ಮುಖಪುಟ ಲೇಖನ
ಹಣಾನೇ ಸರ್ವಸ್ವನಾ?
‘ಹಣ ಇದ್ರೆ, ಏನು ಬೇಕಾದ್ರೂ ಮಾಡ್ಬಹುದು’ ಅಂತ ಜನ ಹೇಳೋದನ್ನು ನೀವು ಎಷ್ಟೋ ಸಾರಿ ಕೇಳಿಸಿಕೊಂಡಿರುತ್ತೀರಿ ಅಲ್ವಾ? ನಿಮಗೂ ಇದು ನಿಜ ಅಂತ ಅನಿಸಿರಬಹುದು. ಯಾಕೆಂದರೆ ಆಹಾರ, ಬಟ್ಟೆ ಬೇಕೆಂದರೆ ಹಣ ಕೊಡಬೇಕು. ಮನೆ ಬಾಡಿಗೆ ಕಟ್ಟಲಿಕ್ಕೆ, ಮನೆ ತಗೊಳ್ಳಲಿಕ್ಕೆ ಹಣ ಬೇಕೇಬೇಕು. “ಈ ಸಮಾಜದಲ್ಲಿ ಹಣ ತುಂಬನೇ ಮುಖ್ಯ. ಹಣನಾ ಉಪಯೋಗಿಸುವುದನ್ನೇ ನಿಲ್ಲಿಸಿಬಿಡಬೇಕು ಅನ್ನೋ ಕಾನೂನು ಏನಾದ್ರೂ ಬಂದರೆ ನಮಗೆ ಏನು ಮಾಡಬೇಕು ಅಂತನೇ ಗೊತ್ತಾಗಲ್ಲ. ಇದಕ್ಕೋಸ್ಕರ ಕೆಲವೇ ದಿನಗಳಲ್ಲಿ ಯುದ್ಧ-ಜಗಳಗಳೇ ಆರಂಭವಾಗಬಹುದು” ಅಂತ ಒಬ್ಬ ವಾಣಿಜ್ಯ ಸಂಪಾದಕ ತಿಳಿಸುತ್ತಾನೆ.
ಆದರೂ ಹಣದಿಂದ ಎಲ್ಲವನ್ನೂ ಖರೀದಿಸಲು ಸಾಧ್ಯವಿಲ್ಲ. ನಾರ್ವೆ ದೇಶದ ಆರ್ನ ಗಾರ್ಬಾರ್ಗ್ ಎಂಬ ಕವಿ ಹೀಗೆ ಹೇಳಿದ್ದಾರೆ: ಹಣದಿಂದ “ಆಹಾರ ಖರೀದಿಸಬಹುದು, ಹಸಿವನ್ನಲ್ಲ; ಔಷಧಿ ಖರೀದಿಸಬಹುದು, ಆರೋಗ್ಯವನ್ನಲ್ಲ; ಮೆತ್ತನೆಯ ಹಾಸಿಗೆಯನ್ನು ಖರೀದಿಸಬಹುದು, ನಿದ್ದೆಯನ್ನಲ್ಲ; ಜ್ಞಾನ ಭಂಡಾರವನ್ನೇ ಖರೀದಿಸಬಹುದು, ವಿವೇಕವನ್ನಲ್ಲ; ಹೊಳೆಯುವ ದುಬಾರಿ ವಸ್ತುಗಳನ್ನು ಖರೀದಿಸಬಹುದು, ಸೌಂದರ್ಯವನ್ನಲ್ಲ; ಮನೋರಂಜನೆಯನ್ನು ಖರೀದಿಸಬಹುದು, ಸಂತೋಷವನ್ನಲ್ಲ; ಪರಿಚಯಸ್ಥರನ್ನು ಸಂಪಾದಿಸಬಹುದು, ಸ್ನೇಹಿತರನ್ನಲ್ಲ; ಕೆಲಸದವರನ್ನು ಸಂಪಾದಿಸಬಹುದು, ಆದರೆ ನಂಬಿಗಸ್ತಿಕೆಯನ್ನಲ್ಲ.”
ಹಣಾನೇ ಸರ್ವಸ್ವ ಅಥವಾ ಹಣ ಸಂಪಾದನೆಯೇ ಮುಖ್ಯ ಗುರಿ ಅಂತ ನೆನಸದೆ, ಅದು ನಮ್ಮ ಗುರಿಯನ್ನು ತಲುಪಲು ಸಹಾಯ ಮಾಡುವ ಒಂದು ಸಾಧನ ಎಂದು ಅರ್ಥ ಮಾಡಿಕೊಂಡರೆ ಜೀವನದಲ್ಲಿ ತೃಪ್ತಿ ಇರುತ್ತದೆ. ಆದ್ದರಿಂದಲೇ ಬೈಬಲ್ “ಹಣದ ಪ್ರೇಮವು ಎಲ್ಲ ರೀತಿಯ ಹಾನಿಕರವಾದ ವಿಷಯಗಳಿಗೆ ಮೂಲವಾಗಿದೆ ಮತ್ತು ಕೆಲವರು ಈ ಪ್ರೇಮವನ್ನು ಬೆನ್ನಟ್ಟುತ್ತಾ . . . ಅನೇಕ ವೇದನೆಗಳಿಂದ ತಮ್ಮನ್ನು ಎಲ್ಲ ಕಡೆಗಳಲ್ಲಿ ತಿವಿಸಿಕೊಂಡಿದ್ದಾರೆ” ಎಂದು ಎಚ್ಚರಿಸುತ್ತದೆ.—1 ತಿಮೊಥೆಯ 6:10.
ಇಲ್ಲಿ ಹೇಳಿದಂತೆ ಹಣದ ಪ್ರೇಮ ಅಥವಾ ಆಸೆಯಿಂದ ಅಪಾಯವಿದೆಯೇ ಹೊರತು ಹಣದಿಂದಲ್ಲ. ಹಣಕ್ಕೆ ಎಲ್ಲಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡುವುದಾದರೆ ಸ್ನೇಹಿತರ ಮಧ್ಯೆ ಅಥವಾ ಕುಟುಂಬದಲ್ಲಿ ಬಿರುಕು ಬರಬಹುದು. ಈ ರೀತಿ ಬಿರುಕು ಬಂದ ಕೆಲವು ಉದಾಹರಣೆಗಳನ್ನು ಗಮನಿಸಿ:
* “ನನ್ನ ಫ್ರೆಂಡ್ ತರುಣ್ ತುಂಬ ಒಳ್ಳೆಯವನು, ಪ್ರಾಮಾಣಿಕ ಕೂಡ. ನನಗೂ ಅವನಿಗೂ ಯಾವತ್ತೂ ಜಗಳ ಆಗಿರಲಿಲ್ಲ. ಒಂದು ಸಾರಿ ಅವನು ನನ್ನ ಹಳೇ ಕಾರನ್ನು ಕೊಂಡುಕೊಂಡ. ನನಗೆ ಗೊತ್ತಿದ್ದ ಮಟ್ಟಿಗೆ ಕಾರು ಚೆನ್ನಾಗಿಯೇ ಇತ್ತು. ಅಷ್ಟೇ ಅಲ್ಲದೆ ಅವನೇ, ‘ಕಾರು ಇದ್ದ ಸ್ಥಿತಿಯಲ್ಲೇ ಅದನ್ನು ಖರೀದಿಸುತ್ತಿದ್ದೇನೆ’ ಅಂತ ಒಪ್ಪಂದ ಪತ್ರದಲ್ಲಿ (ಅಗ್ರೀಮೆಂಟ್) ಬರೆದಿದ್ದ. ಆದರೆ ತಗೊಂಡ ಮೂರು ತಿಂಗಳಲ್ಲೇ ಕಾರು ಹಾಳಾಯಿತು. ಆಗ ನಾನೇ ಅವನಿಗೆ ಮೋಸ ಮಾಡಿದ್ದೇನೆ ಅಂತ ಅಂದುಕೊಂಡು ‘ನನ್ನ ಹಣಾನೆಲ್ಲಾ ವಾಪಸ್ ಕೊಡೋ’ ಅಂತ ಹೇಳಿದ. ನನಗೆ ಶಾಕ್ ಆಯ್ತು. ನಾನು ಇರೋ ವಿಷ್ಯ ಹೇಳಲಿಕ್ಕೆ ಹೋದಾಗ ಅವನು ಅದನ್ನು ಕೇಳಲೇ ಇಲ್ಲ, ತುಂಬ ಕೋಪ ಮಾಡಿಕೊಂಡ. ಇವನಾ ನನ್ನ ಫ್ರೆಂಡ್! ಅಂತ ನನಗನಿಸಿತು.”
ದಿನೇಶ್:ಕಾವ್ಯ: “ನನಗೆ ಒಬ್ಬಳೇ ತಂಗಿ ಶಿಲ್ಪ. ನಾವಿಬ್ಬರೂ ತುಂಬ ಅನ್ಯೋನ್ಯವಾಗಿ ಇದ್ವಿ. ಹಣಕ್ಕೋಸ್ಕರ ನಮ್ಮ ಸಂಬಂಧ ಹಾಳಾಗುತ್ತೆ ಅಂತ ನಾನು ಕನಸು ಮನಸಲ್ಲೂ ನೆನಸಿರಲಿಲ್ಲ. ಆದರೆ ನಾನು ಅಂದುಕೊಳ್ಳದೇ ಇದ್ದದ್ದೇ ನಡೆಯಿತು. ನಮ್ಮ ಅಪ್ಪ-ಅಮ್ಮ ತೀರಿಹೋದಾಗ ಅವರ ಹಣ ಪಿತ್ರಾರ್ಜಿತವಾಗಿ ನಮಗೆ ಬಂತು. ಅದನ್ನು ನಾವಿಬ್ಬರೂ ಸಮವಾಗಿ ಹಂಚಿಕೊಳ್ಳಬೇಕು ಅನ್ನೋದು ಅವರ ಇಚ್ಛೆ ಆಗಿತ್ತು. ನನ್ನ ತಂಗಿ, ಅವರ ಆಸೆಗೆ ವಿರುದ್ಧವಾಗಿ ತನಗೇ ದೊಡ್ಡ ಪಾಲು ಬೇಕು ಅಂದಳು. ಆದರೆ ನಾನು ಅವರ ಆಸೆಯಂತೆಯೇ ನಡೆಯಬೇಕು ಅಂತ ನಿರ್ಣಯಿಸಿದೆ. ಅವಳಿಗೆ ನನ್ನ ಮೇಲೆ ತುಂಬ ಕೋಪ ಬಂತು, ಬೆದರಿಕೆ ಕೂಡ ಹಾಕಿದಳು. ಈ ರೀತಿ ಆಗಿ ಎಷ್ಟೋ ದಿನಗಳಾಗಿದ್ದರೂ ಅವಳ ಕೋಪ ಇನ್ನೂ ತಣ್ಣಗಾಗಿಲ್ಲ.”
ಹಣದಿಂದ ಜನರನ್ನು ಅಳೆಯಬೇಡಿ
ಒಬ್ಬ ವ್ಯಕ್ತಿಯ ಹತ್ತಿರ ಇರುವ ಹಣ ನೋಡಿ, ಅವರು ಎಂಥವರೆಂದು ಕೆಲವರು ನಿರ್ಣಯಿಸಿ ಬಿಡುತ್ತಾರೆ. ಉದಾಹರಣೆಗೆ, ಶ್ರೀಮಂತ ವ್ಯಕ್ತಿ, ಬಡವನ ಬಗ್ಗೆ ‘ಕಷ್ಟ ಪಟ್ಟು, ಮೇಲೆ ಬರಲಿಕ್ಕೆ ಆಗದೇ ಇರೋ ಸೋಮಾರಿ’ ಎಂದು ಭಾವಿಸಬಹುದು. ಒಬ್ಬ ಬಡ ವ್ಯಕ್ತಿ, ಶ್ರೀಮಂತನ ಬಗ್ಗೆ ‘ಕಂಡಿದ್ದೆಲ್ಲಾ ಬೇಕು ಇವರಿಗೆ, ದುರಾಸೆ ಹೆಚ್ಚು’ ಎಂದು ಭಾವಿಸಬಹುದು. ಲಹರಿ, ಶ್ರೀಮಂತ ಮನೆಯ ಹದಿವಯಸ್ಸಿನ ಹುಡುಗಿ. ಅವಳ ಬಗ್ಗೆ ಇತರರಿಗೆ ತಪ್ಪಭಿಪ್ರಾಯ ಇತ್ತು. ಅವಳು ಹೇಳುವುದು:
ಹಣದ ಬಗ್ಗೆ ಬೈಬಲಿನಲ್ಲಿ ಕೊಟ್ಟಿರುವ ಸಲಹೆಗಳಿಂದ ಅಂದು ಇದ್ದಷ್ಟೇ ಪ್ರಯೋಜನ ಇಂದು ಸಹ ಇದೆ
“ನನ್ನ ಅಪ್ಪ ಕೊಳೆಯುವಷ್ಟು ಹಣ ಮಾಡಿದ್ದಾರೆ ಎಂಬ ಅಭಿಪ್ರಾಯ ಇತರರಿಗಿತ್ತು. ಆದ್ದರಿಂದ ತುಂಬ ಸಾರಿ ಅವರು, ‘ನೀನು ನಿನ್ನ ಅಪ್ಪಗೊಂದು ಮಾತು ಹೇಳಿದ್ರೆ ಸಾಕು, ನಿನಗೆ ಬೇಕಾದ್ದದ್ದು ಸಿಗುತ್ತೆ’ ಅಥವಾ ‘ನಾವು ನಿನ್ನಷ್ಟು ಶ್ರೀಮಂತರಲ್ಲಪ್ಪ, ನಿನ್ನ ಮನೆಯಲ್ಲಿರುವಂಥ ದುಬಾರಿ ಕಾರು ನಮಗೆಲ್ಲಿ ತಗೊಳ್ಳೋಕಾಗುತ್ತೆ ಬಿಡು’ ಎಂದು ಚುಚ್ಚಿ ಚುಚ್ಚಿ ಮಾತಾಡುತ್ತಿದ್ದರು. ಅವರು ಹೇಳೋದನ್ನ ಕೇಳಿ ಕೇಳಿ ಸಾಕಾಗಿ, ಕೊನೆಗೂ ‘ಹಾಗೆಲ್ಲ ಹೇಳಬೇಡಿ’ ಅಂತ ಹೇಳಿದೆ. ನನಗೆ ಯಾಕೆ ಬೇಜಾರಾಗುತ್ತೆ ಅಂತ ಕೂಡ ತಿಳಿಸಿದೆ. ಹಣ ಇರುವವಳು ಅಂತ ನನ್ನನ್ನು ಗುರುತಿಸೋದಕ್ಕಿಂತ ಇತರರಿಗೆ ಸಹಾಯ ಮಾಡುವವಳು ಅಂತ ಗುರುತಿಸೋದೇ ನನಗಿಷ್ಟ.”
ಬೈಬಲ್ ಏನು ಹೇಳುತ್ತದೆ?
ಹಣ ಕೆಟ್ಟದ್ದು ಅಂತನೋ ಅಥವಾ ಹಣ ಇರುವವರು ಕೆಟ್ಟವರು ಅಂತನೋ ಬೈಬಲ್ ಹೇಳಲ್ಲ. ತುಂಬ ಹಣ ಇದ್ದರೂ ತಪ್ಪೇನಿಲ್ಲ. ಒಬ್ಬ ವ್ಯಕ್ತಿ ಹತ್ತಿರ ಹಣ ಎಷ್ಟಿದೆ ಅನ್ನೋದು ಮುಖ್ಯ ಅಲ್ಲ, ಬದಲಿಗೆ ಇರುವ ಹಣದ ಬಗ್ಗೆ ಅಥವಾ ಹಣ ಸಂಪಾದಿಸುವುದರ ಬಗ್ಗೆ ಅವನಿಗೆ ಯಾವ ಮನೋಭಾವ ಇದೆ ಅನ್ನೋದು ಮುಖ್ಯ. ಹಣದ ಬಗ್ಗೆ ಬೈಬಲ್ ಕೊಡುವ ಸಲಹೆಗಳು ಸರಿಯಾಗಿದೆ. ಬೈಬಲನ್ನು ಬರೆದ ಸಮಯದಲ್ಲಿ ಆ ಸಲಹೆಗಳಿಂದ ಎಷ್ಟು ಪ್ರಯೋಜನವಿತ್ತೋ ಈಗಲೂ ಅಷ್ಟೇ ಪ್ರಯೋಜನವಿದೆ. ಅಂಥ ಕೆಲವು ಸಲಹೆಗಳನ್ನು ಈಗ ಪರಿಗಣಿಸಿ:
ಬೈಬಲ್ ಹೀಗೆ ಹೇಳುತ್ತದೆ: “ದುಡ್ಡಿನಾಸೆಯಿಂದ ದುಡಿಯಬೇಡ.”—ಜ್ಞಾನೋಕ್ತಿ 23:4.
ನಾರ್ಸಿಸಮ್ ಎಪಿಡಮಿಕ್ ಎಂಬ ಪುಸ್ತಕ ತಿಳಿಸುವಂತೆ, ಹೆಚ್ಚು ಹಣವನ್ನು ಸಂಪಾದಿಸಲು ಪರದಾಡುವವರ “ಮಾನಸಿಕ ಆರೋಗ್ಯ ಹದಗೆಟ್ಟಿರುತ್ತದೆ. ಅವರಲ್ಲಿ ಗಂಟಲು ನೋವು, ಬೆನ್ನು ನೋವು ಮತ್ತು ತಲೆನೋವುಗಳಂಥ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಮದ್ಯಪಾನ ಮತ್ತು ಅಮಲೌಷಧದ (ಡ್ರಗ್ಸ್) ಬಳಕೆಗೆ ಬಲಿಯಾಗುವುದು ಹೆಚ್ಚಾಗಿ ಇಂಥವರೇ. ಆರ್ಥಿಕವಾಗಿ ಯಶಸ್ಸು ಗಳಿಸಲು ಪರದಾಡುವವರ ಜೀವನ ಕಷ್ಟಗಳಲ್ಲಿ ಸಿಲುಕಿಕೊಳ್ಳುತ್ತದೆ.”
ಇಬ್ರಿಯ 13:5, ಪವಿತ್ರ ಗ್ರಂಥ ಭಾಷಾಂತರ.
ಬೈಬಲ್ ಹೀಗೆ ಹೇಳುತ್ತದೆ: ‘ಹಣದಾಸೆಯಿಂದ ನಿಮ್ಮ ಜೀವನ ದೂರವಾಗಿರಲಿ. ನಿಮಗಿರುವವುಗಳಲ್ಲಿ ತೃಪ್ತರಾಗಿರಿ.’—ಇರುವುದರಲ್ಲೇ ತೃಪ್ತನಾಗಿರುವ ವ್ಯಕ್ತಿಗೆ ಹಣದ ಚಿಂತೆ ಕಡಿಮೆ. ಚಿಂತೆ ಮಾಡುವ ಪರಿಸ್ಥಿತಿ ಬಂದರೂ ಅತಿಯಾಗಿ ಚಿಂತಿಸುತ್ತಾ ಕೂತುಕೊಳ್ಳುವುದಿಲ್ಲ. ಉದಾಹರಣೆಗೆ, ಆ ವ್ಯಕ್ತಿಗೆ ಆರ್ಥಿಕ ನಷ್ಟವಾದರೆ ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುವುದಿಲ್ಲ. ಬದಲಿಗೆ, ಬೈಬಲಿನಲ್ಲಿ ಈ ಮುಂದಿನ ಮಾತುಗಳನ್ನು ಬರೆದ ಅಪೊಸ್ತಲ ಪೌಲನಂತೆ ನಡೆದುಕೊಳ್ಳುತ್ತಾನೆ. “ಆಹಾರದ ಕೊರತೆಯಲ್ಲಾಗಲಿ, ಸಮೃದ್ಧಿಯಲ್ಲಾಗಲಿ ಹೇಗೆ ಜೀವಿಸಬೇಕೆಂಬುದು ನನಗೆ ಗೊತ್ತು. ಎಲ್ಲ ವಿಷಯಗಳಲ್ಲಿ ಮತ್ತು ಎಲ್ಲ ಸನ್ನಿವೇಶಗಳಲ್ಲಿ ಸಂತೃಪ್ತನಾಗಿರುವುದು ಹೇಗೆ, ಹಸಿದವನಾಗಿರುವುದು ಹೇಗೆ, ಸಮೃದ್ಧಿಯಿಂದಿರುವುದು ಹೇಗೆ ಮತ್ತು ಕೊರತೆಯಿಂದಿರುವುದು ಹೇಗೆ ಎಂಬುದರ ಗುಟ್ಟು ನನಗೆ ತಿಳಿದಿದೆ” ಎಂದು ಅವನು ಬರೆದನು.—ಫಿಲಿಪ್ಪಿ 4:12.
ಬೈಬಲ್ ಹೀಗೆ ಹೇಳುತ್ತದೆ: “ಧನವನ್ನೇ ನಂಬಿದವನು ಬಿದ್ದುಹೋಗುವನು.”—ಜ್ಞಾನೋಕ್ತಿ 11:28.
ಗಂಡ-ಹೆಂಡತಿ ಜಗಳಗಳಿಗೆ, ವಿಚ್ಛೇದನಕ್ಕೆ ಹೆಚ್ಚಾಗಿ ಹಣ ಕಾರಣವಾಗಿರುತ್ತದೆ ಎಂದು ಸಂಶೋಧಕರು ತಿಳಿಸುತ್ತಾರೆ. ಆತ್ಮಹತ್ಯೆಗೆ ಸಹ ಹೆಚ್ಚಾಗಿ ಹಣವೇ ಕಾರಣವಾಗಿರುತ್ತದೆ. ಅದರರ್ಥ ಕೆಲವು ಜನರಿಗೆ ತಮ್ಮ ಸಂಗಾತಿಗಿಂತ, ತಮ್ಮ ಜೀವಕ್ಕಿಂತ ಹಣಾನೇ ಪ್ರಾಮುಖ್ಯ. ಹಣದ ಬಗ್ಗೆ ಸರಿಯಾದ ನೋಟ ಇರುವವರು ಹಣವನ್ನೇ ನಂಬಿಕೊಂಡು ಇರುವುದಿಲ್ಲ. ಬದಲಿಗೆ, ಯೇಸು ಹೇಳಿದ ಮಾತಿನಲ್ಲಿರುವ ಸತ್ಯಾಂಶವನ್ನು ಒಪ್ಪಿಕೊಳ್ಳುತ್ತಾರೆ. ಯೇಸು ಹೇಳಿದ್ದು: “ಒಬ್ಬನಿಗೆ ಹೇರಳವಾಗಿ ಆಸ್ತಿಯಿರುವುದಾದರೂ ಅವನು ಹೊಂದಿರುವ ಆಸ್ತಿಯಿಂದ ಅವನಿಗೆ ಜೀವವು ದೊರಕಲಾರದು.”—ಲೂಕ 12:15.
ಹಣ ನಿಮಗೆ ಸರ್ವಸ್ವವಾಗಿದೆಯಾ?
ಹಣ ನಿಮಗೆ ಸರ್ವಸ್ವವಾಗಿದೆಯಾ ಇಲ್ವಾ ಅಂತ ತಿಳಿಯಬೇಕೆಂದರೆ ನಿಮ್ಮನ್ನು ನೀವೇ ಪರೀಕ್ಷಿಸಿಕೊಳ್ಳಬೇಕು. ಇದನ್ನು ಮಾಡಲು ಈ ಕೆಳಗಿನ ಪ್ರಶ್ನೆಗಳನ್ನು ಕೇಳಿಕೊಳ್ಳಿ:
-
ಕ್ಷಣದಲ್ಲೇ ಶ್ರೀಮಂತರಾಗುವ ಸ್ಕೀಮ್ಗಳ ಬಗ್ಗೆ ಕೇಳಿಸಿಕೊಂಡಾಗ ‘ನಾನ್ಯಾಕೆ ಒಂದ್ ಸಲ ಪ್ರಯತ್ನಿಸಬಾರದು’ ಅಂತ ಅನಿಸುತ್ತಾ?
-
ನನ್ನ ಹತ್ತಿರ ಹಣ ಇದ್ದರೂ ಅದನ್ನು ಖರ್ಚು ಮಾಡೋಕೆ ಜಿಪುಣತನ ತೋರಿಸುತ್ತೇನಾ?
-
ಹಣದ ಬಗ್ಗೆ ಮತ್ತು ತಮ್ಮ ಹತ್ತಿರ ಇರುವ ವಸ್ತುಗಳ ಬಗ್ಗೆಯೇ ಯಾವಾಗಲೂ ಮಾತಾಡುವಂಥ ಜನರೊಂದಿಗೆ ಸ್ನೇಹ ಮಾಡಲು ಇಷ್ಟಪಡುತ್ತೇನಾ?
-
ಹಣ ಮಾಡೋಕೆ ನಾನು ಸುಳ್ಳು ಹೇಳುತ್ತೇನಾ ಅಥವಾ ತಪ್ಪಾದ ಮಾರ್ಗ ಬಳಸುತ್ತೇನಾ?
-
ನನ್ನ ಹತ್ತಿರ ಹಣ ಇರುವುದರಿಂದ ನಾನೇ ಶ್ರೇಷ್ಠ ಎಂಬ ಭಾವನೆ ನನಗಿದೆಯಾ?
-
ನಾನು ಯಾವಾಗಲೂ ಹಣದ ಬಗ್ಗೆಯೇ ಯೋಚಿಸುತ್ತಾ ಇರುತ್ತೇನಾ?
-
ಹಣದಿಂದಾಗಿ ನನ್ನ ಆರೋಗ್ಯ, ಕುಟುಂಬದೊಂದಿಗಿನ ಸಂಬಂಧ ಹಾಳಾಗುತ್ತಿದೆಯಾ?
ಇತರರಿಗೆ ಕೊಡುವ ಮೂಲಕ ಉದಾರ ಗುಣವನ್ನು ಬೆಳೆಸಿಕೊಳ್ಳಿ
ಮೇಲಿರುವ ಯಾವುದಾದರೊಂದು ಪ್ರಶ್ನೆಗೆ ನಿಮ್ಮ ಉತ್ತರ ‘ಹೌದು’ ಎಂದಾದರೆ ಹಣದ ಆಕರ್ಷಣೆಯಿಂದ ದೂರವಿರಲು ಪ್ರಯತ್ನಿಸಿ. ಹಣಕ್ಕೆ ಮತ್ತು ತಮ್ಮ ಹತ್ತಿರ ಇರುವ ವಸ್ತುಗಳಿಗೆ ತುಂಬ ಪ್ರಾಮುಖ್ಯತೆ ಕೊಡುವ ಜನರಿಂದ ದೂರವಿರಿ. ಹಣ-ಸಂಪತ್ತಿಗಿಂತ ನೈತಿಕ ಮೌಲ್ಯಗಳಿಗೆ ಯಾರು ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೋ ಅಂಥವರ ಸಹವಾಸ ಮಾಡಿ.
ನಿಮ್ಮ ಹೃದಯದಲ್ಲಿ ಹಣದಾಸೆ ಹುಟ್ಟಿಕೊಳ್ಳಲು ಬಿಡಬೇಡಿ. ಹಣಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡಬೇಡಿ. ಬದಲಿಗೆ, ನಿಮ್ಮ ಸ್ನೇಹಿತರಿಗೆ, ಕುಟುಂಬದವರಿಗೆ, ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡಿ. ಹೀಗೆ ಮಾಡಿದರೆ, ಹಣ ನಿಮ್ಮ ಸರ್ವಸ್ವ ಅಲ್ಲ ಅಂತ ತೋರಿಸಿಕೊಡುತ್ತೀರಿ. ▪ (g15-E 09)
^ ಪ್ಯಾರ. 7 ಈ ಲೇಖನದಲ್ಲಿ ಹೆಸರುಗಳನ್ನು ಬದಲಾಯಿಸಲಾಗಿದೆ.