ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತಪ್ರಪಂಚವು ಈ ಲೋಕದ ಒಂದು ಭಾಗವಾದ ವಿಧ

ಕ್ರೈಸ್ತಪ್ರಪಂಚವು ಈ ಲೋಕದ ಒಂದು ಭಾಗವಾದ ವಿಧ

ಕ್ರೈಸ್ತಪ್ರಪಂಚವು ಈ ಲೋಕದ ಒಂದು ಭಾಗವಾದ ವಿಧ

 ತಕ್ಕ ಸಮಯದಲ್ಲಿ, ಯಾವುದರಲ್ಲಿ ಆದಿ ಕ್ರೈಸ್ತ ಸಭೆಯು ಪ್ರಾರಂಭಿಸಿತ್ತೋ, ಆ ರೋಮನ್‌ ಸಾಮ್ರಾಜ್ಯವು ಕುಸಿದುಬಿತ್ತು. ಆ ಕುಸಿತವು ವಿಧರ್ಮಿ ಪಂಥಗಳ ಮೇಲಣ ಕ್ರೈಸ್ತತ್ವದ ಕೊನೆಯ ವಿಜಯದ ಸಮಯವು ಸಹ ಆಗಿತ್ತೆಂದು ಅನೇಕ ಇತಿಹಾಸಕಾರರು ವಾದಿಸುತ್ತಾರೆ. ಬೇರೊಂದು ದೃಷ್ಟಿಕೋನವನ್ನು ವ್ಯಕ್ತಪಡಿಸುತ್ತಾ, ಆ್ಯಂಗ್ಲಿಕನ್‌ ಬಿಷಪ್‌ ಇ. ಡಬ್ಲ್ಯೂ. ಬಾರ್ನ್ಜ್‌ ಬರೆದದ್ದು: “ಸಾಂಪ್ರದಾಯಿಕ ನಾಗರಿಕತೆಯು ಕುಸಿದಾಗ, ಕ್ರೈಸ್ತತ್ವವು ಯೇಸು ಕ್ರಿಸ್ತನ ಉದಾತ್ತ ಧರ್ಮವಾಗಿರುವುದು ನಿಂತುಹೋಯಿತು: ಕರಗುತ್ತಿರುವ ಲೋಕದ ಸಾಮಾಜಿಕ ಕಲ್ಲುಗಾರೆಯೋಪಾದಿ ಉಪಯುಕ್ತವಾದ ಒಂದು ಧರ್ಮವಾಗಿ ಅದು ಪರಿಣಮಿಸಿತು.”—ದ ರೈಸ್‌ ಆಫ್‌ ಕ್ರಿಶ್ಚಿಆ್ಯನಿಟಿ.

ಆ ಕುಸಿತಕ್ಕೆ ಮುಂಚೆ, ಸಾ.ಶ. ಎರಡನೆಯ, ಮೂರನೆಯ ಮತ್ತು ನಾಲ್ಕನೆಯ ಶತಮಾನಗಳಲ್ಲಿ, ಯಾರು ಯೇಸುವನ್ನು ಹಿಂಬಾಲಿಸುವವರೆಂದು ಹೇಳುತ್ತಿದ್ದರೋ ಅವರು ತಮ್ಮನ್ನು ರೋಮನ್‌ ಜಗತ್ತಿನೊಳಗಿಂದ ಅನೇಕ ರೀತಿಗಳಲ್ಲಿ ಪ್ರತ್ಯೇಕವಾಗಿ ಇರಿಸಿಕೊಂಡರೆಂದು ಇತಿಹಾಸವು ದಾಖಲಿಸುತ್ತದೆ. ಆದರೆ ಬೋಧನೆ, ನಡತೆ, ಮತ್ತು ವ್ಯವಸ್ಥಾಪನೆಯಲ್ಲಿ, ಯೇಸು ಮತ್ತು ಅವನ ಅಪೊಸ್ತಲರು ಮುಂತಿಳಿಸಿದ್ದ ಪ್ರಕಾರವೇ, ಧರ್ಮಭ್ರಷ್ಟತೆಯ ವಿಕಸನವನ್ನು ಸಹ ಅದು ಪ್ರಕಟಿಸುತ್ತದೆ. (ಮತ್ತಾಯ 13:36-43; ಅ. ಕೃತ್ಯಗಳು 20:29, 30; 2 ಥೆಸಲೊನೀಕ 2:3-12; 2 ತಿಮೊಥೆಯ 2:16-18; 2 ಪೇತ್ರ 2:1-3, 10-22) ಕಟ್ಟಕಡೆಗೆ ಗ್ರೀಕೊ-ರೋಮನ್‌ ಜಗತ್ತಿನೊಂದಿಗೆ ಒಪ್ಪಂದವನ್ನು ಮಾಡಲಾಯಿತು, ಮತ್ತು ಕ್ರೈಸ್ತರೆಂದು ಹೇಳಿಕೊಂಡ ಕೆಲವರು ಲೋಕದ ವಿಧರ್ಮಿ ಪಂಥವನ್ನು (ಅದರ ಹಬ್ಬಗಳು, ಮತ್ತು ದೇವತಾ-ಮಾತೆ, ಮತ್ತು ತ್ರಯೈಕ್ಯ ದೇವರ ಆರಾಧನೆಯಂಥವುಗಳನ್ನು), ಮತ್ತು ಅದರ ತತ್ವಜ್ಞಾನ (ಅಮರ ಆತ್ಮದಲ್ಲಿ ನಂಬಿಕೆಯಂಥವುಗಳು), ಮತ್ತು (ವೈದಿಕ ವರ್ಗದ ಆಗಮನದಲ್ಲಿ ಕಂಡು ಬಂದ) ಅದರ ಮೇಲ್ವಿಚಾರಕ ಸಂಸ್ಥೆಯನ್ನು ಸ್ವೀಕರಿಸಿದರು. ರೋಮನ್‌ ಸಮ್ರಾಜರು ಮೊದಮೊದಲು ನಿರ್ಮೂಲಗೊಳಿಸ ಪ್ರಯತ್ನಿಸಿದರೂ ಒಂದು ಶಕ್ತಿಯಾಗಿ ಪರಿಣಮಿಸಿದ ಮತ್ತು ಅನಂತರ ಸ್ವೀಕರಿಸಲ್ಪಟ್ಟು ಅವರ ಸ್ವಂತ ಲಾಭಕ್ಕಾಗಿ ಪ್ರಯೋಗಿಸಲ್ಪಟ್ಟ ಕ್ರೈಸ್ತತ್ವದ ಈ ಭ್ರಷ್ಟ ರೂಪಾಂತರಕ್ಕೆ ವಿಧರ್ಮಿ ಜನಸಾಮಾನ್ಯರು ಆಕರ್ಶಿಸಲ್ಪಟ್ಟರು.

ಲೋಕದಿಂದ ಜಯಿಸಲ್ಪಟ್ಟದ್ದು

ಚರ್ಚ್‌ ಇತಿಹಾಸಗಾರ ಆಗಸಸ್ಟ್‌ ನಿಯಂಡರ್‌, “ಕ್ರೈಸ್ತತ್ವ” ಮತ್ತು ಲೋಕದ ನಡುವಣ ಈ ಹೊಸ ಸಂಬಂಧದಲ್ಲಿ ಒಳಗೂಡಿದ ಕೆಡುಕುಗಳನ್ನು ತೋರಿಸಿದನು. ಕ್ರೈಸ್ತರು ಲೋಕದಿಂದ ತಮ್ಮ ಪ್ರತ್ಯೇಕತೆಯನ್ನು ತ್ಯಜಿಸಿದರೆ, ಫಲಿತಾಂಶವು, “ಲೋಕದ ಸಂಬಂಧದಲ್ಲಿ ಚರ್ಚು ಗಲಿಬಿಲಿ ಗೊಳ್ಳುವುದೇ . . . ಆ ಮೂಲಕ ಚರ್ಚು ತನ್ನ ಪಾವಿತ್ರ್ಯವನ್ನು ಕಳಕೊಳ್ಳುವುದು, ಮತ್ತು ಜಯಿಸುವಂತೆ ಕಂಡರೂ ತಾನೇ ಜಯಿಸಲ್ಪಡುವುದು.”—ಜನರಲ್‌ ಹಿಸ್ಟರಿ ಆಫ್‌ ದ ಕ್ರಿಶ್ಚ್ಯನ್‌ ರಿಲಿಜನ್‌ ಆ್ಯಂಡ್‌ ಚರ್ಚ್‌, ಸಂಪುಟ 2, ಪುಟ 161.

ಸಂಭವಿಸಿದ್ದು ಇದು. ನಾಲ್ಕನೆಯ ಶತಮಾನದ ಪ್ರಾರಂಭದಲ್ಲಿ, ರೋಮನ್‌ ಸಾಮ್ರಾಟ ಕಾನ್‌ಸ್ಟಂಟೀನನು ತನ್ನ ದಿನದ “ಕ್ರೈಸ್ತ” ಧರ್ಮವನ್ನು, ತನ್ನ ಸಾಮ್ರಾಜ್ಯವು ಹೋಳಾಗುತ್ತಿರುವುದನ್ನು ಗಾರೆಹಚ್ಚಲು ಉಪಯೋಗಿಸಿದನು. ಇದನ್ನು ಮಾಡುವುದಕ್ಕಾಗಿ ಅವನು, ಕ್ರೈಸ್ತರೆನೆಸಿಕೊಳ್ಳುವವರಿಗೆ ಧಾರ್ಮಿಕ ಸ್ವಾತಂತ್ರ್ಯವನ್ನು ದಯಪಾಲಿಸಿದನು ಮತ್ತು ವಿಧರ್ಮಿ ಯಾಜಕತ್ವದ ಕೆಲವು ಸುಯೋಗಗಳನ್ನು ಅವರ ಪಾದ್ರಿ ವರ್ಗಕ್ಕೆ ಕೊಟ್ಟನು. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಕಾನ್‌ಸ್ಟಂಟೀನನು ಚರ್ಚನ್ನು ಸಾಮಾಜಿಕ ಜವಾಬ್ದಾರಿಕೆಗಳನ್ನು ಸ್ವೀಕರಿಸುವಂತೆ ಲೋಕದಿಂದ ಅದರ ಹಿಂದೆಗೆದುಕೊಳ್ಳುವಿಕೆಯಿಂದ ಹೊರತಂದನು ಮತ್ತು ಚರ್ಚಿಗಾಗಿ ವಿಧರ್ಮಿ ಸಮಾಜವು ಜಯಿಸಲ್ಪಡುವಂತೆ ಸಹಾಯ ಮಾಡಿದನು.”

ರಾಜ್ಯ ಧರ್ಮ

ಕಾನ್‌ಸ್ಟಂಟೀನನ ನಂತರ ಸಾಮ್ರಾಟ ಜ್ಯೂಲಿಯನ್‌ (ಸಾ.ಶ. 361-363) ಕ್ರೈಸ್ತತ್ವವನ್ನು ವಿರೋಧಿಸಲು ಮತ್ತು ವಿಧರ್ಮಿ ಪಂಥವನ್ನು ಪುನಃ ಸ್ಥಾಪಿಸಲು ಒಂದು ಪ್ರಯತ್ನವನ್ನು ಮಾಡಿದನು. ಆದರೆ ಅವನು ವೈಫಲ್ಯಗೊಂಡನು, ಸುಮಾರು 20 ವರ್ಷಗಳ ನಂತರ ಸಾಮ್ರಾಟ ಥಿಯೊಡೋಸಿಯಸ್‌ ವಿಧರ್ಮವನ್ನು ನಿಷೇಧಿಸಿದನು ಮತ್ತು ತ್ರಯೈಕ್ಯವಾದಿ “ಕ್ರೈಸ್ತತ್ವ” ವನ್ನು ರೋಮನ್‌ ಸಾಮ್ರಾಜ್ಯದ ರಾಜ್ಯ ಧರ್ಮವಾಗಿ ನಿಯಮಿಸಿದನು. ನಿಖರವಾಗಿ ನಿರೂಪಿಸಿದ ಚಾಕಚಕ್ಯತೆಯಿಂದ, ಫ್ರೆಂಚ್‌ ಚರಿತ್ರೆಗಾರ ಆ್ಯನ್ರಿ ಮರು ಬರೆದದ್ದು: “ಥಿಯೊಡೋಸಿಯಸನ ಆಳಿಕೆಯ ಅಂತ್ಯದೊಳಗೆ, ಕ್ರೈಸ್ತತ್ವ, ಅಥವಾ ಹೆಚ್ಚು ನಿಖರವಾಗಿ ಆರ್ತೊಡಾಕ್ಸ್‌ ಕ್ಯಾತೊಲಿಕ್‌ ಧರ್ಮವು, ಇಡೀ ರೋಮನ್‌ ಜಗತ್ತಿನ ಅಧಿಕೃತ ಧರ್ಮವಾಗಿ ಪರಿಣಮಿಸಿತು.” ಆರ್ತೊಡಾಕ್ಸ್‌ ಕ್ಯಾತೊಲಿಕ್‌ ಧರ್ಮವು ನಿಜ ಕ್ರೈಸ್ತತ್ವವನ್ನು ಸ್ಥಾನಪಲ್ಲಟ ಮಾಡಿ, “ಲೋಕದ ಭಾಗ” ವಾಗಿತ್ತು. ಈ ರಾಜ್ಯ ಧರ್ಮವು ಯೇಸುವಿನ ಆದಿ ಹಿಂಬಾಲಕರ ಧರ್ಮಕ್ಕಿಂತ ಬಹಳಷ್ಟು ಬೇರೆಯಾಗಿತ್ತು, ಅವರಿಗೆ ಆತನಂದದ್ದು: “ನೀವು ಲೋಕದ ಭಾಗವಲ್ಲ.”—ಯೋಹಾನ 15:19, NW.

ಫ್ರೆಂಚ್‌ ಚರಿತ್ರೆಗಾರ ಮತ್ತು ತತ್ವಜ್ಞಾನಿ ಲೋಯಿಸ್‌ ರುಸ್ಯಾ ಬರೆದದ್ದು: “ಕ್ರೈಸ್ತತ್ವವು ವೃದ್ಧಿಯಾದಂತೆ, ಅದು ಗುರುತುಮಾಡಲಾಗದಷ್ಟು ವಿಚಿತ್ರವಾದ ಮಾರ್ಪಾಟುಗಳಿಗೆ ಒಳಗಾಯಿತು. . . . ಧರ್ಮಕಾರ್ಯದಿಂದಾಗಿ ಜೀವಿಸಿದ್ದ ಬಡವರ ಆದಿಕಾಲದ ಚರ್ಚು, ಪ್ರತಿಭಟಿಸಲಾಗದ ವಿಜೇತ ಚರ್ಚ್‌ ಆಗಿ ಪರಿಣಮಿಸಿ, ನೆಲೆಸಿರುವ ಐಹಿಕ ಅಧಿಕಾರಗಳ ಮೇಲೆ ಸ್ವಾಮಿತ್ವ ನಡಿಸಲು ಅಶಕ್ತವಾದಾಗ ಅವುಗಳೊಂದಿಗೆ ಒಪ್ಪಂದ ಮಾಡಿಕೊಂಡಿತು.”

ರೋಮನ್‌ ಕ್ಯಾತೊಲಿಕ್‌ “ಸಂತ” ಆಗುಸ್ಟೀನ್‌, ಐದನೆಯ ಶತಕದ ಪ್ರಾರಂಭದಲ್ಲಿ, ತನ್ನ ದೊಡ್ಡ ಕೃತಿಯಾದ ಸಿಟಿ ಆಫ್‌ ಗಾಡ್‌ ನ್ನು ಬರೆದನು. ಅದರಲ್ಲಿ ಅವನು “ದೇವರ ಮತ್ತು ಈ ಲೋಕದ” ಎಂಬ ಎರಡು ಪಟ್ಟಣಗಳನ್ನು ವರ್ಣಿಸಿದನು. ಈ ಕೃತಿಯು ಕ್ಯಾತೊಲಿಕರ ಮತ್ತು ಈ ಲೋಕದ ನಡುವಣ ಪ್ರತ್ಯೇಕತೆಯನ್ನು ತೀವ್ರಗೊಳಿಸಿತೋ? ನಿಜವಾಗಿ ಹಾಗಲ್ಲ. ಪ್ರೊಫೆಸರ್‌ ಲಾಟ್‌ರೆಟ್‌ ಹೇಳುವುದು: “ಆಗುಸ್ಟೀನ್‌ ಯಥಾರ್ಥವಾಗಿ ಅಂಗೀಕರಿಸಿದ್ದನೇನಂದರೆ ಲೌಕಿಕ ಮತ್ತು ಸ್ವರ್ಗೀಯವಾದ ಆ ಎರಡು ಪಟ್ಟಣಗಳು ಪರಸ್ಪರ ಮಿಶ್ರವಾಗಿವೆ.” “[ಕ್ಯಾತೊಲಿಕ್‌] ಚರ್ಚಿನ ವ್ಯವಸ್ಥಾಪನೆಯೊಂದಿಗೆ ದೇವರ ರಾಜ್ಯವು ಈ ಲೋಕದಲ್ಲಿ ಆವಾಗಲೇ ಪ್ರಾರಂಭಿಸಿತು” ಎಂದು ಆಗುಸ್ಟೀನನು ಕಲಿಸಿದನು. (ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟಾನಿಕ, ಮ್ಯಾಕ್ರೊಪೀಡಿಯ, ಸಂಪುಟ 4, ಪುಟ 506) ಹೀಗೆ, ಆಗುಸ್ಟೀನನ ಮೂಲ ಉದ್ದೇಶವು ಏನಿದ್ದರೂ, ಅವನ ತತ್ವಗಳು ಕ್ಯಾತೊಲಿಕ್‌ ಚರ್ಚನ್ನು ಈ ಲೋಕದ ರಾಜಕೀಯ ಕಾರ್ಯಗಳಲ್ಲಿ ಆಳವಾಗಿ ಒಳಗೂಡಿಸುವ ಪ್ರಭಾವವನ್ನು ಹಾಕಿತು.

ಒಂದು ವಿಭಜಿತ ಸಾಮ್ರಾಜ್ಯ

ಸಾ.ಶ. 395 ರಲ್ಲಿ ಥಿಯೊಡೋಸಿಯಸನು ಸತ್ತಾಗ, ರೋಮನ್‌ ಸಾಮ್ರಾಜ್ಯವು ಅಧಿಕೃತವಾಗಿ ಇಬ್ಭಾಗವಾಗಿತ್ತು. ಪೂರ್ವದ ಅಥವಾ ಬೈಜೆಂಟೈನ್‌ ಸಾಮ್ರಾಜ್ಯದ ರಾಜಧಾನಿ ಕಾನ್‌ಸ್ಟಂಟಿನೋಪಲ್‌ (ಹಿಂದಿನ ಬೈಜೆಂಟಿಯಮ್‌; ಈಗಿನ ಇಸ್ತಾಂಬುಲ್‌) ನಲ್ಲಿತ್ತು. ಮತ್ತು ಪಶ್ಚಿಮ ಸಾಮ್ರಾಜ್ಯದ ರಾಜಧಾನಿ (ಸಾ.ಶ. 402 ರ ನಂತರ) ಇಟೆಲಿಯ ರವೆನ್ನದಲ್ಲಿತ್ತು. ಫಲಿತಾಂಶವಾಗಿ, ಕ್ರೈಸ್ತಪ್ರಪಂಚವು ರಾಜಕೀಯವಾಗಿ ಮತ್ತು ಧಾರ್ಮಿಕವಾಗಿ ಸಹ ವಿಭಾಗಗೊಂಡಿತು. ಚರ್ಚ್‌ ಮತ್ತು ರಾಜ್ಯದ ನಡುವಣ ಸಂಬಂಧದಲ್ಲಿ, ಪೂರ್ವ ಸಾಮ್ರಾಜ್ಯದ ಚರ್ಚು, ಕೈಸರೈಯದ ಯುಸೀಬಿಯಸ್‌ (ಮಹಾ ಕಾನ್‌ಸ್ಟಂಟೀನನ ಒಬ್ಬ ಸಮಕಾಲೀನ) ನ ತತ್ವವನ್ನು ಅನುಸರಿಸಿತು. ಲೋಕದಿಂದ ಪ್ರತ್ಯೇಕತೆಯ ಕ್ರೈಸ್ತ ತತ್ವವನ್ನು ದುರ್ಲಕ್ಷಿಸುತ್ತಾ ಯುಸೀಬಿಯಸನು ವಿವೇಚಿಸಿದ್ದೇನಂದರೆ, ಸಾಮ್ರಾಟನು ಮತ್ತು ಸಾಮ್ರಾಜ್ಯವು ಕ್ರೈಸ್ತರಾದರೆ, ಚರ್ಚು ಮತ್ತು ರಾಜ್ಯವು ಏಕೈಕ ಕ್ರೈಸ್ತ ಸಮಾಜವಾಗುವುದು, ಸಾಮ್ರಾಟನು ದೇವರ ಪ್ರತಿನಿಧಿಯಾಗಿ ಭೂಮಿಯಲ್ಲಿ ಕಾರ್ಯನಡಿಸುವನು. ಚರ್ಚ್‌ ಮತ್ತು ರಾಜ್ಯದ ಈ ಸಂಬಂಧವು, ವಿಶಾಲ ರೀತಿಯಲ್ಲಿ, ಶತಮಾನಗಳಿಂದ ಪೂರ್ವದ ಆರ್ತೊಡಾಕ್ಸ್‌ ಚರ್ಚುಗಳಿಂದ ಅನುಸರಿಸಲ್ಪಟ್ಟಿದೆ. ದ ಆರ್ತೊಡಾಕ್ಸ್‌ ಚರ್ಚ್‌ ಎಂಬ ತನ್ನ ಪುಸ್ತಕದಲ್ಲಿ, ಆರ್ತೊಡಾಕ್ಸ್‌ ಬಿಷಪ್‌, ತಿಮೊಥಿ ವಾರ್‌, ಇದರ ಫಲಿತಾಂಶವನ್ನು ತೋರಿಸಿದ್ದಾನೆ: “ಕಳೆದ ಹತ್ತು ಶತಮಾನಗಳಲ್ಲಿ ರಾಷ್ಟ್ರೀಯತೆಯು ಸಂಪ್ರದಾಯ ಬದ್ಧ ಧರ್ಮದ ವ್ಯಥೆಯಾಗಿರುತ್ತದೆ.”

ಪಶ್ಚಿಮದಲ್ಲಿ ಕೊನೆಯ ರೋಮನ್‌ ಸಾಮ್ರಾಟನು ಸಾ.ಶ. 476 ರಲ್ಲಿ ಆಕ್ರಮಿಸಿದ ಜರ್ಮನರ ಗೋತ್ರಗಳಿಂದ ಪದಚ್ಯುತ ಮಾಡಲ್ಪಟ್ಟನು. ಇದು ಪಶ್ಚಿಮ ರೋಮನ್‌ ಸಾಮ್ರಾಜ್ಯದ ಅಂತ್ಯವನ್ನು ಗುರುತಿಸಿತು. ಪರಿಣಾಮವಾಗಿ ಬಂದ ರಾಜಕೀಯ ಶೂನ್ಯತೆಯ ಕುರಿತು, ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವುದು: “ಒಂದು ಹೊಸ ಶಕ್ತಿಯು ರೂಪಿಸಲ್ಪಟ್ಟಿತು: ರೋಮನ್‌ ಚರ್ಚು, ರೋಮಿನ ಬಿಷಪನ ಚರ್ಚು. ನಂದಿಹೋದ ರೋಮನ್‌ ಸಾಮ್ರಾಜ್ಯದ ಉತ್ತರಾಧಿಕಾರಿ ಸ್ವತಃ ತಾನೆಂದು ಚರ್ಚು ನಂಬಿತು.” ಈ ಎನ್‌ಸೈಕ್ಲೊಪೀಡಿಯ ಮುಂದರಿಸುತ್ತಾ ಅನ್ನುವುದು: “ರೋಮನ್‌ ಪೋಪರು . . . ಚರ್ಚ್‌ ಸರಕಾರದ ಐಹಿಕ ವಾದವನ್ನು ಚರ್ಚ್‌-ರಾಜ್ಯದ ಸೀಮೆಗಳಿಂದಾಚೆಗೆ ಹಬ್ಬಿಸಿದರು ಮತ್ತು ಕ್ರಿಸ್ತನು ಪೋಪನಿಗೆ ಚರ್ಚಿನ ಮೇಲೆ ಆತ್ಮಿಕ ಅಧಿಕಾರವನ್ನು ಮಾತ್ರವೇ ಅಲ್ಲ ಲೋಕದ ರಾಜ್ಯಗಳ ಮೇಲೂ ಐಹಿಕ ಅಧಿಕಾರವನ್ನು ಕೊಟಿದ್ದಾನೆಂದು ಹೇಳುತ್ತಾ, ಎರಡು ಖಡ್ಗಗಳ ತತ್ವವೆಂದೆಣಿಸುವ ಕಲ್ಪನೆಯನ್ನು ವಿಕಾಸಿಸಿದರು.”

ರಾಷ್ಟ್ರೀಯ ಪ್ರಾಟೆಸ್ಟಂಟ್‌ ಚರ್ಚುಗಳು

ಮಧ್ಯ ಯುಗಗಳಲ್ಲೆಲ್ಲಾ, ಸಾಂಪ್ರದಾಯಿಕ ಮತ್ತು ರೋಮನ್‌ ಕ್ಯಾತೊಲಿಕ್‌ ಧರ್ಮಗಳು ಎರಡೂ, ರಾಜಕೀಯದಲ್ಲಿ, ಲೌಕಿಕ ಸಂಚುಗಳಲ್ಲಿ ಮತ್ತು ಯುದ್ಧಗಳಲ್ಲಿ ಆಳವಾಗಿ ಒಳಗೂಡುವುದನ್ನು ಮುಂದರಿಸಿದ್ದವು. ಹದಿನಾರನೆಯ ಶತಮಾನದ ಪ್ರಾಟೆಸ್ಟಂಟ್‌ ಮತ ಸುಧಾರಣೆಯು, ಲೋಕದಿಂದ ಪ್ರತ್ಯೇಕವಾದ, ನಿಜ ಕ್ರೈಸ್ತತ್ವದ ಮರಳುವಿಕೆಯನ್ನು ಗುರುತಿಸಿತೋ?

ಇಲ್ಲ. ದಿ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ದಲ್ಲಿ ನಾವು ಓದುವುದು: “ಲುಥರನ್‌, ಕ್ಯಾಲ್ವಿನಿಸ್ಟ್‌ ಮತ್ತು ಆಂಗ್ಲಿಕನ್‌ ಸಂಪ್ರದಾಯಗಳ ಪ್ರಾಟೆಸ್ಟಂಟ್‌ ಮತ ಸುಧಾರಕರು . . . ಯಾರ ದೇವತಾಶಾಸ್ತ್ರಕ್ಕೆ ಅವರಿಗೆ ವಿಶಿಷ್ಟ ಒಲವಿನ ಅನಿಸಿಕೆಯಿತ್ತೋ ಆ ಆಗುಸ್ಟೀನನ ನೋಟಗಳಿಗೆ ದೃಢವಾಗಿ ಅಂಟಿಕೊಂಡು ಉಳಿದರು. . . . 16 ನೆಯ ಶತಕದ ಯೂರೋಪಿನ ಮೂರು ಮುಖ್ಯ ಪ್ರಾಟೆಸ್ಟಂಟ್‌ ಸಂಪ್ರದಾಯಗಳಲ್ಲಿ ಪ್ರತಿಯೊಂದು . . . ಸ್ಯಾಕ್ಸೊನಿ [ಮಧ್ಯ ಜರ್ಮನಿ], ಸ್ವಿಟ್ಸರ್ಲೆಂಡ್‌, ಮತ್ತು ಇಂಗ್ಲೆಂಡಿನ ಐಹಿಕ ಅಧಿಕಾರಿಗಳಿಂದ ಬೆಂಬಲವನ್ನು ಪಡೆಯಿತು ಮತ್ತು ರಾಜ್ಯದ ಸಂಬಂಧವಾಗಿ ಮಧ್ಯ ಯುಗದ ಚರ್ಚು ತಕ್ಕೊಂಡ ಅದೇ ಸ್ಥಾನದಲ್ಲಿ ಉಳಿಯಿತು.”

ನಿಜ ಕ್ರೈಸ್ತತ್ವಕ್ಕೆ ಮರಳುವ ಬದಲಾಗಿ, ಮತ ಸುಧಾರಣೆಯು, ರಾಜಕೀಯ ರಾಜ್ಯಗಳೊಂದಿಗೆ ದಯ ಸಂಪಾದಿಸಲು ಯತ್ನಿಸಿದ ಮತ್ತು ಅವರ ಯುದ್ಧಗಳಲ್ಲಿ ಅವರಿಗೆ ಕ್ರಿಯಾಶೀಲ ಬೆಂಬಲ ಕೊಟ್ಟ ರಾಷ್ಟ್ರೀಯ ಯಾ ಪ್ರಾದೇಶಿಕ ಚರ್ಚುಗಳ ಸಮೂಹವನ್ನೇ ಹೊರತಂದಿತು. ವಾಸ್ತವದಲ್ಲಿ, ಕ್ಯಾತೊಲಿಕ್‌ ಮತ್ತು ಪ್ರಾಟೆಸ್ಟಂಟ್‌ ಚರ್ಚುಗಳು ಎರಡೂ ಧಾಮಿಕ ಯುದ್ಧಗಳನ್ನು ಪ್ರಚೋದಿಸಿವೆ. ಆ್ಯನ್‌ ಹಿಸ್ಟೋರಿಯನ್ಸ್‌ ಅಪ್ರೋಚ್‌ ಟು ರಿಲಿಜನ್‌ ಎಂಬ ತನ್ನ ಪುಸ್ತಕದಲ್ಲಿ ಆರ್ನಲ್ಡ್‌ ಟೋಯ್ನಬಿ ಅಂಥ ಯುದ್ಧಗಳ ಕುರಿತು ಹೇಳಿದ್ದು: “ಅವುಗಳು ಫ್ರಾನ್ಸ್‌, ನೆದರ್ಲೆಂಡ್ಸ್‌, ಜರ್ಮನಿ, ಐರ್ಲಂಡ್‌ ನ ಕ್ಯಾತೊಲಿಕರು ಮತ್ತು ಪ್ರಾಟೆಸ್ಟಂಟರನ್ನು ಮತ್ತು ಇಂಗ್ಲೆಂಡ್‌ ಮತ್ತು ಸ್ಕಾಟ್‌ಲೆಂಡಿನ ಪ್ರಾಟೆಸ್ಟಂಟರ ಪ್ರತಿದ್ವಂದಿ ಪಂಥಗಳನ್ನು, ಶಸ್ತ್ರ ಬಲದಿಂದ ಒಬ್ಬರನ್ನೊಬ್ಬರು ನಿಗ್ರಹಿಸುವುದಕ್ಕೆ ಪ್ರಯತ್ನಿಸುವ ಕ್ರೂರ ಕೃತ್ಯದಲ್ಲಿ ಪ್ರದರ್ಶಿಸಿದವು.” ಐರ್ಲಂಡ್‌ ಮತ್ತು ಹಿಂದಿನ ಯುಗೊಸ್ಲಾವಿಯವನ್ನು ವಿಭಾಗಿಸುವ ಪ್ರಚಲಿತ ಹೋರಾಟಗಳು, ಕ್ಯಾತೊಲಿಕ್‌, ಆರ್ತೊಡಾಕ್ಸ್‌, ಮತ್ತು ಪ್ರಾಟೆಸ್ಟಂಟ್‌ ಚರ್ಚುಗಳು ಇನ್ನೂ ಈ ಲೋಕದ ಕಾರ್ಯಾಧಿಗಳಲ್ಲಿ ಆಳವಾಗಿ ಒಳಗೂಡಿವೆಂಬದನ್ನು ತೋರಿಸುತ್ತವೆ.

ಲೋಕದಿಂದ ಪ್ರತ್ಯೇಕವಾದ ನಿಜ ಕ್ರೈಸ್ತತ್ವವು ಭೂಮಿಯಲ್ಲಿ ಅಸ್ತಿತ್ವದಲ್ಲೇ ಇಲ್ಲ ಎಂದು ಇದೆಲ್ಲಾದರ ಅರ್ಥವೋ? ಆ ಪ್ರಶ್ನೆಯನ್ನು ಮುಂದಿನ ಲೇಖನವು ಉತ್ತರಿಸುವುದು.

[Box/Picture on page 10, 11]

“ಕ್ರೈಸ್ತತ್ವ” ಒಂದು ರಾಜ್ಯ ಧರ್ಮವಾದ ವಿಧ

ಕ್ರೈಸ್ತತ್ವವು ಎಂದೂ ಈ ಲೋಕದ ಭಾಗವಾಗಿರಲಿಕ್ಕಾಗಿ ಇರಲಿಲ್ಲ. (ಮತ್ತಾಯ 24:3, 9; ಯೋಹಾನ 17:16) ಆದರೂ, ಇತಿಹಾಸದ ಪುಸ್ತಕಗಳು ನಮಗೆ ತಿಳಿಸುವುದೇನಂದರೆ ಸಾ.ಶ. ನಾಲ್ಕನೆಯ ಶತಮಾನದಲ್ಲಿ, “ಕ್ರೈಸ್ತತ್ವ” ವು ರೋಮನ್‌ ಸಾಮ್ರಾಜ್ಯದ ಅಧಿಕೃತ ರಾಜ್ಯ ಧರ್ಮವಾಗಿ ಪರಿಣಮಿಸಿತು. ಇದು ಸಂಭವಿಸಿದ್ದು ಹೇಗೆ?

ನೀರೊ (ಸಾ.ಶ. 54-68) ನಿಂದ ಹಿಡಿದು ಮೂರನೆಯ ಶತಮಾನದಲ್ಲಿ ಬಹಳ ಕಾಲದ ತನಕ ರೋಮನ್‌ ಸಾಮ್ರಾಟರೆಲ್ಲರು ಕ್ರೈಸ್ತರನ್ನು ಒಂದಾ ಕ್ರಿಯಾಶೀಲರಾಗಿ ಹಿಂಸಿಸಿದ್ದರು ಅಥವಾ ಅವರ ಹಿಂಸೆಗೆ ಅನುಮತಿ ಕೊಟ್ಟಿದ್ದರು. ಅವರಿಗೆ ಸೈರಣೆಯನ್ನು ತೋರಿಸುವ ಘೋಷಣೆಯನ್ನು ಹೊರಡಿಸಿದ ರೋಮನ್‌ ಸಾಮ್ರಾಟರಲ್ಲಿ ಗ್ಯಾಲಿಯನಸ್‌ (ಸಾ.ಶ. 253-268) ಮೊದಲನೆಯವನು. ಆದಾಗ್ಯೂ, ಕ್ರೈಸ್ತತ್ವವು ಸಾಮ್ರಾಜ್ಯದಲ್ಲೆಲ್ಲೂ ಬಹಿಷ್ಕೃತ ಧರ್ಮವಾಗಿತ್ತು. ಗ್ಯಾಲಿಯನಸ್‌ನ ಅನಂತರ, ಹಿಂಸೆಯು ಮುಂದುವರಿಯಿತು, ಮತ್ತು ಡೈಯೊಕೀಷ್ಲನ್‌ (ಸಾ.ಶ. 284-305) ಮತ್ತು ಅವನ ನಂತರದ ಉತ್ತರಾಧಿಕಾರಿಗಳ ಕೆಳಗೆ, ಅದು ಇನ್ನೂ ಉದ್ರಿಕ್ತವಾಯಿತು.

ಸಾಮ್ರಾಟ 1 ನೆಯ ಕಾನ್‌ಸ್ಟಂಟೀನನ ಕ್ರೈಸ್ತತ್ವಕ್ಕೆ ಮತಾಂತರ ಎನಿಸಿಕೊಂಡ ಸಂಗತಿಯೊಂದಿಗೆ ನಾಲ್ಕನೆಯ ಶತಮಾನದ ಆರಂಭದಲ್ಲಿ ತಿರುಗು ಬಿಂದು ಬಂತು. ಈ “ಮತಾಂತರ” ದ ಕುರಿತು ಫ್ರೆಂಚ್‌ ಕೃತಿಯಾದ ಟವೊ ನುವೆಲ್‌ ಎನ್ಸಕಪ್ಲೇಡ್‌ ಕಾಟೊಲಿಕ್‌ (ಥಿಯೊ—ನ್ಯೂ ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯ) ಹೇಳುವುದು: “ಕಾನ್‌ಸ್ಟಂಟೀನನು ಒಬ್ಬ ಕ್ರೈಸ್ತ ಸಾಮ್ರಾಟನೆಂಬದಾಗಿ ಹೇಳಿಕೊಂಡನು. ವಾಸ್ತವದಲ್ಲಿ ಅವನಿಗೆ ದೀಕ್ಷಾಸ್ನಾನವಾದದ್ದು ಅವನ ಮರಣಶಯ್ಯೆಯಲ್ಲಿ ಮಾತ್ರವೇ.” ಆದಾಗ್ಯೂ, ಸಾ.ಶ. 313 ರಲ್ಲಿ ಕಾನ್‌ಸ್ಟಂಟೀನ್‌ ಮತ್ತು ಅವನ ಜೊತೆ ಸಾಮ್ರಾಟ ಲೈಸಿನಿಯಸ್‌, ಕ್ರೈಸ್ತರಿಗೆ ಮತ್ತು ವಿಧರ್ಮಿಗಳಿಗೆ ಒಂದೇ ತೆರದ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಿದ ಒಂದು ರಾಜಶಾಸನವನ್ನು ಹೊರಡಿಸಿದರು. ದ ನ್ಯೂ ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ವಿಧರ್ಮಿ ಪಂಥಗಳಲ್ಲದೆ ಕ್ರೈಸ್ತತ್ವವು ಸಹ ಅಧಿಕೃತವಾಗಿ ರಿಲಿಜಿಯೊ ಲಿಕೀಟ [ಶಾಸನಬದ್ಧ ಧರ್ಮ] ವಾಗಿ ಅಂಗೀಕರಿಸಲ್ಪಟ್ಟಿತ್ತೆಂದು ಸೂಚಿಸಿದ ಕಾನ್‌ಸ್ಟಂಟೀನನು ಕ್ರೈಸ್ತರಿಗೆ ಕೊಟ್ಟ ಭಕ್ತಿ ಸ್ವಾತಂತ್ರ್ಯದ ಲಂಬನೆಯು, ಒಂದು ಕ್ರಾಂತಿಕಾರಕ ಕ್ರಿಯೆಯಾಗಿತ್ತು.”

ಆದರೂ, ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕ ಘೋಷಿಸುವುದು: “ಅವನು [ಕಾನ್‌ಸ್ಟಂಟೀನ್‌] ಕ್ರೈಸ್ತತ್ವವನ್ನು ಸಾಮ್ರಾಜ್ಯದ ಧರ್ಮವಾಗಿ ಮಾಡಲಿಲ್ಲ.” ಇನ್ಸ್‌ಟಿಟ್ಯೂಟ್‌ ಆಫ್‌ ಫ್ರಾನ್ಸ್‌ ನ ಸದಸ್ಯ, ಫ್ರೆಂಚ್‌ ಚರಿತ್ರೆಗಾರ ಜಹಾನ್‌ರಮೆ ಪಲೇಂಕ್‌ ಬರೆಯುವುದು: “ರೋಮನ್‌ ರಾಜ್ಯವಾದರೋ . . . ಅಧಿಕೃತವಾಗಿ ವಿಧರ್ಮಿಯಾಗಿಯೇ ಉಳಿಯಿತು. ಮತ್ತು ಕಾನ್‌ಸ್ಟಂಟೀನನು ಕ್ರಿಸ್ತನ ಧರ್ಮವನ್ನು ಅನುಸರಿಸುವಾಗ ಆ ಸನ್ನಿವೇಶಕ್ಕೆ ಅಂತ್ಯವನ್ನು ತರಲಿಲ್ಲ.” ಲೀಗೆಸಿ ಆಫ್‌ ರೋಮ್‌ ಎಂಬ ಕೃತಿಯಲ್ಲಿ ಪ್ರೊಫೆಸರ್‌ ಆರ್ನೆಸ್ಟ್‌ ಬಾರ್‌ಕರ್‌ ಹೇಳಿದ್ದು: “[ಕಾನ್‌ಸ್ಟಂಟೀನನ ವಿಜಯವು] ರಾಜ್ಯ ಧರ್ಮವಾಗಿ ಕ್ರೈಸ್ತತ್ವದ ತತ್‌ಕ್ಷಣ ಸ್ಥಾಪನೆಯಲ್ಲಿ ಫಲಿಸಲಿಲ್ಲ. ಕ್ರೈಸ್ತತ್ವವನ್ನು ಸಾಮ್ರಾಜ್ಯದ ಸಾರ್ವಜನಿಕ ಆರಾಧನೆಗಳಲ್ಲಿ ಒಂದಾಗಿ ಅಂಗೀಕರಿಸಲು ಕಾನ್‌ಸ್ಟಂಟೀನನು ತೃಪ್ತನಿದ್ದನು. ಮುಂದಿನ ಎಪ್ಪತ್ತು ವರ್ಷಗಳಲ್ಲಿ ಹಳೇ ವಿಧರ್ಮಿ ಸಂಸ್ಕಾರಗಳು ರೋಮ್‌ನಲ್ಲಿ ಅಧಿಕೃತವಾಗಿ ನಡಿಸಲ್ಪಡುತ್ತಿದ್ದವು.”

ಹೀಗೆ ಈ ಬಿಂದುವಿನಲ್ಲಿ “ಕ್ರೈಸ್ತತ್ವವು” ರೋಮನ್‌ ಸಾಮ್ರಾಜ್ಯದಲ್ಲಿ ಶಾಸನಬದ್ಧ ಧರ್ಮವಾಗಿತ್ತು. ಹೇಳಿಕೆಯ ಪೂರ್ಣ ಅರ್ಥದಲ್ಲಿ, ಅದು ಅಧಿಕೃತ ರಾಜ್ಯ ಧರ್ಮವಾದದ್ದು ಯಾವಾಗ? ನ್ಯೂ ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯ ದಲ್ಲಿ ನಾವು ಓದುವುದು: “ಯಾರ ಮರಣದಿಂದಾಗಿ ಕ್ರೈಸ್ತತ್ವದ ಹಿಂಸೆಯು ಥಟ್ಟನೆ ಅಂತ್ಯಗೊಂಡಿತೋ ಆ ಜ್ಯೂಲಿಯನ್‌ [ಸಾ.ಶ. 361-363] ನ ಹೊರತು ಬೇರೆ ಎಲ್ಲಾ ಉತ್ತರಾಧಿಕಾರಿಗಳಿಂದ [ಕಾನ್‌ಸ್ಟಂಟೀನನ] ರಾಜನೀತಿಯು ಮುಂದರಿಸಲ್ಪಟ್ಟಿತ್ತು. ಕೊನೆಗೆ, ನಾಲ್ಕನೆಯ ಶತಮಾನದ ಕೊನೆಯ ಕಾಲು ಭಾಗದಲ್ಲಿ, ಮಹಾ ಥಿಯೊಡೋಸಿಯಸ್‌ [ಸಾ.ಶ. 379-395] ಕ್ರೈಸ್ತತ್ವವನ್ನು ಸಾಮ್ರಾಜ್ಯದ ಅಧಿಕೃತ ಧರ್ಮವಾಗಿ ಮಾಡಿದನು ಮತ್ತು ಸಾರ್ವಜನಿಕ ವಿಧರ್ಮಿ ಆರಾಧನೆಯನ್ನು ನಿಗ್ರಹಿಸಿದನು.”

ಇದನ್ನು ದೃಢೀಕರಿಸುತ್ತಾ ಮತ್ತು ಈ ಹೊಸ ರಾಜ್ಯ ಧರ್ಮವು ಏನಾಗಿತ್ತು ಎಂಬದನ್ನು ಬಯಲುಪಡಿಸುತ್ತಾ, ಬೈಬಲ್‌ ಪಂಡಿತ ಮತ್ತು ಚರಿತ್ರೆಗಾರ ಎಫ್‌ ಜೆ. ಫೋಕ್ಸ್‌ ಜ್ಯಾಕ್‌ಸನ್‌ ಬರೆದದ್ದು: “ಕಾನ್‌ಸ್ಟಂಟೀನನ ಕೆಳಗೆ ಕ್ರೈಸ್ತತ್ವ ಮತ್ತು ರೋಮನ್‌ ಸಾಮ್ರಾಜ್ಯವು ಮೈತ್ರಿ ಸಂಬಂಧದಲ್ಲಿದ್ದವು. ಥಿಯೊಡೋಸಿಯಸನ ಕೆಳಗೆ ಅವು ಐಕ್ಯಗೊಂಡವು. . . . ಆ ಹೊತ್ತಿನಿಂದ ಕ್ಯಾತೊಲಿಕ್‌ ಪದವಿಯು ತಂದೆ, ಮಗ, ಮತ್ತು ಪವಿತ್ರಾತ್ಮವನ್ನು ಸಮಾನ ಪೂಜ್ಯತೆಯಿಂದ ಆರಾಧಿಸಿದವರಿಗೆ ಕಾದಿರಿಸಲ್ಪಟ್ಟಿತು. ಈ ಸಾಮ್ರಾಟನ ಇಡೀ ಧಾರ್ಮಿಕ ರಾಜ್ಯನೀತಿಯು ಈ ಹೇತುವನ್ನು ಮಾರ್ಗದರ್ಶಿಸಿತು, ಮತ್ತು ಕ್ಯಾತೊಲಿಕ್‌ ನಂಬಿಕೆಯು ರೋಮನರ ಒಂದೇ ನ್ಯಾಯಬದ್ಧ ಧರ್ಮವಾಗುವುದರಲ್ಲಿ ಫಲಿಸಿತು.”

ಜಹಾನ್‌ರಮೆ ಪಲೇಂಕ್‌ ಬರೆದದ್ದು: “ಥಿಯೊಡೋಸಿಯಸ್‌ ವಿಧರ್ಮಿ ಪಂಥಗಳನ್ನು ಎದುರಿಸಿದಾಗ, ಆರ್ತೊಡಾಕ್ಸ್‌ [ಕ್ಯಾತೊಲಿಕ್‌] ಚರ್ಚ್‌ನ ಪರವಾಗಿಯೂ ಕಾರ್ಯನಡಿಸಿದನು; ಸಾ.ಶ. 380 ರ ಅವನ ರಾಜಶಾಸನವು, ಅವನ ಪ್ರಜೆಗಳೆಲ್ಲರೂ ಪೋಪ್‌ ಡಮಾಸಸ್‌ ಮತ್ತು ಅಲೆಕ್ಸಾಂಡ್ರಿಯದ [ತ್ರಯೈಕ್ಯವಾದಿ] ಬಿಷಪನ ನಂಬಿಕೆಯನ್ನು ಅವಲಂಬಿಸಬೇಕೆಂದು ಆಜ್ಞಾಪಿಸಿತು ಮತ್ತು ಅಂಗೀಕರಿಸದವರ ಭಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಂಡಿತು. ಮಹಾ ಕಾನ್‌ಸ್ಟಂಟಿನೋಪಲ್‌ ಮಂಡಲಿ (381) ಪುನಃ ಎಲ್ಲಾ ಪಾಷಂಡವಾದಗಳನ್ನು ಖಂಡಿಸಿತು, ಮತ್ತು ಯಾವ ಬಿಷಪನಾದರೂ ಅವನ್ನು ಬೆಂಬಲಿಸದಂತೆ ಸಾಮ್ರಾಟನು ನೋಡಿಕೊಂಡನು. ನೈಸೀನ್‌ [ತ್ರಯೈಕ್ಯವಾದ] ಕ್ರೈಸ್ತತ್ವವು ಚೆನ್ನಾಗಿ ಮತ್ತು ನಿಜವಾಗಿ ರಾಜ್ಯ ಧರ್ಮವಾಗಿ ಪರಿಣಮಿಸಿತ್ತು. . . . ಚರ್ಚು ರಾಜ್ಯದೊಂದಿಗೆ ನಿಕಟವಾಗಿ ಐಕ್ಯವಾಗಿತ್ತು ಮತ್ತು ಆದರ ಸಂಪೂರ್ಣ ಬೆಂಬಲದಲ್ಲಿ ಆನಂದಿಸಿತು.”

ಹೀಗೆ, ರೋಮನ್‌ ಸಾಮ್ರಾಜ್ಯದ ರಾಜ್ಯ ಧರ್ಮವಾದದ್ದು ಅಪೊಸ್ತಲರ ದಿನಗಳ ಕಲಬೆರಕೆಯಾಗದ ಕ್ರೈಸ್ತತ್ವವಲ್ಲ. ಅದು ಸಾಮ್ರಾಟ ಥಿಯೊಡೋಸಿಯಸ್‌ನಿಂದ ಬಲಾತ್ಕಾರದಿಂದ ಹೊರಿಸಲ್ಪಟ್ಟ ಮತ್ತು ರೋಮನ್‌ ಕ್ಯಾತೊಲಿಕ್‌ ಚರ್ಚ್‌ನಿಂದ ಅನುಸರಿಸಲ್ಪಡುವ, ಆಗಲೂ ಇದ್ದ ಮತ್ತು ಈಗಲೂ ನಿಜವಾಗಿ ಈ ಲೋಕದ ಭಾಗವಾಗಿರುವ, ನಾಲ್ಕನೆಯ ಶತಮಾನದ ತ್ರಯೈಕ್ಯವಾದಿ ಕ್ಯಾತೊಲಿಕ್‌ ಧರ್ಮವಾಗಿತ್ತು.

[ಕೃಪೆ]

Emperor Theodosius I: Real Academia de la Historia, Madrid (Foto Oronoz)

[ಪುಟ 9 ರಲ್ಲಿರುವ ಚಿತ್ರ ಕೃಪೆ]

Scala/Art Resource, N.Y.