ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ಷಮಿಸೋದು ಹೇಗೆ?

ಕ್ಷಮಿಸೋದು ಹೇಗೆ?

ಸುಖೀ ಸಂಸಾರಕ್ಕೆ ಸಲಹೆಗಳು

ವೈವಾಹಿಕ ಜೀವನ ಕ್ಷಮಿಸೋದು ಹೇಗೆ?

ಸವಾಲು

ನಿಮ್ಮ ಮತ್ತು ನಿಮ್ಮ ಸಂಗಾತಿಯ ಮಧ್ಯೆ ಜಗಳ ನಡೆದರೆ ಹಿಂದೆ ನಡೆದ ವಿಷಯಗಳನ್ನೆಲ್ಲ ಕೆದಕುತ್ತೀರ ಅಂತಿಟ್ಟುಕೊಳ್ಳಿ. ಯಾವಾಗಲೋ ಸರಿಯಾಗಬೇಕಾಗಿದ್ದ ಸಮಸ್ಯೆಗಳು ಆಗ ಮತ್ತೆ ಜೀವ ಪಡೆದುಕೊಳ್ಳುತ್ತವೆ. ಯಾಕೆ ಹೀಗೆ? ನಿಮ್ಮಲ್ಲಿ ಅಥವಾ ನಿಮ್ಮಿಬ್ಬರಲ್ಲೂ ಕ್ಷಮಾಗುಣದ ಕೊರತೆ ಇದೆ ಅಂತ ಅರ್ಥ.

ಆದರೆ ಕ್ಷಮಿಸೋದು ಹೇಗೆ ಅಂತ ನೀವು ಕಲಿಯಬಹುದು. ಅದಕ್ಕಾಗಿ, ಸಾಮಾನ್ಯವಾಗಿ ಗಂಡ-ಹೆಂಡತಿಗೆ ಯಾಕೆ ಕ್ಷಮಿಸಲು ಕಷ್ಟವಾಗುತ್ತೆ ಅಂತ ನೀವು ತಿಳಿದುಕೊಳ್ಳಬೇಕು.

ಯಾಕೆ ಹೀಗಾಗುತ್ತೆ?

ಹಿಡಿತ ಸಾಧಿಸಲು. ಕೆಲವರು ತಮ್ಮ ಸಂಗಾತಿಯನ್ನು ಹಿಡಿತದಲ್ಲಿಡುವ ಸಲುವಾಗಿ ಅವರನ್ನು ಕ್ಷಮಿಸಲ್ಲ. ಹಾಗಾಗಿ ಇಂಥ ದಂಪತಿಗಳ ಮಧ್ಯೆ ಏನಾದರೂ ಭಿನ್ನಾಭಿಪ್ರಾಯ ಎದ್ದರೆ ಸಂಗಾತಿಯ ಬಾಯಿಮುಚ್ಚಿಸಲು ಹಳೆಯದನ್ನೆಲ್ಲ ಕೆದಕುತ್ತಾರೆ.

ನೋವು ಮಾಸದಿದ್ದಾಗ. ಮನಸ್ಸಿಗೆ ಆದ ಗಾಯ ವಾಸಿಯಾಗಲು ಸಮಯ ಹಿಡಿಯುತ್ತೆ. ಒಬ್ಬ ಗಂಡ ಅಥವಾ ಹೆಂಡತಿ ‘ಹೋಗಲಿ . . . ಪರವಾಗಿಲ್ಲ’ ಅಂತ ಹೇಳಬಹುದು. ಆದರೆ ಅಸಮಾಧಾನ ಅನ್ನೋದು ಮನಸ್ಸಿನಿಂದ ಅಷ್ಟು ಬೇಗ ಹೋಗಲ್ಲ. ಕೆಲವೊಮ್ಮೆ ಮನಸ್ಸು ಸೇಡು ತೀರಿಸಲು ಹವಣಿಸುತ್ತದೆ.

ನಿರಾಶೆ ಆದಾಗ. ವಿವಾಹ ಬಾಂಧವ್ಯ ಅಂದರೆ ಕಥೆ-ಕಾದಂಬರಿಗಳಲ್ಲಿ ಇರೋ ಹಾಗೆ ಹೂವಿನ ಹಾದಿ ಅಂದುಕೊಂಡು ಕೆಲವರು ಮದುವೆಯಾಗುತ್ತಾರೆ. ಇಂಥ ದಂಪತಿಗಳ ಮಧ್ಯೆ ಜಗಳವಾದಾಗ ತಮ್ಮ ಅಭಿಪ್ರಾಯವನ್ನು ಬಿಟ್ಟುಕೊಡಲು ಅವರು ಇಷ್ಟಪಡಲ್ಲ. ಯಾಕೆಂದರೆ ‘ಇವನು/ಇವಳೇ ನನಗೆ ಸರಿಯಾದ ಜೋಡಿ’ ಅಂತ ಅಂದುಕೊಂಡು ಮದುವೆಯಾಗಿರುತ್ತಾರೆ. ಭಿನ್ನಾಭಿಪ್ರಾಯದ ಮಾತೇ ಬರಲ್ಲ ಅಂತ ನೆನಸಿರುತ್ತಾರೆ. ಹೀಗೆ ಅತಿಯಾದ ನಿರೀಕ್ಷೆ ಇಟ್ಟುಕೊಂಡಾಗಲೇ ಹೆಚ್ಚಾಗಿ ಸಂಗಾತಿಯಲ್ಲಿ ತಪ್ಪು ಹುಡುಕಲು ಶುರುಮಾಡುವುದು. ಕ್ಷಮಿಸಲು ಕಷ್ಟವಾಗುವುದೂ ಆವಾಗಲೇ.

ತಪ್ಪು ಕಲ್ಪನೆ ಇದ್ದಾಗ. ತಪ್ಪು ಕಲ್ಪನೆಯಿಂದಾಗಿ ಕೂಡ ದಂಪತಿಗಳು ಕ್ಷಮಿಸಲು ಹಿಂದೆಮುಂದೆ ನೋಡುತ್ತಾರೆ. ಉದಾ:

ನಾನು ಕ್ಷಮಿಸಿಬಿಟ್ಟರೆ ಅವಳ/ಅವರ ತಪ್ಪು ಅಂಥಾ ದೊಡ್ಡ ತಪ್ಪೇನಲ್ಲ ಅಂತ ಹೇಳಿದ ಹಾಗಾಗಿಬಿಡುತ್ತೆ.

ನಾನು ಕ್ಷಮಿಸಿಬಿಟ್ಟರೆ ನಡೆದದ್ದನ್ನೆಲ್ಲ ಪೂರ್ತಿ ಮರೆಯಬೇಕಾಗುತ್ತೆ.

ಕ್ಷಮಿಸಿದರೆ ನನ್ನ ಮೇಲೆ ಇನ್ನೂ ದೌರ್ಜನ್ಯ ನಡೆಯುತ್ತೆ.

ಸಂಗಾತಿಯನ್ನು ಕ್ಷಮಿಸಿದರೆ ಇದೆಲ್ಲ ನಡೆದೇ ನಡೆಯುತ್ತೆ ಅಂತೇನಿಲ್ಲ. ನಿಮಗೆ ಇಂಥ ತಪ್ಪು ಕಲ್ಪನೆಗಳು ಇಲ್ಲದಿದ್ದರೂ ಒಬ್ಬರನ್ನು ಕ್ಷಮಿಸುವುದು ಅಂದರೆ ಅದು ಕಷ್ಟದ ಕೆಲಸನೇ. ಅದರಲ್ಲೂ ಪತಿಪತ್ನಿಯ ವಿಷಯದಲ್ಲಂತೂ ಇನ್ನೂ ಕಷ್ಟ.

ಇದಕ್ಕೇನು ಪರಿಹಾರ?

ಕ್ಷಮಿಸೋದು ಅಂದರೇನು ಅಂತ ಅರ್ಥಮಾಡಿಕೊಳ್ಳಿ. “ಕ್ಷಮಿಸಿಬಿಡು” ಅನ್ನೋ ಪದಕ್ಕೆ ಕೆಲವು ಸಲ ಬೈಬಲಿನಲ್ಲಿ “ಬಿಟ್ಟುಬಿಡು” ಅನ್ನೋ ಅರ್ಥವಿದೆ. ಇದರ ಅರ್ಥ ನೀವು ನಡೆದದ್ದನ್ನೆಲ್ಲ ಸಂಪೂರ್ಣ ಮರೆತು ಬಿಡಬೇಕು ಅಂತಾನೋ ಅಥವಾ ಏನೂ ನಡೆದೇ ಇಲ್ಲ ಅನ್ನೋ ತರ ಇರಬೇಕು ಅಂತಾನೋ ಅಲ್ಲ. ನಿಮ್ಮ ಮತ್ತು ನಿಮ್ಮ ವಿವಾಹ ಬಂಧದ ಒಳಿತಿಗಾಗಿ ಕೆಲವೊಮ್ಮೆ ನೀವು ವಿಷಯವನ್ನು ಬಿಟ್ಟುಬಿಡಬೇಕಾಗುತ್ತೆ.

ಕ್ಷಮಿಸದೇ ಇದ್ದರೆ ಆಗುವ ಕೆಟ್ಟ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಿ. ಕೆಲವು ಪರಿಣತರು ಹೇಳುವುದೇನೆಂದರೆ, ಮನಸ್ಸಲ್ಲಿ ಕೋಪವನ್ನು ಹಾಗೇ ಇಟ್ಟುಕೊಳ್ಳುವುದರಿಂದ ಶಾರೀರಿಕ ಮತ್ತು ಮಾನಸಿಕ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚು. ಖಿನ್ನತೆ, ರಕ್ತದೊತ್ತಡದಂಥ ಕಾಯಿಲೆಗಳು ಬರಬಹುದು. ಮದುವೆ ಬಾಂಧವ್ಯಕ್ಕೆ ಇದರಿಂದ ಹಾನಿಯಾಗುತ್ತೆ. ಅದಕ್ಕೇ ಬೈಬಲ್‌ ಹೇಳುತ್ತೆ: “ಒಬ್ಬರಿಗೊಬ್ಬರು ದಯೆಯುಳ್ಳವರಾಗಿಯೂ ಕೋಮಲ ಸಹಾನುಭೂತಿಯುಳ್ಳವರಾಗಿಯೂ . . . ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿಯೂ ಇರಿ.”—ಎಫೆಸ 4:32.

ಕ್ಷಮಿಸುವುದರಿಂದ ಯಾವೆಲ್ಲ ಪ್ರಯೋಜಗಳಿವೆ ಅಂತ ಅರ್ಥಮಾಡಿಕೊಳ್ಳಿ. ನಿಮಗೆ ಕ್ಷಮಿಸುವ ಗುಣವಿದ್ದರೆ ನಿಮ್ಮ ಸಂಗಾತಿ ಎಷ್ಟು ತಪ್ಪು ಮಾಡಿದರು ಅಂತ ನೀವು ಲೆಕ್ಕ ಇಟ್ಟುಕೊಳ್ಳುವುದಿಲ್ಲ. ಬದಲಿಗೆ ಅವರಿಗೆ ನಿಮ್ಮನ್ನು ನೋಯಿಸುವ ಉದ್ದೇಶವಿರಲಿಲ್ಲ ಅನ್ನೋ ನಂಬಿಕೆಯನ್ನು ಬೆಳೆಸಿಕೊಳ್ಳುತ್ತೀರಿ. ಆಗ ನೀವು ಮನಸ್ಸಿನಿಂದ ನೋವನ್ನು ಕಿತ್ತು ಅದರ ಜಾಗದಲ್ಲಿ ಸಂಗಾತಿ ಬಗ್ಗೆ ಪ್ರೀತಿಯನ್ನು ಪೋಷಿಸುತ್ತೀರಿ.ಬೈಬಲ್‌ ತತ್ವ: ಕೊಲೊಸ್ಸೆ 3:13.

ವಾಸ್ತವ ಒಪ್ಪಿಕೊಳ್ಳಿ. ನಿಮ್ಮ ಸಂಗಾತಿಯಲ್ಲಿ ಕೆಲವು ಕುಂದುಕೊರತೆ ಇರಬಹುದು. ಅದನ್ನು ನೀವು ಮನ್ನಿಸಬೇಕಾದರೆ ಅವರು ಹೇಗಿದ್ದಾರೋ ಹಾಗೇ ಒಪ್ಪಿಕೊಳ್ಳಿ. ನಿಮ್ಮ ಸಂಗಾತಿಯ ತಪ್ಪುಗಳಿಗೆ ಗಮನ ಕೊಡುತ್ತಾ ಇದ್ದರೆ ಅವರಲ್ಲಿರುವ ಒಳ್ಳೇ ಗುಣಗಳು ನಿಮಗೆ ಕಾಣಿಸುವುದೇ ಇಲ್ಲ ಎಂದು ವಿವಾಹದ ಬಗ್ಗೆ ಇರುವ ಒಂದು ಪುಸ್ತಕ ಹೇಳುತ್ತೆ. ಆ ಪುಸ್ತಕ ಮುಂದುವರಿಸಿ ಒಂದು ಪ್ರಶ್ನೆ ಕೇಳುವುದು: “ಹಾಗಾದರೆ ನಿಮ್ಮ ಜೀವನದಲ್ಲಿ ನೀವು ಯಾವುದಕ್ಕೆ ಸ್ಥಾನ ಕೊಡುತ್ತೀರಾ?” ನೆನಪಿಡಿ, ತಪ್ಪು ಮಾಡದವರು ಯಾರೂ ಇಲ್ಲ. ನಿಮ್ಮಿಂದ ಕೂಡ ತಪ್ಪಾಗುತ್ತೆ.ಬೈಬಲ್‌ ತತ್ವ: ಯಾಕೋಬ 3:2.

ಅತಿಯಾದ ನಿರೀಕ್ಷೆ ಇಡಬೇಡಿ. ಮುಂದೆ ಯಾವತ್ತಾದರೂ ನಿಮ್ಮ ಸಂಗಾತಿ ಹೇಳಿದ ಒಂದು ಮಾತು ಅಥವಾ ಮಾಡಿದ ಒಂದು ವಿಷಯ ನಿಮಗೆ ನೋವು ತಂದರೆ ಹೀಗೆ ಯೋಚನೆ ಮಾಡಿ: ‘ಇದೇನು ಅಂಥಾ ದೊಡ್ಡ ತಪ್ಪಾ? ಇದಕ್ಕಾಗಿ ಅವರು/ಅವಳು ಬಂದು ನನ್ನ ಹತ್ತಿರ ಕ್ಷಮೆ ಕೇಳಬೇಕಾ? ನಾನೇ ಕ್ಷಮಿಸಬಹುದಲ್ಲ?’ಬೈಬಲ್‌ ತತ್ವ: 1 ಪೇತ್ರ 4:8.

ಅಗತ್ಯವಿದ್ದರೆ ಕೂತು ಚರ್ಚಿಸಿ. ಸಮಾಧಾನವಾಗಿ ಮಾತಾಡಿ. ನಿಮಗೆ ಯಾವುದರಿಂದ ನೋವಾಯಿತು, ಯಾಕಾಯಿತು ಅಂತ ಹೇಳಿ. ನಿಮ್ಮ ಸಂಗಾತಿಯ ವರ್ತನೆಯ ಹಿಂದೆ ತಪ್ಪಾದ ಉದ್ದೇಶವಿತ್ತು ಅಂತ ಆರೋಪ ಹೊರಿಸಬೇಡಿ. ತಾನು ಹೇಳಿದ್ದೇ ಸರಿ ಅಂತ ಹಠಹಿಡಿಯಬೇಡಿ. ಆಗ ನಿಮ್ಮ ಸಂಗಾತಿ ತಮ್ಮನ್ನು ಸಮರ್ಥಿಸಿಕೊಳ್ಳುವ ಹಾಗೇ ನೀವೇ ಮಾಡಿದಂತಾಗುತ್ತದೆ. ಹಾಗಾಗಿ ಸಂಗಾತಿಯ ವರ್ತನೆಯಿಂದ ನಿಮಗೆ ಹೇಗೆ ನೋವಾಗಿದೆ ಅಂತ ಹೇಳಿ ಸಾಕು. ◼ (g13-E 09)

[ಪುಟ 10ರಲ್ಲಿರುವ ಚಿತ್ರ]

[ಪುಟ 10ರಲ್ಲಿರುವ ಚಿತ್ರ]

[ಪುಟ 11ರಲ್ಲಿರುವ ಚೌಕ]

ಬೈಬಲಿನ ನುಡಿಮುತ್ತುಗಳು

“ಯಾವನಿಗಾದರೂ ಮತ್ತೊಬ್ಬನ ವಿರುದ್ಧ ದೂರುಹೊರಿಸಲು ಕಾರಣವಿದ್ದರೂ ಒಬ್ಬರನ್ನೊಬ್ಬರು ಸಹಿಸಿಕೊಂಡು ಒಬ್ಬರನ್ನೊಬ್ಬರು ಉದಾರವಾಗಿ ಕ್ಷಮಿಸುವವರಾಗಿರಿ.”—ಕೊಲೊಸ್ಸೆ 3:13.

“ನಾವೆಲ್ಲರೂ ಅನೇಕ ಬಾರಿ ಎಡವುತ್ತೇವೆ.”—ಯಾಕೋಬ 3:2.

“ಪ್ರೀತಿಯು ಬಹು ಪಾಪಗಳನ್ನು ಮುಚ್ಚುತ್ತದೆ.”—1 ಪೇತ್ರ 4:8.

[ಪುಟ 11ರಲ್ಲಿರುವ ಚೌಕ]

ನೀವು ಕ್ಷಮೆ ಕೇಳುವಾಗ. . .

ನಿಮ್ಮ ಸಂಗಾತಿಗೆ ನಿಮ್ಮಿಂದ ನೋವಾಗಿರುವುದಾದರೆ ಮನದಾಳದಿಂದ ಕ್ಷಮೆ ಕೇಳಿ. ಅವರ ಅಭಿಪ್ರಾಯವನ್ನು ನೀವು ಒಪ್ಪಿಕೊಳ್ಳದೆ ಇದ್ದರೂ ಪರ್ವಾಗಿಲ್ಲ, ನಿಮ್ಮಿಂದ ಅವರ ಮನಸ್ಸಿಗೆ ನೋವಾಗಿರುವುದರಿಂದ ಕ್ಷಮೆ ಕೇಳಿ. ಮತ್ತೆ ಮತ್ತೆ ನಿಮ್ಮಿಂದ ಆ ತಪ್ಪಾಗದಂತೆ ಶ್ರಮಿಸಿ. ಆಗ ನೀವು ಮನದಾಳದಿಂದಲೇ ಕ್ಷಮೆ ಕೇಳಿದ್ದೀರಿ ಅಂತ ಸಂಗಾತಿಗೆ ವಿಶ್ವಾಸ ಮೂಡುತ್ತದೆ.