ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಬದುಕುವುದೇ ಬೇಡ’ ಎಂದು ಅನಿಸುತ್ತಿದೆಯೇ?

‘ಬದುಕುವುದೇ ಬೇಡ’ ಎಂದು ಅನಿಸುತ್ತಿದೆಯೇ?

‘ಬದುಕುವುದೇ ಬೇಡ’ ಎಂದು ಅನಿಸುತ್ತಿದೆಯೇ?

ಲೋಕದಾದ್ಯಂತ ಪ್ರತಿದಿನ ಸುಮಾರು 3,000 ಜನರು ತಮ್ಮ ಜೀವ ತಕ್ಕೊಳ್ಳುತ್ತಾರೆ. ಜನರು ಇಷ್ಟರ ಮಟ್ಟಿಗೆ ಹತಾಶರಾಗುವುದೇಕೆ? ಒಂದು ಮುಖ್ಯ ಕಾರಣವನ್ನು ಬೈಬಲ್‌ ತಿಳಿಸುತ್ತದೆ. ನಾವಿಂದು “ನಿಭಾಯಿಸಲು ಕಷ್ಟಕರವಾದ ಕಠಿನಕಾಲ”ಗಳಲ್ಲಿ ಜೀವಿಸುತ್ತಿದ್ದೇವೆ. ಆದ್ದರಿಂದ ಜನರಿಗೆ ಜೀವನ ಸಾಕಾಗಿ ಬಿಟ್ಟಿದೆ. (2 ತಿಮೊಥೆಯ 3:1; ಜ್ಞಾನೋಕ್ತಿ 15:13ಬಿ) ಸಮಸ್ಯೆ, ಚಿಂತೆಗಳ ಭಾರದಡಿ ಹೂತುಹೋಗಿರುವ ವ್ಯಕ್ತಿಗೆ ತಪ್ಪಿಸಿಕೊಳ್ಳುವ ಒಂದೇ ಮಾರ್ಗ ಆತ್ಮಹತ್ಯೆ ಎಂದನಿಸಿ ಬಿಡುತ್ತದೆ. ಇಂಥ ವಿಚಾರ ನಿಮ್ಮನ್ನೂ ಕಾಡುತ್ತಿರುವಲ್ಲಿ ಏನು ಮಾಡಬಲ್ಲಿರಿ?

ತೊಂದರೆತಾಪತ್ರಯ ಇಲ್ಲದವರಿಲ್ಲ!

‘ನನಗಿರುವಷ್ಟು ದುಃಖ, ಕಷ್ಟ ಯಾರಿಗೂ ಇಲ್ಲ! ಇದರಿಂದ ಹೊರಬರುವ ದಾರಿಯೂ ಕಾಣುತ್ತಿಲ್ಲ’ ಎಂದು ನಿಮಗನಿಸೀತು. ಆದರೆ ಎಲ್ಲರಿಗೂ ಒಂದಲ್ಲ ಒಂದು ರೀತಿಯ ತಾಪತ್ರಯ ಇದ್ದೇ ಇರುತ್ತದೆ ಅಲ್ವಾ? “ಇಡೀ ಸೃಷ್ಟಿಯು ಇಂದಿನ ವರೆಗೆ ಒಟ್ಟಾಗಿ ನರಳುತ್ತಾ ನೋವನ್ನು ಅನುಭವಿಸುತ್ತಾ ಇದೆ” ಎನ್ನುತ್ತದೆ ಬೈಬಲ್‌. (ರೋಮನ್ನರಿಗೆ 8:22) ಸದ್ಯಕ್ಕಂತೂ ನಿಮ್ಮ ಸಮಸ್ಯೆಗೆ ಪರಿಹಾರವಿಲ್ಲವೆಂದು ತೋರಿದರೂ, ಸಮಯ ದಾಟಿದಂತೆ ನಿಮ್ಮ ಸನ್ನಿವೇಶ ಉತ್ತಮವಾದೀತು. ಅಲ್ಲಿಯ ವರೆಗೆ ನೀವು ಹೇಗೆ ಸಹಿಸಿಕೊಳ್ಳಬಹುದು?

ಪ್ರೌಢ, ವಿಶ್ವಾಸಾರ್ಹ ಆತ್ಮೀಯರೊಂದಿಗೆ ಹೃದಯಬಿಚ್ಚಿ ಮಾತಾಡಿ. ಬೈಬಲ್‌ ಹೀಗನ್ನುತ್ತದೆ: “ಮಿತ್ರನ ಪ್ರೀತಿಯು ನಿರಂತರ.” ಕಷ್ಟಕಾಲದಲ್ಲೂ ಇಂಥ ಮಿತ್ರನು ನಿಮಗೆ ಸಾಥ್‌ ಕೊಡುವನು. (ಜ್ಞಾನೋಕ್ತಿ 17:17) ಬೈಬಲಿನಲ್ಲಿ ತಿಳಿಸಲಾಗಿರುವ ಯೋಬ ಎಂಬ ದೇವಭಕ್ತನಿಗೆ ಒಮ್ಮೆ ‘ತನ್ನ ಜೀವವೇ ಬೇಸರ’ ಎಂದನಿಸಿತು. ಆಗವನು “ಎದೆಬಿಚ್ಚಿ ಮೊರೆಯಿಡುವೆನು; ಮನೋವ್ಯಥೆಯಿಂದ ನುಡಿಯುವೆನು” ಎಂದು ಇತರರ ಮುಂದೆ ತನ್ನ ದುಃಖ ತೋಡಿಕೊಂಡನು. (ಯೋಬ 10:1) ಇತರರಲ್ಲಿ ಅಂತರಂಗ ಬಿಚ್ಚಿಡುವುದರಿಂದ ಮನಸ್ಸು ನಿರಾಳವಾಗುತ್ತದೆ. ಸಮಸ್ಯೆಗಳನ್ನು ನೋಡುವ ರೀತಿಯೂ ಬದಲಾಗುತ್ತದೆ. *

ಮನಸ್ಸಿನಾಳದ ಭಾವನೆಗಳನ್ನು ಪ್ರಾರ್ಥನೆಯಲ್ಲಿ ಹೇಳಿ. ಪ್ರಾರ್ಥನೆ ‘ಮನಸ್ಸನ್ನು ಹಗುರಗೊಳಿಸುವ ಮಾಧ್ಯಮ ಅಷ್ಟೇ, ಅದಕ್ಕೆ ಕಿವಿಗೊಡುವವರು ಯಾರೂ ಇಲ್ಲ’ ಎಂಬುದು ಕೆಲವರ ಅಭಿಪ್ರಾಯ. ಆದರೆ ಬೈಬಲ್‌ ಹೇಳುವ ಸಂಗತಿಯೇ ಬೇರೆ. ಕೀರ್ತನೆ 65:2ರಲ್ಲಿ ಯೆಹೋವ ದೇವರನ್ನು “ಪ್ರಾರ್ಥನೆಯನ್ನು ಕೇಳುವವನೇ” ಎಂದು ಕರೆಯಲಾಗಿದೆ. 1 ಪೇತ್ರ 5:7 “ಆತನು ನಿಮಗೋಸ್ಕರ ಚಿಂತಿಸುತ್ತಾನೆ” ಎನ್ನುತ್ತದೆ. ದೇವರನ್ನು ಅವಲಂಬಿಸುವುದು ಎಷ್ಟು ಮಹತ್ವದ್ದೆಂದು ಬೈಬಲ್‌ ಆಗಾಗ್ಗೆ ಹೇಳುತ್ತದೆ. ಉದಾಹರಣೆಗೆ:

“ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.”ಜ್ಞಾನೋಕ್ತಿ 3:5, 6.

“ತನ್ನಲ್ಲಿ ಭಯಭಕ್ತಿಯುಳ್ಳವರ ಇಷ್ಟವನ್ನು [ಯೆಹೋವನು] ನೆರವೇರಿಸುತ್ತಾನೆ; ಅವರ ಕೂಗನ್ನು ಕೇಳಿ ರಕ್ಷಿಸುತ್ತಾನೆ.”ಕೀರ್ತನೆ 145:19.

“ನಾವು ಆತನ ಚಿತ್ತಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆಂಬ ಭರವಸೆಯು ಆತನ ವಿಷಯವಾಗಿ ನಮಗುಂಟು.”1 ಯೋಹಾನ 5:14.

“ಯೆಹೋವನು ದುಷ್ಟರಿಗೆ ದೂರ, ಶಿಷ್ಟರ ಬಿನ್ನಹಕ್ಕೆ ಹತ್ತಿರ.”ಜ್ಞಾನೋಕ್ತಿ 15:29.

ನಿಮಗಿರುವ ಕಷ್ಟಗಳನ್ನೆಲ್ಲಾ ದೇವರ ಬಳಿ ಹೇಳಿಕೊಂಡರೆ ಆತನು ನೆರವು ನೀಡುವನು. ಈ ಕಾರಣಕ್ಕಾಗಿಯೇ “ಯಾವಾಗಲೂ ಆತನನ್ನೇ ನಂಬಿ ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ” ಎಂದು ಬೈಬಲ್‌ ಪ್ರೋತ್ಸಾಹಿಸುತ್ತದೆ.—ಕೀರ್ತನೆ 62:8.

ಹೆಚ್ಚಿನ ಸಹಾಯ ಬೇಕಾಗಿರುವಾಗ

ಆತ್ಮಹತ್ಯೆಗೆ ಶರಣಾದವರಲ್ಲಿ ಅಧಿಕಾಂಶ ಮಂದಿ ತುಂಬ ಸಮಯದಿಂದ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನುತ್ತವೆ ಅಧ್ಯಯನಗಳು. * ಆದ್ದರಿಂದ ಖಿನ್ನತೆಯಿಂದ ಬಳಲುತ್ತಿರುವವರು ಚಿಕಿತ್ಸೆ ಪಡೆಯುವುದು ಅತ್ಯಗತ್ಯ. ವೈದ್ಯರು ಔಷಧವನ್ನಾಗಲಿ ಆಹಾರಪಥ್ಯದಲ್ಲಿ ಬದಲಾವಣೆಗಳನ್ನಾಗಲಿ ಶಿಫಾರಸ್ಸುಮಾಡುವರು. ಕೆಲವರಿಗಂತೂ ಚಿಕಿತ್ಸೆಯ ಜೊತೆಗೆ ವ್ಯಾಯಾಮವೂ ಪೂರಕ. ವೈದ್ಯಕೀಯ ಚಿಕಿತ್ಸೆ ಅನೇಕರಿಗೆ ಪ್ರಯೋಜನ ತಂದಿದೆ. *

ನಿಮಗೆ ಬೆಂಬಲ, ನಿರೀಕ್ಷೆಯನ್ನು ಕೊಡುವಂಥ ಬಹಳಷ್ಟು ಮಾಹಿತಿ ಬೈಬಲಿನಲ್ಲಿದೆ. ಉದಾಹರಣೆಗೆ ಪ್ರಕಟನೆ 21:4 ಯೆಹೋವ ದೇವರ ಬಗ್ಗೆ ಹೀಗನ್ನುತ್ತದೆ: “ಆತನು [ಜನರ] ಕಣ್ಣೀರನ್ನೆಲ್ಲಾ ಒರಸಿಬಿಡುವನು; ಇನ್ನು ಮರಣವಿರುವುದಿಲ್ಲ; ಇನ್ನು ದುಃಖವಾಗಲಿ ಗೋಳಾಟವಾಗಲಿ ನೋವಾಗಲಿ ಇರುವುದಿಲ್ಲ. ಮೊದಲಿದ್ದ ಸಂಗತಿಗಳು ಗತಿಸಿಹೋಗಿವೆ.” ಇದು ದೇವರು ಕೊಟ್ಟ ವಾಗ್ದಾನ. ಅದರ ಬಗ್ಗೆ ಧ್ಯಾನಿಸಿದರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.

ಬೈಬಲಿನ ಈ ವಾಗ್ದಾನದ ಬಗ್ಗೆ ಯೆಹೋವನ ಸಾಕ್ಷಿಗಳು ಜಗತ್ತಿನಾದ್ಯಂತ ಕೋಟಿಗಟ್ಟಲೆ ಜನರಿಗೆ ತಿಳಿಸುತ್ತಿದ್ದಾರೆ. ಈಗಿನ ಕಠಿನಕಾಲಗಳಲ್ಲಿ ಜೀವಿಸುತ್ತಿರುವ ಅನೇಕರಲ್ಲಿ ಇದು ನಿಜವಾದ ಆಶಾಕಿರಣವನ್ನು ಮೂಡಿಸಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿರಿ. ಅಥವಾ ಈ ಪತ್ರಿಕೆಯ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಪತ್ರ ಬರೆಯಿರಿ. ನಮ್ಮ ಜಾಲತಾಣ www.watchtower.orgಗೂ ಭೇಟಿನೀಡಿ. (g12-E 01)

[ಪಾದಟಿಪ್ಪಣಿಗಳು]

^ ಆತ್ಮಹತ್ಯೆ ತಡೆಗಟ್ಟುವ ಕೇಂದ್ರದ ಇಲ್ಲವೇ ಮಾನಸಿಕ ಆರೋಗ್ಯ ಕೇಂದ್ರದ ಸಹಾಯವಾಣಿಗೆ ಕರೆಮಾಡಿ ಕೆಲವರು ನೆರವು ಪಡೆದಿದ್ದಾರೆ.

^ ಖಿನ್ನತೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಅಕ್ಟೋಬರ್‌-ಡಿಸೆಂಬರ್‌ 2009ರ ಎಚ್ಚರ! ಪತ್ರಿಕೆಯ ಪುಟ 3-9 ನೋಡಿ.

^ ಎಚ್ಚರ! ಪತ್ರಿಕೆಯು ನಿರ್ದಿಷ್ಟವಾಗಿ ಯಾವುದೇ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ. ಯಾವ್ಯಾವ ಚಿಕಿತ್ಸೆ ಲಭ್ಯವಿದೆಯೆಂದು ಪ್ರತಿಯೊಬ್ಬರೂ ಜಾಗ್ರತೆಯಿಂದ ಪರಿಶೀಲಿಸಿ, ವೈಯಕ್ತಿಕ ನಿರ್ಣಯ ಮಾಡಬೇಕು.

[ಪುಟ 14ರಲ್ಲಿರುವ ಚಿತ್ರ]

ಬೈಬಲಿನ ಸಹಾಯ

● “ಯಾವ ವಿಷಯದ ಕುರಿತಾಗಿಯೂ ಚಿಂತೆಮಾಡಬೇಡಿರಿ; ಎಲ್ಲ ವಿಷಯಗಳಲ್ಲಿ ಕೃತಜ್ಞತಾಸ್ತುತಿಯಿಂದ ಕೂಡಿದ ಪ್ರಾರ್ಥನೆ ಮತ್ತು ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು.”—ಫಿಲಿಪ್ಪಿ 4:6, 7.

● “ನಾನು ಯೆಹೋವನ ಸನ್ನಿಧಿಯಲ್ಲಿ ಬೇಡಿಕೊಳ್ಳಲು ಆತನು ಸದುತ್ತರವನ್ನು ಕೊಟ್ಟು ಎಲ್ಲಾ ಭೀತಿಯಿಂದ ನನ್ನನ್ನು ತಪ್ಪಿಸಿದನು.”—ಕೀರ್ತನೆ 34:4.

● “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ; ಕುಗ್ಗಿಹೋದವರನ್ನು ಉದ್ಧಾರಮಾಡುತ್ತಾನೆ.”—ಕೀರ್ತನೆ 34:18.

● “ಮುರಿದ ಮನಸ್ಸುಳ್ಳವರನ್ನು ವಾಸಿಮಾಡುತ್ತಾನೆ; ಅವರ ಗಾಯಗಳನ್ನು ಕಟ್ಟುತ್ತಾನೆ.”—ಕೀರ್ತನೆ 147:3.

[ಪುಟ 15, 16ರಲ್ಲಿರುವ ಚೌಕ]

ಆತ್ಮಹತ್ಯೆಯ ಯೋಚನೆ ಬಂದಾಗ . . .

ವಿಶ್ವಾಸಾರ್ಹ ಆತ್ಮೀಯರೊಂದಿಗೆ ಹೃದಯಬಿಚ್ಚಿ ಮಾತಾಡಿ

ಮನಸ್ಸಿನಾಳದ ಭಾವನೆಗಳನ್ನು ಪ್ರಾರ್ಥನೆಯಲ್ಲಿ ಹೇಳಿ

ಚಿಕಿತ್ಸೆ ಪಡೆಯಿರಿ

[ಪುಟ 16ರಲ್ಲಿರುವ ಚೌಕ/ಚಿತ್ರ]

ಬಂಧುಮಿತ್ರರಿಗೆ ಕಿವಿಮಾತು

ತುಂಬ ಮನನೊಂದಿರುವ ವ್ಯಕ್ತಿ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿರುವ ವಿಷಯ ಹೆಚ್ಚಾಗಿ ಕುಟುಂಬ ಸದಸ್ಯರು, ಆಪ್ತ ಮಿತ್ರರಿಗೆ ಮೊದಲು ಗೊತ್ತಾಗುತ್ತದೆ. ನೀವು ಕೂಡಲೇ ಕ್ರಮಕೈಕೊಂಡರೆ ಅನಾಹುತ ತಪ್ಪಿಸಬಲ್ಲಿರಿ! ಅನುಕಂಪದಿಂದ ಕಿವಿಗೊಡಿ. ಆ ವ್ಯಕ್ತಿ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ತಾತ್ಸಾರ ಬೇಡ, ಅವುಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. “ಮನಗುಂದಿದವರಿಗೆ ಸಾಂತ್ವನಗೊಳಿಸುವಂಥ ರೀತಿಯಲ್ಲಿ ಮಾತಾಡಿರಿ” ಎನ್ನುತ್ತದೆ ಬೈಬಲ್‌. (1 ಥೆಸಲೊನೀಕ 5:14) ಅವರು ಸಹಾಯ ಪಡೆಯುವಂತೆ ಪ್ರೋತ್ಸಾಹಿಸಿ. ಅವರಿಗೆ ಆ ಸಹಾಯ ಸಿಗುತ್ತಿದೆಯೆಂದು ಖಚಿತಪಡಿಸಿ.