ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾದ ವಾಗ್ವಾದ ನಿಲ್ಲಿಸೋದು ಹೇಗೆ?

ವಾದ ವಾಗ್ವಾದ ನಿಲ್ಲಿಸೋದು ಹೇಗೆ?

ಸುಖೀ ಸಂಸಾರಕ್ಕೆ ಸಲಹೆಗಳು | ವೈವಾಹಿಕ ಜೀವನ

ವಾದ ವಾಗ್ವಾದ ನಿಲ್ಲಿಸೋದು ಹೇಗೆ?

ಸಮಸ್ಯೆ

ನಿಮಗೂ ನಿಮ್ಮ ಸಂಗಾತಿಗೂ ಸಮಾಧಾನದಿಂದ ವಿಷಯಗಳನ್ನು ಬಗೆಹರಿಸುವುದಕ್ಕೆ ಆಗುತ್ತಿಲ್ವಾ? ಮಾತಾಡಿದರೆ ಎಲ್ಲಿ ಬಾಂಬ್‌ ಸಿಡಿಯುತ್ತೋ ಅಂತ ಒಂದೊಂದು ಪದವನ್ನೂ ಯೋಚಿಸಿ ಯೋಚಿಸಿ ಮಾತಾಡುವ ಹಾಗೆ ಆಗಿದೆಯಾ?

ಚಿಂತೆಮಾಡಬೇಡಿ. ಇದನ್ನೆಲ್ಲ ಸರಿಪಡಿಸಲು ನಿಮ್ಮಿಂದಾಗುತ್ತೆ. ಅದಕ್ಕಾಗಿ ನೀವು ಮೊದಲು ನಿಮ್ಮಿಬ್ಬರ ಮಧ್ಯೆ ಯಾಕೆ ವಾಗ್ವಾದ ಉಂಟಾಗುತ್ತೆ ಅನ್ನೋದನ್ನು ಕಂಡುಹಿಡಿಯಬೇಕು.

ಯಾಕೆ ಹೀಗಾಗುತ್ತೆ?

ತಪ್ಪಭಿಪ್ರಾಯಗಳು. ಜಿಲ್ಯನ್‌ * ಎಂಬವರು ಹೇಳ್ತಾರೆ “ನಾನು ಹೇಳ್ಬೇಕಾಗಿರೋ ವಿಷ್ಯನ ಸರಿಯಾಗಿ ಹೇಳಿರಲ್ಲ. ಅಥವಾ ಕೆಲವೊಂದು ಸಲ ಯಾವುದೋ ಒಂದು ವಿಷ್ಯ ಅವರ ಹತ್ರ ಹೇಳಿದ್ದೀನಿ ಅಂತ ನೆನಸಿರ್ತೀನಿ ಆದರೆ ನಾನು ಅದನ್ನು ಹೇಳಿರಲ್ಲ. ಇಷ್ಟೇ ನಡೆದಿರುತ್ತೆ!”

ಭಿನ್ನತೆ. ನಿಮ್ಮ ಹಾಗೂ ನಿಮ್ಮ ಸಂಗಾತಿ ಮಧ್ಯೆ ಎಷ್ಟೇ ಸಮರಸವಿದ್ದರೂ ಕೆಲವೊಂದು ವಿಷಯದಲ್ಲಿ ನಿಮ್ಮಿಬ್ಬರ ಅಭಿಪ್ರಾಯದಲ್ಲಿ ಭಿನ್ನತೆ ಇದ್ದೇ ಇರುತ್ತೆ. ಯಾಕೆಂದರೆ ಇಬ್ಬರು ವ್ಯಕ್ತಿಗಳು ಯಾವತ್ತೂ ದಿಟ್ಟೋ ಒಂದೇ ರೀತಿ ಇರುವುದಿಲ್ಲ. ಇದು ವಿವಾಹ ಜೀವನವನ್ನು ಸ್ವಾರಸ್ಯಕರವಾಗಿನೂ ಮಾಡಬಹುದು ಅಥವಾ ಸಮಸ್ಯೆಗೂ ಕಾರಣವಾಗಬಹುದು. ಆದರೆ ಹೆಚ್ಚಿನ ದಂಪತಿಗಳ ಮಧ್ಯೆ ಇದು ಸಮಸ್ಯೆಯಾಗಿಬಿಡುತ್ತೆ.

ಹೆತ್ತವರ ಕೆಟ್ಟ ಮಾದರಿ. ರೆಕೆಲ್‌ ಅನ್ನುವವರು ಹೇಳುತ್ತಾರೆ “ನನ್ನ ಅಪ್ಪ ಅಮ್ಮ ಯಾವಾಗ್ಲೂ ಜಗಳ ಆಡುತ್ತಿದ್ದರು. ಒಬ್ಬರಿಗೊಬ್ಬರು ಮರ್ಯಾದೆಯಿಂದ ಮಾತಾಡ್ತಾನೇ ಇರಲಿಲ್ಲ. ಅಪ್ಪನ ಹತ್ರ ಅಮ್ಮ ಯಾವ ರೀತಿ ಮಾತಾಡುತ್ತಿದ್ದರೋ ಅದೇ ರೀತಿ ನಾನು ನನ್ನ ಗಂಡನ ಹತ್ರ ಮಾತಾಡುತ್ತಿದ್ದೆ. ಗೌರವದಿಂದ ಮಾತಾಡೋದು ಹೇಗೆ ಅಂತ ನನಗೆ ಗೊತ್ತೇ ಇರಲಿಲ್ಲ.”

ಆಳವಾದ ಭಾವನೆಗಳು. ಹೆಚ್ಚಾಗಿ ಯಾವ ವಿಷಯ ವಾಗ್ವಾದವನ್ನು ಆರಂಭಿಸಿತೋ ಅದು ವಾಗ್ವಾದಕ್ಕೆ ಮುಖ್ಯ ಕಾರಣವಾಗಿರಲ್ಲ. ಉದಾಹರಣೆಗೆ, “ನೀನು ಯಾವಾಗ್ಲೂ ಲೇಟ್‌” ಅನ್ನೋ ಮಾತಿನಿಂದ ವಾಗ್ವಾದ ಆರಂಭವಾಯ್ತು ಅಂತ ಇಟ್ಕೊಳ್ಳಿ. ಅವರು ಹಾಗೆ ಹೇಳೋಕೆ ಕಾರಣ ಸಂಗಾತಿ ಸಮಯ ಪಾಲನೆ ಮಾಡುತ್ತಿಲ್ಲ ಅಂತ ಅಲ್ಲ. ಬದಲಿಗೆ ತಾನು ಅಂದ್ರೆ ನಿರ್ಲಕ್ಷ್ಯ ಅನ್ನೋ ಭಾವನೆ ಅವರಿಗೆ ಬಂದಿರುತ್ತೆ. ಇದೇ ವಾಗ್ವಾದಕ್ಕೆ ಮುಖ್ಯ ಕಾರಣವಾಗಿರುತ್ತೆ.

ಕಾರಣ ಏನೇ ಇರಲಿ ಯಾವಾಗ್ಲೂ ಜಗಳವಾಡೋದು ನಿಮ್ಮ ಆರೋಗ್ಯಕ್ಕೆ ಒಳ್ಳೇದಲ್ಲ. ಅದೂ ಅಲ್ಲದೆ, ಅದು ವಿಚ್ಛೇದನದ ವರೆಗೂ ಹೋಗಿ ನಿಲ್ಲುತ್ತೆ. ಹಾಗಾದರೆ ವಾಗ್ವಾದವನ್ನು ತಡೆಗಟ್ಟುವುದು ಹೇಗೆ?

ಇದಕ್ಕೇನು ಪರಿಹಾರ?

ವಾಗ್ವಾದ ಯಾಕೆ ಆರಂಭವಾಯ್ತು ಅನ್ನೋದನ್ನು ಕಂಡುಹಿಡಿದರೆ ವಾಗ್ವಾದವನ್ನು ತಡೆಗಟ್ಟುವುದು ಸುಲಭ. ಇಬ್ಬರ ಮನಸ್ಸೂ ಶಾಂತವಾಗಿರುವಾಗ ಈ ಕೆಳಗಿನಂತೆ ಮಾಡಿ.

1. ಇಬ್ಬರೂ ಒಂದೊಂದು ಹಾಳೆಯಲ್ಲಿ ಇತ್ತೀಚಿಗೆ ಯಾವ ಕಾರಣಕ್ಕೆ ವಾಗ್ವಾದ ಆಯ್ತು ಅಂತ ಬರೆಯಿರಿ. ನಿಮ್ಮ ಯಾವ ಮಾತಿನಿಂದ ವಾಗ್ವಾದ ಆರಂಭವಾಯಿತೋ ಅದನ್ನೇ ಬರೆಯಿರಿ. ಉದಾಹರಣೆಗೆ “ನೀನು ಇಡೀ ದಿನ ನಿನ್ನ ಫ್ರೆಂಡ್ಸ್‌ ಜೊತೆನೇ ಇದ್ದೆ. ನನಗೆ ಒಂದೇ ಒಂದು ಫೋನ್‌ ಮಾಡಿ ಎಲ್ಲಿದ್ದೀಯಾ ಅಂತ ಹೇಳಲಿಲ್ಲ” ಅಂತ ಗಂಡ ಹೇಳಿರೋದಾದರೆ ಅದನ್ನೇ ಗಂಡ ಬರೆಯಬೇಕು. “ಫೋನ್‌ ಮಾಡಿಲ್ಲ ಅಂತಲ್ಲ ನಾನು ನನ್ನ ಫ್ರೆಂಡ್ಸ್‌ ಜೊತೆ ಇದ್ದೆ ಅನ್ನೋ ಕಾರಣಕ್ಕೇ ನೀವು ಬೇಜಾರು ಮಾಡ್ಕೊಂಬಿಟ್ರಿ” ಅಂತ ಹೆಂಡತಿ ಹೇಳಿರೋದಾದರೆ ಹೆಂಡತಿ ಅದನ್ನೇ ಬರೆಯಬೇಕು.

2. ಇಬ್ಬರೂ ಬಿಚ್ಚು ಮನಸ್ಸಿನಿಂದ ಈ ಪ್ರಶ್ನೆಗಳ ಬಗ್ಗೆ ಚರ್ಚಿಸಿ: “ಈ ವಿಷಯ ಅಷ್ಟು ಗಂಭೀರವಾದದ್ದಾ? ಈ ವಿಷಯವನ್ನು ಅಷ್ಟು ದೊಡ್ಡದು ಮಾಡದೆ ಹಾಗೇ ಬಿಡಬಹುದಿತ್ತಾ?” ಕೆಲವೊಮ್ಮೆ ಸಮಾಧಾನ ಸ್ಥಾಪಿಸಲು ಇಬ್ಬರೂ ತಮ್ಮಲ್ಲಿರುವ ಭಿನ್ನತೆಯನ್ನು ಒಪ್ಪಿಕೊಳ್ಳಬೇಕಾಗುತ್ತೆ. ಪ್ರೀತಿಯಿಂದ ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಬೇಕಾಗುತ್ತೆ.ಬೈಬಲ್‌ ತತ್ವ: ಜ್ಞಾನೋಕ್ತಿ 17:9.

ಒಂದುವೇಳೆ ವಿಷಯ ಅಷ್ಟು ಗಂಭೀರವಾದದ್ದಲ್ಲ ಅಂತ ಇಬ್ಬರಿಗೂ ಅನಿಸುವಲ್ಲಿ ಒಬ್ಬರಿಗೊಬ್ಬರು ಕ್ಷಮೆ ಕೇಳಿ ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಿ.ಬೈಬಲ್‌ ತತ್ವ: ಕೊಲೊಸ್ಸೆ 3:13, 14.

ಒಂದುವೇಳೆ ಅದು ಗಂಭೀರ ವಿಷಯ ಅಂತ ಒಬ್ಬರಿಗೆ ಅಥವಾ ಇಬ್ಬರಿಗೂ ಅನಿಸುವಲ್ಲಿ ಮುಂದಿನ ಹೆಜ್ಜೆಗೆ ಹೋಗಿ.

3. ಆ ವಾಗ್ವಾದ ಆದಾಗ ನಿಮಗೆ ಹೇಗೆ ಅನಿಸುತ್ತಿತ್ತು ಅಂತ ಬರೆಯಿರಿ. ನಿಮ್ಮ ಸಂಗಾತಿಗೂ ಬರೆಯಕ್ಕೆ ಹೇಳಿ. ಉದಾಹರಣೆಗೆ, ಗಂಡನ ಭಾವನೆ ಹೀಗಿರಬಹುದು “ನಿನಗೆ ನನ್ನ ಜೊತೆ ಇರೋದಕ್ಕಿಂತ ನಿನ್ನ ಸ್ನೇಹಿತರ ಜೊತೆ ಇರಕ್ಕಿಷ್ಟ ಅಂತ ನನಗೆ ಅನಿಸುತ್ತಿತ್ತು.” ಹೆಂಡತಿಯ ಭಾವನೆ ಹೀಗಿರಬಹುದು “ನೀವು ನನ್ನ ಮಗು ತರ ನಡೆಸ್ಕೊಳ್ತಿರ. ಮಗು ಪ್ರತಿಯೊಂದನ್ನು ಅಪ್ಪನ ಹತ್ರ ಒಪ್ಸೋ ರೀತಿ ನಿಮ್ಮ ಹತ್ರ ಎಲ್ಲವನ್ನೂ ಒಪ್ಪಿಸ್ಬೇಕು ಅಂತ ಹೇಳ್ತಿರಾ ಅಂತ ಅನಿಸಿತು.”

4. ಇಬ್ಬರೂ ಹಾಳೆಯನ್ನು ಬದಲಿಸಿಕೊಂಡು ಓದಿ. ನಿಮ್ಮ ಸಂಗಾತಿಯ ಮನದಾಳದಲ್ಲಿದ್ದ ಚಿಂತೆ ಏನು? ಇಬ್ಬರೂ ವಾಗ್ವಾದಮಾಡದೆ ತಮ್ಮ ತಮ್ಮ ಮನದಾಳದ ಚಿಂತೆಯನ್ನು ಹೇಗೆ ವ್ಯಕ್ತಪಡಿಸಬಹುದಿತ್ತು? ಅಂತ ಚರ್ಚೆ ಮಾಡಿ.ಬೈಬಲ್‌ ತತ್ವ: ಜ್ಞಾನೋಕ್ತಿ 29:11.

5. ಇನ್ಮುಂದೆ ವಾಗ್ವಾದ ಆಗದಿರಲು ಈಗ ಕಲಿತ ವಿಷಯವನ್ನು ಹೇಗೆ ಅನ್ವಯಿಸಬಹುದು? ಅಂತ ಚರ್ಚಿಸಿ. ◼ (g13-E 02)

[ಪಾದಟಿಪ್ಪಣಿ]

^ ಈ ಲೇಖನದಲ್ಲಿ ಹೆಸರುಗಳನ್ನು ಬದಲಿಸಲಾಗಿದೆ.

[ಪುಟ 8ರಲ್ಲಿರುವ ಚಿತ್ರ]

[ಪುಟ 8ರಲ್ಲಿರುವ ಚಿತ್ರ]

[ಪುಟ 9ರಲ್ಲಿರುವ ಚೌಕ]

ಬೈಬಲಿನ ನುಡಿಮುತ್ತುಗಳು

“ದೋಷವನ್ನು ಮುಚ್ಚಿಡುವವನು ಪ್ರೇಮವನ್ನು ಸೆಳೆಯುವನು; ಎತ್ತಿ ಆಡುತ್ತಿರುವವನು ಸ್ನೇಹವನ್ನು ಕಳೆದುಕೊಳ್ಳುವನು.”—ಜ್ಞಾನೋಕ್ತಿ 17:9.

“ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13.

“ಮೂಢನು ತನ್ನ ಕೋಪವನ್ನೆಲ್ಲಾ ತೋರಿಸುವನು; ಜ್ಞಾನಿಯು ತನ್ನ ಕೋಪವನ್ನು ತಡೆದು ಶಮನಪಡಿಸಿಕೊಳ್ಳುವನು.”—ಜ್ಞಾನೋಕ್ತಿ 29:11.

[ಪುಟ 9ರಲ್ಲಿರುವ ಚೌಕ]

ವಾಗ್ವಾದ ಆಗಿದ್ದರೆ . . .

ಅದರ ಹಿಂದಿರುವ ಕಾರಣ ಹುಡುಕಿ: ವಾಗ್ವಾದದ ಸಮಯದಲ್ಲಿ ನಾನು ನನ್ನ ಸಂಗಾತಿಯಿಂದ ಏನನ್ನು ನಿರೀಕ್ಷಿಸುತ್ತಿದ್ದೆ?

ನಿಜವಾಗ್ಲೂ ಏನು ನಡಿತು ಅಂತ ಯೋಚಿಸಿ: ವಾಗ್ವಾದ ಮಾಡದೆ ಬೇರೆ ಯಾವ ರೀತಿಯಲ್ಲಿ ನಿಮ್ಮ ಮನದಾಳದ ಚಿಂತೆಯನ್ನು ಹೇಳಬಹುದಿತ್ತು?

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

ಒಂದುವೇಳೆ ವಿಷಯ ಅಷ್ಟು ಗಂಭೀರವಾದದ್ದಲ್ಲ ಅಂತ ಇಬ್ಬರಿಗೂ ಅನಿಸುವಲ್ಲಿ ಒಬ್ಬರಿಗೊಬ್ಬರು ಕ್ಷಮೆ ಕೇಳಿ ಆ ವಿಷಯವನ್ನು ಅಲ್ಲಿಗೇ ಬಿಟ್ಟುಬಿಡಿ