ಯೌವನದಿಂದಲೇ ನಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದು
ಜೀವನ ಕಥೆ
ಯೌವನದಿಂದಲೇ ನಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳುವುದು
ಡೇವಿಡ್ ಝೆಡ್. ಹಿಬ್ಶ್‌ಮನ್ ಹೇಳಿದಂತೆ
“ಒಂದುವೇಳೆ ನಾನು ನನ್ನ ಜೀವಿತದ ಅಂತ್ಯಸ್ಥಿತಿಯನ್ನು ಮುಟ್ಟಿರುವಲ್ಲಿ, ನಾನು ಯೆಹೋವನಿಗೆ ನಂಬಿಗಸ್ತಳಾಗಿ ಉಳಿದಿದ್ದೇನೆ ಎಂದು ಆಶಿಸುತ್ತೇನೆ. ನನ್ನ ಡೇವಿಡ್‌ನನ್ನು ನೋಡಿಕೊಳ್ಳುವಂತೆ ನಾನು ಯೆಹೋವನಿಗೆ ಬೇಡಿಕೊಳ್ಳುತ್ತೇನೆ. ಯೆಹೋವನೇ, ಡೇವಿಡ್‌ನನ್ನು ನನ್ನ ಪತಿಯಾಗಿ ಮಾಡಿದ್ದಕ್ಕೂ ಅದ್ಭುತಕರವಾದ ಹಾಗೂ ಸಂತೋಷಭರಿತವಾದ ನಮ್ಮ ವಿವಾಹ ಜೀವನಕ್ಕೂ ನಿನಗೆ ತುಂಬ ಉಪಕಾರ.”
ನಾನು 1992ರ ಮಾರ್ಚ್ ತಿಂಗಳಿನಲ್ಲಿ ನನ್ನ ಪತ್ನಿಯ ಶವಸಂಸ್ಕಾರವನ್ನು ಮುಗಿಸಿದ ಬಳಿಕ, ಅವಳ ಡೈರಿಯಲ್ಲಿ ಈ ಕೊನೆಯ ಹೇಳಿಕೆಯನ್ನು ಕಂಡಾಗ ನನಗಾದ ಅನಿಸಿಕೆಯನ್ನು ಊಹಿಸಿಕೊಳ್ಳಿರಿ. ಐದು ತಿಂಗಳ ಹಿಂದೆಯಷ್ಟೇ ನಾವು ಹೆಲನಳ ಪೂರ್ಣ ಸಮಯದ ಶುಶ್ರೂಷೆಯ 60ನೆಯ ವಾರ್ಷಿಕೋತ್ಸವವನ್ನು ಆಚರಿಸಿದ್ದೆವು.
1931ರಲ್ಲಿ ನಡೆದ ಅಮೆರಿಕದ ಒಹಾಯೋದ ಕೊಲಂಬಸ್ ಅಧಿವೇಶನದಲ್ಲಿ ಒಂದು ದಿನ ನಾನೂ ಹೆಲನಳೂ ಅಕ್ಕಪಕ್ಕವೇ ಕುಳಿತುಕೊಂಡಿದ್ದದ್ದು ನನಗೆ ಇನ್ನೂ ನೆನಪಿದೆ. ಆಗ ಹೆಲನಳಿಗೆ ಇನ್ನೂ 14 ವರ್ಷ ತುಂಬಿರಲಿಲ್ಲ, ಆದರೂ ಅವಳು ನನಗಿಂತಲೂ ಹೆಚ್ಚಾಗಿ ಆ ಅಧಿವೇಶನದ ಮಹತ್ವವನ್ನು ಗಣ್ಯಮಾಡಿದಳು. ತದನಂತರ ಸ್ವಲ್ಪದರಲ್ಲೇ ಹೆಲನಳೂ ಅವಳ ವಿಧವೆ ತಾಯಿಯೂ ಪಯನೀಯರರಾದಾಗ—ಯೆಹೋವನ ಸಾಕ್ಷಿಗಳ ನಡುವೆ ಪೂರ್ಣ ಸಮಯದ ಸೌವಾರ್ತಿಕರನ್ನು ಹೀಗೆ ಕರೆಯಲಾಗುತ್ತದೆ—ಶುಶ್ರೂಷೆಯ ಕಡೆಗಿದ್ದ ಹೆಲನಳ ಹುರುಪು ತೋರಿಬಂತು. ದಕ್ಷಿಣ ಅಮೆರಿಕದ ಗ್ರಾಮೀಣ ಪ್ರದೇಶಗಳಲ್ಲಿ ಸುವಾರ್ತೆಯನ್ನು ಸಾರಲಿಕ್ಕಾಗಿ ಅವರು ಸುಖಸೌಕರ್ಯಗಳಿಂದ ಕೂಡಿದ ತಮ್ಮ ಮನೆಯನ್ನು ತೊರೆದರು.
ನನ್ನ ಕ್ರೈಸ್ತ ಪರಂಪರೆ
1910ರಲ್ಲಿ ನನ್ನ ಹೆತ್ತವರು ತಮ್ಮ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಪೂರ್ವ ಪೆನ್ಸಿಲ್ವೇನಿಯದಿಂದ ಆ ದೇಶದ ಪಶ್ಚಿಮ ಭಾಗದಲ್ಲಿದ್ದ ಗ್ರೋವ್ ಸಿಟಿಗೆ ಸ್ಥಳಾಂತರಿಸಿದರು. ಅಲ್ಲಿ ಅವರು ನಗದು ಪಾವತಿಮಾಡಿ ಸಾಧಾರಣವಾದ ಒಂದು ಮನೆಯನ್ನು ಖರೀದಿಸಿದರು ಮತ್ತು ರಿಫಾರ್ಮ್‌ಡ್ ಚರ್ಚಿನ ಕ್ರಿಯಾಶೀಲ ಸದಸ್ಯರಾದರು. ತದನಂತರ ಸ್ವಲ್ಪದರಲ್ಲೇ ವಿಲಿಯಮ್ ಎವನ್ಸ್ ಎಂಬ ಒಬ್ಬ ಬೈಬಲ್ ವಿದ್ಯಾರ್ಥಿಯು—ಆಗ ಯೆಹೋವನ ಸಾಕ್ಷಿಗಳನ್ನು ಹೀಗೆಂದು ಕರೆಯಲಾಗುತ್ತಿತ್ತು—ಅವರನ್ನು ಭೇಟಿಯಾದನು. ಆಗ ನಮ್ಮ ತಂದೆಯವರು ತಮ್ಮ 25ರಿಂದ 30 ವರ್ಷಪ್ರಾಯದವರಾಗಿದ್ದರು ಮತ್ತು ತಾಯಿಯವರು ಅವರಿಗಿಂತ ಐದು ವರ್ಷ ಚಿಕ್ಕವರಾಗಿದ್ದರು; ಇವರಿಬ್ಬರೂ ವೇಲ್ಸಿನ ಈ ಸ್ನೇಹಪರ ವ್ಯಕ್ತಿಗೆ ಕಿವಿಗೊಟ್ಟರು ಮತ್ತು ತಮ್ಮ ಮನೆಗೆ ಊಟಕ್ಕೆ ಬರುವಂತೆ ಅವನನ್ನು ಆಹ್ವಾನಿಸಿದರು. ಬೇಗನೆ ಅವರು ಸತ್ಯವನ್ನು ತಮ್ಮದಾಗಿ ಮಾಡಿಕೊಂಡರು.
ಸಭೆಯ ಸಮೀಪವೇ ಇರಬೇಕೆಂದು ಬಯಸಿದ ತಂದೆಯವರು ನಮ್ಮ ಕುಟುಂಬವನ್ನು 40 ಕಿಲೊಮೀಟರ್ ದೂರದಲ್ಲಿದ್ದ ಶ್ಯಾರನ್
ಪಟ್ಟಣಕ್ಕೆ ಸ್ಥಳಾಂತರಿಸಿದರು. ಕೆಲವು ತಿಂಗಳುಗಳ ಬಳಿಕ, ಅಂದರೆ 1911 ಅಥವಾ 1912ರಲ್ಲಿ ನಮ್ಮ ತಂದೆತಾಯಿಯವರು ದೀಕ್ಷಾಸ್ನಾನವನ್ನು ಪಡೆದುಕೊಂಡರು. ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾಗಿದ್ದ ಚಾರ್ಲ್ಸ್ ಟೇಸ್ ರಸ್ಸಲರು ದೀಕ್ಷಾಸ್ನಾನದ ಭಾಷಣವನ್ನು ಕೊಟ್ಟರು. 1916ರ ಡಿಸೆಂಬರ್ 4ರಂದು ನಾನು ಜನಿಸಿದೆ; ಅಷ್ಟರಲ್ಲೇ ನನ್ನ ಹೆತ್ತವರಿಗೆ ನಾಲ್ಕು ಮಕ್ಕಳಿದ್ದರು. ನಾನು ಹುಟ್ಟಿದಾಗ “ಪ್ರೀತಿಸಲ್ಪಡಲಿಕ್ಕಾಗಿ ಇನ್ನೊಬ್ಬ ತಮ್ಮ” ಎಂದು ಘೋಷಿಸಲಾಯಿತು. ಆದುದರಿಂದಲೇ ನನ್ನ ಹೆಸರು ಡೇವಿಡ್ ಎಂದಾಗಿದೆ—ಅಂದರೆ “ಅತಿಪ್ರಿಯನು.”ನಾನು ನಾಲ್ಕು ವಾರದ ಮಗುವಾಗಿದ್ದಾಗ, ಪ್ರಥಮ ಬಾರಿ ನನ್ನನ್ನು ಅಧಿವೇಶನಕ್ಕೆ ಕರೆದೊಯ್ಯಲಾಯಿತು. ಆ ದಿನಗಳಲ್ಲಿ ಕೂಟಗಳಿಗೆ ಹೋಗಲಿಕ್ಕಾಗಿ ನನ್ನ ತಂದೆ ಹಾಗೂ ಅಣ್ಣಂದಿರು ಅನೇಕ ಕಿಲೊಮೀಟರುಗಳಷ್ಟು ದೂರ ನಡೆಯಬೇಕಿತ್ತು. ಆದರೆ ನನ್ನ ತಾಯಿಯವರು ನನ್ನ ಅಕ್ಕನನ್ನೂ ನನ್ನನ್ನೂ ಸ್ಟ್ರೀಟ್‌ಕಾರ್‌ನಲ್ಲಿ ಕರೆದೊಯ್ಯುತ್ತಿದ್ದರು. ಈ ಕೂಟಗಳಲ್ಲಿ ಬೆಳಗ್ಗಿನ ಹಾಗೂ ಮಧ್ಯಾಹ್ನದ ಸೆಷನ್‌ಗಳು ಇರುತ್ತಿದ್ದವು. ಮನೆಯಲ್ಲಿ ನಮ್ಮ ಸಂಭಾಷಣೆಗಳು ಹೆಚ್ಚಾಗಿ ಕಾವಲಿನಬುರುಜು ಮತ್ತು ದ ಗೋಲ್ಡನ್ ಏಜ್ ಎಂದು ಕರೆಯಲ್ಪಡುತ್ತಿದ್ದ ಎಚ್ಚರ! ಪತ್ರಿಕೆಯ ಲೇಖನಗಳ ಮೇಲೆ ಕೇಂದ್ರೀಕೃತವಾಗಿರುತ್ತಿತ್ತು.
ಅತ್ಯುತ್ತಮ ಮಾದರಿಗಳಿಂದ ಪ್ರಯೋಜನವನ್ನು ಪಡೆದುಕೊಳ್ಳುವುದು
ಆಗ ಪಿಲ್‌ಗ್ರಿಮ್ಸ್ ಎಂದು ಕರೆಯಲ್ಪಡುತ್ತಿದ್ದ ಸಂಚಾರ ಭಾಷಣಕರ್ತರು ನಮ್ಮ ಸಭೆಯನ್ನು ಸಂದರ್ಶಿಸುತ್ತಿದ್ದರು. ಸಾಮಾನ್ಯವಾಗಿ ಅವರು ಒಂದೆರಡು ದಿನಗಳ ವರೆಗೆ ನಮ್ಮೊಂದಿಗಿರುತ್ತಿದ್ದರು. ನನ್ನ ನೆನಪಿನಲ್ಲಿ ಇನ್ನೂ ಅಚ್ಚಳಿಯದೆ ಇರುವ ಭಾಷಣಕರ್ತರು ವಾಲ್ಟರ್ ಜೆ. ಥಾರ್ನ್ ಆಗಿದ್ದರು. ಅವರು ‘ಯೌವನದಲ್ಲಿಯೇ’ ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಂಡಿದ್ದರು. (ಪ್ರಸಂಗಿ 12:1) ನಾನು ಚಿಕ್ಕ ಹುಡುಗನಾಗಿದ್ದಾಗಲೇ “ಫೋಟೋ-ಡ್ರಾಮಾ ಆಫ್ ಕ್ರಿಯೇಷನ್” ಎಂದು ಕರೆಯಲ್ಪಟ್ಟ, ಮಾನವಕುಲದ ಇತಿಹಾಸದ ಕುರಿತಾದ ನಾಲ್ಕು ಭಾಗದಿಂದ ಕೂಡಿದ ದೃಶ್ಯ ಹಾಗೂ ರೆಕಾರ್ಡ್ ಮಾಡಲ್ಪಟ್ಟ ನಿರೂಪಣೆಯನ್ನು ತೋರಿಸಲು ತಂದೆಯವರೊಂದಿಗೆ ಹೋಗಿದ್ದೆ.
ಸಹೋದರ ಎವನ್ಸ್ ಮತ್ತು ಅವರ ಹೆಂಡತಿಯಾದ ಮಿರ್ಯಮ್‌ರಿಗೆ ಮಕ್ಕಳಿರಲಿಲ್ಲವಾದರೂ, ಅವರು ನಮ್ಮ ಕುಟುಂಬಕ್ಕೆ ಆತ್ಮಿಕ ಹೆತ್ತವರೂ ಅಜ್ಜಅಜ್ಜಿಯೂ ಆದರು. ವಿಲಿಯಮ್‌ರವರು ಯಾವಾಗಲೂ ನನ್ನ ತಂದೆಯನ್ನು “ಮಗನೇ” ಎಂದು ಸಂಬೋಧಿಸುತ್ತಿದ್ದರು. ಅವರು ಹಾಗೂ ಮಿರ್ಯಮರು ನಮ್ಮ ಕುಟುಂಬದಲ್ಲಿ ಸೌವಾರ್ತಿಕ ಮನೋಭಾವವನ್ನು ಬೇರೂರಿಸಿದರು. 20ನೆಯ ಶತಮಾನದ ಆದಿ ಭಾಗದಲ್ಲಿ, ಸ್ವಾನ್‌ಸೀ ಕ್ಷೇತ್ರದಲ್ಲಿ ಬೈಬಲ್ ಸತ್ಯತೆಯನ್ನು ಪರಿಚಯಿಸಲಿಕ್ಕಾಗಿ ಸಹೋದರ ಎವನ್ಸ್ ವೇಲ್ಸ್‌ಗೆ ಪ್ರಯಾಣಿಸಿದರು. ಅಲ್ಲಿ ಅವರು ಅಮೆರಿಕದಿಂದ ಬಂದ ಉಪದೇಶಿ ಎಂಬ ಪ್ರಸಿದ್ಧಿಯನ್ನು ಪಡೆದರು.
1928ರಲ್ಲಿ ಸಹೋದರ ಎವನ್ಸ್ ತಮ್ಮ ಉದ್ಯೋಗವನ್ನು ಬಿಟ್ಟು, ವೆಸ್ಟ್ ವರ್ಜಿನಿಯದ ಗುಡ್ಡಪ್ರದೇಶಗಳಲ್ಲಿ ಸುವಾರ್ತೆಯನ್ನು ಸಾರಲು ಆರಂಭಿಸಿದರು. 21 ವರ್ಷ ಪ್ರಾಯದ ಕ್ಲ್ಯಾರನ್ಸ್ ಮತ್ತು 19 ವರ್ಷ ಪ್ರಾಯದ ಕಾರ್ಲ್ ಎಂಬ ನನ್ನ ಅಣ್ಣಂದಿರಿಬ್ಬರು ಅವರ ಜೊತೆಗೆ ಹೋದರು. ನಮ್ಮಲ್ಲಿ ನಾಲ್ಕು ಮಂದಿ ಹುಡುಗರು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಅನೇಕ ವರ್ಷಗಳನ್ನು ಕಳೆದೆವು. ವಾಸ್ತವದಲ್ಲಿ, ನಮ್ಮ ಯೌವನದಲ್ಲೇ ನಾವೆಲ್ಲರೂ ಯೆಹೋವನ ಸಾಕ್ಷಿಗಳ ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಿದೆವು. 90ಗಳ ಪ್ರಾಯದಲ್ಲಿರುವ ನನ್ನ ತಾಯಿಯ ಕಿರಿಯ ತಂಗಿ ಮೇರಿಯವರು ಸ್ವಲ್ಪ ಸಮಯದ ಹಿಂದೆ ನನಗೆ ಹೀಗೆ ಪತ್ರ ಬರೆದರು: “ಸಹೋದರ ಎವನ್ಸ್‌ರಿಗೆ ಶುಶ್ರೂಷೆಯ ವಿಷಯದಲ್ಲಿ ಬಹಳ ಹುರುಪು ಇದ್ದದ್ದಕ್ಕಾಗಿ ಹಾಗೂ ಅವರು ಗ್ರೋವ್ ಸಿಟಿಯನ್ನು ಸಂದರ್ಶಿಸಿದ್ದಕ್ಕಾಗಿ ನಾವೆಲ್ಲರೂ ಎಷ್ಟು ಕೃತಜ್ಞರಾಗಿದ್ದೇವೆ!” ಮೇರಿ ಚಿಕ್ಕಮ್ಮ ಸಹ ತಮ್ಮ ಯೌವನದಲ್ಲೇ ಸೃಷ್ಟಿಕರ್ತನನ್ನು ಸ್ಮರಿಸಿಕೊಂಡಿರುವವರಲ್ಲಿ ಒಬ್ಬರಾಗಿದ್ದಾರೆ.
ಅಧಿವೇಶನಗಳಿಗೆ ಹಾಜರಾಗುವುದು
1922ರಲ್ಲಿ ನಡೆದ ಇತಿಹಾಸ ಪ್ರಸಿದ್ಧವಾದ ಒಹಾಯೋದ ಸೀಡರ್ ಪಾಯಿಂಟ್ ಅಧಿವೇಶನಕ್ಕೆ ನನ್ನ ತಂದೆಯವರಿಗೆ ಹಾಗೂ ಕ್ಲ್ಯಾರನ್ಸ್‌ಗೆ ಮಾತ್ರ ಹಾಜರಾಗಲು ಸಾಧ್ಯವಾಯಿತು. ಆದರೂ 1924ರಷ್ಟಕ್ಕೆ ನಮ್ಮ ಬಳಿ ಒಂದು ವಾಹನವಿತ್ತು ಮತ್ತು ನಮ್ಮ ಇಡೀ ಕುಟುಂಬವು ಒಹಾಯೋದ ಕೊಲಂಬಸ್ ಅಧಿವೇಶನಕ್ಕೆ ಹೋಗಲು ಸಾಧ್ಯವಾಯಿತು. ಮಕ್ಕಳಾದ ನಾವೆಲ್ಲರೂ ಸ್ವಲ್ಪ ಹಣವನ್ನು ಒಟ್ಟುಗೂಡಿಸಿಕೊಂಡು, ಎಂಟು ದಿನದ ಅಧಿವೇಶನದ ಸಮಯದಲ್ಲಿ ನಮ್ಮ ಊಟದ ಖರ್ಚನ್ನು ನಾವೇ ನಿಭಾಯಿಸುವಂತೆ ನಮ್ಮಿಂದ ನಿರೀಕ್ಷಿಸಲಾಗಿತ್ತು. ಕುಟುಂಬದ ಎಲ್ಲ ಸದಸ್ಯರು ತಮ್ಮ ಕಾಲ ಮೇಲೆ ತಾವು ಸ್ವತಂತ್ರರಾಗಿ ನಿಲ್ಲಬೇಕು ಎಂಬುದು ನನ್ನ ಹೆತ್ತವರ ಅಭಿಪ್ರಾಯವಾಗಿತ್ತು. ಆದುದರಿಂದ ನಾವು ಕೋಳಿಮರಿಗಳನ್ನು ಮತ್ತು ಮೊಲಗಳನ್ನು ಸಾಕುತ್ತಿದ್ದೆವು, ಹಾಗೂ ಜೇನುಗೂಡುಗಳನ್ನು ಸಹ ಇಟ್ಟುಕೊಂಡಿದ್ದೆವು. ಅಷ್ಟುಮಾತ್ರವಲ್ಲ, ಹುಡುಗರಾದ ನಾವೆಲ್ಲರೂ ವಾರ್ತಾಪತ್ರಿಕೆಗಳನ್ನು ಹಂಚುವ ಮೂಲಕ ಹಣವನ್ನು ಕೂಡಿಸುತ್ತಿದ್ದೆವು.
1927ರಲ್ಲಿ ಕೆನಡದ, ಟೊರಾಂಟೊ ಅಧಿವೇಶನವು ನಡೆಯುವ ಸಮಯ ಹತ್ತಿರ ಬಂದಾಗ, ನಮ್ಮ ಜೊತೆ ಆರು ತಿಂಗಳ ತಮ್ಮನಾದ ಪಾಲ್ ಇದ್ದನು. ಆದುದರಿಂದ, ನನ್ನ ಹೆತ್ತವರು ಹಾಗೂ ಇತರ ಮಕ್ಕಳು ಟೊರಾಂಟೊಗೆ ಹೋದಾಗ, ನಾನು ಮನೆಯಲ್ಲೇ ಉಳಿದು ನನ್ನ ವಿವಾಹಿತ ಚಿಕ್ಕಮ್ಮನ ಸಹಾಯದಿಂದ ಪಾಲ್‌ನನ್ನು
ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲೆ ಬಿತ್ತು. ಇದಕ್ಕಾಗಿ ನನಗೆ ಹತ್ತು ಡಾಲರ್ ಇನಾಮು ಸಿಕ್ಕಿತು, ಮತ್ತು ಒಂದು ಹೊಸ ಸೂಟ್ ಅನ್ನು ಖರೀದಿಸಲಿಕ್ಕಾಗಿ ನಾನು ಅದನ್ನು ಉಪಯೋಗಿಸಿದೆ. ಕೂಟಗಳಿಗೆ ಹೋಗುವಾಗ ಒಳ್ಳೆಯ ಬಟ್ಟೆಗಳನ್ನು ಧರಿಸುವಂತೆ ಹಾಗೂ ನಮ್ಮ ಬಟ್ಟೆಯ ವಿಷಯದಲ್ಲಿ ಜಾಗ್ರತೆ ವಹಿಸುವಂತೆ ನಮಗೆ ಯಾವಾಗಲೂ ತರಬೇತಿ ಕೊಡಲಾಗುತ್ತಿತ್ತು.1931ರಲ್ಲಿ ಒಹಾಯೋದ ಕೊಲಂಬಸ್‌ನಲ್ಲಿನ ಸ್ಮರಣೀಯ ಅಧಿವೇಶನದ ಸಮಯದಷ್ಟಕ್ಕೆ, ಕ್ಲ್ಯಾರನ್ಸ್ ಮತ್ತು ಕಾರ್ಲ್ ಮದುವೆಯಾಗಿದ್ದರು ಹಾಗೂ ತಮ್ಮ ಪತ್ನಿಯರೊಂದಿಗೆ ಪಯನೀಯರ್ ಸೇವೆಯನ್ನು ಮಾಡುತ್ತಿದ್ದರು. ಅವರಿಬ್ಬರೂ ಗೃಹನಿರ್ಮಿತ ಸಂಚಾರಿ ಮನೆಯಲ್ಲಿ ವಾಸಿಸುತ್ತಿದ್ದರು. ವೆಸ್ಟ್ ವರ್ಜಿನಿಯದ ವೀಲಿಂಗ್‌ನ ಕ್ಲ್ಯಾರ್ ಹ್ಯೂಸ್ಟನ್‌ಳನ್ನು ಕಾರ್ಲ್ ಮದುವೆಯಾಗಿದ್ದನು. ಆದುದರಿಂದಲೇ ನಾನು ಕೊಲಂಬಸ್ ಅಧಿವೇಶನದಲ್ಲಿ ಕ್ಲ್ಯಾರ್‌ಳ ತಂಗಿಯಾಗಿದ್ದ ಹೆಲನಳ ಪಕ್ಕ ಕುಳಿತುಕೊಂಡಿದ್ದೆ.
ಪೂರ್ಣ ಸಮಯದ ಶುಶ್ರೂಷೆ
1932ರಲ್ಲಿ, ಅಂದರೆ ನಾನು 15 ವರ್ಷದವನಾಗಿದ್ದಾಗ ಪ್ರೌಢ ಶಾಲೆಯಿಂದ ತೇರ್ಗಡೆಯಾದೆ. ಮರು ವರ್ಷ ನಾನು ಸೌತ್ ಕ್ಯಾರೊಲೈನದಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ನನ್ನ ಅಣ್ಣನಾದ ಕ್ಲ್ಯಾರನ್ಸ್‌ಗೆ ಒಂದು ಹಳೆಯ ಕಾರನ್ನು ಕೊಟ್ಟು ಬರಲು ಹೋಗಿದ್ದೆ. ಆಗ ನಾನು ಪಯನೀಯರ್ ಸೇವೆಗೆ ಅರ್ಜಿಯನ್ನು ಹಾಕಿ, ಕ್ಲ್ಯಾರನ್ಸ್ ಹಾಗೂ ಅವನ ಪತ್ನಿಯೊಂದಿಗೆ ಸೇವೆಯನ್ನು ಆರಂಭಿಸಿದೆ. ಆಗ ಹೆಲನ್ ಕೆಂಟಕಿಯ ಹಾಪ್‌ಕಿನ್ಸ್‌ವಿಲ್‌ನಲ್ಲಿ ಪಯನೀಯರ್ ಸೇವೆಯನ್ನು ಮಾಡುತ್ತಿದ್ದಳು, ಮತ್ತು ಮೊದಲ ಬಾರಿ ನಾನು ಅವಳಿಗೆ ಪತ್ರವನ್ನು ಬರೆದೆ. ತನ್ನ ಪತ್ರದಲ್ಲಿ ಅವಳು ವಿಚಾರಿಸಿದ್ದು: “ನೀನು ಒಬ್ಬ ಪಯನೀಯರನೊ?”
ಅದಕ್ಕೆ ಪ್ರತ್ಯುತ್ತರವಾಗಿ ಬರೆದ ಪತ್ರದಲ್ಲಿ—ಸುಮಾರು 60 ವರ್ಷಗಳ ವರೆಗೆ, ಅಂದರೆ ತನ್ನ ಮರಣದ ತನಕವೂ ಹೆಲನ್ ಆ ಪತ್ರವನ್ನು ಇಟ್ಟುಕೊಂಡಿದ್ದಳು—ನಾನು ಉತ್ತರಿಸಿದ್ದು: “ಹೌದು, ನಾನು ಪಯನೀಯರನಾಗಿದ್ದೇನೆ ಮತ್ತು ಯಾವಾಗಲೂ ಪಯನೀಯರನಾಗಿಯೇ ಇರಲು ಬಯಸುತ್ತೇನೆ.” ನನ್ನ ಸಾರುವ ಕ್ಷೇತ್ರದಲ್ಲಿರುವ ಪಾದ್ರಿಗಳಿಗೆ ಹಾಗೂ ನ್ಯಾಯಾಧಿಕಾರಿಗಳಿಗೆ, ರಾಜ್ಯ, ಲೋಕದ ನಿರೀಕ್ಷೆ (ಇಂಗ್ಲಿಷ್) ಎಂಬ ಪುಸ್ತಿಕೆಯನ್ನು ಹಂಚಿದ್ದರ ಕುರಿತು ಆ ಪತ್ರದಲ್ಲಿ ನಾನು ಹೆಲನಳಿಗೆ ಬರೆದಿದ್ದೆ.
1933ರಲ್ಲಿ, ತಂದೆಯವರು ನನಗೋಸ್ಕರ ಒಂದು ಸಂಚಾರಿ ಗುಡಾರವನ್ನು ಕಟ್ಟಿದರು. ಅದು ಎರಡೂವರೆ ಮೀಟರ್‌ಗಳಷ್ಟು ಉದ್ದವೂ ಎರಡು ಮೀಟರ್‌ಗಳಷ್ಟು ಅಗಲವೂ ಇತ್ತು. ಇದು ನೇರವಾದ ಕಂಬಗಳ ಮಧ್ಯೆ ರಟ್ಟರಿವೆಗಳಿಂದ ಕಟ್ಟಲ್ಪಟ್ಟ ಗೋಡೆಯುಳ್ಳ ಒಂದು ಬಂಡಿಯಾಗಿದ್ದು, ಅದಕ್ಕೆ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ಕಿಟಕಿಗಳಿದ್ದವು. ಮುಂದಿನ ನಾಲ್ಕು ವರ್ಷಗಳ ಪಯನೀಯರ್ ಸೇವೆಯ ಸಮಯದಲ್ಲಿ ಅದೇ ನನ್ನ ಬೀಡಾಗಿತ್ತು.
1934ರ ಮಾರ್ಚ್ ತಿಂಗಳಿನಲ್ಲಿ, ಕ್ಲ್ಯಾರನ್ಸ್ ಹಾಗೂ ಕಾರ್ಲ್, ಅವರ ಪತ್ನಿಯರು, ಹೆಲನ್ ಹಾಗೂ ಅವಳ ತಾಯಿ, ಕ್ಲ್ಯಾರನ್ಸ್‌ನ ಚಿಕ್ಕ ನಾದಿನಿ ಹಾಗೂ ನಾನು—ಒಟ್ಟು ಎಂಟು ಮಂದಿ—ಕ್ಯಾಲಿಫೋರ್ನಿಯದ ಲಾಸ್ ಆ್ಯಂಜಲಿಸ್‌ನಲ್ಲಿ ನಡೆದ ಅಧಿವೇಶನಕ್ಕೆ ಹಾಜರಾಗಲಿಕ್ಕಾಗಿ ಪಶ್ಚಿಮದ ಕಡೆಗೆ ಹೊರಟೆವು. ಕೆಲವರು ನನ್ನ ಬಂಡಿಯಲ್ಲೇ ಪ್ರಯಾಣಿಸಿದರು ಮತ್ತು ಅದರಲ್ಲೇ ಮಲಗಿದರು. ನಾನು ಕಾರ್‌ನಲ್ಲಿ ಮಲಗಿದೆ, ಇನ್ನಿತರರು ಕೊಠಡಿಗಳನ್ನು ಬಾಡಿಗೆಗೆ ತೆಗೆದುಕೊಂಡರು. ನಮಗೆ ಕಾರ್‌ನ ಸಮಸ್ಯೆಯಿದ್ದುದರಿಂದ, ಆರು ದಿನದ ಅಧಿವೇಶನದ ಎರಡನೆಯ ದಿನದಂದು ನಾವು ಲಾಸ್ ಆ್ಯಂಜಲಿಸ್‌ಗೆ ಬಂದು ಮುಟ್ಟಿದೆವು. ಅಲ್ಲಿ, ಮಾರ್ಚ್ 26ರಂದು ಹೆಲನ್ ಹಾಗೂ ನಾನು ಕೊನೆಗೂ ಯೆಹೋವನಿಗೆ ನಮ್ಮ ಸಮರ್ಪಣೆಯನ್ನು ನೀರಿನ ದೀಕ್ಷಾಸ್ನಾನದ ಮೂಲಕ ಸಂಕೇತಿಸಲು ಶಕ್ತರಾದೆವು.
ಅಧಿವೇಶನದಲ್ಲಿ ಆಗ ವಾಚ್ ಟವರ್ ಸೊಸೈಟಿಯ ಅಧ್ಯಕ್ಷರಾಗಿದ್ದ ಜೋಸೆಫ್ ಎಫ್. ರದರ್‌ಫರ್ಡರು ಎಲ್ಲ ಪಯನೀಯರರನ್ನು ವೈಯಕ್ತಿಕವಾಗಿ ಸಂಧಿಸಿದರು. ನೀವು ಬೈಬಲ್ ಸತ್ಯದ ಕೆಚ್ಚೆದೆಯ ಹೋರಾಟಗಾರರಾಗಿದ್ದೀರಿ ಎಂದು ಹೇಳುವ ಮೂಲಕ ಅವರು ನಮ್ಮನ್ನು ಉತ್ತೇಜಿಸಿದರು. ಆ ಸಂದರ್ಭದಲ್ಲಿ, ಪಯನೀಯರರು ತಮ್ಮ ಶುಶ್ರೂಷೆಯಲ್ಲಿ ಮುಂದುವರಿಯಸಾಧ್ಯವಾಗುವಂತೆ ಅವರಿಗೆ ಹಣಕಾಸಿನ ಸಹಾಯವನ್ನು ಕೊಡುವ ಏರ್ಪಾಡು ಮಾಡಲ್ಪಟ್ಟಿತು.
ಜೀವಕ್ಕಾಗಿ ಶಿಕ್ಷಣ
ಲಾಸ್ ಆ್ಯಂಜಲಿಸ್‌ನ ಅಧಿವೇಶನದಿಂದ ನಾವು ಹಿಂದಿರುಗಿದಾಗ, ಸೌತ್ ಕ್ಯಾರೊಲೈನ, ವರ್ಜಿನಿಯ, ವೆಸ್ಟ್ ವರ್ಜಿನಿಯ, ಮತ್ತು ಕೆಂಟಕಿಯ ಇಡೀ ಪ್ರಾಂತಗಳ ಜನರಿಗೆ ನಾವೆಲ್ಲರೂ ರಾಜ್ಯ ಸಂದೇಶವನ್ನು ಸಾರಿದೆವು. ವರ್ಷಗಳಾನಂತರ ಆ ಸಮಯದ ಕುರಿತಾಗಿ ಹೆಲನಳು ಬರೆದುದು: “ಆ ಸಮಯದಲ್ಲಿ ಬೆಂಬಲವನ್ನು ಪಡೆದುಕೊಳ್ಳಲು ಯಾವ ಸಭೆಯೂ ಇರಲಿಲ್ಲ, ಸಹಾಯಕ್ಕಾಗಿ ಸ್ನೇಹಿತರಿರಲಿಲ್ಲ, ಏಕೆಂದರೆ ಒಂದು ಅಪರಿಚಿತ ಪ್ರದೇಶದಲ್ಲಿ ನಾವು ಸಹ ಅಪರಿಚಿತರಾಗಿದ್ದೆವು. ಆದರೆ ಆಗ ನಾನು ಒಂದು ರೀತಿಯ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದೆ ಎಂಬುದು ಈಗ ನನಗೆ ಗೊತ್ತು. ಈ ರೀತಿಯಲ್ಲಿ ನಾನು ಸಂಪದ್ಭರಿತಳಾಗುತ್ತಿದ್ದೆ.”
ಅವಳು ಕೇಳಿದ್ದು: “ತನ್ನ ಸ್ನೇಹಿತರಿಂದ ಹಾಗೂ ಸಂಬಂಧಿಕರಿಂದ ದೂರವಿರುವಾಗ ಒಬ್ಬ ಯುವತಿಯು ಹೇಗೆ ಸಮಯ ಕಳೆಯಬಲ್ಲಳು? ಆದರೆ ಸನ್ನಿವೇಶವು ಅಷ್ಟೇನೂ ಅಹಿತಕರವಾಗಿರಲಿಲ್ಲ. ಆ ಸಮಯದಲ್ಲಿ ನನಗೆ ಎಂದೂ ಬೇಸರವಾಗಲಿಲ್ಲ ಎಂಬುದು ನನಗಿನ್ನೂ ನೆನಪಿದೆ. ನಾನು ತುಂಬ ಓದುತ್ತಿದ್ದೆ. ನಮ್ಮ ಬೈಬಲ್ ಸಾಹಿತ್ಯಗಳನ್ನು ಕ್ರಮವಾಗಿ ಓದುವುದನ್ನು ಹಾಗೂ ಅಭ್ಯಾಸಿಸುವುದನ್ನು ಎಂದೂ ತಪ್ಪಿಸಲಿಲ್ಲ. ನಾನು ನನ್ನ
ತಾಯಿಗೆ ಆಪ್ತಳಾಗಿ ಉಳಿದೆ, ನಮ್ಮ ಬಳಿಯಿದ್ದ ಹಣವನ್ನು ಸಂಬಾಳಿಸಲು, ಷಾಪಿಂಗ್ ಮಾಡಲು, ಟೈರುಗಳನ್ನು ಬದಲಾಯಿಸಲು, ಅಡಿಗೆಮಾಡಲು, ಹೊಲಿಯಲು, ಮತ್ತು ಸುವಾರ್ತೆಯನ್ನು ಸಾರಲು ಕಲಿತುಕೊಂಡೆ. ಇದರ ಬಗ್ಗೆ ನನಗೆ ಯಾವ ವಿಷಾದವೂ ಇಲ್ಲ ಮತ್ತು ಈ ಎಲ್ಲ ಕೆಲಸಗಳನ್ನು ನಾನು ಈಗಲೂ ಮಾಡಲು ಮನಃಪೂರ್ವಕವಾಗಿ ಬಯಸುತ್ತೇನೆ.”ಹೆಲನ್‌ಳ ತಾಯಿಯ ಬಳಿ ಒಂದು ಒಳ್ಳೆಯ ಮನೆಯಿತ್ತಾದರೂ, ಆ ವರ್ಷಗಳಲ್ಲಿ ಹೆಲನ್ ಹಾಗೂ ಅವಳ ತಾಯಿಯವರು ಒಂದು ಚಿಕ್ಕ ಬಂಡಿಯಲ್ಲಿ ಜೀವಿಸುವುದರಲ್ಲೇ ತೃಪ್ತರಾಗಿದ್ದರು. 1937ರಲ್ಲಿ ನಡೆದ ಒಹಾಯೋದ ಕೊಲಂಬಸ್ ಅಧಿವೇಶನದ ಬಳಿಕ ಹೆಲನಳ ತಾಯಿಯವರ ಆರೋಗ್ಯ ತುಂಬ ಕೆಟ್ಟುಹೋಯಿತು, ಮತ್ತು ಅವರನ್ನು ಆಸ್ಪತ್ರೆಗೆ ಸೇರಿಸಲಾಯಿತು. 1937ರ ನವೆಂಬರ್ ತಿಂಗಳಿನಲ್ಲಿ, ವೆಸ್ಟ್ ವರ್ಜಿನಿಯದ ಫಿಲಿಪೈಯ ತಮ್ಮ ಪಯನೀಯರ್ ನೇಮಕದಲ್ಲೇ ಅವರು ಮೃತಪಟ್ಟರು.
ವಿವಾಹ ಹಾಗೂ ಮುಂದುವರಿಸಲ್ಪಟ್ಟ ಸೇವೆ
1938ರ ಜೂನ್ 10ರಂದು, ವೆಸ್ಟ್ ವರ್ಜಿನಿಯದ ವೀಲಿಂಗ್‌ನ ಬಳಿಯಿರುವ ಎಲ್ಮ್ ಗ್ರೋವ್‌ನಲ್ಲಿ ಹೆಲನಳು ಜನಿಸಿದ್ದ ಮನೆಯಲ್ಲಿಯೇ ಹೆಲನ್ ಹಾಗೂ ನಾನು ಸರಳವಾದ ರೀತಿಯಲ್ಲಿ ವಿವಾಹವಾದೆವು. ನಾನು ಜನಿಸುವ ಅನೇಕ ವರ್ಷಗಳಿಗೆ ಮುಂಚೆಯೇ ನನ್ನ ಕುಟುಂಬಕ್ಕೆ ಸತ್ಯವನ್ನು ಪರಿಚಯಿಸಿದ್ದ ನಮ್ಮ ಪ್ರಿಯ ಸಹೋದರರಾದ ಎವನ್ಸ್ ಅವರು ವಿವಾಹದ ಭಾಷಣವನ್ನು ಕೊಟ್ಟರು. ವಿವಾಹದ ಬಳಿಕ ಹೆಲನ್ ಹಾಗೂ ನಾನು ಪೂರ್ವ ಕೆಂಟಕಿಯಲ್ಲಿ ಪಯನೀಯರ್ ಸೇವೆಗೆ ಹಿಂದಿರುಗುವ ಯೋಜನೆಯನ್ನು ಮಾಡಿದೆವು. ಆದರೆ ನಮ್ಮ ಆಶ್ಚರ್ಯಕ್ಕೆ, ಝೋನ್ ಸೇವೆಗಾಗಿ ನಮ್ಮನ್ನು ಆಮಂತ್ರಿಸಲಾಯಿತು. ಪಶ್ಚಿಮ ಕೆಂಟಕಿಯಲ್ಲಿರುವ ಹಾಗೂ ಟೆನೆಸೀಯ ಕೆಲವು ಭಾಗಗಳಲ್ಲಿರುವ ಯೆಹೋವನ ಸಾಕ್ಷಿಗಳ ಗುಂಪುಗಳನ್ನು ಸಂದರ್ಶಿಸುವುದು ಹಾಗೂ ಅವರ ಶುಶ್ರೂಷೆಯಲ್ಲಿ ಅವರಿಗೆ ಸಹಾಯ ಮಾಡುವುದು ಈ ಕೆಲಸದಲ್ಲಿ ಒಳಗೂಡಿತ್ತು. ನಾವು ಸಂದರ್ಶಿಸಿದ ಎಲ್ಲ ಸ್ಥಳಗಳಲ್ಲಿ ಆಗ ರಾಜ್ಯ ಪ್ರಚಾರಕರ ಕೇವಲ 75 ಗುಂಪುಗಳು ಮಾತ್ರ ಇದ್ದವು.
ಆ ಸಮಯದಲ್ಲಿ ರಾಷ್ಟ್ರೀಯತೆಯ ಮನೋಭಾವವು ವ್ಯಾಪಕವಾಗಿತ್ತು, ಮತ್ತು ನನ್ನ ಕ್ರೈಸ್ತ ತಾಟಸ್ಥ್ಯದ ಕಾರಣ ನನ್ನನ್ನು ಸೆರೆಯಲ್ಲಿ ಹಾಕಬಹುದೆಂದು ನಾನು ನಿರೀಕ್ಷಿಸಿದ್ದೆ. (ಯೆಶಾಯ 2:4) ಆದರೂ, ನನ್ನ ಸಾರುವ ಚಟುವಟಿಕೆಯ ದಾಖಲೆಯ ಕಾರಣದಿಂದ, ಕಡ್ಡಾಯ ಸೈನ್ಯದಳ ಬೋರ್ಡಿನಿಂದ ನನ್ನನ್ನು ಸೌವಾರ್ತಿಕನೆಂದು ವರ್ಗೀಕರಿಸಲಾಯಿತು ಮತ್ತು ಇದರಿಂದಾಗಿ ನಾನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿಯಲು ಸಾಧ್ಯವಾಯಿತು.
ನಾವು ಸಂಚರಣ ಶುಶ್ರೂಷೆಯನ್ನು ಆರಂಭಿಸಿದಾಗ, ಬಹುಮಟ್ಟಿಗೆ ಪ್ರತಿಯೊಬ್ಬರೂ ನಮ್ಮ ಯುವಪ್ರಾಯದ ಕುರಿತು ಮಾತಾಡಿಕೊಳ್ಳುತ್ತಿದ್ದರು. ಕೆಂಟಕಿಯ ಹಾಪ್‌ಕಿನ್ಸ್‌ವಿಲ್‌ನಲ್ಲಿ ಒಬ್ಬ ಕ್ರೈಸ್ತ ಸಹೋದರಿಯು ಹೆಲನಳನ್ನು ಅಪ್ಪಿಕೊಂಡು ಕೇಳಿದ್ದು: “ನಿಮಗೆ ನನ್ನ ಜ್ಞಾಪಕವಿದೆಯೊ?” 1933ರಲ್ಲಿ, ಅವಳ ಗಂಡನು ನಡೆಸುತ್ತಿದ್ದ ಒಂದು ಅಂಗಡಿಯಲ್ಲಿದ್ದ ಈ ಸ್ತ್ರೀಗೆ ಹೆಲನ್ ಸಾಕ್ಷಿನೀಡಿದ್ದಳು. ಅವಳು ಸಂಡೇ-ಸ್ಕೂಲ್‌ನ ಟೀಚರ್ ಆಗಿದ್ದಳು. ಆದರೆ ಹೆಲನಳು ಅವಳಿಗೆ ಕೊಟ್ಟಿದ್ದ ಪುಸ್ತಕವನ್ನು ಓದಿದ ಬಳಿಕ ಅವಳು ಸಂಡೇ-ಸ್ಕೂಲಿಗೆ ಹೋಗಿ, ಇಷ್ಟರ ತನಕ ಬೈಬಲಿನಲ್ಲಿಲ್ಲದ ಬೋಧನೆಗಳನ್ನು ಕಲಿಸಿದ್ದಕ್ಕಾಗಿ ಕ್ಷಮೆಯಾಚಿಸಿದಳು. ಚರ್ಚಿಗೆ ರಾಜೀನಾಮೆ ಕೊಟ್ಟ ಬಳಿಕ ಅವಳು ತನ್ನ ಸಮುದಾಯದಲ್ಲಿ ಬೈಬಲ್ ಸತ್ಯತೆಗಳನ್ನು ಸಾರಲು ಆರಂಭಿಸಿದಳು. ಹೆಲನ್ ಮತ್ತು ನಾನು ಪಶ್ಚಿಮ ಕೆಂಟಕಿಯಲ್ಲಿ ಮೂರು ವರ್ಷಗಳ ವರೆಗೆ ಸೇವೆಮಾಡಿದೆವು ಮತ್ತು ಆ ಸಮಯದಲ್ಲಿ ಈ ಸಹೋದರಿಯ ಹಾಗೂ ಅವಳ ಗಂಡನ ಮನೆಯೇ ನಮ್ಮ ಮನೆಯಾಗಿ ಪರಿಣಮಿಸಿತ್ತು.
ಆ ದಿನಗಳಲ್ಲಿ ಚಿಕ್ಕ ಸ್ಥಳಿಕ ಸಮ್ಮೇಳನಗಳು ನಡೆಸಲ್ಪಡುತ್ತಿದ್ದವು, ಮತ್ತು ಈ ಸಮ್ಮೇಳನಗಳಲ್ಲಿ ಒಂದಕ್ಕೆ ಏ. ಏಚ್. ಮ್ಯಾಕ್‌ಮಿಲನ್ ಅವರು ಬಂದಿದ್ದರು. ಹೆಲನಳು ಚಿಕ್ಕ ಮಗುವಾಗಿದ್ದಾಗ ಇವರು ಹೆಲನಳ ಹೆತ್ತವರ ಮನೆಯಲ್ಲಿ ಉಳಿದುಕೊಂಡಿದ್ದರು. ಆದುದರಿಂದ, ಸಮ್ಮೇಳನದ ಸಮಯದಲ್ಲಿ ಅವರು ನಮ್ಮ ಐದು ಮೀಟರ್ ಉದ್ದದ ಸಂಚಾರಿ ಗೃಹದಲ್ಲೇ ನಮ್ಮೊಂದಿಗೆ ಉಳಿಯುವ ಆಯ್ಕೆಮಾಡಿದರು; ಅದರಲ್ಲಿ ಒಂದು ಬೆಡ್ ಹೆಚ್ಚಿಗೆ ಇತ್ತು. ಇವರು ಸಹ 1900ರಲ್ಲಿ, ಅಂದರೆ 23 ವರ್ಷ ಪ್ರಾಯದವರಾಗಿದ್ದಾಗ ತಮ್ಮ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಳ್ಳುವ ಮೂಲಕ, ಯೌವನದಲ್ಲಿಯೇ ತಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಂಡವರಾಗಿದ್ದರು.
1941ರ ನವೆಂಬರ್ ತಿಂಗಳಿನಲ್ಲಿ ಸಂಚರಣ ಸಹೋದರರ ಕೆಲಸವು ತಾತ್ಕಾಲಿಕವಾಗಿ ನಿಲ್ಲಿಸಲ್ಪಟ್ಟಿತು, ಮತ್ತು ನಾನು ಕೆಂಟಕಿಯ ಹಾಸರ್ಡ್‌ನಲ್ಲಿ ಒಬ್ಬ ಪಯನೀಯರನಾಗಿ ನೇಮಿಸಲ್ಪಟ್ಟೆ. ಪುನಃ ನಾವು ನನ್ನ ಅಣ್ಣನಾದ ಕಾರ್ಲ್ ಹಾಗೂ ಅವನ ಪತ್ನಿಯಾದ ಕ್ಲ್ಯಾರ್‌ಳ ಜೊತೆ ಕೆಲಸಮಾಡಿದೆವು. ಇಲ್ಲಿ ಹೆಲನಳ ಅಣ್ಣನ ಮಗನಾದ ಜೋಸೆಫ್ ಹ್ಯೂಸ್ಟನ್ ನಮ್ಮೊಂದಿಗೆ ಸೇರಿಕೊಂಡು ಪಯನೀಯರ್ ಸೇವೆಯನ್ನು ಆರಂಭಿಸಿದನು. ಸುಮಾರು 50 ವರ್ಷಗಳ ವರೆಗೆ ಅವನು ಪೂರ್ಣ ಸಮಯದ ಶುಶ್ರೂಷೆಯಲ್ಲಿ ಮುಂದುವರಿದನು. ತದನಂತರ ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿದ್ದಾಗ, 1992ರಲ್ಲಿ ಹೃದಯಾಘಾತದಿಂದ ಮರಣಪಟ್ಟನು.
1943ರಲ್ಲಿ, ಕನೆಟಿಕಟ್‌ನ ರಾಕ್‌ವಿಲ್‌ಗೆ ನಾವು ನೇಮಿಸಲ್ಪಟ್ಟೆವು. ಇದು ನನಗೂ ಹೆಲನಳಿಗೂ ಒಂದು ಬೇರೆಯೇ ಲೋಕದಂತಿತ್ತು. ಏಕೆಂದರೆ ನಾವು ಇಷ್ಟರ ತನಕ ಯಾವಾಗಲೂ ಅಮೆರಿಕದ ದಕ್ಷಿಣ ಭಾಗದಲ್ಲಿ ಸಾರುವ ಕೆಲಸವನ್ನು ಮಾಡುತ್ತಿದ್ದೆವು. ರಾಕ್‌ವಿಲ್‌ನಲ್ಲಿ ಹೆಲನ್ ಕ್ರಮವಾಗಿ ವಾರಕ್ಕೆ 20ಕ್ಕಿಂತಲೂ ಹೆಚ್ಚು ಬೈಬಲ್ ಅಭ್ಯಾಸಗಳನ್ನು ನಡೆಸುತ್ತಿದ್ದಳು. ಕಾಲಕ್ರಮೇಣ, ನಾವು ರಾಜ್ಯ ಸಭಾಗೃಹಕ್ಕಾಗಿ ಒಂದು ಸಾಧಾರಣವಾದ ರೂಮನ್ನು ಬಾಡಿಗೆಗೆ ತೆಗೆದುಕೊಂಡೆವು, ಮತ್ತು ಒಂದು ಚಿಕ್ಕ ಸಭೆಯ ಕೇಂದ್ರವು ವ್ಯವಸ್ಥಾಪಿಸಲ್ಪಟ್ಟಿತು.
ರಾಕ್‌ವಿಲ್‌ನಲ್ಲಿ ಸೇವೆಮಾಡುತ್ತಿದ್ದಾಗ, ನ್ಯೂ ಯಾರ್ಕಿನ ಸೌತ್ ಲ್ಯಾನ್ಸಿಂಗ್‌ನಲ್ಲಿದ್ದ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನ ಐದನೆಯ ಕ್ಲಾಸಿಗೆ ಹಾಜರಾಗುವಂತೆ ನಮಗೆ ಕರೆಬಂತು. ಕೆಂಟಕಿಯಲ್ಲಿ ನಾವು ಪಯನೀಯರ್ ಸೇವೆಯನ್ನು ಮಾಡುತ್ತಿದ್ದ ಸಮಯದಲ್ಲಿ ನಮ್ಮ ಸ್ನೇಹಿತರಾಗಿದ್ದ ಆಬ್ರೀ ಹಾಗೂ ಬರ್ಥ ಬಿವನ್ಸ್ ನಮ್ಮ ಸಹಪಾಠಿಗಳಾಗಲಿದ್ದರು ಎಂದು ತಿಳಿದುಬಂದಾಗ ನಮಗೆ ತುಂಬ ಸಂತೋಷವಾಯಿತು.
ಶಾಲೆ ಮತ್ತು ನಮ್ಮ ಹೊಸ ನೇಮಕ
ಈ ಸಮಯದಲ್ಲಿ ನಾವು ಚಿಕ್ಕ ಪ್ರಾಯದವರಾಗಿದ್ದರೂ, ನಮ್ಮ ಸಹಪಾಠಿಗಳಲ್ಲಿ ಹೆಚ್ಚಿನವರು ನಮಗಿಂತಲೂ ಚಿಕ್ಕ ಪ್ರಾಯದವರಾಗಿದ್ದರು. ಹೌದು, ಅವರೆಲ್ಲರೂ ಯೌವನದಲ್ಲೇ ತಮ್ಮ ಮಹಾನ್ ಸೃಷ್ಟಿಕರ್ತನನ್ನು ಸ್ಮರಿಸಿಕೊಂಡಿದ್ದರು. ನಮ್ಮ ಪದವಿಪ್ರಾಪ್ತಿಯು 1945ರ
ಜುಲೈ ತಿಂಗಳಿನಲ್ಲಾಗಿತ್ತು; ಇದೇ ಸಮಯದಲ್ಲಿ IIನೆಯ ಲೋಕ ಯುದ್ಧವು ಸಹ ಹತ್ತಿರವಾಗುತ್ತಾ ಇತ್ತು. ನಮ್ಮ ಮಿಷನೆರಿ ನೇಮಕಗಳಿಗಾಗಿ ಕಾಯುತ್ತಿದ್ದಾಗ, ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿದ್ದ ಫ್ಲ್ಯಾಟ್‌ಬುಷ್ ಸಭೆಯೊಂದಿಗೆ ನಾವು ಸೇವೆಮಾಡಿದೆವು. ಕೊನೆಗೆ, 1946ರ ಅಕ್ಟೋಬರ್ 21ರಂದು, ಬಿವನ್ಸ್ ದಂಪತಿಯನ್ನೂ ಸೇರಿಸಿ ಇನ್ನಿತರ ಆರು ಮಂದಿ ಸಹಪಾಠಿಗಳೊಂದಿಗೆ ನಾವು ಗ್ವಾಟೆಮಾಲ ದೇಶದ ಗ್ವಾಟೆಮಾಲ ಸಿಟಿಯಲ್ಲಿರುವ ನಮ್ಮ ಹೊಸ ಮನೆಗೆ ಪ್ರಯಾಣಿಸಿದೆವು. ಆ ಸಮಯದಲ್ಲಿ ಇಡೀ ಸೆಂಟ್ರಲ್ ಅಮೆರಿಕನ್ ದೇಶದಲ್ಲಿ 50ಕ್ಕಿಂತಲೂ ಕಡಿಮೆ ಯೆಹೋವನ ಸಾಕ್ಷಿಗಳಿದ್ದರು.1949ರ ಏಪ್ರಿಲ್ ತಿಂಗಳಿನಲ್ಲಿ ಮಿಷನೆರಿಗಳಾದ ನಮ್ಮಲ್ಲಿ ಕೆಲವರು ಕೆಟ್‌ಸಾಲ್ಟನಾಂಗೊ ಎಂಬಲ್ಲಿಗೆ ಸ್ಥಳಾಂತರಿಸಿದೆವು. ಇಡೀ ದೇಶದಲ್ಲೇ ಇದು ವಿಸ್ತೀರ್ಣದಲ್ಲಿ ಹಾಗೂ ಪ್ರಮುಖತೆಯಲ್ಲಿ ಎರಡನೆಯ ಸ್ಥಾನವನ್ನು ಪಡೆದುಕೊಂಡ ನಗರವಾಗಿತ್ತು. ಈ ನಗರವು ಸಮುದ್ರ ಮಟ್ಟಕ್ಕಿಂತ 2,300 ಮೀಟರ್‌ಗಳಷ್ಟು ಎತ್ತರದಲ್ಲಿದೆ, ಮತ್ತು ಪರ್ವತಶ್ರೇಣಿಯಿಂದ ಬೀಸುವ ಗಾಳಿಯು ತಿಳಿಯಾಗಿಯೂ ಉಲ್ಲಾಸಕರವಾಗಿಯೂ ಇದೆ. ಹೀಗೆ ಬರೆಯುವ ಮೂಲಕ ಹೆಲನಳು ಅಲ್ಲಿನ ನಮ್ಮ ಚಟುವಟಿಕೆಯನ್ನು ಸಾರಾಂಶಿಸಿದಳು: “ಅಲ್ಲಿದ್ದ ಡಸನ್‌ಗಟ್ಟಲೆ ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ ಸುವಾರ್ತೆಯನ್ನು ಸಾರುವುದು ನಮ್ಮ ಸುಯೋಗವಾಗಿತ್ತು. ನಾವು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು, ಬಸ್ಸಿನ (ಇದರಲ್ಲಿ ಕಿಟಕಿಗಳಿಗೆ ಬದಲಾಗಿ ಕ್ಯಾನ್ವಸ್ ಪರದೆಯಿರುತ್ತಿತ್ತು) ಮೂಲಕ ಬಹುದೂರದ ಪಟ್ಟಣಗಳಿಗೆ ಹೋಗುತ್ತಿದ್ದೆವು. ಸಾಯಂಕಾಲ ಮನೆಗೆ ಹಿಂದಿರುಗುವುದಕ್ಕೆ ಮುಂಚೆ ನಾವು ಸುಮಾರು ಎಂಟು ತಾಸುಗಳ ತನಕ ಸಾರುತ್ತಿದ್ದೆವು.” ಕೆಟ್‌ಸಾಲ್ಟನಾಂಗೊದಲ್ಲಿರುವ ಆರು ಸಭೆಗಳನ್ನೂ ಸೇರಿಸಿ, ಇಂದು ಇಂತಹ ಅನೇಕ ಸ್ಥಳಗಳಲ್ಲಿ ಸಭೆಗಳಿವೆ.
ಗ್ವಾಟೆಮಾಲದ ಮೂರನೆಯ ಅತಿ ದೊಡ್ಡ ನಗರವಾದ ಕ್ಯಾರಿಬೀಅನ್ ಕೋಸ್ಟ್‌ನ ಪ್ವೆರ್ಟೋ ಬಾರೀಯೋಸ್‌ನಲ್ಲಿ ಸೇವೆಮಾಡುವಂತೆ ಮಿಷನೆರಿಗಳಿಗೆ ಕರೆಕೊಡಲ್ಪಟ್ಟಿತು. ನಮ್ಮ ಪ್ರಿಯ ಸಂಗಡಿಗರಾಗಿದ್ದ ಹಾಗೂ ಗ್ವಾಟೆಮಾಲದಲ್ಲಿ ಐದು ವರ್ಷಗಳ ವರೆಗೆ ನಮ್ಮೊಂದಿಗೆ ಸೇವೆಮಾಡಿದ್ದ ಬಿವನ್ಸ್ ದಂಪತಿಗಳು ಈ ಹೊಸ ನೇಮಕವನ್ನು ನಿರ್ವಹಿಸಲಿಕ್ಕಾಗಿ ಅಲ್ಲಿಗೆ ಸ್ಥಳಾಂತರಿಸಿದರು. ಈ ಅಗಲಿಕೆಯು ತುಂಬ ವೇದನಾಮಯವಾಗಿತ್ತು ಮತ್ತು ನಮ್ಮ ಜೀವಿತಗಳಲ್ಲಿ ಶೂನ್ಯತೆಯ ಅನಿಸಿಕೆಯನ್ನು ಉಂಟುಮಾಡಿತು. ಮಿಷನೆರಿ ಗೃಹದಲ್ಲಿ ನಾನು ಮತ್ತು ಹೆಲನಳು ಮಾತ್ರ ಉಳಿದಿದ್ದರಿಂದ, ನಾವು ಒಂದು ಚಿಕ್ಕ ಮನೆಗೆ ಸ್ಥಳಾಂತರಿಸಿದೆವು. 1955ರಲ್ಲಿ, ಹೆಲನ್ ಹಾಗೂ ನಾನು ಮಾಸಾಟೇನಾಂಗೊ ಎಂಬ ಉಷ್ಣವಲಯದ ನಗರವೊಂದರಲ್ಲಿ ಸೇವೆಮಾಡುವ ಹೊಸ ನೇಮಕವನ್ನು ಸ್ವೀಕರಿಸಿದೆವು. 1953ರಲ್ಲಿ ಗಿಲ್ಯಡ್ ಪದವಿ ಪಡೆದುಕೊಂಡ ನನ್ನ ಕಿರಿಯ ತಮ್ಮನಾದ ಪಾಲ್ ಹಾಗೂ ಅವನ ಪತ್ನಿಯಾದ ಡಲೋರಸ್, ನಾವು ಅಲ್ಲಿಗೆ ಹೋಗುವ ಸ್ವಲ್ಪ ಸಮಯಕ್ಕೆ ಮುಂಚೆ ಅಲ್ಲಿ ಸೇವೆಮಾಡಿದ್ದರು.
1958ರಷ್ಟಕ್ಕೆ ಗ್ವಾಟೆಮಾಲದಲ್ಲಿ 700ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳು, 20 ಸಭೆಗಳು, ಮತ್ತು ಮೂರು ಸರ್ಕಿಟ್‌ಗಳು ಇದ್ದವು. ಸಾಕ್ಷಿಗಳ ಚಿಕ್ಕ ಗುಂಪುಗಳನ್ನು ಹಾಗೂ ಕೆಟ್‌ಸಾಲ್ಟನಾಂಗೊದಲ್ಲಿರುವ ಒಂದು ಸಭೆಯನ್ನೂ ಸೇರಿಸಿ ಇನ್ನೂ ಅನೇಕ ಸಭೆಗಳನ್ನು ಸಂದರ್ಶಿಸುತ್ತಾ, ಪುನಃ ಹೆಲನ್ ಹಾಗೂ ನಾನು ಸಂಚರಣ ಕೆಲಸದಲ್ಲಿ ಪಾಲ್ಗೊಂಡೆವು. ತದನಂತರ, 1959ರ ಆಗಸ್ಟ್ ತಿಂಗಳಿನಲ್ಲಿ, ಗ್ವಾಟೆಮಾಲ ಸಿಟಿಗೆ ಹಿಂದಿರುಗುವಂತೆ ನಮಗೆ ತಿಳಿಸಲಾಯಿತು ಮತ್ತು ಅಲ್ಲಿ ನಾವು ಬ್ರಾಂಚ್ ಆಫೀಸಿನಲ್ಲಿ ವಾಸಿಸಿದೆವು. ನಾನು ಬ್ರಾಂಚ್‌ನಲ್ಲಿ ಕೆಲಸಮಾಡುತ್ತಿದ್ದೆ ಮತ್ತು ಮುಂದಿನ 16 ವರ್ಷಗಳ ವರೆಗೆ ಹೆಲನ್ ಮಿಷನೆರಿ ಸೇವೆಯನ್ನು ಮುಂದುವರಿಸಿದಳು. ಆ ಮೇಲೆ ಅವಳು ಸಹ ಬ್ರಾಂಚ್ ಆಫೀಸಿನಲ್ಲಿ ಕೆಲಸಮಾಡಲು ಆರಂಭಿಸಿದಳು.
ಇನ್ನೂ ಅನೇಕ ಆಶೀರ್ವಾದಗಳು
ಕೆಲವು ವರ್ಷಗಳ ಹಿಂದೆ, ಯೆಹೋವನ ಸೇವೆಮಾಡುತ್ತಿದ್ದವರಲ್ಲಿ ನಾನೇ ಕಿರಿಯನು ಎಂದು ಯಾವಾಗಲೂ ನನಗನಿಸುತ್ತಿತ್ತು. ಆದರೆ ಈಗ ನಾನೇ ಹಿರಿಯನು ಎಂದು ಕೆಲವೊಮ್ಮೆ ನನಗನಿಸುತ್ತದೆ. ಉದಾಹರಣೆಗೆ, 1996ರಲ್ಲಿ ನ್ಯೂ ಯಾರ್ಕಿನ ಪ್ಯಾಟರ್‌ಸನ್‌ನಲ್ಲಿ ನಡೆದ ಬ್ರಾಂಚ್ ಸ್ಕೂಲಿಗೆ ಹಾಜರಾದಾಗ ನನಗೆ ಇದೇ ಅನುಭವವಾಯಿತು. ನನ್ನ ಯುವ ಪ್ರಾಯದಲ್ಲಿ ನಾನು ಹಿರಿಯರಿಂದ ಬಹಳಷ್ಟು ಸಹಾಯವನ್ನು ಪಡೆದುಕೊಂಡಂತೆಯೇ, ಇತ್ತೀಚಿನ ದಶಕಗಳಲ್ಲಿ ಯೌವನದಲ್ಲೇ ತಮ್ಮ ಸೃಷ್ಟಿಕರ್ತನನ್ನು ಸ್ಮರಿಸಿಕೊಳ್ಳಲು ಬಯಸುವ ಅನೇಕ ಯುವ ಜನರಿಗೆ ಸಹಾಯ ಮಾಡುವ ಸುಯೋಗ ನನಗೆ ದೊರಕಿದೆ.
ಗ್ವಾಟೆಮಾಲದಲ್ಲಿ ಯೆಹೋವನು ತನ್ನ ಜನರ ಮೇಲೆ ಆಶೀರ್ವಾದಗಳನ್ನು ಸುರಿಸುತ್ತಾ ಇದ್ದಾನೆ. 1999ರಲ್ಲಿ, ಗ್ವಾಟೆಮಾಲ ಸಿಟಿಯಲ್ಲಿ ಸುಮಾರು 60ಕ್ಕಿಂತಲೂ ಹೆಚ್ಚು ಸಭೆಗಳು ಇದ್ದವು. ಇದಲ್ಲದೆ ಉತ್ತರ, ದಕ್ಷಿಣ, ಪೂರ್ವ ಹಾಗೂ ಪಶ್ಚಿಮದಲ್ಲಿಯೂ ಅನೇಕ ಸಭೆಗಳಿವೆ ಮತ್ತು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಸಾವಿರಾರು ಮಂದಿ ಪ್ರಚಾರಕರಿದ್ದಾರೆ. 53 ವರ್ಷಗಳ ಹಿಂದೆ ನಾವು ಇಲ್ಲಿಗೆ ಬಂದಾಗ 50ಕ್ಕಿಂತಲೂ ಕಡಿಮೆ ರಾಜ್ಯ ಪ್ರಚಾರಕರು ಇದ್ದರು, ಆದರೆ ಈಗ 19,000ಕ್ಕಿಂತಲೂ ಹೆಚ್ಚು ಮಂದಿ ಇದ್ದಾರೆ!
ನಾವು ಕೃತಜ್ಞರಾಗಿರಬೇಕಾದ ಅನೇಕ ಸಂಗತಿಗಳು
ಪ್ರತಿಯೊಬ್ಬರ ಜೀವಿತದಲ್ಲೂ ಸಮಸ್ಯೆಗಳು ಇದ್ದೇ ಇರುತ್ತವೆ, ಆದರೆ ನಾವು ಯಾವಾಗಲೂ ನಮ್ಮ “ಚಿಂತಾಭಾರವನ್ನು ಯೆಹೋವನ ಮೇಲೆ ಹಾಕ”ಬೇಕು. (ಕೀರ್ತನೆ 55:22) ಪ್ರೀತಿಯ ಸಂಗಡಿಗರ ಬೆಂಬಲದ ಮೂಲಕ ಆತನು ಕೆಲವೊಮ್ಮೆ ನಮ್ಮನ್ನು ಪೋಷಿಸುತ್ತಾನೆ. ಉದಾಹರಣೆಗೆ, ಹೆಲನಳು ಸಾಯುವ ಕೆಲವು ವರ್ಷಗಳಿಗೆ ಮುಂಚೆ, ಅವಳು ನನಗೆ ಒಂದು ಅಲಂಕಾರ ಫಲಕವನ್ನು ಉಡುಗೊರೆಯಾಗಿ ಕೊಟ್ಟಿದ್ದಳು. ಅದರ ಮೇಲೆ ಬೈಬಲಿನ ಇಬ್ರಿಯ 6:10ರ ವಚನವು ಬರೆಯಲ್ಪಟ್ಟಿತ್ತು: “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”
ಈ ಉಡುಗೊರೆಯೊಂದಿಗೆ ಅವಳು ಇಟ್ಟಿದ್ದ ಚಿಕ್ಕ ಪತ್ರದ ಒಂದು ಭಾಗವು ಹೀಗಿದೆ: “ನನ್ನ ಪ್ರಿಯರೇ, ನಿಮಗೆ ಕೊಡಲಿಕ್ಕಾಗಿ ನನ್ನ ಪ್ರೀತಿಯನ್ನು ಬಿಟ್ಟು ಬೇರೇನೂ ನನ್ನಲ್ಲಿಲ್ಲ . . . ಈ ವಚನವು ನಿಮಗೆ ಸೂಕ್ತವಾಗಿ ಅನ್ವಯವಾಗುತ್ತದೆ, ಮತ್ತು ನೀವು ಇದನ್ನು ನಿಮ್ಮ ಡೆಸ್ಕಿನ ಮೇಲಿಡುವಂತೆ ನಾನು ಕೇಳಿಕೊಳ್ಳುತ್ತೇನೆ. ನಾನು ಇದನ್ನು ನಿಮಗೆ ಕೊಟ್ಟದ್ದಕ್ಕಾಗಿ ಅಲ್ಲಿಡಬೇಕು ಎಂದು ಹೇಳುತ್ತಿಲ್ಲ, ಬದಲಾಗಿ ನಿಮ್ಮ ದೀರ್ಘವಾದ ಸೇವೆಯ ವರ್ಷಗಳಲ್ಲಿ ಇದು ನಿಮಗೆ ಚೆನ್ನಾಗಿ ಅನ್ವಯಿಸುತ್ತದೆ.” ಗ್ವಾಟೆಮಾಲದಲ್ಲಿರುವ ಬ್ರಾಂಚ್ ಆಫೀಸಿನ ನನ್ನ ಡೆಸ್ಕಿನ ಮೇಲೆ ಈಗಲೂ ಈ ಅಲಂಕಾರ ಫಲಕವು ಇದೆ.
ನನ್ನ ಯೌವನದಿಂದಲೇ ನಾನು ಯೆಹೋವನ ಸೇವೆಮಾಡಿದ್ದೇನೆ, ಮತ್ತು ಈಗ ನನ್ನ ಮುಪ್ಪಿನ ವರ್ಷಗಳಲ್ಲಿ ನನ್ನ ನೇಮಿತ ಕರ್ತವ್ಯಗಳನ್ನು ನಿರ್ವಹಿಸಲು ಸಹಾಯ ಮಾಡಿರುವ ಒಳ್ಳೆಯ ಆರೋಗ್ಯಕ್ಕಾಗಿ ನಾನು ಯೆಹೋವನಿಗೆ ಉಪಕಾರ ಸಲ್ಲಿಸುತ್ತೇನೆ. ನಾನು ಕ್ರಮವಾಗಿ ಬೈಬಲನ್ನು ಓದುತ್ತಿರುವಾಗ, ಕೆಲವು ಶಾಸ್ತ್ರವಚನಗಳನ್ನು ನೋಡಿ, ನನ್ನ ಪ್ರೀತಿಯ ಹೆಲನಳು ತನ್ನ ಬೈಬಲಿನಲ್ಲಿ ಈ ವಚನಗಳಿಗೆ ಅಡಿಗೆರೆ ಹಾಕಿರಬಹುದು ಎಂದು ನೆನಸಿಕೊಳ್ಳುತ್ತೇನೆ. “ಆತನು ಯುಗಯುಗಾಂತರಗಳಲ್ಲಿಯೂ ನಮ್ಮ ದೇವರು, ನಿರಂತರವೂ ನಮ್ಮನ್ನು ನಡಿಸುವವನಾಗಿದ್ದಾನೆ” ಎಂದು ಬರೆದಿರುವ ಕೀರ್ತನೆ 48:14ನ್ನು ನಾನು ಪುನಃ ಪುನಃ ಓದಿದಾಗ ಇಂತಹ ಅನಿಸಿಕೆ ನನಗಾಯಿತು.
ಈ ಮುಂಚಿನ ಎಲ್ಲ ರಾಷ್ಟ್ರಗಳ ಜನರು, ತಮ್ಮ ಪ್ರಿಯ ಜನರನ್ನು ಮೃತ ಸ್ಥಿತಿಯಿಂದ ಒಂದು ಹೊಸ ಲೋಕಕ್ಕೆ ಸ್ವಾಗತಿಸುವಂತಹ ಪುನರುತ್ಥಾನದ ದೃಶ್ಯವನ್ನು ಇತರರೊಂದಿಗೆ ಹಂಚಿಕೊಳ್ಳುವುದು ನನಗೆ ಸಂತೋಷಕರವಾದ ಸಂಗತಿಯಾಗಿದೆ. ಎಂತಹ ಒಂದು ಪ್ರತೀಕ್ಷೆ! ನಿಜವಾಗಿಯೂ ಯೆಹೋವನು “ದೀನಾವಸ್ಥೆಯಲ್ಲಿರುವವರನ್ನು ಸಂತೈಸುವ” ದೇವರಾಗಿದ್ದಾನೆ ಎಂಬುದನ್ನು ನಾವೆಲ್ಲರೂ ಜ್ಞಾಪಿಸಿಕೊಳ್ಳುವಾಗ, ಎಷ್ಟೊಂದು ಆನಂದಬಾಷ್ಪವು ಸುರಿಸಲ್ಪಡುವುದು!—2 ಕೊರಿಂಥ 7:6.
[ಪುಟ 25ರಲ್ಲಿರುವ ಚಿತ್ರ]
ಮೇಲೆ ಎಡಗಡೆಯಿಂದ ಪ್ರದಕ್ಷಿಣವಾಗಿ: ಅಮ್ಮ, ಅಪ್ಪ, ಆಂಟಿ ಈವ, ಮತ್ತು ಅಣ್ಣಂದಿರಾದ ಕಾರ್ಲ್ ಮತ್ತು ಕ್ಲ್ಯಾರನ್ಸ್, 1910ರಲ್ಲಿ
[ಪುಟ 26ರಲ್ಲಿರುವ ಚಿತ್ರಗಳು]
1947ರಲ್ಲಿ ಮತ್ತು 1992ರಲ್ಲಿ ಹೆಲನಳೊಂದಿಗೆ