ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬಡಬಗ್ಗರು

ಬಡಬಗ್ಗರು

ಬೈಬಲಿನ ದೃಷ್ಟಿಕೋನ

ಬಡಬಗ್ಗರು

ಬಡವರ ಬಗ್ಗೆ ದೇವರಿಗೆ ಕಳಕಳಿ ಇದೆಯಾ?

“ನಿಮ್ಮ ಜೀವನ ರೀತಿಯು ಹಣದ ಪ್ರೇಮದಿಂದ ಮುಕ್ತವಾಗಿರಲಿ . . . ‘ನಾನು ಎಂದಿಗೂ ನಿನ್ನ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ’ ಎಂದು [ದೇವರು ಹೇಳಿದ್ದಾರೆ.]” —ಇಬ್ರಿಯ 13:5.

ದೇವರು ಬಡವರ ಕಾಳಜಿವಹಿಸುವ ವಿಧ. ಯೆಹೋವ ದೇವರ ಒಬ್ಬ ಆರಾಧಕ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದಾಗ ದೇವರು ಆತನಿಗೆ ವಿವಿಧ ರೀತಿಯಲ್ಲಿ ನೆರವು ನೀಡಬಹುದು. ಅದರಲ್ಲಿ ಒಂದು ವಿಧವೆಂದರೆ ಇತರ ಆರಾಧಕರ ಮೂಲಕ ನೀಡುವ ನೆರವು. * ಯಾಕೋಬ 1:27 ಹೇಳುತ್ತೆ “ಸಂಕಟದಲ್ಲಿರುವ ಅನಾಥರನ್ನೂ ವಿಧವೆಯರನ್ನೂ ಪರಾಮರಿಸುವುದು . . . ನಮ್ಮ ದೇವರೂ ತಂದೆಯೂ ಆಗಿರುವಾತನ ದೃಷ್ಟಿಯಲ್ಲಿ ಶುದ್ಧವೂ ಕಳಂಕರಹಿತವೂ ಆಗಿರುವ ಆರಾಧನಾ ರೀತಿಯಾಗಿದೆ.”

ಒಂದನೇ ಶತಮಾನದಲ್ಲಿದ್ದ ಕ್ರೈಸ್ತರು ಇದೇ ರೀತಿ ಪರಸ್ಪರ ಸಹಾಯಹಸ್ತ ನೀಡುತ್ತಿದ್ದರು. ಉದಾ: ಬರ ಬಂದು ಯೂದಾಯ ಪ್ರಾಂತ ತತ್ತರಿಸಿ ಹೋಗುತ್ತೆ ಅಂತ ಭವಿಷ್ಯವಾಣಿ ಕೇಳಿದ ತಕ್ಷಣ ಸಿರಿಯ ಪ್ರಾಂತದಲ್ಲಿದ್ದ ಅಂತಿಯೋಕ್ಯ ಎಂಬ ನಗರದ ಕ್ರೈಸ್ತರು “ಯೂದಾಯದಲ್ಲಿ ವಾಸಿಸುತ್ತಿದ್ದ ಸಹೋದರರಿಗೆ . . . ಪರಿಹಾರ ನಿಧಿಯನ್ನು ಕಳುಹಿಸಲು ನಿರ್ಧರಿಸಿದರು.” (ಅಪೊಸ್ತಲರ ಕಾರ್ಯಗಳು 11:28-30) ಹೀಗೆ ಸ್ವಯಂ ಪ್ರೇರಿತರಾಗಿ ಸಹಾಯ ಮಾಡೋ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದರು. ಇದು ಕಷ್ಟಕಾಲದಲ್ಲಿದ್ದ ಕ್ರೈಸ್ತರ ಅಗತ್ಯಗಳನ್ನು ಪೂರೈಸಿತ್ತು.—1 ಯೋಹಾನ 3:18.

ಪರಿಸ್ಥಿತಿ ಸುಧಾರಣೆಗಾಗಿ ತಾವೇ ಹೇಗೆ ಪ್ರಯತ್ನಿಸಬಹುದು?

“ನಾನೇ ನಿನ್ನ ದೇವರಾದ ಯೆಹೋವನು . . . ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.”—ಯೆಶಾಯ 48:17, 18.

ದಾರಿಕಂಡುಕೊಳ್ಳಲು ದೇವರು ಸಹಾಯಮಾಡುತ್ತಾರೆ. ದೇವರ ಮಾರ್ಗದರ್ಶನ ಕಾರ್ಯಸಾಧು ಮತ್ತು ಅದಕ್ಕೆ ಸರಿಸಾಟಿಯಾದ ಮಾರ್ಗದರ್ಶನ ಲೋಕದಲ್ಲೆಲ್ಲೂ ಸಿಗಲ್ಲ. ಇದನ್ನು ಈಗಾಗಲೇ ಲಕ್ಷಾಂತರ ಜನರು ಅನುಭವದಿಂದ ಸವಿದು ನೋಡಿದ್ದಾರೆ. ಜ್ಞಾನೋಕ್ತಿ 2:6, 7 ಹೀಗೆ ಹೇಳುತ್ತೆ: ‘ಯೆಹೋವ ದೇವರೇ ಜ್ಞಾನವನ್ನು ಕೊಡುವ ದೇವರು, ಅವರ ಬಾಯಿಂದಲೇ ತಿಳುವಳಿಕೆಯೂ ವಿವೇಕವೂ ಹೊರಟು ಬರುತ್ತವೆ. ಅವರು ಯಥಾರ್ಥಚಿತ್ತರಿಗಾಗಿ ಸುಜ್ಞಾನವನ್ನು ಕೂಡಿಸಿಡುವರು.’ ಈ ಸುಜ್ಞಾನವನ್ನು ಅರಸಿ ಕಂಡುಕೊಂಡು ಅಳವಡಿಸಿಕೊಳ್ಳುವವರಿಗೆ ಭರ್ಜರಿ ಪ್ರಯೋಜನಗಳು ಸಿಗುತ್ತೆ.

ಉದಾಹರಣೆಗೆ ಮಾದಕವಸ್ತು ಮತ್ತು ಮದ್ಯಪಾನದಂಥ ಕೆಟ್ಟ, ದುಂದುವೆಚ್ಚದ ಚಟಗಳಿಂದ ದೂರವಿರಬೇಕು ಅನ್ನೋದು ಬೈಬಲ್‌ನ ಒಂದು ಬುದ್ಧಿಮಾತು. ಇದನ್ನು ಕಲಿತ ಜನರು ಅಂಥ ದುಷ್ಚಟಗಳಿಂದ ದೂರವಿರುತ್ತಾರೆ. (2 ಕೊರಿಂಥ 7:1) ಅಲ್ಲದೆ ಪ್ರಜ್ಞಾವಂತ, ಜವಾಬ್ದಾರಿಯುತ ವ್ಯಕ್ತಿಗಳಾಗುತ್ತಾರೆ. ಪ್ರಾಮಾಣಿಕರು, ಒಳ್ಳೇ ಕೆಲಸಗಾರರು ಅನ್ನೋ ಹೆಸರು ಸಂಪಾದಿಸುತ್ತಾರೆ. “ಕಳ್ಳತನ ಮಾಡುವವನು ಇನ್ನು ಮುಂದೆ ಕಳ್ಳತನ ಮಾಡದೆ . . . ಕಷ್ಟಪಟ್ಟು ದುಡಿಯಲಿ; ಆಗ ಅಗತ್ಯದಲ್ಲಿರುವ ಒಬ್ಬನಿಗೆ ಕೊಡಲು ಅವನ ಬಳಿ ಏನಾದರೂ ಇರುವುದು” ಎನ್ನುತ್ತೆ ಎಫೆಸ 4:28.

ಬೈಬಲ್‌ ಕೊಡುವ ಮಾರ್ಗದರ್ಶನದಿಂದ ಬಡವರಿಗೆ ಸಹಾಯವಾಗುತ್ತೆ ಎನ್ನುವುದಕ್ಕೇನು ಆಧಾರ?

“ದೇವರ ಜ್ಞಾನದಿಂದ ಒಳಿತಾಗುತ್ತೆ ಎನ್ನುವುದಕ್ಕೆ ಅದರ ಫಲಿತಾಂಶಗಳೇ ಪುರಾವೆ.”—ಮತ್ತಾಯ 11:19, ದ ನ್ಯೂ ಇಂಗ್ಲಿಷ್‌ ಬೈಬಲ್‌.

ಫಲಿತಾಂಶಗಳೇ ಪುರಾವೆ. ಘಾನಾ ದೇಶದ ನಿವಾಸಿ ವಿಲ್ಸನ್‌ರವರು ತಾತ್ಕಾಲಿಕ ಉದ್ಯೋಗವೊಂದಕ್ಕೆ ಸೇರಿಕೊಂಡಿದ್ದರು. ಅದರ ಅವಧಿ ಮುಗಿಯುತ್ತಾ ಬಂದಿತ್ತು. ಕೊನೇ ದಿನದಂದು ಮಾಲೀಕನ ಕಾರನ್ನು ತೊಳೆಯುತ್ತಿದ್ದಾಗ ಅದರಲ್ಲಿ ಹಣ ಸಿಕ್ಕಿತು. ಆ ಹಣವನ್ನು ನೀನೇ ಇಟ್ಟುಕೊ ಅಂತ ವಿಲ್ಸನ್‌ರವರ ಸೂಪರ್‌ವೈಸರ್‌ ಹೇಳಿದರು. ಆದರೆ ಆ ಹಣ ತೆಗೆದುಕೊಂಡರೆ ಕಳ್ಳತನ ಮಾಡಿದ ಹಾಗೆ ಅಂತ ಯೆಹೋವನ ಸಾಕ್ಷಿಯಾಗಿರುವ ವಿಲ್ಸನ್‌ ಅರಿತಿದ್ದರು. ಹಾಗಾಗಿ ಆ ಹಣವನ್ನು ಅದರ ಮಾಲೀಕನಿಗೇ ಒಪ್ಪಿಸಿದರು. ಹೀಗೆ ಬೈಬಲ್‌ ತತ್ವವನ್ನು ಪಾಲಿಸಿದರ ಫಲಿತಾಂಶ? ವಿಲ್ಸನ್‌ರವರಿಗೆ ಅಲ್ಲೇ ಕಾಯಂ ಕೆಲಸ ಸಿಕ್ಕಿತು. ಸ್ವಲ್ಪಕಾಲದ ನಂತರ ದೊಡ್ಡ ಆಫೀಸರೂ ಆದರು.

ಫ್ರಾನ್ಸ್‌ ದೇಶದ ಜೆರಾಲ್‌ಡೀನ್‌ ಎಂಬವರು ಯೆಹೋವನ ಸಾಕ್ಷಿ. ಈ ಕಾರಣಕ್ಕೆ ಆಕೆಯ ಕೆಲಸ ಹೋಯಿತು. ಏಕೆಂದ್ರೆ ಆಕೆಯ ಯಜಮಾನಿಗೆ ಯೆಹೋವನ ಸಾಕ್ಷಿಗಳೆಂದರೆ ಇಷ್ಟವಿರಲಿಲ್ಲ. ಆದರೆ ಜೆರಾಲ್‌ಡೀನ್‌ ಅನ್ನು ಕೆಲಸದಿಂದ ತೆಗೆಯಬಾರದಿತ್ತೆಂದು ಯಜಮಾನಿಯ ತಾಯಿ ಹೇಳಿದರು. “ಶ್ರದ್ಧೆಯಿಂದ ಕೆಲಸ ಮಾಡೋ ಒಬ್ಬ ನಂಬಿಗಸ್ತ ಕೆಲಸಗಾರ್ತಿ ಬೇಕು ಅಂದರೆ ನೀನು ಒಬ್ಬ ಯೆಹೋವನ ಸಾಕ್ಷಿಯನ್ನೇ ಕೆಲಸಕ್ಕಿಟ್ಟುಕೊಳ್ಳಬೇಕು. ಅವರಿಗಿಂತ ಒಳ್ಳೇ ಕೆಲಸಗಾರರು ನಿನಗೆ ಎಲ್ಲೂ ಸಿಗಲ್ಲ” ಅಂದರು. ಆಗ ಆ ಯಜಮಾನಿ ಯೆಹೋವನ ಸಾಕ್ಷಿಗಳ ಬಗ್ಗೆ ತಿಳಿದುಕೊಂಡಳು. ಜೆರಾಲ್‌ಡೀನ್‌ಳನ್ನು ಪುನಃ ಕೆಲಸಕ್ಕೆ ಸೇರಿಸಿಕೊಂಡಳು.

ದಕ್ಷಿಣ ಆಫ್ರಿಕ ದೇಶದಲ್ಲಿರೋ ಸಾರಾ ಒಬ್ಬ ಒಂಟಿ ತಾಯಿ. ಆಕೆಯ ಆರ್ಥಿಕ ಪರಿಸ್ಥಿತಿ ತುಂಬ ಹದಗೆಟ್ಟಿತು. ಆಗ ನೆರವಿಗೆ ಬಂದದ್ದು ಇತರ ಯೆಹೋವನ ಸಾಕ್ಷಿಗಳು. ಅವರು ಆಕೆಯ ಕುಟುಂಬಕ್ಕೆ ಬೇಕಾದ ಆಹಾರ ಮತ್ತು ಪ್ರಯಾಣದ ಖರ್ಚುವೆಚ್ಚಗಳನ್ನು ನೋಡಿಕೊಂಡರು. ಪ್ರೀತಿ ತೋರಿಸುವಂತೆ ಜನರನ್ನು ಬೈಬಲ್‌ ಹೇಗೆ ಪ್ರೇರಿಸುತ್ತೆ ಅನ್ನೋದನ್ನು ಸಾರಾ ಸ್ವತಃ ಅನುಭವಿಸಿದ್ದಾರೆ. ಆಕೆಯ ಮಕ್ಕಳ ಭಾವನೆ ನೋಡಿ: “ನಮಗೆ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ತುಂಬ ಹೆತ್ತವರಿದ್ದಾರೆ.”

ಇಂಥ ಜೀವಂತ ಉದಾಹರಣೆಗಳನ್ನು ಬರೆಯುತ್ತಾ ಹೋದರೆ ಪುಟಗಳು ಸಾಲವು. ಈ ಉದಾಹರಣೆಗಳು ಜ್ಞಾನೋಕ್ತಿ 1:33ರ ಮಾತನ್ನು ನೆನಪಿಗೆ ತರುತ್ತೆ: “[ಯೆಹೋವ ದೇವರ] ಮಾತಿಗೆ ಕಿವಿಗೊಡುವವನಾದರೋ ಸ್ವಸ್ಥವಾಗಿರುತ್ತಾ ಯಾವ ಕೇಡಿಗೂ ಭಯಪಡದೆ ಸುರಕ್ಷಿತನಾಗಿರುವನು.” ಇದು ನೂರಕ್ಕೆ ನೂರು ಸತ್ಯ! ◼ (g13-E 02)

[ಪಾದಟಿಪ್ಪಣಿ]

^ ಕೆಲವು ದೇಶಗಳಲ್ಲಿ ದೀನದರಿದ್ರರಿಗೆ ಸರ್ಕಾರ ನೆರವು ನೀಡುತ್ತೆ. ಈ ಸೌಲಭ್ಯ ಇಲ್ಲದಾಗ ಸಹಾಯ ಮಾಡಬೇಕಾದದ್ದು ಸಂಬಂಧಿಕರ ಆದ್ಯ ಕರ್ತವ್ಯವಾಗಿದೆ.—1 ತಿಮೊಥೆಯ 5:3, 4, 16.

[ಪುಟ 10ರಲ್ಲಿರುವ ಚಿತ್ರ]