಲೇ ಬೇಕು.
ಆದರೆ ಹಣ ಸಂಪಾದನೆ, ಆ ಹಣದಿಂದ ವಸ್ತುಗಳ ಖರೀದಿ ಇವೇ ನಮ್ಮ ಜೀವನದ ಗುರಿಯಾಗಿಬಿಟ್ಟರೆ? ಹಣ ಸಂಪಾದಿಸುವ ಉದ್ದೇಶವೇ ಹಾದಿ ತಪ್ಪಿದರೆ? ಹಣಸಂಪತ್ತೇ ಸರ್ವಸ್ವ ಆಗಿಬಿಡುವ ವ್ಯಕ್ತಿಗೆ ಸುಲಭವಾಗಿ ತೋಚುವ ಹಾದಿ ಅಪ್ರಾಮಾಣಿಕತೆ. ಆದರೆ ಆ ಹಾದಿ ಆತನನ್ನು ಯಶಸ್ಸಿನಿಂದ ಬಹುದೂರ ಕೊಂಡೊಯ್ಯಬಲ್ಲದು. ಹಿಂದಿರುಗಲು ಯೋಚಿಸುವಷ್ಟರಲ್ಲಿ ಕಾಲ ಮಿಂಚಿರುವುದು. ಅಷ್ಟೇ ಅಲ್ಲ ಬೈಬಲ್ ಹೇಳುವಂತೆ ಹಣದ ಪ್ರೇಮ ಬಹಳಷ್ಟು ದುಃಖದುಮ್ಮಾನಗಳನ್ನು ಬರಿಸುವುದು.—1 ತಿಮೊಥೆಯ 6:9, 10.
ಹಣಸಂಪತ್ತನ್ನು ಗುಡ್ಡೆಹಾಕುವುದೊಂದೇ ನಿಜ ಯಶಸ್ಸಲ್ಲ ಎನ್ನುತ್ತಾರೆ ಈ ಕೆಳಗಿನ ನಾಲ್ವರು.
ಆತ್ಮಗೌರವ
“ಕೆಲವು ವರ್ಷಗಳ ಹಿಂದೆ ನಡೆದ ಘಟನೆ. 10 ಲಕ್ಷ ಡಾಲರ್ ಬೆಲೆಯ ವಿಮೆಯನ್ನು ಖರೀದಿಸಬೇಕೆಂದಿದ್ದ ಒಬ್ಬ ಗ್ರಾಹಕನನ್ನು ಭೇಟಿಯಾದೆ. ಅವನು ವಿಮೆ ತೆಗೆದುಕೊಂಡರೆ ನನಗೆ ಸಾವಿರಾರು ಡಾಲರುಗಳ ಕಮಿಷನ್ ಸಿಗುತ್ತಿತ್ತು. ಅದರಲ್ಲಿ ಅರ್ಧ ಭಾಗ ತನಗೆ ಕೊಟ್ಟರೆ ಮಾತ್ರ ವಿಮೆ ಖರೀದಿಸುತ್ತೇನೆ ಎಂದನು. ಇದು ನನ್ನ ವೃತ್ತಿಯ ನೀತಿನಿಯಮಗಳಿಗೆ ವಿರುದ್ಧವಾಗಿತ್ತು. ಕಾನೂನಿಗೂ ವಿರುದ್ಧವಾಗಿತ್ತು. ಅದನ್ನು ಅವನಿಗೆ ಹೇಳಿಯೂ ಬಿಟ್ಟೆ.
“ಅವನ ಹತ್ತಿರ ಹೀಗೆ ತರ್ಕ ಮಾಡಿದೆ. ನೀವು ಹೇಳಿದ ಹಾಗೆ ಮಾಡಿದರೆ ನಾನು ಅಪ್ರಾಮಾಣಿಕ ಅಂತಾಯ್ತು. ನಿಮಗೆ ಮಾತ್ರ ಪ್ರಾಮಾಣಿಕನಾಗಿದ್ದು, ನಿಮ್ಮ ಖಾಸಗಿ ಹಾಗೂ ಹಣಕಾಸಿನ ವಿವರಗಳನ್ನು ಗೋಪ್ಯವಾಗಿಡುತ್ತೇನೆಂದು ಏನು ಗ್ಯಾರಂಟಿ? ಮತ್ತೊಮ್ಮೆ ನನ್ನ ನಿರ್ಧಾರವನ್ನು ಹೇಳಿದೆ. ಇದನ್ನು ಒಪ್ಪಿ ನನ್ನನ್ನು ನಿಮ್ಮ ಏಜೆಂಟ್ ಆಗಿ ಮಾಡಿಕೊಳ್ಳಬೇಕೆಂದಿದ್ದರೆ ನನ್ನನ್ನು ಸಂಪರ್ಕಿಸಿ ಎಂದು ಹೇಳಿ ಹೊರಟೆ. ಆಮೇಲೆ ಅವನ ಸುದ್ದಿನೇ ಇಲ್ಲ.
“ಆ ವ್ಯಕ್ತಿಯ ಮಾತಿನಂತೆ ಮಾಡುತ್ತಿದ್ದರೆ ನನ್ನ ದೃಷ್ಟಿಯಲ್ಲಿ ನಾನೇ ನೀಚನಾಗಿ ಬಿಡುತ್ತಿದ್ದೆ, ಕ್ರೈಸ್ತನಾಗಿರುವ ನನ್ನ ಆತ್ಮಗೌರವ ನುಚ್ಚುನೂರಾಗಿ ಹೋಗುತ್ತಿತ್ತು, ಅವ್ಯವಹಾರದಲ್ಲಿ ಸೇರಿಕೊಳ್ಳಲು ಕುಮ್ಮಕ್ಕು ನೀಡಿದ ಆ ವ್ಯಕ್ತಿಗೆ ದಾಸನಾಗಿ ಬಿಡುತ್ತಿದ್ದೆ.”—ಡಾನ್, ಅಮೆರಿಕ.
ಮನಶ್ಶಾಂತಿ
ಈ ಲೇಖನಮಾಲೆಯ ಆರಂಭದಲ್ಲಿ ಡ್ಯಾನಿ ಎಂಬವನ ಬಗ್ಗೆ ಓದಿದ್ದೆವು. ಆ ಫ್ಯಾಕ್ಟರಿ ಗುಣಮಟ್ಟದ ವಸ್ತುಗಳನ್ನು ತಯಾರಿಸುತ್ತದೆಂದು ಸುಳ್ಳುಹೇಳಲು ಡ್ಯಾನಿಗೆ ದೊಡ್ಡ ಮೊತ್ತದ ಆಮಿಷವೊಡ್ಡಲಾಗಿತ್ತು. ಡ್ಯಾನಿ ಏನು ಮಾಡಿದನು?
“ರಾತ್ರಿಯೂಟದ ಏರ್ಪಾಡು ಮಾಡಿದ್ದಕ್ಕೆ ನಾನು ಮ್ಯಾನೇಜರನಿಗೆ
ಧನ್ಯವಾದ ಹೇಳಿ ಆ ಹಣದ ಕವರನ್ನು ಹಿಂದೆ ಕೊಟ್ಟೆ. ಆದರೆ ಅವನು ಅಲ್ಲಿಗೇ ಬಿಡಲಿಲ್ಲ. ಗುತ್ತಿಗೆ ಅವನ ಫ್ಯಾಕ್ಟರಿಗೆ ಸಿಗುವ ಹಾಗೆ ಮಾಡಿದರೆ ಇನ್ನೂ ಜಾಸ್ತಿ ಹಣ ಕೊಡುತ್ತೇನೆ ಎಂದನು. ಆದರೆ ನಾನು ಒಪ್ಪಲಿಲ್ಲ.“ನಾನು ಲಂಚ ತಕ್ಕೊಂಡಿರುತ್ತಿದ್ದರೆ ನನ್ನ ಗುಟ್ಟು ರಟ್ಟಾಗುವ ಭಯದಲ್ಲೇ ಜೀವಿಸಬೇಕಾಗುತ್ತಿತ್ತು. ಸ್ವಲ್ಪ ಸಮಯದ ನಂತರ, ನಡೆದ ಸಂಗತಿ ಧಣಿಗೆ ಹೇಗೊ ಗೊತ್ತಾಯಿತು. ನಾನು ಯಾವ ಅಪ್ರಾಮಾಣಿಕ ಕೆಲಸವನ್ನೂ ಮಾಡದಿದ್ದದ್ದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. ಜ್ಞಾನೋಕ್ತಿ 15:27 ನೆನಪಾಯಿತು: ‘ಸೂರೆಮಾಡುವವನು ಸ್ವಂತ ಮನೆಯನ್ನು ಬಾಧಿಸುವನು. ಲಂಚವನ್ನೊಪ್ಪದವನು ಸುಖವಾಗಿ ಬಾಳುವನು.’”—ಡ್ಯಾನಿ, ಹಾಂಗ್ ಕಾಂಗ್.
ಸುಖೀಸಂಸಾರ
“ನನ್ನದು ಸ್ವ-ಉದ್ಯೋಗ. ಕಟ್ಟಡ ನಿರ್ಮಾಣ ಕೆಲಸ. ಗಿರಾಕಿಗಳಿಗೆ ಮೋಸಮಾಡಲು, ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳಲು ಬೇಜಾನ್ ಅವಕಾಶಗಳಿವೆ. ಆದರೆ ಪ್ರಾಮಾಣಿಕ ವ್ಯಕ್ತಿಯಾಗಿರಬೇಕೆನ್ನುವ ನನ್ನ ದೃಢಸಂಕಲ್ಪದಿಂದ ನನಗೂ ನನ್ನ ಕುಟುಂಬಕ್ಕೂ ಒಳ್ಳೆಯದೇ ಆಗಿದೆ.
“ಬರೀ ಕೆಲಸ, ವ್ಯಾಪಾರದಲ್ಲಿ ಮಾತ್ರವಲ್ಲ ಎಲ್ಲದರಲ್ಲೂ ಪ್ರಾಮಾಣಿಕತೆ ತೋರಿಸುತ್ತೇನೆ. ಎಂಥ ಪರಿಸ್ಥಿತಿ ಬಂದರೂ ಪ್ರಾಮಾಣಿಕತೆಯ ಬಗ್ಗೆ ದೇವರಿಟ್ಟ ನೀತಿನಿಯಮಗಳನ್ನು ಮುರಿಯುವುದಿಲ್ಲ ಎಂದು ತಿಳಿದಾಗಲಂತೂ ಗಂಡನಿಗೆ ಹೆಂಡತಿ ಮೇಲೆ ಹೆಂಡತಿಗೆ ಗಂಡನ ಮೇಲೆ ನಂಬಿಕೆ ಹೆಚ್ಚಾಗುತ್ತದೆ. ನೀವು ಅನುಕೂಲಕ್ಕೆ ತಕ್ಕಂತೆ ಪ್ರಾಮಾಣಿಕತೆ ತೋರಿಸುವ ವ್ಯಕ್ತಿಯಲ್ಲ ಎಂದು ನಿಮ್ಮ ಸಂಗಾತಿಗೆ ತಿಳಿದಾಗಲೂ ನಿಮ್ಮ ಮೇಲೆ ಭರವಸೆ ಹೆಚ್ಚಾಗಿ ನಿಶ್ಚಿಂತೆಯಿಂದ ಇರುತ್ತಾರೆ.
“ನೀವು ಪ್ರಪಂಚದಲ್ಲೇ ಅತಿ ದೊಡ್ಡ ಕಂಪನಿಯ ಮಾಲೀಕರಾಗಿರಬಹುದು, ಆದರೆ ಕುಟುಂಬದಲ್ಲಿ ಸಂತೋಷ ಇಲ್ಲದಿದ್ದರೆ? ನಾನೊಬ್ಬ ಯೆಹೋವನ ಸಾಕ್ಷಿಯಾಗಿರುವುದರಿಂದ ಬೈಬಲ್ ತತ್ವಗಳನ್ನು ಪಾಲಿಸುತ್ತೇನೆ. ಇದರಿಂದ ಜೀವನ ಸುಗಮವಾಗಿ ಸಾಗುತ್ತಿದೆ. ಹಣ, ದುರಾಶೆಗಳ ಹಿಂದೆ ಬಿದ್ದಿರುವ ಈ ಲೋಕದ ತಾಳಕ್ಕೆ ತಕ್ಕಂತೆ ನಾನು ಕುಣಿಯುವುದಿಲ್ಲ. ಹಾಗಾಗಿ ಕುಟುಂಬದ ಜೊತೆ ಬೆರೆಯಲು ನನಗೆ ಸಮಯ ಸಿಗುತ್ತದೆ.”—ಡರ್ವಿನ್, ಅಮೆರಿಕ.
ದೇವರೊಂದಿಗೆ ಒಳ್ಳೇ ಸಂಬಂಧ
“ಕಂಪನಿಗೆ ವಸ್ತುಗಳನ್ನು ಖರೀದಿಸಿ ತರುವುದು ನನ್ನ ಕೆಲಸ. ವಸ್ತುಗಳ ಮೇಲೆ ಸಿಗುವ ಸಂಪೂರ್ಣ ರಿಯಾಯಿತಿಯನ್ನು ಕಂಪನಿಗೆ ಕೊಡದೆ ಅದರಲ್ಲಿ ಇಂತಿಷ್ಟು ಪರ್ಸಂಟ್ ನಿನಗೆ ಕೊಡುತ್ತೇವೆಂದು ಏಜೆಂಟರು ನನಗೆ ಹೇಳುವುದಿದೆ. ಆದರೆ ಇದು ಒಂದು ರೀತಿಯಲ್ಲಿ ಕಂಪನಿಯ ಹಣವನ್ನು ದೋಚಿದ ಹಾಗೆ.
“ನನ್ನ ಸಂಪಾದನೆ ಹೇಳುವಷ್ಟೇನಿಲ್ಲ. ಹಾಗಾಗಿ ಏಜೆಂಟರು ಕೊಡುವ ಹಣ ತಕ್ಕೊಂಡರೆ ಸಹಾಯವಾಗಬಹುದು. ಆದರೆ ಶುದ್ಧ ಮನಸ್ಸಾಕ್ಷಿ ಇರಲ್ಲ, ದೇವರ ದೃಷ್ಟಿಯಲ್ಲೂ ನೀಚ ವ್ಯಕ್ತಿಯಾಗಿ ಬಿಡುತ್ತೇನೆ. ಆದ್ದರಿಂದ ‘ಎಲ್ಲ ವಿಷಯಗಳಲ್ಲಿ ಪ್ರಾಮಾಣಿಕರಾಗಿ ನಡೆದುಕೊಳ್ಳಬೇಕು’ ಎಂದು ಬೈಬಲಿನ ಇಬ್ರಿಯ 13:18ರಲ್ಲಿ ಕೊಡಲಾಗಿರುವ ತತ್ವವನ್ನು ಪಾಲಿಸುತ್ತೇನೆ.”—ರಾಕೆಲ್, ಫಿಲಿಪ್ಪೀನ್ಸ್. (g12-E 01)
[ಪುಟ 9ರಲ್ಲಿರುವ ಚೌಕ/ಚಿತ್ರಗಳು]
ಪ್ರಾಮಾಣಿಕ ವ್ಯಾಪಾರ-ವ್ಯವಹಾರಕ್ಕಾಗಿ ಸೂತ್ರಗಳು
ವ್ಯಾಪಾರ ನೀತಿಗಳು ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಹಾಗಾಗಿ ಬೈಬಲ್ ತತ್ವಗಳನ್ನು ಆಧಾರವಾಗಿಟ್ಟುಕೊಂಡರೆ ಒಳ್ಳೇ ತೀರ್ಮಾನಗಳನ್ನು ಮಾಡಲು ಸಹಾಯವಾಗುತ್ತದೆ. ಪ್ರಾಮಾಣಿಕ ವ್ಯಾಪಾರ-ವ್ಯವಹಾರದಲ್ಲಿ ಕೆಳಕಂಡ ಆರು ಸೂತ್ರಗಳಿರಲಿ:
ಸತ್ಯತೆ
ತತ್ವ: “ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ.”—ಕೊಲೊಸ್ಸೆ 3:9.
ವಚನಪಾಲನೆ
ತತ್ವ: “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ ಎಂದಿರಲಿ.”—ಮತ್ತಾಯ 5:37.
ನಂಬಿಕೆಗರ್ಹ
ತತ್ವ: “ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ.”—ಜ್ಞಾನೋಕ್ತಿ 25:9.
ಶುದ್ಧಹಸ್ತ
ತತ್ವ: “ಲಂಚವನ್ನು ತೆಗೆದುಕೊಳ್ಳಬಾರದು; ಲಂಚವು ಕಣ್ಣುಳ್ಳವರನ್ನು ಕುರುಡರಂತೆ ಮಾಡುತ್ತದೆ.”—ವಿಮೋಚನಕಾಂಡ 23:8.
ನ್ಯಾಯ
ತತ್ವ: “ಜನರು ನಿಮಗೆ ಏನು ಮಾಡಬೇಕೆಂದು ನೀವು ಬಯಸುತ್ತೀರೋ ಅವುಗಳೆಲ್ಲವನ್ನು ನೀವು ಸಹ ಅವರಿಗೆ ಮಾಡಬೇಕು.”—ಮತ್ತಾಯ 7:12.
ಕಾನೂನುಬದ್ಧ
ತತ್ವ: “ಅವರವರಿಗೆ ಸಲ್ಲತಕ್ಕದ್ದನ್ನು ಸಲ್ಲಿಸಿರಿ; ಯಾರಿಗೆ ತೆರಿಗೆಯೋ ಅವರಿಗೆ ತೆರಿಗೆಯನ್ನು . . . ಸಲ್ಲಿಸಿರಿ.”—ರೋಮನ್ನರಿಗೆ 13:7.
[ಪುಟ 9ರಲ್ಲಿರುವ ಚೌಕ/ಚಿತ್ರಗಳು]
ವ್ಯಾಪಾರ-ವ್ಯವಹಾರದಲ್ಲಿ ನಿಯತ್ತು ಕಾಪಾಡಿಕೊಳ್ಳಲು. . .
● ನಿಮ್ಮ ಆದ್ಯತೆಗಳೇನೆಂದು ನಿರ್ಧರಿಸಿ. ಉದಾ: ಹಣಸಂಪತ್ತು ಗಳಿಸುವುದು ನಿಮಗೆ ಮುಖ್ಯನಾ? ದೇವರ ದೃಷ್ಟಿಯಲ್ಲಿ ಒಳ್ಳೇ ವ್ಯಕ್ತಿಯಾಗಿ ಹೆಸರು ಗಳಿಸುವುದು ಮುಖ್ಯನಾ?
● ಮೊದಲೇ ಯೋಚಿಸಿಡಿ. ಪ್ರಾಮಾಣಿಕತೆ ತೋರಿಸಲು ಕಷ್ಟವಾಗುವ ಯಾವ್ಯಾವ ಸಂದರ್ಭಗಳು ಬರಬಹುದು, ಬಂದಾಗ ಹೇಗೆ ಪ್ರತಿಕ್ರಿಯಿಸಬೇಕು ಎಂದು ಮುಂಚೆಯೇ ಯೋಚಿಸಿ.
● ನಿರ್ಧಾರವನ್ನು ಹೇಳಿಬಿಡಿ. ಯಾವುದೇ ವ್ಯಾಪಾರ-ವಹಿವಾಟನ್ನು ಆರಂಭಿಸುವ ಮುಂಚೆ ನಿಮ್ಮ ರೀತಿನೀತಿಗಳ ಬಗ್ಗೆ ಬೇರೆಯವರಿಗೆ ನಯನಾಜೂಕಿನಿಂದ ಹೇಳಿ.
● ಸಹಾಯ ಕೇಳಿ. ಯಾರಾದರೂ ಆಮಿಷವೊಡ್ಡಿದರೆ, ನಿಮ್ಮ ವ್ಯಾಪಾರ ನೀತಿಗೆ ಮುಳುವಾಗುವ ವಿಷಯವೇನಾದರೂ ಎದುರಾದರೆ ನಿಮ್ಮ ತತ್ವ-ಆದರ್ಶಗಳನ್ನು ಗೌರವಿಸುವ ವ್ಯಕ್ತಿಯ ಸಲಹೆ ಪಡೆಯಿರಿ.
[ಪುಟ 8ರಲ್ಲಿರುವ ಚಿತ್ರ]
ಪ್ರಾಮಾಣಿಕರಾಗಿದ್ದರೆ ಮನಶ್ಶಾಂತಿ ಇರುತ್ತದೆ