ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೋರ್‌ ಆಗದ ಹಾಗೆ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುವುದು ಹೇಗೆ?

ಬೋರ್‌ ಆಗದ ಹಾಗೆ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುವುದು ಹೇಗೆ?

ಯುವಜನರ ಪ್ರಶ್ನೆ

ಬೋರ್‌ ಆಗದ ಹಾಗೆ ವೈಯಕ್ತಿಕ ಬೈಬಲ್‌ ಅಧ್ಯಯನ ಮಾಡುವುದು ಹೇಗೆ?

ಬೈಬಲನ್ನು ಏಕೆ ಅಧ್ಯಯನ ಮಾಡಬೇಕೆಂದು ನೋಡೋಣ.

ಸುಪ್ರಸಿದ್ಧ ಪುಸ್ತಕವಾದ ಬೈಬಲಿನಲ್ಲಿ ನಿಧಿಯಂಥ ಈ ಮಾಹಿತಿ ಇದೆ:

● ಸುಖ-ಸಂತೃಪ್ತಿಯ ಜೀವನ ಸಾಗಿಸುವ ರೀತಿ

● ಗತಕಾಲದ ಬಗ್ಗೆ, ಭವಿಷ್ಯತ್ತಿನ ಬಗ್ಗೆ ಬೇರೆಲ್ಲೂ ಸಿಗದ ವಿಚಾರಗಳು

● ನಿಮ್ಮ ಬಗ್ಗೆ ಅರಿತುಕೊಳ್ಳಲು, ನಿಮ್ಮ ವ್ಯಕ್ತಿತ್ವಕ್ಕೆ ಮೆರುಗು ನೀಡಲು ನೆರವು *

ಬೈಬಲ್‌ ಅಧ್ಯಯನ ಮಾಡುವುದು ಸ್ವಲ್ಪ ಕಷ್ಟವೆನಿಸಬಹುದು. ಆದರೆ ಅದರಿಂದ ಸಿಗುವ ಲಾಭ ಅಪಾರ! ನಿಮ್ಮದೇ ವಯಸ್ಸಿನ ಎಷ್ಟೋ ಯುವಜನರಿಗೆ ಬೈಬಲ್‌ ಅಧ್ಯಯನ ಮಾಡುವುದು ಕಷ್ಟವೆನಿಸುತ್ತಿತ್ತು. ಆದರೆ ಈಗ ಅವರದನ್ನು ಆನಂದಿಸುತ್ತಿದ್ದಾರೆ. ಹೇಗೆ? ಮುಂದಿನ ಪುಟದಲ್ಲಿರುವ ಅವರ ಮಾತುಗಳಿಂದಲೇ ತಿಳಿಯಿರಿ. ನಿಮ್ಮ ಉಪಯೋಗಕ್ಕಾಗಿ ಆ ಪುಟವನ್ನು ಕತ್ತರಿಸಿಟ್ಟುಕೊಳ್ಳಿ.

“ಬೈಬಲಲ್ಲಿ ಪ್ರತಿಯೊಬ್ಬರಿಗೂ ಆಸಕ್ತಿಕರವಾದ, ಉಪಯುಕ್ತವಾದ ಒಂದಲ್ಲ ಒಂದು ವಿಷ್ಯ ಸಿಕ್ಕೇ ಸಿಗುತ್ತೆ. ಅಧ್ಯಯನ ಮಾಡೋದಿಕ್ಕೆ ಅದರಲ್ಲಿ ಸಾಕಷ್ಟು ವಿಷ್ಯಗಳಿವೆ.”—ವ್ಯಾಲರಿ. * (g12-E 02)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.watchtower.org/ype ವೆಬ್‌ ಸೈಟ್‌ನಲ್ಲಿವೆ

[ಪಾದಟಿಪ್ಪಣಿಗಳು]

^ ಇವನ್ನೆಲ್ಲ ನೀವೂ ತಿಳಿಯಬೇಕೇ? ನಿಮ್ಮ ಊರಲ್ಲಿರುವ ಯೆಹೋವನ ಸಾಕ್ಷಿಗಳನ್ನು ಸಂಪರ್ಕಿಸಿ ಅಥವಾ ಪುಟ 5ರಲ್ಲಿರುವ ಸೂಕ್ತ ವಿಳಾಸಕ್ಕೆ ಬರೆಯಿರಿ ಅಥವಾ www.watchtower.org. ವೆಬ್‌ ಸೈಟಿಗೆ ಭೇಟಿ ನೀಡಿ.

^ ಈ ಲೇಖನದಲ್ಲಿ ಕೆಲವು ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 13, 14ರಲ್ಲಿರುವ ಚೌಕ/ಚಿತ್ರಗಳು]

ಬೈಬಲನ್ನು ಅಧ್ಯಯನ ಮಾಡುವ ಬಗೆ

ಸಮಸ್ಯೆ: ಮನಸ್ಸಿಲ್ಲ

“ಕೂತು ಒಂದು ತಾಸು ಅಧ್ಯಯನ ಮಾಡೋದಂದರೆ ನನಗಿಷ್ಟ ಇಲ್ಲ.” —ಲೀನಾ.

ನಿಮಗೆ ಬೇಕಿರುವುದು: ಪ್ರೇರಣೆ:

ಬೈಬಲನ್ನು ಖುಷಿ ಖುಷಿಯಿಂದ ಅಧ್ಯಯನ ಮಾಡಬೇಕಾದರೆ, ಅಧ್ಯಯನದಿಂದ ನಿಮಗೆ ಸಿಗುವ ಪ್ರಯೋಜನಗಳ ಬಗ್ಗೆ ಯೋಚಿಸಿ. ನೀವು ದೇವರ ಗೆಳೆತನ ಬೆಳೆಸಲು ಇಷ್ಟಪಡುತ್ತೀರಾ? ಲೋಕಘಟನೆಗಳ ಅರ್ಥವನ್ನು ಗ್ರಹಿಸಲು ಇಚ್ಛಿಸುತ್ತೀರಾ? ನಿಮ್ಮ ವ್ಯಕ್ತಿತ್ವ ಉತ್ತಮಗೊಳಿಸುವ ಆಸೆ ಇದೆಯಾ? ನಿಮಗೆ ಬೈಬಲ್‌ ಸಹಾಯಮಾಡುತ್ತದೆ. ಇನ್ನೆಷ್ಟೋ ವಿಷಯಗಳನ್ನು ತಿಳಿಯಲೂ ನೆರವಾಗುತ್ತದೆ.

“ಬೈಬಲ್‌ ಅಧ್ಯಯನವನ್ನು ಒಂದು ಕೆಲಸದ ಹಾಗೆನೋ ಪರೀಕ್ಷೆಗಾಗಿ ಓದೋ ಹಾಗೆನೋ ನೆನಸಬೇಡಿ. ವಿಶ್ವದಲ್ಲೇ ಶ್ರೇಷ್ಠ ಗೆಳೆತನ ಅಂದರೆ ಯೆಹೋವ ದೇವರ ಗೆಳೆತನವನ್ನು ಬೆಳೆಸಲು ಇದೊಂದು ದಾರಿ ಎನ್ನುವ ದೃಷ್ಟಿಯಿಂದ ಅಧ್ಯಯನ ಮಾಡಿ.”—ಬೆಥನಿ.

“ನೀವು ಅಧ್ಯಯನ ಮಾಡುತ್ತಿದ್ದೀರಿ ಅಂದ್ರೆ ಯೆಹೋವ ದೇವರ ಜೊತೆ ಸಮಯ ಕಳೆಯುತ್ತಿದ್ದೀರಿ. ನಿಮ್ಮ ಅಪ್ಪಅಮ್ಮ ಇರುವಾಗ ಮಾತ್ರ ಒಬ್ಬರ ಜೊತೆ ಸಮಯ ಕಳೆದರೆ ಅವ್ರು ನಿಮ್ಮ ಆಪ್ತ ಸ್ನೇಹಿತರಾಗಲು ಸಾಧ್ಯವಾ? ನಿಮಗೆ ಆಪ್ತರಾಗಬೇಕಾದ್ರೆ ನೀವೇ ವೈಯಕ್ತಿಕವಾಗಿ ಸಮಯ ಕಳೆಯಬೇಕಲ್ಲವೇ. ಹಾಗೇ ವೈಯಕ್ತಿಕವಾಗಿ ನೀವು ಅಧ್ಯಯನ ಮಾಡಿದರೆ ನೀವು ಯೆಹೋವನ ಫ್ರೆಂಡ್‌ ಆಗ್ತೀರಿ.”—ಬಿಯಾಂಕ.

ನೆನಪಿಡಿ: “ಬೈಬಲ್‌ನಲ್ಲಿ ಇರುವುದೆಲ್ಲವೂ ದೇವರ ಮಾತು. ಜನರಿಗೆ ಬೋಧಿಸಲು, ಸಹಾಯಮಾಡಲು, ಅವರನ್ನು ತಿದ್ದಲು, ಹೇಗೆ ಬದುಕುವುದೆಂದು ಕಲಿಸಲು ಅದು ಉಪಯುಕ್ತ.” (2 ತಿಮೊಥೆಯ 3:16, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ಹೌದು ಈ ವಿಷಯಗಳಲ್ಲೂ ಬೈಬಲ್‌ ನಿಮಗೆ ನೆರವಾಗುತ್ತದೆ!

“ಸಿಗೋ ಪ್ರತಿಫಲಗಳಿಗೆ ಹೆಚ್ಚು ಗಮನಕೊಡ್ತೇನೆ. ನನ್ನಲ್ಲಿರುವ ಕುಂದುಕೊರತೆಗಳು ಗಮನಕ್ಕೆ ಬಂದಾಗೆಲ್ಲ ಬೈಬಲ್‌ ಅಧ್ಯಯನದಲ್ಲಿ ಅದನ್ನು ಅಧ್ಯಯನ ವಿಷಯವಾಗಿ ತೆಗೆದುಕೊಳ್ತೇನೆ. ಹೀಗೆ ನನ್ನನ್ನೇ ತಿದ್ದಿಕೊಂಡು ನನ್ನ ವ್ಯಕ್ತಿತ್ವ ಉತ್ತಮಗೊಳಿಸುತ್ತೇನೆ.”—ಮ್ಯಾಕ್ಸ್‌.

ಯೋಚಿಸಿ:

ಬೈಬಲ್‌ ಅಧ್ಯಯನ ಮಾಡಲು ನಿಮಗೆ ಯಾವುದು ಪ್ರೇರಣೆಯಾಗಬಲ್ಲದು?

ಸಮಸ್ಯೆ: ಬೋರ್‌ ಆಗ್ತದೆ

“10 ನಿಮಿಷ ಅಧ್ಯಯನ ಮಾಡುವಷ್ಟರಲ್ಲಿ ನಂಗೆ ಬೇಜಾರಾಗಲು ಶುರುವಾಗುತ್ತೆ. 20 ನಿಮಿಷ ಆಗೋವಾಗ ಬೇರೇನಾದ್ರೂ ಮಾಡೋಣ ಅನ್ಸುತ್ತೆ. 30 ನಿಮಿಷಕ್ಕಿಂತ ಹೆಚ್ಚು ಕೂರಕ್ಕೇ ಆಗಲ್ಲ, ಸಖತ್‌ ಬೋರ್‌ ಹೊಡಿಯುತ್ತೆ!”—ಆ್ಯಲಿಸನ್‌.

ನಿಮಗೆ ಬೇಕಿರುವುದು: ಕಲ್ಪನಾಶಕ್ತಿ

ನಿಮ್ಮ ಕಲ್ಪನಾಶಕ್ತಿ ಬಳಸಿ ಅಧ್ಯಯನ ಮಾಡುವ ವಿಷಯ, ವಿಧ, ಜಾಗವನ್ನು ಸ್ಯಾರಸ್ಯಕರ ಮಾಡಿ.

“ನಿಮ್ಮ ಮನಸ್ಸಲಿರೋ ಪ್ರಶ್ನೆಗಳ ಬಗ್ಗೆ ಸಂಶೋಧನೆ ಮಾಡಿ. ಮನಸ್ಸನ್ನು ಕೊರೆಯುತ್ತಿರುವ ವಿಷ್ಯದ ಬಗ್ಗೆ ಅಧ್ಯಯನ ಮಾಡಿದರೆ ಮುಗಿಸುವಷ್ಟರಲ್ಲಿ ನಿಮಗೆ ತೃಪ್ತಿ ಅನಿಸ್ತದೆ. ಸಂತೋಷನೂ ಆಗ್ತದೆ.”—ರಿಚರ್ಡ್‌.

“ಯಾವುದಾದ್ರೂ ಒಂದು ಘಟನೆ ಓದುತ್ತಿರುವಾಗ ನಿಮ್ಮನ್ನೇ ಆ ಸನ್ನಿವೇಶದಲ್ಲಿ ಚಿತ್ರಿಸಿಕೊಳ್ಳಿ. ನೀವೇ ಮುಖ್ಯ ಪಾತ್ರಧಾರಿ ಅಥವಾ ಬದಿಯಲ್ಲಿ ನಿಂತು ಗಮನಿಸುತ್ತಿರೋ ವ್ಯಕ್ತಿ ಎಂದು ಕಲ್ಪಿಸಿಕೊಳ್ಳಿ. ನಿಮ್ಮ ಕಣ್ಮುಂದೇ ಎಲ್ಲ ನಡಿತಿದೆಯೋ ಎಂಬಂತೆ ಊಹಿಸಿಕೊಳ್ಳಿ.”—ಸ್ಟೀವನ್‌.

“ನೀವು ಅಧ್ಯಯನವನ್ನು ಆನಂದಿಸಬೇಕು. ತೋಟದಲ್ಲಿ ಕೂತ್ಕೊಂಡು ನಿಂಬೆಹಣ್ಣಿನ ಪಾನಕ ಕುಡಿಯುತ್ತಾ ಅಧ್ಯಯನ ಮಾಡಬಹುದು. ನನಗಂತೂ ಅಧ್ಯಯನ ಮಾಡೋವಾಗ ಏನಾದರೂ ತಿನ್ಲಿಕ್ಕೆ ಇದ್ದರೆ ಇಷ್ಟ. ಯಾರಿಗೆ ಇಷ್ಟವಾಗಲ್ಲ ಹೇಳಿ!”—ಅಲಿಗ್ಸಾಂಡ್ರಾ.

ನೆನಪಿಡಿ: ಬೋರ್‌ ಅನ್ನುವುದು ನಮ್ಮಲ್ಲಿರುವ ಭಾವನೆ. ಸತ್ಯ ಏನೆಂದರೆ ಅಧ್ಯಯನ ಬೋರ್‌ ಅಲ್ಲ, ಬೋರ್‌ ಆಗುವುದು ನಮಗೆ. ಯಾವಾಗ ಅದು ‘ನನ್ನ ಅನಿಸಿಕೆ’ ಎಂದು ಅರ್ಥಮಾಡಿಕೊಳ್ಳುತ್ತೇವಾ ಆಗ ನಾವು ಆ ಭಾವನೆಯನ್ನು ಹೊಡೆದೋಡಿಸುವ ಹೆಜ್ಜೆ ತೆಗೆದುಕೊಳ್ಳುತ್ತೇವೆ.—ಜ್ಞಾನೋಕ್ತಿ 2:10, 11.

“ನಿಮ್ಮ ವೈಯಕ್ತಿಕ ಅಧ್ಯಯನ ಬೋರ್‌ ಆಗ್ಬೇಕಾಗಿಲ್ಲ. ನೀವದನ್ನು ಖುಷಿ ಖುಷಿಯಿಂದ ಮಾಡ್ಬಹುದು. ಅದು ನಿಮ್ಮ ಮೇಲೆ ಹೊಂದಿಕೊಂಡಿದೆ.”—ವೆನೆಸಾ.

ಯೋಚಿಸಿ:

ವೈಯಕ್ತಿಕ ಅಧ್ಯಯನಕ್ಕಾಗಿ ನೀವು ಕಲ್ಪನಾಶಕ್ತಿಯನ್ನು ಹೇಗೆ ಬಳಸಬಲ್ಲಿರಿ?

ಸಮಸ್ಯೆ: ಸಮಯ ಇಲ್ಲ

“ಬೈಬಲನ್ನು ಅಧ್ಯಯನ ಮಾಡೋದಂದ್ರೆ ನನಗೇನೊ ತುಂಬ ಇಷ್ಟ. ಆದ್ರೆ ನಾನೆಷ್ಟು ಬ್ಯುಸಿ ಇರ್ತೇನೆ ಅಂದ್ರೆ ಕೂತು ಅಧ್ಯಯನ ಮಾಡೋಕೆ ಟೈಮೇ ಸಿಗಲ್ಲ.”—ಮರಿಯ.

ನಿಮಗೆ ಬೇಕಿರುವುದು: ಆದ್ಯತೆಗಳು

ದೊಡ್ಡವರಾಗುತ್ತಾ ಹೋದ ಹಾಗೆ ‘ಹೆಚ್ಚು ಪ್ರಮುಖವಾದ ವಿಷಯಗಳನ್ನು ಖಚಿತಪಡಿಸಿಕೊಳ್ಳುವುದು’ ಹೇಗೆಂದು ನೀವು ಕಲಿಯುವುದು ಬಹಳ ಮುಖ್ಯ.—ಫಿಲಿಪ್ಪಿ 1:10.

“ಎಕ್ಸ್‌ಟ್ರ ಟೈಮ್‌ ನನ್ಗೆ ಸಿಗಲ್ಲ, ನಾನೇ ಟೈಮ್‌ ಮಾಡ್ಕೋ ಬೇಕು ಎನ್ನುವುದನ್ನು ಅರ್ಥಮಾಡಿಸಿದ್ದೇ ನನ್ನ ಅಮ್ಮ. ಅಧ್ಯಯನ ಮಾಡ್ಬೇಕೆಂಬ ಆಸೆ ಮೊದ್ಲು ಬೆಳೆಸಿಕೊಂಡೆ. ಇದು ನನಗೆ ಸಮಯ ಮಾಡ್ಕೊಳ್ಳಲು ಸಹಾಯ ಮಾಡಿತು.”—ನಟಾನ್ಯ.

“ಅಧ್ಯಯನಕ್ಕಾಗಿ ಸಮಯ ನಿಗದಿ ಮಾಡ್ಲೇ ಬೇಕು ಎಂಬದರ ಮಹತ್ವ ಚಿಕ್ಕವಳಿದ್ದಾಗ ನನಗೆ ಗೊತ್ತಿರಲಿಲ್ಲ. ಈಗ ಕಲ್ತಿದ್ದೇನೆ. ಏನೇ ಆಗಲಿ ನಿಗದಿ ಮಾಡಿದ ಸಮಯಕ್ಕೆ ಅಧ್ಯಯನ ಮಾಡುವುದನ್ನು ತಪ್ಪಿಸೋದಿಲ್ಲ.”—ಯೊಲಾಂಡ.

“ಅಧ್ಯಯನವನ್ನು ಮೊದಲು ಮುಗಿಸಿ, ಆಮೇಲೆ ಮನರಂಜನೆಗೆ ಸಮಯ ಕೊಡಿ. ನಿಮಗೆ ಆಗ ಅಧ್ಯಯನದಿಂದ ಹೆಚ್ಚು ಆನಂದವೂ ಸಿಗುತ್ತದೆ, ಮನರಂಜನೆಯ ನಂತ್ರ ಮನಸ್ಸು ಚುಚ್ಚುವುದೂ ಇಲ್ಲ ಗ್ಯಾರಂಟಿ.”—ಡೈನಾ.

ನೆನಪಿಡಿ: ನೀವು ಆದ್ಯತೆಗಳನ್ನು ಇಡದಿದ್ದರೆ ನಿಮಗೆ ಏನನ್ನೂ ಸಾಧಿಸಲಿಕ್ಕಾಗುವುದಿಲ್ಲ. ಸಮಯ ಸುಮ್ಮನೆ ಹಾರಿ ಹೋಗುತ್ತದೆ. ಹಾಗಾಗಿ ಅಧ್ಯಯನಕ್ಕೆಂದು ಸಮಯ ಮಾಡಿಕೊಳ್ಳಲು ಹೆಜ್ಜೆ ತೆಗೆದುಕೊಳ್ಳಿ.—ಎಫೆಸ 5:15, 16.

“ನಾನು ಹೈಸ್ಕೂಲ್‌ ವಿದ್ಯಾರ್ಥಿ ಆಗಿರುವುದರಿಂದ ಶಾಲಾ ಕೆಲ್ಸಗಳು ಸಾಕಷ್ಟಿರ್ತವೆ. ಆದ್ರೂ ನನ್ನ ಕೆಲಸ-ಕಾರ್ಯಗಳ ಪಟ್ಟಿಯಲ್ಲಿ ವೈಯಕ್ತಿಕ ಬೈಬಲ್‌ ಅಧ್ಯಯನಕ್ಕೆ ಮೊದಲ ಆದ್ಯತೆ ಕೊಡಲು ನನ್ನಿಂದಾದ ಎಲ್ಲ ಪ್ರಯತ್ನ ಮಾಡ್ತೇನೆ.”—ಜೋರ್ಡನ್‌.

ಯೋಚಿಸಿ:

ಬೈಬಲ್‌ ಅಧ್ಯಯನಕ್ಕೆ ನೀವು ಯಾವ ಸಮಯ ನಿಗದಿ ಮಾಡುವಿರಿ?

[ಪುಟ 13ರಲ್ಲಿರುವ ಚೌಕ/ಚಿತ್ರಗಳು]

ನಿಮ್ಮ ಪ್ರಾಯದವರಿಂದಲೇ ಟಿಪ್ಸ್‌

ಜ್ಯಾಕರಿ—ನಿಮ್ಮ ಅಪ್ಪಅಮ್ಮ ಅಥವಾ ಇತರರು ಅಧ್ಯಯನ ಮಾಡೋ ವಿಷ್ಯವನ್ನೇ ನೀವು ಅಧ್ಯಯನ ಮಾಡ್ಬೇಕಾಗಿಲ್ಲ. ಅದು ನಿಮ್ಮ ವೈಯಕ್ತಿಕ ಅಧ್ಯಯನ. ಹಾಗಾಗಿ ನೀವು ಇಷ್ಟಪಡುವ ವಿಷ್ಯವನ್ನು ಆಯ್ಕೆಮಾಡಬಹುದು.

ಕೇಲಿ—ಆರಂಭದಲ್ಲಿ ಸ್ವಲ್ಪ ಹೊತ್ತು ಅಧ್ಯಯನ ಮಾಡಿ. 5 ನಿಮಿಷವಾದ್ರೂ ಪರ್ವಾಗಿಲ್ಲ, ಆದರೆ ಪ್ರತಿದಿನ ಮಾಡಿ. ಆಮೇಲೆ ಆ ಟೈಮನ್ನು ಸ್ವಲ್ಪಸ್ವಲ್ಪವಾಗಿ ಜಾಸ್ತಿ ಮಾಡಿ, 10 ನಿಮಿಷನೋ. . . 15 ನಿಮಿಷನೋ. . . ಹೋಗ್ತಾ ಹೋಗ್ತಾ ನೀವು ಸಮಯವನ್ನು ಲಕ್ಷಿಸದೆ ಅಧ್ಯಯನವನ್ನು ಖುಷಿಯಿಂದ ಮಾಡುವಿರಿ!

ಡ್ಯಾನ್ಯೆಲ—ಚಿಕ್ಕಚಿಕ್ಕ ವಿಷ್ಯಗಳೂ ಅಧ್ಯಯನದಲ್ಲಿ ಖುಷಿ ಕಾಣಲು ಸಹಾಯ ಮಾಡುತ್ತೆ. ಅಧ್ಯಯನಕ್ಕೆ ಕೂತ್ಕೊಳ್ಳುವಾಗ ಬೇರೆ ಬೇರೆ ಕಲರಿನ ಪೆನ್ನುಗಳನ್ನು ಇಟ್ಕೊಳ್ಳಿ. ಒಂದು ಸುಂದರ ನೋಟ್‌ ಬುಕ್‌ ಇಟ್ಕೊಳ್ಳಿ. ಕಂಪ್ಯೂಟರ್‌ ಇದ್ರೆ ‘ವೈಯಕ್ತಿಕ ಅಧ್ಯಯನ’ ಅಂತ ಒಂದು ಫೈಲ್‌ ಮಾಡ್ಕೊಳ್ಳಿ.

ಜೋರ್ಡನ್‌—ನನಗಿಷ್ಟವಾದ ವಿಷ್ಯವೊಂದನ್ನ ಆರಿಸಿಕೊಳ್ತೇನೆ. ಪ್ರಶಾಂತವಾದ ಸ್ಥಳದಲ್ಲಿ ಕೂರ್ತೇನೆ. ಆಗ ನನಗೆ ತುಂಬ ಹೊತ್ತು ಅಧ್ಯಯನ ಮಾಡಲಿಕ್ಕೆ ಆಗುತ್ತೆ. ತುಂಬ ಸದ್ದುಗದ್ದಲ ಇದ್ರೆ ಅಧ್ಯಯನ ಮಾಡೋದಿಕ್ಕೆ ನನ್ಗೆ ಆಗಲ್ಲ.

[ಪುಟ 12ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಕತ್ತರಿಸಿ

ಮಡಚಿ