ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇಟಲಿಯಲ್ಲಿ ಸಾಂತ್ವನದ ಸಂದೇಶವನ್ನು ನೀಡುವುದು

ಇಟಲಿಯಲ್ಲಿ ಸಾಂತ್ವನದ ಸಂದೇಶವನ್ನು ನೀಡುವುದು

ನಾವಾದರೋ ನಂಬುವವ ರಾಗಿದ್ದೇವೆ

ಇಟಲಿಯಲ್ಲಿ ಸಾಂತ್ವನದ ಸಂದೇಶವನ್ನು ನೀಡುವುದು

ಯೆಹೋವನು ‘ಸಕಲವಿಧವಾಗಿ ಸಂತೈಸುವ ದೇವರು’ ಆಗಿದ್ದಾನೆ. ಆತನನ್ನು ಅನುಕರಿಸಲು ಕಲಿಯುವ ಮೂಲಕ, ಆತನ ಸೇವಕರು ‘ನಾನಾ ವಿಧವಾದ ಸಂಕಟಗಳಲ್ಲಿ ಬಿದ್ದಿರುವವರನ್ನು ಸಂತೈಸಲು ಶಕ್ತರಾಗಿರುತ್ತಾರೆ.’ (2 ಕೊರಿಂಥ 1:3, 4; ಎಫೆಸ 5:1) ಯೆಹೋವನ ಸಾಕ್ಷಿಗಳು ನಡೆಸುತ್ತಿರುವ ಸಾರುವ ಕೆಲಸದ ಮುಖ್ಯ ಗುರಿಗಳಲ್ಲಿ ಇದು ಒಂದಾಗಿದೆ.

ಕಷ್ಟದಲ್ಲಿದ್ದ ಒಬ್ಬ ಮಹಿಳೆಗೆ ಸಹಾಯವನ್ನು ನೀಡುವುದು

ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ, ಬಡತನ, ಯುದ್ಧ ಮತ್ತು ಒಂದು ಉತ್ತಮ ಜೀವನವನ್ನು ನಡೆಸುವ ಬಯಕೆಯು ಅನೇಕರನ್ನು ಹೆಚ್ಚು ಧನಿಕ ದೇಶಗಳಿಗೆ ವಲಸೆಹೋಗುವಂತೆ ಪ್ರಚೋದಿಸಿದೆ. ಆದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವುದು ಸುಲಭವಾಗಿರುವುದಿಲ್ಲ. ಅಲ್ಬೇನಿಯದ ಮಾನ್ಯೋಲೇ ಎಂಬುವಳು, ಸ್ವದೇಶಿಯರೊಂದಿಗೆ ಬೋರ್ಗೋಮಾನೇರೊ ಎಂಬ ಸ್ಥಳದಲ್ಲಿ ವಾಸಿಸುತ್ತಿದ್ದಳು. ಅವಳು ಇಟಲಿಯಲ್ಲಿ ಕಾನೂನುವಿರುದ್ಧವಾಗಿ ವಾಸಿಸುತ್ತಿದ್ದದ್ದರಿಂದ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿದ್ದ ವಾಂಡಾಳೊಂದಿಗೆ ಮಾತಾಡಲು ಹಿಂಜರಿದಳು. ಆದರೂ ವಾಂಡಾ ಹೇಗೊ ಕೊನೆಗೆ ಮಾನ್ಯೋಲೇಯಳನ್ನು ಭೇಟಿಮಾಡುವ ಏರ್ಪಾಡನ್ನು ಮಾಡಿದಳು. ಭಾಷೆಯ ಸಮಸ್ಯೆಯಿದ್ದರೂ, ಮಾನ್ಯೋಲೇ ಕೂಡಲೇ ದೇವರ ವಾಕ್ಯವನ್ನು ಅಭ್ಯಾಸಿಸುವುದಕ್ಕೆ ತುಂಬ ಆಸಕ್ತಿಯನ್ನು ತೋರಿಸಿದಳು. ಆದರೆ ಕೆಲವೊಂದು ಭೇಟಿಗಳ ನಂತರ, ವಾಂಡಾ ಅಲ್ಲಿ ಹೋದಾಗಲೆಲ್ಲಾ ಮನೆಯಲ್ಲಿ ಯಾರೂ ಇರುತ್ತಿರಲಿಲ್ಲ. ಏನಾಗಿತ್ತು? ಆ ಮನೆಯಲ್ಲಿದ್ದವರೆಲ್ಲರೂ ಓಡಿಹೋಗಿದ್ದರೆಂದು ವಾಂಡಾಳಿಗೆ ತಿಳಿದುಬಂತು. ಯಾಕೆಂದರೆ ಅವರಲ್ಲೊಬ್ಬನನ್ನು—ಮಾನ್ಯೋಲೇಯಳ ಗೆಳೆಯನನ್ನು—ಯಾವುದೋ ಕೊಲೆಯನ್ನು ಮಾಡಿದ್ದಕ್ಕಾಗಿ ಪೊಲೀಸರು ಹುಡುಕುತ್ತಿದ್ದರು!

ನಾಲ್ಕು ತಿಂಗಳುಗಳ ನಂತರ, ವಾಂಡಾ ಪುನಃ ಮಾನ್ಯೋಲೇಯಳನ್ನು ಭೇಟಿಯಾದಳು. “ಅವಳು ತುಂಬ ಬಿಳಿಚಿಕೊಂಡಿದ್ದು, ಕೃಶಳಾಗಿದ್ದಳು ಮತ್ತು ಅವಳ ಚರ್ಯೆಯಿಂದ ತುಂಬ ಕಷ್ಟಕ್ಕೆ ಒಳಗಾಗಿರುವ ವ್ಯಕ್ತಿಯಂತೆ ತೋರುತ್ತಿದ್ದಳು” ಎಂದು ವಾಂಡಾ ಜ್ಞಾಪಿಸಿಕೊಳ್ಳುತ್ತಾಳೆ. ತನ್ನ ಮಾಜಿ ಗೆಳೆಯನು ಸೆರೆಮನೆಯಲ್ಲಿದ್ದಾನೆಂದೂ, ತಾನು ಸಹಾಯವನ್ನು ಬೇಡಿಕೊಂಡಿದ್ದ ತನ್ನ ಸ್ನೇಹಿತರೆಲ್ಲರೂ ತನ್ನ ಕೈಬಿಟ್ಟಿದ್ದಾರೆಂದು ಮಾನ್ಯೋಲೇ ವಿವರಿಸಿದಳು. ಹತಾಶೆಯಿಂದ ಅವಳು ಸಹಾಯಕ್ಕಾಗಿ ದೇವರಿಗೆ ಪ್ರಾರ್ಥಿಸಿದಳು. ಆಗ ಅವಳಿಗೆ ಬೈಬಲಿನ ಕುರಿತಾಗಿ ಮಾತಾಡಿದ ವಾಂಡಾಳ ನೆನಪಾಯಿತು. ಅವಳನ್ನು ಪುನಃ ನೋಡಿ ಮಾನ್ಯೋಲೇಯಳಿಗೆ ಎಷ್ಟು ಸಂತೋಷವಾಯಿತು!

ಬೈಬಲ್‌ ಅಭ್ಯಾಸವನ್ನು ಪುನಃ ಆರಂಭಿಸಲಾಯಿತು, ಮತ್ತು ಸ್ವಲ್ಪ ಸಮಯದೊಳಗೆ ಮಾನ್ಯೋಲೇ ಕ್ರೈಸ್ತ ಕೂಟಗಳಿಗೆ ಹಾಜರಾಗಲಾರಂಭಿಸಿದಳು. ಇಟಲಿಯಲ್ಲಿ ಉಳಿಯಲು ಬೇಕಾಗಿರುವ ಕಾನೂನುಬದ್ಧ ಪರವಾನಗಿಯನ್ನು ಅವಳು ಗಿಟ್ಟಿಸಿಕೊಳ್ಳಲು ಶಕ್ತಳಾದಳು. ಒಂದು ವರ್ಷದ ನಂತರ ಮಾನ್ಯೋಲೇ ದೀಕ್ಷಾಸ್ನಾನ ಪಡೆದ ಸಾಕ್ಷಿಯಾದಳು. ದೈವಿಕ ವಾಗ್ದಾನಗಳಿಂದ ಸಂತೈಸಲ್ಪಟ್ಟು, ತನ್ನ ಸ್ವದೇಶಿಯರೊಂದಿಗೆ ಬೈಬಲಿನ ಸಾಂತ್ವನದಾಯಕ ಸಂದೇಶವನ್ನು ಹಂಚಿಕೊಳ್ಳಲು ಅವಳು ಈಗ ಅಲ್ಬೇನಿಯಕ್ಕೆ ಹಿಂದಿರುಗಿ ಹೋಗಿದ್ದಾಳೆ.

ವಲಸೆಗಾರರ ಶಿಬಿರಗಳಿರುವ ಪ್ರದೇಶದಲ್ಲಿ ಸಾಕ್ಷಿನೀಡುವುದು

ಇಟಲಿಯಲ್ಲಿರುವ ಅನೇಕ ಸಭೆಗಳು, ಮಾನ್ಯೋಲೇಯಳಂತಹ ವಲಸೆಗಾರರಿಗೆ ಸಾಕ್ಷಿಯನ್ನು ಕೊಡಲು ಏರ್ಪಾಡುಗಳನ್ನು ಮಾಡಿವೆ. ಉದಾಹರಣೆಗಾಗಿ, ಫ್ಲಾರೆನ್ಸ್‌ನಲ್ಲಿರುವ ಒಂದು ಸಭೆಯು, ವಲಸೆಗಾರರ ಶಿಬಿರ ಪ್ರದೇಶವೊಂದನ್ನು ಕ್ರಮವಾಗಿ ಸಂದರ್ಶಿಸಲು ಏರ್ಪಾಡುಗಳನ್ನು ಮಾಡಿತು. ಆ ಶಿಬಿರದಲ್ಲಿದ್ದ ನಿವಾಸಿಗಳಲ್ಲಿ ಅನೇಕರು ಪೂರ್ವ ಯೂರೋಪ್‌, ಮ್ಯಾಸೆಡೋನಿಯ, ಮತ್ತು ಕಾಸವೋದಿಂದ ಬಂದವರಾಗಿದ್ದು, ವಿಭಿನ್ನ ರೀತಿಯ ಕಷ್ಟಕಾರ್ಪಣ್ಯಗಳನ್ನು ಅನುಭವಿಸುತ್ತಿದ್ದರು. ಕೆಲವರು ಮಾದಕ ವಸ್ತುಗಳು ಅಥವಾ ಮದ್ಯಪಾನದ ವ್ಯಸನಿಗಳಾಗಿದ್ದರು. ಅನೇಕರು, ಚಿಕ್ಕಪುಟ್ಟ ಕಳ್ಳತನವನ್ನು ಮಾಡಿ ಜೀವನ ನಡೆಸುತ್ತಿದ್ದರು.

ಈ ಸಮುದಾಯದಲ್ಲಿ ಸಾರುವುದು ಒಂದು ಪಂಥಾಹ್ವಾನವಾಗಿತ್ತು. ಆದರೆ, ಪಾಓಲಾ ಎಂಬ ಪೂರ್ಣ ಸಮಯದ ಸೌವಾರ್ತಿಕಳು, ಮ್ಯಾಸೆಡೋನಿಯದಿಂದ ಬಂದಿದ್ದ ಜಾಕ್ಲೀನಾ ಎಂಬ ಸ್ತ್ರೀಯನ್ನು ಸಂಪರ್ಕಿಸಲು ಶಕ್ತಳಾದಳು. ಕೆಲವೊಂದು ಸಂಭಾಷಣೆಗಳ ನಂತರ ಜಾಕ್ಲೀನಾಳು, ತನ್ನ ಸ್ನೇಹಿತೆ ಸೂಸಾನ್ನಳಿಗೆ ಬೈಬಲನ್ನು ಪರೀಕ್ಷಿಸಿ ನೋಡುವಂತೆ ಉತ್ತೇಜಿಸಿದಳು. ಸೂಸಾನ್ನ ಬೇರೆ ಸಂಬಂಧಿಕರೊಂದಿಗೆ ಮಾತಾಡಿದಳು. ಸ್ವಲ್ಪ ಸಮಯದೊಳಗೆ, ಕುಟುಂಬದಲ್ಲಿ ಐದು ಮಂದಿ ಬೈಬಲನ್ನು ಕ್ರಮವಾಗಿ ಅಭ್ಯಾಸಿಸುತ್ತಿದ್ದರು, ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದರು, ಮತ್ತು ತಾವು ಕಲಿತುಕೊಳ್ಳುತ್ತಿದ್ದ ವಿಷಯಗಳನ್ನು ಜೀವನದಲ್ಲಿ ಅನ್ವಯಿಸಿಕೊಳ್ಳುತ್ತಿದ್ದರು. ಅವರು ಸಮಸ್ಯೆಗಳನ್ನು ಎದುರಿಸುತ್ತಿರುವುದಾದರೂ, ಯೆಹೋವನಿಂದ ಮತ್ತು ಆತನ ವಾಕ್ಯದಿಂದ ಸಾಂತ್ವನವನ್ನು ಪಡೆದುಕೊಳ್ಳುತ್ತಾರೆ.

ಒಬ್ಬ ಕ್ರೈಸ್ತ ಸಂನ್ಯಾಸಿನಿಯು ಯೆಹೋವನಿಂದ ಸಾಂತ್ವನವನ್ನು ಪಡೆದುಕೊಳ್ಳುತ್ತಾಳೆ

ಫೋರ್ಮೀಯೊ ಎಂಬ ಪಟ್ಟಣದಲ್ಲಿ, ಆಸುಂಟಾ ಎಂಬ ಹೆಸರಿನ ಒಬ್ಬ ಪೂರ್ಣ ಸಮಯದ ಸೌವಾರ್ತಿಕಳು, ಸ್ವಲ್ಪ ಕಷ್ಟಪಟ್ಟು ನಡೆಯುತ್ತಿದ್ದ ಒಬ್ಬ ಸ್ತ್ರೀಯೊಂದಿಗೆ ಮಾತಾಡಿದಳು. ಆ ಸ್ತ್ರೀಯು ಒಬ್ಬ ಕ್ರೈಸ್ತ ಸಂನ್ಯಾಸಿನಿಯಾಗಿದ್ದಳು. ಅವಳು ಆಸ್ಪತ್ರೆಗಳಲ್ಲಿ ಮತ್ತು ಖಾಸಗಿ ಮನೆಗಳಲ್ಲಿ ಅಸ್ವಸ್ಥರಿಗೂ, ಅಶಕ್ತರಿಗೂ ನೆರವನ್ನು ನೀಡುವ ಒಂದು ಧಾರ್ಮಿಕ ಸಂಸ್ಥೆಗೆ ಸೇರಿದವಳಾಗಿದ್ದಳು.

ಆಸುಂಟಾ ಆ ಸಂನ್ಯಾಸಿನಿಗೆ ಹೇಳಿದ್ದು: “ನೀವೂ ಕಷ್ಟಪಡುತ್ತಿದ್ದೀರಿ ಅಲ್ಲವೇ? ನಮಗೆಲ್ಲರಿಗೂ ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆಂಬುದು ದುಃಖಕರವಾದ ಸಂಗತಿ.” ಆಗ ಆ ಸಂನ್ಯಾಸಿನಿಯು ತಟತಟನೆ ಕಣ್ಣೀರು ಸುರಿಸಿ, ತನಗೆ ಗಂಭೀರವಾದ ಆರೋಗ್ಯ ಸಮಸ್ಯೆಗಳಿವೆಯೆಂದು ವಿವರಿಸಿದಳು. ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ದೇವರು ಅವಳಿಗೆ ಸಾಂತ್ವನವನ್ನು ಕೊಡಬಲ್ಲನೆಂದು ಹೇಳುತ್ತಾ, ಆಸುಂಟಾ ಅವಳನ್ನು ಉತ್ತೇಜಿಸಿದಳು. ಆಸುಂಟಾ ನೀಡಿದ ಬೈಬಲಾಧಾರಿತ ಪತ್ರಿಕೆಗಳನ್ನು ಅವಳು ತೆಗೆದುಕೊಂಡಳು.

ಆ ಸಂನ್ಯಾಸಿನಿಯ ಹೆಸರು ಪಾಲ್ಮೀರಾ ಆಗಿತ್ತು. ಅವರ ಮುಂದಿನ ಭೇಟಿಯ ಸಮಯದಲ್ಲಿ, ತಾನು ತುಂಬ ಕಷ್ಟಾನುಭವಿಸುತ್ತಿದ್ದೇನೆಂದು ಅವಳು ಒಪ್ಪಿಕೊಂಡಳು. ಕ್ರೈಸ್ತ ಸಂನ್ಯಾಸಿನಿಯರು ನಡೆಸುತ್ತಿದ್ದ ಒಂದು ಸಂಸ್ಥೆಯಲ್ಲಿ ಅವಳು ದೀರ್ಘ ಸಮಯದ ವರೆಗೆ ವಾಸಿಸಿದ್ದಳು. ಆದರೆ ಆರೋಗ್ಯದ ಸಮಸ್ಯೆಗಳಿಂದಾಗಿ ಅವಳು ಆ ಸಂಸ್ಥೆಯನ್ನು ತಾತ್ಕಾಲಿಕವಾಗಿ ಬಿಟ್ಟುಹೋಗಬೇಕಾದಾಗ, ಪುನಃ ಅಲ್ಲಿ ಸೇರಿಕೊಳ್ಳಲು ಅವಳಿಗೆ ಅನುಮತಿ ಸಿಗಲಿಲ್ಲ. ಹಾಗಿದ್ದರೂ, ಒಬ್ಬ ಸಂನ್ಯಾಸಿನಿಯಾಗಿ ತಾನು ದೇವರಿಗೆ ಮಾಡಿದ್ದ ಪ್ರತಿಜ್ಞೆಗಳಿಗೆ ಬದ್ಧಳಾಗಿದ್ದೇನೆಂದು ಪಾಲ್ಮೀರಾಳಿಗೆ ಅನಿಸಿತು. ಅವಳು “ಚಿಕಿತ್ಸೆ”ಗಾಗಿ ಭಕ್ತಿಚಿಕಿತ್ಸಕರ ಬಳಿ ಹೋದರೂ, ಆ ಅನುಭವದಿಂದ ಮಾನಸಿಕ ಸಂಕಟಕ್ಕೀಡಾದಳು. ಪಾಲ್ಮೀರಾ ಬೈಬಲನ್ನು ಅಭ್ಯಾಸಮಾಡಲು ಒಪ್ಪಿಕೊಂಡಳು, ಮತ್ತು ಒಂದು ವರ್ಷದ ವರೆಗೆ ಕ್ರೈಸ್ತ ಕೂಟಗಳಿಗೆ ಹಾಜರಾದಳು. ಅನಂತರ ಅವಳು ಇನ್ನೊಂದು ಕ್ಷೇತ್ರಕ್ಕೆ ಸ್ಥಳಾಂತರಿಸಿದಳು, ಮತ್ತು ಅವಳಿಗೆ ಆ ಸಾಕ್ಷಿಯೊಂದಿಗಿನ ಸಂಪರ್ಕವು ಕಡಿದುಹೋಯಿತು. ಎರಡು ವರ್ಷಗಳ ಬಳಿಕ ಆಸುಂಟಾ ಪಾಲ್ಮೀರಾಳನ್ನು ಪುನಃ ಭೇಟಿಯಾದಳು. ಪಾಲ್ಮೀರಾ ತನ್ನ ಕುಟುಂಬ ಮತ್ತು ಪಾದ್ರಿವರ್ಗದಿಂದ ತುಂಬ ವಿರೋಧವನ್ನು ಎದುರಿಸಿದಳು. ಹಾಗಿದ್ದರೂ, ಅವಳು ತನ್ನ ಬೈಬಲ್‌ ಅಭ್ಯಾಸವನ್ನು ಪುನಃ ಆರಂಭಿಸಿ, ಆತ್ಮಿಕ ಪ್ರಗತಿಯನ್ನು ಮಾಡಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ದೀಕ್ಷಾಸ್ನಾನವನ್ನು ಪಡೆದುಕೊಂಡಳು.

ಹೌದು, ‘ಸಾಂತ್ವನವನ್ನು ಕೊಡುವ ದೇವರ’ ಸಂದೇಶದಿಂದ ಅನೇಕರು ಉತ್ತೇಜಿಸಲ್ಪಟ್ಟಿದ್ದಾರೆ. (ರೋಮಾಪುರ 15:4, 5) ಆದುದರಿಂದಲೇ, ಇಟಲಿಯಲ್ಲಿರುವ ಯೆಹೋವನ ಸಾಕ್ಷಿಗಳು, ಆತನ ಅದ್ಭುತಕರವಾದ ಸಾಂತ್ವನದ ಸಂದೇಶವನ್ನು ಇತರರಿಗೆ ನೀಡುವ ಮೂಲಕ ದೇವರನ್ನು ಅನುಕರಿಸುತ್ತಾ ಇರುವ ದೃಢಸಂಕಲ್ಪವನ್ನು ಮಾಡಿದ್ದಾರೆ.