ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನ್ಯಾಯವಂತರಾಗಿ ನಡೆಯಲು. . .

ನ್ಯಾಯವಂತರಾಗಿ ನಡೆಯಲು. . .

ನ್ಯಾಯವಂತರಾಗಿ ನಡೆಯಲು. . .

ಮನಶ್ಶಾಂತಿ ಆನಂದದಿಂದ ನಾವು ಬದುಕುತ್ತಾ ಬೇರೆಯವರ ಸಂತೋಷಕ್ಕೂ ನೆರವಾಗಬೇಕೆನ್ನುವುದೇ ಸೃಷ್ಟಿಕರ್ತನ ಇಚ್ಛೆ. ಹಾಗಾಗಿ “ನ್ಯಾಯವನ್ನು ಆಚರಿಸಿ, ಕರುಣೆಯಲ್ಲಿ ಆಸಕ್ತರಾಗಿರಿ” ಎನ್ನುತ್ತಾನೆ ಆತ. (ಮೀಕ 6:8) ನಾವಿದನ್ನು ಹೇಗೆ ಪಾಲಿಸೋದು? ನಾವು ಒಳ್ಳೇ ಗುಣಗಳನ್ನು ಬೆಳೆಸಿಕೊಳ್ಳಬೇಕು. ಅದು ಅನ್ಯಾಯ ಮಾಡದಂತೆ ನಮ್ಮನ್ನು ತಡೆಯುತ್ತದೆ. ಅದಕ್ಕಾಗಿ ಬೈಬಲ್‌ ನಮಗೆ ಸಹಾಯ ಮಾಡುತ್ತೆ.

ದುರಾಸೆಯನ್ನು ಜಯಿಸಿ. ದುರಾಸೆಯನ್ನು ದೂರಮಾಡಲು ನಮ್ಮ ಬಳಿಯಿರುವ ಸಿದ್ಧೌಷಧವೆಂದರೆ ಪ್ರೀತಿ. ಅದು ಬರೇ ಅನಿಸಿಕೆ ಇಲ್ಲವೆ ಪ್ರಣಯ ಪ್ರೀತಿ ಅಲ್ಲ, ನಿಸ್ವಾರ್ಥ ಪ್ರೀತಿ. ಅಂಥ “ಪ್ರೀತಿ . . . ದಯೆಯುಳ್ಳದ್ದೂ ಆಗಿದೆ. . . . ಸ್ವಹಿತವನ್ನು ಹುಡುಕುವುದಿಲ್ಲ” ಎನ್ನುತ್ತೆ ಬೈಬಲಿನ 1 ಕೊರಿಂಥ 13:4, 5. ಇಂಥ ಪ್ರೀತಿ ಬಂಧುಮಿತ್ರರಿಗೆ ಮಾತ್ರ ಸೀಮಿತವಾಗಿರದು. ದೇವಭಕ್ತಿ ಇಲ್ಲದವರು ಸಹ ತಮ್ಮನ್ನು ಪ್ರೀತಿಸುವವರನ್ನು ಪ್ರೀತಿಸುತ್ತಾರೆ. “ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸುವುದಾದರೆ ನಿಮಗೆ ಯಾವ ಪ್ರತಿಫಲವಿದೆ?” ಎಂದು ಯೇಸು ಕೇಳಿದನು.—ಮತ್ತಾಯ 5:46.

ಪೂರ್ವಗ್ರಹವನ್ನು ಮೆಟ್ಟಿನಿಲ್ಲಿ. “ದೇವರು ಪಕ್ಷಪಾತಿಯಲ್ಲ . . . ಆದರೆ ಯಾವ ಜನಾಂಗದಲ್ಲೇ ಆಗಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಸ್ವೀಕಾರಾರ್ಹನಾಗಿದ್ದಾನೆ” ಎನ್ನುತ್ತೆ ಬೈಬಲಿನ ಅಪೊಸ್ತಲರ ಕಾರ್ಯಗಳು 10: 34, 35. ಜಾತಿ, ಧರ್ಮ, ಆರ್ಥಿಕ ಸ್ಥಿತಿ, ಹೆಣ್ಣು, ಗಂಡು ಎನ್ನುವುದರ ಮೇಲೆ ದೇವರು ಜನರನ್ನು ಆಶೀರ್ವದಿಸುವುದಿಲ್ಲ. ಆತನ ದೃಷ್ಟಿಯಲ್ಲಿ “ಯೆಹೂದ್ಯನು ಅಥವಾ ಗ್ರೀಕನು ಎಂದಾಗಲಿ, ಆಳು ಅಥವಾ ಸ್ವತಂತ್ರನು ಎಂದಾಗಲಿ, ಗಂಡು ಅಥವಾ ಹೆಣ್ಣು ಎಂದಾಗಲಿ ಭೇದವಿಲ್ಲ.” (ಗಲಾತ್ಯ 3:28) ದೇವರನ್ನು ನಾವು ಅನುಕರಿಸುವುದಾದರೆ ಪೂರ್ವಗ್ರಹವನ್ನು ಕಿತ್ತೆಸೆಯಬಲ್ಲೆವು. ಅಮೆರಿಕ ನಿವಾಸಿ ದೊರತಿಯ ಕಥೆ ಕೇಳಿ.

ತನ್ನ ನಾಡಲ್ಲಿ ನಡೆಯುತ್ತಿದ್ದ ಜನಾಂಗೀಯ ತಾರತಮ್ಯವನ್ನು ಕಂಡು ನೊಂದಿದ್ದಳು ದೊರತಿ. ಕರಿಯರ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಂಡ ಒಂದು ಕ್ರಾಂತಿಕಾರಿ ಗುಂಪಿಗೆ ಆಕೆ ಸೇರಿಕೊಳ್ಳಬೇಕೆಂದಿದ್ದಳು. ಒಮ್ಮೆ ಆಕೆ ಯೆಹೋವನ ಸಾಕ್ಷಿಗಳ ಕೂಟಕ್ಕೆ ಹಾಜರಾದಳು. ಅಲ್ಲಿದ್ದ ಕರಿಯರು ಬಿಳಿಯರು ಎಲ್ಲರೂ ಆಕೆಯನ್ನು ಹಾರ್ದಿಕವಾಗಿ ಸ್ವಾಗತಿಸಿದರು. ಇದು ಆಕೆಯ ಮನಸೆಳೆಯಿತು. ಜನರ ಮನಸ್ಸನ್ನು ಬದಲಿಸುವ ಶಕ್ತಿ ದೇವರಿಗೆ ಮಾತ್ರ ಇದೆ ಎಂಬುದು ಸ್ವಲ್ಪದರಲ್ಲೇ ಆಕೆ ತಿಳಿದಳು. ಸಾಕ್ಷಿಗಳ ಸಾಚಾ ಪ್ರೀತಿಯನ್ನು ನೋಡಿ ಆಕೆಗೆ ಹೃದಯ ತುಂಬಿ ಬಂತು. ಒಂದುವೇಳೆ “ಕ್ರಾಂತಿಕಾರಿ ಗುಂಪಿಗೆ ಸೇರಿಕೊಂಡಿದ್ರೆ” ಬಿಳಿ ಮೈಬಣ್ಣವುಳ್ಳ ಈ ಸಾಕ್ಷಿಗಳನ್ನೂ “ಎಗ್ಗಿಲ್ಲದೆ ಕೊಂದು” ಬಿಡುತ್ತಿದ್ದೆನಲ್ಲಾ ಎಂದು ನೆನಸಿ ಅವಳ ಕಣ್ಣೀರ ಕಟ್ಟೆ ಒಡೆಯಿತು.

ಸಮಾಜವಿರೋಧಿ ಭಾವನೆಯನ್ನು ಜಯಿಸಿ. ಯೇಸುವಿನ ಶಿಷ್ಯರಾಗುವ ಮುನ್ನ ಅನೇಕರು ಕುಡಿಕರು, ಹಣ ಕೀಳುವವರು, ಜಗಳಕ್ಕೆ ಹೋಗುವವರು ಆಗಿದ್ದರು. ಆದರೆ ದೇವರ ಸಹಾಯದಿಂದ ಆ ಎಲ್ಲ ದುರ್ಗುಣಗಳನ್ನು ಬಿಟ್ಟುಬಿಟ್ಟರು. ಪ್ರೀತಿ, ದಯೆ, ಒಳ್ಳೇತನದಂಥ ಸುಗುಣಗಳನ್ನು ಬೆಳೆಸಿಕೊಂಡರು. (1 ಕೊರಿಂಥ 5:11; 6:9-11; ಗಲಾತ್ಯ 5:22) ಹಾಗೇ ಇವತ್ತೂ ಲಕ್ಷಗಟ್ಟಲೆ ಜನರು ದೇವರಲ್ಲಿ ಭಯಭಕ್ತಿ ಬೆಳೆಸಿಕೊಂಡಿದ್ದಾರೆ, ಜೀವನದಲ್ಲಿ ಒಳ್ಳೊಳ್ಳೆ ಬದಲಾವಣೆಗಳನ್ನು ಮಾಡಿದ್ದಾರೆ. ಇಂಥವರಲ್ಲಿ ಅಜರ್‌ ಬೈಜಾನ್‌ ದೇಶದ ಫೀರೋದ್ದೀನ್‌ ಒಬ್ಬರು.

ಇವರು ಬೆಳೆದಿದ್ದು ಅನಾಥಾಶ್ರಮದಲ್ಲಿ. ಅಲ್ಲಿದ್ದ ಹುಡುಗರ ಜತೆ ಆಗಾಗ ಹೊಡೆದಾಟಗಳು ನಡೆಯುತ್ತಿದ್ದವು. ಮುಂದೆ ಕುಸ್ತಿ ಮಾಸ್ಟರ್‌ ಆದ್ರು. “ನಾನು ತುಂಬ ಒರಟು, ಕ್ರೂರಿ ಆಗಿದ್ದೆ. ಊಟ ಆದ್ಮೇಲೆ ನನ್‌ ಹೆಂಡ್ತಿ ಜಹ್ರಾ ಹಲ್ಲುಕಡ್ಡಿ ಕೊಡೋದಿಕ್ಕೆ ಮರೆತ್ರೆ ಸಾಕು ಅವಳನ್ನ ಹೊಡಿತಿದ್ದೆ. ದಾರಿಯಲ್ಲಿ ನಾವಿಬ್ಬರು ನಡ್ಕೊಂಡು ಹೋಗ್ತಿರುವಾಗ ಯಾರಾದ್ರೂ ಅವಳನ್ನ ನೋಡಿದ್ರೆ ಆ ವ್ಯಕ್ತಿಗೂ ನನ್‌ ಕೈಯಿಂದ ಚೆನ್ನಾಗಿ ಸಿಗ್ತಿತ್ತು!” ಎನ್ನುತ್ತಾರೆ ಫೀರೋದ್ದೀನ್‌.

ಒಂದಿನ ಫೀರೋದ್ದೀನ್‌ ಬೈಬಲಿನಿಂದ ಓದಿದ ವಿಷ್ಯ ಅವರನ್ನು ನಿಬ್ಬೆರಗಾಗಿಸಿತು. ಶೂಲಕ್ಕೇರಿಸಿದ ಸೈನಿಕರನ್ನು ಕ್ಷಮಿಸುವಂತೆ ಯೇಸು ದೇವರನ್ನು ಬೇಡಿಕೊಂಡ ವಿಷ್ಯವೇ ಅದಾಗಿತ್ತು. (ಲೂಕ 23:34) ‘ದೇವರ ಮಗನಿಂದ ಮಾತ್ರ ಇದು ಸಾಧ್ಯ’ ಎಂದವರು ಮನದಲ್ಲಿ ಅಂದುಕೊಂಡರು. ಅಲ್ಲಿಂದ ಶುರುವಾಯಿತು ದೇವರಿಗಾಗಿ ಅವರ ಹುಡುಕಾಟ. ಯೆಹೋವನ ಸಾಕ್ಷಿಗಳು ಬೈಬಲ್‌ ಕಲಿಸುತ್ತೇವೆ ಅಂದಾಗ ಕೂಡಲೆ ಒಪ್ಪಿಕೊಂಡರು. ದಿನ ಕಳೆಯುತ್ತಿದ್ದಂತೆ ದುರ್ಗುಣಗಳು ಮಾಯವಾಗ ತೊಡಗಿದವು. ಜಹ್ರಾಳನ್ನು ತುಂಬ ಪ್ರೀತಿ ದಯೆಯಿಂದ ನೋಡಿಕೊಳ್ಳಲು ಆರಂಭಿಸಿದರು. ಇದನ್ನು ನೋಡಿ ಜಹ್ರಾ ಕೂಡ ಬೈಬಲ್‌ ಕಲಿಯಲು ಆರಂಭಿಸಿದರು. ಈಗ ಇಬ್ಬರೂ ದೇವರಲ್ಲಿ ಭಯಭಕ್ತಿ ಬೆಳೆಸಿಕೊಂಡು ಅನ್ಯೋನ್ಯವಾಗಿದ್ದಾರೆ.

ನಾವು ನಮ್ಮ ವ್ಯಕ್ತಿತ್ವದಲ್ಲಿ ಮಾಡುವ ಬದಲಾವಣೆಗಳು ಇಡೀ ಲೋಕವನ್ನು ಬದಲಿಸದೇ ಇರಬಹುದು! ಆದರೆ ನೀತಿನ್ಯಾಯ ನೆಲೆಸಿರುವ ಲೋಕ ಇದಾಗಬೇಕೆಂದು ದೇವರು ಮನಸ್ಸುಮಾಡಿದರೆ? ಅದನ್ನು ಸಾಕಾರಗೊಳಿಸುವ ಶಕ್ತಿಯೂ ಆತನಿಗಿದೆ! ಹಿಂದಿನ ಲೇಖನದ ಶುರುವಾತಿನಲ್ಲಿ ಬೈಬಲಿನ 2 ತಿಮೊಥೆಯ 3:1-4ರ ಉಲ್ಲೇಖವಾಗಿತ್ತು. ಇಂದು ಜನರ ವರ್ತನೆ, ಮನೋಭಾವ ಹೇಗಿರುತ್ತೆ ಎನ್ನುವುದನ್ನು ಬೈಬಲ್‌ ಮೊದಲೇ ಹೇಳಿದ್ದನ್ನು ಅಲ್ಲಿ ನಾವು ಓದಿದೆವು. ಆ ಭವಿಷ್ಯವಾಣಿಯ ಪ್ರತಿ ಅಕ್ಷರವೂ ನೆರವೇರುತ್ತಿದೆ. ಬೈಬಲಿನಲ್ಲಿರುವ ಇನ್ನೆಷ್ಟೋ ಭವಿಷ್ಯವಾಣಿಗಳೂ ನೆರವೇರಿವೆ. ಹಾಗಾಗಿ ಅನ್ಯಾಯವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತೇನೆಂದು ದೇವರು ಕೊಟ್ಟ ಮಾತಲ್ಲೂ ನಾವು ಅಚಲ ನಂಬಿಕೆ ಇಡಬಹುದು. ದೇವರು ಇದನ್ನೆಲ್ಲ ಹೇಗೆ ಮಾಡ್ತಾನೆ? (g12-E 05)

[ಪುಟ 13ರಲ್ಲಿರುವ ಚೌಕ/ಚಿತ್ರ]

ನ್ಯಾಯಕ್ಕಾಗಿ ಹುಡುಕಿದ ಹೈಡಿ

ಯುನೈಟೆಡ್‌ ಸ್ಟೇಟ್ಸ್‌ನ ಹೈಡಿ ತನ್ನ ಕಥನವನ್ನು ಹೀಗೆ ಹೇಳುತ್ತಾಳೆ: “ವರ್ಣಭೇದ, ಯುದ್ಧಗಳು, ಬಡತನ ಇಂಥ ಅನ್ಯಾಯ ನನ್ನ ನೆಮ್ಮದಿ ಹಾಳುಮಾಡಿತ್ತು. ಇವೆಲ್ಲವುಗಳ ನಿರ್ಮೂಲನ ಮಾಡಲು ಮನಸ್ಸು ಹಾತೊರೆಯುತಿತ್ತು. ಹಾಗಾಗಿ ಪೌರ ಹಕ್ಕು ಚಳುವಳಿಗಾರರ ಜೊತೆ ಕೆಲಸಮಾಡಿದೆ, ರಾಜಕೀಯ ಪಾರ್ಟಿಯೊಂದಕ್ಕೆ ಸೇರಿಕೊಂಡೆ. ಆದರೆ ಇವೆಲ್ಲ ಅನ್ಯಾಯಗಳನ್ನು ಸರಿಪಡಿಸುವುದರಲ್ಲಿ ವಿಫಲವಾದವು.

“ಒಂದು ದೊಡ್ಡ ಬದಲಾವಣೆ ಬರಬೇಕು ಎಂದನಿಸುತ್ತಿತ್ತು. ಹಿಪ್ಪಿ ಚಳುವಳಿಯನ್ನು ನೋಡುವಾಗ ಇದರಿಂದ ಸಾಧ್ಯವೇನೋ ಎಂದನಿಸಿತು. ಆ ನಂಬಿಕೆನೂ ಸುಳ್ಳಾಯಿತು. ಹಿಪ್ಪಿಗಳು ಲೈಂಗಿಕತೆ, ಮಾದಕವಸ್ತು, ರಾಕ್‌ ಆ್ಯಂಡ್‌ ರೋಲ್‌ ಸಂಗೀತದಲ್ಲಿ ಮುಳುಗಿದ್ದರು. ಸಮಾಜ ಸುಧಾರಣೆಯ ಬಗ್ಗೆ ಅವರಿಗೆ ಕಿಂಚಿತ್ತೂ ಗಮನವಿರಲಿಲ್ಲ. ಇದಂತೂ ನನ್ನನ್ನು ಖಿನ್ನತೆಯ ಕೂಪಕ್ಕೆ ತಳ್ಳಿಬಿಟ್ಟಿತು. ಆ ಸಮಯದಲ್ಲೇ ಒಬ್ಬ ಯೆಹೋವನ ಸಾಕ್ಷಿಯ ಪರಿಚಯವಾಯಿತು. ದೇವರು ಏನೆಲ್ಲ ಬದಲಾವಣೆ ಮಾಡುತ್ತಾನೆಂದು ಆಕೆ ಬೈಬಲಿನಿಂದ ತೋರಿಸಿದಳು. ಪ್ರಕಟನೆ 21:3, 4ರಂಥ ಬೈಬಲ್‌ ವಾಕ್ಯಗಳನ್ನು ತೋರಿಸಿದಳು. ಅಲ್ಲಿ ಹೇಳುತ್ತೆ, ಅನ್ಯಾಯದ ಫಲಗಳಾದ ಕಣ್ಣೀರು, ದುಃಖ, ಗೋಳಾಟ, ನೋವು ಎಲ್ಲವನ್ನೂ ದೇವರು ತೆಗೆದುಬಿಡುವನು ಅಂತ. ‘ಇದು ನಿಜ ಆಗುತ್ತಾ?’ ಅಂತ ಮನ್ಸಲ್ಲೇ ಅಂದುಕೊಳ್ತಿದ್ದೆ.

“ದೇವರಿಗಿರುವ ಶಕ್ತಿ ಮತ್ತು ಪ್ರೀತಿಯ ಬಗ್ಗೆ ಬೈಬಲಿನಿಂದ ಓದಿ ತಿಳಿದುಕೊಂಡಾಗ, ಯೆಹೋವನ ಸಾಕ್ಷಿಗಳಲ್ಲಿ ಇರೋ ಪ್ರೀತಿಯನ್ನು ಅನುಭವಿಸಿ ನೋಡಿದಾಗ ನನ್ನ ಅನುಮಾನ ಬಗೆಹರಿಯಿತು. ದೇವರ ಮಾತು ನೇರವೇರೋ ಸಮಯಕ್ಕಾಗಿ ಕಾಯ್ತಾ ಇದ್ದೇನೆ.”

[ಪುಟ 12ರಲ್ಲಿರುವ ಚಿತ್ರ]

ದೇವರನ್ನು ಅನುಕರಿಸೋಣ, ಪೂರ್ವಗ್ರಹ ತೊರೆಯೋಣ

[ಪುಟ 12ರಲ್ಲಿರುವ ಚಿತ್ರ]

ಫೀರೋದ್ದೀನ್‌ ಮತ್ತು ಆತನ ಪತ್ನಿ ಜಹ್ರಾ