ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಲಿಂಗಕಾಮವನ್ನು ಸಮರ್ಥಿಸಸಾಧ್ಯವೇ?

ಸಲಿಂಗಕಾಮವನ್ನು ಸಮರ್ಥಿಸಸಾಧ್ಯವೇ?

ಬೈಬಲಿನ ದೃಷ್ಟಿಕೋನ

ಸಲಿಂಗಕಾಮವನ್ನು ಸಮರ್ಥಿಸಸಾಧ್ಯವೇ?

ಸಲಿಂಗಕಾಮಕ್ಕೆ ಕಾನೂನುಬದ್ಧ ಮನ್ನಣೆ ಕೊಡುತ್ತಿರುವ ದೇಶಗಳ ಸಂಖ್ಯೆ ಹೆಚ್ಚುತ್ತಾ ಇದೆ. ಸಲಿಂಗಕಾಮದ ಬಗ್ಗೆ ಬೈಬಲಿನಲ್ಲಿರುವ ಮಾತುಗಳನ್ನು “ಆಧುನಿಕ ತಿಳಿವಳಿಕೆಯ” ಬೆಳಕಿನಲ್ಲಿ ಮರುವ್ಯಾಖ್ಯಾನಿಸಲು ಅಮೆರಿಕದ ಚರ್ಚೊಂದರ ಗುಂಪು ಕರೆನೀಡುತ್ತಿದೆ. ಇತ್ತೀಚೆಗೆ ಬ್ರೆಜಿಲ್‌ನ ಓರ್ವ ಪಾದ್ರಿ ಸಲಿಂಗಿ ಮದುವೆ ಮಾಡಿಕೊಂಡ. ತನ್ನ ಈ ಆಧುನಿಕ ವಿಚಾರಧಾರೆಗೆ ಬೆಂಬಲ ಗಿಟ್ಟಿಸುವ ನಿಟ್ಟಿನಲ್ಲಿ ಎಲ್ಲರೂ “ಬೈಬಲನ್ನು ಹೊಸ ದೃಷ್ಟಿಕೋನದಿಂದ ನೋಡುವಂತೆ” ಪ್ರೋತ್ಸಾಹಿಸಿದ.

ಇನ್ನೊಂದೆಡೆ, ಸಲಿಂಗಕಾಮವನ್ನು ಒಪ್ಪದ ಜನರಿಗೆ ‘ಸಲಿಂಗ-ದ್ವೇಷಿಗಳು’ ‘ಪೂರ್ವಗ್ರಹಪೀಡಿತರು’ ಎಂದು ಹಣೆಪಟ್ಟಿ ಹಚ್ಚಲಾಗುತ್ತಿದೆ. ಸಲಿಂಗಕಾಮದ ಬಗ್ಗೆ ಬೈಬಲ್‌ ನಿಜವಾಗಲೂ ಏನು ಹೇಳುತ್ತದೆ?

ಬೈಬಲ್‌ ಏನು ಹೇಳುತ್ತದೆ?

ಸಲಿಂಗಿಗಳನ್ನು ದ್ವೇಷಿಸಬೇಕು, ಭೇದಭಾವ ತೋರಿಸಬೇಕು ಎಂದು ಬೈಬಲ್‌ ಹೇಳುವುದಿಲ್ಲ. ಆದರೆ ಸಲಿಂಗಕಾಮದ ಬಗ್ಗೆ ಸ್ಪಷ್ಟವಾಗಿ ಹೀಗನ್ನುತ್ತದೆ:

“ಸ್ತ್ರೀಯನ್ನು ಸಂಗಮಿಸುವಂತೆ ಪುರುಷನನ್ನು ಸಂಗಮಿಸಬಾರದು; ಅದು ಹೇಸಿಗೆಯಾದ ಕೆಲಸ.”ಯಾಜಕಕಾಂಡ 18:22.

ದೇವರು ಮೋಶೆ ಎಂಬ ಪ್ರವಾದಿಯ ಮೂಲಕ ಪ್ರಾಚೀನ ಇಸ್ರೇಲಿಗೆ ಹಲವಾರು ನಿಯಮಗಳನ್ನು ಕೊಟ್ಟನು. ಅದರಲ್ಲಿದ್ದ ನೈತಿಕ ಕಟ್ಟಾಜ್ಞೆಗಳಲ್ಲಿ ಮೇಲಿನದ್ದು ಒಂದು. ಯೆಹೂದಿಗಳೇ ಆಗಲಿ ಬೇರೆ ಯಾರೇ ಆಗಲಿ ಸಲಿಂಗಕಾಮವನ್ನು ನಡೆಸಿದರೆ ದೇವರ ದೃಷ್ಟಿಯಲ್ಲಿ “ಅದು ಹೇಸಿಗೆಯಾದ ಕೆಲಸ” ಆಗಿತ್ತೆಂಬುದು ಆ ನಿಯಮದಿಂದ ಸ್ಫುಟ. ಸಲಿಂಗಕಾಮ, ವಿವಾಹನಿಷಿದ್ಧವಾದ ರಕ್ತಸಂಬಂಧಿಗಳ ಸಂಭೋಗ, ವ್ಯಭಿಚಾರದಂಥ ನೀಚತನ ಇಸ್ರೇಲಿನ ಸುತ್ತಮುತ್ತಲಿನ ಜನಾಂಗಗಳಲ್ಲಿ ಸಾಮಾನ್ಯವಾಗಿತ್ತು. ಆದ್ದರಿಂದ ದೇವರು ಆ ಜನಾಂಗಗಳನ್ನು ಅಶುದ್ಧವೆಂದು ವೀಕ್ಷಿಸಿದನು. (ಯಾಜಕಕಾಂಡ 18:24, 25) ಆದರೆ ಕ್ರಿಸ್ತ ಶಕದ ಸಮಯದಷ್ಟಕ್ಕೆ ದೇವರ ಆ ದೃಷ್ಟಿಕೋನ ಬದಲಾಗಿತ್ತಾ? ಈ ಬೈಬಲ್‌ ವಚನ ಗಮನಿಸಿ:

“ದೇವರು ಅವರನ್ನು ತುಚ್ಛವಾದ ಕಾಮಾಭಿಲಾಷೆಗೆ ಒಪ್ಪಿಸಿದನು; ಹೇಗೆಂದರೆ ಅವರ ಸ್ತ್ರೀಯರು ತಮ್ಮ ಸ್ವಾಭಾವಿಕವಾದ ಭೋಗವನ್ನು ಬಿಟ್ಟು ಸ್ವಭಾವಕ್ಕೆ ವಿರುದ್ಧವಾದದ್ದನ್ನೇ ಮಾಡಿದರು; ಅಂತೆಯೇ ಪುರುಷರು ಸಹ ಸ್ವಾಭಾವಿಕವಾದ ಸ್ತ್ರೀಭೋಗವನ್ನು ಬಿಟ್ಟು ಒಬ್ಬರ ಮೇಲೊಬ್ಬರು ಕಾಮಾತುರದಿಂದ ತಾಪಪಡುತ್ತಾ ಪುರುಷರೊಂದಿಗೆ ಪುರುಷರು ಅಸಹ್ಯಕರವಾದದ್ದನ್ನು ನಡಿಸಿ ತಮ್ಮ ತಪ್ಪಿಗೆ ತಕ್ಕ ಫಲವನ್ನು ಸಂಪೂರ್ಣವಾಗಿ ತಮ್ಮಲ್ಲಿಯೇ ಹೊಂದುವವರಾದರು.”ರೋಮನ್ನರಿಗೆ 1:26, 27.

ಸಲಿಂಗಕಾಮವನ್ನು ಬೈಬಲ್‌ ಅಸ್ವಾಭಾವಿಕ, ಅಸಹ್ಯವೆಂದು ಹೇಳುವುದೇಕೆ? ಏಕೆಂದರೆ ಆ ರೀತಿಯ ಲೈಂಗಿಕ ಕ್ರಿಯೆ ದೇವರ ಉದ್ದೇಶವೇ ಆಗಿರಲಿಲ್ಲ. ಸಲಿಂಗಕಾಮದಿಂದ ಸಂತಾನೋತ್ಪತ್ತಿ ಸಾಧ್ಯವಿಲ್ಲ. ಹಿಂದೊಮ್ಮೆ ನೋಹ ಎಂಬ ದೇವಭಕ್ತನ ಕಾಲದಲ್ಲಿ ಮಹಾ ಪ್ರಳಯವಾಗುವ ಮುಂಚೆ ದುಷ್ಟ ದೇವದೂತರು (ಬೈಬಲಲ್ಲಿ ಇವರನ್ನು ದೆವ್ವಗಳೆಂದು ಕರೆಯಲಾಗಿದೆ) ಭೂಮಿಗೆ ಬಂದು ಸ್ತ್ರೀಯರ ಜತೆ ಲೈಂಗಿಕ ಸಂಪರ್ಕ ಇಟ್ಟುಕೊಂಡರು. ಈ ಸಂಬಂಧವನ್ನೂ ಸಲಿಂಗಕಾಮವನ್ನೂ ಹೋಲಿಸುತ್ತಾ ಇವೆರಡೂ ದೇವರ ದೃಷ್ಟಿಯಲ್ಲಿ ಅಸ್ವಾಭಾವಿಕವಾದದ್ದೆಂದು ಬೈಬಲ್‌ ತೋರಿಸುತ್ತದೆ.—ಆದಿಕಾಂಡ 6:4; 19:4, 5; ಯೂದ 6, 7.

ಸಲಿಂಗಕಾಮದ ಸಮರ್ಥನೆಗೆ ಸಕಾರಣಗಳು?

‘ಒಬ್ಬ ವ್ಯಕ್ತಿ ಆನುವಂಶಿಕತೆ, ಪರಿಸರದ ಪ್ರಭಾವ ಅಥವಾ ಲೈಂಗಿಕ ದೌರ್ಜನ್ಯಕ್ಕೆ ಬಲಿಯಾದ ಪರಿಣಾಮ ಸಲಿಂಗಿ ಆಗಿರಬಹುದು. ಇವು ನ್ಯಾಯವಾದ ಕಾರಣಗಳಲ್ಲವೇ?’ ಎಂದು ಕೆಲವರು ಹೇಳ್ಯಾರು. ಆದರೆ ಈ ಕಾರಣಗಳನ್ನು ಕೊಟ್ಟು ಸಲಿಂಗಕಾಮ ಸಮರ್ಥಿಸಲಂತೂ ಸಾಧ್ಯವಿಲ್ಲ. ಕುಡಿತದ ವ್ಯಸನ ಮೈಗಂಟಿಸಿಕೊಂಡಿರುವ ಒಬ್ಬ ವ್ಯಕ್ತಿಯನ್ನು ತಕ್ಕೊಳ್ಳಿ. ಕೆಲವು ವಿಜ್ಞಾನಿಗಳು ಹೇಳುವ ಹಾಗೆ ಅವನಿಗೆ ಮದ್ಯದ ಚಟ ಹತ್ತಿಕೊಳ್ಳಲು ಆನುವಂಶಿಕತೆ ಕಾರಣವಾಗಿರಬಹುದು. ಅಥವಾ ಅವನ ಕುಟುಂಬದವರು ತುಂಬ ಕುಡಿಯುವ ಅಭ್ಯಾಸವಿರೋ ಕಾರಣಕ್ಕೂ ಆ ಚಟ ಅಂಟಿಕೊಂಡಿರಬಹುದು. ಆ ಚಟ ರಕ್ತಗತವಾಗಿ ಬಂದಿದೆ ಎಂದೋ ಅಂಥ ಪರಿಸರದಲ್ಲಿ ಬೆಳೆದನೆಂದೋ ಜನರು ‘ಅಯ್ಯೋ ಪಾಪ’ ಎನ್ನಬಹುದು. ಆದರೆ ಈ ಕಾರಣಗಳಿಂದಾಗಿ ‘ಈ ಚಟ ಮುಂದುವರಿಸಪ್ಪಾ, ತಪ್ಪೇನಿಲ್ಲ’ ಅಥವಾ ‘ಆ ಚಟ ಬಿಡಲು ಸುಮ್ನೆ ಕಷ್ಟಪಡಬೇಡ, ನಿನ್ನಿಂದಾಗುವುದಿಲ್ಲ’ ಅಂತ ಜನರು ಹೇಳುವರೇ?

ಅದೇ ರೀತಿ ಸಲಿಂಗಕಾಮಿ ಆಸೆಗಳಿಗೆ ಆನುವಂಶಿಕ ಅಥವಾ ಬೇರೇನೆ ಕಾರಣವಿರಲಿ ಆ ಆಸೆಗಳಿಗೆ ಮಣಿಯುವವರನ್ನು ಬೈಬಲ್‌ ಖಂಡಿಸುತ್ತದಾದರೂ ಅಂಥ ಆಸೆಗಳ ವಿರುದ್ಧ ಹೋರಾಡುತ್ತಿರುವವರನ್ನು ಖಂಡಿಸುವುದಿಲ್ಲ. (ರೋಮನ್ನರಿಗೆ 7:21-25; 1 ಕೊರಿಂಥ 9:27) ಸಲಿಂಗಕಾಮದೆಡೆಗಿನ ಆಕರ್ಷಣೆಯನ್ನು ಮೆಟ್ಟಿನಿಲ್ಲಲು ಬೇಕಾದ ಪ್ರೋತ್ಸಾಹವನ್ನೂ ಕಾರ್ಯಸಾಧು ಸಲಹೆಗಳನ್ನೂ ಅದು ನೀಡುತ್ತದೆ.

ಸಲಿಂಗಕಾಮಿಗಳೇನು ಮಾಡಬೇಕೆಂಬುದು ದೇವರ ಅಪೇಕ್ಷೆ?

ದೇವರ ಆಸೆಯೇನೆಂದರೆ “ಎಲ್ಲ ರೀತಿಯ ಜನರು ರಕ್ಷಣೆಯನ್ನು ಹೊಂದಬೇಕು ಮತ್ತು ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳಬೇಕು” ಎನ್ನುತ್ತದೆ ಬೈಬಲ್‌. (1 ತಿಮೊಥೆಯ 2:4) ಸಲಿಂಗಕಾಮವನ್ನು ಬೈಬಲ್‌ ಖಂಡಿಸುತ್ತದೆ ನಿಜ. ಆದರೆ ಸಲಿಂಗಿಗಳನ್ನು ದ್ವೇಷಿಸುವಂತೆ ಹೇಳುವುದಿಲ್ಲ.

ಸಲಿಂಗಕಾಮದ ಬಗ್ಗೆ ದೇವರಿಗಿರುವ ದೃಷ್ಟಿಕೋನದ ಸತ್ವಗುಂದಿಸದಿರೋಣ. ‘ಪುರುಷಗಾಮಿಗಳು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ’ ಎಂದು 1 ಕೊರಿಂಥ 6:9, 10ರಲ್ಲಿ ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. ಆದರೆ ಮುಂದಿನ ವಚನ 11ರಲ್ಲಿ ಸಾಂತ್ವನ ನೀಡುವ ಈ ಮಾತುಗಳಿವೆ: “ನಿಮ್ಮಲ್ಲಿ ಕೆಲವರು ಅಂಥವರಾಗಿದ್ದಿರಿ. ಆದರೆ ನೀವು ತೊಳೆದು ಶುದ್ಧೀಕರಿಸಲ್ಪಟ್ಟಿದ್ದೀರಿ, ಪವಿತ್ರೀಕರಿಸಲ್ಪಟ್ಟಿದ್ದೀರಿ, ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರಿನಲ್ಲಿಯೂ ನಮ್ಮ ದೇವರ ಆತ್ಮದಿಂದಲೂ ನೀವು ನೀತಿವಂತರೆಂದು ನಿರ್ಣಯಿಸಲ್ಪಟ್ಟಿದ್ದೀರಿ.”

ಇದರಿಂದ ಸ್ಪಷ್ಟವಾಗುವ ವಿಷಯವೇನೆಂದರೆ, ದೇವರ ಷರತ್ತನ್ನು ಒಪ್ಪಿಕೊಂಡು ಆತನನ್ನು ಆರಾಧಿಸಲು ನಿಜವಾಗಲೂ ಇಷ್ಟವಿದ್ದ ವ್ಯಕ್ತಿಗಳನ್ನು ಒಂದನೇ ಶತಮಾನದ ಕ್ರೈಸ್ತರ ಸಭೆಯೊಳಗೆ ಸೇರಿಸಿಕೊಳ್ಳಲಾಯಿತು. ಇಂದೂ ಅಷ್ಟೆ. ಬೈಬಲನ್ನು ಮರುವ್ಯಾಖ್ಯಾನಿಸುವ ಮೂಲಕವಲ್ಲ ಬದಲಾಗಿ ಅದರ ನೀತಿನಿಯಮಗಳಿಗೆ ತಕ್ಕಂತೆ ಜೀವನವನ್ನು ಬದಲಾಯಿಸುವ ಮೂಲಕ ದೇವರ ಮೆಚ್ಚುಗೆ ಗಳಿಸಲು ಪ್ರಯತ್ನಿಸುವ ಸಹೃದಯಿ ಜನರಿಗೆ ನಿಜ ಕ್ರೈಸ್ತ ಸಭೆಯಲ್ಲಿ ಸ್ವಾಗತವಿದೆ. (g12-E 01)

ಈ ಬಗ್ಗೆ ಯೋಚಿಸಿದ್ದೀರಾ?

● ಸಲಿಂಗಕಾಮದ ಬಗ್ಗೆ ಬೈಬಲ್‌ ಏನು ಹೇಳುತ್ತದೆ?—ರೋಮನ್ನರಿಗೆ 1:26, 27.

● ಸಲಿಂಗಿಗಳು ಗೌರವಕ್ಕೆ ಪಾತ್ರರಲ್ಲವೆಂದು ಬೈಬಲ್‌ ಹೇಳುತ್ತದಾ?—1 ತಿಮೊಥೆಯ 2:4.

● ಸಲಿಂಗಕಾಮದಲ್ಲಿ ತೊಡಗಿದ್ದವರು ಅದನ್ನು ನಿಲ್ಲಿಸಲು ಸಾಧ್ಯವಿದೆಯೇ?—1 ಕೊರಿಂಥ 6:9-11.

[ಪುಟ 29ರಲ್ಲಿರುವ ಚಿತ್ರ]

ಸಲಿಂಗಕಾಮದ ಕುರಿತ ದೇವರ ದೃಷ್ಟಿಕೋನವನ್ನು ಮರುವ್ಯಾಖ್ಯಾನ ಮಾಡಬೇಕೆ?