ಶಾಂತಿ ನೆಮ್ಮದಿ ಕಂಡುಕೊಂಡೆ
ಶಾಂತಿ ನೆಮ್ಮದಿ ಕಂಡುಕೊಂಡೆ
ಎಷಿಡಿಯೊ ನಹಕ್‌ಬ್ರೀಯ ಹೇಳಿದಂತೆ
ನನ್ನನ್ನು ಯಾರೂ ಪ್ರೀತಿಸುದಿಲ್ಲ, ನಾನು ಯಾರಿಗೂ ಬೇಡ ಎಂಬ ಭಾವನೆ ಸದಾ ನನ್ನನ್ನು ಕಾಡುತ್ತಿತ್ತು. ಆದ್ರೆ ಈಗ ಅದು ಹೋಗಿದೆ. ಈಗ ನನ್ಗೆ ನಿಜ ಪ್ರೀತಿ, ನೆಮ್ಮದಿ ಸಿಕ್ಕಿದೆ. ಅದು ಹೇಗಂತೀರಾ? ಹೇಳ್ತೇನೆ ಕೇಳಿ.
ಇಸವಿ 1976ರಲ್ಲಿ ಒಂದು ಬಡ ಕುಟುಂಬದಲ್ಲಿ ನಾನು ಹುಟ್ಟಿದೆ. ನನ್ನ ಹೆತ್ತವರು ಗುಡಿಸಲಲ್ಲಿ ವಾಸಿಸುತ್ತಿದ್ರು. ಹಾಗಾಗಿ ಆ ಗುಡಿಸಲಿನ ಕೊಳಕಾದ ನೆಲದಲ್ಲಿ ನಾನು ಹುಟ್ಟಿದೆ. ಸ್ಥಳ: ಇಂಡೋನೇಶಿಯದ ಪೂರ್ವ ಟಿಮೋರಿನ ಬೆಟ್ಟ ಪ್ರದೇಶ. ಹತ್ತು ಮಂದಿ ಮಕ್ಕಳಲ್ಲಿ ನಾನು ಎಂಟನೆಯವ. ಬಡತನದ ನಿಮಿತ್ತ ಹೆತ್ತವರು ನನ್ನ ಅವಳಿ ತಮ್ಮನನ್ನು ಅವ್ರೇ ಸಾಕಿ ನನ್ನನ್ನು ದೊಡ್ಡಪ್ಪನ ಮಗನಿಗೆ ಸಾಕಲು ಕೊಟ್ರು.
ನಾನು ಹುಟ್ಟುವುದಕ್ಕಿಂತ ಸ್ವಲ್ಪ ಮುಂಚೆ ಅಂದ್ರೆ 1975ರ ಡಿಸೆಂಬರ್‌ನಲ್ಲಿ ಪೂರ್ವ ಟಿಮೋರನ್ನು ಇಂಡೋನೇಶಿಯ ದಾಳಿಮಾಡಿತು. ಇದರಿಂದ ಗೆರಿಲ್ಲ ಯುದ್ಧ ಆರಂಭವಾಗಿ ಎರಡು ದಶಕಗಳ ವರೆಗೆ ಮುಂದುವರಿಯಿತು. ಚಿಕ್ಕಂದಿನಿಂದ ಹಿಂಸಾಚಾರ ಕಷ್ಟಸಂಕಟಗಳನ್ನೇ ನೋಡುತ್ತಾ ಬೆಳೆದೆ. ಸೈನಿಕರು ನಮ್ಮ ಹಳ್ಳಿಗೆ ದಾಳಿಮಾಡುವುದು, ಎಲ್ಲರು ಅಲ್ಲಿಂದ ತಪ್ಪಿಸಿಕೊಂಡು ಓಡುವುದು. . . ಇವೆಲ್ಲ ಇನ್ನೂ ನನ್ನ ಮನಸ್ಸಿನಲ್ಲಿ ಹಚ್ಚಹಸುರಾಗಿವೆ. ಒಮ್ಮೆ ಅಣ್ಣ ನನ್ನನ್ನು ಕರ್ಕೊಂಡು ದೂರದ ಒಂದು ಬೆಟ್ಟಕ್ಕೆ ಓಡಿಹೋದ್ರು. ಅಲ್ಲಿ ಸಾವಿರಾರು ಟಿಮೋರ್ ಜನರು ಆಶ್ರಯ ಪಡ್ಕೊಂಡಿದ್ರು.
ಆದ್ರೆ ಸೈನಿಕರಿಗೆ ಅದೂ ತಿಳಿತು. ಅವ್ರು ಅಲ್ಲಿಗೂ ಬಾಂಬ್‌ಗಳನ್ನು ಎಸೆದ್ರು. ಆ ಭೀಕರ ಘಟನೆ ನೆನಸಿದ್ರೆ ಈಗ್ಲೂ ನಾನು ಬೆಚ್ಚಿಬೀಳ್ತೇನೆ. ಎಷ್ಟೋ ಮಂದಿ ಜೀವ ಕಳೆದುಕೊಂಡ್ರು. ಹೇಳಲಾರದಷ್ಟು ಹಾನಿ ಸಂಭವಿಸ್ತು. ಮನೆಗೆ ಹಿಂದಿರುಗಿ ಬಂದ ಮೇಲೂ ಭಯದಲ್ಲೇ ಜೀವಿಸಿದೆ. ನಮ್ಮ ಅಕ್ಕಪಕ್ಕದವರು ಎಷ್ಟೋ ಮಂದಿ ಸತ್ತುಹೋಗಿದ್ರು, ಕಾಣೆಯಾಗಿದ್ರು. ಮುಂದೆ ನನ್ನ ಸರದಿ ಎಂದೆಣಿಸ್ತಿತ್ತು ನನ್ಗೆ.
ನಾನು ಹತ್ತು ವರ್ಷದವನಿದ್ದಾಗ ಅಣ್ಣ ತುಂಬಾ ಅಸ್ವಸ್ಥರಾಗಿ ತೀರಿಕೊಂಡ್ರು. ಆಗ ಹೆತ್ತವರು ನನ್ನನ್ನು ಅಜ್ಜಿ ಮನೆಗೆ ಬಿಟ್ರು. ಅಜ್ಜಿ ವಿಧವೆಯಾಗಿದ್ರು. ಬದುಕಲ್ಲಿ ಅನೇಕ ಕಷ್ಟಗಳನ್ನು ಎದುರಿಸಿ ಮುಂಗೋಪಿ ಆಗಿಬಿಟ್ಟಿದ್ರು. ನನ್ನನ್ನು ಆಕೆ ಒಂದು ಹೊರೆಯಂತೆ ವೀಕ್ಷಿಸಿದ್ರು. ಕೆಲಸದ ಆಳಿನಂತೆ ಉಪಚರಿಸಿದ್ರು. ಒಂದು ದಿನ ನಾನು ಸೌಖ್ಯವಿಲ್ಲದೆ ಮಲಗಿದ್ದಾಗ ಸಾಯುವಷ್ಟು ನನ್ಗೆ ಹೊಡೆದಿದ್ರು. ನನ್ನ ಅಂಕಲ್ (ಮಾವನ ಮಗ, ನಾನವರನ್ನು ‘ಅಂಕಲ್’ ಎಂದು ಕರೆಯುತ್ತೇನೆ) ಬರಲಿಲ್ಲ ಅಂದಿದ್ರೆ ನಾನು ಸತ್ತೇ ಹೋಗುತ್ತಿದ್ದೆ. ಅವ್ರು ನನ್ನನ್ನು ತಮ್ಮೊಂದಿಗಿರಲು ಕರೆದುಕೊಂಡು ಹೋದ್ರು.
ನಾನು ಶಾಲೆಗೆ ಹೋಗಲು ಆರಂಭಿಸಿದೇ 12 ವರ್ಷ ಪ್ರಾಯದಲ್ಲಿ. ಸ್ವಲ್ಪದರಲ್ಲೇ ನನ್ನ ಆಂಟಿ ಅಸ್ವಸ್ಥರಾದ್ರು. ಇದರಿಂದಾಗಿ ಅಂಕಲ್ ತುಂಬ ಖಿನ್ನರಾಗಿಬಿಟ್ರು. ಅವರ ಕಷ್ಟವೇ ಅವರಿಗಿರುವಾಗ ನಾನವರಿಗೆ ಭಾರವಾಗಬಾರದು ಅಂತ ಯಾರಿಗೂ ಹೇಳದೆ ಅಲ್ಲಿಂದ ಓಡಿಹೋದೆ. ಅರಣ್ಯದಲ್ಲಿ ವಾಸಿಸುತ್ತಿದ್ದ ಇಂಡೋನೇಶಿಯ ಸೈನಿಕರ ಗುಂಪಿನೊಂದಿಗೆ ಸೇರಿಕೊಂಡೆ. ಅವರ ಬಟ್ಟೆಗಳನ್ನು ಒಗೆಯುತ್ತಾ, ಅಡಿಗೆ ಮಾಡುತ್ತಾ, ಅವರ ಡೇರೆಗಳನ್ನು ಶುದ್ಧಮಾಡುತ್ತಾ ಕಾಲಕಳೆದೆ. ಅವರು ನನ್ನನ್ನು ಪ್ರೀತಿಯಿಂದ ಒಳ್ಳೇ ರೀತಿಯಲ್ಲಿ ಉಪಚರಿಸಿದ್ರು. ಆದ್ರೆ ಕೆಲವು ತಿಂಗಳುಗಳ ನಂತರ ನನ್ನ ಸಂಬಂಧಿಕರಿಗೆ ನಾನಲ್ಲಿರುವುದು ತಿಳಿದುಬಂತು. ನನ್ನನ್ನು ತಮ್ಮ ಹಳ್ಳಿಗೆ ಹಿಂದೆ ಕಳುಹಿಸಿ ಕೊಡಬೇಕೆಂದು ಅವರು ಸೈನಿಕರನ್ನು ಒತ್ತಾಯಿಸಿದರು.
ರಾಜಕೀಯ ಚಟುವಟಿಕೆ
ಹೈಸ್ಕೂಲ್ ಮುಗಿಸಿದ ಬಳಿಕ ಪೂರ್ವ ಟಿಮೋರಿನ ರಾಜಧಾನಿ ಡಿಲಿಗೆ ಹೋಗಿ ಅಲ್ಲಿನ ವಿಶ್ವವಿದ್ಯಾನಿಲಯ ಸೇರಿಕೊಂಡೆ. ಅಲ್ಲಿ ನಾನು ನನ್ನಂಥದ್ದೇ ಹಿನ್ನೆಲೆ ಇರುವ ಅನೇಕ ಯುವಕರನ್ನು ಭೇಟಿಯಾದೆ. ರಾಷ್ಟ್ರೀಯ ಸ್ವಾತಂತ್ರ್ಯವನ್ನು ಮತ್ತು ಸಾಮಾಜಿಕ ಬದಲಾವಣೆಯನ್ನು ಗಳಿಸಬೇಕಾದರೆ ಅದು ರಾಜಕೀಯ ಚಟುವಟಿಕೆಯಿಂದ ಮಾತ್ರ ಸಾಧ್ಯ ಎಂದು ನಾವು ತೀರ್ಮಾನಿಸಿದೆವು. ವಿದ್ಯಾರ್ಥಿಗಳ ನಮ್ಮ ಗುಂಪು ಅನೇಕ ರಾಜಕೀಯ ಚಳುವಳಿಗಳನ್ನು ಏರ್ಪಡಿಸಿತು. ಅಂಥ ಪ್ರತಿಯೊಂದು ಚಳುವಳಿ ಕೊನೆಗೆ ಜಗಳ, ದೊಂಬಿಯಲ್ಲೇ ಕೊನೆಗೊಳ್ಳುತ್ತಿತ್ತು. ಅದರಿಂದಾಗಿ ನನ್ನ ಗೆಳೆಯರಲ್ಲಿ ಅನೇಕರಿಗೆ ಹಾನಿಯೂ ಉಂಟಾಯಿತು. ಕೆಲವರು ದುರ್ಮರಣವನ್ನು ಸಹ ಅಪ್ಪಿದರು.
ಕೊನೆಗೂ ಇಸವಿ 2002ರಲ್ಲಿ ಪೂರ್ವ ಟಿಮೋರಿಗೆ ಸ್ವಾತಂತ್ರ್ಯ ಸಿಕ್ಕಿದಾಗ ಸಾವಿರಾರು ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ರು, ಲಕ್ಷಗಟ್ಟಲೆ ಜನರು ಊರನ್ನೇ ಬಿಟ್ಟು ಹೋಗಿದ್ರು. ಪರಿಸ್ಥಿತಿ ಸುಧಾರಿಸಬಹುದೆಂದು ಅನಿಸಿತು. ಆದ್ರೆ ಹಾಗಾಗಲಿಲ್ಲ. ನಿರುದ್ಯೋಗ, ಬಡತನ, ರಾಜಕೀಯ ಗೊಂದಲ ಇದು ಮುಂದುವರಿಯುತ್ತಲೇ ಇತ್ತು.
ಹೊಸ ತಿರುವು
ಆ ಸಮಯದಲ್ಲಿ ನಾನು ನನ್ನ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದೆ. ದೂರ ಸಂಬಂಧಿಯಾದ ಓನ್‌ಡ್ರೆ ಸಹ ಅಲ್ಲಿದ್ದ. ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್ ಕಲಿಯುತ್ತಿದ್ದ. ನಾನು ಕ್ಯಾಥೊಲಿಕ್ ಧರ್ಮಕ್ಕೆ ಸೇರಿದವನಾದ ಕಾರಣ ಅವನು ಬೇರೊಂದು ಧರ್ಮಕ್ಕೆ ಸೇರಿದ್ದು ನನಗೆ ಇಷ್ಟವಾಗಲಿಲ್ಲ. ಹಾಗಿದ್ರು ಬೈಬಲಿನಲ್ಲಿ ಏನಿದೆ ಎಂಬ ಕುತೂಹಲ ನನಗಿತ್ತು. ಓನ್‌ಡ್ರೆ ತನ್ನ ಕೋಣೆಯಲ್ಲಿ ಇಟ್ಟಿದ್ದ ಬೈಬಲನ್ನು ಆಗ್ಗಿಂದಾಗೆ ಓದುತ್ತಿದ್ದೆ. ನಾನೇನು ಓದಿದೆನಾ ಅದು ನನ್ನ ಆಸಕ್ತಿಯನ್ನು ಇನ್ನಷ್ಟು ಕೆರಳಿಸಿತು.
ಇಸವಿ 2004ರಲ್ಲಿ ಓನ್‌ಡ್ರೆ ನನಗೆ ಯೇಸುವಿನ ಮರಣದ ಸ್ಮರಣೆಗೆ ಹಾಜರಾಗುವಂತೆ ಆಮಂತ್ರಣ ನೀಡಿದ. ಕಾರ್ಯಕ್ರಮದ ಸಮಯವನ್ನು ತಪ್ಪಾಗಿ ಓದಿದ ಕಾರಣ ನಾನು ಎರಡು ತಾಸು ಮುಂಚಿತವಾಗಿಯೇ ಕೂಟದ ಸ್ಥಳಕ್ಕೆ ಹೋದೆ. ಸಾಕ್ಷಿಗಳು ಬಂದಾಗ ನನ್ನನ್ನು ನೋಡಿ ಪ್ರೀತಿಯಿಂದ ಕೈಕುಲುಕಿ, ಸ್ವಾಗತಿಸಿದ್ರು. ನನಗೆ ಆಶ್ಚರ್ಯವಾಯ್ತು. ಸಾಕ್ಷಿಗಳಲ್ಲಿ ಸ್ಥಳೀಯರೂ ವಿದೇಶಿಯರೂ ಎಲ್ಲರೂ ಅಲ್ಲಿದ್ರು. ಸ್ಮರಣೆಯ ಭಾಷಣ ನೀಡಲ್ಪಡುವಾಗ ನಾನು ಪ್ರತಿಯೊಂದು ವಚನವನ್ನು ಒಂದು ಪುಸ್ತಕದಲ್ಲಿ ಬರೆದುಕೊಂಡೆ. ಮನೆಗೆ ಹೋದ ನಂತರ ನನ್ನ ಕ್ಯಾಥೊಲಿಕ್ ಬೈಬಲನ್ನು ತೆರೆದು ಅದು ಸರಿಯಾ ಎಂದು ಪರೀಕ್ಷಿಸಿ ನೋಡಿದೆ. ಅದೆಲ್ಲವೂ ಸರಿಯಾಗಿತ್ತು. ಅವರು ಹೇಳಿದಂತೆಯೇ ಇತ್ತು.
ನಂತರದ ವಾರ ಚರ್ಚ್ ಮಾಸನ್ನು ಹಾಜರಾದೆ. ನಾವು ಕೆಲವರು ತಡವಾಗಿ ಬಂದ ಕಾರಣ ಪಾದ್ರಿ ಕೋಪದಿಂದ ನಮ್ಮ ಮೇಲೆ ಮರದ ತುಂಡನ್ನು ಎಸೆದು ಚರ್ಚಿನಿಂದ ಹೊರಗೆ ಹಾಕಿದರು. ನಾವು ಹೊರಗೆ ನಿಂತಿದ್ದಂತೆ ಪಾದ್ರಿ ತನ್ನ ಭಾಷಣವನ್ನು ಮುಗಿಸುವಾಗ ನೆರೆದಿದ್ದ ಜನರಿಗೆ “ಯೇಸುವಿನ ಶಾಂತಿಯು ನಿಮ್ಮೊಂದಿಗಿರಲಿ” ಎಂದು ಹೇಳಿ ಮುಗಿಸಿದರು. ಆಗ ಒಬ್ಬ ಧೀರೆ “ಆ ಜನರನ್ನು ಚರ್ಚಿನಿಂದ ಹೊರಹಾಕಿದ ನಿಮಗೆ ಶಾಂತಿಯ ಬಗ್ಗೆ ಮಾತಾಡುವ ಅಧಿಕಾರವಾದ್ರೂ ಏನಿದೆ?” ಅಂದಳು. ಪಾದ್ರಿ ಅವಳ ಕಡೆಗೆ ಗಮನವೇ ಕೊಡಲಿಲ್ಲ. ಅಂದಿನಿಂದ ನಾನು ಪುನಃ ಎಂದೂ ಚರ್ಚಿಗೆ ಹೋಗಲೇ ಇಲ್ಲ.
ಇದಾದ ಬಳಿಕ ನಾನು ಓನ್‌ಡ್ರೆಯೊಂದಿಗೆ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ಆರಂಭಿಸಿದೆ. ಬೈಬಲ್ ಕಲಿಯಲೂ ಶುರುಮಾಡಿದೆ. ಸಂಬಂಧಿಕರಿಂದ ಬಹಳಷ್ಟು ವಿರೋಧ ಬಂತು. “ಹೊಸ ಧರ್ಮದ ವಿಚಾರ ಕಲಿಯುವುದನ್ನು ಮುಂದುವರಿಸಿದ್ರೆ ನಾನು ಹೊಂಡ ತೋಡಿ ನಿಮ್ಮಿಬ್ಬರನ್ನೂ ಹೂತುಬಿಡ್ತೇನೆ” ಎಂದು ಓನ್‌ಡ್ರೆಯ ಅಜ್ಜಿ ಎಚ್ಚರಿಸಿದ್ಳು. ಅವಳ ಗದರಿಕೆ ನಮ್ಮನ್ನು ತಡೆಯಲಿಲ್ಲ. ನಾವು ಆಧ್ಯಾತ್ಮಿಕ ಪ್ರಗತಿ ಮಾಡುತ್ತಾ ಮುಂದುವರಿದೆವು.
ಬದಲಾವಣೆ ಮಾಡಿದೆ
ಬೈಬಲನ್ನು ಕಲಿಯುತ್ತಾ ಹೋದಂತೆ ಪ್ರೀತಿಯಂದರೆ ಏನೆಂದು ತಿಳಿದೆ. ನಾನು ಕನಿಕರ ರಹಿತನೂ ಸದಾ ಜಗಳಕ್ಕೆ ಸಿದ್ಧನೂ ಆಗಿದ್ದೆ. ಜನರಲ್ಲಿ ಭರವಸೆಯನ್ನೂ ಕಳಕೊಂಡಿದ್ದೆ. ಸಾಕ್ಷಿಗಳು ನನ್ನಲ್ಲಿ ವೈಯಕ್ತಿಕ ಆಸಕ್ತಿಯನ್ನು ತೋರಿಸಿ ಸಹಾಯಮಾಡಿದ್ರು. ನಾನು ಅಸ್ವಸ್ಥನಾದಾಗ ನನ್ನ ಸಂಬಂಧಿಕರು ಸಹಾಯಮಾಡದಿದ್ದರೂ ಸಾಕ್ಷಿಗಳು ನನಗೆ ಬೇಕಾದೆಲ್ಲವನ್ನು ಮಾಡಿದ್ರು. ಅವರ ಪ್ರೀತಿ ಮಾತಿನಲ್ಲಿ ಮಾತ್ರವಲ್ಲ ಕ್ರಿಯೆಯಲ್ಲಿ ತೋರಿಬಂತು.—1 ಯೋಹಾನ 3:18.
ನಾನು ನೋಡಲು ಒರಟಾಗಿಯೂ ಕ್ರೂರವಾಗಿಯೂ ಕಾಣುತ್ತಿದ್ದರೂ ಸಾಕ್ಷಿಗಳು ನನಗೆ “ಅನುಕಂಪ” ಹಾಗೂ “ಸಹೋದರ ಮಮತೆ” ತೋರಿಸಿದರು. (1 ಪೇತ್ರ 3:8) ಜೀವನದಲ್ಲಿ ಮೊತ್ತ ಮೊದಲ ಬಾರಿ ನನ್ನನ್ನು ಪ್ರೀತಿಸುವವರೂ ಇದ್ದಾರೆ ಎಂಬ ಭಾವನೆ ನನಗಾಯಿತು. ನನ್ನ ಗುಣಗಳು ಬದಲಾದವು. ದೇವರನ್ನೂ ಜೊತೆ ಮಾನವರನ್ನೂ ಪ್ರೀತಿಸ ತೊಡಗಿದೆ. 2004, ಡಿಸೆಂಬರ್‌ನಲ್ಲಿ ದೇವರಿಗೆ ನನ್ನನ್ನು ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದೆ. ಸ್ವಲ್ಪ ಸಮಯದ ನಂತರ ಓನ್‌ಡ್ರೆ ಸಹ ದೀಕ್ಷಾಸ್ನಾನ ಪಡೆದ.
ತೊಂದರೆಗಳ ಮಧ್ಯೆಯೂ ಆಶೀರ್ವಾದ
ದೀಕ್ಷಾಸ್ನಾನ ಪಡಕೊಂಡ ಸಮಯದಿಂದ ಬೇರೆಯವರಿಗೂ ನಿಜ ಪ್ರೀತಿ ಇಲ್ಲವೆ ನ್ಯಾಯದ ಬಗ್ಗೆ ತಿಳಿಸಬೇಕು ಎಂಬ ಬಯಕೆ ಬೆಂಕಿಯಂತೆ ನನ್ನೊಳಗೆ ಜ್ವಲಿಸತೊಡಗಿತು. ಹಾಗಾಗಿ ಯೆಹೋವನ ಸಾಕ್ಷಿಗಳಲ್ಲಿ ಪಯನೀಯರ್ ಎಂದು ಕರೆಯುವ ಪೂರ್ಣ ಸಮಯದ ಸೇವೆಯನ್ನು ಮಾಡಲು ಆರಂಭಿಸಿದೆ. ಬೈಬಲಿನ ಸಾಂತ್ವನದಾಯಕ ಸಂದೇಶವನ್ನು ಸಾರುವುದು ನಿಜಕ್ಕೂ ಮಹದಾನಂದ ತಂದಿತು. ಯಾವುದೇ ರಾಜಕೀಯ ಚಳುವಳಿಯಲ್ಲಿ, ಕಚ್ಚಾಟದಲ್ಲಿ ಭಾಗವಹಿಸುವುದಕ್ಕಿಂತ ಈ ಕೆಲಸ ಎಷ್ಟೊಂದು ಆಹ್ಲಾದಕರ. ಕೊನೆಗೂ ಜನರಿಗೆ ನಿಜಕ್ಕೂ ಸಹಾಯಮಾಡ ಶಕ್ತನಾದೆ.
ಇಸವಿ 2006ರಲ್ಲಿ ಪೂರ್ವ ಟಿಮೋರಿನಲ್ಲಿ ಪುನಃ ರಾಜಕೀಯ ಹಾಗೂ ಪ್ರಾಂತೀಯ ಗಲಭೆ ಆರಂಭವಾಯ್ತು. ಹಳೇ ದ್ವೇಷ ಮನಸ್ಸಿನಲ್ಲಿಟ್ಟು ಗುಂಪು ಗಲಭೆಗಳು ಆರಂಭವಾದವು. ಡಿಲಿ ಪಟ್ಟಣಕ್ಕೆ ಮುತ್ತಿಗೆ ಹಾಕಲಾಯಿತು. ಅಲ್ಲಿನ ಜನರು ಜೀವ ಉಳಿಸಿಕೊಳ್ಳಲು ಪಲಾಯನಗೈದರು. ನಾನೂ ಇತರ ಸಾಕ್ಷಿಗಳೂ ಬೌಕೌ ಪಟ್ಟಣಕ್ಕೆ ಹೋದೆವು. ಇದು ಡಿಲಿ ಪಟ್ಟಣದಿಂದ ಸುಮಾರು 120 ಕಿ.ಮೀ. ಪೂರ್ವಕ್ಕಿರುವ
ದೊಡ್ಡ ಪಟ್ಟಣ. ಅಲ್ಲಿಗೆ ಹೋದ ನಂತರ ನಮ್ಮ ತೊಂದರೆಗಳೆಲ್ಲಾ ಆಶೀರ್ವಾದವಾಗಿ ಪರಿಣಮಿಸಿತು. ಏಕೆಂದರೆ ಅಲ್ಲಿ ನಾವು ಒಂದು ಹೊಸ ಸಭೆಯನ್ನು ಸ್ಥಾಪಿಸಶಕ್ತರಾದೆವು. ಅಷ್ಟರ ತನಕ ಡಿಲಿ ಪಟ್ಟಣದಿಂದಾಚೆಗೆ ಸಭೆಯೇ ಇರಲಿಲ್ಲ. ಇದೇ ಮೊದಲ ಸಭೆ.ಮೂರು ವರ್ಷಗಳ ನಂತರ ಅಂದ್ರೆ 2009ರಲ್ಲಿ ನನಗೊಂದು ಆಮಂತ್ರಣ ಸಿಕ್ಕಿತು. ಪೂರ್ಣ ಸಮಯದ ಸೇವೆಯಲ್ಲಿ ಇರುವವರಿಗೆ ಇಂಡೋನೇಶಿಯದ ಜಕಾರ್ಟದಲ್ಲಿ ಏರ್ಪಡಿಸಿದ ವಿಶೇಷ ಶಾಲೆಗೆ ಹಾಜರಾಗಲು ಆಮಂತ್ರಣ. ಜಕಾರ್ಟದಲ್ಲಿನ ಸಹೋದರರು ನನಗೆ ಆದರದ ಸ್ವಾಗತ ನೀಡಿದರು. ಅವರ ಮನೆಯಲ್ಲೂ ಮನದಲ್ಲೂ ನನಗೆ ಸ್ಥಳ ನೀಡಿದರು. ಅವರ ಹೃದಯಾಳದ ಪ್ರೀತಿ ನನ್ನನ್ನು ಬಹಳವಾಗಿ ಪ್ರಭಾವಿಸಿತು. ನಾನು ಸಹ ಭೌಗೋಳಿಕ ‘ಸಹೋದರ ಬಳಗದ’ ಭಾಗ ಎಂದು ಭಾಸವಾಯಿತು. ನನ್ನ ಬಗ್ಗೆ ಕಾಳಜಿವಹಿಸುವ ಅಂತಾರಾಷ್ಟ್ರೀಯ ‘ಕುಟುಂಬ’ ಅದು ಎಂಬ ಭಾವನೆಯಾಯಿತು.—1 ಪೇತ್ರ 2:17.
ಕೊನೆಗೂ ಶಾಂತಿ ಲಭಿಸಿತು
ಆ ವಿಶೇಷ ಶಾಲೆಯನ್ನು ಹಾಜರಾಗಿ ನಂತರ ನಾನು ಬೌಕೌ ಪಟ್ಟಣಕ್ಕೆ ಹಿಂದಿರುಗಿದೆ. ಈಗಲೂ ನಾನು ಅಲ್ಲೇ ವಾಸಿಸುತ್ತಿದ್ದೇನೆ. ಒಂದೊಮ್ಮೆ ಬೇರೆಯವರು ನನಗೆ ಸಹಾಯ ಮಾಡುತಿದ್ರು. ಆದ್ರೆ ಈಗ ನಾನು ಸಂತೋಷದಿಂದ ಇಲ್ಲಿನ ಜನರಿಗೆ ಆಧ್ಯಾತ್ಮಿಕ ಸಹಾಯ ನೀಡುತ್ತಿದ್ದೇನೆ. ಉದಾ: ಬೌಕೌ ಪಟ್ಟಣದಿಂದಾಚೆ ಒಂದು ಹಳ್ಳಿಯಲ್ಲಿ ನಾವು ಸುಮಾರು 20 ಮಂದಿಗೆ ಬೈಬಲ್ ಕಲಿಯಲು ಸಹಾಯ ನೀಡುತ್ತಿದ್ದೇವೆ. ಓದು ಬರಹ ಬಾರದ ಅನೇಕ ವೃದ್ಧರಿಗೂ ಸಹಾಯಮಾಡುತ್ತಿದ್ದೇವೆ. ಆ ಎಲ್ಲಾ ಜನರು ವಾರದ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಅವರಲ್ಲಿ ಮೂವರು ದೀಕ್ಷಾಸ್ನಾನ ಪಡೆದು ನಮ್ಮ ಆಧ್ಯಾತ್ಮಿಕ ‘ಕುಟುಂಬದ’ ಭಾಗವಾಗಿದ್ದಾರೆ.
ಅನೇಕ ವರ್ಷಗಳ ಹಿಂದೆ ಫೆಲಿಜಾರ್ಡಾ ಎಂಬ ಸ್ನೇಹ ಸ್ವಭಾವದ ಸ್ತ್ರೀಯನ್ನು ಭೇಟಿಯಾಗಿ ಬೈಬಲ್ ಸತ್ಯವನ್ನು ತಿಳಿಸಿದ್ದೆ. ಅವಳು ಬೇಗನೆ ಪ್ರಗತಿಮಾಡಿ ದೀಕ್ಷಾಸ್ನಾನ ಪಡಕೊಂಡಳು. 2011ರಲ್ಲಿ ನಾವು ವಿವಾಹವಾದೆವು. ನನ್ನ ಸಂಬಂಧಿಕನಾದ ಓನ್‌ಡ್ರೆ ಯೆಹೋವನ ಸಾಕ್ಷಿಗಳ ಪೂರ್ವ ಟಿಮೋರಿನ ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡುತ್ತಿದ್ದಾನೆ ಎಂದು ಹೇಳಲು ನಾನು ಸಂತೋಷಿಸುತ್ತೇನೆ. ಒಂದೊಮ್ಮೆ ನಮ್ಮನ್ನು ಹೊಂಡ ತೋಡಿ ಹೂತುಬಿಡ್ತೇನೆ ಎಂದು ಹೇಳುತ್ತಿದ್ದ ಓನ್‌ಡ್ರೆಯ ಅಜ್ಜಿಯನ್ನು ಸೇರಿಸಿ ನನ್ನ ಸಂಬಂಧಿಕರಲ್ಲಿ ಹೆಚ್ಚಿನವರು ಈಗ ನನ್ನ ನಂಬಿಕೆಯನ್ನು ಗೌರವಿಸುತ್ತಾರೆ.
ಮುಂಚೆ ನಾನು ಮುಂಗೋಪಿಯಾಗಿದ್ದೆ, ‘ಯಾರೂ ನನ್ನನ್ನು ಪ್ರೀತಿಸುದಿಲ್ಲ. ನಾನು ಪ್ರೀತಿಗೆ ಯೋಗ್ಯನೇ ಅಲ್ಲ’ ಎಂಬ ಅನಿಸಿಕೆ ನನಗಿತ್ತು. ಆದರೆ ಈಗ ನಾನು ನಿಜ ಪ್ರೀತಿ, ನೆಮ್ಮದಿಯನ್ನು ಕಂಡುಕೊಂಡಿದ್ದೇನೆ. ಅದಕ್ಕಾಗಿ ಯೆಹೋವನಿಗೆ ಆಭಾರಿಯಾಗಿದ್ದೇನೆ. (g12-E 06)
[ಪುಟ 18ರಲ್ಲಿರುವ ಚಿತ್ರ]
ಎಷಿಡಿಯೊ ರಾಜಕೀಯದಲ್ಲಿ ಭಾಗವಹಿಸುತ್ತಿದ್ದಾಗ
[ಪುಟ 20ರಲ್ಲಿರುವ ಚಿತ್ರ]
ಎಷಿಡಿಯೊ ಮತ್ತು ಫೆಲಿಜಾರ್ಡಾ ಪೂರ್ವ ಟಿಮೋರಿನ ಬೌಕೌ ಸಭೆಯ ಸದಸ್ಯರೊಂದಿಗೆ