ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಾಮಾಣಿಕತೆ ಪ್ರಾಯೋಗಿಕ!

ಪ್ರಾಮಾಣಿಕತೆ ಪ್ರಾಯೋಗಿಕ!

ಪ್ರಾಮಾಣಿಕತೆ ಪ್ರಾಯೋಗಿಕ!

“ಮೋಸದಿಂದ ಸಿಕ್ಕಿದ ಆಹಾರವು ಮನುಷ್ಯನಿಗೆ ರುಚಿ, ಆ ಮೇಲೆ ಅವನ ಬಾಯಿ ಮರಳಿನಿಂದ ತುಂಬುವದು.”—ಜ್ಞಾನೋಕ್ತಿ 20:17.

ವ್ಯಾಪಾರದಲ್ಲಿ ಯಶಸ್ಸು ಪಡೆಯಲು ಅಪ್ರಾಮಾಣಿಕತೆಯ ಹಾದಿ ಹಿಡಿಯಲೇಬೇಕಾ? ಖಂಡಿತ ಇಲ್ಲ. ನಿಜ ಹೇಳಬೇಕೆಂದರೆ ಅದು ನಿಮ್ಮ ಯಶಸ್ಸಿಗೆ ಕುತ್ತು. ಏಕೆಂದರೆ ನಿಯತ್ತಿನಿಂದ ಕೆಲಸಮಾಡುವವನ ಮೇಲೆ ನಂಬಿಕೆ ಹುಟ್ಟುತ್ತದೆ. ಈ ನಂಬಿಕೆ ಯಶಸ್ಸಿಗೆ ಆಧಾರಸ್ತಂಭ. ಇಂಥ ಯಶಸ್ಸು ದೀರ್ಘಕಾಲ ಉಳಿಯುತ್ತದೆ.

ನಂಬಿಕೆ ತಂದುಕೊಟ್ಟ ಪ್ರತಿಫಲ

ನಿಯತ್ತಿನ ವ್ಯಕ್ತಿಯಾಗಿದ್ದರೆ ಯಶಸ್ಸು ಸಿಗುತ್ತದೆಂದು ನೀವು ನೆನಸಿರಲಿಕ್ಕಿಲ್ಲ. ಆದರೆ ಅದು ಯಶಸ್ಸಿಗೆ ಬಹುಮುಖ್ಯವಾದದ್ದು. ಹಿಂದಿನ ಲೇಖನದಲ್ಲಿ ತಿಳಿಸಲಾದ ಫ್ರಾಂಟ್ಸ್‌ರವರು ಇದಕ್ಕೊಂದು ಉಜ್ವಲ ಉದಾಹರಣೆ. “ನಾನು ಕೆಲಸಕ್ಕೆ ಹೊಸದಾಗಿ ಸೇರಿಕೊಂಡಾಗ ನನ್ನ ಧಣಿಗಳು ನಾನೆಷ್ಟು ನಿಯತ್ತಿನ ಮನುಷ್ಯನೆಂಬದನ್ನು ಹಲವಾರು ಬಾರಿ ಪರೀಕ್ಷಿಸಿದರು. ನನಗೆ ಇದು ಗೊತ್ತೇ ಇರಲಿಲ್ಲ. ನಂತರ ನನ್ನ ಮೇಲೆ ನಂಬಿಕೆಯಿಟ್ಟು ಹೆಚ್ಚು ಜವಾಬ್ದಾರಿಗಳನ್ನು ಕೊಟ್ಟರು. ಹೆಚ್ಚು ಸ್ವಾತಂತ್ರ್ಯ ಕೊಟ್ಟರು. ಪ್ರತಿಫಲವೂ ಸಿಕ್ಕಿದೆ. ನನಗಿಂತ ಉತ್ತಮವಾಗಿ ಕೆಲಸ ನಿರ್ವಹಿಸಬಲ್ಲ ಬುದ್ಧಿವಂತರು ಕಂಪನಿಯಲ್ಲಿದ್ದಾರೆ. ಆದರೂ ನನ್ನನ್ನು ಈ ಕೆಲಸದಲ್ಲಿ ಇಟ್ಟಿರುವುದಕ್ಕೆ ಕಾರಣ ಧಣಿಗಳಿಗೆ ನನ್ನ ಮೇಲಿರುವ ನಂಬಿಕೆಯೇ” ಎನ್ನುತ್ತಾರೆ ಫ್ರಾಂಟ್ಸ್‌.

ಬುದ್ಧಿಹೀನ ಕೆಲಸಕ್ಕೆ ಕೈಹಾಕಬೇಡಿ

ಹಿಂದಿನ ಲೇಖನದಲ್ಲಿ ತಿಳಿಸಲಾದ ಡೇವಿಡ್‌ ಎಂಬ ವ್ಯಾಪಾರಸ್ಥ ಹೇಳುವುದು: “ಜನರು ಅಲ್ಪಾವಧಿಯ ಲಾಭಕ್ಕಾಗಿ ತಮಗೆ ಬೇಕಾದ ಹಾಗೆ ನಿಯಮಗಳನ್ನು ತಿರುಚುವುದನ್ನು ನೋಡಿದ್ದೇನೆ. ಆಗೆಲ್ಲ ‘ತಲೆಗೆ ಹೊಯ್ದ ನೀರು ಕಾಲಿಗೆ ಬರಲೇಬೇಕು’ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಿದ್ದೆ. ಮೋಸ ಮಾಡಿದರೆ ಇವತ್ತಲ್ಲ ನಾಳೆ ಏನಾದರೊಂದು ತೊಂದರೆ ಆಗೇ ಆಗುತ್ತೆ. ನಮ್ಮ ಕಂಪನಿಗೆ ಅಕ್ರಮ ವ್ಯಾಪಾರ ಮಾಡಲು ಎಷ್ಟೋ ಅವಕಾಶಗಳು ಬಂದಿದ್ದರೂ ಅದ್ಯಾವುದಕ್ಕೂ ನಾವು ಕೈಹಾಕಲಿಲ್ಲ. ಆ ಥರದ ವ್ಯವಹಾರಗಳಲ್ಲಿ ತೊಡಗಿದ ಬೇರೆ ಕಂಪನಿಗಳ ಕಥೆ ಮುಗಿದುಹೋಗಿದೆ. ಕೆಲವರ ಮೇಲೆ ಕಾನೂನು ಕ್ರಮಕೈಗೊಳ್ಳಲಾಗಿದೆ. ನಮ್ಮ ಕಂಪನಿಗೆ ಅಂತಹ ದುರಂತ ಬರಲಿಲ್ಲ.”

ಆಗ್ನೇಯ ಆಫ್ರಿಕದ ಕೆನ್‌ ಎಂಬವರು ದೊಡ್ಡ ಪ್ರಮಾಣದಲ್ಲಿ ಜಾನುವಾರುಗಳ ಸಾಕಣೆಗೆ ತೊಡಗಿದಾಗ ವಸ್ತುಗಳನ್ನು ಬೇಗನೆ ಆಮದು ಮಾಡಿಸಿಕೊಳ್ಳಲು, ತೆರಿಗೆ ಕಟ್ಟುವುದರಿಂದ ತಪ್ಪಿಸಿಕೊಳ್ಳಲು ಅಧಿಕಾರಿಗಳ ಕೈಬಿಸಿಮಾಡಬಹುದಿತ್ತು. “ಇಲ್ಲಿನ ಪದ್ಧತಿಯಂತೆ ಬೇರೆಯವರು ಅಧಿಕಾರಿಗಳಿಗೆ ಲಂಚಕೊಟ್ಟರು. ಆದರೆ ನಾವು ಹಾಗೆ ಮಾಡಲಿಲ್ಲ. ಹಾಗಾಗಿ ನಮ್ಮ ಸಾಕಣೆ ಕೆಲಸಕ್ಕಾಗಿ ಬೇಕಾದದ್ದೆಲ್ಲವನ್ನು ಪಡೆಯಲು 10 ವರ್ಷ ಹಿಡಿಯಿತು. ಪ್ರಾಮಾಣಿಕತೆ ತೋರಿಸಿದ್ದರಿಂದ ನಷ್ಟವಾಯಿತಲ್ಲಾ ಅನ್ನುತ್ತೀರಾ? ಇಲ್ಲ, ಪ್ರಯೋಜನವೇ ಆಯಿತು. ಏಕೆಂದರೆ ಲಂಚಕೊಟ್ಟು ಕೆಲಸಮಾಡಿಸಿಕೊಂಡ ಜನರನ್ನು ಆ ಲಂಚಗುಳಿ ಅಧಿಕಾರಿಗಳು ಆಮೇಲೆ ಕೂಡ ಹಣಕ್ಕಾಗಿ ಪೀಡಿಸುತ್ತಿದ್ದರು” ಎನ್ನುತ್ತಾರೆ ಕೆನ್‌.

ಆರ್ಥಿಕ ಬಿಕ್ಕಟ್ಟಿನಲ್ಲಿ ಆಪತ್ಬಾಂಧವ

ಒಂದು ವ್ಯಾಪಾರ ಚೆನ್ನಾಗಿ ನಡೆಯದೆ ಇರುವುದರಿಂದ ಬೇಗನೆ ಮುಚ್ಚಿಹಾಕಬೇಕಾದೀತು ಎಂದು ತೋರುವಾಗ ಪ್ರಾಮಾಣಿಕತೆಯನ್ನು ಕೈಬಿಡಲು ತುಂಬ ಮನಸ್ಸಾಗಬಹುದು. ಆದರೆ ಪ್ರಾಮಾಣಿಕತೆಗೆ ಬೆಲೆಯಿದೆ, ನಿಯತ್ತಿನ ವ್ಯಕ್ತಿ ಎಂಬ ಹೆಸರಿನಿಂದ ಪ್ರಯೋಜನವಿದೆ ಎಂದು ಇಂಥ ಪರಿಸ್ಥಿತಿಯಲ್ಲಿ ರುಜುವಾಗುತ್ತದೆ.

ಬಿಲ್‌ ಎಂಬವರ ಕಥೆ ಕೇಳಿ. ಅಮೆರಿಕದಲ್ಲಿ ಮನೆನಿರ್ಮಾಣ ಉದ್ಯಮ ಕುಸಿದಾಗ ಅದೇ ಕೆಲಸಮಾಡುತ್ತಿದ್ದ ಬಿಲ್‌ ಅವರ ವ್ಯಾಪಾರಕ್ಕೆ ಭಾರೀ ಪೆಟ್ಟುಬಿತ್ತು. “ನಮ್ಮ ಹಲವಾರು ದೊಡ್ಡ ಗ್ರಾಹಕರ ವ್ಯಾಪಾರ ನೆಲಕಚ್ಚಿದ್ದರಿಂದ ಅವರು ನಮಗೆ ಕೊಡಬೇಕಾದ ಸಾವಿರಾರು ಡಾಲರುಗಳು ಬಾಕಿ ಉಳಿದಿತ್ತು. ನನಗೆ ಬೇರೆ ದಾರಿಯೇ ಕಾಣದಾದಾಗ ನನ್ನ ಪ್ರತಿಸ್ಪರ್ಧಿಯ ಬಳಿ ಹೋಗಿ ನಮ್ಮಲ್ಲಿ ಕೆಲವರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಬಹುದಾ ಎಂದು ಕೇಳಿದೆ. 48 ತಾಸುಗಳೊಳಗೆ ನನಗೆ ಉತ್ತರ ಸಿಕ್ಕಿತು. ನನ್ನನ್ನು, ನನಗಾಗಿ ಕೆಲಸಮಾಡುತ್ತಿದ್ದ ಹಲವು ಉದ್ಯೋಗಿಗಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದಾಗಿ ಹೇಳಿದರು. ಅಷ್ಟೇ ಅಲ್ಲ, ನೀವು ಕಷ್ಟಪಟ್ಟು ಕೆಲಸಮಾಡುವ, ನಿಯತ್ತಿನ ವ್ಯಕ್ತಿ ಅಂತ ಎಲ್ಲರ ಬಾಯಲ್ಲೂ ಕೇಳಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು” ಎನ್ನುತ್ತಾರೆ ಬಿಲ್‌.

ಮೇಲೆ ತಿಳಿಸಲಾದ ಉದಾಹರಣೆಗಳೆಲ್ಲ ಯೆಹೋವನ ಸಾಕ್ಷಿಗಳದ್ದು. ಅವರ ವ್ಯಾಪಾರ ನೀತಿಯೂ ಅವರ ಬದುಕಿನ ಇತರ ಕ್ಷೇತ್ರಗಳಂತೆ ಬೈಬಲ್‌ ಆಧರಿತ. ನೀವು ಈಗಾಗಲೇ ನೋಡಿರುವಂತೆ ಪ್ರಾಮಾಣಿಕತೆ ತೋರಿಸಿದ್ದರಿಂದ ಅವರ ವ್ಯಾಪಾರಕ್ಕೆ ಕುತ್ತು ಬರಲಿಲ್ಲ. ಯಶಸ್ಸು ಸಿಕ್ಕಿದೆ.

ಅಪ್ರಾಮಾಣಿಕತೆ ಆರ್ಥಿಕ ಲಾಭ ತರುವಂತೆ ತೋರುವ ಸನ್ನಿವೇಶಗಳು ನಮ್ಮ ಮುಂದೆ ಬಂದೇ ಬರುವವು. ಆದರೆ ಒಬ್ಬ ವ್ಯಕ್ತಿಯ ಯಶಸ್ಸನ್ನು ಅವನಿಗೆ ಸಿಗುವ ಆರ್ಥಿಕ ಲಾಭದಿಂದ ಮಾತ್ರ ಅಳೆಯಬಹುದೇ? (g12-E 01)

[ಪುಟ 6ರಲ್ಲಿರುವ ಸಂಕ್ಷಿಪ್ತ ವಿವರಣೆ]

ನಿಯತ್ತಿನ ವ್ಯಕ್ತಿಯಾಗಿದ್ದರೆ ಯಶಸ್ಸು ಸಿಗುತ್ತದೆಂದು ನೀವು ನೆನಸಿರಲಿಕ್ಕಿಲ್ಲ. ಆದರೆ ಅದು ಯಶಸ್ಸಿಗೆ ಬಹುಮುಖ್ಯವಾದದ್ದು

[ಪುಟ 7ರಲ್ಲಿರುವ ಚಿತ್ರ]

“ನೀವು ಕಷ್ಟಪಟ್ಟು ಕೆಲಸಮಾಡುವ, ನಿಯತ್ತಿನ ವ್ಯಕ್ತಿ ಅಂತ ಎಲ್ಲರ ಬಾಯಲ್ಲೂ ಕೇಳಿದ್ದೇವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.”—ಬಿಲ್‌, ಅಮೆರಿಕ