ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೀವು ಭವಿಷ್ಯತ್ತನ್ನು ತಿಳಿದುಕೊಳ್ಳಬಲ್ಲಿರಿ!

ನೀವು ಭವಿಷ್ಯತ್ತನ್ನು ತಿಳಿದುಕೊಳ್ಳಬಲ್ಲಿರಿ!

ನೀವು ಭವಿಷ್ಯತ್ತನ್ನು ತಿಳಿದುಕೊಳ್ಳಬಲ್ಲಿರಿ!

ಭವಿಷ್ಯತ್ತಿನ ಕುರಿತು ಅಧಿಕಾಂಶ ಜನರು ಗಂಭೀರವಾಗಿ ಆಲೋಚಿಸುತ್ತಾರೆ. ಅವರು ಯೋಜನೆಯನ್ನು ಮಾಡಲು, ವಿವೇಕಯುತವಾಗಿ ಬಂಡವಾಳವನ್ನು ಹೂಡಲು, ಮತ್ತು ಸುರಕ್ಷಿತರಾಗಿದ್ದೇವೆಂಬ ಅನಿಸಿಕೆಯನ್ನು ಹೊಂದಿರಲು ಇಷ್ಟಪಡುತ್ತಾರೆ. ಆದರೆ ನಾಳಿನ ದಿನವು ನಮಗಾಗಿ ಏನನ್ನು ಕಾದಿರಿಸಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಯಾವುದಾದರೂ ಮಾರ್ಗವಿದೆಯೋ?

ಅದನ್ನು ಕಂಡುಹಿಡಿಯುವ ಸಲುವಾಗಿ ಮಾನವರು ಸರ್ವ ವಿಧಗಳಲ್ಲೂ ಪ್ರಯೋಗವನ್ನು ಮಾಡಿನೋಡಿದ್ದಾರೆ. ಸದ್ಯದ ಆಗುಹೋಗುಗಳನ್ನು ವಿಶ್ಲೇಷಿಸಿ, ಇವುಗಳನ್ನು ಆಧಾರವಾಗಿಟ್ಟುಕೊಂಡು ಪೂರ್ವಾನುಮಾನಗಳನ್ನು ಮಾಡುವಂತೆ ಸಮಾಜ ವಿಜ್ಞಾನಿಗಳು ಭವಿಷ್ಯಾನುಮಾನಿಗರನ್ನು ಕೇಳಿಕೊಂಡರು. ಅರ್ಥಶಾಸ್ತ್ರಜ್ಞರು ಸಹ ಇದನ್ನೇ ಮಾಡುತ್ತಾರೆ. ಜ್ಯೋತಿಷಿಗಳು ಮತ್ತು ಭವಿಷ್ಯನುಡಿಯುವವರು, ಜಾತಕಗಳು, ಸ್ಫಟಿಕ ಗೋಲಗಳು, ಮತ್ತು ಅತೀಂದ್ರೀಯ ವಿದ್ಯೆಗಳಿಗೆ ಮೊರೆಹೋಗುತ್ತಾರೆ. ಮತ್ತು ಇಂತಹವರ ಹಿಂದೆ ಅನುಯಾಯಿಗಳ ದೊಡ್ಡ ಗುಂಪೇ ಇದೆ. ಉದಾಹರಣೆಗೆ, ಫ್ರೆಂಚ್‌ ಜ್ಯೋತಿಷಿಯಾದ ನಾಸ್ಟ್ರಡೇಮಸ್‌ ಮೃತನಾಗಿ ದಶಕಗಳು ಕಳೆದಿರುವುದಾದರೂ, ಅವನು ಈಗಲೂ ಜನಪ್ರಿಯನಾಗಿದ್ದಾನೆ.

ಪ್ರವಾದಿಗಳಾಗಬೇಕೆಂದು ವ್ಯರ್ಥವಾಗಿ ಆಶಿಸಿದ ಇವರು ಭರವಸಾರ್ಹರಲ್ಲದವರೂ ನಿರಾಶಾಜನಕರೂ ಆಗಿ ಕಂಡುಬಂದಿದ್ದಾರೆ. ಏಕೆ? ಏಕೆಂದರೆ ಅವರು ಯೆಹೋವ ದೇವರನ್ನು ಮತ್ತು ಆತನ ವಾಕ್ಯವಾದ ಬೈಬಲನ್ನು ಕಡೆಗಣಿಸುತ್ತಾರೆ. ಆದುದರಿಂದಲೇ, ‘ಬೈಬಲಿನಲ್ಲಿ ಮುಂತಿಳಿಸಲ್ಪಟ್ಟಿರುವ ವಿಷಯಗಳು ಸಂಭವಿಸಲಿವೆ ಎಂಬುದರ ಕುರಿತು ನಾನು ಏಕೆ ಖಚಿತನಾಗಿರಬಲ್ಲೆ? ಅವು ಮಾನವರಿಗಾಗಿರುವ ದೇವರ ಉದ್ದೇಶಗಳಿಗೆ ಸರಿಹೊಂದುತ್ತವೋ? ಈ ಪ್ರವಾದನೆಗಳಿಂದ ನಾನು ಮತ್ತು ನನ್ನ ಕುಟುಂಬವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?’ ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಉತ್ತರಿಸಲು ಅವರು ವಿಫಲರಾಗುತ್ತಾರೆ. ಆದರೆ ಬೈಬಲು ಈ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ.

ಬೈಬಲ್‌ ಪ್ರವಾದನೆಯು ಇನ್ನೂ ಅನೇಕ ವಿಧಗಳಲ್ಲಿ ಉತ್ಕೃಷ್ಟವಾಗಿದೆ. ಜ್ಯೋತಿಶಾಸ್ತ್ರದ ಮುಂತಿಳಿಸುವಿಕೆಗಳಿಗೆ ಅಸದೃಶವಾಗಿ, ಅದು ವ್ಯಕ್ತಿಗತ ಇಚ್ಛಾ ಸ್ವಾತಂತ್ರ್ಯವನ್ನು ನೀಡುತ್ತದೆ. ಹೀಗೆ, ಯಾರೊಬ್ಬರೂ ವಿಧಿಯ ಕೈವಶವಾಗಿರುವುದಿಲ್ಲ. (ಧರ್ಮೋಪದೇಶಕಾಂಡ 30:19) ನಾಸ್ಟ್ರಡೇಮಸ್‌ನಂತಹವರ ಬರವಣಿಗೆಗಳು ನೈತಿಕವಾಗಿ ಶೂನ್ಯವಾಗಿವೆ. ಮತ್ತು ಇವರು ಆ ಶೂನ್ಯವನ್ನು ನಿಗೂಢತೆ ಹಾಗೂ ಕೌತುಕ ವಿಷಯಗಳಿಂದ ತುಂಬುತ್ತಾರೆ. ಆದರೆ ಬೈಬಲ್‌ ಪ್ರವಾದನೆಯು ಒಂದು ದೃಢವಾದ ನೈತಿಕ ಆಧಾರವನ್ನು ಹೊಂದಿದೆ. ಅದು ದೇವರು ತಾನು ಉದ್ದೇಶಿಸಿದಂತೆಯೇ ಏಕೆ ಕಾರ್ಯನಡೆಸುತ್ತಾನೆ ಎಂಬುದನ್ನು ವಿವರಿಸುತ್ತದೆ. (2 ಪೂರ್ವಕಾಲವೃತ್ತಾಂತ 36:15) ಅಷ್ಟುಮಾತ್ರವಲ್ಲ, ಯೆಹೋವನ ಪ್ರವಾದನೆಗಳು ಎಂದಿಗೂ ವಿಫಲವಾಗುವುದಿಲ್ಲ, ಏಕೆಂದರೆ ಆತನು “ಸುಳ್ಳಾಡದ ದೇವರು” ಆಗಿದ್ದಾನೆ. (ತೀತ 1:1-4) ಹೀಗೆ, ದೇವರ ವಾಕ್ಯದಿಂದ ಮಾರ್ಗದರ್ಶಿಸಲ್ಪಡುವ ವ್ಯಕ್ತಿಗಳು, ಕೆಲಸಕ್ಕೆ ಬಾರದ ಬೆನ್ನಟ್ಟುವಿಕೆಗಳಲ್ಲಿ ತಮ್ಮ ಅತ್ಯಮೂಲ್ಯ ಸಮಯವನ್ನು, ಸಂಪನ್ಮೂಲಗಳನ್ನು ವ್ಯರ್ಥವಾಗಿ ವ್ಯಯಿಸದೆ, ಪ್ರಬುದ್ಧ, ಉದ್ದೇಶಭರಿತ, ಹಾಗೂ ಸಂತೋಷಭರಿತ ಜೀವಿತಗಳನ್ನು ಜೀವಿಸುತ್ತಾರೆ.—ಕೀರ್ತನೆ 25:12, 13.

ಈ ಅಂಶಗಳು ಮತ್ತು ಇತರ ಅನೇಕ ಅಂಶಗಳು, ಲೋಕದಾದ್ಯಂತ ಜರುಗಿದ ಯೆಹೋವನ ಸಾಕ್ಷಿಗಳ 1999/2000 “ದೇವರ ಪ್ರವಾದನ ವಾಕ್ಯ” ಎಂಬ ಜಿಲ್ಲಾ ಅಧಿವೇಶನಗಳಲ್ಲಿ ಚರ್ಚಿಸಲ್ಪಟ್ಟವು. ಸಭಿಕರ ಗಮನವನ್ನು ಸೆಳೆದಂತಹ ಭಾಷಣಗಳು, ಇಂಟರ್‌ವ್ಯೂಗಳು, ಪ್ರತ್ಯಕ್ಷಾಭಿನಯಗಳು ಹಾಗೂ ಬೈಬಲ್‌ ಡ್ರಾಮವು, ದೇವರ ಪ್ರವಾದನ ವಾಕ್ಯವನ್ನು ಅಧ್ಯಯನಮಾಡಿ, ಅದನ್ನು ಅನ್ವಯಿಸಿಕೊಳ್ಳುವಂತಹ ಜನರು ಆನಂದಿಸುವ ಅದ್ಭುತಕರವಾದ ಆತ್ಮಿಕ ಪರಂಪರೆಯ ಬಗ್ಗೆ ವಿವರಣೆಯನ್ನು ನೀಡಿದವು. ಮುಂದಿನ ಲೇಖನವು ಅಧಿವೇಶನದ ಕೆಲವೊಂದು ರೋಚಕವಾದ ಮುಖ್ಯಾಂಶಗಳನ್ನು ಪುನರ್ವಿಮರ್ಶಿಸುವುದು.