ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರೈಸ್ತರು ಮತ್ತು ಮಾನವ ಸಮಾಜ ಇಂದು

ಕ್ರೈಸ್ತರು ಮತ್ತು ಮಾನವ ಸಮಾಜ ಇಂದು

ಕ್ರೈಸ್ತರು ಮತ್ತು ಮಾನವ ಸಮಾಜ ಇಂದು

“ನನ್ನ ಹೆಸರಿನ ನಿಮಿತ್ತ ನಿಮ್ಮನ್ನು ಎಲ್ಲಾ ಜನಾಂಗಗಳವರು ಹಗೆಮಾಡುವರು.”—ಮತ್ತಾಯ 24:9.

1. ಕ್ರೈಸ್ತತ್ವದ ಒಂದು ವೈಶಿಷ್ಟ್ಯ ಸೂಚಕ ಗುರುತು ಏನಾಗಿರಲಿಕ್ಕಿತ್ತು?

 ಲೋಕದಿಂದ ಪ್ರತ್ಯೇಕತೆಯು ಆದಿ ಕ್ರೈಸ್ತರ ಒಂದು ವೈಶಿಷ್ಟ್ಯ ಸೂಚಕ ಗುರುತಾಗಿತ್ತು. ತನ್ನ ಸ್ವರ್ಗೀಯ ತಂದೆಯಾದ ಯೆಹೋವನಿಗೆ ಪ್ರಾರ್ಥನೆಯಲ್ಲಿ, ಕ್ರಿಸ್ತನು ತನ್ನ ಶಿಷ್ಯರ ಕುರಿತು ಅಂದದ್ದು: “ನಾನು ನಿನ್ನ ವಾಕ್ಯವನ್ನು ಇವರಿಗೆ ಕೊಟ್ಟಿದೇನ್ದೆ; ನಾನು ಲೋಕದ ಭಾಗವಲ್ಲದೆ ಇರುವ ಪ್ರಕಾರ ಇವರೂ ಲೋಕದ ಭಾಗವಲ್ಲ.” (ಯೋಹಾನ 17:14, NW) ಪೊಂತ್ಯ ಪಿಲಾತನ ಮುಂದೆ ಬರುವಂತೆ ಆಜ್ಞಾಪಿಸಲ್ಪಟ್ಟಾಗ, ಯೇಸುವಂದದ್ದು: “ನನ್ನ ರಾಜ್ಯವು ಈ ಲೋಕದ ಭಾಗವಲ್ಲ.” (ಯೋಹಾನ 18:36, NW) ಲೋಕದಿಂದ ಪುರಾತನ ಕ್ರೈಸ್ತತ್ವದ ಪ್ರತ್ಯೇಕತೆಯು ಕ್ರೈಸ್ತ ಗ್ರೀಕ್‌ ಶಾಸ್ತ್ರದಿಂದ ಮತ್ತು ಇತಿಹಾಸಕಾರರಿಂದ ದೃಢೀಕರಿಸಲ್ಪಟ್ಟಿದೆ.

2. (ಎ) ಸಮಯವು ದಾಟಿದಂತೆ ಕ್ರಿಸ್ತನ ಹಿಂಬಾಲಕರ ಮತ್ತು ಲೋಕದ ನಡುವಣ ಸಂಬಂಧದಲ್ಲಿ ಯಾವುದೇ ಬದಲಾವಣೆ ಇರಲಿಕ್ಕಿತ್ತೋ? (ಬಿ) ಜನಾಂಗಗಳ ಮತಾಂತರದ ಮೂಲಕ ಯೇಸುವಿನ ರಾಜ್ಯವು ಬರಲಿಕ್ಕಿತ್ತೋ?

2 ತನ್ನ ಹಿಂಬಾಲಕರ ಮತ್ತು ಲೋಕದ ನಡುವಣ ಸಂಬಂಧದಲ್ಲಿ ಒಂದು ಬದಲಾವಣೆ ಆಗುವದೆಂದೂ, ಮತ್ತು ಲೋಕವನ್ನು ಕ್ರೈಸ್ತತ್ವಕ್ಕೆ ಮತಾಂತರಿಸುವ ಮೂಲಕ ಆತನ ರಾಜ್ಯವು ಬರುವುದೆಂದೂ, ಯೇಸು ಅನಂತರ ಪ್ರಕಟಿಸಿದನೋ? ಇಲ್ಲ. ಯೇಸುವಿನ ಮರಣದ ನಂತರ ಆತನ ಹಿಂಬಾಲಕರು ಬರೆಯುವಂತೆ ಪ್ರೇರಿಸಲ್ಪಟ್ಟ ಯಾವುದೂ ಅಂಥ ವಿಷಯದ ಕುರಿತು ಸುಳಿವನ್ನು ಸಹ ಕೊಟ್ಟಿಲ್ಲ. (ಯಾಕೋಬ 4:4 [ಸಾ.ಶ. 62 ಕ್ಕೆ ತುಸು ಮುಂಚೆ ಬರೆಯಲ್ಪಟ್ಟಿತು)]; 1 ಯೋಹಾನ 2:15-17; 5:19 [ಸಾ.ಶ. 98 ರ ಸುಮಾರಿಗೆ ಬರೆಯಲ್ಪಟ್ಟಿತು)] ಅದಕ್ಕೆ ಪ್ರತಿಯಾಗಿ ಬೈಬಲು, ಯೇಸುವಿನ “ಸಾನ್ನಿಧ್ಯ” ಮತ್ತು ತರುವಾಯದ ರಾಜ್ಯಾಧಿಕಾರದಲ್ಲಿ “ಬರುವಿಕೆ” ಯನ್ನು, ಲೋಕದ “ಅಂತ್ಯ” ಅಥವಾ ನಾಶನದಲ್ಲಿ ಮುಕ್ತಾಯಗೊಳ್ಳುವ “ವಿಷಯಗಳ ವ್ಯವಸ್ಥೆಯ ಸಮಾಪ್ತಿ“ ಯೊಂದಿಗೆ ಜೋಡಿಸಿದೆ. (ಮತ್ತಾಯ 24:3, 14, 29, 30; ದಾನಿಯೇಲ 2:44; 7:13, 14) ತನ್ನ ಪರೌಸಿಯ ಅಥವಾ ಸಾನ್ನಿಧ್ಯದ ಕುರಿತು ಯೇಸು ಕೊಟ್ಟ ಸೂಚನೆಯಲ್ಲಿ, ತನ್ನ ನಿಜ ಹಿಂಬಾಲಕರ ಕುರಿತು ಯೇಸು ಅಂದದ್ದು: “ಆಗ ನಿಮ್ಮನ್ನು ಉಪದ್ರವಕ್ಕೆ ಒಪ್ಪಿಸಿ ಕೊಲ್ಲುವರು; ನನ್ನ ಹೆಸರಿನ ನಿಮಿತ್ತ ಎಲ್ಲಾ ಜನಾಂಗಗಳವರು ನಿಮ್ಮನ್ನು ಹಗೆಮಾಡುವರು.”—ಮತ್ತಾಯ 24:9.

ನಿಜ ಕ್ರೈಸ್ತರು ಇಂದು

3, 4. (ಎ) ಆದಿ ಕ್ರೈಸ್ತರನ್ನು ಒಂದು ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯವು ಹೇಗೆ ವರ್ಣಿಸುತ್ತದೆ? (ಬಿ) ಯಾವ ತದ್ರೀತಿಯ ಮಾತುಗಳಲ್ಲಿ ಯೆಹೋವನ ಸಾಕ್ಷಿಗಳು ಮತ್ತು ಆದಿ ಕ್ರೈಸ್ತರು ವರ್ಣಿಸಲ್ಪಟ್ಟಿದ್ದಾರೆ?

3 ಇಂದು ಯಾವ ಧಾರ್ಮಿಕ ಗುಂಪು ಕ್ರೈಸ್ತ ತತ್ವಗಳಿಗೆ ನಂಬಿಗಸ್ತಿಕೆಗಾಗಿ ಮತ್ತು ಅದರ ಸದಸ್ಯರು ದ್ವೇಷಿಸಲ್ಪಟ್ಟು, ಹಿಂಸಿಸಲ್ಪಡುವದರೊಂದಿಗೆ ಲೋಕದಿಂದ ಪ್ರತ್ಯೇಕವಾಗಿರುವಿಕೆಗಾಗಿ ಸ್ವತಃ ಸತ್ಕೀರ್ತಿಯನ್ನು ಗಳಿಸಿರುತ್ತದೆ? ಒಳ್ಳೆಯದು, ಆದಿ ಕ್ರೈಸ್ತರ ಚಾರಿತ್ರಿಕ ವರ್ಣನೆಗಳ ಪ್ರತಿಯೊಂದು ಅಂಶಕ್ಕೆ ಯಾವ ಲೋಕವ್ಯಾಪಕ ಕ್ರೈಸ್ತ ಸಂಸ್ಥೆಯು ಅನುರೂಪವಾಗಿದೆ? ಅವರ ಕುರಿತು ನ್ಯೂ ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಪುರಾತನ ಕ್ರೈಸ್ತ ಸಮಾಜವು, ಯೆಹೂದ್ಯ ಪರಿಸರದೊಳಗಿನ ಕೇವಲ ಇನ್ನೊಂದು ಪಂಥವಾಗಿ ಮೊದಲು ಪರಿಗಣಿಸಲ್ಪಟ್ಟಿದ್ದರೂ, ಅದರ ದೇವತಾಶಾಸ್ತ್ರ ಸಂಬಂಧದ ಬೋಧನೆಯಲ್ಲಿ, ಹೆಚ್ಚು ವಿಶೇಷವಾಗಿ, ‘ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ’ ಕ್ರಿಸ್ತನ ಸಾಕ್ಷಿಗಳಾಗಿ ಸೇವೆ ಮಾಡಿದ ಅದರ ಸದಸ್ಯರ ಹುರುಪಿನಲ್ಲಿ, ಅಸದೃಶವಾಗಿ ರುಜುವಾಗಿದೆ. (ಅ. ಕೃತ್ಯಗಳು 1:8)”—ಸಂಪುಟ 3, ಪುಟ 694.

4 “ಕೇವಲ ಇನ್ನೊಂದು ಪಂಥವಾಗಿ . . . ಪರಿಗಣಿಸಲ್ಪಟ್ಟಿದ್ದ,” “ಅದರ ಬೋಧನೆಯಲ್ಲಿ . . . ಅಸದೃಶ,” “ಸಾಕ್ಷಿಗಳಾಗಿ . . . ಹುರುಪು,” ಎಂಬ ಹೇಳಿಕೆಗಳನ್ನು ಪರಿಗಣಿಸಿರಿ. ಮತ್ತು ಅದೇ ಎನ್‌ಸೈಕ್ಲೊಪೀಡಿಯವು ಯೆಹೋವನ ಸಾಕ್ಷಿಗಳನ್ನು ಹೇಗೆ ವರ್ಣಿಸುತ್ತದೆಂದು ಈಗ ಅವಲೋಕಿಸಿರಿ: “ಒಂದು ಪಂಥವಾದ . . . ಸಾಕ್ಷಿಗಳು ಕೇವಲ ಕೆಲವೇ ವರ್ಷಗಳೊಳಗೆ ಲೋಕದ ಅಂತ್ಯವು ಬರುವುದೆಂದು ಆಳವಾಗಿ ಮನಗಂಡಿದ್ದಾರೆ. ಈ ಸ್ಫುಟವಾದ ನಂಬಿಕೆಯು ಅವರ ಅವಿಶ್ರಾಂತ ಹುರುಪಿನ ಹಿಂದಿರುವ ಬಲಾಢ್ಯ ಪ್ರೇರಕ ಶಕ್ತಿಯಾಗಿ ತೋರುತ್ತದೆ. . . . ಪಂಥದ ಪ್ರತಿಯೊಬ್ಬ ಸದಸ್ಯನ ಮೂಲಭೂತ ಹಂಗು, ಯೆಹೋವನಿಗೆ, ಆತನ ಬರಲಿರುವ ರಾಜ್ಯವನ್ನು ಪ್ರಕಟಿಸುವ ಮೂಲಕ ಸಾಕ್ಷಿಕೊಡುವುದೇ ಆಗಿದೆ. . . . ಅವರು ಬೈಬಲನ್ನು ತಮ್ಮ ನಂಬಿಕೆಯ ಮತ್ತು ನಡವಳಿಕೆಯ ಸೂತ್ರದ ಏಕಮಾತ್ರ ಮೂಲವಾಗಿ ಪರಿಗಣಿಸುತ್ತಾರೆ . . . ನಿಜ ಸಾಕ್ಷಿಯಾಗಿರಲು ಒಬ್ಬನು ಒಂದಲ್ಲ ಒಂದು ರೀತಿಯಲ್ಲಿ ಪರಿಣಾಮಕಾರಿಯಾಗಿ ಸಾರಲೇಬೇಕು.”—ಸಂಪುಟ 7, ಪುಟಗಳು 864-5.

5. (ಎ) ಯಾವ ಸಂಬಂಧಗಳಲ್ಲಿ ಯೆಹೋವನ ಸಾಕ್ಷಿಗಳ ಬೋಧನೆಗಳು ಅಸದೃಶವಾಗಿವೆ? (ಬಿ) ಯೆಹೋವನ ಸಾಕ್ಷಿಗಳ ನಂಬಿಕೆಗಳು ಶಾಸ್ತ್ರಗ್ರಂಥಕ್ಕೆ ಹೊಂದಿಕೆಯಲ್ಲಿವೆಯೆಂದು ತೋರಿಸುವ ದೃಷ್ಟಾಂತಗಳನ್ನು ಕೊಡಿರಿ.

5 ಯಾವ ವಿಷಯಗಳಲ್ಲಿ ಯೆಹೋವನ ಸಾಕ್ಷಿಗಳ ಬೋಧನೆಗಳು ಅಸದೃಶವಾಗಿವೆ? ನ್ಯೂ ಕ್ಯಾತೊಲಿಕ್‌ ಎನ್‌ಸೈಕ್ಲೊಪೀಡಿಯ ವು ಕೆಲವನ್ನು ತಿಳಿಸುತ್ತದೆ: “ಅವರು [ಯೆಹೋವನ ಸಾಕ್ಷಿಗಳು] ತ್ರಯೈಕ್ಯವನ್ನು ವಿಧರ್ಮಿ ವಿಗ್ರಹಾರಾಧನೆಯಾಗಿ ಖಂಡಿಸುತ್ತಾರೆ . . . ಅವರು ಯೇಸುವನ್ನು ಯೆಹೋವನ ಸಾಕ್ಷಿಗಳಲ್ಲಿ ಅತ್ಯಂತ ಮಹಾನ್‌ ಸಾಕ್ಷಿಯಾಗಿ, ಯೆಹೋವನಿಗಲ್ಲದೆ ಬೇರೆ ಯಾರಿಗೂ ಕೆಳಗಿನವನಲ್ಲದ ‘ಒಬ್ಬ ದೇವರು’ (ಯೋಹಾನ 1.1ನ್ನು ಅವರು ಹಾಗೆ ತರ್ಜುಮೆ ಮಾಡುತ್ತಾರೆ) ಆಗಿ ಪರಿಗಣಿಸುತ್ತಾರೆ. . . . ಅವನು ಮನುಷ್ಯನಾಗಿ ಸತ್ತನು ಮತ್ತು ಅಮರತ್ವವುಳ್ಳ ಆತ್ಮ ಪುತ್ರನಾಗಿ ಎಬ್ಬಿಸಲ್ಪಟ್ಟನು. ಆತನ ಯಾತನೆ ಮತ್ತು ಮರಣವು, ಮಾನವರು ಭೂಮಿಯ ಮೇಲೆ ನಿತ್ಯವಾಗಿ ಜೀವಿಸುವುದನ್ನು ಪುನಃಗಳಿಸಲು ಆತನು ತೆತ್ತ ಬೆಲೆಯಾಗಿದೆ. ನಿಶ್ಚಯವಾಗಿ, ನಿಜ ಸಾಕ್ಷಿಗಳ ‘ಮಹಾ ಸಮೂಹ’ ದವರು (ಪ್ರಕ. 7.9) ಒಂದು ಭೂಪರದೈಸದಲ್ಲಿ ನಿರೀಕ್ಷೆಯಿಡುತ್ತಾರೆ; ಕೇವಲ 1,44,000 ನಂಬಿಗಸ್ತರು (ಪ್ರಕ. 7.4; 14.1, 4) ಕ್ರಿಸ್ತನೊಂದಿಗೆ ಸ್ವರ್ಗೀಯ ಮಹಿಮೆಯಲ್ಲಿ ಆನಂದಿಸಬಹುದು. ದುಷ್ಟರು ಸಂಪೂರ್ಣ ನಾಶನವನ್ನು ಅನುಭವಿಸುವರು. . . . ಮುಳುಗಿಸುವಿಕೆಯ ಮೂಲಕ ಸಾಕ್ಷಿಗಳು ನಡಿಸುವ—ದೀಕ್ಷಾಸ್ನಾನ—ಯೆಹೋವ ದೇವರ ಸೇವೆಗಾಗಿ ಅವರ ಸಮರ್ಪಣೆಯ ಬಾಹ್ಯ ಚಿಹ್ನೆ [ಆಗಿದೆ]. . . . ರಕ್ತ ಪೂರಣಗಳನ್ನು ನಿರಾಕರಿಸುವ ಮೂಲಕ ಯೆಹೋವನ ಸಾಕ್ಷಿಗಳು ಸರ್ವಗೋಚರವನ್ನು ಆಕರ್ಷಿಸಿದ್ದಾರೆ . . . ಅವರ ವೈವಾಹಿಕ ಸಂಬಂಧ ಮತ್ತು ಲೈಂಗಿಕ ನೈತಿಕತೆಯು ತೀರ ಕಟ್ಟುನಿಟ್ಟಿನದ್ದು.” ಈ ಸಂಬಂಧಗಳಲ್ಲಿ ಯೆಹೋವನ ಸಾಕ್ಷಿಗಳು ಅಸದೃಶರಾಗಿರಬಹುದು, ಆದರೆ, ಇವೆಲ್ಲ ವಿಷಯಗಳಲ್ಲಿ ಅವರ ನಿಲುವು ದೃಢವಾಗಿ ಬೈಬಲಿನ ಮೇಲೆಯೇ ಆಧಾರಿಸಿದೆ.—ಕೀರ್ತನೆ 37:29; ಮತ್ತಾಯ 3:16; 6:10; ಅ. ಕೃತ್ಯಗಳು 15:28, 29; ರೋಮಾಪುರ 6:23; 1 ಕೊರಿಂಥ 6:9, 10; 8:6; ಪ್ರಕಟನೆ 1:5.

6. ಯಾವ ನಿಲುವನ್ನು ಯೆಹೋವನ ಸಾಕ್ಷಿಗಳು ಕಾಪಾಡಿಕೊಂಡಿದ್ದಾರೆ? ಏಕೆ?

6 ಈ ರೋಮನ್‌ ಕ್ಯಾತೊಲಿಕ್‌ ಕೃತಿಯು ಕೂಡಿಸುವುದೇನಂದರೆ 1965 ರಲ್ಲಿ (ಲೇಖನವು ಬರೆಯಲ್ಪಟ್ಟ ವರ್ಷವೆಂದು ವ್ಯಕ್ತ) “ಸಾಕ್ಷಿಗಳು ತಾವು ಜೀವಿಸಿದ್ದ ಸಮಾಜಕ್ಕೆ ತಾವು ಸೇರಿದವರೆಂದು ಇನ್ನೂ ಪರಿಗಣಿಸಿರಲಿಲ್ಲ.” ಸಮಯವು ದಾಟಿದಂತೆ ಮತ್ತು ಯೆಹೋವನ ಸಾಕ್ಷಿಗಳ ಸಂಖ್ಯೆಯು ಹೆಚ್ಚು ಅಧಿಕವಾದಾಗ ಮತ್ತು “ಒಂದು ಪಂಥಕ್ಕೆ ಅಭಿಮುಖವಾಗಿ ಚರ್ಚಿನ ಗುಣಲಕ್ಷಣಗಳನ್ನು ಹೆಚ್ಚೆಚ್ಚಾಗಿ” ಸ್ವೀಕರಿಸಿದಾಗ, ಅವರು ಲೋಕದ ಒಂದು ಭಾಗವಾಗುವರೆಂದು ಕರ್ತೃವು ಯೋಚಿಸಿರುವಂತೆ ಕಾಣುತ್ತದೆ. ಆದರೆ ಅಂತಹದ್ದೇನೂ ಸತ್ಯವಾಗಿ ರುಜುವಾಗಲಿಲ್ಲ. ಇಂದು, 1965 ಕ್ಕಿಂತ ನಾಲ್ಕು ಪಾಲಿಗಿಂತಲೂ ಹೆಚ್ಚು ಸಾಕ್ಷಿಗಳೊಂದಿಗೆ, ಯೆಹೋವನ ಸಾಕ್ಷಿಗಳು ಈ ಲೋಕದ ಸಂಬಂಧದಲ್ಲಿ ತಮ್ಮ ನಿಲುವನ್ನು ಸುಸಂಗತವಾಗಿ ಕಾಪಾಡಿಕೊಂಡಿದ್ದಾರೆ. ಯೇಸು “ಲೋಕದ ಭಾಗವಾಗಿರದೆ” ಇದ್ದ ಪ್ರಕಾರ “ಅವರು ಲೋಕದ ಭಾಗವಾಗಿಲ್ಲ.”—ಯೋಹಾನ 17:16.

ಪ್ರತ್ಯೇಕರು ಆದರೆ ವಿರೋಧಕರಲ್ಲ

7, 8. ಆದಿ ಕ್ರೈಸ್ತರ ವಿಷಯದಲ್ಲಿ ನಿಜವಾಗಿದ್ದಂತೆ, ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಇಂದು ಯಾವುದು ಸತ್ಯವಾಗಿದೆ?

7 ಎರಡನೆಯ ಶತಮಾನದ ಕ್ರೈಸ್ತ ಮತ ಸಮರ್ಥಕ ಜಸ್ಟಿನ್‌ ಮಾರ್ಟರ್‌ನಿಂದ ಆದಿ ಕ್ರೈಸ್ತರ ಪರವಾದ ಪ್ರತಿವಾದವನ್ನು ಉದಾಹರಿಸುತ್ತಾ, ರಾಬರ್ಟ್‌ ಎ. ಗ್ರಾಂಟ್‌ ತನ್ನ ಪುಸ್ತಕವಾದ ಅರ್ಲಿ ಕ್ರಿಶ್ಚಿಆ್ಯನಿಟಿ ಆ್ಯಂಡ್‌ ಸೊಸೈಟಿ ಯಲ್ಲಿ ಬರೆದದ್ದು: “ಒಂದುವೇಳೆ ಕ್ರೈಸ್ತರು ಕ್ರಾಂತಿಕಾರರಾಗಿದ್ದರೆ, ತಮ್ಮ ಗುರಿಯನ್ನು ಮುಟ್ಟುವುದಕ್ಕಾಗಿ ಅವರು ಮರೆಯಲ್ಲಿ ಉಳಿಯುತ್ತಿದ್ದರು. . . . ಶಾಂತಿ ಮತ್ತು ಸುವ್ಯವಸ್ಥೆಯ ಹೇತುವಿನಲ್ಲಿ ಅವರು ಸಾಮ್ರಾಟನ ಅತ್ಯುತ್ತಮ ಸಹಾಯಕರು.” ತದ್ರೀತಿ ಯೆಹೋವನ ಸಾಕ್ಷಿಗಳು ಇಂದು ಶಾಂತಿಯನ್ನು ಪ್ರೀತಿಸುವ ಮತ್ತು ನಿಯಮ ಪಾಲಕ ನಾಗರಿಕರಾಗಿ ಲೋಕದಲ್ಲೆಲ್ಲೂ ಪ್ರಖ್ಯಾತರಾಗಿದ್ದಾರೆ. ಯಾವ ವಿಧದ ಸರಕಾರಗಳೇ ಆಗಿರಲಿ, ಯೆಹೋವನ ಸಾಕ್ಷಿಗಳಿಂದ ತಮಗೆ ಯಾವ ಭಯವೂ ಇಲ್ಲವೆಂದು ಅವರಿಗೆ ತಿಳಿದದೆ.

8 ಉತ್ತರ ಅಮೆರಿಕದ ಒಬ್ಬ ಸಂಪಾದಕನು ಬರೆದದ್ದು: “ಯೆಹೋವನ ಸಾಕ್ಷಿಗಳು ಯಾವುದೇ ರಾಜಕೀಯ ಆಳಿಕೆಗೆ ಯಾವುದೇ ರೀತಿಯಲ್ಲಿ ಬೆದರಿಕೆಯಾಗಿದ್ದಾರೆಂದು ನಂಬುವುದಕ್ಕೆ ಅಂಧಾಭಿಮಾನ ಮತ್ತು ಮತಿಭ್ರಂಶ ಕಲ್ಪನೆಯು ಬೇಕು; ಒಂದು ಧಾರ್ಮಿಕ ಸಂಸ್ಥೆಯು ಇರಬಲ್ಲಷ್ಟು ಕ್ರಾಂತಿಕಾರವಲ್ಲದ ಮತ್ತು ಶಾಂತಿಪ್ರಿಯವಾದ ಜನರು ಅವರು.” ಜಹಾನ್‌ಪಯರ್‌ ಕಟ್‌ಲಾನ್‌ ತನ್ನ ಪುಸ್ತಕವಾದ ಲೊಬ್ಸೆಕ್ಷಾನ್‌ ಡಾ ಕಾನ್ಸ್‌ಯಾನ್ಸ್‌ (ಆತ್ಮಸಾಕ್ಷಿಗೆ ವಿರುದ್ಧವೆಂದು ಪ್ರತಿಭಟನೆ) ಯಲ್ಲಿ ಬರೆದದ್ದು: “ಸಾಕ್ಷಿಗಳು ಅಧಿಕಾರಿಗಳಿಗೆ ಸಂಪೂರ್ಣವಾಗಿ ಅಧೀನರಾಗಿದ್ದಾರೆ ಮತ್ತು ಸಾಮಾನ್ಯವಾಗಿ ನಿಯಮಗಳಿಗೆ ವಿಧೇಯರು; ಅವರು ತಮ್ಮ ತೆರಿಗೆಗಳನ್ನು ಸಲ್ಲಿಸುತ್ತಾರೆ ಮತ್ತು ಸರಕಾರಗಳನ್ನು ಸಂದೇಹಿಸಲು, ಬದಲಾಯಿಸಲು ಮತ್ತು ನಾಶಮಾಡಲು ಹುಡುಕುವುದಿಲ್ಲ, ಯಾಕಂದರೆ ಅವರು ಈ ಲೋಕದ ಕಾರ್ಯಾಧಿಗಳೊಂದಿಗೆ ತಮ್ಮನ್ನು ಒಳಗೂಡಿಸುವುದಿಲ್ಲ.” ಕಟ್‌ಲಾನ್‌ ಕೂಡಿಸುತ್ತಾ ಹೇಳುವುದೇನಂದರೆ ದೇವರಿಗೆ ಅವರು ಪೂರ್ಣವಾಗಿ ಸಮರ್ಪಿಸಿದಂಥ ಅವರ ಜೀವಗಳನ್ನು ದೇಶವು ತನ್ನದೆಂದು ಹೇಳುವಾಗ ಮಾತ್ರವೇ, ಯೆಹೋವನ ಸಾಕ್ಷಿಗಳು ವಿಧೇಯರಾಗಲು ನಿರಾಕರಿಸುತ್ತಾರೆ. ಇದರಲ್ಲಿ ಅವರು ಆದಿ ಕ್ರೈಸ್ತರನ್ನು ನಿಕಟವಾಗಿ ಹೋಲುತ್ತಾರೆ.—ಮಾರ್ಕ 12:17; ಅ. ಕೃತ್ಯಗಳು 5:29.

ಆಳುವ ವರ್ಗಗಳಿಂದ ತಪ್ಪಾಗಿ ತಿಳಿಯಲ್ಪಟ್ಟದ್ದು

9. ಲೋಕದಿಂದ ಪ್ರತ್ಯೇಕತೆಯ ಸಂಬಂಧದಲ್ಲಿ, ಆದಿ ಕ್ರೈಸ್ತರ ಮತ್ತು ಅಧುನಿಕ ಕ್ಯಾತೊಲಿಕರ ನಡುವೆ ಎದ್ದುಕಾಣುವ ಒಂದು ವ್ಯತ್ಯಾಸ ಯಾವುದು?

9 ಹೆಚ್ಚಿನ ರೋಮನ್‌ ಸಾಮ್ರಾಟರು ಆದಿ ಕ್ರೈಸ್ತರನ್ನು ತಪ್ಪಾಗಿ ತಿಳಿದರು ಮತ್ತು ಅವರನ್ನು ಹಿಂಸಿಸಿದರು. ಏಕೆಂದು ತೋರಿಸುತ್ತಾ, ಸಾ.ಶ. ಎರಡನೆಯ ಶತಕದ ಕಾಲದ್ದೆಂದು ಕೆಲವರಿಂದ ನೆನಸಲ್ಪಡುವ, ದ ಎಪಿಸ್ಟಲ್‌ ಟು ಡಿಯೊಗ್ನೆಟಸ್‌ ಘೋಷಿಸುವುದು: “ಕ್ರೈಸ್ತರು ಲೋಕದಲ್ಲಿ ನಿವಾಸಿಸುತ್ತಾರೆ, ಆದರೆ ಲೋಕದೊಂದಿಗೆ ಒಳಗೂಡಿರುವುದಿಲ್ಲ.” ಇನ್ನೊಂದು ಕಡೆ, ದ್ವಿತೀಯ ವ್ಯಾಟಿಕನ್‌ ಕೌನ್ಸಿಲ್‌, ಅದರ ಮತತತ್ವ ಸಿದ್ಧಾಂತ ವ್ಯವಸ್ಥೆಯಲ್ಲಿ ಹೇಳಿದ್ದೇನಂದರೆ ಕ್ಯಾತೊಲಿಕರು “ಐಹಿಕ ಕಾರ್ಯಾಧಿಗಳಲ್ಲಿ ಭಾಗವಹಿಸುವ ಮೂಲಕ ದೇವರ ರಾಜ್ಯವನ್ನು ಹುಡುಕಬೇಕು” ಮತ್ತು “ಒಳಗಿಂದಲೇ ಲೋಕದ ಪವಿತ್ರೀಕರಣಕ್ಕಾಗಿ ಕಾರ್ಯನಡಿಸಬೇಕು.”

10. (ಎ) ಆಳುವ ವರ್ಗಗಳಿಂದ ಆದಿ ಕ್ರೈಸ್ತರು ಹೇಗೆ ವೀಕ್ಷಿಸಲ್ಪಟ್ಟಿದ್ದರು? (ಬಿ) ಯೆಹೋವನ ಸಾಕ್ಷಿಗಳು ಹೆಚ್ಚಾಗಿ ಹೇಗೆ ವೀಕ್ಷಿಸಲ್ಪಡುತ್ತಾರೆ, ಮತ್ತು ಅವರ ಪ್ರತಿಕ್ರಿಯೆ ಏನು?

10 ಚರಿತ್ರೆಗಾರ ಇ.ಜಿ. ಹಾರ್ಡಿ ಹೇಳುವುದೇನಂದರೆ ರೋಮನ್‌ ಸಾಮ್ರಾಟರು ಆದಿ ಕ್ರೈಸ್ತರನ್ನು “ಕೊಂಚ ಮಟ್ಟಿಗೆ ತಿರಸ್ಕಾರಾರ್ಹವಾದ ಅತ್ಯುತ್ಸಾಹಿ” ಗಳಾಗಿ ಪರಿಗಣಿಸಿದ್ದರು. “ಸುಸಂಸ್ಕೃತ ಗ್ರೀಕ್‌ ಮತ್ತು ರೋಮನ್‌ ಅಧಿಕಾರಿಗಳು [ಕ್ರೈಸ್ತರನ್ನು] ಒಂದು ಅತಿ ವಿಚಿತ್ರ ಪ್ರಾಚ್ಯ ಪಂಥವಾಗಿ ಪರಿಗಣಿಸಿ ತಿರಸ್ಕಾರದಿಂದ ನೋಡುತ್ತಿದ್ದರು” ಎಂದು ಫ್ರೆಂಚ್‌ ಚರಿತ್ರೆಗಾರ ಏಟ್ಯನ್‌ ಟ್ರಾಕ್ಮ ಮಾತಾಡುತ್ತಾನೆ. ಬಿತಿನ್ಯದ ರೋಮನ್‌ ಗವರ್ನರನಾದ ಪಿನ್ಲಿ ದ ಯಂಗರ್‌ ಮತ್ತು ಸಾಮ್ರಾಟ ಟ್ರೋಜನ್‌ ನಡುವಣ ಪತ್ರವ್ಯವಹಾರವು ತೋರಿಸುವುದೇನಂದರೆ ಆಡಳಿತ ವರ್ಗಗಳು ಸಾಮಾನ್ಯವಾಗಿ ಕ್ರೈಸ್ತತ್ವದ ನಿಜ ಸ್ವರೂಪದ ವಿಷಯದಲ್ಲಿ ಅಜ್ಞಾನಿಗಳಾಗಿದ್ದರು. ತದ್ರೀತಿಯಲ್ಲಿ ಇಂದು, ಯೆಹೋವನ ಸಾಕ್ಷಿಗಳು ಲೋಕದ ಆಳುವ ವರ್ಗಗಳಿಂದ ಹೆಚ್ಚಾಗಿ ತಪ್ಪಾಗಿ ತಿಳಿಯಲ್ಪಡುತ್ತಾರೆ ಮತ್ತು ತುಚ್ಛವಾಗಿ ಸಹ ನೋಡಲ್ಪಡುತ್ತಾರೆ. ಆದರೂ ಇದು, ಸಾಕ್ಷಿಗಳನ್ನು ಆಶ್ಚರ್ಯಗೊಳಿಸುವುದೂ ಇಲ್ಲ, ಗಾಬರಿಗೊಳಿಸುವುದೂ ಇಲ್ಲ.—ಅ. ಕೃತ್ಯಗಳು 4:13; 1 ಪೇತ್ರ 4:12, 13.

“ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡ” ಲ್ಪಟ್ಟಿದೆ

11. (ಎ) ಆದಿ ಕ್ರೈಸ್ತರ ವಿಷಯದಲ್ಲಿ ಏನು ಹೇಳಲ್ಪಟ್ಟಿದ್ದವು, ಮತ್ತು ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಏನು ಹೇಳಲ್ಪಡುತ್ತದೆ? (ಬಿ) ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ಯಾಕೆ ಭಾಗವಹಿಸುವುದಿಲ್ಲ?

11 ಆದಿ ಕ್ರೈಸ್ತರ ಕುರಿತಾಗಿ ಹೇಳಲ್ಪಟ್ಟದ್ದು: “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:22) ಸಾ.ಶ. ಎರಡನೆಯ ಶತಮಾನದಲ್ಲಿ ವಿಧರ್ಮಿ ಸೆಲ್ಸಸ್‌ ವಾದಿಸಿದ್ದೇನಂದರೆ ಕ್ರೈಸ್ತತ್ವವು ಮಾನವ ಸಮಾಜದ ಕಸಗಳಿಗೆ ಮಾತ್ರ ಅಪ್ಪೀಲಾಗುತ್ತದೆ. ತದ್ರೀತಿಯಲ್ಲಿ ಯೆಹೋವನ ಸಾಕ್ಷಿಗಳ ಕುರಿತು ಹೇಳಲ್ಪಟ್ಟಿರುವುದೇನಂದರೆ “ಮುಖ್ಯವಾಗಿ ಅವರು ನಮ್ಮ ಸಮಾಜದ ಬಡವರೊಳಗಿಂದ ಬಂದವರಾಗಿದ್ದಾರೆ.” ಚರ್ಚ್‌ ಚರಿತ್ರೆಗಾರ ಆಗಸಸ್ಟ್‌ ನಿಯಂಡರ್‌ ವರದಿಸಿದ್ದೇನಂದರೆ “ಕ್ರೈಸ್ತರು ಲೋಕಕ್ಕೆ ಸತ್ತವರಾಗಿರುವ ಮನುಷ್ಯರಾಗಿ, ಜೀವಿತದ ಸಕಲ ಕಾರ್ಯಗಳಿಗೆ ನಿಷ್ಪ್ರಯೋಜಕರಾಗಿ ಪ್ರತಿನಿಧಿಸಲ್ಪಟ್ಟಿದ್ದರು; . . . ಎಲ್ಲರೂ ಅವರಂತೆಯೇ ಇರುವುದಾದರೆ ಜೀವಿತ ವ್ಯಾಪಾರದ ಗತಿಯೇನು? ಎಂದು ಕೇಳಲಾಗಿತ್ತು.” ಯೆಹೋವನ ಸಾಕ್ಷಿಗಳು ರಾಜಕೀಯದಲ್ಲಿ ಭಾಗವಹಿಸದೆ ಇರುವುದರಿಂದ, ಅವರೂ ಮಾನವ ಸಮಾಜದಲ್ಲಿ ಕೆಲಸಕ್ಕೆ ಬಾರದ ಜನರಾಗಿ ಆಗಿಂದಾಗ್ಗೆ ಆರೋಪಿಸಲ್ಪಡುತ್ತಾರೆ. ಆದರೆ ಅವರು ರಾಜಕೀಯದಲ್ಲಿ ಕ್ರಿಯಾಶೀಲರಾಗಿರುವುದೂ ಮತ್ತು ಅದೇ ಸಮಯದಲ್ಲಿ ಮಾನವ ಕುಲದ ಏಕಮಾತ್ರ ನಿರೀಕ್ಷೆಯಾದ ದೇವರ ರಾಜ್ಯದ ಪಕ್ಷವಾದಿಗಳು ಆಗಿರುವುದೂ ಹೇಗೆ ಸಾಧ್ಯ? ಯೆಹೋವನ ಸಾಕ್ಷಿಗಳು ಅಪೊಸ್ತಲ ಪೌಲನ ಮಾತುಗಳನ್ನು ಹೃದಯಕ್ಕೆ ತಕ್ಕೊಳ್ಳುತ್ತಾರೆ. “ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕನಂತೆ ಶ್ರಮೆಯನ್ನನುಭವಿಸು. ಸೈನಿಕ ಸೇವೆ ನಡಿಸುವವನು ಐಹಿಕ ಬೆನ್ನಟ್ಟುವಿಕೆಗಳಲ್ಲಿ ಸಿಕ್ಕಿಕೊಳ್ಳುವದಿಲ್ಲ ಯಾಕಂದರೆ ಅವನನ್ನು ಸೇರಿಸಿಕೊಂಡವನನ್ನು ತೃಪ್ತಿಗೊಳಿಸುವುದೇ ಅವನ ಗುರಿಯಾಗಿದೆ.”—2 ತಿಮೊಥೆಯ 2:3, 4, ರಿವೈಸ್ಡ್‌ ಸ್ಟಾಡರ್ಡ್‌ ವರ್ಷನ್‌, ಆ್ಯನ್‌ ಎಕ್ಯುಮಿನಿಕಲ್‌ ಎಡಿಷನ್‌.

12. ಪ್ರತ್ಯೇಕತೆಯ ಯಾವ ಮಹತ್ವದ ವಿಭಾಗದಲ್ಲಿ ಯೆಹೋವನ ಸಾಕ್ಷಿಗಳು ಆದಿ ಕ್ರೈಸ್ತರನ್ನು ಹೋಲುತ್ತಾರೆ?

12 ತನ್ನ ಪುಸ್ತಕವಾದ ಎ ಹಿಸ್ಟರಿ ಆಫ್‌ ಕ್ರಿಶ್ಚಿಆ್ಯನಿಟಿ ಯಲ್ಲಿ ಪ್ರೊಫೆಸರ್‌ ಕೆ. ಎಸ್‌. ಲಾಟೊರೆಟ್‌ ಬರೆದದ್ದು: “ಗ್ರೀಕೊ-ರೋಮನ್‌ ಜಗತ್ತಿನೊಂದಿಗೆ ಆದಿ ಕ್ರೈಸ್ತರು ಭಿನ್ನತೆಯಲ್ಲಿದ್ದ ಪ್ರಶ್ನೆಗಳಲ್ಲೊಂದು ಯುದ್ಧದಲ್ಲಿ ಭಾವಹಿಸುವಿಕೆಯಾಗಿತ್ತು. ಮೊದಲ ಮೂರು ಶತಮಾನಗಳಲ್ಲಿ ನಮ್ಮ ಕಾಲಕ್ಕೆ ಪಾರಾಗಿ ಉಳಿದ ಯಾವ ಕ್ರೈಸ್ತ ಬರಹವಾದರೂ ಯುದ್ಧದಲ್ಲಿ ಕ್ರೈಸ್ತ ಭಾಗವಹಿಸುವಿಕೆಯನ್ನು ಮನ್ನಿಸಿರಲಿಲ್ಲ.” ಎಡರ್ಡ್ವ್‌ ಗಿಬ್ಬನ್ಸ್‌ ನ ಕೃತಿಯಾದ ದ ಹಿಸ್ಟರಿ ಆಫ್‌ ದ ಡಿಕ್ಲೈನ್‌ ಆ್ಯಂಡ್‌ ಫಾಲ್‌ ಆಫ್‌ ದ ರೋಮನ್‌ ಎಂಪಯ್‌ರ್‌ ಹೇಳುವುದು: “ಒಂದು ಹೆಚ್ಚು ಪವಿತ್ರ ಕೆಲಸವನ್ನು ತ್ಯಜಿಸದ ಹೊರತು ಕ್ರೈಸ್ತರಿಗೆ ಸೈನಿಕರ, ಮ್ಯಾಜಿಸ್ಟ್ರೇಟುಗಳ, ಅಥವಾ ರಾಜರುಗಳ ಪದವಿಯನ್ನು ಸ್ವೀಕರಿಸುವುದು ಅಸಾಧ್ಯವಾಗಿತ್ತು.” ತದ್ರೀತಿಯಲ್ಲಿ ಯೆಹೋವನ ಸಾಕ್ಷಿಗಳು ಒಂದು ಕಟ್ಟುನಿಟ್ಟಿನ ತಾಟಸ್ಥ್ಯದ ನಿಲುವನ್ನು ತಕ್ಕೊಳ್ಳುತ್ತಾರೆ, ಮತ್ತು ಯೆಶಾಯ 2:2-4 ಮತ್ತು ಮತ್ತಾಯ 26:52 ರಲ್ಲಿ ತಿಳಿಸಲ್ಪಟ್ಟ ಬೈಬಲ್‌ ತತ್ವಗಳನ್ನು ಅನುಸರಿಸುತ್ತಾರೆ.

13. ಯಾವ ಆರೋಪವು ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಹಾಕಲ್ಪಟ್ಟಿದೆ, ಆದರೆ ನಿಜತ್ವಗಳು ಏನನ್ನು ತೋರಿಸುತ್ತವೆ?

13 ಯೆಹೋವನ ಸಾಕ್ಷಿಗಳು ಕುಟುಂಬಗಳನ್ನು ಛಿದ್ರಗೊಳಿಸುತ್ತಾರೆ ಎಂಬ ಆರೋಪವು ಅವರ ಶತ್ರುಗಳಿಂದ ಹೊರಿಸಲ್ಪಡುತ್ತದೆ. ಒಂದು ಅಥವಾ ಹೆಚ್ಚು ಸದಸ್ಯರು ಯೆಹೋವನ ಸಾಕ್ಷಿಗಳಾಗಿ ಪರಿಣಮಿಸಿದಾಗ ಕುಟುಂಬಗಳು ವಿಭಜಿತಗೊಂಡ ಸನ್ನಿವೇಶಗಳು ಇವೆ ನಿಜ. ಅದು ಸಂಭವಿಸುವುದೆಂದು ಯೇಸು ಮುಂತಿಳಿಸಿದ್ದನು. (ಲೂಕ 12:51-53) ಆದರೂ, ಈ ಕಾರಣದಿಂದಾಗಿ ಭಗ್ನಗೊಳ್ಳುವ ವಿವಾಹಗಳಾದರೋ ಅಪವಾದಾತ್ಮಕ. ಉದಾಹರಣೆಗೆ, ಫ್ರಾನ್ಸಿನಲ್ಲಿ ಯೆಹೋವನ ಸಾಕ್ಷಿಗಳ ನಡುವೆ 3 ವಿವಾಹ ದಂಪತಿಗಳಲ್ಲಿ 1, ಸಾಕ್ಷಿಯಲ್ಲದ ವಿವಾಹ ಸಂಗಾತಿಯಿಂದ ಕೂಡಿರುತ್ತದೆ. ಆದರೂ ಈ ಮಿಶ್ರ ವಿವಾಹಗಳಲ್ಲಿ ವಿವಾಹ ವಿಚ್ಛೆ ದವು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿರುವುದಿಲ್ಲ. ಏಕೆ? ನಂಬದವರನ್ನು ವಿವಾಹವಾದ ಕ್ರೈಸ್ತರಿಗೆ ಅಪೊಸ್ತಲರಾದ ಪೌಲ ಮತ್ತು ಪೇತ್ರರು ವಿವೇಕವುಳ್ಳ, ಪ್ರೇರಿತ ಬುದ್ಧಿವಾದವನ್ನು ನೀಡಿದ್ದಾರೆ, ಮತ್ತು ಯೆಹೋವನ ಸಾಕ್ಷಿಗಳು ಅವರ ಮಾತುಗಳನ್ನು ಪಾಲಿಸಲು ಪ್ರಯತ್ನಪಡುತ್ತಾರೆ. (1 ಕೊರಿಂಥ 7:12-16; 1 ಪೇತ್ರ 3:1-4) ಮಿಶ್ರ ವಿವಾಹವೊಂದು ಒಡೆದರೆ, ಬಹುಮಟ್ಟಿಗೆ ಯಾವಾಗಲೂ ಮೊದಲಹೆಜ್ಜೆಯು ಸಾಕ್ಷಿಯಲ್ಲದ ಸಂಗಾತಿಯಿಂದ ಬರುತ್ತದೆ. ಇನ್ನೊಂದು ಕಡೆ, ಅನೇಕ ಸಾವಿರಾರು ವಿವಾಹಗಳು ರಕ್ಷಿಸಲ್ಪಟ್ಟಿವೆ ಯಾಕಂದರೆ ವಿವಾಹ ಸಂಗಾತಿಗಳು ಯೆಹೋವನ ಸಾಕ್ಷಿಗಳಾದರು ಮತ್ತು ತಮ್ಮ ಜೀವಿತಗಳಲ್ಲಿ ಬೈಬಲ್‌ ತತ್ವಗಳನ್ನು ಅನ್ವಯಿಸಿಕೊಂಡರು.

ಕ್ರೈಸ್ತರು, ತ್ರಯೈಕ್ಯವಾದಿಗಳಲ್ಲ

14. ಆದಿ ಕ್ರೈಸ್ತರ ವಿರುದ್ಧವಾಗಿ ಯಾವ ಆರೋಪವು ತರಲ್ಪಟ್ಟಿತ್ತು, ಮತ್ತು ಇದು ಏಕೆ ಹಾಸ್ಯವ್ಯಂಗವಾಗಿದೆ?

14 ಆದಿ ಕ್ರೈಸ್ತರು ನಾಸ್ತಿಕರೆಂಬ ಅಪವಾದಗಳಲ್ಲೊಂದನ್ನು ರೋಮನ್‌ ಸಾಮ್ರಾಜ್ಯದಲ್ಲಿ ಅವರ ವಿರುದ್ಧವಾಗಿ ತರಲ್ಪಟ್ಟದ್ದು ಹಾಸ್ಯವ್ಯಂಗವೇ ಸರಿ. ಡಾ. ಆಗಸಸ್ಟ್‌ ನಿಯಂಡರ್‌ ಬರೆಯುವುದು: “ಜನರ ನಡುವೆ ಕ್ರೈಸ್ತರಿಗೆ ನಿರ್ದೇಶಿಸಲ್ಪಟ್ಟಿದ್ದ ಸರ್ವಸಾಮಾನ್ಯ ಹೆಸರು . . . ದೇವರುಗಳನ್ನು ಅಲ್ಲಗಳೆಯುವವರು, ನಾಸ್ತಿಕರು, ಎಂದಾಗಿತ್ತು.” ಅನೇಕಾನೇಕ ದೇವರುಗಳನ್ನಲ್ಲ, ಜೀವಸ್ವರೂಪನಾದ ನಿರ್ಮಾಣಿಕನನ್ನೇ ಆರಾಧಿಸಿದ ಕ್ರೈಸ್ತರು, “ದೇವತೆಗಳಲ್ಲ, ಮನುಷ್ಯರು ಕೆತ್ತಿದ ಕಲ್ಲುಮರಗಳ ಬೊಂಬೆಗಳ” ನ್ನು ಆರಾಧಿಸಿದ ವಿಧರ್ಮಿಗಳಿಂದ ನಾಸ್ತಿಕರೆಂದು ಹೆಸರಿಡಲ್ಪಡುವುದು ಅದೆಷ್ಟು ವಿಚಿತ್ರ.—ಯೆಶಾಯ 37:19.

15, 16. (ಎ) ಕೆಲವು ಧರ್ಮಗಳವರು ಯೆಹೋವನ ಸಾಕ್ಷಿಗಳ ಕುರಿತು ಏನು ಹೇಳಿದ್ದಾರೆ, ಆದರೆ ಯಾವ ಪ್ರಶ್ನೆಯನ್ನು ಇದು ಎಬ್ಬಿಸುತ್ತದೆ? (ಬಿ) ಯೆಹೋವನ ಸಾಕ್ಷಿಗಳು ನಿಜವಾಗಿಯೂ ಕ್ರೈಸ್ತರೆಂದು ಯಾವುದು ತೋರಿಸುತ್ತದೆ?

15 ಇಂದು ಕ್ರೈಸ್ತಪ್ರಪಂಚದಲ್ಲಿನ ಕೆಲವು ಅಧಿಕಾರಿಗಳು ಯೆಹೋವನ ಸಾಕ್ಷಿಗಳನ್ನು ಕ್ರೈಸ್ತರಾಗಿ ಅಲ್ಲಗಳೆಯುವ ನಿಜತ್ವವು ಸಮಾನ ರೀತಿಯ ಹಾಸ್ಯವ್ಯಂಗವಾಗಿದೆ. ಏಕೆ? ಏಕೆಂದರೆ ಸಾಕ್ಷಿಗಳು ತ್ರಯೈಕ್ಯವನ್ನು ತಿರಸ್ಕರಿಸುತ್ತಾರೆ. ಕ್ರೈಸ್ತಪ್ರಪಂಚದ ವಕ್ರವಾದ ಅರ್ಥವಿವರಕ್ಕನುಸಾರ, “ಯಾರು ಕ್ರಿಸ್ತನನ್ನು ದೇವರಾಗಿ ಸ್ವೀಕರಿಸುತ್ತಾರೋ ಅವರು ಕ್ರೈಸ್ತರು.” ಇದಕ್ಕೆ ವೈದೃಶ್ಯವಾಗಿ, ಒಂದು ಆಧುನಿಕ ಶಬ್ದಕೋಶವು “ಕ್ರೈಸ್ತ” ಎಂಬ ನಾಮಪದದ ಅರ್ಥವನ್ನು “ಯೇಸು ಕ್ರಿಸ್ತನಲ್ಲಿ ನಂಬಿಕೆ ಇಡುವ ವ್ಯಕ್ತಿ ಮತ್ತು ಆತನ ಬೋಧನೆಗಳನ್ನು ಅನುಸರಿಸುವವನು” ಎಂದಾಗಿಯೂ ಮತ್ತು “ಕ್ರೈಸ್ತತ್ವ” ವು “ಯೇಸು ಕ್ರಿಸ್ತನ ಬೋಧನೆಗಳಲ್ಲಿ ಆಧಾರಿತವಾದ ಮತ್ತು ಆತನು ದೇವರ ಮಗನಾಗಿದ್ದನೆಂದು ನಂಬುವ ಒಂದು ಧರ್ಮ” ಎಂದಾಗಿಯೂ ಕೊಟ್ಟಿದೆ. ಈ ಅರ್ಥವಿವರಣೆಯು ಯಾವ ಗುಂಪಿಗೆ ಹೆಚ್ಚು ನಿಕಟವಾಗಿ ಒಪ್ಪುತ್ತದೆ?

16 ಯೇಸು ಯಾರೆಂಬದಕ್ಕೆ ಆತನ ಸ್ವಂತ ಸಾಕ್ಷ್ಯವನ್ನು ಯೆಹೋವನ ಸಾಕ್ಷಿಗಳು ಸ್ವೀಕರಿಸುತ್ತಾರೆ. ಅವನು ಹೇಳಿದ್ದು: “ನಾನು ದೇವರ ಮಗನಾಗಿದ್ದೇನೆ,” “ಮಗನಾದ ದೇವರು” ಅಲ್ಲ. (ಯೋಹಾನ 10:36; ಹೋಲಿಸಿರಿ ಯೋಹಾನ 20:31.) ಕ್ರಿಸ್ತನ ಕುರಿತಾದ ಅಪೊಸ್ತಲ ಪೌಲನ ಪ್ರೇರಿತ ಹೇಳಿಕೆಯನ್ನು ಅವರು ಸ್ವೀಕರಿಸುತ್ತಾರೆ: “ಆತನು ದೇವರ ಸ್ವರೂಪನಾಗಿದ್ದರೂ ದೇವರೊಂದಿಗೆ ಸರಿಸಮಾನತೆಯನ್ನು ಬಿಗಿಹಿಡಿಯುವ ವಿಷಯವಾಗಿ ನೋಡಲಿಲ್ಲ.” * (ಫಿಲಿಪ್ಪಿ 2:6, ದ ನ್ಯೂ ಜೆರೂಸಲೇಮ್‌ ಬೈಬಲ್‌) ದ ಪೇಗನಿಸಂ ಇನ್‌ ಅವರ್‌ ಕ್ರಿಶ್ಚಿಆ್ಯನಿಟಿ ಪುಸ್ತಕವು ಹೇಳುವುದು: “ಯೇಸು ಕ್ರಿಸ್ತನು ಎಂದೂ ಅಂಥ ಒಂದು ಅಸಾಧಾರಣ ವಿಷಯ (ಒಂದು ಸರಿಸಮಾನ ತ್ರಯೈಕ್ಯ) ವನ್ನು ತಿಳಿಸಿರಲಿಲ್ಲ, ಮತ್ತು ಹೊಸ ಒಡಂಬಡಿಕೆಯಲ್ಲಿ ಎಲ್ಲಿಯೂ ‘ತ್ರಯೈಕ್ಯ’ ಶಬ್ದವು ಬರುವುದಿಲ್ಲ. ನಮ್ಮ ಕರ್ತನ ಮರಣದ ಮುನ್ನೂರು ವರ್ಷಗಳ ಅನಂತರ ಮಾತ್ರವೇ ಈ ವಿಚಾರವು ಚರ್ಚ್‌ನಿಂದ ಸ್ವೀಕರಿಸಲ್ಪಟ್ಟಿತು; ಮತ್ತು ಈ ಕಲ್ಪನೆಯ ಮೂಲವು ಪೂರಾ ವಿಧರ್ಮದ್ದಾಗಿದೆ.” ಕ್ರಿಸ್ತನ ಕುರಿತಾದ ಬೈಬಲ್‌ ಬೋಧನೆಯನ್ನು ಯೆಹೋವನ ಸಾಕ್ಷಿಗಳು ಸ್ವೀಕರಿಸುತ್ತಾರೆ. ಅವರು ಕ್ರೈಸ್ತರು, ತ್ರಯೈಕ್ಯವಾದಿಗಳಲ್ಲ.

ಸಾರ್ವತ್ರಿಕತೆ ಇಲ್ಲ

17. ಯೆಹೋವನ ಸಾಕ್ಷಿಗಳು ಸಾರ್ವತ್ರಿಕ, ಅಥವಾ ಮಧ್ಯ ನಂಬಿಕೆಯ ಚಟುವಟಿಕೆಯಲ್ಲಿ ಯಾಕೆ ಸಹಕರಿಸುವುದಿಲ್ಲ?

17 ಯೆಹೋವನ ಸಾಕ್ಷಿಗಳ ವಿರುದ್ಧವಾಗಿ ಮಾಡಲ್ಪಟ್ಟ ಎರಡು ಬೇರೆ ದೂರುಗಳು ಯಾವುವೆಂದರೆ ಅವರು ಸಾರ್ವತ್ರಿಕ ಚಟುವಟಿಕೆಗಳಲ್ಲಿ ಪಾಲಿಗರಾಗಲು ನಿರಾಕರಿಸುತ್ತಾರೆ ಮತ್ತು ಯಾವುದು “ಆಕ್ರಮಣಕಾರಿ ಮತಾಂತರಿಸುವಿಕೆ” ಎಂದು ಹೆಸರಿಸಲ್ಪಟ್ಟಿದೆಯೋ ಅದರಲ್ಲಿ ಭಾಗವಹಿಸುತ್ತಾರೆ. ಈ ಎರಡೂ ನಿಂದೆಗಳು ಆದಿ ಕ್ರೈಸ್ತರ ಮೇಲೂ ಹೊರಿಸಲ್ಪಟ್ಟಿದ್ದವು. ಕ್ರೈಸ್ತಪ್ರಪಂಚವು ತನ್ನ ಕ್ಯಾತೊಲಿಕ್‌, ಆರ್ತೊಡಾಕ್ಸ್‌ ಅಂಗಗಳೊಂದಿಗೆ ನಿರ್ವಿವಾದವಾಗಿ, ಈ ಲೋಕದ ಒಂದು ಭಾಗವಾಗಿದೆ. ಯೆಹೋವನ ಸಾಕ್ಷಿಗಳು, ಯೇಸುವಿನಂತೆ, “ಲೋಕದ ಭಾಗವಾಗಿರದೆ” ಇದ್ದಾರೆ. (ಯೋಹಾನ 17:14, NW) ಅಕ್ರೈಸ್ತ ನಡವಳಿಕೆ ಮತ್ತು ನಂಬಿಕೆಗಳನ್ನು ಪ್ರವರ್ಧಿಸುವ ಧಾರ್ಮಿಕ ಸಂಸ್ಥೆಗಳೊಂದಿಗೆ, ಮಧ್ಯನಂಬಿಕೆಯ ಚಟುವಟಿಕೆಗಳ ಮೂಲಕ ಅವರು ತಮ್ಮನ್ನು ಹೇಗೆ ಒಟ್ಟುಗೂಡಿಸ್ಯಾರು?

18. (ಎ) ಅವರು ಮಾತ್ರವೇ ಸತ್ಯ ಧರ್ಮವನ್ನು ಆಚರಿಸುತ್ತಾರೆಂಬ ವಾದಕ್ಕಾಗಿ ಯೆಹೋವನ ಸಾಕ್ಷಿಗಳನ್ನು ಟೀಕಿಸ ಸಾಧ್ಯವಿಲ್ಲವೇಕೆ? (ಬಿ) ತಮ್ಮಲ್ಲಿ ನಿಜ ಧರ್ಮವಿದೆಯೆಂದು ನಂಬುವಾಗಲೂ, ರೋಮನ್‌ ಕ್ಯಾತೊಲಿಕರು ಏನನ್ನು ಪಡೆದಿರುವುದಿಲ್ಲ?

18 ಯೆಹೋವನ ಸಾಕ್ಷಿಗಳು, ಆದಿ ಕ್ರೈಸ್ತರಂತೆ, ತಾವು ಮಾತ್ರ ಸತ್ಯ ಧರ್ಮವನ್ನು ಆಚರಿಸುತ್ತಾರೆಂದು ನಂಬುವುದನ್ನು ನ್ಯಾಯಸಮ್ಮತವಾಗಿ ಯಾರು ಟೀಕಿಸಬಲ್ಲರು? ಕ್ಯಾತೊಲಿಕ್‌ ಚರ್ಚು ಕೂಡ, ಸಾರ್ವತ್ರಿಕ ಚಟುವಟಿಕೆಯೊಂದಿಗೆ ಸಹಕರಿಸುತ್ತದೆಂದು ಕಪಟತನದಿಂದ ವಾದಿಸಿದರೂ, ಘೋಷಿಸುವುದು: “ಕ್ಯಾತೊಲಿಕ್‌ ಮತ್ತು ಅಪೊಸ್ತಲಿಕ ಚರ್ಚಿನಲ್ಲಿ ಈ ಒಂದು ಸತ್ಯ ಧರ್ಮವು ಇರುತ್ತಾ ಮುಂದರಿಯುತ್ತಿದೆಂದು ನಾವು ನಂಬುತ್ತೇವೆ, ‘ಹೊರಟು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ’ ಎಂದು ಅಪೊಸ್ತಲರಿಗೆ ಹೇಳಿದಾಗ, ಅದನ್ನು ಎಲ್ಲಾ ಜನರೊಳಗೆ ಹಬ್ಬಿಸುವ ಕೆಲಸವನ್ನು ಕರ್ತನಾದ ಯೇಸುವು ಅದಕ್ಕೆ ವಹಿಸಿಕೊಟ್ಟಿದ್ದಾನೆ.” (ವ್ಯಾಟಿಕನ್‌ ಕೌನ್ಸಿಲ್‌ II, “ಧಾರ್ಮಿಕ ಸ್ವಾತಂತ್ರ್ಯದ ಮೇಲೆ ಘೋಷಣೆ”) ಆದರೂ, ಶಿಷ್ಯರನ್ನಾಗಿ ಮಾಡಲು ಹೋಗುವುದಕ್ಕಾಗಿ ಕ್ಯಾತೊಲಿಕರಲ್ಲಿ ಅವಿಶ್ರಾಂತ ಹುರುಪನ್ನು ತುಂಬಿಸಲು ಅಂಥ ನಂಬಿಕೆಯು ಸಾಕಾಗಿಲ್ಲ ಎಂಬದು ಸ್ಫುಟ.

19. (ಎ) ಏನು ಮಾಡಲು ಯೆಹೋವನ ಸಾಕ್ಷಿಗಳು ನಿರ್ಧಾರ ಮಾಡಿದ್ದಾರೆ, ಮತ್ತು ಯಾವ ಹೇತುವಿನೊಂದಿಗೆ? (ಬಿ) ಮುಂದಿನ ಲೇಖನದಲ್ಲಿ ಯಾವುದು ಪರೀಕ್ಷಿಸಲ್ಪಡುವುದು?

19 ಯೆಹೋವನ ಸಾಕ್ಷಿಗಳಲ್ಲಿ ಅಂಥ ಹುರುಪು ಇದೆ. ಅವರು ಹಾಗೆ ಮಾಡುವಂತೆ ದೇವರು ಎಷ್ಟರ ತನಕ ಬಯಸುತ್ತಾನೋ ಆ ತನಕ ಸಾಕ್ಷಿಕೊಡುತ್ತಾ ಮುಂದರಿಯಲು ಅವರು ನಿರ್ಧಾರ ಮಾಡಿದ್ದಾರೆ. (ಮತ್ತಾಯ 24:14) ಅವರ ಸಾಕ್ಷಿಕಾರ್ಯವು ಹುರುಪುಳ್ಳದ್ದು, ಆದರೆ ಆಕ್ರಮಣಕಾರಿಯಲ್ಲ. ಅದು ನೆರೆಯವನ ಪ್ರೀತಿಯಿಂದ ಪ್ರಚೋದಿಸಲ್ಪಟ್ಟಿದೆ, ಮಾನವ ಕುಲದೆಡೆಗೆ ದ್ವೇಷದಿಂದಲ್ಲ. ಮಾನವ ಕುಲದ ಸಾಧ್ಯವಾದಷ್ಟು ಹೆಚ್ಚು ಜನರು ರಕ್ಷಿಸಲ್ಪಡುವರೆಂದು ಅವರು ನಿರೀಕ್ಷಿಸುತ್ತಾರೆ. (1 ತಿಮೊಥೆಯ 4:16) ಆದಿ ಕ್ರೈಸ್ತರಂತೆ, “ಎಲ್ಲರ ಸಂಗಡ ಸಮಾಧಾನದಿಂದಿ” ರಲು ಅವರು ಪ್ರಯತ್ನಿಸುತ್ತಾರೆ. (ರೋಮಾಪುರ 12:18) ಇದನ್ನು ಅವರು ಹೇಗೆ ಮಾಡುತ್ತಾರೆಂಬದು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವುದು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 16 ತ್ರಯೈಕ್ಯ ತತ್ವದ ಸಂಬಂಧದಲ್ಲಿ ಈ ವಾಕ್ಯದ ಒಂದು ಚರ್ಚೆಗಾಗಿ, ದ ವಾಚ್‌ಟವರ್‌, ಜೂನ್‌ 15, 1971, ಪುಟಗಳು 355-6 ನೋಡಿರಿ.

ಪುನರ್ವಿಮರ್ಶೆಯ ತೆರದಲ್ಲಿ

▫ ಆದಿ ಕ್ರೈಸ್ತರನ್ನು ಪ್ರತ್ಯೇಕಿಸಿದ ಗುಣಲಕ್ಷಣ ಯಾವುದು, ಮತ್ತು ಯೆಹೋವನ ಸಾಕ್ಷಿಗಳು ಅವರನ್ನು ಹೇಗೆ ಹೋಲುತ್ತಾರೆ?

▫ ಯಾವ ವಿಷಯಗಳಲ್ಲಿ ತಾವು ಒಳ್ಳೇ ನಾಗರಿಕರೆಂದು ಯೆಹೋವನ ಸಾಕ್ಷಿಗಳು ತೋರಿಸುತ್ತಾರೆ?

▫ ಆಳುವ ವರ್ಗಗಳು ಆದಿ ಕ್ರೈಸ್ತರನ್ನು ಹೇಗೆ ವೀಕ್ಷಿಸಿದ್ದವು, ಮತ್ತು ಇಂದು ಅದು ಏನಾದರೂ ಬೇರೆಯಾಗಿದೆಯೇ?

▫ ಸತ್ಯವು ತಮ್ಮಲ್ಲಿದೆ ಎಂಬ ಮನವರಿಕೆಯು ಸಾಕ್ಷಿಗಳನ್ನು ಏನು ಮಾಡುವಂತೆ ಪ್ರೇರೇಪಿಸುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 23 ರಲ್ಲಿರುವ ಚಿತ್ರ]

ಅವರು ಹಾಗೆ ಮಾಡುವಂತೆ ದೇವರು ಎಷ್ಟರ ತನಕ ಬಯಸುತ್ತಾನೋ ಆ ತನಕ ಸಾಕ್ಷಿಕೊಡುತ್ತಾ ಮುಂದರಿಯಲು ಯೆಹೋವನ ಸಾಕ್ಷಿಗಳು ನಿರ್ಧಾರ ಮಾಡಿದ್ದಾರೆ

[ಪುಟ 28 ರಲ್ಲಿರುವ ಚಿತ್ರ]

ಪಿಲಾತನು ಅಂದದ್ದು: “ಇಗೋ, ಈ ಮನುಷ್ಯನು!”—ಲೋಕದ ಭಾಗವಾಗಿರದೆ ಇದ್ದಾತನು—ಯೋಹಾನ 19:5.

[ಕೃಪೆ]

“Ecce Homo” by A. Ciseri: Florence, Galleria d’Arte Moderna / Alinari/Art Resource, N.Y.