ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕಣ್ಮಣಿಗಳ ಕಣ್ಣೀರು ಒರೆಸಿ

ಕಣ್ಮಣಿಗಳ ಕಣ್ಣೀರು ಒರೆಸಿ

ಕಣ್ಮಣಿಗಳ ಕಣ್ಣೀರು ಒರೆಸಿ

ಆತ್ಮೀಯರೊಬ್ಬರ ಸಾವಿನ ಸುದ್ದಿಯನ್ನು ದೊಡ್ಡವರಿಗೆ ಹೇಳುವುದೇ ಬಲು ಕಷ್ಟ. ಹಾಗಿರುವಾಗ ಮಕ್ಕಳಿಗೆ ಹೇಳುವುದೆಂದರೆ . . . ಊಹಿಸಿ ನೋಡಿ ಎಷ್ಟು ಕಷ್ಟವಾಗಬಹುದು.

ಮನೆಮಂದಿಯೊಬ್ಬರು ಅಥವಾ ಆತ್ಮೀಯರೊಬ್ಬರು ಸಾವನಪ್ಪಿದರೆ ಮಕ್ಕಳು ಗೊಂದಲ ಭಯಕ್ಕೀಡಾಗುವುದು ಸಾಮಾನ್ಯ. ಇಂಥ ಸಮಯದಲ್ಲಿ ಮಕ್ಕಳ ಪ್ರಶ್ನೆಗಳಿಗೆ ಉತ್ತರ ಕೊಡುವುದಾಗಲಿ, ಅವರನ್ನು ಸಮಾಧಾನ ಪಡಿಸುವುದಾಗಲಿ ಹೇಳುವಷ್ಟು ಸುಲಭವಲ್ಲ. ಅದರಲ್ಲೂ ಈಗಾಗಲೇ ದುಃಖದ ಮಡುವಿನಲ್ಲಿರುವ ಹೆತ್ತವರಿಗೆ ಇದು ತೀರಾ ಕಷ್ಟ. ಅವರಿಗೂ ಸಾಂತ್ವನದ ಹೆಗಲು ಬೇಕಲ್ಲವೇ?

ಕೆಲವು ಹೆತ್ತವರು ಮೃತಪಟ್ಟಿರುವ ವ್ಯಕ್ತಿಯ ಬಗ್ಗೆ ಹೇಳುವಾಗ, ‘ಅವರು ನಮ್ಮನ್ನೆಲ್ಲ ಬಿಟ್ಟು ಹೋದ್ರು ಕಂದಾ ಇನ್ನು ಬರುದಿಲ್ಲ’ ಅಂದು ಬಿಡುತ್ತಾರೆ. ತಮ್ಮ ಮಕ್ಕಳ ಹಿತದೃಷ್ಟಿಯಿಂದ ಹೀಗೆ ಹೇಳುತ್ತಾರಾದ್ರೂ ಅವರಿಂದ ಸತ್ಯ ಮುಚ್ಚಿಟ್ಟಂತೆ. ತಪ್ಪು ಮಾಹಿತಿ ನೀಡಿದಂತೆ. ಹಾಗಾದರೆ ಆಪ್ತರ ಸಾವಿನ ಬಗ್ಗೆ ಮಕ್ಕಳಿಗೆ ಹೇಳುವುದಾದರೂ ಹೇಗೆ?

ಯೆಹೋವನ ಸಾಕ್ಷಿಗಳಾದ ರೆನಾಟು ಮತ್ತು ಈಜಬೆಲ ದಂಪತಿಗೆ ಇಂಥದ್ದೇ ಸನ್ನಿವೇಶ ಎದುರಾಯಿತು. ಮೂರೂವರೆ ವರ್ಷದ ತಮ್ಮ ಪುತ್ರಿ ನಿಕೋಲ್‌ ಕಣ್ಮುಚ್ಚಿದಾಗ ತಮ್ಮ ಮಗನಿಗೆ ಅದರ ಅರಿವು ಮೂಡಿಸಿ ಸಂತೈಸುವುದು ಒಂದು ದೊಡ್ಡ ಸವಾಲಾಗಿತ್ತು. ಅವನಾಗ ಐದರ ಪೋರ, ಹೆಸರು ಫಿಲಿಪ್‌.

ಎಚ್ಚರ!: ನಿಕೋಲ್‌ನ ಸಾವಿನ ಕಾರಣವನ್ನು ಫಿಲಿಪ್‌ಗೆ ಹೇಗೆ ವಿವರಿಸಿದ್ರಿ?

ಈಜಬೆಲ: ಆ ವಿಷ್ಯದಲ್ಲಿ ಯಾವುದನ್ನೂ ಮುಚ್ಚಿಟ್ಟಿಲ್ಲ. ಅವನ ಮನಸ್ಸಲ್ಲೆದ್ದ ಪ್ರಶ್ನೆಗಳನ್ನೆಲ್ಲ ಕೇಳುವಂತೆ ನಾವವನಿಗೆ ಹೇಳುತ್ತಿದ್ವಿ. ಅವನು ಕೇಳಿದ ಪ್ರತಿಯೊಂದು ಪ್ರಶ್ನೆಗೂ ಅರ್ಥವಾಗೋ ಹಾಗೆ ಉತ್ತರ ಹೇಳ್ತಿದ್ವಿ. ನಮ್ಮ ಮಗಳು ತೀರಿಕೊಂಡಿದ್ದು ಬ್ಯಾಕ್ಟೀರಿಯ ಸೋಂಕಿನಿಂದ. ಆದರೆ ಅದು ಫಿಲಿಪ್‌ಗೆ ಅರ್ಥವಾಗಲಿ ಅಂತ ನಾವು ಹೀಗೆ ಹೇಳಿದ್ವಿ ‘ಒಂದು ಚಿಕ್ಕ ಕೀಟ ನಿಕೋಲ್‌ ದೇಹದೊಳಗೆ ಸೇರಿಕೊಳ್ತು. ಡಾಕ್ಟರುಗಳಿಗೆ ಅದನ್ನು ಸಾಯಿಸ್ಲಿಕ್ಕಾಗಲಿಲ್ಲ.’

ಎಚ್ಚರ!: ಸತ್ತವರ ಸ್ಥಿತಿಯ ಬಗ್ಗೆ ನಿಮ್ಮ ನಂಬಿಕೆ ಏನು ಅಂತ ಅವನಿಗೆ ಹೇಳಿದ್ರಾ?

ರೆನಾಟು: ಹೌದು ಹೇಳಿದ್ವಿ. ನಮ್ಮ ನಂಬಿಕೆಗಳ ಬಗ್ಗೆ ಮಾತಾಡಿದ್ರೆ, ಆ ನಂಬಿಕೆಗಳಿಗೆ ಬೈಬಲ್‌ ಕೊಡುವ ಆಧಾರಗಳ ಬಗ್ಗೆ ಹೇಳಿದ್ರೆ ಅವನ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಅಂತ ನಮಗೆ ಗೊತ್ತಿತ್ತು. ಸತ್ತವರು ಪಜ್ಞಾರಹಿತ ಸ್ಥಿತಿಯಲ್ಲಿದ್ದಾರೆ. ಅವರಿಗೆ ತಮ್ಮ ಸುತ್ತಮುತ್ತ ಏನು ನಡಿತಿದೆ ಎನ್ನೋದರ ಅರಿವೇ ಇರುವುದಿಲ್ಲ ಅಂತ ಬೈಬಲ್‌ ಸ್ಪಷ್ಟವಾಗಿ ಹೇಳುತ್ತೆ. (ಪ್ರಸಂಗಿ 9:5) ಅದರ ಬಗ್ಗೆ ಅವನು ತಿಳುಕೊಂಡ್ರೆ ಒಳ್ಳೇದು ಅಂತ ಯೋಚಿಸಿದ್ವಿ. ಆಗ ಅವನಿಗೂ ಸತ್ತವರ ಭಯ ಇರಲ್ಲ, ರಾತ್ರಿ ಒಬ್ಬನೇ ಇದ್ರೂ ಭಯ ಆಗಲ್ಲ.

ಈಜಬೆಲ: ದೇವರು ಈ ಭೂಮಿಯನ್ನು ಸುಂದರ ಉದ್ಯಾನ ಮಾಡಿ ತೀರಿಹೋದ ಜನರನ್ನು ಮತ್ತೆ ಎಬ್ಬಿಸ್ತಾನೆ ಅಂತನೂ ಹೇಳುತ್ತೆ ಬೈಬಲ್‌. ಅದನ್ನು ನಾವು ನಂಬ್ತೇವೆ. ಅದು ನಮ್ಮ ಫಿಲಿಪ್‌ಗೂ ಸಮಾಧಾನ ನೀಡುತ್ತೆ ಅಂತ ನಮಗೆ ಅನಿಸ್ತು. ಹಾಗಾಗಿ ಅದರ ಬಗ್ಗೆ ಹೇಳಿದ್ವಿ. ಯೇಸು ಭೂಮಿ ಮೇಲಿದ್ದಾಗ ಯಾಯೀರನ 12 ವರ್ಷದ ಮಗಳನ್ನು ಮತ್ತೆ ಜೀವಕ್ಕೆ ತಂದ್ದದರ ಬಗ್ಗೆ ಕೂಡ ಹೇಳಿದ್ವಿ. ದೇವರು ನಮ್ಮ ನಿಕೋಲನ್ನು ಸಹ ಜೀವಕ್ಕೆ ತರುತ್ತಾನೆ ಅಂತ ವಿವರಿಸಿದ್ವಿ.—ಮಾರ್ಕ 5:22-24, 35-42; ಯೋಹಾನ 5:28, 29.

ಎಚ್ಚರ!: ಈ ಎಲ್ಲ ವಿಷ್ಯಗಳು ಫಿಲಿಪ್‌ಗೆ ಅರ್ಥ ಆಗಿರಬಹುದಾ?

ರೆನಾಟು: ಹೌದು, ಖಂಡಿತ ಅರ್ಥ ಆಗಿರುತ್ತೆ. ಹೇಳುವಾಗ ಸರಿಯಾಗಿ, ಸರಳವಾಗಿ, ಸ್ಪಷ್ಟವಾಗಿ, ಏನನ್ನೂ ಮುಚ್ಚಿಡದೇ ಹೇಳಿದ್ರೆ ಮಕ್ಕಳಿಗೆ ಚೆನ್ನಾಗಿ ಅರ್ಥ ಆಗುತ್ತೆ. ಸಾವು ಅನ್ನೋದು ವಾಸ್ತವ. ಅದರಲ್ಲಿ ಮುಚ್ಚಿಡೋದು ಏನೂ ಇಲ್ಲ. ಸದ್ಯದ ಜೀವನದಲ್ಲಿ ಅದನ್ನು ಒಪ್ಪಿಕೊಳ್ಳಲೇಬೇಕು. ಹಾಗಾಗಿ ನಮ್ಮ ಆಪ್ತರು ತೀರಿಹೋದಾಗ ಅದನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಹೆತ್ತವರು ಸಹಾಯ ಮಾಡಬೇಕು. ನಮ್ಮ ಕೊನೇ ಮಗ ವಿನಿಷಿಯಸ್‌ಗೂ ಅರ್ಥ ಆಗೋ ಹಾಗೆ ಹೇಳ್ಕೊಟ್ವಿ.  *

ಎಚ್ಚರ!: ಶವಸಂಸ್ಕಾರಕ್ಕೆ ಫಿಲಿಪ್‌ ಅನ್ನು ನಿಮ್ಮ ಜತೆ ಕರೆದುಕೊಂಡು ಹೋಗಿದ್ರಾ?

ರೆನಾಟು: ಆಗೋ ಒಳಿತು ಕೆಡುಕುಗಳನ್ನು ಪರಿಶೀಲಿಸಿದ್ವಿ. ಚಿಕ್ಕ ಮಕ್ಕಳ ಮೇಲೆ ಇಂಥ ವಿಷ್ಯಗಳು ತುಂಬ ಪ್ರಭಾವ ಬೀರೋದರಿಂದ ಅವನನ್ನು ನಮ್ಮ ಜತೆ ಕರೆದುಕೊಂಡು ಹೋಗ್ಲಿಲ್ಲ. ಕೆಲವು ಹೆತ್ತವರು ತಮ್ಮ ಮಕ್ಕಳ ಸಾಮರ್ಥ್ಯ, ಮಾನಸಿಕ ಸ್ಥೈರ್ಯ ಗಮನಿಸಿ ಕರಕೊಂಡು ಹೋಗ್ತಾರೆ. ಪ್ರತಿಯೊಂದು ಮಗುವಿನ ಮನಸ್ಥಿತಿ ಭಿನ್ನವಾಗಿರುತ್ತೆ ಅಲ್ಲ. ಮಕ್ಕಳನ್ನು ಶವಸಂಸ್ಕಾರಕ್ಕೆ ಕರೆದುಕೊಂಡು ಹೋಗುವ ಹಾಗಿದ್ದರೆ, ಅಲ್ಲಿ ಏನೇನು ನಡಿಯುತ್ತೆ ಅಂತ ಮುಂಚೆಯೇ ಹೇಳಿ ವಿವರಿಸುವುದು ಬಹು ಮುಖ್ಯ.

ಎಚ್ಚರ!: ನಿಕೋಲ್‌ ನಿಮ್ಮನ್ನು ಅಗಲಿದಾಗ ಆ ನಿಮ್ಮ ದುಃಖವನ್ನು ಮಗನ ಮುಂದೆ ತೋರಿಸ್ಕೊಂಡ್ರಾ? ಅವನ ಮುಂದೆ ಅತ್ರಾ?

ಈಜಬೆಲ: ನಮ್ಮ ಭಾವನೆಗಳನ್ನು ಅವನಿಂದ ಮುಚ್ಚಿಡಲಿಲ್ಲ. ತನ್ನ ಗೆಳೆಯ ಸತ್ತಾಗ ಯೇಸು ಕ್ರಿಸ್ತನೇ “ಕಣ್ಣೀರು ಸುರಿಸಿದ” ಅಂದಮೇಲೆ ನಾವ್ಯಾಕೆ ಅಳಬಾರದು? (ಯೋಹಾನ 11:35, 36) ನಾವು ಅಳುವುದನ್ನು ಫಿಲಿಪ್‌ ನೋಡಿದರೆ ಒಳ್ಳೇದೇ. ಅವನಿಗೂ ಗೊತ್ತಾಗುತ್ತೆ ಅಳುವುದು ತಪ್ಪಲ್ಲ ಅಂತ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸೋ ವಿಧ ಅದು. ಭಾವನೆಗಳನ್ನು ಒಳಗೆ ಬಚ್ಚಿಡದೆ ತಾನೂ ಅದನ್ನು ಹೊರಹಾಕಬಹುದು ಎಂಬದನ್ನು ಫಿಲಿಪ್‌ ಗ್ರಹಿಸಬೇಕು ಅನ್ನೋದೇ ನಮ್ಮ ಉದ್ದೇಶವಾಗಿತ್ತು.

ರೆನಾಟು: ಕುಟುಂಬದಲ್ಲಿ ದುರಂತ ಸಂಭವಿಸಿದಾಗ ಮಕ್ಕಳಿಗೆ ಒಂದು ರೀತಿಯ ಅಭದ್ರ ಅನಿಸಿಕೆಯಾಗುತ್ತದೆ. ಅದನ್ನು ಅವರು ನಮ್ಮ ಬಳಿ ಹೇಳಿಕೊಳ್ಳಬೇಕಾದ್ರೆ ನಾವು ಮೊದಲು ನಮ್ಮ ಭಾವನೆ, ದುಃಖನ ತೋರಿಸ್ಬೇಕು. ಹಾಗೆ ಮಕ್ಕಳು ಹೇಳಿಕೊಳ್ಳುವಾಗ ನಾವು ತಾಳ್ಮೆಯಿಂದ ಕೇಳಬೇಕು. ಸಮಾಧಾನ ಮಾಡಬೇಕು. ಅವರಲ್ಲಿರೋ ಭಯನ ಓಡಿಸಬೇಕು. ಆ ಜವಾಬ್ದಾರಿ ನಮ್ಮದು.

ಎಚ್ಚರ!: ಬೇರೆಯವರು ನಿಮಗೆ ಸಹಾಯ ಮಾಡಿದ್ರಾ?

ರೆನಾಟು: ಕ್ರೈಸ್ತ ಸಭೆಯಲ್ಲಿರುವವರು ನಮಗೆ ಮಾಡಿರೋ ಸಹಾಯವನ್ನು ಮರೆಯಕ್ಕೇ ಆಗಲ್ಲ. ನಮ್ಮನ್ನು ಬಂದು ನೋಡ್ಕೊಂಡು ಹೋಗ್ತಿದ್ರು. ಫೋನ್‌ ಮಾಡ್ತಿದ್ರು. ಸಾಂತ್ವನದ ಮಾತುಗಳಿರುವ ಕಾರ್ಡ್‌ ಕೊಡ್ತಿದ್ರು. ಎಲ್ಲರೂ ನಮ್ಮನ್ನು ಎಷ್ಟು ಪ್ರೀತಿಸ್ತಾರೆ, ಕಳಕಳಿ ತೋರಿಸ್ತಾರೆ ಅಂತ ಫಿಲಿಪ್‌ಗೂ ಅರ್ಥವಾಯಿತು.

ಈಜಬೆಲ: ನಮ್ಮ ಕುಟುಂಬದವರು ಕೂಡ ತುಂಬ ಸಹಾಯ ಮಾಡಿದ್ದಾರೆ. ನಿಕೋಲ್‌ ನಮ್ಮನ್ನು ಅಗಲಿದಾಗಿಂದ ಪ್ರತಿ ಬೆಳಗ್ಗೆ ನಮ್ಮ ತಂದೆ ನಮ್ಮ ಮನೆಗೆ ಬರ್ತಿದ್ರು. ನಮ್ಮೊಟ್ಟಿಗೆ ಸಮಯ ಕಳೀತಿದ್ರು, ಉಪಹಾರ ಮಾಡ್ತಿದ್ರು. ಅಕ್ಕರೆಯಿಂದ ಸಾಂತ್ವನ ತುಂಬುವ ಪರಿ ಇದು. ಅಜ್ಜನ ಸಹಚರ್ಯ ಫಿಲಿಪ್‌ಗೆ ಖುಷಿ ಕೊಡ್ತಿತ್ತು.

ರೆನಾಟು: ಕ್ರೈಸ್ತ ಕೂಟಗಳಿಂದ ನಮಗೆ ಸಿಗುತ್ತಿದ್ದ ಸಾಂತ್ವನ, ಸಹಾಯವನ್ನು ವರ್ಣಿಸಲು ನಮ್ಮಲ್ಲಿ ಪದಗಳೇ ಇಲ್ಲ. ಕೂಟಗಳಲ್ಲಿ ಕೂತಿರುವಾಗ ನಿಕೋಲ್‌ನ ಸವಿನೆನಪುಗಳು ನಮ್ಮನ್ನು ಕಾಡುತಿತ್ತು. ಅಲ್ಲೇ ಕೂತು ಅಳುತ್ತಿದ್ವಿ. ಹಾಗಿದ್ರೂ ನಾವು ಕೂಟಗಳನ್ನು ಎಂದಿಗೂ ತಪ್ಪಿಸುತ್ತಿರಲಿಲ್ಲ. ಫಿಲಿಪ್‌ಗೋಸ್ಕರವಾದ್ರೂ ನಾವು ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಲೇಬೇಕಿತ್ತು. (g12-E 07)

[ಪಾದಟಿಪ್ಪಣಿ]

^ ಹೆಚ್ಚಿನ ಮಾಹಿತಿಗಾಗಿ, ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ ಎಂಬ ಕಿರುಹೊತ್ತಗೆಯನ್ನು ನೋಡಿ. ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.

[ಪುಟ 31ರಲ್ಲಿರುವ ಚೌಕ/ಚಿತ್ರಗಳು]

ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಪುಸ್ತಕಗಳ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ. ತಮ್ಮ ಪ್ರಿಯರನ್ನು ಮರಣದಲ್ಲಿ ಕಳಕೊಂಡವರಿಗೆ ಈ ಪುಸ್ತಕಗಳು ಸಾಂತ್ವನ ನೀಡುವವು.

ವಯಸ್ಕರಿಗೆ:

ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?

ಅಧ್ಯಾಯ 6: ಮೃತಜನರು ಎಲ್ಲಿದ್ದಾರೆ?

ಅಧ್ಯಾಯ 7: ನಿಮ್ಮ ಮೃತ ಪ್ರಿಯ ಜನರಿಗಿರುವ ನಿಜ ನಿರೀಕ್ಷೆ

ಚಿಕ್ಕ ಮಕ್ಕಳಿಗೆ:

ಬೈಬಲ್‌ ಕಥೆಗಳ ನನ್ನ ಪುಸ್ತಕ

ಕಥೆ 92: ಯೇಸು ಸತ್ತವರನ್ನು ಎಬ್ಬಿಸುತ್ತಾನೆ

10-12 ವಯಸ್ಸಿನವರಿಗೆ:

ಮಹಾ ಬೋಧಕನಿಂದ ಕಲಿಯೋಣ

ಅಧ್ಯಾಯ 34: ಸತ್ತ ಮೇಲೆ ಏನಾಗುತ್ತದೆ?

ಅಧ್ಯಾಯ 35: ಮೃತರು ಬದುಕಸಾಧ್ಯವಿದೆ!

ಅಧ್ಯಾಯ 36: ಯಾರಿಗೆ ಪುನರುತ್ಥಾನವಾಗುವುದು? ಅವರು ಎಲ್ಲಿ ಜೀವಿಸುವರು?

ಹದಿಹರೆಯದವರಿಗೆ

Questions young people ask​—answers that work, VOLUME 1

ಅಧ್ಯಾಯ 16: ನಾನು ದುಃಖಿಸುವಂತ ರೀತಿಯಲ್ಲಿ ದುಃಖಿಸುವುದು ಸಾಮಾನ್ಯವಾಗಿದೆಯೊ?

[ಪುಟ 32ರಲ್ಲಿರುವ ಚೌಕ/ಚಿತ್ರಗಳು]

ಹೇಗೆ ಸಹಾಯ ಮಾಡೋದು?

● ಮರಣದ ಬಗ್ಗೆ ಪ್ರಶ್ನೆಗಳನ್ನು ಕೇಳಲು ನಿಮ್ಮ ಮಕ್ಕಳನ್ನು ಪ್ರೋತ್ಸಾಹಿಸಿ. ಅವರು ಕೇಳುವಾಗ ಸ್ಪಂದಿಸಿ.

● ಮಕ್ಕಳಿಗೆ ತಪ್ಪು ಕಲ್ಪನೆ ಬರುವಂತ ಅಥವಾ ಅರ್ಥವಾಗದ ಪದಗಳನ್ನು ಉಪಯೋಗಿಸಬೇಡಿ. ಉದಾ: “ಕಂದಾ ಅವರು ನಮ್ಮನ್ನು ಬಿಟ್ಟು ಹೋದ್ರು” ಅಥವಾ “ಅವರೆಲ್ಲೋ ದೂರ ಹೋಗಿದ್ದಾರೆ” ಇತ್ಯಾದಿ.

● ಸಾವಿನ ಬಗ್ಗೆ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಹೇಳಿ. ಕೆಲವು ಹೆತ್ತವರು ಹೀಗೆ ಹೇಳ್ತಾರೆ, “ಕಂದಾ ಅವರ ದೇಹ ಕೆಲಸಮಾಡುವುದನ್ನು ನಿಲ್ಲಿಸಿದೆ.”

● ಶವಸಂಸ್ಕಾರದಲ್ಲಿ ಏನೆಲ್ಲ ಮಾಡ್ತಾರೆ ಅಂತ ತಿಳಿಸಿ. ಸತ್ತವರಿಗೆ ಏನನ್ನೂ ನೋಡಲಾಗುವುದಿಲ್ಲ, ಕೇಳಿಸಿಕೊಳ್ಳಲಾಗುವುದಿಲ್ಲ ಎಂದು ವಿವರಿಸಿ.

● ನಿಮ್ಮ ಭಾವನೆಗಳನ್ನು ಮುಚ್ಚಿಡಬೇಡಿ. ದುಃಖಿಸುವುದು ಸ್ವಾಭಾವಿಕ ಎಂದು ಆಗ ನಿಮ್ಮ ಮಗು ಗ್ರಹಿಸುವುದು.

● ನೆನಪಿಡಿ, ಹೀಗೆಯೇ ದುಃಖಿಸಬೇಕೆಂದು ಯಾವುದೇ ನಿಯಮವಿಲ್ಲ. ಪ್ರತಿಯೊಂದು ಮಗುವಿನ ಸನ್ನಿವೇಶ ಬೇರೆ ಬೇರೆಯಾಗಿರುತ್ತೆ.

[ಕೃ]

ಮೂಲ: www.kidshealth.org

[ಪುಟ 32ರಲ್ಲಿರುವ ಚಿತ್ರ]

ಎಡದಿಂದ: ಫಿಲಿಪ್‌, ರೆನಾಟು, ಈಜಬೆಲ, ವಿನಿಷಿಯಸ್‌