ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಾಕಾದ್ರೂ ಹಾಗೆ ಹೇಳಿದ್ನೊ?

ಯಾಕಾದ್ರೂ ಹಾಗೆ ಹೇಳಿದ್ನೊ?

ಯುವಜನರ ಪ್ರಶ್ನೆ

ಯಾಕಾದ್ರೂ ಹಾಗೆ ಹೇಳಿದ್ನೊ?

ಈ ಲೇಖನ ಓದಿ ಕೆಳಗಿನ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ಕೆಲವೊಮ್ಮೆ ಹೇಳಬಾರದ್ದನ್ನು ಹೇಳಿಬಿಡುತ್ತೇವೆ ಏಕೆ?

ಬೇರೆಯವರ ಮನನೋಯಿಸಿದಾಗ ಏನು ಮಾಡಬೇಕು?

ನಾಲಗೆಯನ್ನು ಹತೋಟಿಯಲ್ಲಿಡುವುದು ಹೇಗೆ?

“ಮಾತಾಡುವಾಗ ಯಾವಾಗ್ಲೂ ಜಾಗ್ರತೆಯಿಂದ ಇರ್ತೇನೆ. ಆದ್ರೂ ಒಮ್ಮೊಮ್ಮೆ ಹೇಳಬಾರದ್ದನ್ನ ಹೇಳಿಬಿಡ್ತೇನೆ, ಆಮೇಲೆ ತಲೆಚಚ್ಚಿಕೊಳ್ತೇನೆ.”—ಚೇಸ್‌

“ಬೇರೆಯವರು ಹೇಳಬಾರದ ವಿಷ್ಯವನ್ನ ಹೇಳಲ್ಲ, ಮನಸ್ಸಲ್ಲೇ ಇಟ್ಟುಕೊಳ್ತಾರೆ. ನಾನು ಮಾತ್ರ ಬಾಯಿಬಡ್ಕಿ, ಛೆ!”—ಆ್ಯಲಿ

ಎಡವಟ್ಟಾಗುತ್ತದೆ ಏಕೆ?

ಬೈಬಲಿನ ನುಡಿಮುತ್ತು: “ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ ಅವನು ಪರಿಪೂರ್ಣ.” (ಯಾಕೋಬ 3:2, ಪವಿತ್ರ ಬೈಬಲ್‌ ಭಾಷಾಂತರ) ಇದರ ಅರ್ಥ, ಯಾರಿಗೂ ತಮ್ಮ ನಾಲಗೆಯ ಮೇಲೆ ಸಂಪೂರ್ಣ ಹಿಡಿತವಿಲ್ಲ ಎಂದೇ. ಮಾತಾಡಲೇ ಬಾರದೆಂದು ನೆನಸಿದ್ದ ವಿಷಯವನ್ನೇ ಒದರಿಬಿಡುತ್ತೇನೆ ಎನ್ನುವುದು ಅನಘ * ಎಂಬ ಹುಡುಗಿಯ ಅಳಲು. ಎಷ್ಟೋ ಜನರಿಗೆ ಈ ಸಮಸ್ಯೆ ಇದೆ.

ನಡೆದ ಘಟನೆ: “ನಾನು ಬೇಡಾಂತ ಇಟ್ಟಿದ್ದ ಬಟ್ಟೆಗಳು ನನ್ನ ಫ್ರೆಂಡ್ಗೆ ಇಷ್ಟ ಆಗಿ ಅದನ್ನು ಕೇಳಿದಳು. ತಕ್ಷಣ ನಾನು ‘ನಿನಗೆ ಆಗಲ್ಲ ಕಣೇ’ ಅಂದೆ. ಅದಕ್ಕವಳು ‘ಏನ್‌ ನಿನ್ನ ಮಾತಿನ ಅರ್ಥ, ನಾನು ಡುಮ್ಮಿ ಅಂತಾನಾ?’ ಅಂದುಬಿಟ್ಟಳು.”—ಖುಷಿ.

ಇದೇ ರೀತಿ ನೀವೂ ಕೆಲವೊಮ್ಮೆ ನಾಲಗೆಯ ಮೇಲೆ ಹಿಡಿತ ಕಳೆದುಕೊಂಡಿರಬಹುದು. ಯಾಕೆಂದು ತಿಳಿಯಲು ಇದನ್ನು ಪ್ರಯತ್ನಿಸಿ ನೋಡಿ.

● ಕಾರಣ ಗುರುತಿಸಿ.

___ ಸಿಟ್ಟು ಬಂದಾಗ ಏನಾದರೂ ಒದರಿಬಿಡುತ್ತೇನೆ

___ ಯೋಚನೆ ಮಾಡದೆ ಹೇಳಿಬಿಡುತ್ತೇನೆ

___ ಸರಿಯಾಗಿ ಕೇಳದೆ ಮಾತಾಡಿಬಿಡುತ್ತೇನೆ

___ ಇತರೆ

ಉದಾಹರಣೆ: “ನಾನು ಜೋಕ್‌ ಮಾಡೋದು ಸ್ವಲ್ಪ ಜಾಸ್ತಿಯಾಗ್ತದೆ. ಹಾಗಾಗಿ ನಾನು ಹೇಳಿದ್ದನ್ನ ಕೆಲವೊಮ್ಮೆ ಜನರು ತಪ್ಪಾಗಿ ತಗೊಳ್ತಾರೆ.”—ಅಖಿಲ್‌.

ಹೆಚ್ಚಾಗಿ ನೀವು ಯಾರನ್ನು ನೋಯಿಸಿಬಿಡುತ್ತೀರಿ ಎಂದು ಗುರುತು ಹಾಕಿ.

___ ಅಪ್ಪ/ಅಮ್ಮ

___ ಒಡಹುಟ್ಟಿದವರು

___ ಸ್ನೇಹಿತರು

___ ಇತರೆ

ಉದಾಹರಣೆ: “ಏನ್‌ ಹೇಳೋದು? ಯಾರನ್ನ ಹೆಚ್ಚು ಪ್ರೀತಿಸ್ತೇನೊ ಅಂಥವರನ್ನೇ ಹೆಚ್ಚು ನೋಯಿಸಿ ಬಿಡ್ತೀನಿ. ಅವರ ಜೊತೆ ತುಂಬ ಫ್ರೀಯಾಗಿರುತ್ತೇನಲ್ಲಾ. ಅದೇ ಕಾರಣ ಇರಬೇಕು” ಎನ್ನುತ್ತಾಳೆ 20ರ ಹರೆಯದ ಕ್ರಿಸ್ಟೀನ್‌.

ಬೇರೆಯವರ ಮನನೋಯಿಸಿದಾಗ ಏನು ಮಾಡಬೇಕು?

ಬೈಬಲಿನ ನುಡಿಮುತ್ತು: ‘ಯಾವುದು ನಮ್ಮನ್ನು ಸಮಾಧಾನಕ್ಕೆ ನಡೆಸುತ್ತದೋ ಅದನ್ನೇ ಮಾಡೋಣ.’ (ರೋಮನ್ನರಿಗೆ 14:19, ಪವಿತ್ರ ಗ್ರಂಥ ಭಾಷಾಂತರ) ಈ ಮಾತನ್ನು ಪಾಲಿಸುವ ಒಂದು ವಿಧಾನ, ನಮ್ಮಿಂದ ಏನಾದರೂ ತಪ್ಪಾದರೆ ಕ್ಷಮೆ ಕೇಳುವುದು.

ನಡೆದ ಘಟನೆ: “ನಾನು ಹತ್ತು ತಿಂಗಳ ಮಗುವಾಗಿದ್ದಾಗ ಅಮ್ಮ ತೀರಿಕೊಂಡರು. ಅಪ್ಪಗೆ ನಾನು ಬೇಡವಾಗಿದ್ದೆ. ಹಾಗಾಗಿ ನನ್ನನ್ನು ಬೆಳೆಸಿದವರು ದೊಡ್ಡಮ್ಮ-ದೊಡ್ಡಪ್ಪ. ಹತ್ತೊ ಹನ್ನೊಂದೊ ವಯಸ್ಸಿನವಳಾಗಿದ್ದಾಗ ಒಂದು ದಿನ ತುಂಬ ಬೇಜಾರಾಗ್ತಿತ್ತು. ನನಗಾರೂ ಇಲ್ಲ ಅಂತ ಅನಿಸ್ತಿತ್ತು. ನನ್ನ ಅಮ್ಮ ಇಲ್ಲದಿರುವುದನ್ನು ನೆನಸಿಕೊಂಡು ಸಿಟ್ಟುಬರುತ್ತಿತ್ತು, ಯಾರ ಮೇಲಾದರೂ ನನ್ನ ಸಿಟ್ಟೆಲ್ಲ ತೆಗೀಬೇಕು ಅಂತ ಅನಿಸ್ತಿತ್ತು. ಆವಾಗಲೇ ದೊಡ್ಡಮ್ಮ ನನ್ನನ್ನು ಯಾವುದೊ ಕೆಲಸಕ್ಕೆ ಸಹಾಯಮಾಡು ಬಾ ಅಂತ ಕರೆದರು. ನಾನು ಸಿಟ್ಟಿನಿಂದ ರೇಗಾಡಿಬಿಟ್ಟೆ. ‘ನಿಮ್ಮನ್ನ ಕಂಡ್ರೆ ನನಗಾಗಲ್ಲ’ ‘ನೀವು ನನ್ನ ಹೆತ್ತ ಅಮ್ಮ ಅಲ್ಲ’ ಅಂತ ಬಾಯಲ್ಲಿ ಬಂದುಬಿಡ್ತು. ಇದನ್ನು ಕೇಳಿ ದೊಡ್ಡಮ್ಮಗೆ ಶಾಕ್‌ ಆಯಿತು. ಬೆಡ್‌ರೂಮ್‌ಗೆ ಹೋಗಿ ಬಾಗಿಲು ಹಾಕ್ಕೊಂಡು ಜೋರಾಗಿ ಅತ್ತುಬಿಟ್ಟರು. ನನಗೆ ತುಂಬ ಬೇಜಾರಾಯಿತು. ಅವರು ನನ್ನನ್ನ ಕಣ್ಮಣಿ ಥರ ನೋಡಿಕೊಳ್ಳುತ್ತಾ ಇದ್ದರು. ನನಗೋಸ್ಕರ ಏನೆಲ್ಲ ಮಾಡಿದ್ದರು. ಆದರೆ ನಾನು ಅವರನ್ನ ಕಾಲ ಕಸ ಥರ ಮಾಡಿಬಿಟ್ಟೆ. ನಡದದ್ದೆಲ್ಲ ದೊಡ್ಡಪ್ಪಗೆ ಗೊತ್ತಾದಾಗ ನನ್ನನ್ನು ಕೂರಿಸಿ ಮಾತಾಡಿದರು. ನಾಲಗೆಯನ್ನು ನಿಯಂತ್ರಿಸುವ ಬಗ್ಗೆ ಬೈಬಲಿನಿಂದ ಕೆಲವೊಂದು ವಚನಗಳನ್ನು ತೋರಿಸಿದರು. ಆಮೇಲೆ ನಾನು ದೊಡ್ಡಮ್ಮನ ಹತ್ತಿರ ಹೋಗಿ ಕ್ಷಮೆ ಕೇಳ್ದೆ. ಛೆ! ನಾನೆಂಥ ತಪ್ಪು ಮಾಡಿಬಿಟ್ಟೆ.”—ಕ್ಯಾರನ್‌.

ನಿಮಗೆ ಕ್ಷಮೆ ಕೇಳಲು ಕಷ್ಟವಾಗುತ್ತದಾ? ಯಾಕೆ ಕಷ್ಟವಾಗುತ್ತದೆಂಬದಕ್ಕೆ ಕೆಳಗೆ ಒಂದು ಕಾರಣ ಕೊಡಿ.

․․․․․

ಕ್ಷಮೆ ಕೇಳಿದರೆ ನಿಮಗೇ ಒಳ್ಳೇದು ಯಾಕೆ?

․․․․․

ಸುಳಿವು: ಜ್ಞಾನೋಕ್ತಿ 11:2 ಮತ್ತು ಮತ್ತಾಯ 5:23, 24 ಓದಿ ಅವುಗಳಲ್ಲಿರುವ ತತ್ವಗಳ ಕುರಿತು ಯೋಚಿಸಿ.

ಒಬ್ಬರ ಮನನೋಯಿಸಿ ಕ್ಷಮೆ ಕೇಳುವುದಕ್ಕಿಂತ ಮನನೋಯಿಸದ ಹಾಗೆ ಮಾತಾಡುವುದೇ ಮೇಲಲ್ಲವೇ? ಆ ರೀತಿ ಮಾತಾಡುವುದು ಹೇಗೆ?

ನಾಲಗೆಯನ್ನು ಹತೋಟಿಯಲ್ಲಿಡುವುದು ಹೇಗೆ?

ಬೈಬಲಿನ ನುಡಿಮುತ್ತು: “ಪ್ರತಿಯೊಬ್ಬನು ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ ಕೋಪಿಸುವುದರಲ್ಲಿ ನಿಧಾನಿಯೂ ಆಗಿರಬೇಕು.” (ಯಾಕೋಬ 1:19) ಇದನ್ನು ಪಾಲಿಸಲು ಕೆಳಗೆ ಕೊಡಲಾದ ಸಲಹೆಗಳು ಸಹಾಯಮಾಡುವವು. (g12-E 01)

ಕೆಳಗಿರುವ ಬೈಬಲ್‌ ವಚನಗಳನ್ನು ಓದಿ ಬಲಬದಿಯಲ್ಲಿರುವ ಕಿವಿಮಾತುಗಳಿಗೆ ಸರಿಹೊಂದಿಸಿ.

ಜ್ಞಾನೋಕ್ತಿ 12:16

ಜ್ಞಾನೋಕ್ತಿ 17:14

ಜ್ಞಾನೋಕ್ತಿ 26:20

ಪ್ರಸಂಗಿ 7:9

ಫಿಲಿಪ್ಪಿ 2:3

1 “ನನಗ್ಯಾರೂ ಏನೂ ಹೇಳಬಾರದು, ನನಗೆಲ್ಲ ಗೊತ್ತು ಎಂದು ನೆನಸಬೇಡಿ. ಆಗ ಬೇರೆಯವರ ಮಾತನ್ನು ಕೇಳುವಷ್ಟು ತಾಳ್ಮೆ ಇರ್ತದೆ.”—ದಿಗಂತ್‌.

2 “ಸಿಟ್ಟು ಬಂದಾಗ ವಾಕಿಂಗ್‌ಗೆ ಹೊರಟುಬಿಡ್ತೇನೆ. ಒಬ್ಬಳೇ ಇದ್ದಾಗ ಸಿಟ್ಟು ತಣ್ಣಗಾಗುತ್ತೆ.”—ಭಾವನಾ.

3 “ನಾನು ಚಿಕ್ಕವಳಿದ್ದಾಗ ಯಾರಿಗೂ ಬಿಟ್ಟುಕೊಡ್ತಿರಲಿಲ್ಲ. ಸಣ್ಣಸಣ್ಣ ವಿಷಯಗಳನ್ನೂ ದೊಡ್ಡದು ಮಾಡುತ್ತಿದ್ದೆ. ಅದೆಂಥ ದಡ್ಡಕೆಲಸ ಅಂತ ಈಗ ಅರ್ಥ ಆಗಿದೆ.”—ಸನಾ.

4 “ನಿಮ್ಮ ಮೇಲೆ ಯಾರಾದರೂ ಕೂಗಾಡುತ್ತಿದ್ದರೆ ಏನೂ ಮಾತಾಡಬೇಡಿ, ಸುಮ್ಮನಿದ್ದುಬಿಡಿ. ಅವರೇ ಸುಸ್ತಾಗಿ ಸುಮ್ಮನಾಗುತ್ತಾರೆ. ಉರಿಯೋ ಬೆಂಕಿಗೆ ಎಣ್ಣೆ ಸುರಿಸೋದು ಬೇಡ.”—ಕೃಪಾ.

5 “ಒಮ್ಮೊಮ್ಮೆ ಕೆಲವರ ಮೇಲೆ ತುಂಬ ಕೋಪ ಬರುತ್ತೆ. ಅವರನ್ನ ಚೆನ್ನಾಗಿ ಬೈಬೇಕು ಅಂತ ಅನ್ಸುತ್ತೆ. ಆದರೂ ಸುಮ್ಮನಿರ್ತೇನೆ. ಜಗಳಾಡಿ, ಕೂಗಾಡಿ ಏನ್‌ ಪ್ರಯೋಜನ ಆಗ್ತಿತ್ತು? ದುಡುಕಿ ಪ್ರತಿಕ್ರಿಯಿಸದೇ ಇರೋದೆ ಒಳ್ಳೇದು ಅಂತ ಕಲಿತಿದ್ದೇನೆ.”—ಚಾರ್ಲ್ಸ್‌.

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 18ರಲ್ಲಿರುವ ಚೌಕ/ಚಿತ್ರಗಳು]

ಆ್ಯಲಿ—ಒಂದು ವಿಷ್ಯ ಹೇಳೋ ಮುಂಚೆ ‘ಇದನ್ನು ಹೇಳಿ ಒಳ್ಳೇದಾಗುತ್ತಾ? ಇದನ್ನು ಕೇಳೋ ವ್ಯಕ್ತಿಯ ಮೇಲೆ ಯಾವ ಪರಿಣಾಮ ಆಗ್ಬಹುದು?’ ಅಂತ ಯೋಚಿಸ್ತೇನೆ. ಹೇಳಲಾ ಬೇಡ್ವಾ ಅಂತ ಸಂಶಯವಿದ್ದರೆ ಹೇಳದಿರೋದೇ ಒಳ್ಳೇದು.

ಚೇಸ್‌—ನಾನು ಹೇಳೋ ವಿಷ್ಯದಿಂದ ಬೇರೆಯವರ ಮೇಲೆ ಏನು ಪರಿಣಾಮ ಆಗ್ಬಹುದು ಅಂತ ಮೊದಲು ಯೋಚಿಸ್ತೇನೆ. ದೊಡ್ಡವನಾಗ್ತಾ ಆಗ್ತಾ ನಾಲಗೆಯನ್ನ ಹದ್ದುಬಸ್ತಲ್ಲಿ ಇಡೋದಕ್ಕೂ ಕಲಿತಾ ಇದ್ದೇನೆ. ಬದುಕಿನಲ್ಲಾಗುವ ಅನುಭವಗಳು ಖಂಡಿತ ಪಾಠ ಕಲಿಸ್ತವೆ.

[ಪುಟ 19ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ನಾವು ಯಾರೂ ಪರಿಪೂರ್ಣರಲ್ಲ. ಮಾತಿನಲ್ಲಿ “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ” ಎಂದನು ಬೈಬಲಿನ ಒಬ್ಬ ಬರಹಗಾರ. (ಯಾಕೋಬ 3:2) ಹಾಗಾಗಿ ನಿಮ್ಮ ಅಪ್ಪಅಮ್ಮ ಸಹ ನಾಲಗೆಯನ್ನು ಅಂಕೆಯಲ್ಲಿಟ್ಟು ಮಾತಾಡಲು ಎಷ್ಟು ಕಷ್ಟಪಟ್ಟರು, ಏನು ಮಾಡಿದರೆಂದು ಅವರನ್ನೇ ಕೇಳಿ.

[ಪುಟ 18ರಲ್ಲಿರುವ ಚಿತ್ರ]

“ಒಮ್ಮೆ ಅಮುಕಿ ಹೊರತೆಗೆದ ಪೇಸ್ಟನ್ನು ಪುನಃ ಟ್ಯೂಬೊಳಗೆ ಹಾಕಲಿಕ್ಕೆ ಆಗಲ್ಲ. ಅದೇ ರೀತಿ ಒಮ್ಮೆ ಆಡಿದ ಮಾತನ್ನು ಹಿಂದೆ ತೆಗೆದುಕೊಳ್ಳಲಿಕ್ಕೆ ಆಗಲ್ಲ.”—ಜೇಮ್ಸ್‌.