ಪ್ರಾಮಾಣಿಕತೆ ಕೈಬಿಡಲು ಒತ್ತಡ
ಪ್ರಾಮಾಣಿಕತೆ ಕೈಬಿಡಲು ಒತ್ತಡ
“ಹಳೇಕಾಲದಲ್ಲೆಲ್ಲ ವ್ಯಾಪಾರ-ವ್ಯವಹಾರಗಳಲ್ಲಿ ಪ್ರಾಮಾಣಿಕತೆ ತೋರಿಸಿದರೆ ನಡೆಯುತ್ತಿತ್ತು. ಈಗ ಅದಕ್ಕೆಲ್ಲ ಬೆಲೆನೇ ಇಲ್ಲ. ವ್ಯಾಪಾರ ನೆಲಕಚ್ಚುವುದು ಖಂಡಿತ.”—ಸ್ಟೀವನ್, ಅಮೆರಿಕ.
ಸ್ಟೀವನ್ ಹೇಳುವುದನ್ನು ನೀವು ಒಪ್ಪುತ್ತೀರಾ? ಅಪ್ರಾಮಾಣಿಕತೆಯಿಂದ ಲಾಭ ಇದೆಯೇನೋ ನಿಜ. ಆದರದು ಹೆಚ್ಚು ದಿನ ಬಾಳುವುದಿಲ್ಲ. ಆ ಕ್ಷಣಿಕ ಲಾಭವೇ ಇಂದು ಪ್ರಾಮಾಣಿಕತೆ ತೋರಿಸಲು ಬದ್ಧರಾದ ಜನರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಈ ಒತ್ತಡ ಬೇರೆ ಬೇರೆ ಮೂಲಗಳಿಂದ ಬರುತ್ತದೆ.
ಸ್ವಪ್ರೇರಣೆ. ಒಂದಿಷ್ಟು ಹೆಚ್ಚು ಹಣ, ಐಷಾರಾಮದ ವಸ್ತುಗಳು ಯಾರಿಗೆ ಬೇಡ? ಆದ್ದರಿಂದ ಅಪ್ರಾಮಾಣಿಕ ವಿಧದಲ್ಲಿ ಹಣಮಾಡುವ ಅವಕಾಶ ಸಿಕ್ಕಿದಾಗ ಅದನ್ನು ಬಿಡಲು ಅಷ್ಟು ಸುಲಭದಲ್ಲಿ ಮನಸ್ಸು ಒಪ್ಪಲ್ಲ.
● “ನಮ್ಮ ಕಂಪನಿಗೆ ಗುತ್ತಿಗೆದಾರರನ್ನು, ಸಪ್ಲಾಯರ್‌ಗಳನ್ನು ನಾನೇ ಗೊತ್ತುಮಾಡುತ್ತೇನೆ. ಹಾಗಾಗಿ ತುಂಬ ಮಂದಿ ನನಗೆ ಲಂಚದಾಸೆ ತೋರಿಸ್ತಾರೆ. ಕೂತಲ್ಲೇ ಹಣಮಾಡುವ ಅವಕಾಶ ಯಾಕೆ ಬಿಡಲಿ ಅಂತ ಕೆಲವೊಮ್ಮೆ ಅನಿಸುತ್ತೆ.”—ಫ್ರಾಂಟ್ಸ್.
ಲಾಭ ಹೆಚ್ಚಿಸಲು. ಇತ್ತೀಚಿನ ವರ್ಷಗಳಲ್ಲಿ ಆರ್ಥಿಕ ಕುಸಿತದಿಂದಾಗಿ ವ್ಯಾಪಾರ ಉದ್ದಿಮೆಗಳು ತತ್ತರಿಸಿವೆ. ಅಲ್ಲದೆ ದಾಪುಗಾಲು ಹಾಕುತ್ತಾ ಬದಲಾಗುತ್ತಿರುವ ತಂತ್ರಜ್ಞಾನದ ಜೊತೆಗೆ ಈ ಉದ್ದಿಮೆಗಳು ಹೆಜ್ಜೆಯಿಡಬೇಕು. ಪ್ರಾದೇಶಿಕ ಹಾಗೂ ಜಾಗತಿಕ ಮಟ್ಟದಲ್ಲಿ ಏರುತ್ತಿರುವ ಪೈಪೋಟಿಯೊಂದಿಗೂ ಸೆಣಸಾಡಬೇಕು. ಅದಕ್ಕಾಗಿ ಧಣಿಗಳು, ಮ್ಯಾನೇಜರರು ಕೆಲಸಗಾರರ ಮೇಲೆ ಒತ್ತಡ ಹೇರುತ್ತಾರೆ. ಪ್ರಾಮಾಣಿಕತೆಯನ್ನು ಕೈಬಿಟ್ಟರೆ ಮಾತ್ರ ಅವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವೆಂದು ನೆನಸಿ ಕೆಲಸಗಾರರು ಮೋಸ-ವಂಚನೆಯ ಮೊರೆಹೋಗುತ್ತಾರೆ.
● “ನಾವು ಹಾಗೆ ಮಾಡದೆ ಹೋದರೆ . . . ನಮ್ಮಿಂದಾಗಿ ಕಂಪನಿ ಮುಳುಗುತ್ತೆ ಅಂತ ನೆನಸಿದೆವು.”—ರಿನ್‌ಹಾರ್ಟ್ ಸಿಕಾಚೆಕ್, ಲಂಚ ಕೊಟ್ಟದ್ದಕ್ಕೆ ದಸ್ತಗಿರಿಯಾದವ.—ದ ನ್ಯೂ ಯಾರ್ಕ್ ಟೈಮ್ಸ್.
ಇತರರ ಒತ್ತಾಯ. ಸಹೋದ್ಯೋಗಿಗಳು, ಗಿರಾಕಿಗಳು ಅವ್ಯವಹಾರದಲ್ಲಿ ಶಾಮೀಲಾಗಲು ಹೇಳುವುದಿದೆ, ಕೆಲವೊಮ್ಮೆ ಒತ್ತಾಯವೂ ಮಾಡುವುದಿದೆ.
● “ನಮ್ಮ ಗ್ರಾಹಕರಾಗಿರುವ ಒಂದು ದೊಡ್ಡ ಕಂಪನಿಯ ಮ್ಯಾನೇಜರ್ ನನ್ನ ಹತ್ತಿರ ಬಂದು, ನಿಮ್ಮ ಕಂಪನಿ ಜೊತೆ ವ್ಯಾಪಾರ ಮುಂದುವರಿಸಬೇಕಾದರೆ ‘ನನ್ನ ಪಾಲು’ ಕೊಡಬೇಕು ಎಂದು ಹೇಳಿದನು. ಅವನಿಗೆ ರುಷುವತ್ತು ಕೊಡಬೇಕೆಂದು ಹೇಳುತ್ತಿದ್ದನು.”—ಯೋಹಾನ್, ದಕ್ಷಿಣ ಆಫ್ರಿಕ.
ಸಂಸ್ಕೃತಿ. ವ್ಯಾಪಾರ ವಹಿವಾಟು ಮಾಡುವಾಗ ಉಡುಗೊರೆಗಳನ್ನು ಕೊಡುವ ಪದ್ಧತಿ ಕೆಲವು ಸಂಸ್ಕೃತಿಗಳಲ್ಲಿದೆ. ಆದರೆ ಆ ಉಡುಗೊರೆ ಎಷ್ಟು ದೊಡ್ಡದು, ಯಾವ ಸನ್ನಿವೇಶದಲ್ಲಿ ಕೊಡಲಾಗುತ್ತದೆ ಎನ್ನುವುದರ ಮೇಲೆ ಹೊಂದಿಕೊಂಡು ಆ ವ್ಯಾಪಾರ ವಹಿವಾಟು ಪ್ರಾಮಾಣಿಕವಾಗಿದೆಯೊ ಇಲ್ಲವೋ ಎಂದು ಹೇಳಬಹುದು. ಅನೇಕ ದೇಶಗಳಲ್ಲಿ ಭ್ರಷ್ಟ ಅಧಿಕಾರಿಗಳು ತಮ್ಮ ಕರ್ತವ್ಯ ನಿಭಾಯಿಸುವ ಮುಂಚೆ ಹಣ ಕೇಳುತ್ತಾರೆ. ಕೆಲಸ ಸ್ವಲ್ಪ ಬೇಗನೆ ಮಾಡಿಕೊಟ್ಟ ಬಳಿಕ ಹಣ ನಿರೀಕ್ಷಿಸುತ್ತಾರೆ.
● “ಟಿಪ್ಸ್‌ಗೂ ಲಂಚಕ್ಕೂ ಏನು ವ್ಯತ್ಯಾಸ ಅನ್ನೋದೇ ಗೊತ್ತಾಗಲ್ಲ.”—ವಿಲ್ಯಮ್, ಕೊಲಂಬಿಯ.
ಪರಿಸರ. ಕಡುಬಡತನದಲ್ಲಿ ದಿನದೂಡುವ ಅಥವಾ ಕಾನೂನು ವ್ಯವಸ್ಥೆ ನೆಲಕಚ್ಚಿ ಜನಜೀವನ ಅಸ್ತವ್ಯಸ್ತಗೊಂಡಿರುವ ದೇಶಗಳಲ್ಲಿ ಪ್ರಾಮಾಣಿಕರಾಗಿರುವುದು ದೊಡ್ಡ ಸವಾಲಾಗಿರುತ್ತದೆ. ಇಂಥ ಪರಿಸರದಲ್ಲಿ ಜೀವಿಸುವ ಜನರಿಗೆ ತಮ್ಮ ಕುಟುಂಬವನ್ನು ಚೆನ್ನಾಗಿ ಪೋಷಿಸಲು ಮೋಸ, ಕಳ್ಳತನ ಅನಿವಾರ್ಯವೆಂದು ತೋರುತ್ತದೆ.
● “ಮೋಸ-ವಂಚನೆ ತಪ್ಪಲ್ಲ, ಬದುಕಬೇಕೆಂದರೆ ಹಾಗೆ ಮಾಡಲೇಬೇಕು, ಸಿಕ್ಕಿಬೀಳಬಾರದು ಅಷ್ಟೆ ಎಂಬ ಅಭಿಪ್ರಾಯ ಜನರಲ್ಲಿದೆ.”—ಟೊಮಾಸಿ, ಕಾಂಗೊ ಕಿನ್‌ಶಾಸ.
ಪ್ರಾಮಾಣಿಕತೆಯ ಅಧಃಪತನ
ಅಪ್ರಾಮಾಣಿಕರಾಗಿರಲು ಹೇರಲಾಗುತ್ತಿರುವ ಈ ಎಲ್ಲ ಒತ್ತಡ, ಒತ್ತಾಯಗಳ ಪರಿಣಾಮ ಏನು? ಆಸ್ಟ್ರೇಲಿಯದಲ್ಲಿ ನಡೆಸಲಾದ
ಬಿಸ್‌ನೆಸ್ ಮ್ಯಾನೇಜರುಗಳ ಸಮೀಕ್ಷೆಗನುಸಾರ ಲಂಚ ಮತ್ತು ಭ್ರಷ್ಟಾಚಾರ “ತಪ್ಪು ಆದರೆ ಬೇರೆ ದಾರಿಯಿಲ್ಲ” ಎನ್ನುವುದು 10ರಲ್ಲಿ 9 ಜನರ ಅಭಿಪ್ರಾಯ. ಅವರು ಗುತ್ತಿಗೆಗಳನ್ನು ಪಡೆಯಲು ಅಥವಾ ತಮ್ಮ ಕಂಪನಿಯ ಲಾಭಕ್ಕೋಸ್ಕರ ನೈತಿಕ ಮಟ್ಟಗಳನ್ನು ಗಾಳಿಗೆ ತೂರಲೂ ಸಿದ್ಧರೆಂದು ಹೇಳಿದರು.ಆದರೆ ಮೋಸ-ವಂಚನೆ ಮಾಡುವವರು ತಮ್ಮನ್ನು ಪ್ರಾಮಾಣಿಕರೆಂದು ಎಣಿಸುತ್ತಾರೆ. ಜರ್ನಲ್ ಆಫ್ ಮಾರ್ಕೆಟಿಂಗ್ ರಿಸರ್ಚ್ ಪತ್ರಿಕೆಗನುಸಾರ, “ಲಾಭ ಗಳಿಸಲು ಜನರು ಏನು ಬೇಕಾದರೂ ಮಾಡುತ್ತಾರೆ. ಆದರೆ ತಾವು ತುಂಬ ಪ್ರಾಮಾಣಿಕರೆಂದು ಹೇಳಿಕೊಳ್ಳುತ್ತಾರೆ.” ಮನಸ್ಸಿನಲ್ಲಾಗುವ ತಾಕಲಾಟವನ್ನು ಹೇಗೆ ನಿಭಾಯಿಸುತ್ತಾರೆ? ನೆವ ಕೊಡುತ್ತಾರೆ, ತಮ್ಮ ಘನಂದಾರಿ ಕೆಲಸವನ್ನು ಸಮರ್ಥಿಸುತ್ತಾರೆ, ತೇಲಿಸಿಬಿಡುತ್ತಾರೆ.
ಉದಾಹರಣೆಗೆ ಅಪ್ರಾಮಾಣಿಕತೆ ದೊಡ್ಡ ಅಪರಾಧವೇನಲ್ಲ ಎಂಬಂತೆ ತೋರಿಸುವ ಮಾತುಗಳನ್ನು ಬಳಸುತ್ತಾರೆ. ಸುಳ್ಳು, ಮೋಸಕ್ಕೆ “ಶಾರ್ಟ್ ಕಟ್ ಹೊಡೆಯುವುದು” ಮತ್ತು ಲಂಚಕ್ಕೆ “ಮಾಮೂಲು,” “ಗಿಂಬಳ” ಎಂಬಂಥ ಪದಗಳನ್ನು ಬಳಸುತ್ತಾರೆ.
ತಪ್ಪುಕೆಲಸಗಳನ್ನು ಸಮರ್ಥಿಸಲು ಕೆಲವರು ಪ್ರಾಮಾಣಿಕತೆಯ ಅರ್ಥವನ್ನೇ ತಿರುಚುತ್ತಾರೆ. ಹಣಕಾಸಿನ ಉದ್ಯಮವೊಂದರಲ್ಲಿ ಕೆಲಸಮಾಡುತ್ತಿರುವ ಟಾಮ್ ಹೇಳುವಂತೆ “ಪ್ರಾಮಾಣಿಕರು ಎಂಬದರ ಅರ್ಥ ಸತ್ಯವಂತರು ಎನ್ನುವುದಕ್ಕಿಂತ ಮೋಸ ಮಾಡಿ ಸಿಕ್ಕಿಬೀಳದವರು ಎನ್ನುತ್ತಾರೆ ಜನ.” ಒಂದು ವ್ಯಾಪಾರ ಸಂಸ್ಥೆಯ ಮಾಜಿ ಕಾರ್ಯನಿರ್ವಾಹಕ ಡೇವಿಡ್‌ಗನುಸಾರ, “ಹಗರಣಗಳು ಬಯಲಾದಾಗ ಜನರು ಮೂಗುಮುರಿಯುತ್ತಾರೆ ಹೌದು. ಆದರೆ ಇದೇ ಜನ ತಪ್ಪುಮಾಡಿದವರು ಸಿಕ್ಕಿಬೀಳದಿದ್ದರೆ ಏನೂ ಆಗದ ಹಾಗೆ ಇದ್ದುಬಿಡುತ್ತಾರೆ. ಮೋಸ ಮಾಡಿ ತಪ್ಪಿಸಿಕೊಳ್ಳುವ ಜನರಲ್ಲಿ ‘ಕಲೆ, ಬುದ್ಧಿವಂತಿಕೆ’ ಇದೆ ಎಂದೆಲ್ಲ ಕೊಂಡಾಡುವುದೂ ಇದೆ.”
ಏಳಿಗೆ ಹೊಂದಬೇಕಾದರೆ ಸ್ವಲ್ಪ ಆಚೀಚೆ ಮಾಡಲೇಬೇಕು ಎಂಬುದೂ ಅನೇಕರ ಅಭಿಮತ. ಹಲವಾರು ವರ್ಷಗಳಿಂದ ವ್ಯಾಪಾರಸ್ಥರಾಗಿರುವ ಒಬ್ಬರು ಹೇಳುವುದು: “ಸ್ಪರ್ಧಾ ಮನೋಭಾವದ ಕಾರಣ ಜನರು ‘ಕೆಲಸ ಆಗಬೇಕಾದರೆ ಏನು ಬೇಕಾದರೂ ಮಾಡಬಹುದು’ ಎಂಬ ಧೋರಣೆ ತಾಳುತ್ತಿದ್ದಾರೆ.” ಆದರೆ ಈ ಧೋರಣೆ ಸರಿಯೇ? ಅಥವಾ ಇಂಥ ಜನರು ‘ಸುಳ್ಳಾಗಿ ತರ್ಕ ಮಾಡಿ ತಮ್ಮನ್ನು ತಾವೇ ಮೋಸಮಾಡುತ್ತಿದ್ದಾರೆಯೇ?’ (ಯಾಕೋಬ 1:22) ಪ್ರಾಮಾಣಿಕತೆಯ ಪ್ರತಿಫಲಗಳ ಬಗ್ಗೆ ಮುಂದಿನ ಲೇಖನದಲ್ಲಿ ಓದಿ. (g12-E 01)
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಪ್ರಾಮಾಣಿಕರು ಎಂಬದರ ಅರ್ಥ ಸತ್ಯವಂತರು ಎನ್ನುವುದಕ್ಕಿಂತ ಮೋಸ ಮಾಡಿ ಸಿಕ್ಕಿಬೀಳದವರು ಎನ್ನುತ್ತಾರೆ ಜನ”
[ಪುಟ 5ರಲ್ಲಿರುವ ಚಿತ್ರ]
ಏಳಿಗೆ ಹೊಂದಬೇಕಾದರೆ ಸ್ವಲ್ಪ ಆಚೀಚೆ ಮಾಡಲೇಬೇಕು ಎಂಬುದು ಅನೇಕರ ಅಭಿಮತ