ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ದಾನಿಯೇಲನ ಪುಸ್ತಕವು ವಿವರಿಸಲ್ಪಟ್ಟದ್ದು!

ದಾನಿಯೇಲನ ಪುಸ್ತಕವು ವಿವರಿಸಲ್ಪಟ್ಟದ್ದು!

ದಾನಿಯೇಲನ ಪುಸ್ತಕವು ವಿವರಿಸಲ್ಪಟ್ಟದ್ದು!

ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ 320 ಪುಟಗಳ ಹೊಸದಾಗಿ ಬಿಡುಗಡೆಯಾದ ಪುಸ್ತಕವನ್ನು ಪಡೆದುಕೊಳ್ಳಲು ಅಧಿವೇಶನದಲ್ಲಿ ಹಾಜರಾದವರು ಉತ್ಸುಕರಾಗಿದ್ದರು. ಈ ಪುಸ್ತಕದ ಬಗ್ಗೆ ಅವರಿಗೆ ಹೇಗನಿಸಿತು? ಕೆಲವರು ಅದರ ಕುರಿತಾಗಿ ನೀಡಿದ ಹೇಳಿಕೆಗಳನ್ನು ಪರಿಗಣಿಸಿರಿ.

“ಅಧಿಕಾಂಶ ಹದಿವಯಸ್ಕರಂತೆ, ನನಗೂ ಹಳೆಯ ಇತಿಹಾಸದ ಕುರಿತು ಅಧ್ಯಯನಮಾಡುವುದು ಅಷ್ಟೇನೂ ಇಷ್ಟವಾಗುವುದಿಲ್ಲ. ಆದುದರಿಂದ, ದಾನಿಯೇಲನ ಪ್ರವಾದನೆಗೆ ಗಮನಕೊಡಿರಿ! ಎಂಬ ಹೊಸ ಪುಸ್ತಕದ ವೈಯಕ್ತಿಕ ಪ್ರತಿಯನ್ನು ಪಡೆದುಕೊಂಡಾಗ, ಅದನ್ನು ಓದುವುದರ ಬಗ್ಗೆ ನಾನು ಉತ್ಸುಕಳಾಗಿರಲಿಲ್ಲ. ಆದರೂ ಸುಮ್ಮನೆ ಓದಿನೋಡೋಣವೆಂದು ನೆನಸಿದೆ. ಓಹ್‌, ನಿಜವಾಗಿಯೂ ನನ್ನ ಅಭಿಪ್ರಾಯವು ಎಷ್ಟು ತಪ್ಪಾಗಿತ್ತು! ಇದು ನಾನು ಈ ಹಿಂದೆ ಓದಿರುವ ಪುಸ್ತಕಗಳಲ್ಲಿಯೇ ಅತ್ಯುತ್ಕೃಷ್ಟವಾದ ಪುಸ್ತಕವಾಗಿದೆ. ನಿಜವಾಗಿಯೂ ಇದು ಓದುಗನ ಆಸಕ್ತಿಯನ್ನು ಕೆರಳಿಸುವಂತಹದ್ದಾಗಿದೆ! ಸಾವಿರಾರು ವರ್ಷಗಳ ಹಿಂದೆ ನಡೆದ ಒಂದು ವೃತ್ತಾಂತವನ್ನು ಓದುತ್ತಿದ್ದೇನೆ ಎಂಬ ಭಾವನೆಯು ಈಗ ನನ್ನ ಹತ್ತಿರ ಸುಳಿಯುವುದೇ ಇಲ್ಲ. ನನ್ನನ್ನು ನಾನು ದಾನಿಯೇಲನ ಸ್ಥಾನದಲ್ಲಿ ಇರಿಸಿಕೊಳ್ಳಸಾಧ್ಯವಿದೆ ಎಂದು ಅನಿಸಿದ್ದು ಇದೇ ಮೊದಲ ಬಾರಿ. ಕುಟುಂಬದಿಂದ ಅಗಲಿಸಲ್ಪಟ್ಟು, ಗೊತ್ತಿಲ್ಲದ ದೇಶಕ್ಕೆ ಕಳುಹಿಸಲ್ಪಟ್ಟು, ಮತ್ತು ಅಲ್ಲಿ ಸತತವಾಗಿ ನಿಮ್ಮ ಸಮಗ್ರತೆಯು ಪರೀಕ್ಷಿಸಲ್ಪಡುವಾಗ ಹೇಗನಿಸಬಹುದು ಎಂಬುದನ್ನು ಈಗ ನಾನು ನನ್ನ ಮನೋನೇತ್ರದಲ್ಲಿ ಚಿತ್ರಿಸಿಕೊಳ್ಳಸಾಧ್ಯವಿದೆ. ಈ ಪುಸ್ತಕವನ್ನು ಹೊರತಂದದ್ದಕ್ಕಾಗಿ ನಾನು ನಿಮಗೆ ಆಭಾರಿ.”—ಆ್ಯನ್ಯ.

“ತನ್ನ ಜನರನ್ನು ಬಾಧಿಸುವ ವಿಷಯಗಳ ಮೇಲೆ ಯೆಹೋವನಿಗೆ ಸಂಪೂರ್ಣ ನಿಯಂತ್ರಣವಿದೆ ಎಂಬ ಸುಸ್ಪಷ್ಟವಾದ ಸಂಗತಿಯು ನನಗೆ ಬಹಳ ಸಹಾಯವನ್ನು ನೀಡುತ್ತದೆ. ದಾನಿಯೇಲನ ದರ್ಶನಗಳು ಮತ್ತು ಸ್ವಪ್ನಗಳು ಹಾಗೂ ಇತರರ ಸ್ವಪ್ನಗಳ ಅರ್ಥವಿವರಣೆಯನ್ನು ನೀಡಿರುವುದನ್ನು ನೋಡುವಾಗ, ದೇವರು ತಾನು ಉದ್ದೇಶಿಸಿರುವ ರೀತಿಯಲ್ಲಿಯೇ ಘಟನೆಗಳು ಘಟಿಸುವಂತೆ ಮಾಡುತ್ತಾನೆ ಎಂಬುದು ತೀರ ಸ್ಪಷ್ಟವಾಗುತ್ತದೆ. ಹೊಸ ಲೋಕದ ಸಂಬಂಧದಲ್ಲಿ ಬೈಬಲಿನಲ್ಲಿರುವ ಪ್ರವಾದನಾತ್ಮಕ ಚಿತ್ರಗಳಲ್ಲಿ ನಮ್ಮ ನಿರೀಕ್ಷೆಯನ್ನು ಇದು ಇನ್ನೂ ಬಲಗೊಳಿಸುತ್ತದೆ.”—ಚೆಸ್ಟರ್‌.

“ದಾನಿಯೇಲನು ಸಜೀವವಾಗಿ ಎದ್ದುಬರುವಂತೆ ಮಾಡಿದ ವೈಖರಿಯನ್ನು ನಾನು ತುಂಬ ಮೆಚ್ಚಿಕೊಂಡೆ. ಅವನ ಹಿತಚಿಂತನೆಗಳನ್ನು ಎತ್ತಿತೋರಿಸಿದ ರೀತಿಯಿಂದ ನಾನು ಅವನ ಬಗ್ಗೆ ಚೆನ್ನಾಗಿ ಅರಿತುಕೊಂಡಿದ್ದೇನೆ ಎಂಬ ಅನಿಸಿಕೆ ನನಗುಂಟಾಯಿತು. ಅವನು ಯೆಹೋವನಿಗೆ ಏಕೆ ಅಷ್ಟೊಂದು ಪ್ರಿಯ ವ್ಯಕ್ತಿಯಾಗಿದ್ದನೆಂಬುದು ಈಗ ನನಗೆ ಸ್ಪಷ್ಟವಾಗಿದೆ. ಎಲ್ಲ ಕಷ್ಟಹಿಂಸೆಗಳ ಮಧ್ಯದಲ್ಲಿಯೂ, ಅವನು ತನ್ನ ಬಗ್ಗೆ ಚಿಂತಿತನಾಗಿರಲಿಲ್ಲ. ಅವನ ಆದ್ಯ ಚಿಂತೆಯು ಯೆಹೋವನ ಮತ್ತು ಆತನ ಸೊಗಸಾದ ಹೆಸರಿನ ಕುರಿತಾಗಿಯೇ ಆಗಿತ್ತು. ಈ ಅಂಶಗಳು ಎದ್ದುಕಾಣುವಂತೆ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.”—ಜಾಯ್‌.

“ಈ ರೀತಿಯ ಪುಸ್ತಕಕ್ಕಾಗಿಯೇ ನಾವು ಎದುರುನೋಡುತ್ತಿದ್ದದ್ದು! ದಾನಿಯೇಲನ ಪುಸ್ತಕವು ನಿಜವಾಗಿಯೂ ನಮ್ಮಲ್ಲಿ ಪ್ರತಿಯೊಬ್ಬರಿಗೂ ಎಷ್ಟರ ಮಟ್ಟಿಗೆ ಅನ್ವಯಿಸುತ್ತದೆ ಎಂಬುದನ್ನು ಹಿಂದೆಂದೂ ಇಷ್ಟು ಸ್ಪಷ್ಟವಾಗಿ ತಿಳಿಸಿರಲಿಲ್ಲ. ನಾನು ಈ ಪುಸ್ತಕವನ್ನು ಪಡೆದುಕೊಂಡ ಅನಂತರ, ಅಂದಿನ ಸಂಜೆ ಹೊಸ ಪುಸ್ತಕದ ಅಧಿಕಾಂಶ ಭಾಗವನ್ನು ಓದಿದ ಬಳಿಕ, ಓದುವುದನ್ನು ನಿಲ್ಲಿಸಿ ಪ್ರಾರ್ಥನೆಯಲ್ಲಿ ಯೆಹೋವನಿಗೆ ಧನ್ಯವಾದವನ್ನು ಅರ್ಪಿಸಲೇಬೇಕಾಯಿತು.”—ಮಾರ್ಕ್‌.

“ಈ ಪುಸ್ತಕವು ನಮ್ಮ ಮಕ್ಕಳ ಮೇಲೆ ಇಷ್ಟೊಂದು ಪ್ರಭಾವವನ್ನು ಬೀರುವುದೆಂದು ನಾವು ನೆನಸಿರಲೇ ಇಲ್ಲ. ನಮಗೆ ಐದು ಹಾಗೂ ಮೂರು ವರ್ಷ ಪ್ರಾಯದ ಮಕ್ಕಳಿದ್ದಾರೆ. . . . ಬೈಬಲ್‌ ಕಥೆಗಳ ನನ್ನ ಪುಸ್ತಕದಲ್ಲಿರುವ ದಾನಿಯೇಲ, ಹನನ್ಯ, ಮಿಶಾಯೇಲ, ಮತ್ತು ಅಜರ್ಯರ ಕಥೆಗಳು ಅವರ ಅಚ್ಚುಮೆಚ್ಚಿನ ಕಥೆಗಳಾಗಿವೆ. ಆದುದರಿಂದ, ದಾನಿಯೇಲನ ಪ್ರವಾದನೆ ಪುಸ್ತಕದಲ್ಲಿನ ವಿಷಯವು ಅವರನ್ನು ನಿಜವಾಗಿಯೂ ಪ್ರಭಾವಿಸಿದೆ. ಈ ಎಳೆಯ ಪ್ರಾಯದಲ್ಲೂ, ಅವರು ಈ ನೀತಿವಂತ ಯುವಕರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲು ಶಕ್ತರಾಗಿದ್ದಾರೆ. ಇವರು ನಮ್ಮ ಮಕ್ಕಳಿಗೆ ಎಂತಹ ಆದರ್ಶಪ್ರಾಯ ವ್ಯಕ್ತಿಗಳು! ನಮಗೆ ಎಂತಹ ಒಂದು ಅದ್ಭುತಕರವಾದ ಸಾಧನವನ್ನು ನೀವು ನೀಡಿದ್ದೀರಿ! ನಿಮಗೆ ಅನಂತಾನಂತ ಧನ್ಯವಾದಗಳು!”—ಬೆತೆಲ್‌.

“ಆ ಯುವ ಇಬ್ರಿಯ ಹುಡುಗರು ತಮ್ಮ ನಂಬಿಕೆಗಾಗಿ ಪರೀಕ್ಷೆಗಳನ್ನು ಎದುರಿಸುವಾಗ ನಾನು ಸಹ ಅವರ ಜೊತೆಯೇ ಇದ್ದಂತೆ ನನಗೆ ಭಾಸವಾಯಿತು. ಮತ್ತು ಇದು ನನ್ನ ಸ್ವಂತ ನಂಬಿಕೆಯನ್ನು ಪರೀಕ್ಷಿಸಿಕೊಳ್ಳುವಂತೆ ಉತ್ತೇಜನವನ್ನು ನೀಡಿತು. “ನೀವೇನನ್ನು ಗ್ರಹಿಸಿದಿರಿ?” ಎಂಬ ಶೀರ್ಷಿಕೆಯುಳ್ಳ ಪುನರ್ವಿಮರ್ಶಾ ರೇಖಾಚೌಕವು, ಅಧ್ಯಾಯದ ವಿಷಯಗಳನ್ನು ಹೃದಯಕ್ಕೆ ನಾಟಿಸುತ್ತದೆ. ಮತ್ತೊಂದು ಮೇರುಕೃತಿಗೆ ಪುನಃ ನಿಮಗೆ ಧನ್ಯವಾದಗಳು.”—ಲಿಡೀಯ.