ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

 ಮುಖಪುಟ ಲೇಖನ | ‘ನಾನ್ಯಾಕೆ ಬದುಕಿರಬೇಕು?’

ಸಹಾಯ ಇದೆ

ಸಹಾಯ ಇದೆ

“ನಿಮ್ಮ ಚಿಂತೆಯನ್ನೆಲ್ಲಾ [ದೇವರ] ಮೇಲೆ ಹಾಕಿರಿ, ಏಕೆಂದರೆ ಆತನು ನಿಮಗೋಸ್ಕರ ಚಿಂತಿಸುತ್ತಾನೆ.”—1 ಪೇತ್ರ 5:7.

ಪರಿಸ್ಥಿತಿಯನ್ನು ಸುಧಾರಿಸಲು ನಿಮ್ಮ ಕೈಯಿಂದ ಏನೂ ಮಾಡಲಿಕ್ಕಾಗುವುದಿಲ್ಲ ಎಂದನಿಸಿದಾಗ ಬದುಕು ಭಾರವೆನಿಸಿ ಸಾಯೋದೇ ಮೇಲು ಎಂಬ ಯೋಚನೆ ಬರಬಹುದು. ಆದರೆ ಅಂಥ ಸನ್ನಿವೇಶವನ್ನು ನಿಭಾಯಿಸಲು ನಿಮಗೆ ಸಿಗುವ ಕೆಲವು ಸಹಾಯಗಳನ್ನು ಗಮನಿಸಿ.

ಪ್ರಾರ್ಥನೆ. ಪ್ರಾರ್ಥನೆ ಅನ್ನೋದು ಮನಸ್ಸಿನ ನೆಮ್ಮದಿಗಾಗಿಯೋ ಬೇರಾವ ದಾರಿ ಇಲ್ಲದಿರುವಾಗಲೋ ಮಾಡುವಂಥದ್ದಲ್ಲ. ಅದು, ನಿಮ್ಮ ಬಗ್ಗೆ ಕಳಕಳಿಯಿರುವ ಯೆಹೋವ ದೇವರೊಂದಿಗೆ ನೀವು ಮಾಡುವ ಸಂವಾದ. ನಿಮ್ಮ ಮನಸ್ಸಿನ ನೋವು, ತಳಮಳಗಳನ್ನು ತನ್ನಲ್ಲಿ ತೋಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. ಬೈಬಲ್‌ ಏನೆಂದು ಉತ್ತೇಜಿಸುತ್ತದೆ ಗಮನಿಸಿ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು.”—ಕೀರ್ತನೆ 55:22.

ಆದ್ದರಿಂದ ಇವತ್ತೇ ದೇವರ ಹತ್ತಿರ ಮಾತಾಡಿ. ‘ಯೆಹೋವ’ ಎಂಬ ಆತನ ಹೆಸರು ಹಿಡಿದು ಕರೆಯಿರಿ. ಹೃದಯಬಿಚ್ಚಿ ಮಾತಾಡಿರಿ. (ಕೀರ್ತನೆ 62:8) ನೀವು ಆತನನ್ನು ಸ್ನೇಹಿತನಾಗಿ ಮಾಡಿಕೊಳ್ಳಬೇಕೆಂದು ಯೆಹೋವನು ಬಯಸುತ್ತಾನೆ. (ಯೆಶಾಯ 55:6; ಯಾಕೋಬ 2:23) ಯಾವುದೇ ಸಮಯದಲ್ಲಿ ಯಾವುದೇ ಸ್ಥಳದಲ್ಲಿ ನಿಮಗಿರುವ ಸಂವಾದ ಮಾಧ್ಯಮ ಪ್ರಾರ್ಥನೆಯೊಂದೇ.

“ಆತ್ಮಹತ್ಯೆ ಮಾಡಿಕೊಂಡವರಲ್ಲಿ 90% ಅಥವಾ ಅದಕ್ಕಿಂತಲೂ ಹೆಚ್ಚಿನವರಿಗೆ ಸಾಯುವ ಸಂದರ್ಭದಲ್ಲಿ ಮಾನಸಿಕ ಸಮಸ್ಯೆಯಿತ್ತು. ಹಾಗಿದ್ದರೂ ಹೆಚ್ಚಿನ ಪ್ರಕರಣಗಳಲ್ಲಿ ಅದನ್ನು ಗುರುತಿಸಲಾಗಿರಲಿಲ್ಲ, ವೈದಕೀಯ ಪರೀಕ್ಷೆ ಮಾಡಿರಲಿಲ್ಲ ಅಥವಾ ಅಗತ್ಯವಿದ್ದ ಚಿಕಿತ್ಸೆಯನ್ನೂ ಕೊಟ್ಟಿರಲಿಲ್ಲ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ.”—ಅಮೆರಿಕನ್‌ ಫೌ೦ಡೇಷನ್‌ ಫಾರ್‌ ಸೂಸೈಡ್ ಪ್ರಿವೆನ್ಷನ್‌.

ನಿಮ್ಮ ಬಗ್ಗೆ ಕಾಳಜಿವಹಿಸುವ ಜನರು. ನೀವು ಬದುಕಿರುವುದು ಇತರರಿಗೆ ಅದರಲ್ಲೂ ನಿಮ್ಮ ಕಾಳಜಿವಹಿಸುವ ಮನೆಮಂದಿಗೆ ಅಥವಾ ಸ್ನೇಹಿತರಿಗೆ ಮುಖ್ಯ. ನಿಮ್ಮ ಕಾಳಜಿವಹಿಸುವವರಲ್ಲಿ ನೀವೆಂದೂ ಭೇಟಿಮಾಡಿರದ ಜನರೂ ಸೇರಿದ್ದಾರೆ. ಯೆಹೋವನ ಸಾಕ್ಷಿಗಳ ಕುರಿತು ಗಮನಿಸಿ. ಅವರು ಸೇವೆ ಮಾಡುವ ಸಂದರ್ಭದಲ್ಲಿ ನಿಮ್ಮಂತೆ ಹತಾಶೆಗೊಂಡಿರುವ ಜನರನ್ನು ಕೆಲವೊಮ್ಮೆ ಭೇಟಿಯಾಗಿದ್ದಾರೆ. ಅವರಲ್ಲಿ ಕೆಲವರು, ತಾವು ಸಹಾಯಕ್ಕಾಗಿ ಹಾತೊರೆಯುತ್ತಿದ್ದೆವು ಮತ್ತು ದಿಕ್ಕುಕಾಣದೆ ಸಾಯುವ ನಿರ್ಧಾರಕ್ಕೆ ಬಂದಿದ್ದೆವು ಎಂದು ಒಪ್ಪಿಕೊಂಡಿದ್ದಾರೆ. ಸಾಕ್ಷಿಗಳು ಮನೆಯಿಂದ ಮನೆಗೆ ಭೇಟಿ ಮಾಡುವುದು ನೊಂದ ಜನರಿಗೆ ಸಹಾಯ, ಸಾಂತ್ವನ ನೀಡಲು ಒಳ್ಳೇ ಸಂದರ್ಭ ಒದಗಿಸಿದೆ. ಹೌದು, ಯೇಸುವಿನ ಮಾದರಿಯನ್ನು ಅನುಕರಿಸುವ ಅವರಿಗೆ ಇತರರ ಬಗ್ಗೆ ಕಾಳಜಿಯಿದೆ. ನಿಮ್ಮ ಬಗ್ಗೆ ಕೂಡ.—ಯೋಹಾನ 13:35.

ಪರಿಣತರ ಸಹಾಯ. ಆತ್ಮಹತ್ಯೆಯ ಯೋಚನೆ ಬರಲು ಒಂದು ವಿಧದ ‘ಮೂಡ್ ಡಿಸಾರ್ಡರ್‌’ ಅಂದರೆ ಮನಸ್ಥಿತಿಯಲ್ಲಿ ಏರುಪೇರು ಕಾರಣವಾಗಿರಬಹುದು. ಉದಾಹರಣೆಗೆ ಚಿಕಿತ್ಸೆ ಅಗತ್ಯವಿರುವ ಖಿನ್ನತೆ. ಇಂಥ ಒಂದು ಸಮಸ್ಯೆ ನಿಮ್ಮನ್ನು ಕಾಡುತ್ತಿರುವುದಾದರೆ ನಾಚಿಕೆಪಡಬೇಕಾಗಿಲ್ಲ. ಅದೂ ಒಂದು ರೀತಿಯ ಅಸ್ವಸ್ಥತೆ ಅಷ್ಟೇ. ಖಿನ್ನತೆಗಿರುವ ಇನ್ನೊಂದು ಹೆಸರು “ಮನಸ್ಸಿಗೆ ಬರುವಂಥ ಸಾಮಾನ್ಯ ನೆಗಡಿ.” ಹೇಗೆ ನೆಗಡಿ ಬರುವುದು ಸಾಮಾನ್ಯವೋ ಹಾಗೆಯೇ ಖಿನ್ನತೆ ಕೂಡ. ಅದಕ್ಕೆ ಮದ್ದು ಖಂಡಿತ ಇದೆ. *

ನೆನಪಿಡಿ: ಖಿನ್ನತೆಯೆಂಬ ಆಳವಾದ ಗುಂಡಿಯೊಳಗಿಂದ ನಿಮ್ಮಷ್ಟಕ್ಕೆ ನೀವು ಹೊರಬರಲು ಸಾಧ್ಯವಿಲ್ಲ. ಬೇರೆಯವರ ಸಹಾಯ ಬೇಕು. ಸಹಾಯ ಹಸ್ತವನ್ನು ನೀವು ಹಿಡಿದಾಗ ಹೊರಬರಲು ಖಂಡಿತ ಆಗುತ್ತದೆ.

ಇವತ್ತು ನೀವೇನು ಮಾಡಬಹುದು? ಖಿನ್ನತೆಯಂಥ ಮೂಡ್ ಡಿಸಾರ್ಡರ್‌ಗಳಿಗೆ ಚಿಕಿತ್ಸೆ ನೀಡುವ ಒಳ್ಳೇ ವೈದ್ಯರು ಎಲ್ಲಿದ್ದಾರೆಂದು ತಿಳಿದುಕೊಳ್ಳಿ.

^ ಪ್ಯಾರ. 8 ಸಾಯಬೇಕೆಂಬ ಯೋಚನೆ ಪದೇಪದೇ ಬರುತ್ತಿರುವಲ್ಲಿ ಅಥವಾ ತೀವ್ರವಾಗಿರುವಲ್ಲಿ ನಿಮಗೆ ಯಾವ ಸಹಾಯ ಲಭ್ಯವಿದೆಯೆಂದು ತಿಳಿಯಲು ಪ್ರಯತ್ನಿಸಿರಿ. ಕೆಲವೆಡೆ ಸಹಾಯವಾಣಿ ಕೇಂದ್ರಗಳಿವೆ. ಇನ್ನೂ ಕೆಲವು ಸ್ಥಳಗಳಲ್ಲಿ ಮಾನಸಿಕ ಆರೋಗ್ಯ ಕೇಂದ್ರಗಳಿವೆ. ಸಹಾಯ ನೀಡಲು ತರಬೇತಿ ಪಡೆದಿರುವ ಸಿಬ್ಬಂದಿ ಅಲ್ಲಿರುತ್ತಾರೆ.