ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಲೋಕದ ಸಂಬಂಧದಲ್ಲಿ ವಿವೇಕವುಳ್ಳವರಾಗಿ ನಡೆಯುವುದು

ಲೋಕದ ಸಂಬಂಧದಲ್ಲಿ ವಿವೇಕವುಳ್ಳವರಾಗಿ ನಡೆಯುವುದು

ಲೋಕದ ಸಂಬಂಧದಲ್ಲಿ ವಿವೇಕವುಳ್ಳವರಾಗಿ ನಡೆಯುವುದು

“ಹೊರಗಿನವರ ಮುಂದೆ ವಿವೇಕವುಳ್ಳವರಾಗಿ ನಡೆದುಕೊಳ್ಳುತ್ತಾ ಇರ್ರಿ.”—ಕೊಲೊಸ್ಸೆ 4:5, NW.

1. ಯಾವದರೊಂದಿಗೆ ಆದಿ ಕ್ರೈಸ್ತರು ಎದುರಿಸಲ್ಪಟ್ಟರು, ಮತ್ತು ಕೊಲೊಸ್ಸೆಯ ಸಭೆಗೆ ಪೌಲನು ಯಾವ ಬುದ್ಧಿವಾದವನ್ನು ಕೊಟ್ಟನು?

 ರೋಮನ್‌ ಜಗತ್ತಿನ ಪಟ್ಟಣಗಳಲ್ಲಿ ಜೀವಿಸುತ್ತಿದ್ದ ಆದಿ ಕ್ರೈಸ್ತರು ವಿಗ್ರಹಾರಾಧನೆ, ಅನೈತಿಕ ಸುಖಭೋಗದ ಹುಡುಕುವಿಕೆ, ಮತ್ತು ವಿಧರ್ಮಿ ಸಂಸ್ಕಾರ ಮತ್ತು ಪದ್ಧತಿಗಳಿಂದ ಎಡೆಬಿಡದೆ ಎದುರಿಸಲ್ಪಟ್ಟಿದ್ದರು. ಏಷ್ಯಾ ಮೈನರ್‌ನ ಪಶ್ಚಿಮ-ಮಧ್ಯದ ಒಂದು ಪಟ್ಟಣವಾದ ಕೊಲೊಸ್ಸೆಯಲ್ಲಿ ಜೀವಿಸಿದ್ದವರು, ನಾಡಿಗರಾದ ಫ್ರಿಗ್ಯರ ದೇವತಾ-ಮಾತೆಯ ಆರಾಧನೆ ಮತ್ತು ಪ್ರೇತಾರಾಧನೆಯನ್ನು, ಗ್ರೀಕ್‌ ನೆಲಸಿಗರ ವಿಧರ್ಮಿ ತತ್ವಜ್ಞಾನವನ್ನು, ಮತ್ತು ಯೆಹೂದ್ಯ ನೆಲಸುನಾಡಿನ ಯೆಹೂದ್ಯ ಮತವನ್ನು ಎದುರಿಸಿದರ್ದೆಂಬದು ನಿಸ್ಸಂದೇಹ. ಅಂಥ “ಹೊರಗಿನವರ” ಮುಂದೆ “ವಿವೇಕವುಳ್ಳವರಾಗಿ ನಡೆದುಕೊಳ್ಳುತ್ತಾ” ಇರುವಂತೆ ಅಪೊಸ್ತಲ ಪೌಲನು ಕ್ರೈಸ್ತ ಸಭೆಗೆ ಬುದ್ಧಿವಾದವನ್ನಿತನ್ತು.—ಕೊಲೊಸ್ಸೆ 4:5.

2. ಇಂದು ಯೆಹೋವನ ಸಾಕ್ಷಿಗಳಿಗೆ ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆದುಕೊಳ್ಳುವ ಅಗತ್ಯವಿದೆಯೇಕೆ?

2 ಯೆಹೋವನ ಸಾಕ್ಷಿಗಳು ಇಂದು ತದ್ರೀತಿಯ ತಪ್ಪು ಪದ್ಧತಿಗಳನ್ನು, ಅದಕ್ಕಿಂತಲೂ ಹೆಚ್ಚಿನದನ್ನು ಎದುರಿಸುತ್ತಾರೆ. ಆದುದರಿಂದ, ನಿಜ ಕ್ರೈಸ್ತ ಸಭೆಯ ಹೊರಗಿನವರೊಂದಿಗೆ ತಮ್ಮ ಸಂಬಂಧದಲ್ಲಿ ಅವರಿಗೆ ಸಹ ವಿವೇಕದಿಂದ ನಡೆದುಕೊಳ್ಳುವ ಅಗತ್ಯವಿದೆ. ಧಾರ್ಮಿಕ ಮತ್ತು ರಾಜಕೀಯ ವ್ಯವಸ್ಥಾಪನೆಗಳಲ್ಲಿರುವ ಹಾಗೂ ವಾರ್ತಾ ಮಾಧ್ಯಮದಲ್ಲಿರುವ ಅನೇಕರು ಅವರಿಗೆ ವಿರುದ್ಧವಾಗಿದ್ದಾರೆ. ಈ ವಿರೋಧಿಗಳಲ್ಲಿ ಕೆಲವರು, ನೇರವಾದ ಆಕ್ರಮಣದ ಅಥವಾ ಹೆಚ್ಚಾಗಿ ವ್ಯಂಗ್ಯೋಕ್ತಿಗಳ ಮೂಲಕ, ಯೆಹೋವನ ಸಾಕ್ಷಿಗಳ ಸತ್ಕೀರ್ತಿಯನ್ನು ಕಳಂಕಿಸಲು ಮತ್ತು ಅವರ ವಿರುದ್ಧವಾಗಿ ದುರಾಭಿಪ್ರಾಯವನ್ನೆಬ್ಬಿಸಲು ಪ್ರಯತ್ನಿಸುತ್ತಾರೆ. ಹೇಗೆ ಆದಿ ಕ್ರೈಸ್ತರು ಧರ್ಮಾಂಧರು ಮತ್ತು ಅಪಾಯಕರ “ಮತ” ವಾಗಿ ಸಹ ಅನ್ಯಾಯದಿಂದ ವೀಕ್ಷಿಸಲ್ಪಟ್ಟರೋ ಹಾಗೆ, ಇಂದು ಯೆಹೋವನ ಸಾಕ್ಷಿಗಳು ಹೆಚ್ಚಾಗಿ ದುರಭಿಪ್ರಾಯ ಮತ್ತು ತಪ್ಪು ತಿಳುವಳಿಕೆಗಳಿಗೆ ಗುರಿಯಾಗಿದ್ದಾರೆ.—ಅ. ಕೃತ್ಯಗಳು 24:14; 1 ಪೇತ್ರ 4:4.

ದುರಭಿಪ್ರಾಯವನ್ನು ಜಯಿಸುವುದು

3, 4. (ಎ) ನಿಜ ಕ್ರೈಸ್ತರು ಲೋಕದಿಂದ ಎಂದೂ ಪ್ರೀತಿಸಲ್ಪಡರು ಏಕೆ, ಆದರೆ ನಾವೇನನ್ನು ಮಾಡಲು ಪ್ರಯತ್ನಿಸಬೇಕು? (ಬಿ) ನಾಜೀ ಕೂಟಶಿಬಿರದಲ್ಲಿ ಬಂದಿಯಾಗಿದ್ದ ಒಬ್ಬಾಕೆ ಗ್ರಂಥಕರ್ತೆಯು ಯೆಹೋವನ ಸಾಕ್ಷಿಗಳ ಕುರಿತು ಬರೆದದ್ದೇನು?

3 ಅಪೊಸ್ತಲ ಯೋಹಾನನಿಗನುಸಾರ ಯಾವುದು “ಕೆಡುಕನ ವಶದಲ್ಲಿ ಬಿದಿದ್ದೆ” ಯೋ ಆ ಲೋಕದಿಂದ ಪ್ರೀತಿಸಲ್ಪಡಲು ನಿಜ ಕ್ರೈಸ್ತರು ಅಪೇಕ್ಷಿಸುವುದಿಲ್ಲ. (1 ಯೋಹಾನ 5:19) ಆದಾಗ್ಯೂ, ಜನರನ್ನು ಯೆಹೋವನೆಡೆಗೆ ಮತ್ತು ಶುದ್ಧಾರಾಧನೆಗೆ ಜಯಿಸಲು ಪ್ರಯತ್ನಿಸುವಂತೆ ಬೈಬಲು ಕ್ರೈಸ್ತರನ್ನು ಉತ್ತೇಜಿಸುತ್ತದೆ. ಇದನ್ನು ನಾವು ನೇರವಾಗಿ ಸಾಕ್ಷಿಕೊಡುವ ಮೂಲಕ ಮತ್ತು ನಮ್ಮ ಸ್ವದರ್ತನೆಯ ಮೂಲಕ ಸಹ ಮಾಡುತ್ತೇವೆ. ಅಪೊಸ್ತಲ ಪೇತ್ರನು ಬರೆದದ್ದು: “ನಿಮ್ಮ ನಡವಳಿಕೆಯು ಅನ್ಯಜನರ ಮಧ್ಯದಲ್ಲಿ ಯೋಗ್ಯವಾಗಿರಲಿ. ಆಗ ಅವರು ಯಾವ ವಿಷಯದಲ್ಲಿ ನಿಮ್ಮನ್ನು ಅಕ್ರಮಗಾರರೆಂದು ನಿಂದಿಸುತ್ತಾರೋ ಆ ವಿಷಯದಲ್ಲಿಯೇ ನಿಮ್ಮ ಸತ್ಕ್ರಿಯೆಗಳನ್ನು ಕಣ್ಣಾರೆಕಂಡು ವಿಚಾರಣೆಯ ದಿನದಲ್ಲಿ ದೇವರನ್ನು ಕೊಂಡಾಡುವರು.”—1 ಪೇತ್ರ 2:12.

4 ಕ್ಷಮಿಸಿರಿ—ಆದರೆ ಮರೆಯಬೇಡಿರಿ ಎಂಬ ತನ್ನ ಪುಸ್ತಕದಲ್ಲಿ ಗ್ರಂಥಕರ್ತೆ ಸಿಲ್ವಿಯ ಸಾಲ್‌ವೆಸನ್‌, ನಾಜೀ ಕೂಟಶಿಬಿರದಲ್ಲಿ ತನ್ನ ಜತೆವಾಸಿಗಳಾಗಿದ್ದ ಸ್ತ್ರೀ ಸಾಕ್ಷಿಗಳ ಕುರಿತು ಹೇಳಿದ್ದು: “ಆ ಇಬ್ಬರು, ಕೇಟ್‌ ಮತ್ತು ಮಾರ್ಗರೆಟ್‌, ಮತ್ತು ಇತರ ಅನೇಕರು, ತಮ್ಮ ನಂಬಿಕೆಯ ಮೂಲಕವಾಗಿ ಮಾತ್ರವಲ್ಲ ವ್ಯಾವಹಾರಿಕ ವಿಷಯಗಳಲ್ಲೂ ನನಗೆ ತುಂಬಾ ಸಹಾಯ ಮಾಡಿದರು. ನಮ್ಮ ಗಾಯಗಳಿಗೆ ನಮಗೆ ದೊರಕಿದ ಮೊದಲಿನ ಶುದ್ಧ ಚಿಂದಿಗಳನ್ನು ಅವರು ನಮಗಾಗಿ ತಂದುಕೊಟ್ಟರು. . . . ಸಂಕ್ಷಿಪ್ತವಾಗಿ ಹೇಳುವುದಾದರೆ, ನಮಗೆ ಹಿತವನ್ನು ಬಯಸಿದ ಮತ್ತು ತಮ್ಮ ಕ್ರಿಯೆಗಳ ಮೂಲಕ ತಮ್ಮ ಸ್ನೇಹಪರ ಭಾವುಕತೆಗಳನ್ನು ತೋರಿಸಿದ ಜನರ ನಡುವೆ ನಾವು ನಮ್ಮನ್ನು ಕಂಡುಕೊಂಡೆವು.” “ಹೊರಗಿನವರಿಂದ” ಎಂತಹ ಉತ್ತಮ ಸಾಕ್ಷ್ಯವು!

5, 6. (ಎ) ಪ್ರಚಲಿತ ಸಮಯದಲ್ಲಿ ಕ್ರಿಸ್ತನು ಯಾವ ಕೆಲಸವನ್ನು ನಿರ್ವಹಿಸುತ್ತಾ ಇದ್ದಾನೆ, ಮತ್ತು ನಾವೇನನ್ನು ಮರೆಯಬಾರದು? (ಬಿ) ಲೋಕದ ಜನರ ಕಡೆಗೆ ನಮ್ಮ ಮನೋಭಾವವು ಏನಾಗಿರಬೇಕು ಮತ್ತು ಏಕೆ?

5 ಹೊರಗಿನವರ ಕಡೆಗೆ ನಾವು ನಡಕೊಳ್ಳುವ ರೀತಿಯಲ್ಲಿ ವಿವೇಕವುಳ್ಳವರಾಗಿರುವ ಮೂಲಕ ದುರಭಿಪ್ರಾಯಗಳನ್ನು ಹೋಗಲಾಡಿಸುವುದರಲ್ಲಿ ನಾವು ಹೆಚ್ಚನ್ನು ಮಾಡಬಲ್ಲೆವು. ನಮ್ಮ ಆಳುವ ರಾಜನಾದ ಕ್ರಿಸ್ತ ಯೇಸುವು ಜನಾಂಗಗಳ ಜನರನ್ನು, “ಕುರುಬನು ಆಡುಗಳನ್ನೂ ಕುರಿಗಳನ್ನೂ ಬೇರೆಬೇರೆಮಾಡುವ ಪ್ರಕಾರ,” ಪ್ರತ್ಯೇಕಿಸುತ್ತಿರುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ ನಿಜ. (ಮತ್ತಾಯ 25:32) ಆದರೆ ನ್ಯಾಯತೀರಿಸುವವನು ಕ್ರಿಸ್ತನು ಎಂಬದನ್ನೆಂದೂ ಮರೆಯದಿರ್ರಿ. “ಕುರಿಗಳು” ಯಾರು ಮತ್ತು “ಆಡುಗಳು” ಯಾರು ಎಂಬದನ್ನು ನಿರ್ಣಯಿಸುವಾತನು ಆತನೇ.—ಯೋಹಾನ 5:22.

6 ಯೆಹೋವನ ಸಂಸ್ಥೆಯ ಭಾಗವಾಗಿರದೆ ಇರುವವರ ಕಡೆಗೆ ನಮ್ಮ ಮನೋಭಾವವನ್ನು ಇದು ಪ್ರಭಾವಿಸಬೇಕು. ನಾವು ಅವರನ್ನು ಲೌಕಿಕ ಜನರಾಗಿ ನೆನಸಬಹುದು, ಆದರೆ, “ದೇವರು . . . ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು. ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು” ಕೊಟ್ಟ ಮಾನವಕುಲದ ಲೋಕದ ಒಂದು ಭಾಗವಾಗಿ ಅವರಿದ್ದಾರೆ. (ಯೋಹಾನ 3:16) ಜನರನ್ನು ಆಡುಗಳೆಂದು ದುರಭಿಮಾನದಿಂದ ನಿರ್ಣಯಿಸುವುದಕ್ಕಿಂತ ಅವರನ್ನು ಭಾವೀ ಕುರಿಗಳೆಂದು ಪರಿಗಣಿಸುವುದು ಎಷ್ಟೋ ಲೇಸು. ಹಿಂದೆ ಸತ್ಯವನ್ನು ತೀವ್ರ ವಿರೋಧಮಾಡುತ್ತಿದ್ದ ಕೆಲವರು ಇಂದು ಸಮರ್ಪಿತ ಸಾಕ್ಷಿಗಳಾಗಿದ್ದಾರೆ. ಮತ್ತು ಇವರಲ್ಲಿ ಅನೇಕರು, ಯಾವುದೇ ನೇರವಾದ ಸಾಕ್ಷಿಕೊಡುವಿಕೆಗೆ ಪ್ರತಿಕ್ರಿಯಿಸುವ ಮುಂಚೆ, ದಯೆಯುಳ್ಳ ಕ್ರಿಯೆಗಳಿಂದ ಮೊದಲಾಗಿ ಜಯಿಸಲ್ಪಟ್ಟಿದ್ದರು. ಉದಾಹರಣೆಗೆ, ಪುಟ 18 ರಲ್ಲಿರುವ ಚಿತ್ರವನ್ನು ನೋಡಿರಿ.

ಹುರುಪುಳ್ಳವರು, ಆಕ್ರಮಣಕಾರಿಗಳಲ್ಲ

7. ಯಾವ ಟೀಕೆಯನ್ನು ಪೋಪರು ವ್ಯಕ್ತಪಡಿಸಿದರು, ಆದರೆ ಯಾವ ಪ್ರಶ್ನೆಯನ್ನು ನಾವು ಕೇಳಬಹುದು?

7 ಪೋಪ್‌ ಪೌಲ್‌ ಜೋನ್‌ II, ಸಾಮಾನ್ಯವಾಗಿ ಪಂಥಗಳನ್ನು, ವಿಶೇಷವಾಗಿ ಯೆಹೋವನ ಸಾಕ್ಷಿಗಳನ್ನು ಟೀಕಿಸಿದಾಗ ಅಂದದ್ದು: “ಮನೆಯಿಂದ ಮನೆಗೆ ಹೋಗಿ, ಅಥವಾ ರಸ್ತೆಯ ಮೂಲೆಗಳಲ್ಲಿ ದಾರಿಹೋಕರನ್ನು ನಿಲ್ಲಿಸಿ, ಹೊಸ ಅವಲಂಬಿಗಳನ್ನು ಹುಡುಕುವ ಅವರ ಬಹುಮಟ್ಟಿನ ಆಕ್ರಮಣಕಾರಿ ಹುರುಪು ಅಪೊಸ್ತಲಿಕ ಮತ್ತು ಮಿಷನೆರಿ ಉತ್ಸಾಹದ ಪಾಂಥಿಕ ಖೋಟಾ ಅನುಕರಣೆಯಾಗಿದೆ.” ಹೀಗೆ ಕೇಳಬಹುದು, ನಮ್ಮದು “ಅಪೊಸ್ತಲಿಕ ಮತ್ತು ಮಿಷನೆರಿ ಉತ್ಸಾಹದ ಖೋಟಾ ಅನುಕರಣೆ” ಆಗಿದ್ದರೆ, ನಿಜ ಸೌವಾರ್ತಿಕ ಹುರುಪು ಕಂಡುಬರುವುದಾದರೂ ಎಲ್ಲಿ? ಖಂಡಿತವಾಗಿಯೂ ಕ್ಯಾತೊಲಿಕರ ನಡುವೆ ಅಲ್ಲ, ಪ್ರಾಟೆಸ್ಟಂಟರಲ್ಲಿ ಅಥವಾ ಆರ್ತೊಡಾಕ್ಸ್‌ ಚರ್ಚುಗಳ ಸದಸ್ಯರಲ್ಲಿ ಕೂಡ ಅಲ್ಲ.

8. ಮನೆ ಮನೆಯ ಸಾಕ್ಷಿಕಾರ್ಯವನ್ನು ನಾವು ಹೇಗೆ ನಡಿಸಬೇಕು, ಯಾವ ಫಲಿತಾಂಶದ ನಿರೀಕ್ಷೆಯೊಂದಿಗೆ?

8 ಆದಾಗ್ಯೂ, ನಮ್ಮ ಸಾಕ್ಷಿಕಾರ್ಯದಲ್ಲಿ ಆಕ್ರಮಣಕಾರಕತೆಯ ಬಗ್ಗೆ ಯಾವುದೇ ಆರೋಪವು ತಪ್ಪೆಂದು ತೋರಿಸುವುದಕ್ಕಾಗಿ, ಜನರನ್ನು ಗೋಚರಿಸುವಾಗ, ನಾವು ಯಾವಾಗಲೂ ದಯಾಪರರೂ, ಗೌರವವುಳ್ಳವರೂ, ಮತ್ತು ವಿನಯಶೀಲರೂ ಆಗಿರಬೇಕು. ಶಿಷ್ಯ ಯಾಕೋಬನು ಬರೆದದ್ದು: “ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಲಕ್ಷಣವಾಗಿರುವ ಶಾಂತಗುಣದಿಂದ ಅದರ ಫಲವನ್ನು ತೋರಿಸಲಿ.” (ಯಾಕೋಬ 3:13) “ಕುತರ್ಕಮಾಡದೆ” ಇರುವಂತೆ ಅಪೊಸ್ತಲ ಪೌಲನು ನಮ್ಮನ್ನು ಪ್ರಬೋಧಿಸುತ್ತಾನೆ. (ತೀತ 3:2) ಉದಾಹರಣೆಗೆ, ನಾವು ಸಾಕ್ಷಿಕೊಡುತ್ತಿರುವ ವ್ಯಕ್ತಿಯ ನಂಬಿಕೆಗಳನ್ನು ಪೂರ್ಣವಾಗಿ ಖಂಡಿಸುವ ಬದಲಿಗೆ, ಅವನ ಅಥವಾ ಅವಳ ಅಭಿಪ್ರಾಯಗಳಲ್ಲಿ ಪ್ರಾಮಾಣಿಕ ಆಸಕ್ತಿಯನ್ನೇಕೆ ತೋರಿಸಬಾರದು? ಅನಂತರ ವ್ಯಕ್ತಿಗೆ ಬೈಬಲಿನಲ್ಲಿ ಅಡಕವಾಗಿರುವಂಥ ಸುವಾರ್ತೆಯನ್ನು ತಿಳಿಸಿರಿ. ಒಂದು ಸಕಾರಾತ್ಮಕ ಗೋಚರವನ್ನು ಸ್ವೀಕರಿಸುವ ಮೂಲಕ ಮತ್ತು ಬೇರೆ ನಂಬಿಕೆಗಳುಳ್ಳ ಜನರಿಗಾಗಿ ಯುಕ್ತ ಗೌರವವನ್ನು ತೋರಿಸುವ ಮೂಲಕ, ಆಲಿಸಲು ಹೆಚ್ಚು ಒಳ್ಳೆಯ ಮನೋಭಾವನೆ ಉಳ್ಳವರಾಗುವಂತೆ ಅವರಿಗೆ ನಾವು ಸಹಾಯ ಮಾಡುವೆವು, ಮತ್ತು ಪ್ರಾಯಶಃ ಅವರು ಬೈಬಲ್‌ ಸಂದೇಶದ ಮೂಲ್ಯವನ್ನು ವಿವೇಚಿಸುವರು. ಫಲಿತಾಂಶವಾಗಿ ಕೆಲವರು “ದೇವರನ್ನು ಕೊಂಡಾಡು” ವವರಾಗಲೂಬಹುದು.— 1 ಪೇತ್ರ 2:12.

9. ಪೌಲನು ಕೊಟ್ಟ ಈ ಬುದ್ಧಿವಾದವನ್ನು ನಾವು ಹೇಗೆ ಅನ್ವಯಿಸಬಲ್ಲೆವು (ಎ) ಕೊಲೊಸ್ಸೆ 4:5 ರಲ್ಲಿ? (ಬಿ) ಕೊಲೊಸ್ಸೆ 4:6 ರಲ್ಲಿ?

9 ಅಪೊಸ್ತಲ ಪೌಲನು ಬುದ್ಧಿಹೇಳಿದ್ದು: “ನಿಮಗಾಗಿ ಅನುಕೂಲವಾದ ಸಮಯವನ್ನು ಖರೀದಿಸುತ್ತಾ ಹೊರಗಿನವರ ಮುಂದೆ ವಿವೇಕವುಳ್ಳವರಾಗಿ ನಡೆದುಕೊಳ್ಳುತ್ತಾ ಇರ್ರಿ.” (ಕೊಲೊಸ್ಸೆ 4:5, NW) ಈ ನಂತರದ ಹೇಳಿಕೆಯನ್ನು ವಿವರಿಸುತ್ತಾ, ಜೆ.ಬಿ. ಲೈಟ್‌ಫುಟ್‌ ಬರೆದದ್ದು: “ದೇವರ ಹೇತುವನ್ನು ವೃದ್ಧಿಗೊಳಿಸಬಹುದಾದ ವಿಷಯವನ್ನು ಮಾಡಲು ಮತ್ತು ಹೇಳಲು ಇರುವ ಯಾವ ಅವಕಾಶವೂ ನಿಮ್ಮಿಂದ ತಪ್ಪಿಹೋಗುವಂತೆ ಬಿಡದಿರುವುದು.” (ಒತ್ತು ನಮ್ಮದು) ಹೌದು, ಅನುಕೂಲ ಸಂದರ್ಭದಲ್ಲಿ ನಾವು ನುಡಿಗಳಿಂದಲೂ ಕ್ರಿಯೆಗಳಿಂದಲೂ ಸಿದ್ಧರಾಗಿರಬೇಕು. ಅಂಥ ವಿವೇಕದಲ್ಲಿ, ಸಂದರ್ಶನ ಮಾಡುವುದಕ್ಕೆ ದಿನದಲ್ಲಿ ತಕ್ಕದಾದ ಸಮಯವನ್ನು ಆರಿಸಿಕೊಳ್ಳುವುದು ಸಹ ಒಳಗೂಡಿದೆ. ನಮ್ಮ ಸಂದೇಶವು ನಿರಾಕರಿಸಲ್ಪಟ್ಟರೆ, ಜನರು ಅದನ್ನು ಗಣ್ಯಮಾಡದೆ ಇರುವ ಕಾರಣದಿಂದಲೋ ಅಥವಾ ಸಂಭವನೀಯವಾಗಿ ಅನಾನುಕೂಲದ ಸಮಯದಲ್ಲಿ ನಾವು ಸಂದರ್ಶನ ಮಾಡಿದ್ದರಿಂದಲೋ? ಪೌಲನು ಇದನ್ನೂ ಬರೆದಿದ್ದಾನೆ: “ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:6) ಇದಕ್ಕಾಗಿ ನೆರೆಯವನೆಡೆಗೆ ಮುಂದಾಲೋಚನೆ ಮತ್ತು ನಿಜ ಪ್ರೀತಿಯ ಆವಶ್ಯವಿದೆ. ನಾವು ಯಾವಾಗಲೂ ರಾಜ್ಯದ ಸಂದೇಶವನ್ನು ಇಂಪಾಗಿ ಕೇಳಿಸುವಂತೆ ನೀಡೋಣ.

ಗೌರವವುಳ್ಳವರು ಮತ್ತು “ಸಕಲ ಸತ್ಕಾರ್ಯಗಳಿಗೆ ಸಿದ್ಧರು”

10. (ಎ) ಕ್ರೇತದಲ್ಲಿ ವಾಸಿಸುತ್ತಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಯಾವ ಬುದ್ಧಿವಾದವನ್ನು ಕೊಟ್ಟನು? (ಬಿ) ಪೌಲನ ಬುದ್ಧಿವಾದವನ್ನು ಪಾಲಿಸುವುದರಲ್ಲಿ ಯೆಹೋವನ ಸಾಕ್ಷಿಗಳು ಹೇಗೆ ಆದರ್ಶಪ್ರಾಯರಾಗಿದ್ದಾರೆ?

10 ಬೈಬಲ್‌ ತತ್ವಗಳ ವಿಷಯದಲ್ಲಿ ನಾವು ಒಪ್ಪಂದವನ್ನು ಮಾಡಸಾಧ್ಯವಿಲ್ಲ. ಇನ್ನೊಂದು ಕಡೆ, ಕ್ರೈಸ್ತ ಸಮಗ್ರತೆಯು ಒಳಗೂಡದೆ ಇರುವ ಪ್ರಶ್ನೆಗಳ ಕುರಿತು ನಾವು ಅನಾವಶ್ಯಕವಾಗಿ ವಾದಿಸಬಾರದು. ಅಪೊಸ್ತಲ ಪೌಲನು ಬರೆದದ್ದು: “ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕೆಂತಲೂ ಯಾರನ್ನೂ ದೂಷಿಸದೆ ಕುತರ್ಕಮಾಡದೆ ಎಲ್ಲಾ ಮನುಷ್ಯರಿಗೆ ಪೂರ್ಣ ಸಾಧುಗುಣವನ್ನು ತೋರಿಸುತ್ತಾ ಸಾತ್ವಿಕರಾಗಿರಬೇಕೆಂತಲೂ ಅವರಿಗೆ [ಕ್ರೇತದ ಕೈಸ್ತರಿಗೆ] ಜ್ಞಾಪಕಕೊಡು.” (ತೀತ 3:1, 2) ಬೈಬಲ್‌ ಪಂಡಿತ ಇ.ಎಫ್‌. ಸ್ಕಾಟ್‌ ಈ ವಚನದ ಕುರಿತು ಬರೆದದ್ದು: “ಕ್ರೈಸ್ತರಿಗೆ, ಅಧಿಕಾರಿಗಳಿಗೆ ವಿಧೇಯರಾಗಿರಲಿಕ್ಕಿತ್ತು ಮಾತ್ರವೇ ಅಲ್ಲ ಸಕಲ ಸತ್ಕಾರ್ಯಗಳನ್ನು ಮಾಡುವದಕ್ಕೆ ಸಿದ್ಧರಾಗಿಯೂ ಇರಬೇಕಿತ್ತು. ಇದರ . . . ಅರ್ಥವೇನಂದರೆ ಸಂದರ್ಭವು ನಿರ್ಬಂಧಿಸಿದಾಗ, ಪ್ರಜಾತತ್ಪರತೆ ತೋರಿಸುವುದರಲ್ಲಿ ಕ್ರೈಸ್ತರು ಅಗ್ರಗಣ್ಯರಾಗಿರಬೇಕು. ಎಲ್ಲಾ ಒಳ್ಳೇ ನಾಗರಿಕರು ತಮ್ಮ ನೆರೆಯವರಿಗೆ ಸಹಾಯ ಮಾಡಲಪೇಕ್ಷಿಸುವ ಬೆಂಕಿ, ಮಾರಕ ವ್ಯಾಧಿ, ವಿವಿಧ ರೀತಿಯ ವಿಪತ್ತುಗಳು ಸದಾ ಸಂಭವಿಸುತ್ತಿರುವುವು.” ಭೂಲೋಕದಲ್ಲೆಲ್ಲೂ ಆಪತ್ತುಗಳು ಹೊಡೆಯುವ ಅನೇಕ ಸಂದರ್ಭಗಳಿರುತ್ತವೆ ಮತ್ತು ಪರಿಹಾರ ಕಾರ್ಯವನ್ನು ನಡಿಸುವವರಲ್ಲಿ ಯೆಹೋವನ ಸಾಕ್ಷಿಗಳು ಮೊದಲಿಗರಾಗಿದ್ದಾರೆ. ಅವರು ತಮ್ಮ ಸಹೋದರರಿಗೆ ಮಾತ್ರವಲ್ಲ ಹೊರಗಿನವರಿಗೂ ಸಹಾಯ ಮಾಡಿದ್ದಾರೆ.

11, 12. (ಎ) ಅಧಿಕಾರಿಗಳ ಕಡೆಗೆ ಕ್ರೈಸ್ತರು ಹೇಗೆ ನಡೆದುಕೊಳ್ಳಬೇಕು? (ಬಿ) ರಾಜ್ಯ ಸಭಾಗೃಹಗಳನ್ನು ಕಟ್ಟುವ ಸಂಬಂಧದಲ್ಲಿ ಅಧಿಕಾರಿಗಳಿಗೆ ಅಧೀನತೆಯಲ್ಲಿ ಏನು ಕೂಡಿದೆ?

11 ಪೌಲನು ತೀತನಿಗೆ ಬರೆದ ಪತ್ರದ ಇದೇ ವಚನವು, ಅಧಿಕಾರಿಗಳ ಕಡೆಗೆ ಗೌರವವುಳ್ಳ ಮನೋಭಾವವನ್ನು ಸ್ವೀಕರಿಸುವ ಮಹತ್ವವನ್ನು ಒತ್ತಿಹೇಳುತ್ತದೆ. ತಾಟಸ್ಥ್ಯದ ತಮ್ಮ ನಿಲುವಿನ ಕಾರಣದಿಂದಾಗಿ ನ್ಯಾಯಾಧೀಶರುಗಳ ಮುಂದೆ ನಿಲ್ಲುವ ಯುವ ಕ್ರೈಸ್ತರು, ಹೊರಗಿನವರ ಕಡೆಗೆ ವಿವೇಕವುಳ್ಳವರಾಗಿ ನಡೆಯುವ ವಿಷಯದಲ್ಲಿ ವಿಶೇಷ ಲಕ್ಷ್ಯಕೊಡುವವರಾಗಿರಬೇಕು. ತಮ್ಮ ಉಡುಪು, ವರ್ತನೆ, ಮತ್ತು ಅಂಥ ಅಧಿಕಾರಿಗಳೊಂದಿಗೆ ಅವರು ಮಾತಾಡುವ ರೀತಿಯಿಂದ ಯೆಹೋವನ ಜನರ ಸತ್ಕೀರ್ತಿಯನ್ನು ಉತ್ತಮಗೊಳಿಸಲು ಯಾ ಕೆಡಿಸಲು ಅವರು ಹೆಚ್ಚನ್ನು ಮಾಡಬಲ್ಲರು. ಅವರು “ಯಾರಿಗೆ ಮರ್ಯಾದೆಯೋ ಅವರಿಗೆ ಮರ್ಯಾದೆಯನ್ನು ಸಲ್ಲಿಸ” ಬೇಕು ಮತ್ತು ಆಳವಾದ ಗೌರವದೊಂದಿಗೆ ತಮ್ಮ ಪ್ರತಿವಾದವನ್ನು ನಡಿಸಬೇಕು.—ರೋಮಾಪುರ 13:1-7; 1 ಪೇತ್ರ 2:17; 3:15.

12 “ಅಧಿಕಾರಿಗಳ” ಲ್ಲಿ ಸ್ಥಳೀಕ ಸರಕಾರಿ ಅಧಿಕಾರಿಗಳು ಸೇರಿರುತ್ತಾರೆ. ಈಗ ಅಧಿಕಾಧಿಕ ರಾಜ್ಯ ಸಭಾಗೃಹಗಳು ಕಟ್ಟಲ್ಪಡುತ್ತಾ ಇರುವುದರಿಂದ, ಸ್ಥಳೀಕ ಅಧಿಕಾರಿಗಳೊಂದಿಗೆ ವ್ಯವಹಾರಗಳು ಅನಿವಾರ್ಯ. ಆಗಿಂದಾಗ್ಗೆ, ಹಿರಿಯರು ದುರಾಗ್ರಹವನ್ನು ಎದುರಿಸುತ್ತಾರೆ. ಆದರೆ ಎಲ್ಲಿ ಸಭಾ ಪ್ರತಿನಿಧಿಗಳು ಅಧಿಕಾರಿಗಳೊಂದಿಗೆ ಒಳ್ಳೇ ಸಂಬಂಧವನ್ನು ಸ್ಥಾಪಿಸಿ, ನಗರ ಯೋಜನಾ ನಿಯೋಗದೊಂದಿಗೆ ಸಹಕರಿಸುತ್ತಾರೋ ಅಲ್ಲಿ ಈ ದುರಾಗ್ರಹವು ನಿವಾರಿಸಲ್ಪಡಬಲ್ಲದೆಂದು ಕಂಡುಬಂದಿದೆ. ಯೆಹೋವನ ಸಾಕ್ಷಿಗಳ ಮತ್ತು ಅವರ ಸಂದೇಶದ ಕುರಿತು ಹಿಂದೆ ಕೊಂಚ ಅಥವಾ ಏನೂ ತಿಳಿಯದೆ ಇದ್ದ ಜನರಿಗೆ ಆಗಿಂದಾಗ್ಗೆ ಒಳ್ಳೆಯ ಸಾಕ್ಷಿಯು ಕೊಡಲ್ಪಟ್ಟಿದೆ.

‘ಸಾಧ್ಯವಾದರೆ, ಎಲ್ಲರೊಂದಿಗೆ ಸಮಾಧಾನದಿಂದಿರಿ’

13, 14. ರೋಮಿನ ಕ್ರೈಸ್ತರಿಗೆ ಪೌಲನು ಯಾವ ಬುದ್ಧಿವಾದವನ್ನು ಕೊಟ್ಟನು ಮತ್ತು ಅದನ್ನು ನಾವು ಹೊರಗಿನವರೊಂದಿಗೆ ನಮ್ಮ ಸಂಬಂಧದಲ್ಲಿ ಹೇಗೆ ಅನ್ವಯಿಸಬಲ್ಲೆವು?

13 ವಿಧರ್ಮಿ ರೋಮ್‌ನಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಪೌಲನು ಕೆಳಗಿನ ಬುದ್ಧಿವಾದವನ್ನು ಕೊಟ್ಟನು: “ಯಾರಿಗೂ ಅಪಕಾರಕ್ಕೆ ಅಪಕಾರವನ್ನು ಮಾಡಬೇಡಿರಿ. ಎಲ್ಲರ ದೃಷ್ಟಿಯಲ್ಲಿ ಯಾವುದು ಗೌರವವಾದದ್ದೋ ಅದನ್ನೇ ಯೋಚಿಸಿ ಸಾಧಿಸಿರಿ. ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆಂಬದಾಗಿ ಬರೆದದೆ. ಹಾಗಾದರೆ ನಿನ್ನ ವೈರಿ ಹಸಿದಿದ್ದರೆ ಅವನಿಗೆ ಊಟಕ್ಕೆ ಬಡಿಸು; ಬಾಯಾರಿದ್ದರೆ ಕುಡಿಯುವದಕ್ಕೆ ಕೊಡು. ಹೀಗೆ ಮಾಡಿದರೆ ಅವನ ತಲೆಯ ಮೇಲೆ ಕೆಂಡಗಳನ್ನು ಕೂಡಿಸಿಟ್ಟಂತಾಗುವದು. ಕೆಟ್ಟತನಕ್ಕೆ ಸೋತುಹೋಗದೆ ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು.”—ರೋಮಾಪುರ 12:17-21.

14 ಹೊರಗಿನವರೊಂದಿಗೆ ನಮ್ಮ ಸಂಬಂಧಗಳಲ್ಲಿ, ನಿಜ ಕ್ರೈಸ್ತರಾದ ನಾವು ವಿರೋಧಕರನ್ನು ಎದುರಿಸುವುದು ತಪ್ಪಿಸಲಸಾಧ್ಯ. ಆ ವಿರೋಧವನ್ನು ದಯೆಯುಳ್ಳ ಕ್ರಿಯೆಗಳಿಂದ ನೀಗಿಸಲು ಪ್ರಯತ್ನಿಸುವುದೇ ವಿವೇಕವುಳ್ಳ ಮಾರ್ಗವು ಎಂದು ಪೌಲನು ಮೇಲಿನ ವಚನಗಳಲ್ಲಿ ತೋರಿಸುತ್ತಾನೆ. ಬೆಂಕೀ ಕೆಂಡಗಳಂತೆ ಈ ದಯೆಯುಳ್ಳ ಕ್ರಿಯೆಗಳು ವೈರತ್ವವನ್ನು ಕರಗಿಸಬಹುದು ಮತ್ತು ಯೆಹೋವನ ಸಾಕ್ಷಿಗಳ ಕಡೆಗೆ ಒಂದು ದಯಾಪರ ಭಾವವನ್ನು ತೋರಿಸುವಂತೆ, ಪ್ರಾಯಶಃ ಸುವಾರ್ತೆಯಲ್ಲಿ ಅವನ ಆಸಕ್ತಿಯನ್ನೂ ಎಬ್ಬಿಸಿ, ವಿರೋಧಕನನ್ನು ಜಯಿಸಲೂಬಹುದು. ಇದು ಸಂಭವಿಸುವಾಗ, ಒಳ್ಳೇತನದಿಂದ ಕೆಟ್ಟತನವು ಸೋಲಿಸಲ್ಪಡುತ್ತದೆ.

15. ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆಯಲು ಕ್ರೈಸ್ತರು ಯಾವಾಗ ವಿಶೇಷ ಜಾಗ್ರತೆಯುಳ್ಳವರಾಗಿರಬೇಕು?

15 ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆಯುವುದು, ಎಲ್ಲಿ ವಿವಾಹ ಸಂಗಾತಿಗಳಲ್ಲಿ ಒಬ್ಬರು ಸತ್ಯವನ್ನಿನ್ನೂ ಸ್ವೀಕರಿಸಿಲ್ಲವೋ ಆ ಮನೆಗಳಲ್ಲಿ ವಿಶೇಷವಾಗಿ ಮಹತ್ವವುಳ್ಳದ್ದಾಗಿದೆ. ಬೈಬಲ್‌ ತತ್ವಗಳ ಪಾಲನೆಯು ಹೆಚ್ಚು ಒಳ್ಳೆಯ ಗಂಡಂದಿರನ್ನು, ಹೆಚ್ಚು ಒಳ್ಳೆಯ ಪತ್ನಿಯರನ್ನು, ಹೆಚ್ಚು ಒಳ್ಳೆಯ ತಂದೆಯಂದಿರನ್ನು, ಹೆಚ್ಚು ಒಳ್ಳೆಯ ತಾಯಂದಿರನ್ನು ಮತ್ತು ಹೆಚ್ಚು ವಿಧೇಯರಾದ ಮತ್ತು ಶಾಲೆಯಲ್ಲಿ ಹೆಚ್ಚು ಕಷ್ಟಪಟ್ಟು ಕಲಿಯುವ ಮಕ್ಕಳನ್ನು ಉತ್ಪಾದಿಸುತ್ತದೆ. ಒಬ್ಬ ವಿಶ್ವಾಸಿಯ ಮೇಲೆ ಬೈಬಲ್‌ ತತ್ವಗಳು ಹಾಕುವ ಹಿತಕರವಾದ ಪರಿಣಾಮಗಳನ್ನು ನಂಬದ ವ್ಯಕ್ತಿಯು ಕಾಣಶಕ್ತನಾಗಬೇಕು. ಹೀಗೆ ಕೆಲವರು, “ವಾಕ್ಯೋಪದೇಶವಿಲ್ಲದೆ” ಸಮರ್ಪಿತ ಕುಟುಂಬ ಸದಸ್ಯರ “ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”—1 ಪೇತ್ರ 3:1, 2.

‘ಎಲ್ಲರಿಗೆ ಒಳ್ಳೇದನ್ನು ಮಾಡುವುದು’

16, 17. (ಎ) ಯಾವ ಯಜ್ಞಗಳು ದೇವರಿಗೆ ಮೆಚ್ಚಿಕೆಯಾಗಿವೆ? (ಬಿ) ನಮ್ಮ ಸಹೋದರರೆಡೆಗೆ ಮತ್ತು ಹೊರಗಿನವರೆಡೆಗೆ ಸಹ ನಾವು ಹೇಗೆ “ಒಳ್ಳೇದನ್ನು” ಮಾಡಬೇಕು?

16 ನಾವು ನಮ್ಮ ನೆರೆಯವನಿಗಾಗಿ ನಡಿಸಬಲ್ಲ ಅತ್ಯಂತ ಹಿತವು ಅವನಿಗಾಗಿ ಜೀವದ ಸಂದೇಶವನ್ನು ಕೊಡುವುದು ಮತ್ತು ಯೇಸು ಕ್ರಿಸ್ತನ ಮೂಲಕವಾಗಿ ಯೆಹೋವನೊಂದಿಗೆ ಸಮಾಧಾನವಾಗುವ ಕುರಿತು ಅವನಿಗೆ ಕಲಿಸುವುದೇ ಅಗಿದೆ. (ರೋಮಾಪುರ 5:8-11) ಆದುದರಿಂದ ಅಪೊಸ್ತಲ ಪೌಲನು ನಮಗೆ ಹೇಳುವುದು: “ಆತನ [ಕ್ರಿಸ್ತನ] ಮೂಲಕವಾಗಿ ದೇವರಿಗೆ ಸ್ತೊತ್ರಯಜ್ಞವನ್ನು, ಅಂದರೆ ಆತನ ನಾಮಕ್ಕೆ ಬಹಿರಂಗ ಘೋಷಣೆಯನ್ನು ಮಾಡುವ ತುಟೀಫಲವನ್ನು ಎಡೆಬಿಡದೆ ಸಮರ್ಪಿಸೋಣ.” (ಇಬ್ರಿಯ 13:15, NW) ಪೌಲನು ಕೂಡಿಸುವುದು: “ಇದಲ್ಲದೆ ಒಳ್ಳೇದು ಮಾಡುವುದನ್ನೂ ಇತರರೊಂದಿಗೆ ವಿಷಯಗಳಲ್ಲಿ ಪಾಲಿಗರಾಗುವದನ್ನೂ ಮರೆಯಬೇಡಿರಿ; ಇವೇ ದೇವರಿಗೆ ಮೆಚ್ಚಿಕೆಯಾದ ಯಜ್ಞಗಳು.” (ಇಬ್ರಿಯ 13:16, NW) ನಮ್ಮ ಬಹಿರಂಗ ಸಾಕ್ಷಿಕಾರ್ಯವಲ್ಲದೆ, “ಒಳ್ಳೇದು ಮಾಡುವದನ್ನು” ನಾವು ಮರೆಯಬಾರದು. ಇದು ದೇವರಿಗೆ ಮೆಚ್ಚಿಕೆಯಾದ ಯಜ್ಞಗಳ ಒಂದು ಅಖಂಡ ಭಾಗವನ್ನು ರೂಪಿಸುತ್ತದೆ.

17 ಸಹಜವಾಗಿಯೇ ನಾವು, ಮಾನಸಿಕವಾಗಿ, ಆತ್ಮಿಕವಾಗಿ, ಶಾರೀರಿಕವಾಗಿ ಅಥವಾ ಭೌತಿಕವಾಗಿ ಕೊರತೆಯಲ್ಲಿರಬಹುದಾದ ನಮ್ಮ ಆತ್ಮಿಕ ಸಹೋದರರಿಗೆ ಒಳ್ಳೇದನ್ನು ಮಾಡುತ್ತೇವೆ. ಇದನ್ನು ಸೂಚಿಸುತ್ತಾ ಪೌಲನು ಬರೆದದ್ದು: “ಆದದರಿಂದ ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ. ಮುಖ್ಯವಾಗಿ ಒಂದೇ ಮನೆಯವರಂತಿರುವ ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” (ಗಲಾತ್ಯ 6:10; ಯಾಕೋಬ 2:15, 16) ಆದರೂ, “ಎಲ್ಲರಿಗೆ ಒಳ್ಳೇದನ್ನು ಮಾಡೋಣ” ಎಂಬ ಮಾತುಗಳನ್ನು ನಾವು ಮರೆಯಬಾರದು. ಒಬ್ಬ ಸಂಬಂಧಿಕನಿಗೆ, ಒಬ್ಬ ನೆರೆಯವನಿಗೆ, ಅಥವಾ ಒಬ್ಬ ಸಹೋದ್ಯೋಗಿಗೆ ಒಂದು ಉಪಕಾರವನ್ನು ಮಾಡುವುದು ನಮ್ಮ ವಿರುದ್ಧವಾದ ದುರಭಿಪ್ರಾಯವನ್ನು ತೆಗೆದುಹಾಕಲು ಮತ್ತು ಸತ್ಯದೆಡೆಗೆ ಆ ವ್ಯಕ್ತಿಯ ಹೃದಯವನ್ನು ತೆರೆಯಲು ಹೆಚ್ಚನ್ನು ಮಾಡಬಲ್ಲದು.

18. (ಎ) ಯಾವ ಅಪಾಯಗಳನ್ನು ನಾವು ವರ್ಜಿಸಬೇಕು? (ಬಿ) ನಮ್ಮ ಕ್ರಿಸ್ತೀಯ ಒಳ್ಳೇತನವನ್ನು ನಮ್ಮ ಬಹಿರಂಗ ಸಾಕ್ಷಿಕಾರ್ಯದ ಬೆಂಬಲಕ್ಕಾಗಿ ನಾವು ಹೇಗೆ ಉಪಯೋಗಿಸಬಲ್ಲೆವು?

18 ಇದನ್ನು ಮಾಡಲು ಹೊರಗಿನವರನ್ನು ಆಪ್ತ ಮಿತ್ರರನ್ನಾಗಿ ಮಾಡಿಕೊಳ್ಳುವ ಅಗತ್ಯವಿಲ್ಲ. ಅಂಥ ಸಹವಾಸಗಳು ಅಪಾಯಕಾರಿಯಾಗುವ ಶಕ್ಯತೆ ಇದೆ. (1 ಕೊರಿಂಥ 15:33) ಮತ್ತು ಲೋಕದೊಂದಿಗೆ ಸ್ನೇಹಿತರಾಗಿರುವ ಯಾವ ಉದ್ದೇಶವೂ ಅಲ್ಲಿಲ್ಲ. (ಯಾಕೋಬ 4:4) ಆದರೆ ನಮ್ಮ ಕ್ರಿಸ್ತೀಯ ಒಳ್ಳೇತನವು ನಮ್ಮ ಸಾರುವಿಕೆಗೆ ನೆರವಾಗಬಲ್ಲದು. ಕೆಲವು ದೇಶಗಳಲ್ಲಿ ಜನರೊಂದಿಗೆ ಅವರ ಮನೆಯಲ್ಲಿ ಮಾತನಾಡುವುದು ಅಧಿಕಾಧಿಕವಾಗಿ ಕಷ್ಟಕರವಾಗುತ್ತಾ ಬರುತ್ತಿದೆ. ಕೆಲವು ವಸತಿಗಳ ಕಟ್ಟಡಗಳು ಸಾಧನೋಪಾಯಗಳಿಂದ ರಕ್ಷಿಸಲ್ಪಟ್ಟಿರುವುದರಿಂದ ನಿವಾಸಿಗಳನ್ನು ಸಂಪರ್ಕಿಸುವುದರಿಂದ ನಮ್ಮನ್ನು ತಡೆಯುತ್ತವೆ. ವಿಕಸಿತ ದೇಶಗಳಲ್ಲಿ ಟೆಲಿಫೋನ್‌, ಸಾರುವಿಕೆಗಾಗಿ ಒಂದು ದಾರಿಯನ್ನು ನೀಡುತ್ತದೆ. ಹೆಚ್ಚಿನ ದೇಶಗಳಲ್ಲಿ ಬೀದಿ ಸಾಕ್ಷಿಕಾರ್ಯವನ್ನು ಮಾಡ ಸಾಧ್ಯವಿದೆ. ಆದರೂ, ಎಲ್ಲಾ ದೇಶಗಳಲ್ಲಿ, ಆಹ್ಲಾದಕರರೂ, ವಿನೀತರೂ, ದಯಾಪರರೂ, ಮತ್ತು ಸಹಾಯಕಾರಿಗಳೂ ಆಗಿರುವ ಮೂಲಕ, ದುರಭಿಪ್ರಾಯಗಳನ್ನು ಕೆಡವಿಹಾಕಲು ಮತ್ತು ಒಂದು ಒಳ್ಳೇ ಸಾಕ್ಷಿಯನ್ನು ಕೊಡಲು ಸಂದರ್ಭಗಳು ತೆರೆಯಲ್ಪಡುತ್ತವೆ.

ವಿರೋಧಿಗಳ ಬಾಯಿ ಮುಚ್ಚಿಸುವುದು

19. (ಎ) ನಾವು ಮನುಷ್ಯರನ್ನು ಮೆಚ್ಚಿಸುವವರಲ್ಲವಾದುದರಿಂದ, ಏನನ್ನು ನಾವು ನಿರೀಕ್ಷಿಸಬಹುದು? (ಬಿ) ನಾವು ದಾನಿಯೇಲನ ಮಾದರಿಯನ್ನು ಅನುಸರಿಸಲು ಮತ್ತು ಪೇತ್ರನ ಬುದ್ಧಿವಾದವನ್ನು ಅನ್ವಯಿಸಲು ಹೇಗೆ ಪ್ರಯತ್ನಿಸಬೇಕು?

19 ಯೆಹೋವನ ಸಾಕ್ಷಿಗಳು ಮನುಷ್ಯರನ್ನು ಮೆಚ್ಚಿಸುವವರೂ ಅಲ್ಲ, ಮನುಷ್ಯರಿಗೆ ಭಯಪಡುವವರೂ ಅಲ್ಲ. (ಜ್ಞಾನೋಕ್ತಿ 29:25; ಎಫೆಸ 6:6) ಆದರ್ಶಪ್ರಾಯ ತೆರಿಗೆ ಕೊಡುವವರೂ ಮತ್ತು ಒಳ್ಳೇ ನಾಗರಿಕರೂ ಆಗಿರುವ ಅವರ ಎಲ್ಲಾ ಪ್ರಯತ್ನಗಳ ನಡುವೆಯೂ, ವಿರೋಧಿಗಳು ಮತ್ಸರಯುಕ್ತ ಸುಳ್ಳುಗಳನ್ನು ಹಬ್ಬಿಸುವರು ಮತ್ತು ಅವರನ್ನು ಕಡೆಗಣಿಸಿ ಮಾತಾಡುವರೆಂದು ಅವರು ಪೂರ್ಣ ಬಲ್ಲವರಾಗಿದ್ದಾರೆ. (1 ಪೇತ್ರ 3:16) ಇದನ್ನು ತಿಳಿದವರಾಗಿ, ಅವರು ದಾನಿಯೇಲನನ್ನು ಅನುಕರಿಸಲು ಪ್ರಯತ್ನಿಸುತ್ತಾರೆ, ಅವನ ಕುರಿತು ಅವನ ಶತ್ರುಗಳು ಅಂದದ್ದು: “ದಾನಿಯೇಲನ ಮೇಲೆ ತಪ್ಪುಹೊರಿಸಲು ಇವನ ದೇವಧರ್ಮದ ಮೂಲಕವೇ ಹೊರತು ಇನ್ನಾವದರಲ್ಲಿಯೂ ನಮಗೆ ಅವಕಾಶ ದೊರೆಯದು.” (ದಾನಿಯೇಲ 6:5) ಮನುಷ್ಯರನ್ನು ಮೆಚ್ಚಿಸಲಿಕ್ಕಾಗಿ ಬೈಬಲ್‌ ತತ್ವಗಳ ವಿಷಯದಲ್ಲಿ ನಾವೆಂದೂ ಒಪ್ಪಂದವನ್ನು ಮಾಡೆವು. ಇನ್ನೊಂದು ಕಡೆ, ಧರ್ಮವೀರರಾಗಲು ನಾವು ಹುಡುಕುವುದೂ ಇಲ್ಲ. ಸಮಾಧಾನದಿಂದ ಜೀವಿಸಲು ಮತ್ತು ಅಪೊಸ್ತಲಿಕ ಬುದ್ಧಿವಾದವನ್ನು ಪಾಲಿಸಲು ನಾವು ಪ್ರಯತ್ನಿಸುತ್ತೇವೆ: “ತಿಳಿಯದೆ ಮಾತಾಡುವ ಮೂಢಜನರ ಬಾಯನ್ನು ನೀವು ಒಳ್ಳೇ ನಡತೆಯಿಂದ ಕಟ್ಟಬೇಕೆಂಬದೇ ದೇವರ ಚಿತ್ತ.”—1 ಪೇತ್ರ 2:15.

20. (ಎ) ಯಾವ ಮಂದಟ್ಟು ನಮಗಾಗಿಯದೆ, ಮತ್ತು ಯಾವ ಪ್ರೋತ್ಸಾಹನೆಯನ್ನು ಯೇಸು ನಮಗೆ ಕೊಟ್ಟಿದ್ದಾನೆ? (ಬಿ) ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆಯುತ್ತಾ ನಾವು ಹೇಗೆ ಮುಂದುವರಿಯಬಲ್ಲೆವು?

20 ಲೋಕದಿಂದ ಪ್ರತ್ಯೇಕತೆಯ ನಮ್ಮ ನಿಲುವು ಬೈಬಲಿನೊಂದಿಗೆ ಪೂರ್ಣ ಹೊಂದಿಕೆಯಲ್ಲಿದೆ ಎಂಬ ಮಂದಟ್ಟು ನಮಗಾಗಿದೆ. ಅದು ಮೊದಲನೆಯ ಶತಕದ ಕ್ರೈಸ್ತರ ಇತಿಹಾಸದಿಂದ ಬೆಂಬಲಿಸಲ್ಪಟ್ಟಿದೆ. ಯೇಸುವಿನ ಮಾತುಗಳಿಂದ ನಾವು ಹುರಿದುಂಬಿಸಲ್ಪಟ್ಟಿದ್ದೇವೆ: “ಲೋಕದಲ್ಲಿ ನಿಮಗೆ ಸಂಕಟ ಉಂಟು; ಧೈರ್ಯವಾಗಿರಿ, ನಾನು ಲೋಕವನ್ನು ಜಯಿಸಿದ್ದೇನೆ.” (ಯೋಹಾನ 16:33) ನಾವು ಹೆದರುವದಿಲ್ಲ. “ನೀವು ಒಳ್ಳೇದನ್ನೇ ಮಾಡುವದರಲ್ಲಿ ಆಸಕ್ತರಾಗಿದ್ದರೆ ನಿಮಗೆ ಕೇಡುಮಾಡುವವರು ಯಾರಿದ್ದಾರೆ? ಒಂದುವೇಳೆ ನೀತಿಯ ನಿಮಿತ್ತವೇ ಬಾಧೆಪಟ್ಟರೆ ನೀವು ಧನ್ಯರೇ. ಅವರ ಬೆದರಿಸುವಿಕೆಗೆ ಹೆದರದೆ ಕಳವಳಪಡದೆ ಕ್ರಿಸ್ತನನ್ನು ಕರ್ತನೆಂದು ನಿಮ್ಮ ಹೃದಯದಲ್ಲಿ ಪ್ರತಿಷ್ಠೆಪಡಿಸಿರಿ. ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರಕೊಡುವದಕ್ಕೆ ಯಾವಾಗಲೂ ಸಿದ್ಧವಾಗಿರಿ; ಆದರೆ ಅದನ್ನು ಸಾತ್ವಿಕತದ್ವಿಂದಲೂ ಮನೋಭೀತಿಯಿಂದಲೂ ಹೇಳಿರಿ.” (1 ಪೇತ್ರ 3:13-15) ಈ ರೀತಿಯಲ್ಲಿ ನಡೆದುಕೊಳ್ಳುವ ಮೂಲಕ ನಾವು ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆಯುತ್ತಾ ಮುಂದುವರಿಯುವೆವು.

ಪುನರ್ವಿಮರ್ಶೆಯ ತೆರದಲ್ಲಿ

▫ ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆಯುವ ಅಗತ್ಯ ಯೆಹೋವನ ಸಾಕ್ಷಿಗಳಿಗಿದೆಯೇಕೆ?

▫ ನಿಜ ಕ್ರೈಸ್ತರು ಲೋಕದಿಂದ ಪ್ರೀತಿಸಲ್ಪಡಲು ಎಂದೂ ನಿರೀಕ್ಷಿಸಲಾರರೇಕೆ, ಆದರೆ ಅವರೇನನ್ನು ಮಾಡಲು ಪ್ರಯತ್ನಿಸಬೇಕು?

▫ ಲೋಕದ ಜನರ ಕಡೆಗೆ ನಮ್ಮ ಮನೋಭಾವವು ಏನಾಗಿರಬೇಕು ಮತ್ತು ಏಕೆ?

▫ ನಮ್ಮ ಸಹೋದರರೆಡೆಗೆ ಮಾತ್ರವಲ್ಲ ಹೊರಗಿನವರ ಕಡೆಗೂ ನಾವು “ಒಳ್ಳೇದನ್ನು” ಮಾಡಬೇಕು ಯಾಕೆ?

▫ ಹೊರಗಿನವರೊಂದಿಗೆ ವಿವೇಕವುಳ್ಳವರಾಗಿ ನಡೆಯುವಿಕೆಯು ನಮ್ಮ ಬಹಿರಂಗ ಸಾಕ್ಷಿಕಾರ್ಯದಲ್ಲಿ ನಮಗೆ ಹೇಗೆ ಸಹಾಯವಾಗಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 29 ರಲ್ಲಿರುವ ಚಿತ್ರ]

ಎಡಕ್ಕೆ: ನಿಜ ಕ್ರೈಸ್ತರು ಫ್ರಾನ್ಸಿನಲ್ಲಿ ತಮ್ಮ ನೆರೆಯವರಿಗೆ ಒಂದು ನೆರೆಹಾವಳಿಯ ನಂತರ ಸಹಾಯ ಮಾಡುವುದು

[ಪುಟ 31 ರಲ್ಲಿರುವ ಚಿತ್ರ]

ಕ್ರಿಸ್ತೀಯ ದಯೆಯ ಕ್ರಿಯೆಗಳು ದುರಭಿಪ್ರಾಯವನ್ನು ಕೆಡವಲು ಹೆಚ್ಚನ್ನು ಮಾಡಬಲ್ಲವು

[ಪುಟ 34 ರಲ್ಲಿರುವ ಚಿತ್ರ]

ಕ್ರೈಸ್ತರು “ಸಕಲ ಸತ್ಕಾರ್ಯಗಳಿಗೆ ಸಿದ್ಧರಾಗಿರ” ಬೇಕು