ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವಿಬ್ರು ಬರೀ ಸ್ನೇಹಿತರು ಮಾತ್ರನಾ —ಅಥವಾ. . . ? ಭಾಗ 2

ನಾವಿಬ್ರು ಬರೀ ಸ್ನೇಹಿತರು ಮಾತ್ರನಾ —ಅಥವಾ. . . ? ಭಾಗ 2

ಯುವಜನರ ಪ್ರಶ್ನೆ

ನಾವಿಬ್ರು ಬರೀ ಸ್ನೇಹಿತರು ಮಾತ್ರನಾ —ಅಥವಾ. . . ? ಭಾಗ 2

ನಮ್ಮ ಹಿಂದಿನ ಲೇಖನದಲ್ಲಿ, ಜೀವನದ ಎರಡು ಸತ್ಯಾಂಶಗಳ ಬಗ್ಗೆ ಕಲಿತೆವು.

● ಮದುವೆಯಾಗೋ ಯೋಚನೆ ಇಲ್ಲದೆ ಸುಮ್ಮನೆ ಭಾವನೆಗಳನ್ನು ಬೆಳೆಸಿಕೊಂಡರೆ ಅದರಿಂದ ಇಬ್ಬರಲ್ಲಿ ಒಬ್ಬರಿಗಾದರೂ ನೋವಾಗುವುದು ಖಂಡಿತ.—ಜ್ಞಾನೋಕ್ತಿ 6:27.

● ನಿಮಗೆ ಮದುವೆಯಾಗುವ ಯೋಚನೆ ಇಲ್ಲದೆ, ಇಲ್ಲ-ಸಲ್ಲದ ಭಾವನೆಗಳನ್ನು ಬೆಳೆಸಿಕೊಂಡರೆ, ಈಗಿರುವ ಒಳ್ಳೇ ಸ್ನೇಹವನ್ನೂ ಕಳೆದುಕೊಳ್ಳುತ್ತೀರಿ.—ಜ್ಞಾನೋಕ್ತಿ 18:24.

ಈ ಲೇಖನದಲ್ಲಿ, ನಾವು ನೋಡುವ ಅಂಶಗಳು:

● ಎಚ್ಚರವಹಿಸದೆ ಭಾವನೆ ಬೆಸೆಯುವಂತೆ ಬಿಟ್ಟರೆ ಆಗುವ ಪರಿಣಾಮದ ಬಗ್ಗೆ ಮೂರನೇ ಸತ್ಯಾಂಶ

● ನಿಮ್ಮ ಗೆಳೆತನ ಮೇರೆ ದಾಟುತ್ತಿದೆ ಅಂತ ಹೇಗೆ ಕಂಡು ಹಿಡಿತಿರಾ?

ಜೀವನದ ಸತ್ಯಾಂಶ: ಮದುವೆಯಾಗೋ ಯೋಚನೆ ಇಲ್ಲದೆ ಸುಮ್ಮನೆ ಇಲ್ಲ-ಸಲ್ಲದ ಭಾವನೆಗಳನ್ನು ಬೆಳೆಸಿಕೊಂಡರೆ ನಿಮ್ಮ ಹೆಸರನ್ನು ನೀವೇ ಹಾಳುಮಾಡಿಕೊಳ್ಳುತ್ತೀರಿ. ಮೈತ್ರಿ * ಹೇಳುವುದು: “ಕೆಲವು ಹುಡುಗರಿಗೆ ಅನೇಕ ಗರ್ಲ್‌ಫ್ರೆಂಡ್ಸ್‌ ಇದ್ದಾರೆ. ಅವರದ್ದೆಲ್ಲ ಬರೀ ಆಟ ಅಷ್ಟೆ. ಹುಡುಗಿಯರು ಮಾತ್ರ ಅವರನ್ನು ನಂಬಿ ಮೋಸ ಹೋಗುತ್ತಾರೆ.”

ಇದರ ಬಗ್ಗೆ ಯೋಚಿಸಿ:

● ನೀವು ಹುಡುಗ ಆಗಿರ್ಲಿ ಹುಡುಗಿ ಆಗಿರ್ಲಿ, ವಿರುದ್ಧ ಲಿಂಗದವರೊಂದಿಗೆ ಮಿತಿಮೀರಿ ಹತ್ತಿರವಾಗೋದು ನಿಮ್ಮ ಹೆಸರನ್ನು ಹಾಳುಮಾಡುತ್ತೆ. ಹೇಗೆ?

“ವಿರುದ್ಧ ಲಿಂಗದವರಿಗೆ ಮೆಸೆಜ್‌ಮಾಡುವುದೇ ದೊಡ್ಡ ತಪ್ಪು. ಮೊದಮೊದಲು ಏನಾದ್ರೂ ಅಗತ್ಯವಿರುವಾಗ ಬರೀ ಒಬ್ಬರಿಗೆ ಮೆಸೆಜ್‌ ಮಾಡ್ತಾ ಇರಬಹುದು. ಆದರೆ ಹೋಗ್ತಾ ಹೋಗ್ತಾ ತುಂಬ ಜನರಿಗೆ ಒಂದರ ಹಿಂದೆ ಒಂದು ಮೆಸೆಜ್‌ ಮಾಡುವುದೇ ಚಾಳಿಯಾಗಬಹುದು. ನಿಮಗೇ ಗೊತ್ತಿಲ್ದೇ ಮೂರು-ಮೂರು ಹುಡುಗರ ಜೊತೆ ಡೇಟಿಂಗ್‌ ಮಾಡಕ್ಕೆ ಶುರು ಮಾಡ್ತಿರಿ. ಅವರಲ್ಲಿ ಒಬ್ಬೊಬ್ಬರು ನೆನೆಸ್ತಾರೆ, ತಾನು ಮಾತ್ರ ನಿಮಗೆ ತುಂಬ ಸ್ಪೆಷಲ್‌ ಅಂತ. ಆದರೆ ವಿಷಯ ಬಯಲಾಗಿ ನೀವಾಡ್ತಿರೊದೆಲ್ಲ ದೊಡ್ಡ ನಾಟಕ ಅಂತ ಗೊತ್ತಾದಾಗ ಅವರ ಮನಸ್ಸಿಗೆ ತುಂಬ ನೋವಾಗುತ್ತೆ. ‘ಚೆಲ್ಲಾಟ ಆಡುವವಳು’ ಎಂಬ ಹಣೆ ಪಟ್ಟಿಯೂ ನಿಮಗೆ ಬರುತ್ತೆ.”—ಲಕ್ಷ್ಯ.

ಬೈಬಲ್‌ ಹೇಳುವುದು: “ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.”—ಜ್ಞಾನೋಕ್ತಿ 20:11.

ಸಾರಾಂಶ: ವಿರುದ್ಧ ಲಿಂಗದವರೊಂದಿಗೆ ಬೆರೆತ ಮಾತ್ರಕ್ಕೆ ಅದು ತಪ್ಪಲ್ಲ. ಆದರೆ ಅದನ್ನೇ ಮಿತಿಮೀರಿ ಮಾಡಿದ್ರೆ ನಿಮಗೂ ನೋವು, ಒಳ್ಳೇ ಸ್ನೇಹನೂ ಹಾಳು, ನಿಮ್ಮ ಹೆಸರಿಗೂ ಮಸಿ.

ಎಲ್ಲೆ ಮೀರಿದ್ದೀರಿ ಅಂತ ಹೇಗೆ ಕಂಡುಹಿಡಿಯೋದು? ‘ವಿರುದ್ಧ ಲಿಂಗದ ನಿಮ್ಮ ಸ್ನೇಹಿತ/ಸ್ನೇಹಿತೆ ಯಾರಲ್ಲೂ ಹೇಳಿಕೊಳ್ಳಲಾರದ ವಿಷಯವನ್ನು ನಿಮ್ಮೊಂದಿಗೆ ಮಾತ್ರ ಹೇಳುವಷ್ಟು ಅತ್ಯಾಪ್ತ ಮಿತ್ರ ಆಗಿದ್ದಾನಾ/ಆಗಿದ್ದಾಳಾ?’ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿ. ಎರಿನ್‌ ಹೇಳ್ತಾಳೆ: “ನೀವೊಬ್ಬ ಹುಡುಗನ ಹತ್ತಿರ ಬರಿ ಸ್ನೇಹಿತರಾಗಿ ಮಾತ್ರ ಇದ್ರೆ, ದಿನದಲ್ಲಿ ಮೊದಲು ಮಾತಾಡ್ಬೇಕು ಅಂತ ಅನ್ನಿಸೊ ವ್ಯಕ್ತಿ ಅವನಾಗಿರಬಾರದು, ಯಾವುದೇ ವಿಷ್ಯ ಆಗಿರ್ಲಿ ಅವನಿಗೆ ಮೊದಲು ಹೇಳ್ಬೇಕು ಅಂತ ಅನ್ನಿಸಬಾರ್ದು. ನಿಮ್ಮ ಭಾವನೆಗಳನ್ನು ತೊಡಿಕೊಳ್ಳಬೇಕು ಅನಿಸಿದಾಗ, ಯಾರಾದ್ರೂ ಮನಸ್ಸಿಗೆ ಸಮಾಧಾನ ಆಗೋ ರೀತಿ ಮಾತಾಡಬೇಕು ಅಂತ ಅನ್ನಿಸಿದಾಗಲಂತೂ ಅವನತ್ರ ಹೇಳಿಕೊಳ್ಳೋಣ ಅಂತ ಅನಿಸಲೇ ಬಾರದು.”

ಇದರ ಬಗ್ಗೆ ಯೋಚಿಸಿ:

● ವಿರುದ್ಧ ಲಿಂಗದವರನ್ನು ಅತ್ಯಾಪ್ತ ಸ್ನೇಹಿತರನ್ನಾಗಿ ಮಾಡಿಕೊಳ್ಳಲು ಯಾಕಷ್ಟು ಬಲವಾದ ಬಯಕೆ? ಆದರೆ ಅದರಿಂದಾಗುವ ಅಪಾಯಗಳೇನು?

“ನನಗೆ ಗೊತ್ತಿರೊ ಹುಡುಗರೆಲ್ಲ ನನ್ನ ಹತ್ತಿರದ ಸ್ನೇಹಿತರೇನಲ್ಲ. ನನ್ನ ಸ್ನೇಹಿತೆಯರ ಹತ್ರ ಮಾತಾಡುವ ಹಾಗೆ ಅವರ ಜೊತೆ ಫೋನಲ್ಲಿ ಗಂಟೆಗಟ್ಲೆ ಮಾತಾಡಲ್ಲ. ಕೆಲವೊಂದು ವಿಷಯದ ಬಗ್ಗೆಯಂತೂ ನಾನು ಅವರತ್ರ ಮಾತಾಡುವುದೇ ಇಲ್ಲ.”—ರಿತು.

ಬೈಬಲ್‌ ಹೇಳುವುದು: “ಬಾಯನ್ನು ಕಾಯುವವನು ಜೀವವನ್ನು ಕಾಯುತ್ತಾನೆ; ತುಟಿಗಳನ್ನು ತೆರೆದುಬಿಡುವವನು ನಾಶವಾಗುವನು.”—ಜ್ಞಾನೋಕ್ತಿ 13:3.

ಇದನ್ನು ಪರಿಗಣಿಸಿ: ನಮ್ಮ ಬಗ್ಗೆ ವಿರುದ್ಧ ಲಿಂಗದವರೊಂದಿಗೆ ಅಗತ್ಯಕ್ಕಿಂತ ಹೆಚ್ಚು ಹೇಳಿಕೊಳ್ಳೋದು ಯಾಕೆ ತಪ್ಪು? ನಿಮ್ಮ ಸ್ನೇಹ ದಿನದಿಂದ ದಿನಕ್ಕೆ ಮಾಸಿಹೋದ್ರೆ? ‘ಯಾಕಾದ್ರೂ ಎಲ್ಲಾ ವಿಷ್ಯ ಹೇಳಿದ್ನೋ’ ಅಂತ ನಂತರ ವಿಷಾದಿಸ್ತೀರಾ?

ಅನಿಶಾ ಹೇಳೋದನ್ನ ಕೇಳಿ: “ಒಬ್ಬ ವ್ಯಕ್ತಿ ವಿರುದ್ಧ ಲಿಂಗದವರು ಎಂದ ಮಾತ್ರಕ್ಕೆ ಅವರನ್ನು ದೂರ ಇಡುವುದು ಒಳ್ಳೇದಲ್ಲ. ಅದೇ ಸಮಯದಲ್ಲಿ, ಸ್ನೇಹಕ್ಕಿಂತ ಜಾಸ್ತಿ ನಿಮ್ಮಿಬ್ಬರ ಮಧ್ಯೆ ಇರುವಾಗ ಅದನ್ನು ಮರೆಮಾಚಿ ನಿಮ್ಮನ್ನು ನೀವೇ ಮೋಸಮಾಡ್ಕೋ ಬೇಡಿ. ಭಾವನೆಗಳನ್ನು ಹತೋಟಿಯಲ್ಲಿಡಿ. ಆಗ ಮಾಸದ ನೋವಿನ ಗೆರೆ ನಿಮ್ಮದಾಗದು.” (g12-E 07)

“ಯುವಜನರ ಪ್ರಶ್ನೆ” ಲೇಖನಮಾಲೆಯ ಹೆಚ್ಚಿನ ಲೇಖನಗಳು www.pr418.com ವೆಬ್‌ ಸೈಟ್‌ನಲ್ಲಿವೆ

[ಪಾದಟಿಪ್ಪಣಿ]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 25ರಲ್ಲಿರುವ ಚೌಕ]

ನಿಜ ಕಥೆ: “ನನಗೊಬ್ಬ ಒಳ್ಳೇ ಸ್ನೇಹಿತ ಇದ್ದ. ನಮ್ಮ ಸ್ನೇಹ ತುಂಬ ಗಟ್ಟಿಯಾಗಿತ್ತು ಸಹ. ಆದರೆ ಸಮಯ ಕಳೆದ ಹಾಗೆ ನಮ್ಮಿಬ್ಬರ ಮಾತುಕತೆ ತುಂಬ ಹೊತ್ತು ನಡಿತಾ ಇತ್ತು. ಯಾರಲ್ಲೂ ಹೇಳಿಕೊಳ್ಳದ ವಿಷ್ಯವನ್ನು ಮಾತಾಡುತ್ತಿದ್ದೆವು. ಅವನು ತನ್ನೆಲ್ಲಾ ಚಿಂತೆ, ಖಾಸಗಿ ವಿಷ್ಯಗಳನ್ನು ನನತ್ರ ಹೇಳಿಕೊಳ್ತಿದ್ದ. ಆಗ ನಾವೆಷ್ಟು ಹತ್ತಿರವಾಗ್ತಾ ಇದ್ದೇವೆ ಅಂತ ಅರ್ಥವಾಯ್ತು. ಒಂದಿನ ನನಗೊಂದು ಇಮೇಲ್‌ ಕಳಿಸಿದ. ನನ್ನನ್ನು ಅವನು ತುಂಬ ಇಷ್ಟ ಪಡ್ತಾಯಿದ್ದಾನೆ ಅಂತ ಅದರಲ್ಲಿತ್ತು. ಅದನ್ನು ಓದಿ ನನಗೇನು ಹೇಳ್ಬೇಕೊ ಗೊತ್ತಾಗಲಿಲ್ಲ. ಒಳಗೊಳಗೆ ಒಂತರ ಖುಷಿ ಅನಿಸ್ತಿತ್ತು. ಆದರೆ ಇನ್ನೊಂದು ಕಡೆ ಭಯನೂ ಆಯ್ತು. ಖಂಡಿತ ಬರಿ ಸ್ನೇಹಿತರಾಗಿಯೇ ಇನ್ಮುಂದೆ ಇರಕ್ಕಾಗಲ್ಲ ಅಂತ ನನಗೆ ಗೊತ್ತಾಯ್ತು. ಯಾಕೆಂದ್ರೆ ಅವನ ಭಾವನೆ ಸ್ನೇಹಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿತ್ತು. ನಾವಿಬ್ರು ಇನ್ನೂ ಮದುವೆ ವಯಸ್ಸಿಗೆ ಬಂದಿಲ್ಲ ಅಂತ ಹೇಳೋಣ ಅಂದ್ರೆ ಅವನಿಗೆ ತುಂಬ ನೋವಾಗುತ್ತೆ ಅಂತನೂ ಗೊತ್ತಿತ್ತು. ಅದಕ್ಕೆ ನನ್ನ ಹೆತ್ತವರತ್ರ ಈ ವಿಷಯದ ಬಗ್ಗೆ ಮಾತಾಡ್ದೆ. ನಮ್ಮಿಬ್ಬರ ಗೆಳೆತನಕ್ಕೆ ಇತಿಮಿತಿಗಳನ್ನು ಇಟ್ಟುಕೊಳ್ಳುವುದು ಎಷ್ಟು ಪ್ರಾಮುಖ್ಯ ಅಂತ ಅವರು ಮನಗಾಣಿಸಿದ್ರು. ನನಗಾದ ಅನುಭವದಿಂದ ಪಾಠ ಕಲಿತೆ. ಜೀವನದ ಕೆಲವು ಘಟನೆಗಳು ಹೇಗೆ ಮುಗ್ಧ ಮನಸ್ಸನ್ನು ಚಿಟಕಿ ಹೊಡೆಯುವಷ್ಟರಲ್ಲಿ ಬದಲಾಯಿಸುತ್ತೆ ಅಂತ ಸ್ವತಃ ಅನುಭವಿಸಿದೆ. ಅವತ್ತಿನಿಂದ ವಿರುದ್ಧ ಲಿಂಗದವರೊಂದಿಗೆ ಬೆರೆಯುವಾಗ, ಅದರಲ್ಲೂ ಮೆಸೆಜ್‌ ಮಾಡ್ವಾಗ ತುಂಬ ಜಾಗ್ರತೆ ವಹಿಸ್ತೇನೆ. ಇಬ್ಬಿಬ್ಬರಾಗಿ ಓಡಾಡೋದಕ್ಕಿಂತ ಗುಂಪಾಗಿ ಸ್ನೇಹಿತರೊಂದಿಗೆ ಬೆರೆಯಲು ಇದು ಸಹಾಯ ಮಾಡಿದೆ. ಹೀಗೆ ಮಾಡ್ವಾಗ ನಮ್ಮ ಮಾತುಕತೆ ತುಂಬ ವೈಯಕ್ತಿಕವಾಗಿಯೂ ಇರಲ್ಲ. ನಮ್ಮ ಸ್ನೇಹ ಸಂಬಂಧ ಅಗತ್ಯಕ್ಕಿಂತ ಹೆಚ್ಚು ಆಳವನ್ನೂ ತಲುಪಲ್ಲ.”—ಎಲಿನಾ.

[ಪುಟ 26ರಲ್ಲಿರುವ ಚೌಕ]

ನಿಮ್ಮ ಹೆತ್ತವರನ್ನು ಕೇಳಿನೋಡಿ

ಈ ಲೇಖನದಲ್ಲಿ “ಇದರ ಬಗ್ಗೆ ಯೋಚಿಸಿ” ಎಂಬ ಭಾಗದಲ್ಲಿ ಕೊಡಲಾಗಿರುವ ಪ್ರಶ್ನೆಗಳ ಬಗ್ಗೆ ನಿಮ್ಮ ಹೆತ್ತವರ ಅನಿಸಿಕೆಗಳನ್ನು ಕೇಳಿ. ಅವರ ಅಭಿಪ್ರಾಯ ನಿಮ್ಮದಕ್ಕಿಂತ ಬೇರೆ ಇದೆಯಾ? ಹೌದಾದರೆ, ಹೇಗೆ? ಅವರ ಅನಿಸಿಕೆಗಳಲ್ಲಿ ಯಾವ ಒಳಿತನ್ನು ನೀವು ಗ್ರಹಿಸಿದ್ರಿ?—ಜ್ಞಾನೋಕ್ತಿ 1:8.

[ಪುಟ 26ರಲ್ಲಿರುವ ಚೌಕ/ಚಿತ್ರ]

ನಿಮ್ಮ ಸಮಪ್ರಾಯದವರು ಏನನ್ನುತ್ತಾರೆ?

ಆ್ಯಂಡ್ರೆ —ಒಂದು ಹುಡುಗಿ ಜೊತೆ ಎಷ್ಟು ಹೆಚ್ಚು ಸಮಯ ಕಳೀತಿರೋ ಅಷ್ಟೇ ಹೆಚ್ಚು ಸುಲಭವಾಗಿ ಅವಳ ಮೇಲೆ ಭಾವನೆಗಳು ಬೆಳೆಯುತ್ತೆ. ನೀವು ಅವಳನ್ನು ಇಷ್ಟಪಡುತ್ತಿದ್ದೀರಿ ಅಂತ ಆ ಹುಡುಗಿ ನೆನಸುತ್ತಾಳೆ. ನಿಮಗೆ ಈಗಾಗ್ಲೆ ತಲುಪಲು ಅನೇಕ ಗುರಿಗಳಿದ್ದು, ಮದುವೆಯಾಗೋ ಯೋಚನೆ ಇಲ್ಲದಿದ್ದರೆ, ನಿಮ್ಮ ಸ್ನೇಹವು ಪ್ರಣಯ ಸಂಬಂಧಕ್ಕೆ ತಿರುಗದಂತೆ ನೋಡಿಕೊಳ್ಳಿ.

ಕ್ಯಾಸಿಡಿ —ತುಂಬ ಹುಡುಗರಿರೋ ಕುಟುಂಬದಲ್ಲಿ ನಾನು ಬೆಳೆದು ಬಂದೆ. ಹಾಗಾಗಿ ನನಗೆ ಹುಡುಗರೊಂದಿಗೆ ಬೆರೆಯುವುದರಲ್ಲಿ ಯಾವುದೇ ಮುಜುಗರ ಇಲ್ಲ. ಆದರೆ ಯಾವಾಗಲೂ ಅದು ಸರಿನೂ ಅಲ್ಲ. ಹುಡುಗಿಯ ಹತ್ರ ಇರೋ ರೀತಿ ಹುಡುಗರತ್ರ ಇದ್ರೆ ಅದು ಖಂಡಿತ ತಪ್ಪಾಗುತ್ತೆ. ಅಣ್ಣ ತಮ್ಮಂದಿರನ್ನು ವೀಕ್ಷಿಸೋ ರೀತಿಯಲ್ಲಿ ಒಬ್ಬ ಹುಡುಗನನ್ನು ವೀಕ್ಷಿಸೋದೇ ಒಳ್ಳೇದು!

[ಪುಟ 27ರಲ್ಲಿರುವ ಚೌಕ]

ಹೆತ್ತವರಿಗೆ ಕಿವಿಮಾತು

ಬೇರೆಯವರೂ ಇರುವಾಗ ವಿರುದ್ಧ ಲಿಂಗದವರೊಂದಿಗೆ ಸಮಯ ಕಳೆಯುವುದರಲ್ಲಿ ತಪ್ಪೇನಿಲ್ಲ. ಆದರೆ ಮದುವೆಯ ಯೋಚನೆ ಇಲ್ಲದೆ ಹುಡುಗ ಹುಡುಗಿಯೊಂದಿಗೊ ಅಥವಾ ಹುಡುಗಿ ಹುಡುಗನೊಂದಿಗೊ ಬೆರೆಯುವುದಾದರೆ ಇತಿಮಿತಿಗಳಿರಬೇಕು. * ಅವರು ಸ್ನೇಹಿತರಾಗಿ ಮಾತ್ರ ಉಳಿದರೆ ಚೆನ್ನ.

ಮದುವೆಯ ಬಗ್ಗೆ ಯಾವುದೇ ಯೋಚನೆ ಇಲ್ಲದೆ ಇಬ್ಬರೂ ಇಲ್ಲ-ಸಲ್ಲದ ಭಾವನೆಗಳನ್ನು ಬೆಳೆಸಿಕೊಂಡರೆ ಏನು ತಪ್ಪು? ಮೊದಮೊದಲು ತುಂಬ ಚಂದ ಅಂತ ಅನ್ಸಬಹುದು. ಆಮೇಲೆ ಎಲ್ಲ ವಿಚಿತ್ರವಾಗಿ ಅನಿಸುತ್ತೆ. ಚಕ್ರ ಇಲ್ಲದ ಕಾರಲ್ಲಿ ಕೂತ ತರ. ಇವತ್ತಿಲ್ಲ ನಾಳೆ ಹುಡುಗ ಹುಡುಗಿಯ ಸಂಬಂಧ ಯಾವ ಗುರಿನೂ ಮುಟ್ಟಲ್ಲ. ಕೆಲವರು ಯಾರಿಗೂ ಗೊತ್ತಾಗದ ಹಾಗೆ ಡೇಟ್‌ ಮಾಡಕ್ಕೆ ಶುರು ಮಾಡ್ಬಹುದು. ಅಂತ ಸಂಬಂಧಗಳು ಕೊನೆಗೆ ಮುಟ್ಟೋದು ನೋವಿಂದ ತುಂಬಿದ ದುರವಸ್ಥೆಗೆ. ಕೆಲವರ ಸಂಬಂಧ ಮುರಿದು ಬೀಳುತ್ತೆ. ಇಬ್ಬರಿಗೂ ನೋವು, ಹತಾಶೆ. ಖಿನ್ನತೆ ಕಿತ್ತು ತಿನ್ನುತ್ತೆ. ಕೈಗೆ ಬಂದಿರುವ ನಿಮ್ಮ ಹದಿವಯಸ್ಸಿನ ಮಕ್ಕಳನ್ನು ಇಂಥ ಹಾನಿಕಾರಕ ಪಾಶದಿಂದ ಹೇಗೆ ಕಾಪಾಡುತ್ತೀರಿ?—ಪ್ರಸಂಗಿ 11:10

ವಿರುದ್ಧ ಲಿಂಗದವರೊಂದಿಗಿನ ಸ್ನೇಹದ ವಿಷಯ ಬಂದಾಗ ನಿಮ್ಮ ಹದಿವಯಸ್ಸಿನ ಮಕ್ಕಳೊಂದಿಗೆ ಬಿಚ್ಚು ಮನಸ್ಸಿನಿಂದ ಮಾತಾಡಿ. ಹೀಗೆ ಮಾಡುವಾಗ ಒಂದುವೇಳೆ ನಿಮ್ಮ ಮಕ್ಕಳು ಸ್ನೇಹ ಸಂಬಂಧದ ಮೇರೆ ದಾಟಿದ್ದಾರೆಂದು ನಿಮಗೆ ಅನಿಸುವಲ್ಲಿ ಅದಕ್ಕೆ ಹೇಗೆ ತೆರೆ ಎಳೆಯಬೇಕೆಂದು ಸಹ ಗೊತ್ತಿರುತ್ತೆ.

ತಮ್ಮ ಮಕ್ಕಳು ವಿರುದ್ಧ ಲಿಂಗದವರೊಂದಿಗಿನ ಸ್ನೇಹದ ಬಗ್ಗೆ ಮುಕ್ತವಾಗಿ ಮಾತಾಡಲು ಬಂದಾಗ ಕೆಲವು ಹೆತ್ತವರು ತಡೆಯುತ್ತಾರೆ. ಹೀಗೆ ಸಂವಾದದ ಬಾಗಿಲನ್ನು ಮುಚ್ಚಿಬಿಡುತ್ತಾರೆ. ಕೆಲವು ಯುವಜನರು ಇದರ ಬಗ್ಗೆ ಎಚ್ಚರ! ಪತ್ರಿಕೆಗೆ ಏನು ಹೇಳಿದರೆಂದು ನೀವೇ ನೋಡಿ. . .

“ನಾನು ಇಷ್ಟಪಡ್ತಿದ್ದ ಒಬ್ಬ ಹುಡುಗನ ಬಗ್ಗೆ ಅಮ್ಮನ ಹತ್ರ ಮಾತಾಡ್ಬೇಕು ಅಂತ ಯಾವಾಗಲೂ ಅಂದುಕೊಳ್ತಿದ್ದೆ. ಆದರೆ ಅಮ್ಮ ಕಿರ್ಚಾಡಿ ಬಿಡ್ತಾರೆ ಅಂತ ಸುಮ್ಮನಾಗ್ತಿದ್ದೆ.”—ಕ್ಯಾರ.

“ನಾನೊಬ್ಬ ಹುಡುಗನನ್ನು ಇಷ್ಟಪಡ್ತಿದ್ದೇನೆ ಅಂತ ನನ್ನ ಅಮ್ಮಂಗೆ ಎಲ್ಲಾದರೂ ಹೇಳಿದ್ರೆ ಅವರು ಹೇಳೋದು ಇಷ್ಟೆ, ‘ನಿನ್ನ ಮದುವೆಗೆ ನಾನು ಬರ್ತಿನಿ ಅಂತ ಮಾತ್ರ ನೆನಸ್ಬೇಡ.’ ಅದರ ಬದಲು ಒಂದುವೇಳೆ ಅಮ್ಮ, ‘ಯಾರು ಆ ಹುಡುಗ? ನಿಂಗೆ ಯಾಕವನು ಇಷ್ಟ ಆದ?’ ಅಂತ ಕೇಳಿದ್ರೆ ಅವರು ಕೊಡ್ತಿದ್ದ ಸಲಹೆಗಳನ್ನು ಸ್ವೀಕರಿಸಲು ಸುಲಭವಾಗ್ತಿತ್ತು.”—ನಾದೀನ್‌.

ಹೆತ್ತವರು ತಾಳ್ಮೆಯಿಂದ ತಮ್ಮ ಮಕ್ಕಳು ಹೇಳುವುದನ್ನು ಕೇಳಿ ಅವರಿಗೆ ಸರಿಯಾದ ಸಲಹೆಗಳನ್ನು ಕೊಟ್ಟಾಗ ಯಾವ ಫಲಿತಾಂಶ ಸಿಕ್ಕಿದೆ ಅಂತ ನೋಡಿ.

“ನಾನು ಒಬ್ಬ ಹುಡುಗನನ್ನು ಇಷ್ಟ ಪಡ್ತಿದ್ದೇನೆ ಅಂತ ನನ್ನಪ್ಪ ಅಮ್ಮಂಗೆ ನಾನು ಹೇಳಿದಾಗ ಅವರು ಕೋಪದಿಂದ ಪ್ರತಿಕ್ರಿಯಿಸ್ಲಿಲ್ಲ. ನನ್ನ ಭಾವನೆಗಳನ್ನು ಅರ್ಥಮಾಡ್ಕೊಂಡ್ರು. ನನಗೆ ಯಾವ ಸಹಾಯ ಬೇಕಿತ್ತೋ ಅದನ್ನೇ ನೀಡಿದ್ರು. ಅವರು ಹಾಗೆ ಮಾಡಿದ್ರಿಂದಲೇ ನನಗೆ ಅವರ ಮಾತನ್ನು ಕೇಳಕ್ಕಾಯ್ತು. ಮನಸ್ಸು ಬಿಚ್ಚಿ ಮಾತಾಡಕ್ಕಾಯ್ತು.”—ಕೊರಿನ್ನಾ.

“ನನ್ನ ಹೆತ್ತವರು ನನ್ನ ವಯಸ್ಸಿನಲ್ಲಿದ್ದಾಗ ಯಾರನ್ನೋ ಇಷ್ಟಪಟ್ಟ ವಿಷ್ಯ ಮತ್ತು ಯಾಕೆ ಅವರ ಆ ಸ್ನೇಹ ತುಂಬ ದಿನ ಬಾಳಲಿಲ್ಲ ಅಂತ ಮನಬಿಚ್ಚಿ ನನಗೆ ತಿಳಿಸ್ತಿದ್ರು. ಆದ್ರಿಂದ ನಾನು ಇಷ್ಟಪಡ್ತಿದ್ದ ವ್ಯಕ್ತಿ ಬಗ್ಗೆ, ನನ್ನ ಭಾವನೆಗಳ ಬಗ್ಗೆ ಅವರತ್ರ ಮಾತಾಡಲು ಸುಲಭ ಆಯ್ತು.”—ಲಿನೆಟ್‌.

ಒಬ್ಬ ಯುವವ್ಯಕ್ತಿ ವಯಸ್ಸು ಮಾಗುವ ಮುನ್ನವೇ ಪ್ರೇಮಪ್ರಸಂಗದಲ್ಲಿ ಬೀಳಲು ಕಾರಣಗಳು ಇರುತ್ತೆ.

“ಯಾರಿಗೂ ಗೊತ್ತಾಗದ ಹಾಗೆ ನಾನೊಬ್ಬ ಹುಡುಗನನ್ನು ಡೇಟ್‌ ಮಾಡ್ತಿದ್ದೆ. ಅವನು ಹತ್ತಿರ ಮಾತಾಡ್ವಾಗ ನನ್ನ ಮನಸ್ಸು ಹಗುರವಾಗ್ತಿತ್ತು. ನನ್ನ ಮಾತನ್ನು ಅವನು ಕಿವಿಗೊಟ್ಟು ಕೇಳ್ತಾ ಇದ್ದ.”—ಆ್ಯನೆಟ್‌.

“ಒಬ್ಬ ಹುಡುಗ ಇದ್ದ. ನನಗೆ ಯಾವಾಗಲೂ ಅವನ ಜೊತೆನೇ ಇರಬೇಕು ಅಂತ ಅನಿಸ್ತಿತ್ತು. ಅವನ ಗಮನ ಯಾವಾಗಲೂ ನನ್ನ ಕಡೆಗೇ ಇರ್ತಿತ್ತು. ನನ್ನ ಕಡೆಗೆ ಯಾರೇ ಗಮನ ಕೊಟ್ರು ನಾನು ಇಷ್ಟಪಡ್ತೇನೆ. ಅದು ಕೆಟ್ಟದೋ ಒಳ್ಳೇದೋ ಅದೆಲ್ಲ ಆಮೇಲೆ. ನನ್ನ ಬಲಹೀನತೆ ಇದು.”—ಆ್ಯಮಿ.

“ನೀನು ಇವತ್ತು ತುಂಬ ಚೆನ್ನಾಗಿ ಕಾಣಿಸ್ತಿದ್ದೀಯ, ನಿನಗೆ ಈ ಡ್ರೆಸ್‌ ತುಂಬ ಚೆನ್ನಾಗಿ ಕಾಣಿಸುತ್ತೆ ಅಂತ ನನ್ನ ಹೆತ್ತವರು ಹೇಳಿದ್ರೆ ಅದೇ ನಂಗೆ ಸಾಕಾಗ್ತಿತ್ತು. ಒಬ್ಬ ಹುಡುಗ ನನ್ನನ್ನು ಹೊಗಳೋ ಅಗತ್ಯನೇ ನನಗಿರೋದಿಲ್ಲ.”—ಕ್ಯಾರನ್‌.

ನಿಮ್ಮನ್ನೇ ಕೇಳಿಕೊಳ್ಳಿ:

ನನ್ನ ಹದಿಹರೆಯದ ಮಕ್ಕಳು ನನ್ನ ಬಳಿಬಂದು ಮನಬಿಚ್ಚಿ ಮಾತಾಡಬೇಕಾದ್ರೆ ನಾನು ಹೇಗಿರಬೇಕು?—ಫಿಲಿಪ್ಪಿ 4:5.

ನಾನು “ಕಿವಿಗೊಡುವುದರಲ್ಲಿ ಶೀಘ್ರನೂ ಮಾತಾಡುವುದರಲ್ಲಿ ದುಡುಕದವನೂ” ಆಗಿದ್ದೀನಾ?—ಯಾಕೋಬ 1:19.

ನನ್ನ ಮಗ/ಮಗಳು ಪ್ರೀತಿ ಮತ್ತು ಮೆಚ್ಚಿಗೆ ಪಡೆಯಲು ಹೊರಗಿನವರ ಕಡೆಗೆ ನೋಡಬಾರದಾದ್ರೆ ನಾನೇನು ಮಾಡಬೇಕು?—ಕೊಲೊಸ್ಸೆ 3:21.

ಸತ್ಯಾಂಶ: ವಿರುದ್ಧ ಲಿಂಗದವರೊಂದಿಗಿನ ಸ್ನೇಹವನ್ನು ಹೇಗೆ ಮಿತಿಯಲ್ಲಿಡಬೇಕು, ತೊಂದರೆಯಲ್ಲಿ ಸಿಲುಕದಂತೆ ಹೇಗೆ ನೋಡಿಕೊಳ್ಳಬೇಕು ಎನ್ನೋದನ್ನು ನಿಮ್ಮ ಹದಿಹರೆಯದ ಮಕ್ಕಳಿಗೆ ಹೇಳ್ಕೊಡಿ. ಮಕ್ಕಳು ಹದಿಹರೆಯ ದಾಟುವ ವರೆಗೆ ಇದು ನೆರವಾಗುವುದು.—ಕೊಲೊಸ್ಸೆ 3:5; 1 ಥೆಸಲೊನೀಕ 4:3-6.

[ಪಾದಟಿಪ್ಪಣಿ]

^ ಹಿಂದಿನ “ಯುವಜನರ ಪ್ರಶ್ನೆ” ಲೇಖನಗಳನ್ನು ನೋಡಿ.

[ಪುಟ 25ರಲ್ಲಿರುವ ಕೋಷ್ಟಕ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಮಿತಿಮೀರೆಗಳು

ಮಾಡಬೇಕು ಮಾಡಬೇಡಿ

ಬೇರೆಯವರಿರುವಾಗ ಮಾತ್ರ ಸಹವಾಸಿಸಿ  X ಬರೀ ಒಬ್ಬರೊಂದಿಗೆ ಸಮಯ ಕಳೆಯಬೇಡಿ

ಚೆನ್ನಾಗಿ ತಿಳಿದುಕೊಳ್ಳಿ  X ಅಂತರಾಳವನ್ನು ತೋಡಿಕೊಳ್ಳಬೇಡಿ

ಸಂತೋಷವಾಗಿ ಮಾತಾಡಿ  X ಚೆಲ್ಲಾಟವಾಡಬೇಡಿ

[ಪುಟ 26ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಬೆರೆಯುವುದು

ಚೆಲ್ಲಾಟ

ಮುಟ್ಟುವುದು

ಕೈಕೈ ಹಿಡಿಯುವುದು

ಮುತ್ತು ಕೊಡುವುದು