ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೋಪಕ್ಕೆ ಕಡಿವಾಣ

ಕೋಪಕ್ಕೆ ಕಡಿವಾಣ

ಕೋಪಕ್ಕೆ ಕಡಿವಾಣ

ದುರಂತ ನಾಟಕ ವೀಕ್ಷಿಸಿ ಉಂಟಾದ ಮನಸ್ಸಿನ ಉದ್ವೇಗ ಹೊರಹಾಕುವುದನ್ನು (ಭಾವವಿರೇಚನ) ವರ್ಣಿಸಲು 2,000ಕ್ಕಿಂತಲೂ ಹೆಚ್ಚು ವರ್ಷ ಹಿಂದೆ ಗ್ರೀಕ್‌ ತತ್ವಜ್ಞಾನಿ ಅರಿಸ್ಟಾಟಲ್‌ “ಕೆತಾರ್ಸಿಸ್‌” ಎಂಬ ಪದವನ್ನು ಬಳಸಿದ. ಆತನಿಗನುಸಾರ ಒಬ್ಬ ವ್ಯಕ್ತಿ ತನ್ನ ಉದ್ವೇಗ ಹೊರಹಾಕಿದರೆ ಮನಸ್ಸು ಹಗುರವಾಗುತ್ತದೆ.

ಇಂಥದ್ದೇ ವಿಚಾರವನ್ನು ಕಳೆದ ಶತಮಾನದ ಆರಂಭದಲ್ಲಿ ಆಸ್ಟ್ರಿಯ ದೇಶದ ನರಶಾಸ್ತ್ರಜ್ಞ ಸಿಗ್‌ಮಂಡ್‌ ಫ್ರಾಯ್ಡ್‌ ಸಹ ಪ್ರತಿಪಾದಿಸಿದರು. ಜನರು ತಮ್ಮ ನಕಾರಾತ್ಮಕ ಭಾವನೆಗಳನ್ನು ಅದುಮಿಟ್ಟುಕೊಂಡರೆ ಮುಂದಕ್ಕೆ ಅದು ಹಿಸ್ಟೀರಿಯದಂಥ (ಉನ್ಮಾದ) ಮಾನಸಿಕ ರೋಗದ ರೂಪದಲ್ಲಿ ಹೊರಬರಬಹುದು. ಹಾಗಾಗಿ ಕೋಪವನ್ನು ತಡೆದುಹಿಡಿಯಬಾರದು, ತೋರಿಸಿಬಿಡಬೇಕು ಎನ್ನುವುದು ಫ್ರಾಯ್ಡ್‌ರವರ ಅಭಿಪ್ರಾಯ.

ಇತ್ತೀಚಿನ ವರುಷಗಳಲ್ಲಿ ಅಂದರೆ 1970, 80ರ ದಶಕಗಳಲ್ಲಿ ಅನೇಕ ಸಂಶೋಧಕರು ಕೆತಾರ್ಸಿಸ್‌ ತತ್ವದ ಸತ್ವಪರೀಕ್ಷೆ ಮಾಡಿದರು. ಆ ತತ್ವ ಸರಿಯೆಂದು ಯಾವುದೇ ಸಂಶೋಧನೆ ತೋರಿಸಿಕೊಡಲಿಲ್ಲ. ಹಾಗಾಗಿ “ಈ ಕೆತಾರ್ಸಿಸ್‌ ತತ್ವ ತಲೆಯೆತ್ತದಂತೆ ಒಂದೇ ಬಾರಿಗೆ ಅದನ್ನು ಮುಗಿಸಿಬಿಡಬೇಕಾದ ಸಮಯ ಬಂದಿದೆ. ಮನಸ್ಸಿನಲ್ಲಿರುವ ಹಗೆಯನ್ನು ಹಿಂಸಾತ್ಮಕ ವರ್ತನೆ (ಇಲ್ಲವೆ ಕೋಪವನ್ನು ತೋರಿಸುವ) ಮೂಲಕ ಶಮನಗೊಳಿಸಬಹುದು ಎಂಬ ನಂಬಿಕೆಯನ್ನು ಯಾವ ಸಂಶೋಧನೆಯೂ ಬೆಂಬಲಿಸಿಲ್ಲ” ಎನ್ನುತ್ತಾರೆ ಮನಶ್ಶಾಸ್ತ್ರಜ್ಞೆ ಕ್ಯಾರಲ್‌ ಟಾವ್ರಸ್‌.

ಇನ್ನೊಬ್ಬ ಮನಶ್ಶಾಸ್ತ್ರಜ್ಞ ಗ್ಯಾರೀ ಹ್ಯಾನ್ಕಿನ್ಸ್‌ ಹೇಳುವುದು: “ಕೆತಾರ್ಸಿಸ್‌ ತತ್ವ ಹೇಳುವಂತೆ ಕೋಪವನ್ನೆಲ್ಲ ಹೊರಹಾಕಿದರೆ ಉದ್ವೇಗ ಕಡಿಮೆಯಾಗುವುದಿಲ್ಲ ಹೆಚ್ಚಾಗುತ್ತದೆ ಎಂದು ಸಂಶೋಧನೆ ತೋರಿಸುತ್ತದೆ.” ಮಾನಸಿಕ ಆರೋಗ್ಯ ಪರಿಣತರಲ್ಲಿ ಎಲ್ಲರೂ ಕೆತಾರ್ಸಿಸ್‌ ತತ್ವದ ವಿಷಯದಲ್ಲಿ ಒಮ್ಮತಕ್ಕೆ ಬರಲಿಕ್ಕಿಲ್ಲವೇನೋ. ಆದರೆ ವಿವೇಕದ ಇನ್ನೊಂದು ಮೂಲವಿದೆ. ಅದು ಬೈಬಲ್‌. ಅದರಿಂದ ಅನೇಕ ಜನರಿಗೆ ಸಹಾಯವಾಗಿದೆ.

“ಕೋಪವನ್ನು ಅಣಗಿಸಿಕೋ”

ಕೋಪ ನಿಗ್ರಹಿಸುವ ವಿಷಯದ ಬಗ್ಗೆ ಬೈಬಲ್‌ ಬರಹಗಾರ ದಾವೀದ ಹೀಗಂದಿದ್ದಾನೆ: “ಕೋಪವನ್ನು ಅಣಗಿಸಿಕೋ; ರೋಷವನ್ನು ಬಿಡು. ಉರಿಗೊಳ್ಳಬೇಡ; ಕೆಡುಕಿಗೆ ಕಾರಣವಾದೀತು.” (ಕೀರ್ತನೆ 37:8) ಸಿಟ್ಟಿನಿಂದ ಏನೋ ಹೇಳಿ, ಮಾಡಿ ಆಮೇಲೆ ವಿಷಾದಿಸುವ ಬದಲು ಸಿಟ್ಟಿನಿಂದ ಉರಿಗೊಳ್ಳದಿರುವುದೇ ಉತ್ತಮ. ಇದು ಹೇಳುವುದು ಸುಲಭ, ಮಾಡುವುದು ಕಷ್ಟ. ಆದರೆ ಅಸಾಧ್ಯವೇನೂ ಅಲ್ಲ. ಸಿಟ್ಟನ್ನು ನಿಯಂತ್ರಿಸುವ ಮೂರು ವಿಧಗಳನ್ನು ಈಗ ಪರಿಗಣಿಸೋಣ.

ಕೋಪದ ತಾಪ ಕಡಿಮೆಗೊಳಿಸಿ

ಸಿಟ್ಟು ಬಂದೊಡನೆ ಸ್ವಲ್ಪ ಹೊತ್ತು ತಾಳಿ. ಮನಸ್ಸಿಗೆ ತೋಚಿದ್ದನ್ನು ಹೇಳಿಬಿಡಬೇಡಿ. ಸಿಟ್ಟು ನೆತ್ತಿಗೇರುತ್ತಿದೆ ಅಥವಾ ನಿಮ್ಮ ಭಾವನೆಗಳ ಮೇಲಿನ ನಿಯಂತ್ರಣ ತಪ್ಪುತ್ತಿದೆ ಎಂದು ನಿಮಗೆ ಗೊತ್ತಾಗುವಾಗ ಬೈಬಲಿನ ಈ ಸಲಹೆ ಅನ್ವಯಿಸಿ: “ಕಲಹದ ಪ್ರಾರಂಭವು ಪ್ರವಾಹದಂತೆ ಇರುವುದು. ಆದಕಾರಣ ಆ ಕಲಹಕ್ಕೆ ಕೈಹಾಕುವುದಕ್ಕಿಂತ ಮುಂಚೆ ಅದನ್ನು ಬಿಟ್ಟುಬಿಡು.”—ಜ್ಞಾನೋಕ್ತಿ 17:14, ಪವಿತ್ರ ಗ್ರಂಥ ಭಾಷಾಂತರ.

ಜ್ಯಾಕ್‌ ಎಂಬವನಿಗೆ ತನ್ನ ಉಗ್ರ ಕೋಪಕ್ಕೆ ಕಡಿವಾಣ ಹಾಕಲು ಈ ಸಲಹೆ ಸಹಾಯಮಾಡಿತು. ಜ್ಯಾಕ್‌ನ ತಂದೆ ಯಾವಾಗಲೂ ಸಿಟ್ಟುತೋರಿಸುತ್ತಿದ್ದರು, ಕುಡಿದು ಜಗಳವಾಡುತ್ತಿದ್ದರು. ಅಂಥ ವಾತಾವರಣದಲ್ಲಿ ಬೆಳೆದ ಜ್ಯಾಕ್‌ ಸಹ ಹಿಂಸಾತ್ಮಕ ವ್ಯಕ್ತಿತ್ವ ಬೆಳೆಸಿಕೊಂಡ. “ಕೋಪ ಬಂದಾಗ ಮೈಗೆ ಬೆಂಕಿ ಹೊತ್ತಿದಂತೆ ಅನಿಸುತ್ತಿತ್ತು. ಮಾತಿನ ಚಾಟಿ ಬೀಸುತ್ತಿದ್ದೆ, ಜನರನ್ನು ಚಚ್ಚಿ ಹಾಕುತ್ತಿದ್ದೆ” ಎನ್ನುತ್ತಾನೆ ಆತ.

ಆದರೆ ಯೆಹೋವನ ಸಾಕ್ಷಿಗಳ ಜತೆ ಆತ ಬೈಬಲ್‌ ಕಲಿಯತೊಡಗಿದ. ದೇವರ ಸಹಾಯದಿಂದ ತಾನು ಬದಲಾಗಬಲ್ಲೆ, ಸಿಟ್ಟನ್ನು ನಿಗ್ರಹಿಸಲು ಕಲಿಯಬಲ್ಲೆ ಎಂದು ತಿಳಿದುಕೊಂಡ. ಹಾಗೆಯೇ ಬದಲಾದ. ಒಮ್ಮೆ ಜೊತೆ ಕೆಲಸಗಾರ ಅವಾಚ್ಯ ಪದಗಳಿಂದ ಬೈದಾಗ ತಾನು ಪ್ರತಿಕ್ರಿಯಿಸಿದ ರೀತಿಯನ್ನು ಜ್ಯಾಕ್‌ ಹೀಗೆ ವಿವರಿಸುತ್ತಾನೆ: “ಸರ್ರನೆ ಸಿಟ್ಟು ನೆತ್ತಿಗೇರಿತು. ಅವನನ್ನು ಹಿಡಿದು ಸರಿಯಾಗಿ ಬಾರಿಸ್ಬೇಕು ಎಂದು ಆ ಕ್ಷಣದಲ್ಲಿ ನನಗನಿಸಿತು.”

ಆದರೆ ಜ್ಯಾಕ್‌ ಹಾಗೆ ಮಾಡಲಿಲ್ಲ. ಅದು ಹೇಗೆ ಸಾಧ್ಯವಾಯಿತು? ಅವನನ್ನುವುದು: “‘ಯೆಹೋವನೇ, ಶಾಂತವಾಗಿರಲು ನನಗೆ ಸಹಾಯಮಾಡು’ ಎಂದು ಬೇಡಿಕೊಂಡೆ. ಮೊತ್ತಮೊದಲ ಬಾರಿಗೆ ಒಂದು ರೀತಿಯ ಪ್ರಶಾಂತತೆ ನನ್ನನ್ನು ಆವರಿಸಿತು. ಏನೂ ಮಾಡದೆ ಸುಮ್ಮನೆ ಅಲ್ಲಿಂದ ಹೋಗಿಬಿಟ್ಟೆ.” ಆತ ಬೈಬಲ್‌ ಕಲಿಯುವುದನ್ನು ಮುಂದುವರಿಸಿದ. ಸಿಟ್ಟನ್ನು ನಿಗ್ರಹಿಸುವ ನಿಟ್ಟಿನಲ್ಲಿ ತುಂಬ ಪ್ರಾರ್ಥನೆ ಮಾಡುತ್ತಿದ್ದ. ಅಲ್ಲದೆ, “ಕಟ್ಟಿಗೆಯಿಲ್ಲದಿದ್ದರೆ ಬೆಂಕಿ ಆರುವದು” ಎನ್ನುವ ಜ್ಞಾನೋಕ್ತಿ 26:20ರಂಥ ವಚನಗಳನ್ನು ಧ್ಯಾನಿಸುತ್ತಿದ್ದ. ಕೊನೆಗೂ ಜ್ಯಾಕ್‌ ತನ್ನ ಕೋಪವನ್ನು ಜಯಿಸಿಯೇ ಬಿಟ್ಟ.

ಮನಸ್ಸನ್ನು ಶಾಂತಗೊಳಿಸಲು ಕಲಿಯಿರಿ

“ಶಾಂತಿಗುಣವು ದೇಹಕ್ಕೆ ಜೀವಾಧಾರವು.” (ಜ್ಞಾನೋಕ್ತಿ 14:30) ಬೈಬಲಿನ ಈ ಸರಳ ಮಾತು ಪಾಲಿಸಿದರೆ ಮಾನಸಿಕ, ಶಾರೀರಿಕ ಹಾಗೂ ಆಧ್ಯಾತ್ಮಿಕ ಆರೋಗ್ಯ ಉತ್ತಮಗೊಳ್ಳುತ್ತದೆ. ಮನಸ್ಸನ್ನು ಶಾಂತಗೊಳಿಸಲು ನೆರವಾಗುವ ಮುಂದಿನ ಸರಳ ವಿಧಾನಗಳನ್ನು ಕಲಿಯಿರಿ. ಇವು ಮಾನಸಿಕ ಒತ್ತಡದಿಂದ ಬರುವ ಕೋಪವನ್ನು ನಿಗ್ರಹಿಸಲು ಪರಿಣಾಮಕಾರಿ:

● ದೀರ್ಘವಾಗಿ ಉಸಿರಾಡಿ. ಇದು ಕೋಪದ ತಾಪ ಕಡಿಮೆಗೊಳಿಸುವ ಅತ್ಯುತ್ತಮ ಹಾಗೂ ಶೀಘ್ರ ಉಪಾಯ.

● ದೀರ್ಘವಾಗಿ ಉಸಿರಾಡುತ್ತಿರುವಾಗ ನಿಮ್ಮನ್ನು ಶಾಂತಗೊಳಿಸುವಂಥ ಪದವನ್ನು ಪದೇಪದೇ ಹೇಳಿ. ಉದಾ: “ಸಮಾಧಾನ,” “ಹೋಗ್ಲಿಬಿಡು,” “ಚಿಂತಿಸ್ಬೇಡ.”

● ನಿಮಗೆ ಆನಂದ ನೀಡುವ ಚಟುವಟಿಕೆಯಲ್ಲಿ ತೊಡಗಿ. ಉದಾ: ಓದುವುದು, ಸಂಗೀತ ಕೇಳುವುದು, ತೋಟಗಾರಿಕೆ ಇತ್ಯಾದಿ.

● ನಿಯಮಿತ ವ್ಯಾಯಾಮ ಹಾಗೂ ಆರೋಗ್ಯಕರ ಆಹಾರ ಸೇವನೆ ಮಾಡಿ.

ನಿರೀಕ್ಷೆಗೆ ಮಿತಿಯಿರಲಿ

ಸಿಟ್ಟೆಬ್ಬಿಸುವ ವ್ಯಕ್ತಿಗಳಿಂದ ಇಲ್ಲವೆ ವಿಷಯಗಳಿಂದ ಸಂಪೂರ್ಣ ದೂರವಿರುವುದು ಕೈಲಾಗದ ಸಂಗತಿ. ಆದರೆ ನೀವು ತೋರಿಸುವ ಪ್ರತಿಕ್ರಿಯೆಯನ್ನು ನಿಗ್ರಹಿಸಲು ಕಲಿಯಬಲ್ಲಿರಿ. ಇದಕ್ಕಾಗಿ ನಿಮ್ಮ ಯೋಚನಾಧಾಟಿಯನ್ನು ಬದಲಾಯಿಸಿಕೊಳ್ಳಬೇಕು.

ಇತರರ ಬಗ್ಗೆ ಅತಿಯಾದ ನಿರೀಕ್ಷೆಗಳನ್ನು ಇಟ್ಟಿರುವ ವ್ಯಕ್ತಿಗಳಲ್ಲಿ ಕೋಪದ ಸಮಸ್ಯೆ ಅಧಿಕ. ಏಕೆ? ಏಕೆಂದರೆ ಇಂಥವರು ತಮ್ಮದೇ ಆದ ಉಚ್ಚ ಮಟ್ಟಗಳನ್ನು ಇಟ್ಟುಕೊಂಡಿರುತ್ತಾರೆ. ಅವನ್ನು ಇತರರು ಮುಟ್ಟಬೇಕೆಂದು ನಿರೀಕ್ಷಿಸುತ್ತಾರೆ. ಹಾಗಾಗದಿದ್ದಾಗ ನಿರಾಶರಾಗಿ ಸಿಟ್ಟುಗೊಳ್ಳುತ್ತಾರೆ. ಇಂಥ ಪರಿಪೂರ್ಣತಾವಾದಿಗಳು ತಮ್ಮ ಈ ಮನೋಭಾವವನ್ನು ಮೆಟ್ಟಿನಿಲ್ಲಬೇಕು. ಅದಕ್ಕಾಗಿ ಈ ಮಾತನ್ನು ನೆನಪಿನಲ್ಲಿಡಬೇಕು: “ನೀತಿವಂತನು ಒಬ್ಬನೂ ಇಲ್ಲ, ಒಬ್ಬನಾದರೂ ಇಲ್ಲ . . . ಮನುಷ್ಯರೆಲ್ಲರು ದಾರಿತಪ್ಪಿದವರೇ.” (ರೋಮನ್ನರಿಗೆ 3:10, 12) ಹಾಗಾಗಿ ನಾವು ಇಲ್ಲವೆ ಇತರರು ಪರಿಪೂರ್ಣರಾಗಿರಬೇಕೆಂದು ನಿರೀಕ್ಷಿಸುವುದಾದರೆ ನಿರಾಶೆ ಖಂಡಿತ.

ನಾವು ನಮ್ಮ ಬಗ್ಗೆಯಾಗಲಿ ಇನ್ನೊಬ್ಬರ ಬಗ್ಗೆಯಾಗಲಿ ಅತಿಯಾಗಿ ನಿರೀಕ್ಷಿಸದಿರುವುದು ವಿವೇಕಪ್ರದ. ಬೈಬಲ್‌ ಹೇಳುವುದು: “ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ. ಯಾವನಾದರೂ ಮಾತಿನಲ್ಲಿ ಎಡವದಿರುವುದಾದರೆ ಅಂಥವನು ಪರಿಪೂರ್ಣ.” (ಯಾಕೋಬ 3:2) “ಪಾಪಮಾಡದೆ ಧರ್ಮವನ್ನೇ ಆಚರಿಸುತ್ತಿರುವ ಸತ್ಪುರುಷನು ಲೋಕದಲ್ಲಿ ಇಲ್ಲವೇ ಇಲ್ಲ.” (ಪ್ರಸಂಗಿ 7:20) ಹಾಗಾಗಿ ನಾವು ಪರಿಪೂರ್ಣರಂತೆ ವರ್ತಿಸಿದರೆ ಅದು ನಿರಾಶೆಗೂ ಕೋಪಕ್ಕೂ ನಡೆಸಬಲ್ಲದು.

ಅಪರಿಪೂರ್ಣ ಮಾನವರಾದ ನಮ್ಮೆಲ್ಲರಿಗೂ ಆಗಿಂದಾಗ್ಗೆ ಕೋಪ ಬಂದೇ ಬರುತ್ತದೆ. ಆದರೆ ಕೋಪವನ್ನು ಹೇಗೆ ವ್ಯಕ್ತಪಡಿಸುತ್ತೇವೆ ಎನ್ನುವುದು ನಮ್ಮ ಕೈಯಲ್ಲಿದೆ. “ಕೋಪಗೊಂಡರೂ ಪಾಪಮಾಡಬೇಡಿರಿ; ಸೂರ್ಯನು ಮುಳುಗುವುದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ” ಎಂದು ಯೇಸುವಿನ ಶಿಷ್ಯ ಪೌಲ ತನ್ನ ಜೊತೆ ಕ್ರೈಸ್ತರಿಗೆ ಬುದ್ಧಿವಾದ ಹೇಳಿದ. (ಎಫೆಸ 4:26) ನಾವು ಸಿಟ್ಟನ್ನು ನಿಗ್ರಹಿಸಿದರೆ ನಮ್ಮ ಮನಸ್ಸಿನಲ್ಲಿದ್ದದ್ದನ್ನು ಸರಿಯಾಗಿ ವ್ಯಕ್ತಪಡಿಸಲು ಶಕ್ತರಾಗುವೆವು. ಹೀಗೆ ನಮಗೂ ಇತರರಿಗೂ ಪ್ರಯೋಜನ ತರುವೆವು. (g12-E 03)

[ಪುಟ 8, 9ರಲ್ಲಿರುವ ಚೌಕ/ಚಿತ್ರಗಳು]

ಮನಸ್ಸನ್ನು ಶಾಂತಗೊಳಿಸಲು. . .

ದೀರ್ಘವಾಗಿ ಉಸಿರಾಡಿ

ಆನಂದ ನೀಡುವ ಚಟುವಟಿಕೆಯಲ್ಲಿ ತೊಡಗಿ

ನಿಯಮಿತ ವ್ಯಾಯಾಮ ಮಾಡಿ