ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಬೇರ್ಷೆಬ ಒಂದು ಬಾವಿಯು ಜೀವದ ಅರ್ಥಲ್ಲಿದ್ದ ಸ್ಥಳ

ಬೇರ್ಷೆಬ ಒಂದು ಬಾವಿಯು ಜೀವದ ಅರ್ಥಲ್ಲಿದ್ದ ಸ್ಥಳ

ವಾಗ್ದಾನ ದೇಶದಿಂದ ದೃಶ್ಯಗಳು

ಬೇರ್ಷೆಬ ಒಂದು ಬಾವಿಯು ಜೀವದ ಅರ್ಥಲ್ಲಿದ್ದ ಸ್ಥಳ

 “ದಾನ್‌ ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗೆ.” ಬೈಬಲ್‌ ವಾಚಕರಿಗೆ ಇದು ಚಿರಪರಿಚಿತ ವಾಕ್ಯವಾಗಿದೆ. ಅದು ಉತ್ತರ ಗಡಿನಾಡಿನ ದಾನ್‌ನಿಂದ ದಕ್ಷಿಣದಲ್ಲಿ ಬೇರ್ಷೆಬದ ವರೆಗಿನ ಎಲ್ಲಾ ಇಸ್ರಾಯೇಲನ್ನು ವರ್ಣಿಸುತ್ತದೆ. ಸೊಲೊಮೋನನ ಆಳಿಕೆಯ ಶಾಂತಿಯನ್ನು ಹೀಗೆಂದು ಚಿತ್ರಿಸಲಾಗಿತ್ತು: “ಸೊಲೊಮೋನನ ಆಳಿಕೆಯಲ್ಲೆಲ್ಲಾ ದಾನ್‌ಪಟ್ಟಣ ಮೊದಲುಗೊಂಡು ಬೇರ್ಷೆಬದ ವರೆಗಿರುವ ಸಮಸ್ತ ಇಸ್ರಾಯೇಲ್ಯರೂ ಯೆಹೂದ್ಯರೂ ತಮ್ಮ ತಮ್ಮ ದ್ರಾಕ್ಷಾಲತೆ, ಅಂಜೂರಗಿಡ ಇವುಗಳ ನೆರಳಿನಲ್ಲಿ ವಾಸಿಸುತ್ತಾ ಸುರಕ್ಷಿತರಾಗಿದ್ದರು.”—1 ಅರಸು 4:25; ನ್ಯಾಯಸ್ಥಾಪಕರು 20:1.

ದಾನ್‌ ಮತ್ತು ಬೇರ್ಷೆಬಗಳ ನಡುವಣ ವ್ಯತ್ಯಾಸಗಳಾದರೋ, ಒಂದರಿಂದೊಂದಕ್ಕಿರುವ ದೂರಕ್ಕಿಂತ ಹೆಚ್ಚನ್ನು ಒಳಗೂಡಿದ್ದವು. ದೃಷ್ಟಾಂತಕ್ಕಾಗಿ, ದಾನ್‌ ಹೇರಳ ಮಳೆಯಲ್ಲಿ ಆನಂದಿಸುತ್ತಿತ್ತು; ಬಲಗಡೆ ಇರುವ ಚಿತ್ರದಲ್ಲಿ ಕಾಣುವ ಪ್ರಕಾರ, ನೆಲದಿಂದ ಹರಿದುಬಂದ ನೀರು ಯೊರ್ದನ್‌ ನದಿಯ ಒಂದು ನದೀಮೂಲವಾಗಿ ರೂಪುಗೊಳ್ಳುತ್ತದೆ. ಬೇರ್ಷೆಬವಾದರೋ ಎಷ್ಟು ಬೇರೆಯಾಗಿತ್ತು, ಯಾಕಂದರೆ ಅದು ತುಲನಾತ್ಮಕವಾಗಿ ಶುಷ್ಕ ಪ್ರದೇಶದಲ್ಲಿ, ಮೃತಸಮುದ್ರದ ಕರಾವಳಿ ಮತ್ತು ದಕ್ಷಿಣಕೊನೆಯ ನಡುವೆ ನೆಲೆಸಿತ್ತು.

ಬೇರ್ಷೆಬದ ಪ್ರದೇಶದಲ್ಲಿ ವಾರ್ಷಿಕ ಮಳೆಸುರಿತವು ಕೇವಲ 15 ರಿಂದ 20 ಸೆಂಟಿಮೀಟರಾಗಿತ್ತು. ಅದನ್ನು ತಿಳಿದವರಾಗಿ, ಮೇಲಿನ ಚಿತ್ರದಲ್ಲಿ ಬೇರ್ಷೆಬದ ಒಂದು ಗುಡ್ಡ ಅಥವಾ ದಿಬ್ಬವನ್ನು ಗಮನಿಸಿರಿ. * ನೀವು ಕಾಣುವ ಹಸುರು ಸೂಚಿಸುವುದೇನಂದರೆ ಆ ಚಿತ್ರವು, ಯಾವಾಗ ಬೇರ್ಷೆಬದ ಸುತ್ತಲಿನ ಹೊಲಗಳು ಕೊಂಚ ಸಮಯದ ತನಕ ಹಸುರಾಗಿರುತ್ತವೋ ಆ ಚಳಿಗಾಲದ ಸೀಮಿತ ಮಳೆಗಳ ನಂತರ ತೆಗೆದದ್ದಾಗಿದೆ. ಸಮೀಪದ ಬಯಲುಗಳು ಆಗ—ಮತ್ತು ಈಗಲೂ—ಧಾನ್ಯ ಬೆಳೆಗಳಿಗೆ ಉತ್ತಮವಾಗಿವೆ.

ಆ ಪ್ರದೇಶವು ಶುಷ್ಕವಾಗಿದ್ದ ಕಾರಣ, ಬೇರ್ಷೆಬದ ಕುರಿತಾದ ಬೈಬಲ್‌ ದಾಖಲೆಗಳು ಬಾವಿಗಳ ಮತ್ತು ನೀರಿನ ಹಕ್ಕುಗಳ ಕುರಿತು ಒತ್ತಿಹೇಳುತ್ತವೆ. ನಗರವು ದಕ್ಷಿಣಾಧ್ಯಿಕದ ಮರಳುಗಾಡನ್ನು ದಾಟುವ ದಾರಿಗಳ ಅಥವಾ ಪ್ರಯಾಣ ಹಾದಿಗಳ ಸಮೀಪದಲ್ಲಿ ನೆಲೆಸಿತ್ತು. ಹಾದುಹೋಗುವ ಅಥವಾ ಇಲ್ಲಿ ತಂಗುವ ಸ್ವತಃ ಪ್ರಯಾಣಿಕರಿಗಾಗಿ ಮತ್ತು ಅವರ ಪಶುಗಳಿಗಾಗಿ ನೀರಿನ ಅಗತ್ಯವನ್ನು ನೀವು ಊಹಿಸಿಕೊಳ್ಳಬಲ್ಲಿರಿ. ಅಂಥ ನೀರು, ದಾನ್‌ಪಟ್ಟಣದಂತೆ, ನೆಲದಿಂದ ಒಸರುತ್ತಿರಲಿಲ್ಲ, ಆದರೆ ಬಾವಿಗಳಿಂದ ಅದನ್ನು ಪಡೆಯಬಹುದಿತ್ತು. ವಾಸ್ತವದಲ್ಲಿ ಹೀಬ್ರೂ ಪದವಾದ ಬೀ‘ಅರ್‌, ಒಂದು ಹೊಂಡಕ್ಕೆ ಅಥವಾ ಭೂಗತ ಜಲವಿತರಣೆಯನ್ನೆಳೆಯಲು ಅಗೆಯಲಾದ ಒಂದು ತೂತಿಗೆ ಸೂಚಿಸಲ್ಪಟ್ಟಿದೆ. ಬೇ-ರ್ಷೆಬ ಅಂದರೆ “ಪ್ರಮಾಣದ ಬಾವಿ” ಅಥವಾ, “ಏಳರ್ವ ಬಾವಿ” ಎಂದರ್ಥ.

ಅಬ್ರಹಾಮ ಮತ್ತು ಅವನ ಕುಟುಂಬವು ದೀರ್ಘಕಾಲದ ತನಕ ಬೇರ್ಷೆಬದಲ್ಲಿ ಮತ್ತು ಅದರ ಸುತ್ತಮುತ್ತಲಲ್ಲಿ ವಾಸಿಸಿದ್ದರು ಮತ್ತು ಅವರಿಗೆ ಬಾವಿಗಳ ಮಹತ್ವವು ತಿಳಿದಿತ್ತು. ಸಾರಳ ದಾಸಿಯಾದ ಹಾಗರಳು ಅರಣ್ಯಕ್ಕೆ ಓಡಿಹೋದಾಗ ನೀರನ್ನು ಬಾವಿಗಳಿಂದ ಅಥವಾ ಅವನ್ನುಪಯೋಗಿಸುವ ಜಿಪ್ಸಿಗಳಿಂದ—ಮುಂದಿನ ಪುಟದ ತುದಿಯಲ್ಲಿ, ಸೀನಾಯಿ ದ್ವೀಪಕಲ್ಪದ ಬಾವಿಯಿಂದ ನೀರನ್ನೆಳೆಯುತ್ತಿರುವ ಜಿಪ್ಸಿ ಸ್ತ್ರೀಯಂತೆ—ಯೋಜಿಸಿದ್ದಿರಬಹುದು. ಅಬ್ರಹಾಮನು ಅನಂತರ ಹಾಗರಳನ್ನು ಅವಳ ತೆಗಳುವ ಮಗನೊಂದಿಗೆ ಅಟಿಬ್ಟಿಡಬೇಕಾಗಿ ಬಂದಾಗ, ದಯೆಯಿಂದ ನೀರಿನ ಸಂಗ್ರಹವನ್ನು ಅಬ್ರಹಾಮನು ಒದಗಿಸಿಕೊಟ್ಟನು. ಅದು ಮುಗಿದು ಹೋದಾಗ ಏನು ಸಂಭವಿಸಿತು? “ದೇವರು ಅವಳ ಕಣ್ಣನ್ನು ತೆರೆದದರಿಂದ ಅವಳು ನೀರಿನ ಬಾವಿಯನ್ನು ಕಂಡು ತಿತ್ತಿಯಲ್ಲಿ ನೀರನ್ನು ತುಂಬಿಕೊಂಡು ಹುಡುಗನಿಗೆ ಕುಡಿಸಿದಳು.”—ಆದಿಕಾಂಡ 21:19.

ಹಾಗರಳ ತಿತ್ತಿಯಲ್ಲಿ ತುಂಬಿಸಲು ಅಬ್ರಹಾಮನಿಗೆ ನೀರು ಸಿಕ್ಕಿದ್ದು ಎಲ್ಲಿಂದ? ಎಲ್ಲಿ ಅವನು ಒಂದು ಪಿಚುಲವೃಕ್ಷವನ್ನು ನೆಟ್ಟಿದ್ದನೋ ಅದರ ಸಮೀಪ ಅವನು ತೋಡಿದ್ದ ಒಂದು ಬಾವಿಯಿಂದಲೇ ಇರಬಹುದು. (ಆದಿಕಾಂಡ 21:25-33) ಅಬ್ರಹಾಮನ ಪಿಚುಲವೃಕ್ಷದ ಆಯ್ಕೆಯ ಯುಕ್ತತೆಯನ್ನು ವಿಜ್ಞಾನಿಗಳೀಗ ಕಾಣುತ್ತಾರೆಂದು ಹೇಳಬಹುದಾಗಿದೆ, ಯಾಕಂದರೆ ಈ ಪ್ರದೇಶದ ಶುಷ್ಕತೆಯ ಮಧ್ಯೆ ಹಸನಾಗಿ ಬೆಳೆಯುವಂತೆ, ಕೊಂಚವೇ ತೇವವನ್ನು ಕಳಕೊಳ್ಳುವ ಚಿಕ್ಕ ಚಿಕ್ಕ ಎಲೆಗಳು ಈ ವೃಕ್ಷಕ್ಕಿವೆ.—ಕೆಳಗಿನ ಚಿತ್ರ ನೋಡಿರಿ.

ಅಬ್ರಹಾಮನಿಗೂ ಒಬ್ಬ ಫಿಲಿಷ್ಟಿಯ ರಾಜನಿಗೂ ನಡುವೆ ಆದ ಒಂದು ವಾಗ್ವಾದದ ಸಂಬಂಧದಲ್ಲಿ ಅವನ ಬಾವಿ ತೋಡಿಸುವಿಕೆಯು ಉಲ್ಲೇಖಿಸಲ್ಪಟ್ಟಿತು. ಸಾಮಾನ್ಯವಾಗಿದ್ದ ನೀರಿನ ಅಭಾವ ಮತ್ತು ಆಳವಾದ ಬಾವಿಯನ್ನು ತೋಡಲು ಆವಶ್ಯಕವಾದ ದುಡಿಮೆಯ ಕಾರಣದಿಂದಾಗಿ, ಬಾವಿಯು ಒಂದು ಬೆಲೆಯುಳ್ಳ ಸೊತ್ತಾಗಿತ್ತು. ವಾಸ್ತವದಲ್ಲಿ ಆಗ, ಅಪ್ಪಣೆ ವಿನಹ ಒಂದು ಬಾವಿಯನ್ನು ಉಪಯೋಗಿಸುವುದು, ಆಸ್ತಿಯ ಹಕ್ಕುಗಳ ಅತಿಕ್ರಮಣವಾಗಿತ್ತು.—ಹೋಲಿಸಿರಿ ಅರಣ್ಯಕಾಂಡ 20:17, 19.

ಟೆಲ್‌ ಬೇರ್ಷೆಬವನ್ನು ನೀವು ಸಂದರ್ಶಿಸುವುದಾದರೆ, ಆಗ್ನೇಯ ಇಳುಕಲಿನಲ್ಲಿ ಒಂದು ಆಳವಾದ ಬಾವಿಯನ್ನು ಇಣಿಕಿ ನೋಡಬಹುದು. ನಿಬಿಡ ಬಂಡೆಯ ಮೇಲಿಂದ ಅದು ಮೊದಲು ಯಾವಾಗ ತೋಡಲ್ಪಟ್ಟಿತ್ತು ಎಂದು ಯಾರಿಗೂ ತಿಳಿದಿಲ್ಲ ಮತ್ತು (ಕೆಳಗೆ ಕಾಣುವ) ಅದರ ಮೇಲ್ಭಾಗವು ಆಮೇಲೆ ಕಲ್ಲುಗಳಿಂದ ಭದ್ರಪಡಿಸಲ್ಪಟ್ಟಿತು. ಆಧುನಿಕ ಪ್ರಾಚೀನ ಶೋಧನ ಶಾಸ್ತ್ರಜ್ಞರು ಅದರ ಕೆಳಗೆ 30 ಮೀಟರ್‌ ತಲಪಿದರೂ ತಳಮುಟ್ಟಲಿಲ್ಲ. ಅವರಲ್ಲೊಬ್ಬನು ಅವಲೋಕಿಸಿದ್ದು: “ಈ ಬಾವಿಯು . . . ಎಲ್ಲಿ ಅಬ್ರಹಾಮನೂ ಅಬೀಮೆಲೆಕನೂ ಒಡಂಬಡಿಕೆಯನ್ನು ಮಾಡಿಕೊಂಡರೋ ಆ ‘ಪ್ರಮಾಣದ ಬಾವಿ’ ಎಂದು ತೀರ್ಮಾನಿಸಲು ಮನಸ್ಸಾಗುತ್ತದೆ.”—ದ ಬಿಬ್ಲಿಕಲ್‌ ಆರ್ಕಿಯಾಲೊಜಿ ರಿವ್ಯೂ.

ತದನಂತರದ ಬೈಬಲ್‌ ಕಾಲಾವಧಿಯಲ್ಲಿ ಬೇರ್ಷೆಬ ಗಾತ್ರದಲ್ಲಿ ಬೆಳೆದು, ಒಂದು ದೊಡ್ಡ ಪುರದ್ವಾರವಿದ್ದ ಕೋಟೆಕೊತಲ್ತದ ಪಟ್ಟಣವಾಯಿತು. ಆದರೆ ಅದರ ಆಳವಾದ ಬಾವಿಯಿಂದ ಬಂದ ಆ ಜೀವಾಧಾರ ನೀರೇ ಅದರ ಅಸ್ತಿತ್ವ ಮತ್ತು ಯಶಸ್ಸಿನ ಕೀಲಿಕೈಯಾಗಿತ್ತು.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 5 ಟೆಲ್‌ ಬೇರ್ಷೆಬದ ವಿಶಾಲ ನೋಟಕ್ಕಾಗಿ, 1993 ಕ್ಯಾಲೆಂಡರ್‌ ಆಫ್‌ ಜಿಹೋವಸ್‌ ವಿಟ್ನೆಸಸ್‌ ನೋಡಿರಿ.

[ಪುಟ 35 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.

[ಪುಟ 36 ರಲ್ಲಿರುವ ಚಿತ್ರ ಕೃಪೆ]

Pictorial Archive (Near Eastern History) Est.