ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಕುರಿತು ನಿಮಗೆ ಯಾವ ಅಭಿಪ್ರಾಯವಿದೆ?

ನಿಮ್ಮ ಕುರಿತು ನಿಮಗೆ ಯಾವ ಅಭಿಪ್ರಾಯವಿದೆ?

ನಿಮ್ಮ ಕುರಿತು ನಿಮಗೆ ಯಾವ ಅಭಿಪ್ರಾಯವಿದೆ?

ಅವನೊಬ್ಬ ಅಹಂಭಾವದ ವ್ಯಕ್ತಿಯಾಗಿದ್ದನು. ಅವನನ್ನು ಒಂದು ಉನ್ನತ ಸರಕಾರಿ ಹುದ್ದೆಗೆ ಬಡ್ತಿಮಾಡಿದ್ದರಿಂದ, ತನಗೆ ಸಿಗುತ್ತಿದ್ದ ಹೊಗಳಿಕೆ ಮತ್ತು ಮೆಚ್ಚುಗೆಯಿಂದ ಅವನು ಉಬ್ಬಿಹೋಗಿದ್ದನು. ಆದರೆ ಇನ್ನೊಬ್ಬ ಅಧಿಕಾರಿಯು ಅವನಿಗೆ ಅಂತಹ ಗೌರವವನ್ನು ಕೊಡದೆ ಹೋದಾಗ ಅವನು ಕೋಪಗೊಂಡನು. ಅಹಂಭಾವವಿದ್ದ ಈ ಅಧಿಕಾರಿಯು, ಸೇಡುತೀರಿಸಿಕೊಳ್ಳುವ ಉದ್ದೇಶದಿಂದ ತನಗೆ ಗೌರವ ತೋರಿಸದಿದ್ದ ಆ ವ್ಯಕ್ತಿಯ ಕುಲದವರನ್ನೆಲ್ಲ ಆ ಸಾಮ್ರಾಜ್ಯದಿಂದ ಅಳಿಸಿಹಾಕಲು ಸಂಚುಹೂಡಿದನು. ಸ್ವಪ್ರತಿಷ್ಠೆಯ ಎಂತಹ ವಿಕೃತರೂಪ!

ಈ ಸಂಚುಗಾರನು, ಪರ್ಷಿಯದ ಅರಸನಾಗಿದ್ದ ಅಹಷ್ವೇರೋಷನ ಆಸ್ಥಾನದಲ್ಲಿ ಒಬ್ಬ ದೊಡ್ಡ ಅಧಿಕಾರಿಯಾಗಿದ್ದ ಹಾಮಾನನಾಗಿದ್ದನು. ಅವನ ದ್ವೇಷಕ್ಕೆ ಗುರಿಯಾಗಿದ್ದ ವ್ಯಕ್ತಿ ಯಾರು? ಮೊರ್ದೆಕೈ ಎಂಬ ಹೆಸರಿನ ಯೆಹೂದಿಯೇ. ಯೆಹೂದ್ಯರೆಲ್ಲರನ್ನು ಅಳಿಸಿಬಿಡಬೇಕೆಂಬ ಹಾಮಾನನ ಪ್ರತಿಕ್ರಿಯೆಯು ವಿಪರೀತವಾಗಿತ್ತಾದರೂ, ಇದು ಅಹಂಭಾವದ ಅಪಾಯವನ್ನು ಹಾಗೂ ಅದರ ಭೀಕರ ಪರಿಣಾಮಗಳನ್ನು ತೋರಿಸುತ್ತದೆ. ಹಾಮಾನನ ಸೊಕ್ಕಿನ ಸ್ವಭಾವವು, ಇತರರಿಗೆ ಸಂಕಷ್ಟವನ್ನು ತಂದೊಡ್ಡಿದ್ದು ಮಾತ್ರವಲ್ಲ, ಅದು ಎಲ್ಲರ ಮುಂದೆ ಅವನ ಸ್ವಂತ ಅಪಮಾನಕ್ಕೆ ಮತ್ತು ಕೊನೆಗೆ ಅವನ ಮರಣಕ್ಕೆ ನಡಿಸಿತು.—ಎಸ್ತೇರ್‌ 3:1-9; 5:8-14; 6:4-10; 7:1-10.

ಸತ್ಯಾರಾಧಕರಿಗೂ ಅಹಂಭಾವವು ತಟ್ಟುತ್ತದೆ

ನಾವು ‘ನಮ್ಮ ದೇವರೊಂದಿಗೆ ನಡೆಯುವಾಗ ವಿನಯಶೀಲರಾಗಿರಬೇಕೆಂದು’ ಯೆಹೋವನು ಅಪೇಕ್ಷಿಸುತ್ತಾನೆ. (ಮೀಕ 6:8, NW) ತಮ್ಮ ಕುರಿತಾಗಿ ವಿನಯಶೀಲ ಅಭಿಪ್ರಾಯವನ್ನು ಇಟ್ಟುಕೊಳ್ಳಲು ತಪ್ಪಿಹೋದ ವಿವಿಧ ವ್ಯಕ್ತಿಗಳ ವೃತ್ತಾಂತಗಳು ಬೈಬಲಿನಲ್ಲಿವೆ. ಇದರಿಂದಾಗಿ ಅವರು ಸಮಸ್ಯೆಗಳಿಗೆ ಮತ್ತು ದುಃಖಕ್ಕೆ ಒಳಗಾದರು. ಈ ಉದಾಹರಣೆಗಳಲ್ಲಿ ಕೆಲವೊಂದನ್ನು ಪರಿಗಣಿಸುವುದು, ಸಮತೆಯಿಲ್ಲದೆ ಯೋಚಿಸುವುದರ ಬುದ್ಧಿಗೇಡಿತನ ಮತ್ತು ಅಪಾಯವನ್ನು ನೋಡಲು ನಮಗೆ ಸಹಾಯಮಾಡುವುದು.

ದೇವರ ಪ್ರವಾದಿಯಾದ ಯೋನನ ಯೋಚನಾ ರೀತಿಯು ಎಷ್ಟರ ಮಟ್ಟಿಗೆ ಸಮತೂಕವನ್ನು ಕಳೆದುಕೊಂಡಿತ್ತೆಂದರೆ, ನಿನೆವೆಯ ಜನರ ಮೇಲೆ ಬರಲಿದ್ದ ಯೆಹೋವನ ನ್ಯಾಯತೀರ್ಪಿನ ಕುರಿತಾಗಿ ಅವರನ್ನು ಎಚ್ಚರಿಸಲು ದೇವರು ಅವನನ್ನು ನೇಮಿಸಿದಾಗ, ಅವನು ಓಡಿಹೋಗಲು ಪ್ರಯತ್ನಿಸಿದನು. (ಯೋನ 1:1-3) ತದನಂತರ, ಅವನ ಸಾರುವ ಚಟುವಟಿಕೆಯಿಂದಾಗಿ ನಿನೆವೆಯವರು ಪಶ್ಚಾತ್ತಾಪಪಟ್ಟಾಗ ಯೋನನು ಮುನಿಸಿಕೊಂಡನು. ಒಬ್ಬ ಪ್ರವಾದಿಯೋಪಾದಿ ತನ್ನ ಹೆಸರಿಗೆ ಏನಾಗುವುದೆಂಬುದರ ಕುರಿತಾಗಿ ಅವನು ಎಷ್ಟು ಚಿಂತಿತನಾಗಿದ್ದನೆಂದರೆ, ನಿನೆವೆಯಲ್ಲಿದ್ದ ಸಾವಿರಾರು ಮಂದಿಯ ಜೀವಗಳ ಕುರಿತಾಗಿ ಅವನಿಗೆ ಎಳ್ಳಷ್ಟೂ ಚಿಂತೆಯಿರಲಿಲ್ಲ. (ಯೋನ 4:1-3) ನಾವು ಉದ್ಧಟತನದಿಂದ ನಮ್ಮ ಸ್ವಪ್ರತಿಷ್ಠೆಯ ಕುರಿತಾಗಿ ತೀರ ಹೆಚ್ಚು ಚಿಂತಿಸುವಲ್ಲಿ, ನಮ್ಮ ಸುತ್ತಲಿರುವ ಜನರು ಮತ್ತು ಘಟನೆಗಳ ಕುರಿತು ಭೇದಭಾವರಹಿತವಾದ ಮತ್ತು ಸರಿಯಾದ ದೃಷ್ಟಿಕೋನವನ್ನಿಡಲು ನಮಗೆ ಕಷ್ಟವಾಗಬಹುದು.

ಯೆಹೂದದ ಒಬ್ಬ ಒಳ್ಳೆಯ ಅರಸನಾಗಿದ್ದ ಉಜ್ಜೀಯನನ್ನು ಪರಿಗಣಿಸಿರಿ. ತನ್ನ ಯೋಚನಾ ರೀತಿಯಲ್ಲಿ ಅವನು ಸಮತೂಕವನ್ನು ಕಳೆದುಕೊಂಡಾಗ, ಯಾಜಕರು ಮಾಡುವಂತಹ ಕೆಲವೊಂದು ಕೆಲಸಗಳನ್ನು ಅಹಂಭಾವದಿಂದ ಸ್ವತಃ ಮಾಡಲು ಪ್ರಯತ್ನಿಸಿದನು. ಉದ್ಧಟತನ ಮತ್ತು ದುರಹಂಕಾರದ ಕೃತ್ಯಗಳಿಂದಾಗಿ ಅವನು ತನ್ನ ಆರೋಗ್ಯವನ್ನು ಮತ್ತು ದೈವಿಕ ಮೆಚ್ಚುಗೆಯನ್ನು ಕಳೆದುಕೊಳ್ಳಬೇಕಾಯಿತು.—2 ಪೂರ್ವಕಾಲವೃತ್ತಾಂತ 26:3, 16-21.

ಯೋಚನಾ ರೀತಿಯಲ್ಲಿ ಸಮತೂಕವನ್ನು ಕಳೆದುಕೊಂಡದ್ದರಿಂದ ಯೇಸುವಿನ ಅಪೊಸ್ತಲರು ಸಹ ಬಹುಮಟ್ಟಿಗೆ ದಾರಿತಪ್ಪಿದರು. ಅವರು ತಮ್ಮ ವೈಯಕ್ತಿಕ ಹಿರಿಮೆ ಮತ್ತು ಅಧಿಕಾರದ ಕುರಿತಾಗಿಯೇ ಚಿಂತಿಸುತ್ತಿದ್ದರು. ಒಂದು ದೊಡ್ಡ ಪರೀಕ್ಷೆಯ ಸಮಯದಲ್ಲಿ ಅವರು ಯೇಸುವನ್ನು ಬಿಟ್ಟು ಓಡಿಹೋದರು. (ಮತ್ತಾಯ 18:1; 20:20-28; 26:56; ಮಾರ್ಕ 9:33, 34; ಲೂಕ 22:24) ಅವರಲ್ಲಿದ್ದ ವಿನಯಶೀಲತೆಯ ಕೊರತೆ ಮತ್ತು ಸ್ವಪ್ರತಿಷ್ಠೆಯ ಭಾವನೆಗಳು, ಅವರು ಯೆಹೋವನ ಉದ್ದೇಶವನ್ನು ಮತ್ತು ಆತನ ಚಿತ್ತದ ಸಂಬಂಧದಲ್ಲಿ ತಮಗಿದ್ದ ಪಾತ್ರವನ್ನು ಬಹುಮಟ್ಟಿಗೆ ಮರೆತುಬಿಡುವಂತೆ ಮಾಡಿತು.

ಸ್ವಪ್ರತಿಷ್ಠೆಯ ಹಾನಿಕಾರಕ ಪರಿಣಾಮಗಳು

ನಾವು ನಮ್ಮ ಕುರಿತಾಗಿ ಅಸಮತೂಕ ಅಭಿಪ್ರಾಯವುಳ್ಳವರಾಗಿರುವಲ್ಲಿ, ಅದು ನಮ್ಮ ಮನಸ್ಸಿಗೆ ನೋವನ್ನುಂಟುಮಾಡಿ, ಇತರರೊಂದಿಗಿನ ನಮ್ಮ ಸಂಬಂಧವನ್ನು ಕೆಡಿಸಬಲ್ಲದು. ಉದಾಹರಣೆಗಾಗಿ, ನಾವು ಒಂದು ಕೋಣೆಯಲ್ಲಿ ಕುಳಿತುಕೊಂಡಿರುವಾಗ, ಒಂದು ಜೋಡಿ ತಮ್ಮೊಳಗೆ ಪಿಸುಗುಟ್ಟುತ್ತಾ ನಗಾಡುತ್ತಿರುವುದನ್ನು ನಾವು ಗಮನಿಸಬಹುದು. ನಾವು ಸ್ವವಿಚಾರಾಸಕ್ತರಾಗಿರುವಲ್ಲಿ ಅವರು ನಮ್ಮನ್ನು ಗೇಲಿಮಾಡುತ್ತಿರುವುದರಿಂದಲೇ ಇಷ್ಟು ಮೆಲ್ಲನೆ ಮಾತಾಡುತ್ತಿದ್ದಾರೆಂದು ನಾವು ತಪ್ಪಾಗಿ ಭಾವಿಸಬಹುದು. ಅವರು ಹಾಗೆ ಮಾಡುತ್ತಿರುವುದಕ್ಕೆ ಇನ್ನಾವ ವಿವರಣೆಯನ್ನೂ ನಾವು ಒಪ್ಪಿಕೊಳ್ಳಲು ಸಿದ್ಧರಾಗಿರಲಿಕ್ಕಿಲ್ಲ. ನಮ್ಮನ್ನು ಬಿಟ್ಟು ಅವರು ಇನ್ನಾರ ಕುರಿತಾಗಿ ಮಾತಾಡಬಲ್ಲರು ಎಂದು ನಾವು ತರ್ಕಿಸಬಹುದು. ನಾವು ನಮ್ಮ ಮನಶ್ಶಾಂತಿಯನ್ನು ಕಳೆದುಕೊಂಡು, ಇನ್ನು ಮುಂದೆ ಆ ದಂಪತಿಗಳೊಂದಿಗೆ ಮಾತಾಡಲೇಬಾರದೆಂದು ನಿರ್ಧರಿಸಬಹುದು. ಈ ರೀತಿಯಲ್ಲಿ, ನಮ್ಮ ಸ್ವಪ್ರತಿಷ್ಠೆಯ ಕುರಿತಾದ ಅಸಮತೂಕ ಅಭಿಪ್ರಾಯವು, ಸ್ನೇಹಿತರೊಂದಿಗೆ, ಕುಟುಂಬ ಸದಸ್ಯರೊಂದಿಗೆ ಹಾಗೂ ಇತರರೊಂದಿಗೆ ಮನಸ್ತಾಪಗಳಿಗೆ ನಡಿಸಿ, ಅವರೊಂದಿಗಿನ ಸಂಬಂಧಗಳನ್ನು ಕೆಡಿಸಬಲ್ಲದು.

ತಮ್ಮ ಸ್ವಪ್ರತಿಷ್ಠೆಯ ಕುರಿತು ತೀರ ಹೆಚ್ಚಾಗಿ ಯೋಚಿಸುವವರು, ಬಡಾಯಿಕೋರರಾಗಬಹುದು. ಅಂದರೆ, ಅತಿ ಶ್ರೇಷ್ಠವೆಂದು ತಾವೆಣಿಸುವ ತಮ್ಮ ಹುಟ್ಟು ಸಾಮರ್ಥ್ಯಗಳು, ಕ್ರಿಯೆಗಳು ಅಥವಾ ಸ್ವತ್ತುಗಳ ಕುರಿತಾಗಿ ಅವರು ಯಾವಾಗಲೂ ಜಂಬಕೊಚ್ಚಿಕೊಳ್ಳುತ್ತಾ ಇರಬಹುದು. ಅಥವಾ ಯಾವುದೇ ಸಂಭಾಷಣೆಯಲ್ಲಿ ತಮ್ಮ ಕುರಿತಾಗಿ ಏನನ್ನಾದರೂ ಹೇಳುವ ಮೂಲಕ ಅವರು ತಮ್ಮ ಕಡೆಗೆ ಗಮನವನ್ನು ಸೆಳೆದುಕೊಳ್ಳುತ್ತಿರಬಹುದು. ಅಂತಹ ರೀತಿಯ ಮಾತುಕತೆಯು, ಅವರಲ್ಲಿ ನಿಜವಾದ ಪ್ರೀತಿಯ ಕೊರತೆಯಿದೆ ಎಂಬುದನ್ನು ತೋರಿಸಿ, ಇತರರಿಗೆ ಕಿರಿಕಿರಿಯನ್ನು ಉಂಟುಮಾಡಬಲ್ಲದು. ಈ ರೀತಿಯಲ್ಲಿ ಒಣಹೆಮ್ಮೆಯುಳ್ಳವರು ತಮ್ಮನ್ನು ಇತರರಿಂದ ದೂರಮಾಡಿಕೊಳ್ಳುತ್ತಾರೆ.—1 ಕೊರಿಂಥ 13:4.

ಯೆಹೋವನ ಸಾಕ್ಷಿಗಳೋಪಾದಿ ನಾವು ನಮ್ಮ ಸಾರ್ವಜನಿಕ ಶುಶ್ರೂಷೆಯಲ್ಲಿ ಅಪಹಾಸ್ಯ ಮತ್ತು ತಿರಸ್ಕಾರವನ್ನು ಎದುರಿಸಬಹುದು. ಅಂತಹ ವಿರೋಧವು ನಮಗಲ್ಲ, ಬದಲಾಗಿ ನಮ್ಮ ಸಂದೇಶದ ಮೂಲನಾಗಿರುವ ಯೆಹೋವನಿಗೆ ತೋರಿಸಲ್ಪಡುತ್ತದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಆದರೆ, ನಮ್ಮ ಸ್ವಂತ ಪ್ರಮುಖತೆಯ ಕುರಿತಾದ ತಪ್ಪಭಿಪ್ರಾಯವು, ಗಂಭೀರವಾದ ಪರಿಣಾಮಗಳ ಕಡೆಗೆ ನಡಿಸಬಲ್ಲದು. ಅನೇಕ ವರ್ಷಗಳ ಹಿಂದೆ, ಕ್ಷೇತ್ರ ಸೇವೆಯಲ್ಲಿ ಒಬ್ಬ ಮನೆಯವನು ಸಹೋದರನೊಬ್ಬನ ಮೇಲೆ ಬೈಗುಳದ ಸುರಿಮಳೆಗರೆದನು. ಈ ಸಹೋದರನು ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡು, ಅವನು ಸಹ ಮನೆಯವನಿಗೆ ಬೈದನು. (ಎಫೆಸ 4:29) ತದನಂತರ, ಆ ಸಹೋದರನು ಇನ್ನೆಂದೂ ಮನೆಯಿಂದ ಮನೆಯ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲಿಲ್ಲ. ಹೌದು, ನಮಗೆ ಅಹಂಭಾವವಿರುವಲ್ಲಿ ನಾವು ಸಾರುತ್ತಿರುವಾಗ ತಾಳ್ಮೆಯನ್ನು ಕಳೆದುಕೊಳ್ಳುವಂತೆ ಅದು ಪ್ರಚೋದಿಸಬಹುದು. ನಮ್ಮ ವಿಷಯದಲ್ಲಿ ಹೀಗಾಗದಂತೆ ನಾವು ಜಾಗರೂಕರಾಗಿರೋಣ. ಅದಕ್ಕೆ ಬದಲಾಗಿ, ಕ್ರೈಸ್ತ ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ನಮಗಿರುವ ಸುಯೋಗಕ್ಕಾಗಿ ಯೋಗ್ಯವಾದ ಗಣ್ಯತೆಯನ್ನು ಕಾಪಾಡಿಕೊಳ್ಳಲು ನಮ್ರತೆಯಿಂದ ಯೆಹೋವನ ಸಹಾಯವನ್ನು ಕೋರೋಣ.—2 ಕೊರಿಂಥ 4:1, 7; 10:4, 5.

ನಮ್ಮ ಸ್ವಪ್ರತಿಷ್ಠೆಯ ಕುರಿತಾಗಿ ತೀರ ಹೆಚ್ಚು ಚಿಂತಿಸುವುದು, ತುಂಬ ಅಗತ್ಯವಿರುವ ಸಲಹೆಯನ್ನು ಸ್ವೀಕರಿಸುವುದರಿಂದ ನಮ್ಮನ್ನು ತಡೆಯಬಲ್ಲದು. ಕೆಲವೊಂದು ವರ್ಷಗಳ ಹಿಂದೆ, ಮಧ್ಯ ಅಮೆರಿಕದ ದೇಶವೊಂದರಲ್ಲಿ ಹದಿಹರೆಯದ ಹುಡುಗನೊಬ್ಬನು ಕ್ರೈಸ್ತ ಸಭೆಯಲ್ಲಿನ ಶುಶ್ರೂಷಾ ಶಾಲೆಯಲ್ಲಿ ಒಂದು ಭಾಷಣವನ್ನು ನೀಡಿದನು. ಶಾಲಾ ಮೇಲ್ವಿಚಾರಕನು ಅವನಿಗೆ ನಿರ್ದಾಕ್ಷಿಣ್ಯವಾಗಿ ಸಲಹೆಯನ್ನು ಕೊಟ್ಟಾಗ, ಸಿಟ್ಟಿಗೆದ್ದ ಆ ಯುವಕನು ತನ್ನ ಬೈಬಲನ್ನು ನೆಲಕ್ಕೆಸೆದು, ರಾಜ್ಯ ಸಭಾಗೃಹದಿಂದ ದಡಬಡಿಸಿ ಹೊರಗೆ ಹೋದನು. ಇನ್ನೆಂದೂ ತಾನು ಅಲ್ಲಿಗೆ ಹಿಂದಿರುಗಿ ಬರಬಾರದೆಂಬುದು ಅವನ ಉದ್ದೇಶವಾಗಿತ್ತು. ಆದರೆ ಕೆಲವು ದಿನಗಳ ಬಳಿಕ, ಅವನು ತನ್ನ ಅಹಂಭಾವವನ್ನು ನುಂಗಿ, ಶಾಲಾ ಮೇಲ್ವಿಚಾರಕನೊಂದಿಗೆ ಸಮಾಧಾನ ಮಾಡಿಕೊಂಡು, ಅವನ ಸಲಹೆಯನ್ನು ನಮ್ರತೆಯಿಂದ ಸ್ವೀಕರಿಸಿದನು. ಸಕಾಲದಲ್ಲಿ ಈ ಯುವಕನು ಒಬ್ಬ ಪ್ರೌಢ ಕ್ರೈಸ್ತನಾದನು.

ಉದ್ಧಟತನವುಳ್ಳವರೂ, ಸ್ವಪ್ರತಿಷ್ಠೆಯ ಕುರಿತು ಅತಿಯಾಗಿ ಯೋಚಿಸುವವರೂ ಆಗಿರುವುದರಿಂದ, ದೇವರೊಂದಿಗಿನ ನಮ್ಮ ಸಂಬಂಧಕ್ಕೆ ಹಾನಿಯಾಗುವುದು. ಜ್ಞಾನೋಕ್ತಿ 16:5 ಎಚ್ಚರಿಸುವುದು: “ಅಹಂಕಾರಿಗಳೆಲ್ಲಾ ಯೆಹೋವನಿಗೆ ಅಸಹ್ಯ.”

ನಮ್ಮ ಕುರಿತು ಸಮತೂಕವುಳ್ಳ ಅಭಿಪ್ರಾಯ

ನಮ್ಮ ಕುರಿತಾಗಿ ನಾವು ತೀರ ಹೆಚ್ಚು ಯೋಚಿಸಬಾರದೆಂಬುದು ಸ್ಪಷ್ಟ. ಆದರೆ ನಾವು ಏನನ್ನಾದರೂ ಹೇಳುವ ಅಥವಾ ಮಾಡುವ ಮುಂಚೆ, ಅದರ ಕುರಿತಾಗಿ ಯೋಚಿಸಬಾರದೆಂಬುದು ಇದರರ್ಥವಲ್ಲ. ನಮ್ಮ ನಡೆನುಡಿಯು ಇತರರಿಗೆ ಮಾನವನ್ನು ಕೊಟ್ಟು, ಅವರ ಗೌರವವನ್ನು ಗಳಿಸುವಂಥದ್ದಾಗಿರುವಂತೆ ನಾವು ನೋಡಿಕೊಳ್ಳಬೇಕು. ಮೇಲ್ವಿಚಾರಕರು, ಶುಶ್ರೂಷಾ ಸೇವಕರು, ವಾಸ್ತವದಲ್ಲಿ ಸಭೆಯಲ್ಲಿರುವವರೆಲ್ಲರೂ ಗೌರವವುಳ್ಳವರಾಗಿರಬೇಕೆಂದು ಬೈಬಲ್‌ ಸೂಚಿಸುತ್ತದೆ. (1 ತಿಮೊಥೆಯ 3:4, 8, 11; ತೀತ 2:2) ಆದುದರಿಂದ ಕ್ರೈಸ್ತರು ತಮ್ಮ ಕುರಿತಾಗಿ ಒಂದು ವಿನಯಶೀಲ ಮತ್ತು ಸಮತೂಕದ ಅಭಿಪ್ರಾಯವನ್ನು ಹೇಗೆ ವಿಕಸಿಸಿ, ಕಾಪಾಡಿಕೊಳ್ಳಬಲ್ಲರು?

ತಮ್ಮ ಕುರಿತು ಸಮತೂಕದ ಅಭಿಪ್ರಾಯವನ್ನಿಟ್ಟುಕೊಂಡಿದ್ದ ಅನೇಕ ವ್ಯಕ್ತಿಗಳ ಉತ್ತೇಜನದಾಯಕ ಮಾದರಿಗಳು ಬೈಬಲಿನಲ್ಲಿವೆ. ಇವುಗಳಲ್ಲಿ ಯೇಸು ಕ್ರಿಸ್ತನ ನಮ್ರತೆಯ ಮಾದರಿಯು ಎದ್ದುಕಾಣುವಂಥದ್ದು. ತನ್ನ ತಂದೆಯ ಚಿತ್ತವನ್ನು ಮಾಡಲಿಕ್ಕಾಗಿ ಮತ್ತು ಮಾನವಕುಲಕ್ಕೆ ರಕ್ಷಣೆಯನ್ನು ಒದಗಿಸಲಿಕ್ಕಾಗಿ, ದೇವರ ಮಗನು ಸಿದ್ಧಮನಸ್ಸಿನಿಂದ ತನ್ನ ಮಹಿಮಾಭರಿತ ಸ್ವರ್ಗೀಯ ಸ್ಥಾನವನ್ನು ಬಿಟ್ಟು, ಭೂಮಿಯ ಮೇಲೆ ಒಬ್ಬ ದೀನ ಮನುಷ್ಯನಾದನು. ಮೂದಲಿಕೆ, ನಿಂದೆ ಮತ್ತು ಅವಮಾನಕರವಾದ ಮರಣದ ಎದುರಿನಲ್ಲೂ ಅವನು ಸ್ವನಿಯಂತ್ರಣ ಮತ್ತು ಘನತೆಯನ್ನು ಕಾಪಾಡಿಕೊಂಡನು. (ಮತ್ತಾಯ 20:28; ಫಿಲಿಪ್ಪಿ 2:5-8; 1 ಪೇತ್ರ 2:23, 24) ಯೇಸು ಇದನ್ನು ಹೇಗೆ ಮಾಡಲು ಶಕ್ತನಾದನು? ಅವನು ಯೆಹೋವನ ಮೇಲೆ ಸಂಪೂರ್ಣವಾಗಿ ಆತುಕೊಂಡನು ಮತ್ತು ದೈವಿಕ ಚಿತ್ತವನ್ನು ಮಾಡಲು ದೃಢನಿರ್ಧಾರವುಳ್ಳವನಾಗಿದ್ದನು. ಯೇಸು ದೇವರ ವಾಕ್ಯವನ್ನು ಶ್ರದ್ಧಾಪೂರ್ವಕವಾಗಿ ಅಭ್ಯಾಸಿಸಿದನು, ಕಟ್ಟಾಸಕ್ತಿಯಿಂದ ಪ್ರಾರ್ಥಿಸಿದನು ಮತ್ತು ಶುಶ್ರೂಷೆಯಲ್ಲಿ ಹುರುಪಿನಿಂದ ಶ್ರಮಿಸಿದನು. (ಮತ್ತಾಯ 4:1-10; 26:36-44; ಲೂಕ 8:1; ಯೋಹಾನ 4:34; 8:28; ಇಬ್ರಿಯ 5:7) ಯೇಸುವಿನ ಮಾದರಿಯನ್ನು ಅನುಸರಿಸುವುದು, ನಾವು ನಮ್ಮ ಕುರಿತು ಸಮತೂಕದ ಅಭಿಪ್ರಾಯವನ್ನು ವಿಕಸಿಸಿ, ಕಾಪಾಡಿಕೊಂಡುಹೋಗಲು ಸಹಾಯಮಾಡಬಲ್ಲದು.—1 ಪೇತ್ರ 2:21.

ಅರಸನಾದ ಸೌಲನ ಮಗನಾಗಿದ್ದ ಯೋನಾತಾನನ ಉತ್ತಮ ಮಾದರಿಯನ್ನು ಸಹ ಪರಿಗಣಿಸಿರಿ. ತನ್ನ ತಂದೆಯಾದ ಸೌಲನ ಅವಿಧೇಯತೆಯಿಂದಾಗಿ, ಯೋನಾತಾನನು ಅವನ ನಂತರ ರಾಜನಾಗಿ ಪಟ್ಟಕ್ಕೇರುವ ಅವಕಾಶವನ್ನು ಕಳೆದುಕೊಂಡನು. (1 ಸಮುವೇಲ 15:10-29) ಇದರಿಂದಾಗಿ ಯೋನಾತಾನನಲ್ಲಿ ಅಸಮಾಧಾನ ಹುಟ್ಟಿಕೊಂಡಿತೊ? ತನ್ನ ಸ್ಥಾನದಲ್ಲಿ ಆಳಲಿದ್ದ ಯುವಕ ದಾವೀದನ ಕುರಿತು ಅವನು ಹೊಟ್ಟೆಕಿಚ್ಚುಪಟ್ಟನೊ? ಯೋನಾತಾನನು ದಾವೀದನಿಗಿಂತ ಹೆಚ್ಚು ದೊಡ್ಡವನೂ, ಬಹುಶಃ ಹೆಚ್ಚು ಅನುಭವಸ್ಥನೂ ಆಗಿದ್ದರೂ, ಅವನು ವಿನಯಶೀಲತೆಯಿಂದ ಮತ್ತು ನಮ್ರತೆಯಿಂದ ಯೆಹೋವನ ಏರ್ಪಾಡಿಗೆ ಅನುಗುಣವಾಗಿ ನಡೆದುಕೊಂಡು ದಾವೀದನನ್ನು ನಿಷ್ಠೆಯಿಂದ ಬೆಂಬಲಿಸಿದನು. (1 ಸಮುವೇಲ 23:16-18) ದೇವರ ಚಿತ್ತವೇನೆಂಬುದನ್ನು ಸ್ಪಷ್ಟವಾಗಿ ಗ್ರಹಿಸಿಕೊಳ್ಳುವುದು ಮತ್ತು ಅದಕ್ಕೆ ಅಧೀನರಾಗಲು ಸಿದ್ಧಮನಸ್ಸುಳ್ಳವರಾಗಿರುವುದು, ‘ನಮ್ಮ ಯೋಗ್ಯತೆಗೆ ಮೀರಿ ನಮ್ಮನ್ನು ಭಾವಿಸಿಕೊಳ್ಳದಂತೆ’ ನಮಗೆ ಸಹಾಯಮಾಡುತ್ತದೆ.—ರೋಮಾಪುರ 12:3.

ವಿನಯಶೀಲತೆ ಮತ್ತು ನಮ್ರತೆಯನ್ನು ತೋರಿಸುವುದರ ಮಹತ್ವವನ್ನು ಯೇಸು ಕಲಿಸಿದನು. ಇದಕ್ಕೊಂದು ದೃಷ್ಟಾಂತವನ್ನು ಅವನು ನೀಡಿದನು. ತನ್ನ ಶಿಷ್ಯರು ಒಂದು ಮದುವೆ ಔತಣದಲ್ಲಿರುವಾಗ, ಅವರು “ಮೊದಲನೆಯ ಸ್ಥಾನದಲ್ಲಿ ಕೂತುಕೊಳ್ಳ”ಬಾರದೆಂದು ಅವನು ಹೇಳಿದನು. ಯಾಕೆಂದರೆ, ಅವರಿಗಿಂತಲೂ ಗಣ್ಯನಾದ ಒಬ್ಬ ವ್ಯಕ್ತಿಯು ಬರಬಹುದು, ಮತ್ತು ಆಗ ಅವರು ಕಡೆಯಸ್ಥಾನದಲ್ಲಿ ಹೋಗಿ ಕುಳಿತುಕೊಳ್ಳುವ ಅವಮಾನಕ್ಕೆ ಗುರಿಯಾಗಬಹುದು. ಈ ದೃಷ್ಟಾಂತದ ಪಾಠವನ್ನು ತುಂಬ ಸ್ಪಷ್ಟಗೊಳಿಸುತ್ತಾ, ಯೇಸು ಕೂಡಿಸಿಹೇಳಿದ್ದು: “ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು; ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು.” (ಲೂಕ 14:7-11) ನಾವು ಯೇಸುವಿನ ಸಲಹೆಗೆ ಕಿವಿಗೊಟ್ಟು, ‘ದೀನಭಾವವನ್ನು ಧರಿಸಿ’ಕೊಂಡರೆ ಬುದ್ಧಿವಂತರು.—ಕೊಲೊಸ್ಸೆ 3:12; 1 ಕೊರಿಂಥ 1:31.

ಸಮತೂಕ ಅಭಿಪ್ರಾಯದಿಂದ ಬರುವ ಆಶೀರ್ವಾದಗಳು

ವಿನಯಶೀಲತೆಯನ್ನು ಮತ್ತು ನಮ್ರ ಸ್ವಭಾವವನ್ನು ಹೊಂದಿರುವುದರಿಂದ ಯೆಹೋವನ ಸೇವಕರಿಗೆ ಶುಶ್ರೂಷೆಯಲ್ಲಿ ನಿಜವಾದ ಆನಂದವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಹಿರಿಯರು ನಮ್ರತೆಯಿಂದ “ಹಿಂಡನ್ನು ಕೋಮಲವಾಗಿ ಉಪಚರಿಸು”ವಾಗ, ಅವರನ್ನು ಸಮೀಪಿಸುವುದು ಸುಲಭವಾಗುತ್ತದೆ. (ಅ. ಕೃತ್ಯಗಳು 20:28, 29, NW) ಆಗ, ಸಭೆಯಲ್ಲಿರುವವರೆಲ್ಲರೂ ನಿರಾತಂಕವಾಗಿ ಅವರೊಂದಿಗೆ ಮಾತಾಡುವರು ಮತ್ತು ಅವರ ಸಹಾಯವನ್ನು ಕೋರುವರು. ಈ ರೀತಿಯಲ್ಲಿ ಸಭೆಯು, ಪ್ರೀತಿ, ಹೃದಯೋಲ್ಲಾಸ ಮತ್ತು ಭರವಸೆಯ ಆತ್ಮದಲ್ಲಿ ಹೆಚ್ಚು ನಿಕಟವಾಗಿ ಎಳೆಯಲ್ಪಡುವ ಸಂಭವವಿದೆ.

ನಮ್ಮ ಸ್ವಪ್ರತಿಷ್ಠೆಯ ಕುರಿತು ಅತಿಯಾಗಿ ಚಿಂತಿಸದಿರುವ ಮೂಲಕ ನಾವು ಒಳ್ಳೆಯ ಸ್ನೇಹಿತರನ್ನು ಮಾಡಿಕೊಳ್ಳಬಲ್ಲೆವು. ಒಂದು ಸ್ಪರ್ಧಾತ್ಮಕ ಮನೋಭಾವವನ್ನು ವಿಕಸಿಸಿಕೊಳ್ಳದಂತೆ ಮತ್ತು ಕ್ರಿಯೆಗಳಲ್ಲಿ ಅಥವಾ ಭೌತಿಕ ವಸ್ತುಗಳಲ್ಲಿ ಇತರರನ್ನು ಮೀರಿಸಲು ಪ್ರಯತ್ನಿಸದಂತೆ, ವಿನಯಶೀಲತೆ ಮತ್ತು ನಮ್ರತೆಯು ನಮ್ಮನ್ನು ತಡೆಯುವುದು. ಈ ದೈವಿಕ ಗುಣಗಳು, ನಾವು ಇತರರ ಕುರಿತಾಗಿ ಹೆಚ್ಚು ವಿಚಾರಪರರಾಗುವಂತೆ ಮಾಡುವವು ಮತ್ತು ಹೀಗೆ ಅಗತ್ಯದಲ್ಲಿರುವವರನ್ನು ಸಂತೈಸಲು ಹಾಗೂ ಬೆಂಬಲಿಸಲು ನಾವು ಹೆಚ್ಚು ಸನ್ನದ್ಧರಾಗಿರುವೆವು. (ಫಿಲಿಪ್ಪಿ 2:3, 4) ಪ್ರೀತಿ ಮತ್ತು ದಯೆಯು ಜನರ ಹೃದಯಗಳನ್ನು ಸ್ಪರ್ಶಿಸುವಾಗ, ಅವರು ಸಾಮಾನ್ಯವಾಗಿ ಚೆನ್ನಾಗಿ ಸ್ಪಂದಿಸುತ್ತಾರೆ. ಮತ್ತು ಇಂತಹ ನಿಸ್ವಾರ್ಥ ಸಂಬಂಧವೇ, ಬಲವಾದ ಮಿತ್ರತ್ವಗಳನ್ನು ಕಟ್ಟುವ ಅಸ್ತಿವಾರವಾಗುತ್ತದಲ್ಲವೊ? ನಾವು ಉದ್ಧಟತನದಿಂದ ನಮ್ಮ ಸ್ವಪ್ರತಿಷ್ಠೆಯ ಕುರಿತು ಅತಿಯಾಗಿ ಚಿಂತಿಸದೇ ಇರುವುದಕ್ಕೆ ಸಿಗುವ ಎಂತಹ ಉತ್ತಮ ಆಶೀರ್ವಾದವಿದು!—ರೋಮಾಪುರ 12:10.

ನಮ್ಮ ಕುರಿತಾಗಿ ನಮಗೆ ಸಮತೂಕದ ಅಭಿಪ್ರಾಯವಿರುವುದಾದರೆ, ನಾವು ಒಬ್ಬ ವ್ಯಕ್ತಿಯ ಮನನೋಯಿಸುವಾಗ ನಮ್ಮ ತಪ್ಪನ್ನು ಸುಲಭವಾಗಿ ಒಪ್ಪಿಕೊಳ್ಳುವೆವು. (ಮತ್ತಾಯ 5:23, 24) ಇದು ರಾಜಿಮಾಡುವಿಕೆಗೆ ಮತ್ತು ಪರಸ್ಪರ ಗೌರವಕ್ಕೆ ಎಡೆಮಾಡಿಕೊಡುತ್ತಾ, ಹೆಚ್ಚು ಉತ್ತಮವಾದ ಸಂಬಂಧಗಳಲ್ಲಿ ಫಲಿಸುವುದು. ಕ್ರೈಸ್ತ ಹಿರಿಯರಂತಹ ಮೇಲ್ವಿಚಾರಣೆಯ ಸ್ಥಾನದಲ್ಲಿರುವವರು ನಮ್ರರೂ, ವಿನಯಶೀಲರೂ ಆಗಿರುವಲ್ಲಿ, ಇತರರಿಗೆ ತುಂಬ ಒಳಿತನ್ನು ಮಾಡುವ ಅವಕಾಶವಿರುತ್ತದೆ. (ಜ್ಞಾನೋಕ್ತಿ 3:27; ಮತ್ತಾಯ 11:29) ಒಬ್ಬ ವ್ಯಕ್ತಿಯು ನಮ್ರನಾಗಿರುವಲ್ಲಿ, ತನ್ನ ವಿರುದ್ಧ ಪಾಪ ಮಾಡಿರುವ ಇತರರನ್ನು ಕ್ಷಮಿಸುವುದು ಸುಲಭವಾಗಿರುತ್ತದೆಂಬುದನ್ನು ಕಂಡುಕೊಳ್ಳುವನು. (ಮತ್ತಾಯ 6:12-15) ಇತರರು ತನ್ನನ್ನು ತಾತ್ಸಾರಮಾಡಿದ್ದಾರೆಂದು ನೆನಸಿ, ಅವನು ವಿಪರೀತವಾಗಿ ಪ್ರತಿಕ್ರಿಯಿಸುವುದಿಲ್ಲ. ಬೇರಾವುದೇ ರೀತಿಯಲ್ಲಿ ಸರಿಪಡಿಸಲಾಗದಂತಹ ವಿಷಯಗಳನ್ನು ತಿದ್ದಲು ಅವನು ಯೆಹೋವನ ಮೇಲೆ ಭರವಸೆಯಿಡುವನು.—ಕೀರ್ತನೆ 37:5; ಜ್ಞಾನೋಕ್ತಿ 3:5, 6.

ನಮ್ಮ ಕುರಿತಾಗಿ ವಿನಯಶೀಲ ಮತ್ತು ನಮ್ರವಾದ ಅಭಿಪ್ರಾಯವನ್ನು ಇಟ್ಟುಕೊಳ್ಳುವುದರಿಂದ ಸಿಗುವ ಅತಿ ಶ್ರೇಷ್ಠವಾದ ಆಶೀರ್ವಾದವು, ಯೆಹೋವನ ಪ್ರಸನ್ನತೆ ಮತ್ತು ಮೆಚ್ಚುಗೆಯೇ ಆಗಿದೆ. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5) ನಾವು ವಾಸ್ತವದಲ್ಲಿ ಏನಾಗಿದ್ದೇವೊ ಅದಕ್ಕಿಂತಲೂ ಉತ್ತಮರಾಗಿದ್ದೇವೆಂದು ನೆನಸುವ ಪಾಶದೊಳಗೆ ಎಂದೂ ಬೀಳದಿರೋಣ. ಅದಕ್ಕೆ ಬದಲಾಗಿ, ಯೆಹೋವನ ಏರ್ಪಾಡಿನಲ್ಲಿ ನಮಗಿರುವ ಸ್ಥಾನವನ್ನು ನಾವು ನಮ್ರತೆಯಿಂದ ಒಪ್ಪಿಕೊಳ್ಳೋಣ. ‘ದೇವರೊಂದಿಗೆ ನಡೆಯುವಾಗ ವಿನಯಶೀಲರಾಗಿರ’ಬೇಕೆಂಬ ಆತನ ಆವಶ್ಯಕತೆಯನ್ನು ಪೂರೈಸುವವರೆಲ್ಲರಿಗಾಗಿ ಭವ್ಯವಾದ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ.

[ಪುಟ 22ರಲ್ಲಿರುವ ಚಿತ್ರ]

ಯೋನಾತಾನನು ನಮ್ರತೆಯಿಂದ ದಾವೀದನನ್ನು ಬೆಂಬಲಿಸಿದನು