ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಆಲಯವನ್ನು “ಇಷ್ಟವಸ್ತುಗಳು” ತುಂಬುತ್ತಿವೆ

ಯೆಹೋವನ ಆಲಯವನ್ನು “ಇಷ್ಟವಸ್ತುಗಳು” ತುಂಬುತ್ತಿವೆ

ಯೆಹೋವನ ಆಲಯವನ್ನು “ಇಷ್ಟವಸ್ತುಗಳು” ತುಂಬುತ್ತಿವೆ

“ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು.”—ಹಗ್ಗಾಯ 2:7.

ನಿಮ್ಮ ಮನೆಯಲ್ಲಿ ಯಾವ ಇಷ್ಟವಸ್ತುಗಳಿವೆ? ಸುಖಕರವಾದ ಪೀಠೋಪಕರಣಗಳು, ಒಂದು ಅತ್ಯಾಧುನಿಕ ಕಂಪ್ಯೂಟರ್‌, ಮತ್ತು ನಿಮ್ಮ ಗ್ಯಾರೆಜಿನಲ್ಲಿ ಒಂದು ಹೊಸ ಕಾರ್‌ ಇದೆಯೊ? ನಿಮ್ಮ ಬಳಿ ಈ ಎಲ್ಲ ವಸ್ತುಗಳಿದ್ದರೂ, ಇವೆಲ್ಲವುಗಳಿಗಿಂತಲೂ ನಿಮ್ಮ ಮನೆಯಲ್ಲಿರುವ ಜನರು, ಅಂದರೆ ನಿಮ್ಮ ಕುಟುಂಬ ಸದಸ್ಯರೇ ನಿಮಗೆ ಹೆಚ್ಚು ಅಮೂಲ್ಯರಾಗಿದ್ದಾರೆಂಬುದನ್ನು ನೀವು ಒಪ್ಪಿಕೊಳ್ಳುವುದಿಲ್ಲವೊ? ಒಂದು ರಾತ್ರಿ, ಹೊಗೆಯ ವಾಸನೆಯಿಂದ ನಿಮಗೆ ಎಚ್ಚರವಾಗುತ್ತದೆಂದು ಊಹಿಸಿಕೊಳ್ಳಿ. ನಿಮ್ಮ ಮನೆಗೆ ಬೆಂಕಿ ಹೊತ್ತಿಕೊಂಡಿದೆ, ಮತ್ತು ಅಲ್ಲಿಂದ ತಪ್ಪಿಸಿಕೊಳ್ಳಲು ನಿಮಗೆ ಕೆಲವೇ ನಿಮಿಷಗಳಿವೆ! ಆಗ ಮೊತ್ತಮೊದಲು ನೀವು ಯಾರ ಬಗ್ಗೆ ಚಿಂತಿಸುವಿರಿ? ನಿಮ್ಮ ಪೀಠೋಪಕರಣಗಳ ಬಗ್ಗೆಯೊ? ಕಂಪ್ಯೂಟರ್‌ ಬಗ್ಗೆಯೊ? ನಿಮ್ಮ ಕಾರ್‌ ಬಗ್ಗೆಯೊ? ಇವುಗಳ ಬದಲಿಗೆ ನಿಮ್ಮ ಪ್ರಿಯ ವ್ಯಕ್ತಿಗಳ ಕುರಿತು ನೀವು ಯೋಚಿಸುವುದಿಲ್ಲವೊ? ಖಂಡಿತವಾಗಿಯೂ ಹೌದು, ಯಾಕೆಂದರೆ ವಸ್ತುಗಳಿಗಿಂತಲೂ ಜನರು ಹೆಚ್ಚು ಅಮೂಲ್ಯರು.

2 ಈಗ ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತನ ಕುರಿತಾಗಿ ಯೋಚಿಸಿರಿ. “ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿದಾತನೇ” ಯೆಹೋವನಾಗಿದ್ದಾನೆ. (ಅ. ಕೃತ್ಯಗಳು 4:24) “ಕುಶಲ ಕಾರ್ಮಿಕ”ನಾಗಿರುವ ತನ್ನ ಪುತ್ರನ ಮೂಲಕವೇ ಯೆಹೋವನು ಬೇರೆಲ್ಲವನ್ನೂ ನಿರ್ಮಿಸಿದನು. (ಜ್ಞಾನೋಕ್ತಿ 8:30, 31, NW; ಯೋಹಾನ 1:3; ಕೊಲೊಸ್ಸೆ 1:15-17) ಖಂಡಿತವಾಗಿಯೂ, ಸೃಷ್ಟಿಸಲ್ಪಟ್ಟಿರುವ ಎಲ್ಲವನ್ನೂ ಯೆಹೋವನು ಮತ್ತು ಯೇಸು ಬಹುಮೂಲ್ಯವೆಂದೆಣಿಸುತ್ತಾರೆ. (ಆದಿಕಾಂಡ 1:31ನ್ನು ಹೋಲಿಸಿರಿ.) ಆದರೆ ಅವರಿಗೆ ಸೃಷ್ಟಿಯ ಯಾವ ಅಂಶವು ಅತಿ ಅಮೂಲ್ಯವಾಗಿದೆಯೆಂದು ನೀವು ನೆನಸುತ್ತೀರಿ? ವಸ್ತುಗಳೊ ಜನರೊ? ವಿವೇಕದ ಸಾಕಾರ ಮೂರ್ತಿಯಾಗಿರುವ ಯೇಸು ತಿಳಿಸುವುದು: “ನಾನು ಮೆಚ್ಚುತ್ತಿದ್ದವರು ಮನುಷ್ಯ ಪುತ್ರರಾಗಿದ್ದರು,” ಅಥವಾ ವಿಲ್ಯಮ್‌ ಎಫ್‌. ಬೆಕ್‌ರವರ ಭಾಷಾಂತರವು ಅದನ್ನು ಹೇಳುವಂತೆ, ಯೇಸು “ಮಾನವಜೀವಿಗಳೊಂದಿಗೆ ಹರ್ಷಿತನಾಗಿದ್ದನು.”

3 ಯೆಹೋವನು ಜನರನ್ನು ತುಂಬ ಅಮೂಲ್ಯರೆಂದೆಣಿಸುತ್ತಾನೆ ಎಂಬುದರಲ್ಲಿ ಸಂದೇಹವೇ ಇಲ್ಲ. ತನ್ನ ಪ್ರವಾದಿಯಾದ ಹಗ್ಗಾಯನ ಮೂಲಕ, ಸಾ.ಶ.ಪೂ. 520ರಲ್ಲಿ ಆತನಾಡಿದ ಪ್ರವಾದನಾತ್ಮಕ ಮಾತುಗಳಲ್ಲಿ ಇದರ ಸೂಚನೆಯಿದೆ. ಯೆಹೋವನು ಘೋಷಿಸಿದ್ದು: “ಸಕಲಜನಾಂಗಗಳನ್ನು ನಡುಗಿಸುವೆನು; ಆಗ ಸಮಸ್ತಜನಾಂಗಗಳ ಇಷ್ಟವಸ್ತುಗಳು ಬಂದು ಒದಗಲು ಈ ಆಲಯವನ್ನು ವೈಭವದಿಂದ ತುಂಬಿಸುವೆನು; . . . ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು.”—ಹಗ್ಗಾಯ 2:7, 9.

4 ಯೆಹೋವನ ಆಲಯದಲ್ಲಿ ಯಾವ “ಇಷ್ಟವಸ್ತುಗಳು” ತುಂಬಿಕೊಂಡು, ಅದಕ್ಕೆ ಅಭೂತಪೂರ್ವವಾದ ವೈಭವವನ್ನು ಉಂಟುಮಾಡಲಿದ್ದವು? ಯಥೇಚ್ಛವಾದ ಪೀಠೋಪಕರಣಗಳು ಮತ್ತು ಅಲಂಕಾರಗಳೊ? ಚಿನ್ನ, ಬೆಳ್ಳಿ, ಮತ್ತು ರತ್ನಗಳೊ? ಇದು ಸಮಂಜಸವಾದದ್ದಾಗಿ ತೋರುವುದಿಲ್ಲ. ನೆನಪಿನಲ್ಲಿಡಿ, ಸುಮಾರು ಐದು ಶತಮಾನಗಳ ಹಿಂದೆ ಉದ್ಘಾಟಿಸಲ್ಪಟ್ಟಿದ್ದ ಹಿಂದಿನ ಆಲಯವು, ಹಲವಾರು ಕೋಟಿ ಡಾಲರುಗಳಷ್ಟು ಬೆಲೆಬಾಳುವ ಕಟ್ಟಡವಾಗಿತ್ತು! * ಆದುದರಿಂದ, ಸ್ವದೇಶಕ್ಕೆ ಹಿಂದಿರುಗಿದ ಯೆಹೂದ್ಯರ ಚಿಕ್ಕ ತಂಡವು, ಭೌತಿಕ ಮಹಿಮೆಯಲ್ಲಿ ಸೊಲೊಮೋನನ ಆಲಯವನ್ನೂ ಮೀರಿಸುವ ಒಂದು ಆಲಯವನ್ನು ಕಟ್ಟುವಂತೆ ಯೆಹೋವನು ಖಂಡಿತವಾಗಿಯೂ ನಿರೀಕ್ಷಿಸಸಾಧ್ಯವಿರಲಿಲ್ಲ!

5 ಹಾಗಾದರೆ, ಯೆಹೋವನ ಆಲಯವನ್ನು ತುಂಬಲಿರುವ “ಇಷ್ಟವಸ್ತುಗಳು” ಏನಾಗಿವೆ? ಅವು ಜನರೇ ಆಗಿರಬೇಕೆಂಬುದು ಸ್ಪಷ್ಟ. ಎಷ್ಟೆಂದರೂ, ಚಿನ್ನ ಬೆಳ್ಳಿಯಲ್ಲ, ಬದಲಾಗಿ ಯೆಹೋವನನ್ನು ಪ್ರೀತಿಯಿಂದ ಸೇವಿಸುವ ಜನರೇ ಆತನ ಮನಸ್ಸನ್ನು ಸಂತೋಷಪಡಿಸುತ್ತಾರೆ. (ಜ್ಞಾನೋಕ್ತಿ 27:11; 1 ಕೊರಿಂಥ 10:26) ಹೌದು, ತನಗೆ ಅಂಗೀಕಾರಾರ್ಹವಾಗಿರುವ ರೀತಿಯಲ್ಲಿ ಆರಾಧಿಸುವ ಎಲ್ಲ ಸ್ತ್ರೀಪುರುಷರು ಮತ್ತು ಮಕ್ಕಳನ್ನು ಯೆಹೋವನು ಅಮೂಲ್ಯರೆಂದೆಣಿಸುತ್ತಾನೆ. (ಯೋಹಾನ 4:23, 24) ಇವರೇ “ಇಷ್ಟವಸ್ತು”ಗಳಾಗಿದ್ದಾರೆ ಮತ್ತು ಸೊಲೊಮೋನನ ಆಲಯವನ್ನು ಶೋಭಿಸಿದ ಆಡಂಬರದ ಅಲಂಕಾರಕ್ಕಿಂತಲೂ ಹೆಚ್ಚು ಅಮೂಲ್ಯರಾಗಿದ್ದಾರೆ.

6 ತೀವ್ರವಾದ ವಿರೋಧದ ಮಧ್ಯದಲ್ಲೂ ಸಾ.ಶ.ಪೂ. 515ರಲ್ಲಿ ಆಲಯವು ಪೂರ್ಣಗೊಳಿಸಲ್ಪಟ್ಟಿತು. ಯೇಸುವಿನ ಯಜ್ಞದ ಸಮಯದ ವರೆಗೆ, ಯೆರೂಸಲೇಮಿನಲ್ಲಿದ್ದ ಆಲಯವು ಯೆಹೂದ್ಯರಿಗೆ ಮತ್ತು ಅನ್ಯಜನಾಂಗದ ಮತಾವಲಂಬಿಗಳು ಸೇರಿದ್ದ ಅನೇಕ ‘ಇಷ್ಟವಸ್ತುಗಳಿಗೆ’ ಸತ್ಯಾರಾಧನೆಯ ಕೇಂದ್ರವಾಗಿ ಉಳಿಯಿತು. ಆದರೆ ಆ ಆಲಯವು ಹೆಚ್ಚು ಭವ್ಯವಾದ ಯಾವುದನ್ನೋ ಪ್ರತಿನಿಧಿಸಿತು. ಅದೇನೆಂಬುದನ್ನು ನಾವು ನೋಡೋಣ.

ಪ್ರಥಮ ಶತಮಾನದ ನೆರವೇರಿಕೆ

7 ಯೆರೂಸಲೇಮಿನಲ್ಲಿದ್ದ ಆಲಯವು, ಆರಾಧನೆಗಾಗಿರುವ ಹೆಚ್ಚು ಶ್ರೇಷ್ಠವಾದ ಒಂದು ಏರ್ಪಾಡನ್ನು ಮುನ್‌ಚಿತ್ರಿಸಿತು. ಆ ಏರ್ಪಾಡು ದೇವರ ಆತ್ಮಿಕ ಆಲಯವಾಗಿದೆ. ಯೇಸುವನ್ನು ಅದರ ಮಹಾ ಯಾಜಕನೋಪಾದಿ ಮಾಡುತ್ತಾ, ಯೆಹೋವನು ಈ ಆಲಯವನ್ನು ಸಾ.ಶ. 29ರಲ್ಲಿ ಸ್ಥಾಪಿಸಿದನು. (ಇಬ್ರಿಯ 5:4-10; 9:11, 12) ಇಸ್ರಾಯೇಲಿನಲ್ಲಿದ್ದ ಮಹಾ ಯಾಜಕನ ಕರ್ತವ್ಯಗಳು ಮತ್ತು ಯೇಸುವಿನ ಕೃತ್ಯಗಳ ನಡುವಿನ ಹೋಲಿಕೆಯನ್ನು ಪರಿಗಣಿಸಿರಿ. ಪ್ರತಿ ವರ್ಷ ಪ್ರಾಯಶ್ಚಿತ್ತದ ದಿನದಂದು ಮಹಾ ಯಾಜಕನು, ದೇವಾಲಯದ ಅಂಗಣದಲ್ಲಿದ್ದ ವೇದಿಯ ಮೇಲೆ ಯಾಜಕರ ಪಾಪಗಳ ಪ್ರಾಯಶ್ಚಿತ್ತಕ್ಕಾಗಿ ಒಂದು ಹೋರಿಯನ್ನು ಅರ್ಪಿಸುತ್ತಿದ್ದನು. ತದನಂತರ, ಆ ಹೋರಿಯ ರಕ್ತದೊಂದಿಗೆ ಅವನು ಆಲಯವನ್ನು ಪ್ರವೇಶಿಸಿ, ಅಂಗಣವನ್ನು ಪವಿತ್ರ ಸ್ಥಾನದಿಂದ ಪ್ರತ್ಯೇಕಿಸುವ ಬಾಗಿಲುಗಳನ್ನು ದಾಟಿ, ಪವಿತ್ರಸ್ಥಾನವನ್ನು ಅತಿ ಪವಿತ್ರಸ್ಥಾನದಿಂದ ವಿಂಗಡಿಸುವ ಪರದೆಯನ್ನು ದಾಟಿ ಒಳಗೆ ಹೋಗುತ್ತಿದ್ದನು. ಅತಿ ಪವಿತ್ರಸ್ಥಾನವನ್ನು ಪ್ರವೇಶಿಸಿದ ಬಳಿಕ ಮಹಾ ಯಾಜಕನು ಮಂಜೂಷದ ಗುಡಾರದ ಮುಂದೆ ರಕ್ತವನ್ನು ಚಿಮುಕಿಸುತ್ತಿದ್ದನು. ಅನಂತರ ಇದೇ ಕಾರ್ಯವಿಧಾನವನ್ನು ಅನುಸರಿಸಿ, ಅವನು ಇಸ್ರಾಯೇಲಿನ ಯಾಜಕರಲ್ಲದ 12 ಕುಲಗಳ ಪ್ರಾಯಶ್ಚಿತ್ತಕ್ಕಾಗಿ ಒಂದು ಆಡನ್ನು ಅರ್ಪಿಸುತ್ತಿದ್ದನು. (ಯಾಜಕಕಾಂಡ 16:5-15) ಈ ಆಚರಣೆಯು ದೇವರ ಆತ್ಮಿಕ ಆಲಯಕ್ಕೆ ಹೇಗೆ ಸಂಬಂಧಿಸುತ್ತದೆ?

8 ಯೇಸು ಸಾ.ಶ. 29ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡು ದೇವರ ಪವಿತ್ರಾತ್ಮದಿಂದ ಅಭಿಷೇಕಿಸಲ್ಪಟ್ಟಾಗ, ದೇವರ ಚಿತ್ತವೆಂಬ ವೇದಿಯ ಮೇಲೆ ಕಾರ್ಯತಃ ಬಲಿಯಾಗಿ ಅರ್ಪಿಸಲ್ಪಟ್ಟನು. (ಲೂಕ 3:21, 22) ಈ ಘಟನೆಯು ಯೇಸುವಿನ ಮೂರೂವರೆ ವರ್ಷಗಳುದ್ದದ ತ್ಯಾಗಮಯ ಜೀವನ ಕ್ರಮದ ಆರಂಭವಾಗಿತ್ತು. (ಇಬ್ರಿಯ 10:5-10) ಆ ಅವಧಿಯಲ್ಲಿ ಯೇಸು ದೇವರೊಂದಿಗೆ ಒಂದು ಆತ್ಮ-ಜನಿತ ಸಂಬಂಧವನ್ನು ಅನುಭವಿಸಿದನು. ತನ್ನ ಸ್ವರ್ಗೀಯ ತಂದೆಯೊಂದಿಗೆ ಯೇಸುವಿಗಿದ್ದ ಈ ಅಪೂರ್ವವಾದ ಸಂಬಂಧವನ್ನು ಇತರ ಮಾನವರು ಪೂರ್ಣವಾಗಿ ಗ್ರಹಿಸಶಕ್ತರಾಗಿರಲಿಲ್ಲ. ಪವಿತ್ರಸ್ಥಾನವು ಗುಡಾರದ ಅಂಗಣದಲ್ಲಿದ್ದವರ ದೃಷ್ಟಿಗೆ ಬೀಳದಂತೆ ಒಂದು ಪರದೆಯಿದ್ದಂತೆಯೇ, ಅವರ ವಿವೇಚನೆಯ ಕಣ್ಣುಗಳ ಮೇಲೆ ಒಂದು ಪರದೆಯಿದ್ದಂತಿತ್ತು.—ವಿಮೋಚನಕಾಂಡ 40:28.

9 ಮಾನವನಾಗಿದ್ದ ಯೇಸು ದೇವರ ಆತ್ಮಾಭಿಷಿಕ್ತ ಪುತ್ರನಾಗಿದ್ದರೂ, ಸ್ವರ್ಗದಲ್ಲಿನ ಜೀವಿತವನ್ನು ಅವನು ಪಡೆಯಲು ಸಾಧ್ಯವಿರಲಿಲ್ಲ. ಏಕೆ? ಏಕೆಂದರೆ ರಕ್ತಮಾಂಸವು ದೇವರ ರಾಜ್ಯಕ್ಕೆ ಬಾಧ್ಯವಾಗುವುದಿಲ್ಲ. (1 ಕೊರಿಂಥ 15:44, 50) ಯೇಸುವಿನ ಮಾನವ ದೇಹವು ಒಂದು ತಡೆಯಂತಿದ್ದ ಕಾರಣ, ದೇವರ ಪುರಾತನ ಆಲಯದಲ್ಲಿ ಅತಿ ಪವಿತ್ರಸ್ಥಾನದಿಂದ ಪವಿತ್ರಸ್ಥಾನವನ್ನು ಪ್ರತ್ಯೇಕಿಸಿದ ಪರದೆಯು ಅದನ್ನು ಚೆನ್ನಾಗಿ ಸಂಕೇತಿಸಿತು. (ಇಬ್ರಿಯ 10:20) ಆದರೆ ಯೇಸು ಮರಣಹೊಂದಿ ಮೂರು ದಿನಗಳಾದ ಬಳಿಕ, ದೇವರು ಅವನನ್ನು ಒಬ್ಬ ಆತ್ಮಜೀವಿಯಾಗಿ ಪುನರುತ್ಥಾನಗೊಳಿಸಿದನು. (1 ಪೇತ್ರ 3:18) ಆಗ ಅವನು ದೇವರ ಆತ್ಮಿಕ ಆಲಯದ ಅತಿ ಪವಿತ್ರಸ್ಥಾನ ಅಂದರೆ ಸ್ವರ್ಗವನ್ನು ಪ್ರವೇಶಿಸಬಹುದಿತ್ತು. ಮತ್ತು ಹಾಗೆಯೇ ಆಯಿತು. ಪೌಲನು ಬರೆಯುವುದು: “ಕ್ರಿಸ್ತನು ನಿಜವಾದ ದೇವಾಲಯಕ್ಕೆ ಅನುರೂಪಮಾತ್ರವಾದದ್ದಾಗಿಯೂ ಕೈಯಿಂದ ಕಟ್ಟಿದ್ದಾಗಿಯೂ ಇರುವ ಆಲಯ [ಅತಿ ಪವಿತ್ರಸ್ಥಾನವನ್ನು ಸೂಚಿಸುತ್ತದೆಂಬುದು ವ್ಯಕ್ತ]ದಲ್ಲಿ ಪ್ರವೇಶಿಸದೆ ದೇವರ ಸಮ್ಮುಖದಲ್ಲಿ ನಮಗೋಸ್ಕರ ಈಗ ಕಾಣಿಸಿಕೊಳ್ಳುವದಕ್ಕೆ ಪರಲೋಕದಲ್ಲಿಯೇ ಪ್ರವೇಶಿಸಿದನು.”—ಇಬ್ರಿಯ 9:24.

10 ಸ್ವರ್ಗದಲ್ಲಿ, ಯೆಹೋವನ ಮುಂದೆ ತನ್ನ ಜೀವರಕ್ತದ ಪ್ರಾಯಶ್ಚಿತ್ತ ಮೌಲ್ಯವನ್ನು ಸಾದರಪಡಿಸುವ ಮೂಲಕ ಯೇಸು ತನ್ನ ಯಜ್ಞದ ‘ರಕ್ತವನ್ನು ಚಿಮುಕಿಸಿದನು.’ ಆದರೆ ಯೇಸು ಅದಕ್ಕಿಂತಲೂ ಹೆಚ್ಚನ್ನು ಮಾಡಿದನು. ತನ್ನ ಮರಣದ ಸ್ವಲ್ಪ ಸಮಯಕ್ಕೆ ಮುಂಚೆ ಅವನು ತನ್ನ ಹಿಂಬಾಲಕರಿಗೆ ಹೇಳಿದ್ದು: “ನಿಮಗೆ ಸ್ಥಳವನ್ನು ಸಿದ್ಧಮಾಡುವದಕ್ಕೆ ಹೋಗುತ್ತೇನಲ್ಲಾ. ನಾನು ಹೋಗಿ ನಿಮಗೆ ಸ್ಥಳವನ್ನು ಸಿದ್ಧಮಾಡಿದ ಮೇಲೆ ತಿರಿಗಿ ಬಂದು ನಿಮ್ಮನ್ನು ಕರಕೊಂಡು ಹೋಗಿ ನನ್ನ ಬಳಿಗೆ ಸೇರಿಸಿಕೊಳ್ಳುವೆನು; ಯಾಕಂದರೆ ನಾನಿರುವ ಸ್ಥಳದಲ್ಲಿ ನೀವು ಸಹ ಇರಬೇಕು.” (ಯೋಹಾನ 14:2, 3) ಆದುದರಿಂದ, ಅತಿ ಪವಿತ್ರಸ್ಥಾನವನ್ನು ಅಂದರೆ ಸ್ವರ್ಗವನ್ನು ಪ್ರವೇಶಿಸುವ ಮೂಲಕ, ಇತರರು ಸ್ವರ್ಗಕ್ಕೆ ಹೋಗುವಂತೆ ಅವನು ಮಾರ್ಗವನ್ನು ತೆರೆದನು. (ಇಬ್ರಿಯ 6:19, 20) ಈ ವ್ಯಕ್ತಿಗಳ ಸಂಖ್ಯೆ 1,44,000 ಆಗಿದ್ದು, ಅವರು ದೇವರ ಆತ್ಮಿಕ ಆಲಯದ ಏರ್ಪಾಡಿನಲ್ಲಿ ಉಪಯಾಜಕರಾಗಿ ಸೇವೆಸಲ್ಲಿಸುವರು. (ಪ್ರಕಟನೆ 7:4; 14:1; 20:6) ಇಸ್ರಾಯೇಲಿನ ಮಹಾ ಯಾಜಕನು, ಪ್ರಥಮವಾಗಿ ಯಾಜಕರ ಪಾಪಗಳ ಪ್ರಾಯಶ್ಚಿತ್ತಕ್ಕೋಸ್ಕರ ಹೋರಿಯ ರಕ್ತವನ್ನು ಅತಿ ಪವಿತ್ರಸ್ಥಾನಕ್ಕೆ ತೆಗೆದುಕೊಂಡು ಹೋದಂತೆಯೇ, ಯೇಸು ಸುರಿಸಿದ ರಕ್ತದ ಮೌಲ್ಯವು ಪ್ರಥಮವಾಗಿ ಈ 1,44,000 ಮಂದಿ ಉಪಯಾಜಕರಿಗೆ ಅನ್ವಯಿಸಲ್ಪಟ್ಟಿತು. *

ಆಧುನಿಕ ದಿನದ “ಇಷ್ಟವಸ್ತುಗಳು”

11 ಇಸವಿ 1935ರೊಳಗೆ ಅಭಿಷಿಕ್ತರ ಒಟ್ಟುಗೂಡಿಸುವಿಕೆಯು ಬಹುಮಟ್ಟಿಗೆ ಪೂರ್ಣಗೊಂಡಿತ್ತೆಂದು ಕಂಡುಬರುತ್ತದೆ. * ಆದರೆ ತನ್ನ ಆಲಯವನ್ನು ವೈಭವೀಕರಿಸುವ ಯೆಹೋವನ ಕೆಲಸವು ಆಗ ಕೊನೆಗೊಳ್ಳಲಿಲ್ಲ. ಅದರೊಳಗೆ “ಇಷ್ಟವಸ್ತುಗಳು” ಇನ್ನೂ ಬರಲಿದ್ದವು. ಇಸ್ರಾಯೇಲಿನಲ್ಲಿದ್ದ ಮಹಾ ಯಾಜಕನು ಎರಡು ಪ್ರಾಣಿಗಳನ್ನು, ಅಂದರೆ ಯಾಜಕರ ಪಾಪಗಳಿಗಾಗಿ ಒಂದು ಹೋರಿಯನ್ನು ಮತ್ತು ಯಾಜಕರಲ್ಲದ ಕುಲಗಳ ಪಾಪಗಳಿಗಾಗಿ ಒಂದು ಆಡನ್ನು ಬಲಿಯಾಗಿ ಅರ್ಪಿಸುತ್ತಿದ್ದನೆಂಬುದನ್ನು ನೆನಪಿನಲ್ಲಿಡಿರಿ. ಆ ಯಾಜಕರು, ಸ್ವರ್ಗೀಯ ರಾಜ್ಯದಲ್ಲಿ ಯೇಸುವಿನೊಂದಿಗೆ ಇರಲಿದ್ದ ಅಭಿಷಿಕ್ತರನ್ನು ಚಿತ್ರಿಸಿದರು. ಹಾಗಾದರೆ, ಯಾಜಕರಲ್ಲದ ಆ ಕುಲಗಳು ಯಾರನ್ನು ಪ್ರತಿನಿಧಿಸಿದವು? ಯೋಹಾನ 10:16ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಾತುಗಳಲ್ಲಿ ಅದರ ಉತ್ತರವನ್ನು ಕಂಡುಕೊಳ್ಳಬಹುದು: “ಇದಲ್ಲದೆ ಈ ಹಟ್ಟಿಗೆ ಸೇರದಿರುವ ಇನ್ನು ಬೇರೆ ಕುರಿಗಳು ನನಗೆ ಅವೆ, ಅವುಗಳನ್ನೂ ನಾನು ತರಬೇಕು; ಅವು ನನ್ನ ಸ್ವರಕ್ಕೆ ಕಿವಿಗೊಡುವವು; ಆಗ ಒಂದೇ ಹಿಂಡು ಆಗುವದು, ಒಬ್ಬನೇ ಕುರುಬನಿರುವನು.” ಹೀಗೆ ಯೇಸು ಸುರಿಸಿದ ರಕ್ತವು, ಎರಡು ಗುಂಪುಗಳ ಜನರಿಗೆ ಪ್ರಯೋಜನವನ್ನು ತರುತ್ತದೆ. ಮೊದಲನೆಯದಾಗಿ, ಯೇಸುವಿನೊಂದಿಗೆ ಸ್ವರ್ಗದಲ್ಲಿ ಆಳುವ ನಿರೀಕ್ಷೆಯುಳ್ಳ ಕ್ರೈಸ್ತರಿಗೆ ಮತ್ತು ಎರಡನೆಯದಾಗಿ ಭೂಪ್ರಮೋದವನದಲ್ಲಿ ನಿತ್ಯ ಜೀವಕ್ಕಾಗಿ ಎದುರು ನೋಡುತ್ತಿರುವವರಿಗೆ. ಹಗ್ಗಾಯನ ಪ್ರವಾದನೆಯ “ಇಷ್ಟವಸ್ತುಗಳು,” ಈ ಎರಡನೆಯ ಗುಂಪನ್ನೇ ಚಿತ್ರಿಸುತ್ತವೆ.—ಮೀಕ 4:1, 2; 1 ಯೋಹಾನ 2:1, 2.

12 ಈ “ಇಷ್ಟವಸ್ತುಗಳು” ಈಗಲೂ ಯೆಹೋವನ ಆಲಯವನ್ನು ತುಂಬುತ್ತಿವೆ. ಇತ್ತೀಚಿನ ವರ್ಷಗಳಲ್ಲಿ, ಪೂರ್ವ ಯೂರೋಪಿನಲ್ಲಿ, ಆಫ್ರಿಕದ ಕೆಲವೊಂದು ಭಾಗಗಳಲ್ಲಿ ಮತ್ತು ಇತರ ದೇಶಗಳಲ್ಲಿದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಇದರಿಂದಾಗಿ, ದೇವರ ಸ್ಥಾಪಿತ ರಾಜ್ಯದ ಕುರಿತಾದ ಸುವಾರ್ತೆಯು, ಇದುವರೆಗೂ ತಲಪಿರದ ಪ್ರದೇಶಗಳಲ್ಲಿ ಹಬ್ಬುವಂತಹ ಅವಕಾಶವು ಸಿಕ್ಕಿದೆ. ಇಷ್ಟವಸ್ತುಗಳಂತಿರುವ ಜನರು ದೇವರ ಆಲಯದ ಏರ್ಪಾಡಿನೊಳಗೆ ಬರುತ್ತಾ ಇರುವಾಗ, ಅವರು ಸಹ ಯೇಸುವಿನ ಆಜ್ಞೆಗೆ ವಿಧೇಯರಾಗಿ ಇನ್ನೂ ಹೆಚ್ಚಿನ ಶಿಷ್ಯರನ್ನು ಮಾಡಲು ಪ್ರಯತ್ನಿಸುತ್ತಾರೆ. (ಮತ್ತಾಯ 28:19, 20) ಅವರು ಹಾಗೆ ಮಾಡುತ್ತಿರುವಾಗ, ಯೆಹೋವನ ಆಲಯವನ್ನು ವೈಭವೀಕರಿಸುವಂತಹ ‘ಇಷ್ಟವಸ್ತುಗಳಾಗುವ’ ಸಾಧ್ಯತೆಯುಳ್ಳ ಆಬಾಲವೃದ್ಧರಾದ ಅನೇಕ ವ್ಯಕ್ತಿಗಳನ್ನು ಸಂಧಿಸುತ್ತಾರೆ. ಇದು ಹೇಗೆ ನಡೆಯುತ್ತಿದೆಯೆಂಬುದರ ಕೆಲವೊಂದು ಉದಾಹರಣೆಗಳನ್ನು ಪರಿಗಣಿಸಿರಿ.

13 ಬೊಲಿವಿಯದಲ್ಲಿ, ಸಾಕ್ಷಿ ಹೆತ್ತವರುಳ್ಳ ಐದು ವರ್ಷ ಪ್ರಾಯದ ಒಬ್ಬ ಹುಡುಗಿಯು, ಸರ್ಕಿಟ್‌ ಮೇಲ್ವಿಚಾರಕರ ಭೇಟಿಯ ವಾರದಲ್ಲಿ ಶಾಲೆಯಿಂದ ರಜೆಯನ್ನು ಪಡೆಯಲಿಕ್ಕಾಗಿ ತನ್ನ ಶಿಕ್ಷಕಿಯ ಅನುಮತಿಯನ್ನು ಕೋರಿದಳು. ಅವಳಿಗೆ ಏಕೆ ರಜೆ ಬೇಕಾಗಿತ್ತು? ಆ ವಿಶೇಷ ಚಟುವಟಿಕೆಯ ಇಡೀ ವಾರದಲ್ಲಿ ಅವಳು ಶುಶ್ರೂಷೆಯಲ್ಲಿ ಪಾಲ್ಗೊಳ್ಳಲು ಬಯಸಿದಳು. ಇದರಿಂದ ಅವಳ ಹೆತ್ತವರು ಆಶ್ಚರ್ಯಚಕಿತರಾದರೂ, ಅವಳಿಗಿದ್ದ ಈ ಉತ್ತಮ ಮನೋಭಾವದಿಂದಾಗಿ ಅವರಿಗೆ ಸಂತೋಷವೂ ಆಯಿತು. ಈ ಪುಟ್ಟ ಹುಡುಗಿಯು ಈಗ ಐದು ಮನೆ ಬೈಬಲ್‌ ಅಭ್ಯಾಸಗಳನ್ನು ನಡೆಸುತ್ತಿದ್ದಾಳೆ, ಮತ್ತು ಈ ಬೈಬಲ್‌ ವಿದ್ಯಾರ್ಥಿಗಳಲ್ಲಿ ಕೆಲವರು ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದಾರೆ. ಅವಳು ತನ್ನ ಶಾಲಾ ಶಿಕ್ಷಕಿಯನ್ನೂ ರಾಜ್ಯ ಸಭಾಗೃಹಕ್ಕೆ ಕರೆತಂದಿದ್ದಾಳೆ. ಕಾಲಾನಂತರ, ಅವಳ ಬೈಬಲ್‌ ವಿದ್ಯಾರ್ಥಿಗಳಲ್ಲಿ ಕೆಲವರು, ಯೆಹೋವನ ಆಲಯವನ್ನು ವೈಭವೀಕರಿಸುವ ‘ಇಷ್ಟವಸ್ತುಗಳಾಗಿ’ ಪರಿಣಮಿಸಬಹುದು.

14 ಕೊರಿಯದಲ್ಲಿ ಒಬ್ಬ ಕ್ರೈಸ್ತ ಮಹಿಳೆಯು ರೈಲು ನಿಲ್ದಾಣದಲ್ಲಿ ಕಾಯುತ್ತಾ ಇದ್ದಾಗ, ಹೆಡ್‌ಫೋನ್‌ ಮೂಲಕ ಸಂಗೀತವನ್ನು ಆಲಿಸುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಮಾತಾಡಿಸಿದಳು. “ನೀವು ಯಾವುದಾದರೊಂದು ಧರ್ಮಕ್ಕೆ ಸೇರಿದವರಾಗಿದ್ದೀರೊ?” ಎಂದು ಅವಳು ಕೇಳಿದಳು. “ನನಗೆ ಯಾವುದೇ ಧರ್ಮದಲ್ಲಿ ಆಸಕ್ತಿಯಿಲ್ಲ” ಎಂದು ಆ ವಿದ್ಯಾರ್ಥಿಯು ಉತ್ತರಿಸಿದನು. ಈ ಉತ್ತರದಿಂದ ಸಹೋದರಿಯು ಹಿಮ್ಮೆಟ್ಟಲಿಲ್ಲ. “ಸಮಯವು ದಾಟಿದಂತೆ ಒಬ್ಬ ವ್ಯಕ್ತಿಯು ಒಂದು ಧರ್ಮವನ್ನು ಆರಿಸಿಕೊಳ್ಳಲು ಬಯಸಬಹುದು. ಆದರೆ ಅವನಿಗೆ ಧರ್ಮದ ಕುರಿತಾಗಿ ಏನೂ ಗೊತ್ತಿಲ್ಲದಿರುವಲ್ಲಿ, ಅವನು ತಪ್ಪಾದ ಧರ್ಮವನ್ನು ಆರಿಸಿಕೊಳ್ಳುವ ಸಾಧ್ಯತೆಯಿದೆ” ಎಂದು ಅವಳು ಮುಂದುವರಿಸಿದಳು. ಆ ವಿದ್ಯಾರ್ಥಿಯ ಮುಖಭಾವವು ಬದಲಾಯಿತು ಮತ್ತು ಅವನು ನಮ್ಮ ಸಹೋದರಿಗೆ ಗಮನಕೊಟ್ಟು ಆಲಿಸಲಾರಂಭಿಸಿದನು. ನಿಮ್ಮ ಕುರಿತಾಗಿ ಚಿಂತಿಸುವ ನಿರ್ಮಾಣಿಕನೊಬ್ಬನಿದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕವನ್ನು ಅವಳು ಅವನಿಗೆ ಕೊಟ್ಟಳು. ಧರ್ಮವನ್ನು ಆರಿಸಿಕೊಳ್ಳುವ ಸಮಯ ಬಂದಾಗ, ಈ ಪ್ರಕಾಶನವು ಅವನಿಗೆ ತುಂಬ ಸಹಾಯಮಾಡುವುದೆಂದು ಅವಳು ಹೇಳಿದಳು. ಅವನು ತತ್‌ಕ್ಷಣವೇ ಆ ಪುಸ್ತಕವನ್ನು ತೆಗೆದುಕೊಂಡನು. ಮುಂದಿನ ವಾರ, ಅವನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲನ್ನು ಅಭ್ಯಾಸಿಸಲಾರಂಭಿಸಿದನು ಮತ್ತು ಈಗ ಎಲ್ಲ ಸಭಾ ಕೂಟಗಳಿಗೆ ಹಾಜರಾಗುತ್ತಿದ್ದಾನೆ.

15 ಜಪಾನಿನಲ್ಲಿ, 12 ವರ್ಷ ಪ್ರಾಯದ ಮೆಗೂಮೀ, ತನ್ನ ಶಾಲೆಯು ಸಾರಲು ಮತ್ತು ಕಲಿಸಲು ಫಲಭರಿತವಾದ ಕ್ಷೇತ್ರವಾಗಿದೆ ಎಂದೆಣಿಸುತ್ತಾಳೆ. ಅವಳು ಅನೇಕ ಬೈಬಲ್‌ ಅಭ್ಯಾಸಗಳನ್ನೂ ಆರಂಭಿಸಲು ಶಕ್ತಳಾಗಿದ್ದಾಳೆ. ಮೆಗೂಮೀ ಅದನ್ನು ಹೇಗೆ ಮಾಡುತ್ತಾಳೆ? ಮಧ್ಯಾಹ್ನದೂಟದ ಸಮಯದಲ್ಲಿ ಅವಳು ಬೈಬಲನ್ನು ಓದುತ್ತಿರುತ್ತಾಳೆ ಅಥವಾ ಕೂಟಗಳಿಗೆ ತಯಾರಿಸುತ್ತಿರುತ್ತಾಳೆ. ಆದುದರಿಂದ ಅನೇಕವೇಳೆ ಅವಳ ಸಹಪಾಠಿಗಳು, ನೀನೇನು ಮಾಡುತ್ತಿದ್ದೀ ಎಂದು ಅವಳನ್ನು ಕೇಳುತ್ತಾರೆ. ಮೆಗೂಮೀ ನಿರ್ದಿಷ್ಟ ಶಾಲಾ ಚಟುವಟಿಕೆಗಳಲ್ಲಿ ಏಕೆ ಭಾಗವಹಿಸುವುದಿಲ್ಲವೆಂದು ಕೆಲವರು ಕೇಳುತ್ತಾರೆ. ಅವಳು ಅವರ ಪ್ರಶ್ನೆಗಳನ್ನು ಉತ್ತರಿಸುತ್ತಾಳೆ, ಮತ್ತು ದೇವರಿಗೆ ಒಂದು ಹೆಸರಿದೆಯೆಂದು ಹೇಳುತ್ತಾಳೆ. ಈ ಸಂಗತಿಯು ಹೆಚ್ಚಾಗಿ ಅವಳ ಕೇಳುಗರ ಆಸಕ್ತಿಯನ್ನು ಕೆರಳಿಸುತ್ತದೆ. ಅನಂತರ ಅವಳು ಅವರಿಗೆ ಬೈಬಲ್‌ ಅಭ್ಯಾಸವನ್ನು ಮಾಡುವಂತೆ ಹೇಳುತ್ತಾಳೆ. ಮೆಗೂಮೀ ಈಗ 20 ಅಭ್ಯಾಸಗಳನ್ನು ನಡೆಸುತ್ತಿದ್ದಾಳೆ. ಅವುಗಳಲ್ಲಿ 18 ಅಭ್ಯಾಸಗಳನ್ನು ಅವಳು ತನ್ನ ಸಹಪಾಠಿಗಳೊಂದಿಗೆ ನಡೆಸುತ್ತಿದ್ದಾಳೆ.

16 ಕ್ಯಾಮರೂನ್‌ನಲ್ಲಿ, ಒಂದು ಸೈಟ್‌ನಲ್ಲಿ ಕೆಲಸಮಾಡುತ್ತಿದ್ದ ಎಂಟು ಮಂದಿ ಪುರುಷರು, ದಾರಿಹೋಕರಿಗೆ ಬೈಬಲ್‌ ಸಾಹಿತ್ಯವನ್ನು ನೀಡುತ್ತಿದ್ದ ಒಬ್ಬ ಸಹೋದರನನ್ನು ಕೂಗಿ ಕರೆದರು. ಆ ಸಹೋದರನಿಗೆ ಅಪಹಾಸ್ಯಮಾಡುವ ಉದ್ದೇಶದಿಂದ, ಅವನು ತ್ರಯೈಕ್ಯ, ನರಕಾಗ್ನಿ, ಅಥವಾ ಆತ್ಮದ ಅಮರತ್ವದಲ್ಲಿ ಏಕೆ ನಂಬುವುದಿಲ್ಲವೆಂದು ಅವರು ಕೇಳಿದರು. ಬೈಬಲನ್ನು ಉಪಯೋಗಿಸುತ್ತಾ ನಮ್ಮ ಸಹೋದರನು ಅವರ ಪ್ರಶ್ನೆಗಳನ್ನು ಉತ್ತರಿಸಿದನು. ಫಲಿತಾಂಶವಾಗಿ, ಅವರಲ್ಲಿ ಮೂವರು ಬೈಬಲ್‌ ಅಭ್ಯಾಸವನ್ನು ಮಾಡಲು ಒಪ್ಪಿಕೊಂಡರು. ಅವರಲ್ಲೊಬ್ಬನು ಕೂಟಗಳಿಗೆ ಹಾಜರಾಗಲಾರಂಭಿಸಿದನು ಮತ್ತು ತನ್ನ ಬಳಿಯಿದ್ದ ಪ್ರೇತಾತ್ಮವಾದಕ್ಕೆ ಸಂಬಂಧಿಸಿದ ಎಲ್ಲ ವಸ್ತುಗಳನ್ನೂ ನಾಶಮಾಡಿದನು. (ಪ್ರಕಟನೆ 21:8) ಒಂದು ವರ್ಷದೊಳಗೆ ಅವನು ದೀಕ್ಷಾಸ್ನಾನವನ್ನು ಪಡೆದನು.

17 ಎಲ್‌ ಸಾಲ್ವಡಾರ್‌ನಲ್ಲಿ ಒಬ್ಬ ವ್ಯಕ್ತಿಯು, ತನ್ನ ಮನೆಯ ಹತ್ತಿರ ಯೆಹೋವನ ಸಾಕ್ಷಿಗಳು ಬರುತ್ತಿರುವುದನ್ನು ನೋಡಿದಾಗಲೆಲ್ಲ ತನ್ನ ಭಯಂಕರವಾದ ನಾಯಿಯನ್ನು ಬಾಗಿಲ ಬಳಿ ಕಟ್ಟಿಹಾಕುತ್ತಿದ್ದನು. ಸಾಕ್ಷಿಗಳು ಮುಂದೆ ಹೋದ ಮೇಲೆ, ಅವನು ನಾಯಿಯನ್ನು ಮನೆಯೊಳಕ್ಕೆ ತರುತ್ತಿದ್ದನು. ಆದುದರಿಂದ ಸಹೋದರರಿಗೆ ಈ ಮನುಷ್ಯನೊಂದಿಗೆ ಮಾತಾಡಲು ಸಾಧ್ಯವೇ ಆಗಲಿಲ್ಲ. ಆದಕಾರಣ, ಅವರು ಒಂದು ಹೊಸ ಉಪಾಯವನ್ನು ಹೂಡಿದರು. ತಾವು ಹೇಳುವುದನ್ನು ಆ ಮನುಷ್ಯನು ಕೇಳಿಸಿಕೊಳ್ಳಬಲ್ಲನೆಂದು ತಿಳಿದ ಅವರು ಆ ನಾಯಿಗೇ ಸಾಕ್ಷಿಕೊಡಲು ನಿರ್ಧರಿಸಿದರು. ಅವರು ಆ ಮನೆಗೆ ಬಂದು, ನಾಯಿಗೆ ನಮಸ್ಕಾರ ಹೇಳಿ, ಅದರೊಂದಿಗೆ ಮಾತಾಡುವ ಅವಕಾಶ ದೊರಕಿದ್ದರಿಂದ ತಮಗೆ ತುಂಬ ಸಂತೋಷವಾಗಿದೆಯೆಂದು ಹೇಳಿದರು. ಈ ಭೂಮಿಯು ಒಂದು ಪ್ರಮೋದವನವಾಗಿ ಪರಿವರ್ತನೆಗೊಳ್ಳುವ ಹಾಗೂ ಯಾರೂ ಕೋಪಗೊಳ್ಳದ ಮತ್ತು ಪ್ರಾಣಿಗಳೂ ಶಾಂತವಾಗಿರುವ ಸಮಯದ ಕುರಿತಾಗಿ ಅವರು ಮಾತಾಡಿದರು. ಅನಂತರ ಅವರು ವಿನಯದಿಂದ ನಾಯಿಗೆ ವಿದಾಯಹೇಳಿ ಅಲ್ಲಿಂದ ಇನ್ನೇನು ಹೊರಡಲಿದ್ದರು. ಅಷ್ಟರಲ್ಲಿ, ಅವರನ್ನು ಆಶ್ಚರ್ಯಪಡಿಸುತ್ತಾ ಮನೆಯ ಯಜಮಾನನು ಹೊರಗೆ ಬಂದು, ಸಾಕ್ಷಿಗಳು ತನ್ನೊಂದಿಗೆ ಮಾತಾಡಲು ಎಂದೂ ಅವರಿಗೆ ಅವಕಾಶವನ್ನು ಕೊಡದಿದ್ದಕ್ಕಾಗಿ ಕ್ಷಮೆಯಾಚಿಸಿದನು. ಅವನು ಪತ್ರಿಕೆಗಳನ್ನು ಸ್ವೀಕರಿಸಿದನು ಮತ್ತು ಅವನೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಆರಂಭಿಸಲಾಯಿತು. ಈ ವ್ಯಕ್ತಿ ಈಗ ನಮ್ಮ ಸಹೋದರನು, ಅಂದರೆ ‘ಇಷ್ಟವಸ್ತುಗಳಲ್ಲಿ’ ಒಬ್ಬನು ಆಗಿದ್ದಾನೆ!

“ಹೆದರಬೇಡಿರಿ”

18 ಅತ್ಯಾವಶ್ಯಕವಾದ ರಾಜ್ಯ ಸಾರುವಿಕೆ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ನೀವು ಪಾಲ್ಗೊಳ್ಳುತ್ತಿದ್ದೀರೊ? ಹಾಗಿರುವಲ್ಲಿ ನಿಮಗೆ ನಿಜವಾಗಿಯೂ ಒಂದು ವಿಶೇಷ ಸುಯೋಗವಿದೆ. ಹೌದು, ಈ ಕೆಲಸದ ಮೂಲಕವೇ ಯೆಹೋವನು ‘ಇಷ್ಟವಸ್ತುಗಳನ್ನು’ ತನ್ನ ಆಲಯದೊಳಕ್ಕೆ ಬರಮಾಡಿಕೊಳ್ಳುತ್ತಿದ್ದಾನೆ. (ಯೋಹಾನ 6:44) ನಿಜ, ಆಗಾಗ್ಗೆ ನೀವು ಸ್ವಲ್ಪ ದಣಿದುಹೋಗಬಹುದು ಅಥವಾ ನಿರುತ್ಸಾಹಿತರಾಗಬಹುದು. ಕೆಲವೊಮ್ಮೆ, ಯೆಹೋವನ ನಂಬಿಗಸ್ತ ಸೇವಕರಲ್ಲೂ ಕೆಲವರು, ತಾವು ಅಯೋಗ್ಯರೆಂಬ ಭಾವನೆಗಳೊಂದಿಗೆ ಹೆಣಗಾಡುತ್ತಾರೆ. ಆದರೆ ಧೈರ್ಯ ತಂದುಕೊಳ್ಳಿರಿ! ಯೆಹೋವನು ತನ್ನ ಆರಾಧಕರಲ್ಲಿ ಪ್ರತಿಯೊಬ್ಬರನ್ನೂ ಇಷ್ಟಕರವಾಗಿ ವೀಕ್ಷಿಸುತ್ತಾನೆ, ಮತ್ತು ನಿಮ್ಮ ರಕ್ಷಣೆಯಾಗುವುದರಲ್ಲಿ ಆತನಿಗೆ ತೀವ್ರಾಸಕ್ತಿಯಿದೆ.—2 ಪೇತ್ರ 3:9.

19 ವಿರೋಧದಿಂದಾಗಿ ಅಥವಾ ಬೇರಾವುದೊ ಅಹಿತಕರವಾದ ಪರಿಸ್ಥಿತಿಗಳಿಂದಾಗಿ ನಾವು ನಿರುತ್ಸಾಹಿತರಾಗುವಾಗ, ಸ್ವದೇಶಕ್ಕೆ ಹಿಂದಿರುಗಿ ಬಂದ ಯೆಹೂದ್ಯರಿಗೆ ಯೆಹೋವನು ನುಡಿದ ಮಾತುಗಳು ನಮಗೆ ಧೈರ್ಯವನ್ನು ಕೊಡಬಲ್ಲವು. ಹಗ್ಗಾಯ 2:4-6ರಲ್ಲಿ ನಾವು ಹೀಗೆ ಓದುತ್ತೇವೆ: “ಯೆಹೋವನು ಇಂತೆನ್ನುತ್ತಾನೆ—ಜೆರುಬ್ಬಾಬೆಲನೇ, ಈಗ ಧೈರ್ಯವಾಗಿರು; ಯೆಹೋಚಾದಾಕನಿಗೆ ಹುಟ್ಟಿದ ಮಹಾಯಾಜಕನಾದ ಯೆಹೋಶುವನೇ, ಧೈರ್ಯವಾಗಿರು; ದೇಶೀಯರೇ, ನೀವೆಲ್ಲರೂ ಧೈರ್ಯಗೊಂಡು ಕೆಲಸನಡಿಸಿರಿ; ಇದು ಯೆಹೋವನ ನುಡಿ; ನಾನು ನಿಮ್ಮೊಂದಿಗೆ ಇದ್ದೇನೆಂದು ಸೇನಾಧೀಶ್ವರ ಯೆಹೋವನು ನುಡಿಯುತ್ತಾನೆ. ನೀವು ಐಗುಪ್ತದಿಂದ ಪಾರಾಗಿ ಬಂದಾಗ ನಾನು ನಿಮಗೆ ಪ್ರಮಾಣವಾಗಿ ಕೊಟ್ಟ ಮಾತನ್ನು [ನೆರವೇರಿಸುವೆನು;] ನನ್ನ ಆತ್ಮನು ನಿಮ್ಮ ಮಧ್ಯದಲ್ಲಿ ನೆಲೆಗೊಂಡಿರುವನು; ಹೆದರಬೇಡಿರಿ. ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ—ಸ್ವಲ್ಪ ಕಾಲದ ಮೇಲೆ ನಾನು ಇನ್ನೊಂದೇ ಸಾರಿ ಆಕಾಶವನ್ನೂ ಭೂಮಿಯನ್ನೂ ಸಮುದ್ರವನ್ನೂ ಒಣನೆಲವನ್ನೂ ಅದುರಿ”ಸುವೆನು. ನಾವು ಧೈರ್ಯವಾಗಿರಬೇಕೆಂದು ಯೆಹೋವನು ಉತ್ತೇಜಿಸುತ್ತಾನೆ ಮಾತ್ರವಲ್ಲ, ಧೈರ್ಯವನ್ನು ತಂದುಕೊಳ್ಳಲು ನಮಗೆ ಮಾಧ್ಯಮವನ್ನೂ ಒದಗಿಸುತ್ತಾನೆಂಬುದನ್ನು ಗಮನಿಸಿರಿ. ಹೇಗೆ? ಈ ಪುನರಾಶ್ವಾಸನೆಯ ಮಾತುಗಳನ್ನು ಗಮನಿಸಿರಿ: ‘ನಾನು ನಿಮ್ಮೊಂದಿಗೆ ಇದ್ದೇನೆ.’ ನಮ್ಮ ಮುಂದೆ ಯಾವುದೇ ರೀತಿಯ ತಡೆಗಳು ಬರಲಿ, ಯೆಹೋವನು ನಮ್ಮೊಂದಿಗಿದ್ದಾನೆ ಎಂಬ ಗ್ರಹಿಕೆಯು ನಮ್ಮ ನಂಬಿಕೆಯನ್ನು ಎಷ್ಟೊಂದು ಬಲಪಡಿಸುತ್ತದೆ!—ರೋಮಾಪುರ 8:31.

20 ಯೆಹೋವನು ತನ್ನ ಜನರೊಂದಿಗಿದ್ದಾನೆ ಎಂಬುದನ್ನು ಖಂಡಿತವಾಗಿಯೂ ರುಜುಪಡಿಸಿದ್ದಾನೆ. ಪ್ರವಾದಿಯಾದ ಹಗ್ಗಾಯನ ಮೂಲಕ ತಿಳಿಸಲ್ಪಟ್ಟ ಮಾತುಗಳು ಸತ್ಯವಾಗಿವೆ: “ಈ ಆಲಯದ ಮುಂದಿನ ವೈಭವವು ಹಿಂದಿನ ವೈಭವಕ್ಕಿಂತ ವಿಶೇಷವಾಗಿರುವದು; . . . ಈ ಸ್ಥಳದಲ್ಲಿ ಸಮಾಧಾನವನ್ನು ಅನುಗ್ರಹಿಸುವೆನು.” (ಹಗ್ಗಾಯ 2:9) ನಿಜವಾಗಿಯೂ ಇಂದು ಯೆಹೋವನ ಆತ್ಮಿಕ ಆಲಯದಲ್ಲಿ ಅತಿ ಶ್ರೇಷ್ಠವಾದ ವೈಭವವನ್ನು ಕಂಡುಕೊಳ್ಳಬಹುದು. ಅಷ್ಟುಮಾತ್ರವಲ್ಲದೆ, ಲಕ್ಷಾಂತರ ಮಂದಿ ಪ್ರತಿ ವರ್ಷ ಸತ್ಯಾರಾಧನೆಯ ಕಡೆಗೆ ಹಿಂಡುಹಿಂಡಾಗಿ ಬರುತ್ತಿದ್ದಾರೆ. ಇವರೆಲ್ಲರನ್ನೂ ಆತ್ಮಿಕ ರೀತಿಯಲ್ಲಿ ಚೆನ್ನಾಗಿ ಉಣಿಸಲಾಗುತ್ತಿದೆ ಮತ್ತು ಈ ಗೊಂದಲಮಯ ಲೋಕದಲ್ಲೂ ಅವರು ಶಾಂತಿಯನ್ನು ಅನುಭವಿಸುತ್ತಿದ್ದಾರೆ. ಇದನ್ನೂ ಮೀರಿಸುವಂತಹ ಶಾಂತಿಯನ್ನು ಕೇವಲ ದೇವರ ಹೊಸ ಲೋಕದಲ್ಲಿ ಅನುಭವಿಸಸಾಧ್ಯವಿದೆ.—ಯೆಶಾಯ 9:6, 7; ಲೂಕ 12:42.

21 ಅರ್ಮಗೆದೋನಿನಲ್ಲಿ ಯೆಹೋವನು ಜನಾಂಗಗಳನ್ನು ನಡುಗಿಸುವ ಸಮಯವು ಅತಿ ನಿಕಟವಾಗಿದೆ. (ಪ್ರಕಟನೆ 16:14, 16) ಆದುದರಿಂದ, ಉಳಿದಿರುವ ಸ್ವಲ್ಪ ಸಮಯವನ್ನು ಇನ್ನೂ ಹೆಚ್ಚಿನವರನ್ನು ರಕ್ಷಿಸಲಿಕ್ಕಾಗಿ ಉಪಯೋಗಿಸೋಣ. ನಾವು ಧೈರ್ಯದಿಂದಿದ್ದು, ಯೆಹೋವನಲ್ಲಿ ಸಂಪೂರ್ಣ ಭರವಸೆಯನ್ನಿಡೋಣ. ನಮ್ಮ ಕೆಲಸವು ಪೂರ್ಣಗೊಂಡಿದೆಯೆಂದು ಯೆಹೋವನು ಹೇಳುವವರೆಗೂ, ಈ ಮಹಾ ಆತ್ಮಿಕ ಆಲಯವನ್ನು ಇನ್ನೂ ಹೆಚ್ಚು ‘ಇಷ್ಟವಸ್ತುಗಳೊಂದಿಗೆ’ ತುಂಬಿಸಿ, ಅದರಲ್ಲಿ ಆರಾಧಿಸುತ್ತಾ ಇರುವುದು ನಮ್ಮ ದೃಢಸಂಕಲ್ಪವಾಗಿರಲಿ.

[ಪಾದಟಿಪ್ಪಣಿಗಳು]

^ ಪ್ಯಾರ. 6 ಸೊಲೊಮೋನನ ಆಲಯದ ನಿರ್ಮಾಣಕ್ಕೆ ಕಾಣಿಕೆಯಾಗಿ ಕೊಡಲ್ಪಟ್ಟ ಮೊತ್ತವು, ಸದ್ಯದ ಮೌಲ್ಯಕ್ಕನುಸಾರ ಕಡಿಮೆಪಕ್ಷ 400 ಕೋಟಿ ಡಾಲರುಗಳಷ್ಟಾಗಿರುತ್ತಿತ್ತು. ನಿರ್ಮಾಣ ಕೆಲಸದಲ್ಲಿ ಉಪಯೋಗಿಸಲ್ಪಡದಿದ್ದ ಕಾಣಿಕೆಯನ್ನು ಆಲಯದ ಭಂಡಾರಕ್ಕೆ ಸೇರಿಸಲಾಯಿತು.—1 ಅರಸು 7:51.

^ ಪ್ಯಾರ. 13 ಇಸ್ರಾಯೇಲಿನ ಮಹಾ ಯಾಜಕನಲ್ಲಿದ್ದಂತೆ ಯೇಸುವಿನಲ್ಲಿ ಪಾಪಗಳಿರಲಿಲ್ಲ. ಆದುದರಿಂದ, ಅವನಿಗೆ ಪ್ರಾಯಶ್ಚಿತ್ತ ಮಾಡುವ ಅಗತ್ಯವಿರಲಿಲ್ಲ. ಆದರೆ, ಅವನ ಜೊತೆ ಯಾಜಕರಲ್ಲಿ ಪಾಪಗಳಿದ್ದವು, ಯಾಕೆಂದರೆ ಅವರನ್ನು ಪಾಪಪೂರ್ಣ ಮಾನವಕುಲದಿಂದ ಆರಿಸಲಾಗಿತ್ತು.—ಪ್ರಕಟನೆ 5:9, 10.

^ ಪ್ಯಾರ. 15 ಫೆಬ್ರವರಿ 15, 1998ರ ಕಾವಲಿನಬುರುಜು ಪತ್ರಿಕೆಯ, 17-22ನೆಯ ಪುಟಗಳನ್ನು ನೋಡಿರಿ.

ನಿಮಗೆ ಜ್ಞಾಪಕವಿದೆಯೆ?

• ಯೆಹೋವನಿಗೆ ಭೌತಿಕ ವಸ್ತುಗಳಿಗಿಂತಲೂ ಯಾವುದು ಹೆಚ್ಚು ಅಮೂಲ್ಯವಾದದ್ದಾಗಿದೆ?

• ಯೇಸು ಸುರಿಸಿದ ರಕ್ತದಿಂದ ಯಾವ ಎರಡು ಗುಂಪುಗಳಿಗೆ ಪ್ರಯೋಜನವಾಗುತ್ತದೆ?

• ಯೆಹೋವನ ಆಲಯವನ್ನು ವೈಭವದಿಂದ ತುಂಬಿಸಲಿರುವ “ಇಷ್ಟವಸ್ತುಗಳು” ಯಾರಾಗಿದ್ದಾರೆ?

• ಹಗ್ಗಾಯನ ಪ್ರವಾದನೆಯು ಇಂದು ನೆರವೇರುತ್ತಿದೆ ಎಂಬುದಕ್ಕೆ ನಮಗೆ ಯಾವ ಸಾಕ್ಷ್ಯವಿದೆ?

[ಅಧ್ಯಯನ ಪ್ರಶ್ನೆಗಳು]

1. ಒಂದು ತುರ್ತು ಪರಿಸ್ಥಿತಿಯಲ್ಲಿ, ನಾವು ಮೊತ್ತಮೊದಲು ನಮ್ಮ ಪ್ರಿಯ ವ್ಯಕ್ತಿಗಳ ಕುರಿತಾಗಿ ಏಕೆ ಯೋಚಿಸುತ್ತೇವೆ?

2. ಯೆಹೋವನ ಸೃಷ್ಟಿಯು ಎಷ್ಟು ವಿಸ್ತಾರವಾಗಿದೆ, ಮತ್ತು ಅದರಲ್ಲಿ ಯಾವ ಅಂಶವನ್ನು ಯೇಸು ತುಂಬ ಇಷ್ಟಪಡುತ್ತಾನೆ?

3. ಯೆಹೋವನು ಹಗ್ಗಾಯನ ಮೂಲಕ ಯಾವ ಪ್ರವಾದನೆಯನ್ನು ಕೊಟ್ಟನು?

4, 5. (ಎ) “ಇಷ್ಟವಸ್ತುಗಳು” ಎಂಬ ಅಭಿವ್ಯಕ್ತಿಯು ಭೌತಿಕ ಭವ್ಯತೆಗೆ ಸೂಚಿಸುತ್ತದೆಂಬ ತೀರ್ಮಾನಕ್ಕೆ ಬರುವುದು ಏಕೆ ತರ್ಕಸಂಗತವಾಗಿರುವುದಿಲ್ಲ? (ಬಿ) “ಇಷ್ಟವಸ್ತುಗಳು” ಎಂಬ ಪದವನ್ನು ನೀವು ಹೇಗೆ ನಿರೂಪಿಸುವಿರಿ, ಮತ್ತು ಏಕೆ?

6. ದೇವರ ಪುರಾತನ ಆಲಯವು ಯಾವ ಉದ್ದೇಶವನ್ನು ಪೂರೈಸಿತು?

7. (ಎ) ಯೆರೂಸಲೇಮಿನಲ್ಲಿದ್ದ ದೇವರ ಪುರಾತನ ಆಲಯವು ಏನನ್ನು ಮುನ್‌ಚಿತ್ರಿಸಿತು? (ಬಿ) ಪ್ರಾಯಶ್ಚಿತ್ತದ ದಿನದಂದು ಮಹಾ ಯಾಜಕನು ಮಾಡುತ್ತಿದ್ದ ಕೆಲಸಗಳನ್ನು ವರ್ಣಿಸಿರಿ.

8. (ಎ) ಸಾ.ಶ. 29ರಿಂದ ಆರಂಭಿಸಿ ಯೇಸು ಯಾವ ಅರ್ಥದಲ್ಲಿ ಬಲಿಯಾಗಿ ಅರ್ಪಿಸಲ್ಪಟ್ಟನು? (ಬಿ) ಭೂಮಿಯಲ್ಲಿದ್ದಾಗ ತನ್ನ ಶುಶ್ರೂಷೆಯ ಸಮಯದಾದ್ಯಂತ ಯೇಸು ಯೆಹೋವನೊಂದಿಗೆ ಯಾವ ವಿಶೇಷ ಸಂಬಂಧದಲ್ಲಿ ಆನಂದಿಸಿದನು?

9. ಯೇಸು ಒಬ್ಬ ಮಾನವನೋಪಾದಿ ಏಕೆ ಸ್ವರ್ಗವನ್ನು ಪ್ರವೇಶಿಸಲು ಸಾಧ್ಯವಿರಲಿಲ್ಲ, ಮತ್ತು ಈ ಸಮಸ್ಯೆಯನ್ನು ಹೇಗೆ ಬಗೆಹರಿಸಲಾಯಿತು?

10. ಸ್ವರ್ಗಕ್ಕೆ ಹಿಂದಿರುಗಿದ ನಂತರ ಯೇಸು ಏನು ಮಾಡಿದನು?

11. ಇಸ್ರಾಯೇಲಿನ ಮಹಾ ಯಾಜಕನು ಯಾರ ಪರವಾಗಿ ಆಡನ್ನು ಅರ್ಪಿಸಿದನು, ಮತ್ತು ಇದು ಏನನ್ನು ಮುನ್‌ಚಿತ್ರಿಸಿತು?

12. ಇಂದು ದೇವರ ಆಲಯಕ್ಕೆ ಅನೇಕ “ಇಷ್ಟವಸ್ತುಗಳು” ಹೇಗೆ ಬರಮಾಡಲ್ಪಡುತ್ತಿವೆ?

13. ಬೊಲಿವಿಯದಲ್ಲಿನ ಒಬ್ಬ ಪುಟ್ಟ ಹುಡುಗಿಯು, ರಾಜ್ಯ ಸಂದೇಶವನ್ನು ಹಬ್ಬಿಸುವುದರಲ್ಲಿ ತನ್ನ ಹುರುಪನ್ನು ಹೇಗೆ ತೋರಿಸಿದಳು?

14. ಕೊರಿಯದಲ್ಲಿ, ನಿರಾಸಕ್ತನಂತೆ ತೋರುತ್ತಿದ್ದ ಒಬ್ಬ ವ್ಯಕ್ತಿಯೊಂದಿಗೆ ಸಹೋದರಿಯೊಬ್ಬಳು ಪಟ್ಟುಹಿಡಿದು ಮಾತಾಡಿದ್ದರಿಂದ ಹೇಗೆ ಪ್ರತಿಫಲವನ್ನು ಪಡೆದಳು?

15. ಜಪಾನಿನಲ್ಲಿ ಒಬ್ಬ ಎಳೆಯ ಹುಡುಗಿಯು ಬೈಬಲ್‌ ಅಭ್ಯಾಸಗಳನ್ನು ಹೇಗೆ ಆರಂಭಿಸುತ್ತಾಳೆ, ಮತ್ತು ಅವಳ ಪ್ರಯತ್ನಗಳಿಗೆ ಹೇಗೆ ಪ್ರತಿಫಲ ಸಿಕ್ಕಿದೆ?

16. ಕ್ಯಾಮರೂನ್‌ನಲ್ಲಿ ಒಬ್ಬ ಸಹೋದರನು, ಅಪಹಾಸ್ಯ ಮಾಡುತ್ತಿದ್ದ ಗುಂಪಿನವರಲ್ಲಿ ಕೆಲವರೊಂದಿಗೆ ಹೇಗೆ ಬೈಬಲ್‌ ಅಭ್ಯಾಸಗಳನ್ನು ಆರಂಭಿಸಲು ಶಕ್ತನಾದನು?

17. ಎಲ್‌ ಸಾಲ್ವಡಾರ್‌ನಲ್ಲಿ ಕೆಲವು ಸಹೋದರರು, ಆರಂಭದಲ್ಲಿ ರಾಜ್ಯ ಸಂದೇಶಕ್ಕೆ ಕಿವಿಗೊಡಲು ಬಯಸದಿದ್ದ ಒಬ್ಬ ವ್ಯಕ್ತಿಗೆ ಹೇಗೆ ಜಾಣತನದಿಂದ ಸಾಕ್ಷಿಯನ್ನು ಕೊಟ್ಟರು?

18. ಅನೇಕ ಕ್ರೈಸ್ತರು ಯಾವ ಸಮಸ್ಯೆಗಳನ್ನು ಎದುರಿಸುತ್ತಾರೆ, ಆದರೆ ಯೆಹೋವನು ತನ್ನ ಆರಾಧಕರನ್ನು ಹೇಗೆ ವೀಕ್ಷಿಸುತ್ತಾನೆ?

19. ಹಗ್ಗಾಯನ ಮೂಲಕ ಯೆಹೋವನು ಯಾವ ಉತ್ತೇಜನವನ್ನು ಕೊಟ್ಟನು, ಮತ್ತು ಈ ಮಾತುಗಳು ಇಂದು ನಮ್ಮಲ್ಲಿ ಹೇಗೆ ಧೈರ್ಯವನ್ನು ತುಂಬಿಸಬಲ್ಲವು?

20. ಅಭೂತಪೂರ್ವವಾದ ವೈಭವವು ಇಂದು ಹೇಗೆ ಯೆಹೋವನ ಆಲಯವನ್ನು ತುಂಬುತ್ತಿದೆ?

21. ನಮ್ಮ ದೃಢಸಂಕಲ್ಪವು ಏನಾಗಿರಬೇಕು?

[ಪುಟ 16ರಲ್ಲಿರುವ ರೇಖಾಕೃತಿ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಯೆಹೋವನ ಪುರಾತನ ಆಲಯದ ಸಾಂಕೇತಿಕ ಅರ್ಥವೇನೆಂದು ನಿಮಗೆ ತಿಳಿದಿದೆಯೊ?

ಅತಿ ಪವಿತ್ರಸ್ಥಾನ

ತೆರೆ

ಪವಿತ್ರಸ್ಥಾನ

ಮಂಟಪ

ವೇದಿ

ಅಂಗಣ

[ಪುಟ 17ರಲ್ಲಿರುವ ಚಿತ್ರ]

ಮಹಾ ಯಾಜಕನು ಯಾಜಕರ ಪಾಪಗಳಿಗಾಗಿ ಒಂದು ಹೋರಿಯನ್ನು ಮತ್ತು ಇಸ್ರಾಯೇಲಿನ ಯಾಜಕರಲ್ಲದ ಕುಲಗಳ ಪಾಪಗಳಿಗಾಗಿ ಒಂದು ಆಡನ್ನು ಅರ್ಪಿಸಿದನು

[ಪುಟ 18ರಲ್ಲಿರುವ ಚಿತ್ರ]

ಲೋಕವ್ಯಾಪಕ ರಾಜ್ಯ ಸಾರುವಿಕೆಯ ಕೆಲಸವು, ಬಹು ಸಂಖ್ಯೆಯಲ್ಲಿ ಜನರನ್ನು ಯೆಹೋವನ ಆಲಯಕ್ಕೆ ತರುತ್ತಿದೆ