ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಷ್ಟೊಂದು ಕೋಪ ಏಕೆ?

ಇಷ್ಟೊಂದು ಕೋಪ ಏಕೆ?

ಇಷ್ಟೊಂದು ಕೋಪ ಏಕೆ?

ಸಿಟ್ಟುಬರಿಸುವಂಥ ಕಾರಣಗಳು ಜಟಿಲ. ವಿಜ್ಞಾನಿಗಳು ಸಹ ಈ ಮಾತನ್ನು ಒಪ್ಪಿಕೊಳ್ಳುತ್ತಾ ಕೋಪ ಯಾವಾಗ, ಏಕೆ ಬರುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವುದು ಕಷ್ಟ ಎನ್ನುತ್ತಾರೆ. ಹೀಗಿದ್ದರೂ ಎಲ್ಲರಿಗೂ ಕೋಪ ಎಬ್ಬಿಸುವಂಥ ಒಂದಲ್ಲ ಒಂದು ವಿಷಯ ಇದ್ದೇ ಇದೆ ಎಂದು ಬಹುಮಟ್ಟಿಗೆ ಎಲ್ಲ ಮಾನಸಿಕ ಆರೋಗ್ಯ ತಜ್ಞರು ಹೇಳುತ್ತಾರೆ.

ಒಬ್ಬನಿಗೆ ಹತಾಶೆ ಇಲ್ಲವೆ ಕಿರಿಕಿರಿ ಆದಾಗ ಕೋಪ ಕೆರಳುತ್ತದೆ. ಉದಾಹರಣೆಗೆ, ಅನ್ಯಾಯ ನಡೆದಾಗ ಸಿಟ್ಟೇರಬಹುದು. ಯಾರಾದರು ಹೀನೈಸುವಲ್ಲಿ, ಅಗೌರವಿಸುವಲ್ಲಿ ಕೋಪ ನೆತ್ತಿಗೇರಬಹುದು. ಅಧಿಕಾರವನ್ನು ಪ್ರಶ್ನಿಸುತ್ತಿದ್ದಾರೆ, ಹೆಸರು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅನಿಸುವಲ್ಲಿ ಕೋಪ ಬರಬಹುದು.

ಸಿಟ್ಟೆಬ್ಬಿಸುವ ವಿಷಯಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ವಯಸ್ಸು, ಲಿಂಗ, ಸಂಸ್ಕೃತಿಗನುಸಾರವೂ ಭಿನ್ನವಾಗಿರುತ್ತದೆ. ಸಿಟ್ಟೆಬ್ಬಿಸುವ ವಿಷಯಗಳಿಗೆ ಜನರು ಪ್ರತಿಕ್ರಿಯಿಸುವ ವಿಧದಲ್ಲೂ ವ್ಯತ್ಯಾಸವಿದೆ. ಕೆಲವರಿಗೆ ಸಿಟ್ಟು ಬರುವುದೇ ಕಡಿಮೆ. ಬಂದರೂ ಆ ಸಿಟ್ಟು ಬೇಗನೆ ಆರಿಹೋಗುತ್ತದೆ. ಇನ್ನು ಕೆಲವರು ‘ಮುಟ್ಟಿದರೆ ಮುನಿ’ ಸ್ವಭಾವದವರು, ಮುಂಗೋಪಿಗಳು. ಅವರ ಸಿಟ್ಟು ತಣ್ಣಗಾಗಲು ಅನೇಕ ದಿನಗಳು, ವಾರಗಳು, ತಿಂಗಳುಗಳು ಅಥವಾ ಇನ್ನಷ್ಟು ಕಾಲ ಬೇಕಾಗುತ್ತದೆ.

ಇಂದು ಸಿಟ್ಟೆಬ್ಬಿಸುವ ವಿಷಯಗಳಿಗೇನೂ ಕೊರತೆಯಿಲ್ಲ. ಅಲ್ಲದೆ, ಜನರೂ ಅಂಥ ವಿಷಯಗಳಿಗೆ ಬೇಗನೆ ಸಿಡಿದೇಳುವ ಸ್ವಭಾವದವರಾಗುತ್ತಿದ್ದಾರೆ. ಏಕೆ? ಒಂದು ಕಾರಣ, ನಮ್ಮೀ ದಿನಗಳಲ್ಲಿ ಜನರು ನಿರ್ದಾಕ್ಷಿಣ್ಯರೂ ಸ್ವಾರ್ಥಪರರೂ ಆಗಿದ್ದಾರೆ. “ಕಡೇ ದಿವಸಗಳಲ್ಲಿ . . . ಜನರು ಸ್ವಪ್ರೇಮಿಗಳೂ ಹಣಪ್ರೇಮಿಗಳೂ ಸ್ವಪ್ರತಿಷ್ಠೆಯುಳ್ಳವರೂ ಅಹಂಕಾರಿಗಳೂ . . . ಹಟಮಾರಿಗಳೂ ಹೆಮ್ಮೆಯಿಂದ ಉಬ್ಬಿಕೊಂಡವರೂ ಆಗಿರುವರು” ಎಂದು ಬೈಬಲ್‌ ತಿಳಿಸುತ್ತದೆ. (2 ತಿಮೊಥೆಯ 3:1-5) ಇಂದು ಅಧಿಕಾಂಶ ಜನರಿಗೆ ಇಂಥದ್ದೇ ಮನೋಭಾವಗಳಿವೆ ಅಲ್ಲವೇ?

ತಮ್ಮಿಷ್ಟದಂತೆ ಆಗದಿರುವಾಗ ಸ್ವಾರ್ಥಪರ ಜನರು ಕ್ರೋಧಿತರಾಗುತ್ತಾರೆ. ಜನರಲ್ಲಿ ಇಂದು ಕೋಪ ಹೆಚ್ಚಾಗಲು ಇತರ ಕಾರಣಗಳೂ ಇವೆ. ಕೆಲವನ್ನು ಪರಿಗಣಿಸೋಣ.

ಹೆತ್ತವರ ಕೆಟ್ಟ ಮಾದರಿ

ಬಾಲ್ಯದಿಂದ ಹದಿಹರೆಯದ ವರೆಗೆ ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಹೆತ್ತವರು ಮುಖ್ಯ ಪಾತ್ರ ವಹಿಸುತ್ತಾರೆ. ಮನಶ್ಶಾಸ್ತ್ರಜ್ಞ ಹ್ಯಾರೀ ಎಲ್‌. ಮಿಲ್ಸ್‌ ಹೇಳುವುದು: “ಒಬ್ಬ ವ್ಯಕ್ತಿ ಚಿಕ್ಕ ಪ್ರಾಯದಿಂದಲೇ ತನ್ನ ಸುತ್ತಲಿರುವವರ ಕೋಪದ ವರ್ತನೆಯನ್ನು ನೋಡಿ ಕೋಪಿಸಿಕೊಳ್ಳಲು ಕಲಿಯುತ್ತಾನೆ.”

ಚಿಕ್ಕಚಿಕ್ಕ ವಿಷಯಗಳಿಗೆಲ್ಲ ಜಗಳ ಕಿತ್ತಾಟ ನಡೆಯುವಂಥ ವಾತಾವರಣದಲ್ಲಿ ಬೆಳೆದ ಮಗು ಬದುಕಲ್ಲಿ ಏಳುವ ಪ್ರತಿಯೊಂದು ಸಮಸ್ಯೆಗೆ ಕೋಪದಿಂದಲೇ ಪ್ರತಿಕ್ರಿಯಿಸಲು ಕಲಿಯುತ್ತದೆ. ಮಗುವಿನ ಸನ್ನಿವೇಶ ವಿಷ-ಕಲುಷಿತ ನೀರನ್ನು ಹೀರಿ ಬೆಳೆಯುವ ಗಿಡಕ್ಕೆ ಸಮವಾಗಿದೆ. ಗಿಡ ಸಾಯಲಿಕ್ಕಿಲ್ಲವಾದರೂ ಅದರ ಬೆಳವಣಿಗೆ ಕುಂಠಿತವಾಗುತ್ತದೆ. ಶಾಶ್ವತ ಹಾನಿಯೂ ಆಗಬಹುದು. ಕೋಪವು ವಿಷ-ಕಲುಷಿತ ನೀರಿಗೆ ಸಮ. ಕೋಪ ತುಂಬಿರುವ ವಾತಾವರಣದಲ್ಲಿ ಬೆಳೆಯುವ ಮಕ್ಕಳು ದೊಡ್ಡವರಾದಾಗ ಅವರಲ್ಲಿಯೂ ಕೋಪದ ಸಮಸ್ಯೆ ಇರುವ ಸಾಧ್ಯತೆ ಜಾಸ್ತಿ.

ಕಿಕ್ಕಿರಿದ ನಗರಗಳು

ಇಸವಿ 1800ರಲ್ಲಿ ಲೋಕದ ಜನಸಂಖ್ಯೆಯ ಶೇ. 3ರಷ್ಟು ಮಂದಿ ನಗರಗಳಲ್ಲಿ ವಾಸಿಸುತ್ತಿದ್ದರು. 2008ರಲ್ಲಿ ಇದು ಶೇ. 50ಕ್ಕೆ ಏರಿತು. 2050ರೊಳಗೆ ಶೇ. 70ಕ್ಕೆ ಏರಬಹುದೆಂದು ನಿರೀಕ್ಷಿಸಲಾಗಿದೆ. ಈಗಾಗಲೇ ಜನನಿಬಿಡವಾಗಿರುವ ನಗರಗಳಿಗೆ ಇನ್ನಷ್ಟು ಜನರು ಬಂದು ತುಂಬುವಾಗ ಆ ನಗರವಾಸಿಗಳಲ್ಲಿ ಕೋಪ, ಕಿರಿಕಿರಿಯೂ ಹೆಚ್ಚಾಗುತ್ತದೆ. ಉದಾಹರಣೆಗೆ, ಮೆಕ್ಸಿಕೊ ನಗರ ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಾಗೂ ಕಿಕ್ಕಿರಿದ ನಗರಗಳಲ್ಲಿ ಒಂದು. ಅಲ್ಲಿನ ಜನರಿಗೆ ವಾಹನ ದಟ್ಟಣೆಯ ಸಮಸ್ಯೆ ಒಂದು ದೊಡ್ಡ ತಲೆನೋವು. ಸುಮಾರು 1.8 ಕೋಟಿ ಜನರಿಂದ, 60 ಲಕ್ಷ ಕಾರುಗಳಿಂದ ತುಂಬಿದ ಮೆಕ್ಸಿಕೊ ನಗರ “ವಿಶ್ವದಲ್ಲೇ ಅತಿ ಹೆಚ್ಚು ಮಾನಸಿಕ ಒತ್ತಡವಿರುವ ರಾಜಧಾನಿ. ವಾಹನಗಳು ಎಷ್ಟು ಕಿಕ್ಕಿರಿದಿವೆ ಎಂದರೆ ಜನರು ಉರಿದುಬೀಳುತ್ತಿರುತ್ತಾರೆ” ಎಂಬುದು ಪತ್ರಕರ್ತರೊಬ್ಬರ ವರದಿ.

ಕಿಕ್ಕಿರಿದ ನಗರಗಳಲ್ಲಿ ಮಾನಸಿಕ ಒತ್ತಡಕ್ಕೆ ಕಾರಣವಾಗುವ ಇನ್ನೂ ಅನೇಕ ವಿಷಯಗಳಿವೆ. ಉದಾ: ವಾಯುಮಾಲಿನ್ಯ, ಶಬ್ದಮಾಲಿನ್ಯ, ವಸತಿ ಸಮಸ್ಯೆ, ಸಂಸ್ಕೃತಿಗಳ ನಡುವಿನ ಕಲಹ, ಪಾತಕದ ಹೆಚ್ಚಳ. ಈ ವಿಷಯಗಳು ಹೆಚ್ಚಿದಂತೆ ಜನರಲ್ಲಿ ಕಿರಿಕಿರಿ, ಕೋಪ ಮತ್ತು ಬೇಗನೆ ತಾಳ್ಮೆ ಕಳೆದುಕೊಳ್ಳುವ ಸ್ವಭಾವ ಹೆಚ್ಚುತ್ತದೆ.

ಹಣಕಾಸಿನ ಕಷ್ಟ

ಜಾಗತಿಕ ಆರ್ಥಿಕ ಕುಸಿತ ಜನರಲ್ಲಿ ಒತ್ತಡ ಹಾಗೂ ವ್ಯಾಕುಲತೆ ಉಂಟುಮಾಡಿದೆ. ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ನೌಕರ ಸಂಘದ 2010ರ ಜಂಟಿ ವರದಿಗನುಸಾರ “ಲೋಕದಲ್ಲಿ 21 ಕೋಟಿ ನಿರುದ್ಯೋಗಿಗಳು ಇದ್ದಾರೆ.” ಕೆಲಸ ಕಳೆದುಕೊಂಡವರಲ್ಲಿ ಹೆಚ್ಚಿನವರ ಬಳಿ ಯಾವುದೇ ಉಳಿತಾಯ ಇಲ್ಲ ಅಥವಾ ಅವರಿಗೆ ಸರಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ.

ಇನ್ನು ಉದ್ಯೋಗ ಇರುವವರ ಚಿಂತೆಯೇ ಬೇರೆ. ನೌಕರಿಗೆ ಸಂಬಂಧಿಸಿದ ಒತ್ತಡ ಒಂದು “ಭೌಗೋಳಿಕ ಪಿಡುಗು” ಎನ್ನುತ್ತದೆ ಅಂತಾರಾಷ್ಟ್ರೀಯ ನೌಕರ ಸಂಘ. “ಜನರಿಗೆ ತಮ್ಮ ಉದ್ಯೋಗ ಕೈಬಿಟ್ಟುಹೋಗುವ ಭಯವಿದೆ. ಹಾಗಾಗಿ ಏನೇ ಸಂಭವಿಸಲಿ ತಮ್ಮನ್ನೇ ಸಮರ್ಥಿಸಿಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. ಸೂಪರ್‌ವೈಸರ್‌ ಇಲ್ಲವೆ ಸಹೋದ್ಯೋಗಿಗಳ ಜತೆ ವಾದಕ್ಕಿಳಿಯುತ್ತಾರೆ” ಎಂದು ಕೆನಡದ ಒಂಟಾರಿಯೊದಲ್ಲಿ ವ್ಯಾಪಾರಿ ಸಂಸ್ಥೆಗಳ ಆಡಳಿತ ನಿರ್ವಹಣಾ ಸಲಹೆಗಾರ ಲೊರ್ನ್‌ ಕರ್ಟಿಸ್‌ ಹೇಳುತ್ತಾರೆ.

ಪೂರ್ವಗ್ರಹ ಮತ್ತು ಅನ್ಯಾಯ

ನೀವು ಒಂದು ಓಟದ ಸ್ಪರ್ಧೆಗೆ ಸೇರಿದ್ದೀರೆಂದು ಭಾವಿಸಿ. ಆದರೆ ಸ್ಪರ್ಧಾಳುಗಳಲ್ಲಿ ನೀವು ಮಾತ್ರ ಕಾಲಿಗೆ ಸಂಕೋಲೆ ಕಟ್ಟಿ ಓಡಬೇಕು ಎಂದು ನಿಮಗೆ ಆಮೇಲೆ ತಿಳಿದುಬರುತ್ತದೆ. ನಿಮಗೆ ಹೇಗನಿಸುವುದು? ಜನಾಂಗೀಯ ದ್ವೇಷ ಇಲ್ಲವೆ ಬೇರೆ ರೀತಿಯ ಪೂರ್ವಗ್ರಹಕ್ಕೆ ಬಲಿಯಾಗುವ ಮಿಲಿಯಗಟ್ಟಲೆ ಜನರ ಪರಿಸ್ಥಿತಿಯೂ ಹೀಗೆಯೇ ಇದೆ. ತಮ್ಮ ಜಾತಿ, ಕುಲದ ಕಾರಣ ತಮಗೆ ಉದ್ಯೋಗ, ವಿದ್ಯೆ, ವಸತಿ, ಇನ್ನಿತರ ಮೂಲಭೂತ ಅಗತ್ಯಗಳು ಸಿಗದಿರುವಾಗ ಅವರು ಕುಪಿತರಾಗುತ್ತಾರೆ.

ಇನ್ನು ಕೆಲವು ರೀತಿಯ ಅನ್ಯಾಯ ಮನಸ್ಸನ್ನು ಜರ್ಜರಿತಗೊಳಿಸಿ, ಅಪಾರ ನೋವನ್ನು ಉಂಟುಮಾಡಬಲ್ಲದು. ನಮ್ಮಲ್ಲಿ ಪ್ರತಿಯೊಬ್ಬರಿಗೆ ಒಂದಲ್ಲ ಒಂದು ಸಮಯ ಅನ್ಯಾಯ ಆಗಿರುತ್ತದೆ. ಬೈಬಲ್‌ ಬರಹಗಾರರಲ್ಲಿ ಒಬ್ಬನಾದ ವಿವೇಕಿ ರಾಜ ಸೊಲೊಮೋನ 3,000ಕ್ಕೂ ಹೆಚ್ಚು ವರ್ಷಗಳ ಹಿಂದೆ ಹೀಗಂದನು: “ಹಿಂಸೆಗೊಂಡವರ ಕಣ್ಣೀರು ಏನೆಂದು ಹೇಳಲಿ! ಸಂತಯಿಸುವವರು ಯಾರೂ ಇರಲಿಲ್ಲ.” (ಪ್ರಸಂಗಿ 4:1) ಅನ್ಯಾಯ ತುಂಬಿತುಳುಕುವಾಗ, ಎಲ್ಲಿಂದಲೂ ಸಾಂತ್ವನ ಸಿಗದಿರುವಾಗ ಕೋಪ ಉಕ್ಕಿಬರುವುದು ಸಹಜ.

ಮನರಂಜನಾ ಉದ್ಯಮ

ಟಿವಿ ಹಾಗೂ ಇನ್ನಿತರ ಮಾಧ್ಯಮಗಳು ತೋರಿಸುವ ಹಿಂಸಾತ್ಮಕ ದೃಶ್ಯಗಳು ಮಕ್ಕಳ ಮನಸ್ಸಿನ ಮೇಲೆ ಯಾವ ಪ್ರಭಾವ ಬೀರುತ್ತಿವೆ ಎಂದು ತಿಳಿಯಲು ಸಾವಿರಾರು ಅಧ್ಯಯನಗಳನ್ನು ನಡೆಸಲಾಗಿದೆ. “ಕಡು ಹಿಂಸಾಚಾರದ ನೈಜ ಘಟನೆಗಳನ್ನು ನೋಡುತ್ತಾ ಬೆಳೆಯುವ ಪೀಳಿಗೆಯ ಮನಸ್ಸು ಕಲ್ಲಾಗುತ್ತದೆ, ಭಾವಶೂನ್ಯವಾಗುತ್ತದೆ. ಪಾಶವೀಯ ವರ್ತನೆ ನೋಡಿದರೂ ಅವರ ಮನಕರಗುವುದಿಲ್ಲ, ಕನಿಕರ ಎಂಬುದು ದೂರದ ಮಾತಾಗುತ್ತದೆ” ಎಂದು ಕಾಮನ್‌ ಸೆನ್ಸ್‌ ಮೀಡಿಯಾ ಎಂಬ ಸಂಸ್ಥೆಯ ಸ್ಥಾಪಕರಾದ ಜೇಮ್ಸ್‌ ಪಿ. ಸ್ಟೈಯರ್‌ ಹೇಳುತ್ತಾರೆ.

ಟಿವಿಯಲ್ಲಿ ಸದಾ ಹಿಂಸಾತ್ಮಕ ದೃಶ್ಯಗಳನ್ನು ನೋಡುವ ಯುವಜನರೆಲ್ಲರು ಕ್ರೂರ ಪಾತಕಿಗಳಾಗುವುದಿಲ್ಲ ನಿಜ. ಹಾಗಿದ್ದರೂ ಈಗಿನ ನವ ಪೀಳಿಗೆ ಹಿಂಸಾತ್ಮಕ ವಿಚಾರಗಳ ಕಡೆಗೆ ಸಂವೇದನಾ ಶಕ್ತಿ ಕಳೆದುಕೊಳ್ಳುತ್ತಿದೆ. ಏಕೆಂದರೆ ಯಾವುದೇ ಸಮಸ್ಯೆ ಎದುರಾದರೂ ಹಿಂಸಾತ್ಮಕ ಕ್ರೋಧದಿಂದ ಪ್ರತಿಕ್ರಿಯಿಸುವುದೇ ಸರಿಯಾದ ಮಾರ್ಗ ಎನ್ನುವುದನ್ನು ಮನರಂಜನಾ ಮಾಧ್ಯಮ ಹೆಚ್ಚಾಗಿ ಕಲಿಸಿಕೊಡುತ್ತಿದೆ.

ದುಷ್ಟ ಅದೃಶ್ಯ ಜೀವಿಗಳ ಪ್ರಭಾವ

ಇಂದು ಜನರು ತೋರಿಸುವ ಹೆಚ್ಚಿನ ಹಾನಿಕಾರಕ ಕ್ರೋಧದ ಹಿಂದೆ ಒಬ್ಬ ಅದೃಶ್ಯ ಜೀವಿ ಇದ್ದಾನೆಂದು ಬೈಬಲ್‌ ತಿಳಿಸುತ್ತದೆ. ಅದು ಯಾರು? ಸ್ವರ್ಗದಲ್ಲಿದ್ದ ಒಬ್ಬ ಅದೃಶ್ಯ ಜೀವಿ ಮಾನವ ಇತಿಹಾಸದ ಆರಂಭದಲ್ಲಿ ಸರ್ವಶಕ್ತ ದೇವರ ವಿರುದ್ಧ ದಂಗೆಯೆದ್ದ. ಬೈಬಲ್‌ ಈ ದುಷ್ಟ ಜೀವಿಯನ್ನು “ಸೈತಾನ” ಎಂದು ಕರೆಯುತ್ತದೆ. ಹೀಬ್ರು ಭಾಷೆಯಲ್ಲಿ ಈ ಹೆಸರಿನ ಅರ್ಥ “ವಿರೋಧಿ” ಇಲ್ಲವೆ “ವೈರಿ.” (ಆದಿಕಾಂಡ 3:1-13) ಸಮಯಾನಂತರ ಸೈತಾನನು ಇನ್ನಿತರ ಅದೃಶ್ಯ ಜೀವಿಗಳನ್ನು ತನ್ನ ದಂಗೆಯಲ್ಲಿ ಸೇರುವಂತೆ ಪ್ರೇರಿಸಿದ.

ಹೀಗೆ ದೇವರಿಗೆ ಅವಿಧೇಯರಾದ ಅದೃಶ್ಯ ಜೀವಿಗಳೇ ದೆವ್ವಗಳು. ಅವರನ್ನು ಸ್ವರ್ಗಕ್ಕೆ ಬರದಂತೆ ಭೂಮಿಗೆ ನಿರ್ಬಂಧಿಸಲಾಗಿದೆ. (ಪ್ರಕಟನೆ 12:9, 10, 12) ಅಲ್ಲದೆ, ತಮಗಿರುವ ಸಮಯಾವಧಿ ಸ್ವಲ್ಪವೆಂದು ತಿಳಿದು ಅವರು “ಮಹಾ ಕೋಪದಿಂದ” ವರ್ತಿಸುತ್ತಿದ್ದಾರೆ. ಈ ದುಷ್ಟ ಜೀವಿಗಳು ನಮ್ಮ ಕಣ್ಣಿಗೆ ಅಗೋಚರವಾಗಿದ್ದರೂ ಅವರ ಪ್ರಭಾವ ನಮಗೆ ಭಾಸವಾಗುತ್ತದೆ. ಹೇಗೆ?

ಸೈತಾನನೂ ಅವನ ದೆವ್ವ ಪಡೆಗಳೂ ನಮ್ಮ ಪಾಪಪೂರ್ಣ ಪ್ರವೃತ್ತಿಯನ್ನು ಬಳಸಿ “ಹಗೆತನ, ಜಗಳ, ಹೊಟ್ಟೆಕಿಚ್ಚು, ಕೋಪದ ಕೆರಳುವಿಕೆಗಳು, ಕಲಹ, ಬೇಧಗಳು” ಮುಂತಾದ ಕೆಟ್ಟ ವಿಚಾರಗಳಲ್ಲಿ ಒಳಗೂಡುವಂತೆ ಪ್ರೇರಿಸುತ್ತಿವೆ.—ಗಲಾತ್ಯ 5:19-21.

ದುಷ್ಪ್ರೇರಣೆ ಎದುರಿಸಿ

ಈ ಎಲ್ಲ ಸಮಸ್ಯೆ, ಒತ್ತಡ, ಚಿಂತೆಗಳಿಂದಾಗಿಯೇ ಜನರು ತಮ್ಮ ದಿನನಿತ್ಯದ ಜವಾಬ್ದಾರಿಗಳನ್ನು ನಿರ್ವಹಿಸುವಾಗ ಹತಾಶೆಯಿಂದ ಕುಪಿತರಾಗುತ್ತಾರೆಂದು ಅರ್ಥವಾಗುತ್ತದೆ.

ಸಿಟ್ಟು ತೋರಿಸಬೇಕು, ಹರಿಹಾಯಬೇಕು ಎಂದು ಕೆಲವೊಮ್ಮೆ ನಮಗನಿಸಬಹುದು. ಇಂಥ ಸಂದರ್ಭದಲ್ಲಿ ಸಿಟ್ಟನ್ನು ಹತೋಟಿಯಲ್ಲಿ ಇಡುವುದು ಹೇಗೆಂದು ಮುಂದಿನ ಲೇಖನದಲ್ಲಿ ತಿಳಿಯೋಣ. (g12-E 03)

[ಪುಟ 5ರಲ್ಲಿರುವ ಚೌಕ]

ಸಿಟ್ಟಿನ ಸಮಸ್ಯೆ ನಿಮಗಿದೆಯಾ? ಕಂಡುಹಿಡಿಯಿರಿ. . .

▶ ಅಂಗಡಿಯಲ್ಲಿ ಸಾಲಿನಲ್ಲಿ ಕಾಯಬೇಕಾದಾಗ ತಾಳ್ಮೆಗೆಡುತ್ತೀರಿ.

▶ ಜೊತೆ ಕೆಲಸಗಾರರೊಂದಿಗೆ ಆಗಾಗ ಜಗಳವಾಡುತ್ತೀರಿ.

▶ ಹಗಲಲ್ಲಿ ನಡೆದದ್ದನ್ನು ರಾತ್ರಿ ಯೋಚಿಸುತ್ತಾ ಮನಸ್ಸಲ್ಲೇ ಕೋಪಗೊಂಡು ನಿದ್ದೆಗೆಡುತ್ತೀರಿ.

▶ ಮನನೋಯಿಸಿದವರನ್ನು ಕ್ಷಮಿಸಲು ಕಷ್ಟವಾಗುತ್ತದೆ.

▶ ಭಾವನೆಗಳನ್ನು ನಿಯಂತ್ರಿಸಲು ಆಗಾಗ ತಪ್ಪಿಬೀಳುತ್ತೀರಿ.

▶ ಸಿಟ್ಟುತೋರಿಸಿ ಆಮೇಲೆ ವಿಷಾದಪಡುತ್ತೀರಿ —ಹೀಗೆ ನಡೆಯುತ್ತಾ ಇರುತ್ತದೆ. *

[ಪಾದಟಿಪ್ಪಣಿ]

^ MentalHelp.net  ಮಾಹಿತಿ ಆಧರಿತ.

[ಪುಟ 6ರಲ್ಲಿರುವ ಚೌಕ]

ಕೋಪದ ಅಂಕಿಸಂಖ್ಯೆ

ಲಂಡನಿನ ಮಾನಸಿಕ ಆರೋಗ್ಯ ಸಂಸ್ಥೆಯು ಒಂದು ಕಿರುಹೊತ್ತಿಗೆಯಲ್ಲಿ (ಬಾಯ್ಲಿಂಗ್‌ ಪಾಯಿಂಟ್‌—ಆ್ಯಂಗರ್‌ ಆ್ಯಂಡ್‌ ವಾಟ್‌ ವಿ ಕ್ಯಾನ್‌ ಡು ಅಬವ್ಟ್‌ ಇಟ್‌) ಪ್ರಕಾಶಿಸಿದ ವರದಿಯ ತುಣುಕು:

84% ಮಂದಿಗೆ ಐದು ವರ್ಷ ಹಿಂದೆ ಇದ್ದದ್ದಕ್ಕಿಂತ ಈಗ ಕೆಲಸದಲ್ಲಿ ಹೆಚ್ಚು ಒತ್ತಡವಿದೆ ಎಂದನಿಸುತ್ತದೆ.

65% ಆಫೀಸ್‌ ಕೆಲಸಗಾರರು ಜಗಳವಾಡಿದ್ದಾರೆ ಇಲ್ಲವೆ ಆಫೀಸ್‌ನಲ್ಲಿ ಇತರರು ಜಗಳವಾಡಿದ್ದನ್ನು ನೋಡಿದ್ದಾರೆ.

45% ಉದ್ಯೋಗಿಗಳು ಪ್ರತಿದಿನ ಕೆಲಸದ ಸ್ಥಳದಲ್ಲಿ ರೇಗಾಡುತ್ತಾರೆ.

60% ಮಂದಿ ಕೆಲಸಕ್ಕೆ ಗೈರುಹಾಜರಾಗಲು ಕಾರಣ ಮಾನಸಿಕ ಒತ್ತಡ.

ಬ್ರಿಟನಿನ 33% ಜನರು ತಮ್ಮ ನೆರೆಯವರೊಂದಿಗೆ ಮಾತುಬಿಟ್ಟಿದ್ದಾರೆ.

ಜನರು ಈಗೀಗ ಹೆಚ್ಚು ಸಿಟ್ಟುಮಾಡಿಕೊಳ್ಳುತ್ತಾರೆ ಎಂದು 64% ಮಂದಿ ಒಪ್ಪುತ್ತಾರೆ.

ತಮ್ಮ ಆಪ್ತ ಮಿತ್ರ ಇಲ್ಲವೆ ಕುಟುಂಬ ಸದಸ್ಯರೊಬ್ಬರಿಗೆ ಸಿಟ್ಟಿನ ಸಮಸ್ಯೆಯಿದೆ ಎಂದು 32% ಮಂದಿ ಹೇಳುತ್ತಾರೆ.

[ಪುಟ 5ರಲ್ಲಿರುವ ಚಿತ್ರ]

ನೀವು ಸಿಟ್ಟಿನಿಂದ ಪ್ರತಿಕ್ರಿಯಿಸುವುದನ್ನು ನೋಡುವ ನಿಮ್ಮ ಮಕ್ಕಳು ಏನನ್ನು ಕಲಿಯುತ್ತಾರೆ?

[ಪುಟ 6ರಲ್ಲಿರುವ ಚಿತ್ರ]

ನೀವು ನೋಡುವ ಮನರಂಜನೆ ಕೋಪ ತೋರಿಸುವುದು ತಪ್ಪಲ್ಲ ಎಂಬ ವಿಚಾರವನ್ನು ಮೂಡಿಸುವಂಥದಾ?