ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆತಂಕದ ಕಾಯಿಲೆ ಇರುವವರಿಗೆ ನೆರವು ನೀಡುವುದು ಹೇಗೆ?

ಆತಂಕದ ಕಾಯಿಲೆ ಇರುವವರಿಗೆ ನೆರವು ನೀಡುವುದು ಹೇಗೆ?

ಆತಂಕದ ಕಾಯಿಲೆ ಇರುವವರಿಗೆ ನೆರವು ನೀಡುವುದು ಹೇಗೆ?

“ನನ್ನ ಎದೆ ಜೋರಾಗಿ ಬಡಿದುಕೊಳ್ಳುತ್ತದೆ. ದಿಢೀರನೆ ಬೆವರುತ್ತೇನೆ. ಉಸಿರಾಡಲು ಕಷ್ಟವಾಗುತ್ತದೆ. ಹೆದರಿಕೆ, ಆತಂಕ, ಗೊಂದಲ ನನ್ನನ್ನು ಮುತ್ತಿಕೊಳ್ಳುತ್ತವೆ.”—ಹಠಾತ್‌ ಭೀತಿ ತೊಂದರೆ ಇರುವ 40ರ ಆಸುಪಾಸಿನ ಇಸಬೆಲಾ.

ಒಂದು ನಾಯಿ ಗುರ್ರೆನ್ನುತ್ತಾ ನಮ್ಮ ಮುಂದೆ ಬಂದರೆ ಏನಾಗುತ್ತದೆ? ಗಾಬರಿ ಆಗುತ್ತದಲ್ಲಾ? ಆ ನಾಯಿ ಅಲ್ಲಿಂದ ಹೋದರೆ ನಮ್ಮ ಗಾಬರಿ, ಹೆದರಿಕೆಯೂ ಹೋಗಿಬಿಡುತ್ತದೆ. ಈ ರೀತಿಯ “ಗಾಬರಿ ಅಥವಾ ಹೆದರಿಕೆ”ಯನ್ನೇ ಆತಂಕ ಎಂದು ವರ್ಣಿಸಲಾಗಿದೆ. ಆದರೆ ಕೆಲವೊಮ್ಮೆ ಆತಂಕ ಒಂದು ತೊಂದರೆ ಅಥವಾ ಕಾಯಿಲೆ ಆಗಿಬಿಡುತ್ತದೆ. ಯಾವಾಗ?

ಆತಂಕ ದೀರ್ಘಕಾಲ ಉಳಿದಾಗ, ಅದನ್ನು ಬಡಿದೆಬ್ಬಿಸಿದ ವಿಷಯ ಇಲ್ಲದೆ ಹೋದ ನಂತರವೂ ಅದು ಮುಂದುವರಿಯುವಾಗ ಅದೊಂದು ತೊಂದರೆ ಅಥವಾ ಕಾಯಿಲೆ ಆಗಿರುತ್ತದೆ. ಯು.ಎಸ್‌. ರಾಷ್ಟ್ರೀಯ ಮಾನಸಿಕ ಆರೋಗ್ಯ ವಿಭಾಗ (ಎನ್‌ಐಎಮ್‌ಎಚ್‌) ಹೇಳುವ ಪ್ರಕಾರ, “ಪ್ರತಿ ವರ್ಷ 18ಕ್ಕೂ ಮೇಲ್ಪಟ್ಟ ವಯಸ್ಸಿನ 4 ಕೋಟಿ ಅಮೆರಿಕನ್ನರು ಆತಂಕ ಸಂಬಂಧಿತ ತೊಂದರೆಗಳಿಂದ ಬಾಧಿತರಾಗುತ್ತಾರೆ.” ಆರಂಭದಲ್ಲಿ ತಿಳಿಸಲಾದ ಇಸಬೆಲಳಿಗೆ ಆದಂತೆ, ಆತಂಕದ ತೊಂದರೆ ಇರುವವರಲ್ಲಿ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ಮನೆಮಂದಿಯ ಮೇಲೂ ಅದು ಪ್ರತಿಕೂಲ ಪರಿಣಾಮ ಬೀರಬಲ್ಲದು. ಆದರೆ ಒಂದು ಒಳ್ಳೇ ಸುದ್ದಿ ಇದೆ. “ಆತಂಕ ಸಂಬಂಧಿತ ತೊಂದರೆಗಳಿಗೆ ಈಗ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯ. ಅಲ್ಲದೆ, ಹೊಸ ಹೊಸ ಚಿಕಿತ್ಸೆಗಳಿಗಾಗಿ ಸಂಶೋಧನೆ ನಡೆಯುತ್ತಾ ಇದೆ. ತೊಂದರೆಗಳಿಗೀಡಾದ ಬಹುಪಾಲು ಜನರಿಗೆ ಸಾರ್ಥಕ, ತೃಪ್ತಿದಾಯಕ ಬದುಕನ್ನು ನಡೆಸಲು ಅವು ನೆರವಾಗಲಿವೆ” ಎನ್ನುತ್ತದೆ ಎನ್‌ಐಎಮ್‌ಎಚ್‌ ಸಂಸ್ಥೆಯ ಪ್ರಕಾಶನ.

ಈ ಕಾಯಿಲೆಯಿಂದ ಬಾಧಿತರಾದವರಿಗೆ ಬಂಧುಮಿತ್ರರು ಸಹ ನೆರವಾಗಬಲ್ಲರು. ಹೇಗೆ?

ಬಂಧುಮಿತ್ರರ ನೆರವು

ಒತ್ತಾಸೆ, ಆಸರೆ ಕೊಡಿ: ಮೊನಿಕಾ ಎಂಬಾಕೆಗೆ ಸಾಧಾರಣಿಕೃತ ಆತಂಕ ಮತ್ತು ಅಪಘಾತನಂತರದ ಒತ್ತಡ ರೋಗ ಎಂಬ ಎರಡು ಸಮಸ್ಯೆಗಳಿವೆ. “ನನಗಿರುವ ಭಾವನಾತ್ಮಕ ಸಮಸ್ಯೆಗಳನ್ನು ಹೆಚ್ಚಿನ ಜನರಿಗೆ ಅರ್ಥಮಾಡಿಕೊಳ್ಳಲಿಕ್ಕೆ ಕಷ್ಟವಾಗುತ್ತದೆ” ಎನ್ನುತ್ತಾಳೆ ಆಕೆ.

ಆತಂಕದ ಕಾಯಿಲೆ ಇದ್ದವರಿಗೆ ಬೇರೆಯವರು ತಮ್ಮನ್ನು ತಪ್ಪು ತಿಳಿದುಕೊಳ್ಳುತ್ತಾರೆಂಬ ಭಯ. ಹಾಗಾಗಿ ತಮ್ಮ ಸಮಸ್ಯೆ ಬೇರೆಯವರಿಗೆ ಗೊತ್ತಾಗಬಾರದೆಂದು ಮುಚ್ಚಿಡಲು ಪ್ರಯತ್ನಿಸುತ್ತಾರೆ. ಇದು ಅವರ ಮನಸ್ಸನ್ನು ಕಾಡುತ್ತಿರುತ್ತದೆ. ಅವರ ಭಾವನಾತ್ಮಕ ಸ್ಥಿತಿ ಬಿಗಡಾಯಿಸುತ್ತದೆ. ಆದ್ದರಿಂದಲೇ ಬಂಧುಮಿತ್ರರು ಅವರಿಗೆ ಒತ್ತಾಸೆ, ಆಸರೆ ಕೊಡುವುದು ತುಂಬ ಮುಖ್ಯ.

ಕಾಯಿಲೆ ಬಗ್ಗೆ ಹೆಚ್ಚನ್ನು ತಿಳಿದುಕೊಳ್ಳಿರಿ: ಆತಂಕದ ಕಾಯಿಲೆ ಇರುವವರೊಂದಿಗೆ ತುಂಬ ಹತ್ತಿರದ ಒಡನಾಟವಿರುವವರು ಅಂದರೆ ಕುಟುಂಬ ಸದಸ್ಯ ಇಲ್ಲವೆ ಆಪ್ತಮಿತ್ರನಿಗೆ ಈ ಸಲಹೆ ವಿಶೇಷವಾಗಿ ಸೂಕ್ತ.

ಬಾಧಿತರನ್ನು ಸಂತೈಸಿರಿ: ಒಂದನೇ ಶತಮಾನದ ಮಿಷನೆರಿಯಾದ ಪೌಲನು ಥೆಸಲೊನೀಕ ಎಂಬ ಗ್ರೀಕ್‌ ಪಟ್ಟಣದಲ್ಲಿದ್ದ ತನ್ನ ಸ್ನೇಹಿತರಿಗೆ “ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ ಪರಸ್ಪರ ಭಕ್ತಿವೃದ್ಧಿಮಾಡುತ್ತಾ ಇರಿ” ಎಂದು ಪ್ರೋತ್ಸಾಹಿಸಿದ. (1 ಥೆಸಲೊನೀಕ 5:11) ಈ ಬುದ್ಧಿವಾದ ನಮಗೂ ಅನ್ವಯ. ಬಾಧಿತರೊಂದಿಗೆ ಮಾತಾಡುವಾಗ ನಾವು ಬಳಸುವ ಪದಗಳು ಹಾಗೂ ಧ್ವನಿ ಸಂತೈಸುವಂಥದ್ದಾಗಿರಬೇಕು. ಅವರ ಬಗ್ಗೆ ನಮಗೆ ನಿಜವಾದ ಕಾಳಜಿಯಿದೆ ಎಂದು ಅದು ತೋರಿಸಬೇಕು. ನೋಯಿಸುವಂಥ ಮಾತುಗಳನ್ನಾಗಲಿ ಅವರ ಕೃತ್ಯಗಳಿಗೆ ತಪ್ಪರ್ಥ ಕಟ್ಟುವಂಥ ಮಾತುಗಳನ್ನಾಗಲಿ ಆಡಬಾರದು.

ಯೋಬನ (ಬೈಬಲಿನಲ್ಲಿ ಅವನ ಹೆಸರಿನ ಪುಸ್ತಕವಿದೆ) ಮೂವರು ಸುಳ್ಳು ಸ್ನೇಹಿತರನ್ನು ನೆನಪಿಗೆ ತನ್ನಿ. ಯೋಬನು ಯಾವುದೋ ಪಾಪವನ್ನು ಮುಚ್ಚಿಟ್ಟಿದ್ದಾನೆ, ಅದಕ್ಕಾಗಿಯೇ ಅವನಿಗೆ ಕಷ್ಟಗಳು ಬಂದಿವೆ ಎಂದು ಆ ಮಿತ್ರರು ಆಪಾದಿಸಿದರು.

ಆದ್ದರಿಂದಲೇ ಅವರನ್ನು ‘ಬೇಸರಿಕೆ ಹುಟ್ಟಿಸುವ ಆದರಣೆಯವರು’ ಎಂದು ಕರೆಯಲಾಗಿದೆ. (ಯೋಬ 16:2) ಹೌದು, ಅವರ ಮಾತು ಅವನ ಮನಸ್ಸಿಗೆ ತಂಪೆರಚುವ ಬದಲು ಗಾಯಕ್ಕೆ ಉಪ್ಪು ಸವರಿದಂತಿತ್ತು! ನಾವು ಬಾಧಿತ ವ್ಯಕ್ತಿಯ ಭಾವನೆಗಳನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕಾಗಿ ಅವರ ಮಾತುಗಳನ್ನು ಗಮನಕೊಟ್ಟು ಆಲಿಸಬೇಕು. ಆಲಿಸುವಾಗ ವಿಷಯಗಳನ್ನು ನಿಮ್ಮ ದೃಷ್ಟಿಕೋನದಿಂದಲ್ಲ ಅವರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಬೇಕು. ದುಡುಕಿ ತೀರ್ಮಾನಕ್ಕೆ ಬರಬಾರದು. ಯೋಬನ ಸುಳ್ಳು ಮಿತ್ರರು ಅದನ್ನೇ ಮಾಡಿದ್ದರು.

ಆತಂಕದ ತೊಂದರೆ ಇರುವವರು ತಮಗೆ ಹೇಗನಿಸುತ್ತದೆಂದು ಮನಬಿಚ್ಚಿ ಹೇಳುವಂತೆ ಬಿಡಿ. ಹೀಗೆ ಮಾಡಿದರೆ, ಅವರ ಪರಿಸ್ಥಿತಿಯನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಶಕ್ತರಾಗುವಿರಿ. ಇದರಿಂದೇನು ಪ್ರಯೋಜನ? ನಿಮ್ಮ ನೆರವಿನಿಂದಾಗಿ ಅವರು ತೃಪ್ತಿಕರವಾದ ಅರ್ಥಪೂರ್ಣ ಬದುಕನ್ನು ಆನಂದಿಸಲು ಸಾಧ್ಯವಾಗುವುದು! (g12-E 03)

[ಪುಟ 25ರಲ್ಲಿರುವ ಚೌಕ/ಚಿತ್ರ]

ಆತಂಕದ ಕಾಯಿಲೆಯ ವಿವಿಧ ರೂಪ

ಆತಂಕದ ಕಾಯಿಲೆ ಬಗ್ಗೆ ತಿಳುವಳಿಕೆ ಪಡೆಯುವುದು ಒಳ್ಳೇದು. ಬಾಧಿತ ವ್ಯಕ್ತಿ ನಮ್ಮ ಕುಟುಂಬದ ಸದಸ್ಯ ಇಲ್ಲವೇ ಆಪ್ತಮಿತ್ರ ಆಗಿದ್ದರಂತೂ ಅದು ಅತ್ಯಗತ್ಯ. ಆ ಕಾಯಿಲೆಯ ಐದು ರೂಪಗಳನ್ನು ಪರಿಗಣಿಸಿ.

ಹಠಾತ್‌ ಭೀತಿ. ಇಸಬೆಲಾಳಿಗೆ ಇದದ್ದು ಈ ತೊಂದರೆಯೇ. ಆಕೆಗೆ ಆಗಾಗ್ಗೆ ಈ ಹಠಾತ್‌ ಭೀತಿ ತೋರಿಬರುತ್ತಿತ್ತು. ಅಷ್ಟುಮಾತ್ರವಲ್ಲ ಆಕೆ ಅನ್ನುವುದು, “ಒಮ್ಮೆ ಹಠಾತ್‌ ಭೀತಿ ತೋರಿಬಂದ ನಂತರ ಅದು ಇನ್ನೊಮ್ಮೆ ತೋರಿಬರುವಷ್ಟಕ್ಕೆ ಪುನಃ ಯಾವಾಗ ಬರುತ್ತದೊ ಎಂಬ ಹೆದರಿಕೆ ನನ್ನನ್ನು ಹಿಂಡಿಹಿಪ್ಪೆಮಾಡುತ್ತದೆ.” ಇದರಿಂದಾಗಿ ಅವಳಿಗೆ ಸಾಮಾನ್ಯ ಜೀವನ ನಡೆಸಲು ಕಷ್ಟವಾಗುತ್ತದೆ. ಈ ತೊಂದರೆ ಇರುವವರು ಯಾವ ಸ್ಥಳಗಳಲ್ಲಿ ಹಠಾತ್‌ ಭೀತಿ ತೋರಿಬಂತೊ ಆ ಸ್ಥಳಗಳಿಗೆ ಪುನಃ ಹೋಗುವುದಿಲ್ಲ. ಕೆಲವರು ಮನೆಯಿಂದ ಹೊರಗೆ ಕಾಲಿಡುವುದೇ ಇಲ್ಲ. ಅಥವಾ ಅವರು ಯಾವ ಸನ್ನಿವೇಶದ ಬಗ್ಗೆ ತುಂಬ ಹೆದರುತ್ತಾರೊ ಆ ಸನ್ನಿವೇಶವನ್ನು, ತಮ್ಮ ನೆಚ್ಚಿನ ವ್ಯಕ್ತಿ ಜೊತೆಗಿದ್ದರೆ ಮಾತ್ರ ಎದುರಿಸುತ್ತಾರೆ. ಇಸಬೆಲಾ ವಿವರಿಸುವುದು: “ನಾನು ಒಬ್ಬಳೇ ಇದ್ದರೆ ಸಾಕು, ಹಠಾತ್‌ ಭೀತಿಗೆ ಒಳಗಾಗುತ್ತೇನೆ. ಅಮ್ಮ ನನ್ನ ಜೊತೆಗಿದ್ದರೆ ಹೆದರಿಕೆಯಿಲ್ಲ. ಅವಳು ಹತ್ತಿರ ಇಲ್ಲದಿದ್ದರೆ ನನಗೆ ಇರೋಕೆ ಆಗೋದಿಲ್ಲ.”

ಗೀಳು ಮತ್ತು ಚಟ ಮನೋರೋಗ. ಎಲ್ಲಾ ಕಡೆ ರೋಗಾಣುಗಳಿವೆ ಅಥವಾ ಗಲೀಜಿದೆ ಎಂದು ಯಾವಾಗಲೂ ಯೋಚಿಸುವ ಗೀಳು ಇರುವ ವ್ಯಕ್ತಿಗೆ, ಮತ್ತೆ ಮತ್ತೆ ಕೈ ತೊಳೆಯುವ ಚಟ ಹತ್ತಬಹುದು. ಪದೇ ಪದೇ ಒಂದೇ ವಿಚಾರದ ಬಗ್ಗೆ ಯೋಚಿಸುವ ಗೀಳು ಇದ್ದ ರೆನಾನ್‌ ಎಂಬಾತ ಹೇಳಿದ್ದು: “ನಾನು ಮಾಡಿರುವ ತಪ್ಪುಗಳ ಬಗ್ಗೆಯೇ ನೆನಸುತ್ತಾ ಅವುಗಳನ್ನು ಮತ್ತೆ ಮತ್ತೆ ವಿಶ್ಲೇಷಿಸುತ್ತಾ, ಸಾಧ್ಯವಿರುವ ಎಲ್ಲ ಕೋನಗಳಿಂದ ಪರಿಶೀಲಿಸುತ್ತಾ ಇರುವ ಕಾರಣ ನನ್ನ ಮನಸ್ಸಿನಲ್ಲಿ ಯಾವಾಗಲೂ ತಳಮಳ.” ಇದರ ಫಲವಾಗಿ ಹಿಂದಿನ ತಪ್ಪುಗಳನ್ನು ಬೇರೆಯವರಿಗೆ ಅರಿಕೆ ಮಾಡುವ ಚಟ ಹುಟ್ಟಿಕೊಂಡಿತು. ರೆನಾನ್‌ಗೆ ಯಾವಾಗಲೂ ಯಾರಾದರೂ ಸಮಾಧಾನಪಡಿಸುತ್ತಲೇ ಇರಬೇಕಾಗುತ್ತದೆ. ಆದರೆ ಅವನು ಪಡೆಯುತ್ತಿರುವ ಚಿಕಿತ್ಸೆಯಿಂದಾಗಿ ಆ ಗೀಳನ್ನು ನಿಯಂತ್ರಿಸಲು ಸಹಾಯವಾಗುತ್ತಿದೆ. *

ಅಪಘಾತನಂತರದ ಒತ್ತಡ ರೋಗ (ಪಿಟಿಎಸ್‌ಡಿ) ವಿಪರೀತ ಆಘಾತಕಾರಿ ಘಟನೆಯನ್ನು ಕಣ್ಣಾರೆ ಕಂಡ ಇಲ್ಲವೆ ಅಂಥ ಘಟನೆಯಲ್ಲಿ ಶಾರೀರಿಕ ಹಾನಿಗೊಳಗಾದ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಮಾನಸಿಕ ರೋಗಲಕ್ಷಣಗಳನ್ನು ‘ಅಪಘಾತನಂತರದ ಒತ್ತಡ ರೋಗ’ ಎಂದು ಕರೆಯಲಾಗುತ್ತದೆ. ಅವರಲ್ಲಿ ಈ ಲಕ್ಷಣಗಳು ತೋರಿಬರಬಹುದು: ತಟ್ಟನೆ ಗಾಬರಿಗೊಳ್ಳುವುದು, ಯಾವಾಗಲೂ ಸಿಡಿಮಿಡಿ, ಭಾವಶೂನ್ಯತೆ, ಹಿಂದೆ ತುಂಬ ಇಷ್ಟಪಡುತ್ತಿದ್ದ ವಿಷಯಗಳಲ್ಲಿ ಈಗ ಅನಾಸಕ್ತಿ, ಇತರರಿಗೆ (ಆತ್ಮೀಯರಿಗೂ) ಪ್ರೀತಿ ತೋರಿಸಲು ಆಗದಿರುವುದು. ಕೆಲವರು ತುಂಬ ರೋಷವುಳ್ಳವರಾಗುತ್ತಾರೆ, ಹಿಂಸಾಚಾರಿಗಳೂ ಆಗುತ್ತಾರೆ. ಮನಸ್ಸಿಗೆ ಆಘಾತ ತಂದ ಘಟನೆಯನ್ನು ನೆನಪಿಗೆ ತರುವ ಸನ್ನಿವೇಶಗಳಿಂದ ದೂರವಿರುತ್ತಾರೆ.

ಸಾಮಾಜಿಕ ಭಯ (ಫೋಬಿಯಾ) ಅಥವಾ ಸಾಮಾಜಿಕ ಆತಂಕ ತೊಂದರೆ. ಜನರೊಂದಿಗೆ ಬೆರೆಯಲು ವಿಪರೀತ ಆತಂಕ ಮತ್ತು ಜನರು ತನ್ನ ಬಗ್ಗೆ ಏನು ನೆನಸುತ್ತಾರೆಂಬ ಅತಿಯಾದ ಚಿಂತೆಯೇ ಇದು. ಇದರಿಂದ ಬಾಧಿತರಾದ ಕೆಲವರಿಗೆ, ಬೇರೆಯವರು ತಮ್ಮನ್ನು ನೋಡುತ್ತಾ ಇದ್ದಾರೆ, ವಿಮರ್ಶಿಸುತ್ತಾ ಇದ್ದಾರೆ ಎಂಬ ತೀವ್ರ ಭಯ ಕಾಡುತ್ತಿರುತ್ತದೆ. ಯಾವುದಾದರೊಂದು ಸಮಾರಂಭಕ್ಕೆ ಹಾಜರಾಗಲು ಇನ್ನೂ ಎಷ್ಟೋ ದಿನಗಳು ಅಥವಾ ವಾರಗಳಿರುವಾಗಲೇ ಅವರ ಚಿಂತೆ ಶುರುವಾಗುತ್ತದೆ. ಅವರ ಭಯ ಎಷ್ಟು ತೀವ್ರವಾಗಬಹುದೆಂದರೆ, ಅವರಿಗೆ ಕೆಲಸಕ್ಕೊ ಶಾಲೆಗೊ ಹೋಗಲು ಆಗುವುದಿಲ್ಲ, ದೈನಂದಿನ ಯಾವುದೇ ಚಟುವಟಿಕೆಗಳಲ್ಲಿ ತೊಡಗಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರಿಗೆ ಸ್ನೇಹಿತರನ್ನು ಮಾಡಿಕೊಳ್ಳಲು ಇಲ್ಲವೆ ಸ್ನೇಹಬಂಧ ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಸಾಧಾರಣಿಕೃತ ಆತಂಕ ಕಾಯಿಲೆ. ಈ ಮುಂಚೆ ತಿಳಿಸಲಾಗಿರುವ ಮೊನಿಕಾಳ ಸಮಸ್ಯೆ ಇದೇ. ಇಡೀ ದಿನ ಅವಳಿಗೆ “ವಿಪರೀತ ಚಿಂತೆಗಳು” ಇರುತ್ತವೆ. ಕಾರಣವೇ ಇಲ್ಲದ ಚಿಂತೆಗಳವು. ಇಂಥ ಸಮಸ್ಯೆ ಇರುವವರು ಏನೋ ಅನಾಹುತ ಆಗಲಿದೆ ಎಂದು ನೆನಸುತ್ತಿರುತ್ತಾರೆ. ಆರೋಗ್ಯ, ಹಣ, ಕುಟುಂಬ, ಉದ್ಯೋಗ ಇವೆಲ್ಲದರ ಬಗ್ಗೆ ಅನಾವಶ್ಯಕವಾಗಿ ಚಿಂತಿಸುತ್ತಾರೆ. ಒಂದೊಂದು ದಿನದೂಡುವ ಯೋಚನೆಯೇ ಅವರಿಗೆ ಆತಂಕದ ವಿಷಯ. *

[ಪಾದಟಿಪ್ಪಣಿಗಳು]

^ ಎಚ್ಚರ! ಪತ್ರಿಕೆಯು ಯಾವುದೇ ನಿರ್ದಿಷ್ಟ ವೈದ್ಯಕೀಯ ಚಿಕಿತ್ಸೆಯನ್ನು ಶಿಫಾರಸ್ಸು ಮಾಡುವುದಿಲ್ಲ.

^ ಮೇಲ್ಕಂಡ ಮಾಹಿತಿ ಯು.ಎಸ್‌. ಆರೋಗ್ಯ ಹಾಗೂ ಮಾನವ ಸೇವಾ ಇಲಾಖೆಯ ರಾಷ್ಟ್ರೀಯ ಮಾನಸಿಕ ಆರೋಗ್ಯ ವಿಭಾಗದ ಪ್ರಕಾಶನ ಆಧರಿತ.

[ಪುಟ 24ರಲ್ಲಿರುವ ಚಿತ್ರ]

“ಒಬ್ಬರನ್ನೊಬ್ಬರು ಸಾಂತ್ವನಗೊಳಿಸುತ್ತಾ . . . ಇರಿ”