ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವೈವಾಹಿಕ ಸಾಫಲ್ಯ ಹೇಗೆ ಸಾಧ್ಯ?

ವೈವಾಹಿಕ ಸಾಫಲ್ಯ ಹೇಗೆ ಸಾಧ್ಯ?

ಬೈಬಲಿನ ದೃಷ್ಟಿಕೋನ

ವೈವಾಹಿಕ ಸಾಫಲ್ಯ ಹೇಗೆ ಸಾಧ್ಯ?

“ಮನುಷ್ಯರನ್ನು ಸೃಷ್ಟಿಸಿದಾತನು ಆರಂಭದಿಂದಲೇ ಅವರನ್ನು ಗಂಡುಹೆಣ್ಣಾಗಿ ನಿರ್ಮಿಸಿ, ‘ಈ ಕಾರಣದಿಂದ ಪುರುಷನು ತನ್ನ ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು ಮತ್ತು ಅವರಿಬ್ಬರು ಒಂದೇ ಶರೀರವಾಗಿರುವರು’ ಎಂದು ಹೇಳಿದನು . . . ಆದುದರಿಂದ ದೇವರು ಒಟ್ಟುಗೂಡಿಸಿದ್ದನ್ನು ಯಾವ ಮನುಷ್ಯನೂ ಅಗಲಿಸದಿರಲಿ.”—ಯೇಸು ಕ್ರಿಸ್ತನ ಮಾತುಗಳು, ಮತ್ತಾಯ 19:4-6.

ಮೌಲ್ಯಗಳು ಮರೆಯಾಗುತ್ತಿರುವ ನಮ್ಮೀ ಜಗತ್ತಿನಲ್ಲಿ ದಾಂಪತ್ಯದ ಬಗ್ಗೆಯೂ ಗೌರವ ಗೌಣವಾಗುತ್ತಿದೆ. ದೈಹಿಕ ಆಕರ್ಷಣೆ ಮಾಸಿಹೋದಾಗ, ಯಾವುದೊ ಸಮಸ್ಯೆ ತಲೆದೋರಿದಾಗ ಅನೇಕ ದಂಪತಿಗಳು ಬೇರೆಯಾಗುತ್ತಾರೆ ಅಥವಾ ವಿಚ್ಛೇದನದ ಮೊರೆಹೋಗುತ್ತಾರೆ. ಕ್ಷುಲ್ಲಕ ಕಾರಣಗಳಿಗಾಗಿಯೂ ಹಾಗೆ ಮಾಡುತ್ತಾರೆ. ‘ಗಂಡಹೆಂಡಿರ ಜಗಳದಲ್ಲಿ ಕೂಸು ಬಡವಾಯಿತು’ ಎನ್ನುವಂತೆ ಮಕ್ಕಳ ಮನಸ್ಸಿನ ಮೇಲೆ ಇದು ಬರೆ ಎಳೆಯುತ್ತದೆ.

ಬೈಬಲಿನ ಚಿರಪರಿಚಯವಿರುವ ಜನರು ವಿವಾಹ ಜೀವನದ ಬಗ್ಗೆ ಈ ಬದಲಾದ ದೃಷ್ಟಿಕೋನ ನೋಡಿ ಬೆರಗಾಗುವುದಿಲ್ಲ. ಏಕೆಂದರೆ “ಕಡೇ ದಿವಸಗಳಲ್ಲಿ” ಅಂದರೆ ನಮ್ಮ ಕಾಲದಲ್ಲಿ ಹೀಗಾಗುವುದೆಂದು ಬೈಬಲ್‌ ಭವಿಷ್ಯ ನುಡಿದಿತ್ತು. ಚೊಕ್ಕ ಸಂಸಾರಕ್ಕೆ ಚುಕ್ಕಾಣಿಯಂತಿರುವ ನಿಷ್ಠೆ, ನಿಜ ಪ್ರೀತಿ, ಮಮತೆ ಕಣ್ಮರೆಯಾಗುವುದೆಂದು ಅದು ಹೇಳಿತ್ತು. (2 ತಿಮೊಥೆಯ 3:1-5) ನೈತಿಕ ಮೌಲ್ಯಗಳ ಕುಸಿತ ಮತ್ತು ಇದರ ಪರಿಣಾಮ ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ತಟ್ಟಬಹುದೆಂಬ ಚಿಂತೆ ಆಗುತ್ತಿದೆಯೇ? ದಾಂಪತ್ಯದ ಬಗ್ಗೆ ನಿಮಗಿರುವ ಗೌರವ, ಅಭಿಮಾನಗಳನ್ನು ಉಳಿಸಿಕೊಳ್ಳಬೇಕೇ?

ಹಾಗಿದ್ದರೆ ಬೈಬಲಿನ ಸಹಾಯ ನಿಮಗೆ ಲಭ್ಯವಿದೆ. ಅದರ ಸಲಹೆಸೂತ್ರಗಳು ಕಾರ್ಯಸಾಧುವಾಗಿ ಸಾಬೀತಾಗಿವೆ. ಅನೇಕರ ದಾಂಪತ್ಯವನ್ನು ಭದ್ರಪಡಿಸಿವೆ. ಅವುಗಳಲ್ಲಿ ಐದು ತತ್ವಗಳು ಇಲ್ಲಿವೆ. *

ಸುದೀರ್ಘ ಬಾಂಧವ್ಯಕ್ಕೆ ಐದು ಮೆಟ್ಟಿಲುಗಳು

(1) ಮದುವೆ ಒಂದು ಪವಿತ್ರ ಬಂಧವೆಂದು ಮನಸ್ಸಿನಲ್ಲಿಡಿ. ಎಡಬದಿಯಲ್ಲಿರುವ ಯೇಸುವಿನ ಮಾತುಗಳು ತಿಳಿಸುವಂತೆ ಆತನ ಹಾಗೂ ಸೃಷ್ಟಿಕರ್ತನಾದ ಯೆಹೋವ ದೇವರ ದೃಷ್ಟಿಯಲ್ಲಿ ಮದುವೆ ಪವಿತ್ರ ಬಂಧ. ದೇವರ ಈ ನೋಟ ಪ್ರಾಚೀನ ಕಾಲದಲ್ಲೇ ನಿಚ್ಚಳವಾಗಿ ತೋರಿಬಂತು. ಯುವ ಸ್ತ್ರೀಯರನ್ನು ಮದುವೆಯಾಗಲೆಂದು ಪತ್ನಿಯರಿಗೆ ವಿಚ್ಛೇದನ ಕೊಡುತ್ತಿದ್ದ ಪುರುಷರನ್ನು ಖಂಡಿಸುತ್ತಾ ದೇವರಂದದ್ದು: ‘ನಿನಗೂ ನಿನ್ನ ಯೌವನದ ಹೆಂಡತಿಗೂ ಆದ ಒಡಂಬಡಿಕೆಗೆ [ನಾನೇ] ಸಾಕ್ಷಿಯಾಗಿದ್ದೇನಲ್ಲಾ. ನಿನ್ನ ಸಹಚಾರಿಣಿಯೂ ಒಡಂಬಡಿಕೆಯ ಪತ್ನಿಯೂ ಆದ ಆಕೆಗೆ ದ್ರೋಹಮಾಡಿದ್ದೀ . . . ನಾನು ಪತ್ನೀತ್ಯಾಗವನ್ನೂ ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ.’ (ಮಲಾಕಿಯ 2:14-16) ವಿವಾಹ ಬಂಧ ದೇವರ ದೃಷ್ಟಿಯಲ್ಲಿ ಬಹುಮಾನ್ಯತೆ ಉಳ್ಳದ್ದು. ಪತಿಪತ್ನಿ ಒಬ್ಬರನ್ನೊಬ್ಬರು ಹೇಗೆ ಉಪಚರಿಸುತ್ತಾರೆಂದು ದೇವರು ಗಮನಿಸುತ್ತಾನೆ.

(2) ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸುವ ಗಂಡನಾಗಿರಿ. ಕುಟುಂಬದಲ್ಲಿ ಮಹತ್ವದ ನಿರ್ಣಯಗಳನ್ನು ಮಾಡಬೇಕಾದಾಗ ಒಬ್ಬರು ಸಾರಥ್ಯವಹಿಸಬೇಕು. ಆ ಜವಾಬ್ದಾರಿಯನ್ನು ದೇವರು ಗಂಡಂದಿರಿಗೆ ಕೊಟ್ಟಿದ್ದಾನೆ. “ಗಂಡನು ತನ್ನ ಹೆಂಡತಿಗೆ ಶಿರಸ್ಸಾಗಿದ್ದಾನೆ” ಎನ್ನುತ್ತದೆ ಎಫೆಸ 5:23. ಹಾಗೆಂದು ಹೆಂಡತಿಯ ಮೇಲೆ ದಬ್ಬಾಳಿಕೆ ಸಲ್ಲದು. ಸತಿಪತಿಗಳಿಬ್ಬರೂ “ಒಂದೇ ಶರೀರ” ಎಂಬದನ್ನು ಗಂಡನಾದವನು ಗಮನದಲ್ಲಿಡಬೇಕು. ತನ್ನ ಬಾಳಸಂಗಾತಿಗೆ ಮರ್ಯಾದೆ ತೋರಿಸಬೇಕು. ಕೌಟುಂಬಿಕ ವಿಷಯಗಳಲ್ಲಿ ಅವಳ ಅಭಿಪ್ರಾಯಗಳಿಗೂ ಮನ್ನಣೆ ಕೊಡಬೇಕು. (1 ಪೇತ್ರ 3:7) “ಗಂಡಂದಿರು ತಮ್ಮ ಸ್ವಂತ ದೇಹಗಳನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನಲ್ಲಿದ್ದಾರೆ” ಎನ್ನುತ್ತದೆ ಬೈಬಲ್‌.—ಎಫೆಸ 5:28.

(3) ಒತ್ತಾಸೆ ನೀಡುವ ಹೆಂಡತಿಯಾಗಿರಿ. “ಸರಿಬೀಳುವ ಸಹಕಾರಿ” ಎಂದು ಪತ್ನಿಯನ್ನು ಬೈಬಲ್‌ ಬಣ್ಣಿಸುತ್ತದೆ. (ಆದಿಕಾಂಡ 2:18) ಇಂಥ ಹೆಂಡತಿಯಲ್ಲಿರುವ ಗುಣಗಳು ವೈವಾಹಿಕ ಬಂಧವನ್ನು ಬಲಪಡಿಸುವವು. ಆಕೆ ಗಂಡನೊಂದಿಗೆ ಸ್ಪರ್ಧೆಗೆ ನಿಲ್ಲದೆ ಮನದಾಳದಿಂದ ಸಹಕಾರ ನೀಡುವಳು. ಹೀಗೆ ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುವಳು. ಎಫೆಸ 5:22 “ಹೆಂಡತಿಯರು ತಮ್ಮತಮ್ಮ ಗಂಡಂದಿರಿಗೆ ಅಧೀನರಾಗಿರಲಿ” ಎನ್ನುತ್ತದೆ. ಆದರೆ ಯಾವುದೊ ವಿಷಯದಲ್ಲಿ ಆಕೆ ಗಂಡನೊಂದಿಗೆ ಸಹಮತದಲ್ಲಿ ಇಲ್ಲದಿದ್ದರೆ? ಅಂಥ ಸಮಯದಲ್ಲಿ ತನ್ನ ಅಭಿಪ್ರಾಯವನ್ನು ಬಾಯಿಬಿಟ್ಟು ಹೇಳಲು ಹಿಂಜರಿಯಬಾರದು. ಆದರೆ ಹೇಳುವಾಗ ಪತಿಯ ಗೌರವಕ್ಕೆ ಧಕ್ಕೆ ಬಾರದ ಹಾಗೆ, ಮರ್ಯಾದೆ ಕೊಟ್ಟು ಮಾತಾಡಬೇಕು. ಪತಿ ತನ್ನೊಂದಿಗೆ ಹೇಗೆ ಮಾತಾಡಬೇಕೆಂದು ಬಯಸುತ್ತಾಳೊ ಹಾಗೆ.

(4) ವಾಸ್ತವಿಕತೆ ಸ್ವೀಕರಿಸಿ; ಸವಾಲುಗಳಿಗೆ ಸಿದ್ಧರಾಗಿರಿ. ದುಡುಕಿ ಆಡಿದ ಅಥವಾ ಮನನೋಯಿಸುವ ಮಾತುಗಳು, ಹಣಕಾಸಿನ ಸಮಸ್ಯೆಗಳು, ಗಂಭೀರ ಕಾಯಿಲೆ, ಮಕ್ಕಳ ಪಾಲನೆಯಲ್ಲಿ ಬರುವ ಒತ್ತಡ ಮುಂತಾದವು ಸಂಸಾರದಲ್ಲಿ ಅಪಶ್ರುತಿ ಮೂಡಿಸಬಹುದು. ಹಾಗಾಗಿಯೇ ಬೈಬಲ್‌ ವಿವಾಹಿತರಿಗೆ “ತಮ್ಮ ಶರೀರದಲ್ಲಿ ಸಂಕಟವಿರುವುದು” ಎಂದು ನೇರವಾಗಿ ಹೇಳುತ್ತದೆ. (1 ಕೊರಿಂಥ 7:28) ಸಂಕಟ-ಸಮಸ್ಯೆಗಳಿಂದಾಗಿ ವಿವಾಹ ಬಂಧದಲ್ಲಿ ಬಿರುಕು ಬರಲು ಬಿಡಬಾರದು. ಅಂಥ ಸಮಸ್ಯೆಗಳೆದ್ದರೂ ಗಂಡಹೆಂಡತಿಯ ಮಧ್ಯೆ ಪ್ರೀತಿಯಿದ್ದರೆ, ದೇವರ ವಾಕ್ಯದ ಜ್ಞಾನ ಇದ್ದರೆ ಅವುಗಳನ್ನು ಬಗೆಹರಿಸಲು ಶಕ್ತರಾಗುವರು. ನಿಮ್ಮ ಸಂಸಾರದಲ್ಲಿ ಅಂಥ ಯಾವುದೇ ಸಮಸ್ಯೆ ಬಂದರೆ ಅದನ್ನು ಬಗೆಹರಿಸಲು ಬೇಕಾದ ದೇವರ ವಾಕ್ಯದ ಜ್ಞಾನ ಪಡೆದುಕೊಂಡಿದ್ದೀರಾ? “ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು; ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ” ಎನ್ನುತ್ತದೆ ಬೈಬಲ್‌.—ಯಾಕೋಬ 1:5.

(5) ದಾಂಪತ್ಯ ನಿಷ್ಠೆ ತೋರಿಸಿ. ವೈವಾಹಿಕ ಬಂಧಕ್ಕಿರುವ ಅತ್ಯಂತ ದೊಡ್ಡ ಅಪಾಯ ವ್ಯಭಿಚಾರ ಅಥವಾ ವಿವಾಹಬಾಹಿರ ಲೈಂಗಿಕ ಸಂಪರ್ಕ. ಈ ಒಂದು ಆಧಾರದ ಮೇಲೆ ಮಾತ್ರ ವಿಚ್ಛೇದನಕ್ಕೆ ದೇವರ ಅನುಮತಿ ಇದೆ. (ಮತ್ತಾಯ 19:9) “ದಾಂಪತ್ಯವು ಮಾನ್ಯವಾದದ್ದೆಂದು ಎಲ್ಲರೂ ಎಣಿಸಬೇಕು; ಗಂಡಹೆಂಡರ ಸಂಬಂಧವು ನಿಷ್ಕಳಂಕವಾಗಿರಬೇಕು. ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನೆಂದು ತಿಳುಕೊಳ್ಳಿರಿ” ಎನ್ನುತ್ತದೆ ಬೈಬಲ್‌. (ಇಬ್ರಿಯ 13:4, ಸತ್ಯವೇದ ಭಾಷಾಂತರ) ವಿವಾಹ ಚೌಕಟ್ಟಿನ ಹೊರಗೆ ಲೈಂಗಿಕ ಸುಖ ಪಡೆಯುವುದನ್ನು ತಡೆಗಟ್ಟಲು ದಂಪತಿಗಳು ಏನು ಮಾಡಬೇಕು? “ಗಂಡನು ತನ್ನ ಹೆಂಡತಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ; ಅದೇ ರೀತಿಯಲ್ಲಿ ಹೆಂಡತಿಯು ಸಹ ತನ್ನ ಗಂಡನಿಗೆ ಸಲ್ಲತಕ್ಕದ್ದನ್ನು ಸಲ್ಲಿಸಲಿ” ಎಂದು ಬೈಬಲ್‌ ಸಲಹೆಕೊಡುತ್ತದೆ.—1 ಕೊರಿಂಥ 7:3, 4.

‘ಈ ಸೂತ್ರ ಎಲ್ಲ ಕೇಳಲಿಕ್ಕೆ ಚೆನ್ನಾಗಿದೆ, ಆದರೆ ಈಗಿನ ಕಾಲಕ್ಕೆ ತಕ್ಕದ್ದಲ್ಲ’ ಅನ್ನುತ್ತಾರೆ ಕೆಲವರು. ಆದರೆ ದೇವರ ಸೂತ್ರಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರಿಗೆ ವೈವಾಹಿಕ ಸಾಫಲ್ಯ ಸಿಕ್ಕಿದೆ. ಏಕೆಂದರೆ ವಿವಾಹ ಜೀವನದಲ್ಲಿ ಮಾತ್ರವಲ್ಲ, ಜೀವನದ ಯಾವುದೇ ಕ್ಷೇತ್ರದಲ್ಲಿ ದೇವರ ಮಾರ್ಗದರ್ಶನಕ್ಕನುಸಾರ ನಡೆಯುವ ವ್ಯಕ್ತಿಗೆ ಸಾಫಲ್ಯ ಸಿಕ್ಕೇ ಸಿಗುತ್ತದೆಂದು ಬೈಬಲಿನ ಈ ಮಾತುಗಳು ತೋರಿಸುತ್ತವೆ: “ಯಾವನು . . . ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು. ಅವನು ನೀರಿನ ಕಾಲಿವೆಗಳ ಬಳಿಯಲ್ಲಿ ಬೆಳೆದಿರುವ ಮರದ ಹಾಗಿರುವನು. ಅಂಥ ಮರವು ತಕ್ಕ ಕಾಲದಲ್ಲಿ ಫಲಕೊಡುತ್ತದಲ್ಲಾ; ಅದರ ಎಲೆ ಬಾಡುವದೇ ಇಲ್ಲ, ಅದರಂತೆ ಅವನ ಕಾರ್ಯವೆಲ್ಲವೂ ಸಫಲವಾಗುವದು.”—ಕೀರ್ತನೆ 1:1-3. (g11-E 11)

[ಪಾದಟಿಪ್ಪಣಿ]

^ ಸುದೀರ್ಘ ಬಾಳುವ ವಿವಾಹದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಜೊತೆ ಪತ್ರಿಕೆಯಾದ ಕಾವಲಿನಬುರುಜುವಿನ 2011ರ ಜುಲೈ-ಸೆಪ್ಟೆಂಬರ್‌ ಸಂಚಿಕೆ ಓದಿ.

ಈ ಬಗ್ಗೆ ಯೋಚಿಸಿದ್ದೀರಾ?

● ವಿವಾಹ ವಿಚ್ಛೇದನದ ಬಗ್ಗೆ ದೇವರ ದೃಷ್ಟಿಕೋನವೇನು?—ಮಲಾಕಿಯ 2:14-16.

● ಗಂಡನು ಹೆಂಡತಿಯ ಜತೆ ಹೇಗೆ ನಡೆದುಕೊಳ್ಳಬೇಕು?—ಎಫೆಸ 5:23, 28.

● ವೈವಾಹಿಕ ಸಾಫಲ್ಯಕ್ಕೆ ಯಾವ ಜ್ಞಾನ ಸಹಾಯಕಾರಿ?—ಕೀರ್ತನೆ 1:2, 3.