ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ರಕ್ಷಕನಾದ ದೇವರಲ್ಲಿ ಆನಂದಿಸುವುದು

ನಮ್ಮ ರಕ್ಷಕನಾದ ದೇವರಲ್ಲಿ ಆನಂದಿಸುವುದು

ನಮ್ಮ ರಕ್ಷಕನಾದ ದೇವರಲ್ಲಿ ಆನಂದಿಸುವುದು

“ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.”—ಹಬಕ್ಕೂಕ 3:18.

1. ಸಾ.ಶ.ಪೂ. 539ರಲ್ಲಿ ಬಾಬೆಲ್‌ ಪತನಗೊಳ್ಳುವುದಕ್ಕೆ ಮೊದಲು ದಾನಿಯೇಲನಿಗೆ ಯಾವುದರ ಬಗ್ಗೆ ಒಂದು ದರ್ಶನವು ಕೊಡಲ್ಪಟ್ಟಿತು?

ಬಾಬೆಲು ಸಾ.ಶ.ಪೂ. 539ರಲ್ಲಿ ಪತನಗೊಳ್ಳುವ ಒಂದು ದಶಕಕ್ಕಿಂತಲೂ ಮುಂಚೆ, ವೃದ್ಧನಾಗಿದ್ದ ಪ್ರವಾದಿ ದಾನಿಯೇಲನು ರೋಮಾಂಚಕವಾದ ಒಂದು ದರ್ಶನವನ್ನು ಕಂಡನು. ಯೆಹೋವನ ವೈರಿಗಳು ಮತ್ತು ಆತನ ನೇಮಿತ ಅರಸನಾದ ಯೇಸು ಕ್ರಿಸ್ತನ ಮಧ್ಯೆ ಪರಮಾವಧಿಗೇರುವ ಯುದ್ಧಕ್ಕೆ ಮುನ್ನಡಿಸಲಿರುವ ಲೋಕ ಘಟನೆಗಳನ್ನು ಅದು ಮುಂತಿಳಿಸಿತು. ದಾನಿಯೇಲನ ಪ್ರತಿಕ್ರಿಯೆಯು ಏನಾಗಿತ್ತು? ಅವನು ಹೇಳಿದ್ದು: “ನಾನು ಬೆಂಡಾಗಿ . . . ಆ ಕನಸಿಗೆ ಬೆಚ್ಚಿಬೆರಗಾದೆನು.”—ದಾನಿಯೇಲ 8:27.

2. ದರ್ಶನದಲ್ಲಿ ದಾನಿಯೇಲನು ಯಾವ ಹೋರಾಟವನ್ನು ನೋಡಿದನು ಮತ್ತು ಅದರ ಸಾಮೀಪ್ಯದ ಕುರಿತು ನಿಮ್ಮ ಅನಿಸಿಕೆ ಏನು?

2 ನಮ್ಮ ಕುರಿತಾಗಿ ಏನು? ಕಾಲಪ್ರವಾಹದಲ್ಲಿ ನಾವು ಬಹಳ ಮುಂದೆ ಸಾಗಿದ್ದೇವೆ! ದಾನಿಯೇಲನು ದರ್ಶನದಲ್ಲಿ ಕಂಡ ಆ ಹೋರಾಟವು, ಅಂದರೆ ಅರ್ಮಗೆದೋನ್‌ ಯುದ್ಧವು ತುಂಬ ಹತ್ತಿರವಿರುವುದನ್ನು ಗ್ರಹಿಸುವಾಗ ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಹಬಕ್ಕೂಕನ ಪ್ರವಾದನೆಯಲ್ಲಿ ಬಯಲುಗೊಳಿಸಲ್ಪಟ್ಟಿರುವ ದುಷ್ಟತನವು ತೀರ ವ್ಯಾಪಕವಾಗಿರುವುದರಿಂದ, ದೇವರ ವೈರಿಗಳ ನಾಶನವು ಅನಿವಾರ್ಯವಾಗಿದೆ ಎಂಬುದನ್ನು ನಾವು ವಿವೇಚಿಸಿ ತಿಳಿದುಕೊಳ್ಳುವಾಗ, ನಾವು ಹೇಗೆ ಪ್ರತಿಕ್ರಿಯಿಸುತ್ತೇವೆ? ಬಹುಶಃ ನಮ್ಮ ಅನಿಸಿಕೆಗಳು ಹಬಕ್ಕೂಕನ ಅನಿಸಿಕೆಗಳಂತೆಯೇ ಇವೆ. ಹಬಕ್ಕೂಕನ ಅನಿಸಿಕೆಗಳನ್ನು ಅವನ ಪ್ರವಾದನ ಪುಸ್ತಕದ ಮೂರನೆಯ ಅಧ್ಯಾಯದಲ್ಲಿ ವರ್ಣಿಸಲಾಗಿದೆ.

ಹಬಕ್ಕೂಕನು ದೇವರ ಕರುಣೆಗಾಗಿ ಪ್ರಾರ್ಥಿಸುತ್ತಾನೆ

3. ಹಬಕ್ಕೂಕನು ಯಾರ ಪರವಾಗಿ ಪ್ರಾರ್ಥಿಸಿದನು ಮತ್ತು ಅವನ ಮಾತುಗಳು ನಮ್ಮ ಮೇಲೆ ಹೇಗೆ ಪ್ರಭಾವ ಬೀರಬಹುದು?

3ಹಬಕ್ಕೂಕ 3ನೆಯ ಅಧ್ಯಾಯವು ಒಂದು ಪ್ರಾರ್ಥನೆಯಾಗಿದೆ. 1ನೆಯ ವಚನಕ್ಕನುಸಾರ, ಅದನ್ನು ಶೋಕಗೀತೆ ಅಥವಾ ಪ್ರಲಾಪ ಗೀತೆಯಲ್ಲಿ ವ್ಯಕ್ತಪಡಿಸಲಾಗಿದೆ. ಈ ಪ್ರವಾದಿಯ ಪ್ರಾರ್ಥನೆಯು, ಸ್ವತಃ ಅವನಿಗೇ ಅನ್ವಯಿಸುತ್ತದೋ ಎಂಬಂತೆ ನಿವೇದಿಸಲ್ಪಟ್ಟಿದೆ. ಆದರೆ, ಹಬಕ್ಕೂಕನು ದೇವರಾದುಕೊಂಡ ಜನಾಂಗದ ಪರವಾಗಿ ಮಾತಾಡುತ್ತಿದ್ದಾನೆ. ಇಂದು, ರಾಜ್ಯದ ಕುರಿತು ಸಾರುವ ಕೆಲಸದಲ್ಲಿ ಒಳಗೂಡಿರುವ ದೇವಜನರಿಗೆ ಅವನ ಪ್ರಾರ್ಥನೆಯು ಅತ್ಯಧಿಕ ಅರ್ಥವನ್ನು ಹೊಂದಿದೆ. ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ಹಬಕ್ಕೂಕ 3ನೆಯ ಅಧ್ಯಾಯವನ್ನು ಓದುವಾಗ, ಅದರ ಮಾತುಗಳು ನಮ್ಮಲ್ಲಿ ಕೇಡಿನ ಮುನ್ಸೂಚನೆಯನ್ನು ಮಾತ್ರವಲ್ಲ ಆನಂದವನ್ನೂ ತುಂಬಿಸುತ್ತವೆ. ಹಬಕ್ಕೂಕನ ಪ್ರಾರ್ಥನೆ ಅಥವಾ ಶೋಕಗೀತೆಯು, ನಮ್ಮ ರಕ್ಷಕನಾದ ಯೆಹೋವ ದೇವರಲ್ಲಿ ಆನಂದಿಸಲು ನಮಗೆ ಬಲವಾದ ಕಾರಣವನ್ನು ಕೊಡುತ್ತದೆ.

4. ಹಬಕ್ಕೂಕನು ಏಕೆ ಭಯಗೊಂಡನು ಮತ್ತು ದೇವರ ಶಕ್ತಿಯ ಯಾವ ತೋರ್ಪಡಿಸುವಿಕೆಯ ಕುರಿತು ನಾವು ನಿಶ್ಚಿತರಾಗಿರಬಹುದು?

4 ಹಿಂದಿನ ಎರಡು ಲೇಖನಗಳಲ್ಲಿ ನಾವು ಈಗಾಗಲೇ ಗಮನಿಸಿರುವಂತೆ, ಹಬಕ್ಕೂಕನ ದಿನದಲ್ಲಿ ಯೆಹೂದ ದೇಶದಲ್ಲಿನ ಪರಿಸ್ಥಿತಿಯು ತುಂಬ ಹದಗೆಟ್ಟಿತ್ತು. ಆದರೆ ಈ ಸನ್ನಿವೇಶವು ಹೀಗೆಯೇ ಮುಂದುವರಿಯುವಂತೆ ದೇವರು ಅನುಮತಿಸಸಾಧ್ಯವಿರಲಿಲ್ಲ. ಗತಕಾಲದಲ್ಲಿ ಮಾಡಿದಂತೆ ಈಗಲೂ ಯೆಹೋವನು ಕ್ರಿಯೆಗೈಯಲಿದ್ದನು. ಆದುದರಿಂದ ಪ್ರವಾದಿಯು ಹೀಗೆ ಹೇಳಿದ್ದರಲ್ಲಿ ಆಶ್ಚರ್ಯವೇನೂ ಇಲ್ಲ: “ಯೆಹೋವನೇ, ನಾನು ನಿನ್ನ ಸುದ್ದಿಯನ್ನು ಕೇಳಿಸಿಕೊಂಡಿದ್ದೇನೆ. ಯೆಹೋವನೇ, ನಿನ್ನ ಚಟುವಟಿಕೆಯ ನಿಮಿತ್ತ ನಾನು ಭಯಗೊಂಡಿದ್ದೇನೆ”! ಅವನು ಹೇಳಿದ್ದರ ಅರ್ಥವೇನು? ‘ಯೆಹೋವನ ಕುರಿತಾದ ಸುದ್ದಿಯು,’ ಕೆಂಪು ಸಮುದ್ರದಲ್ಲಿ, ಅರಣ್ಯದಲ್ಲಿ, ಮತ್ತು ಯೆರಿಕೊ ಪಟ್ಟಣದಲ್ಲಿ ಮಾಡಿದಂತಹ ದೇವರ ಶೂರ ಕೃತ್ಯಗಳ ಕುರಿತಾದ ದಾಖಲಿತ ಇತಿಹಾಸವೇ ಆಗಿತ್ತು. ಈ ಶೂರ ಕೃತ್ಯಗಳು ಹಬಕ್ಕೂಕನಿಗೆ ಚಿರಪರಿಚಿತವಾಗಿದ್ದವು, ಮತ್ತು ಯೆಹೋವನು ತನ್ನ ವೈರಿಗಳ ವಿರುದ್ಧ ಪುನಃ ತನ್ನ ಮಹಾ ಶಕ್ತಿಯನ್ನು ಉಪಯೋಗಿಸುವನೆಂಬುದು ಅವನಿಗೆ ತಿಳಿದಿದ್ದ ಕಾರಣ, ಆ ಘಟನೆಗಳು ಅವನನ್ನು ಭಯಭೀತಗೊಳಿಸಿದವು. ಇಂದು ನಾವು ಮಾನವಕುಲದ ದುಷ್ಟತನವನ್ನು ನೋಡುವಾಗ, ಪುರಾತನ ಸಮಯಗಳಲ್ಲಿ ಯೆಹೋವನು ಕ್ರಿಯೆಗೈದಂತೆಯೇ ಈಗಲೂ ಕ್ರಿಯೆಗೈಯುವನೆಂಬುದು ನಮಗೆ ಗೊತ್ತಿದೆ. ಅದು ನಮ್ಮಲ್ಲಿ ಭಯವನ್ನು ಹುಟ್ಟಿಸುತ್ತದೋ? ಖಂಡಿತವಾಗಿಯೂ ಭಯವನ್ನು ಹುಟ್ಟಿಸುತ್ತದೆ! ಆದರೂ, ಹಬಕ್ಕೂಕನಂತೆ ನಾವು ಪ್ರಾರ್ಥಿಸುತ್ತೇವೆ: “ಯೆಹೋವನೇ, ಯುಗದ ಮಧ್ಯದಲ್ಲಿ ನಿನ್ನ ರಕ್ಷಣಕಾರ್ಯವನ್ನು ಪುನಃ ಮಾಡು, ಯುಗದ ಮಧ್ಯದಲ್ಲಿ ಅದನ್ನು ಪ್ರಸಿದ್ಧಿಪಡಿಸು; ನೀನು ರೋಷಗೊಂಡಿದ್ದರೂ ಕರುಣೆಯನ್ನು ಚಿತ್ತಕ್ಕೆ ತಂದುಕೋ.” (ಹಬಕ್ಕೂಕ 3:2) ದೇವರ ನೇಮಿತ ಸಮಯದಲ್ಲಿ, ಅಂದರೆ “ಯುಗದ ಮಧ್ಯದಲ್ಲಿ” ಆತನು ತನ್ನ ಅದ್ಭುತಕರ ಶಕ್ತಿಯನ್ನು ಪುನಃ ತೋರ್ಪಡಿಸುವಂತಾಗಲಿ. ಮತ್ತು ಆ ಸಮಯದಲ್ಲಿ, ತನ್ನನ್ನು ಪ್ರೀತಿಸುವವರಿಗೆಲ್ಲ ಕರುಣೆಯನ್ನು ತೋರಿಸಲು ಆತನು ಮರೆಯದಿರಲಿ!

ಯೆಹೋವನು ಮುನ್ನಡೆಯುತ್ತಿದ್ದಾನೆ!

5. ಯಾವ ಅರ್ಥದಲ್ಲಿ ‘ದೇವರು ತೇಮಾನಿನಿಂದ ಬಂದನು,’ ಮತ್ತು ಅರ್ಮಗೆದೋನಿನ ವಿಷಯದಲ್ಲಿ ಇದು ಏನನ್ನು ಸೂಚಿಸುತ್ತದೆ?

5 ಯೆಹೋವನು ಕರುಣೆಗಾಗಿರುವ ನಮ್ಮ ಪ್ರಾರ್ಥನೆಯನ್ನು ಕೇಳಿಸಿಕೊಂಡಾಗ ಏನು ಸಂಭವಿಸುವುದು? ಹಬಕ್ಕೂಕ 3:3, 4ರಲ್ಲಿ ನಾವು ಉತ್ತರವನ್ನು ಕಂಡುಕೊಳ್ಳುತ್ತೇವೆ. ಪ್ರಥಮವಾಗಿ ಪ್ರವಾದಿಯು ಹೇಳುವುದು: “ದೇವರು ತೇಮಾನಿನಿಂದ ಬರುತ್ತಾನೆ, ಸದಮಲಸ್ವಾಮಿಯು ಪಾರಾನ್‌ ಪರ್ವತದಿಂದ ಐತರುತ್ತಾನೆ.” ಹಿಂದೆ ಮೋಶೆಯ ದಿನದಲ್ಲಿ, ಅರಣ್ಯದ ಮೂಲಕ ಇಸ್ರಾಯೇಲ್ಯರು ಕಾನಾನ್‌ ದೇಶಕ್ಕೆ ಹೋಗುವಾಗ, ಮಾರ್ಗಮಧ್ಯದಲ್ಲಿ ತೇಮಾನ್‌ ಮತ್ತು ಪಾರಾನ್‌ ಕ್ಷೇತ್ರಗಳಿದ್ದವು. ಈ ದೊಡ್ಡ ಇಸ್ರಾಯೇಲ್‌ ಜನಾಂಗವು ತಮ್ಮ ಹಾದಿಯಲ್ಲಿ ಮುನ್ನಡೆದಂತೆ, ಯೆಹೋವನೇ ಅವರ ಮುಂದೆ ನಡೆಯುತ್ತಿದ್ದಂತೆ ತೋರಿತು ಮತ್ತು ಆತನನ್ನು ತಡೆಯಲು ಯಾರಿಂದಲೂ ಸಾಧ್ಯವಿರಲಿಲ್ಲ. ಮೋಶೆ ಮರಣವನ್ನಪ್ಪುವ ಸ್ವಲ್ಪ ಸಮಯಕ್ಕೆ ಮುಂಚೆ ಅವನು ಹೇಳಿದ್ದು: “ಯೆಹೋವನು ಸೀನಾಯಿಬೆಟ್ಟದಿಂದ ಬಂದು ಸೇಯೀರ್‌ ಎಂಬ ಬೆಟ್ಟದ ಸೀಮೆಯೊಳಗಿಂದ ಪ್ರಕಾಶಿಸಿ ಪಾರಾನ್‌ ಪರ್ವತದಿಂದ ಹೊಳೆದು ಲಕ್ಷಾಂತರ ಪರಿಶುದ್ಧದೂತರ ಮಧ್ಯದಿಂದ ಅವರಿಗೋಸ್ಕರ ದಯಮಾಡಿದನು.” (ಧರ್ಮೋಪದೇಶಕಾಂಡ 33:2) ಯೆಹೋವನು ತನ್ನ ವೈರಿಗಳ ವಿರುದ್ಧ ಅರ್ಮಗೆದೋನ್‌ ಯುದ್ಧದಲ್ಲಿ ಮುನ್ನಡೆಯುವಾಗ, ಆತನ ತಡೆಯಲಸಾಧ್ಯವಾದ ಶಕ್ತಿಯು ಇದೇ ರೀತಿಯಲ್ಲಿ ತೋರ್ಪಡಿಸಲ್ಪಡುವುದು.

6. ದೇವರ ಮಹಿಮೆಯ ಜೊತೆಗೆ, ವಿವೇಚನೆಯುಳ್ಳ ಕ್ರೈಸ್ತರು ಏನನ್ನು ನೋಡುತ್ತಾರೆ?

6 ಹಬಕ್ಕೂಕನು ಹೇಳಿದ್ದು: “[ಯೆಹೋವನ] ಪ್ರಭಾವವು ಆಕಾಶಮಂಡಲವನ್ನು ಆವರಿಸುತ್ತಿದೆ, ಆತನ ಮಹಿಮೆಯು ಭೂಮಂಡಲವನ್ನು ತುಂಬುತ್ತಿದೆ; [ಆತನ] ತೇಜಸ್ಸು ಸೂರ್ಯನಂತಿದೆ.” ಎಷ್ಟು ಶೋಭಾಯಮಾನವಾದ ನೋಟ! ನಿಜ, ಮನುಷ್ಯರು ಯೆಹೋವ ದೇವರನ್ನು ಕಣ್ಣಾರೆ ನೋಡಿ ಬದುಕಲು ಸಾಧ್ಯವಿಲ್ಲ. (ವಿಮೋಚನಕಾಂಡ 33:20) ಆದರೂ, ದೇವರ ನಂಬಿಗಸ್ತ ಜನರು ಆತನ ಮಹೋನ್ನತೆಯ ಕುರಿತು ಮನನಮಾಡುವಾಗ, ಅವರ ಮನೋನೇತ್ರಗಳು ಪ್ರಜ್ವಲಿಸುತ್ತವೆ. (ಎಫೆಸ 1:18) ಹಾಗೂ ವಿವೇಚನೆಯುಳ್ಳ ಕ್ರೈಸ್ತರು ಯೆಹೋವನ ಮಹಿಮೆಗಿಂತ ಇನ್ನೂ ಹೆಚ್ಚಿನ ವಿಷಯಗಳನ್ನು ನೋಡುತ್ತಾರೆ. ಹಬಕ್ಕೂಕ 3:4 ಹೀಗೆ ಸಮಾಪ್ತಿಗೊಳಿಸುತ್ತದೆ: “ಅದರ ಪಕ್ಕಗಳಲ್ಲಿ ಕಿರಣಗಳು ಹೊರಡುತ್ತಿವೆ; ಅದೇ ಆತನ ಶಕ್ತಿನಿಧಿ.” ಹೌದು, ಯೆಹೋವನು ಬಲ ಮತ್ತು ಶಕ್ತಿಯಿಂದ ಕೂಡಿರುವ ತನ್ನ ಬಲಗೈಯನ್ನು ಉಪಯೋಗಿಸುತ್ತಾ, ಕ್ರಿಯೆಗೈಯಲು ಸಿದ್ಧನಾಗಿರುವುದನ್ನು ನಾವು ನೋಡುತ್ತೇವೆ.

7. ದೇವರ ವಿಜಯೋತ್ಸವದ ಮುನ್ನಡೆಯು ಆತನ ವಿರುದ್ಧ ದಂಗೆಯೇಳುವವರಿಗೆ ಯಾವ ಅರ್ಥದಲ್ಲಿರುವುದು?

7 ದೇವರ ವಿಜಯೋತ್ಸವದ ಮುನ್ನಡೆಯು ಆತನ ವಿರುದ್ಧ ದಂಗೆಯೇಳುವವರಿಗೆ ವಿಪತ್ತಿನ ಅರ್ಥದಲ್ಲಿದೆ. ಹಬಕ್ಕೂಕ 3:5 ಹೇಳುವುದು: “ಆತನ ಮುಂದೆ ಮುಂದೆ ವ್ಯಾಧಿಯು ನಡೆಯುತ್ತದೆ; ಆತನ ಹೆಜ್ಜೆಜಾಡುಗಳಲ್ಲಿ ಜ್ವರಜ್ವಾಲೆಯು ಏಳುತ್ತದೆ.” ಸಾ.ಶ.ಪೂ. 1473ರಲ್ಲಿ ಇಸ್ರಾಯೇಲ್ಯರು ವಾಗ್ದತ್ತ ದೇಶದ ಮೇರೆಯನ್ನು ಸಮೀಪಿಸಿದಾಗ, ಅವರಲ್ಲಿ ಅನೇಕರು ಅನೈತಿಕತೆ ಮತ್ತು ಮೂರ್ತಿಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ದಂಗೆಯೆದ್ದರು. ಇದರ ಫಲಿತಾಂಶವಾಗಿ, ದೇವರು ಬರಮಾಡಿದ ವ್ಯಾಧಿಯಿಂದ 20,000ಕ್ಕಿಂತಲೂ ಹೆಚ್ಚಿನ ಜನರು ಸತ್ತುಹೋದರು. (ಅರಣ್ಯಕಾಂಡ 25:1-9) ನಿಕಟ ಭವಿಷ್ಯತ್ತಿನಲ್ಲಿ, ಯೆಹೋವನು “ಸರ್ವಶಕ್ತನಾದ ದೇವರ ಮಹಾದಿನದಲ್ಲಾಗುವ ಯುದ್ಧಕ್ಕೆ” ಮುನ್ನಡೆಯುವಾಗ, ಆತನ ವಿರುದ್ಧ ದಂಗೆಯೇಳುವವರು ತದ್ರೀತಿಯಲ್ಲಿ ತಮ್ಮ ಪಾಪಕ್ಕಾಗಿ ಕಷ್ಟಾನುಭವಿಸುವರು. ಕೆಲವರು ಅಕ್ಷರಾರ್ಥವಾದ ವ್ಯಾಧಿಯಿಂದಲೂ ಸಾಯಬಹುದು.—ಪ್ರಕಟನೆ 16:14, 16.

8. ಹಬಕ್ಕೂಕ 3:6ಕ್ಕನುಸಾರ, ದೇವರ ವೈರಿಗಳಿಗೆ ಏನು ಕಾದಿದೆ?

8 ಸೇನಾಧೀಶ್ವರನಾದ ಯೆಹೋವನು ಕ್ರಿಯೆಗೈಯುತ್ತಿರುವುದರ ಕುರಿತಾದ ಪ್ರವಾದಿಯ ಸುಸ್ಪಷ್ಟ ವರ್ಣನೆಯು ಇಲ್ಲಿದೆ. ಹಬಕ್ಕೂಕ 3:6ರಲ್ಲಿ ನಾವು ಓದುವುದು: “ಆತನು [ಯೆಹೋವ ದೇವರು] ನಿಂತುಕೊಳ್ಳಲು ಭೂಮಿಯು ಕಂಪಿಸುತ್ತದೆ; ದೃಷ್ಟಿಸಲು ಜನಾಂಗಗಳು ಬೆದರುತ್ತವೆ; ಪುರಾತನಪರ್ವತಗಳು ಸೀಳಿಹೋಗುತ್ತವೆ; ಸನಾತನಗಿರಿಗಳು ಕುಸಿದುಬೀಳುತ್ತವೆ; ಆತನ ಆಗಮನವು ಅನಾದಿಯಿಂದ ಹೀಗೆಯೇ ಇರುವದು.” ಮೊದಲಾಗಿ, ರಣರಂಗವನ್ನು ಅವಲೋಕಿಸುತ್ತಿರುವಂತಹ ಒಬ್ಬ ಸೇನಾಧಿಪತಿಯಂತೆ ಯೆಹೋವನು ‘ನಿಂತುಕೊಳ್ಳುತ್ತಾನೆ.’ ಆತನ ವೈರಿಗಳು ಭಯದಿಂದ ನಡುಗುತ್ತಾರೆ. ತಮ್ಮ ವಿರೋಧಿಯು ಯಾರು ಎಂಬುದನ್ನು ನೋಡಿ ಅವರು ಆಘಾತಗೊಳ್ಳುತ್ತಾರೆ ಮತ್ತು ಭಯದಿಂದ ಕಂಪಿಸುತ್ತಾರೆ. “ಭೂಲೋಕದಲ್ಲಿರುವ ಎಲ್ಲಾ ಕುಲದವರು ಎದೆಬಡಕೊಳ್ಳುವ” ಸಮಯದ ಕುರಿತು ಯೇಸು ಮುಂತಿಳಿಸಿದನು. (ಮತ್ತಾಯ 24:30) ಯೆಹೋವನ ಎದುರಾಗಿ ಯಾರೂ ನಿಲ್ಲಸಾಧ್ಯವಿಲ್ಲ ಎಂಬುದನ್ನು ಅವರು ಗ್ರಹಿಸುವಾಗ ಸಮಯವು ಮೀರಿಹೋಗಿರುತ್ತದೆ. “ಸನಾತನಗಿರಿಗಳು” ಮತ್ತು ‘ಪುರಾತನಪರ್ವತಗಳಷ್ಟು’ ಶಾಶ್ವತವಾಗಿ ಕಂಡುಬರುವ ಮಾನವ ಸಂಸ್ಥೆಗಳು ಸಹ ಕುಸಿದುಬೀಳುವವು. ಅದು ದೇವರ ‘ಅನಾದಿಕಾಲದ ಆಗಮನದಂತೆ’ ಇರುವುದು, ಅಂದರೆ ಆತನು ಪುರಾತನ ಸಮಯಗಳಿಂದಲೂ ಕ್ರಿಯೆಗೈದಂತೆಯೇ ಇರುವುದು.

9, 10. ಹಬಕ್ಕೂಕ 3:7-11ರಲ್ಲಿ ನಮಗೆ ಯಾವುದರ ಕುರಿತು ಜ್ಞಾಪಕಹುಟ್ಟಿಸಲಾಗಿದೆ?

9 ಯೆಹೋವನಿಗೆ ತನ್ನ ವೈರಿಗಳ ವಿರುದ್ಧ “ರೌದ್ರ”ವುಂಟಾಗಿದೆ. ಆದರೆ ತನ್ನ ಮಹಾ ಯುದ್ಧದಲ್ಲಿ ಆತನು ಯಾವ ಆಯುಧಗಳನ್ನು ಉಪಯೋಗಿಸುವನು? ಪ್ರವಾದಿಯು ಅವುಗಳನ್ನು ವರ್ಣಿಸುವಾಗ ಅವನಿಗೆ ಕಿವಿಗೊಡಿರಿ: “ನಿನ್ನ ಬಿಲ್ಲು ಈಚೆಗೆ ತೆಗೆಯಲ್ಪಟ್ಟಿದೆ (ಆಹಾ, ನಿನ್ನ ವಾಗ್ಬಾಣಗಳು ನಿಶ್ಚಿತ!) ಭೂಮಿಯನ್ನು ನದಿಗಳಿಂದ ಭೇದಿಸಿಬಿಡುತ್ತೀ. ಬೆಟ್ಟಗಳು ನಿನ್ನನ್ನು ನೋಡಿ ತಳಮಳಗೊಳ್ಳುತ್ತವೆ; ಅತಿವೃಷ್ಟಿಯು ಹೊಯ್ದುಕೊಂಡು ಹೋಗುತ್ತದೆ; ಸಾಗರವು ಆರ್ಬಟಿಸಿ ಕೈಗಳನ್ನು ಮೇಲಕ್ಕೆತ್ತುತ್ತದೆ. ನಿನ್ನ ಹಾರುವ ಬಾಣಗಳ ಬೆಳಗಿಗೂ ನಿನ್ನ ಮಿಂಚುವ ಈಟಿಯ ಹೊಳಪಿಗೂ ಸೂರ್ಯಚಂದ್ರರು ತಮ್ಮ ಗೂಡಿನಲ್ಲಿ ಅಡಗಿಕೊಳ್ಳುತ್ತಾರೆ.”—ಹಬಕ್ಕೂಕ 3:7-11.

10 ಯೆಹೋಶುವನ ದಿನಗಳಲ್ಲಿ ಯೆಹೋವನು ತನ್ನ ಮಹಾನ್‌ ಶಕ್ತಿಯನ್ನು ಪ್ರದರ್ಶಿಸುತ್ತಾ, ಸೂರ್ಯಚಂದ್ರರನ್ನು ತಮ್ಮ ಸ್ಥಾನಗಳಲ್ಲೇ ನಿಲ್ಲಿಸಿದ್ದನು. (ಯೆಹೋಶುವ 10:12-14) ಯೆಹೋವನು ಅರ್ಮಗೆದೋನಿನಲ್ಲಿ ಇದೇ ಶಕ್ತಿಯನ್ನು ಉಪಯೋಗಿಸುವನೆಂದು ಹಬಕ್ಕೂಕನ ಪ್ರವಾದನೆಯು ನಮಗೆ ಜ್ಞಾಪಕಹುಟ್ಟಿಸುತ್ತದೆ. ಸಾ.ಶ.ಪೂ. 1513ರಲ್ಲಿ, ಯೆಹೋವನು ಫರೋಹನ ಸೇನೆಗಳನ್ನು ಧ್ವಂಸಮಾಡಲಿಕ್ಕಾಗಿ ಕೆಂಪು ಸಮುದ್ರವನ್ನು ಉಪಯೋಗಿಸಿದಾಗ, ಭೂಮಿಯ ಜಲರಾಶಿಯ ಮೇಲೆ ತನಗಿರುವ ದೊರೆತನವನ್ನು ತೋರ್ಪಡಿಸಿದನು. ನಲ್ವತ್ತು ವರ್ಷಗಳ ನಂತರ, ಯೊರ್ದನ್‌ ಹೊಳೆಯು ಉಕ್ಕಿ ಹರಿಯುತ್ತಿದ್ದಾಗ, ವಾಗ್ದತ್ತ ದೇಶದೊಳಕ್ಕೆ ಇಸ್ರಾಯೇಲ್ಯರು ವಿಜಯೋತ್ಸವದಿಂದ ಮುನ್ನಡೆಯಲು ಅದು ಒಂದು ತಡೆಯಾಗಿರಲಿಲ್ಲ. (ಯೆಹೋಶುವ 3:15-17) ಪ್ರವಾದಿನಿಯಾದ ದೆಬೋರಳ ಸಮಯದಲ್ಲಿ, ಧಾರಾಕಾರವಾದ ಮಳೆಯು ಇಸ್ರಾಯೇಲಿನ ವೈರಿಯಾದ ಸೀಸೆರನ ರಥಗಳನ್ನು ಕೊಚ್ಚಿಕೊಂಡುಹೋಯಿತು. (ನ್ಯಾಯಸ್ಥಾಪಕ 5:21) ಜಲಪ್ರಳಯ, ಧಾರಾಕಾರವಾದ ಮಳೆ, ಮತ್ತು ಜಲರಾಶಿಯ ಅದೇ ಶಕ್ತಿಗಳನ್ನು ಯೆಹೋವನು ಅರ್ಮಗೆದೋನಿನಲ್ಲಿ ಉಪಯೋಗಿಸುವನು. ಈಟಿಯಂತೆ ಅಥವಾ ಬಾಣಗಳಿಂದ ತುಂಬಿರುವ ಬತ್ತಳಿಕೆಯಂತೆ, ಗುಡುಗು ಸಿಡಿಲುಗಳೂ ಆತನ ವಶದಲ್ಲಿವೆ.

11. ಯೆಹೋವನು ತನ್ನ ಮಹಾ ಶಕ್ತಿಯನ್ನು ಸಂಪೂರ್ಣವಾಗಿ ಉಪಯೋಗಿಸುವಾಗ ಏನು ಸಂಭವಿಸುವುದು?

11 ಯೆಹೋವನು ತನ್ನ ಭಾರಿ ಶಕ್ತಿಯನ್ನು ಸಂಪೂರ್ಣವಾಗಿ ಉಪಯೋಗಿಸುವಾಗ ಅದು ನಿಜವಾಗಿಯೂ ಭಯಪ್ರೇರಕವಾಗಿರುವುದು. ರಾತ್ರಿಯು ಹಗಲಿನಂತಿರುವುದು ಮತ್ತು ಹಗಲಿನ ಪ್ರಕಾಶವು ಸೂರ್ಯನು ಅದನ್ನು ಬೆಳಗಿಸಸಾಧ್ಯವಿರುವುದಕ್ಕಿಂತಲೂ ಹೆಚ್ಚು ಪ್ರಕಾಶಮಾನವಾಗಿರುವುದು ಎಂದು ಹಬಕ್ಕೂಕನ ಮಾತುಗಳು ಸೂಚಿಸುತ್ತವೆ. ಅರ್ಮಗೆದೋನಿನ ಈ ಪ್ರೇರಿತ ಪ್ರವಾದನ ವರ್ಣನೆಯು ಅಕ್ಷರಾರ್ಥವಾಗಿರಲಿ ಸಾಂಕೇತಿಕವಾಗಿರಲಿ, ಒಂದು ವಿಷಯವಂತೂ ಖಚಿತ, ಅದೇನೆಂದರೆ ಯೆಹೋವನೇ ಜಯಶಾಲಿಯಾಗುವನು ಮತ್ತು ಯಾವ ವೈರಿಯೂ ಆತನ ಕೈಯಿಂದ ತಪ್ಪಿಸಿಕೊಳ್ಳಲಾರನು.

ದೇವಜನರಿಗೆ ರಕ್ಷಣೆಯು ಖಂಡಿತ!

12. ದೇವರು ತನ್ನ ವೈರಿಗಳಿಗೆ ಏನು ಮಾಡುವನು, ಆದರೆ ಯಾರು ಮಾತ್ರ ರಕ್ಷಿಸಲ್ಪಡುವರು?

12 ತನ್ನ ವೈರಿಗಳನ್ನು ನಾಶಗೊಳಿಸುವ ಯೆಹೋವನ ಕೃತ್ಯಗಳನ್ನು ಪ್ರವಾದಿಯು ವರ್ಣಿಸುತ್ತಾ ಹೋಗುತ್ತಾನೆ. ಹಬಕ್ಕೂಕ 3:12ರಲ್ಲಿ ನಾವು ಓದುವುದು: “ನೀನು ಸಿಟ್ಟಿನಿಂದ ಲೋಕವನ್ನು ತುಳಿದುಕೊಂಡು ಹೋಗುತ್ತೀ, ಕೋಪದಿಂದ ಜನಾಂಗಗಳನ್ನು ಒಕ್ಕುತ್ತೀ.” ಆದರೂ, ಯೆಹೋವನು ಗೊತ್ತುಗುರಿಯಿಲ್ಲದೆ ಎಲ್ಲರನ್ನೂ ನಾಶಮಾಡಿಬಿಡುವುದಿಲ್ಲ. ಕೆಲವು ಮಾನವರು ರಕ್ಷಿಸಲ್ಪಡುವರು. “ನಿನ್ನ ಪ್ರಜೆಯ ರಕ್ಷಣೆಗೆ, ನಿನ್ನ ಅಭಿಷಿಕ್ತನ ಉದ್ಧಾರಕ್ಕೆ ಹೊರಟಿದ್ದೀ” ಎಂದು ಹಬಕ್ಕೂಕ 3:13 ಹೇಳುತ್ತದೆ. ಹೌದು, ಯೆಹೋವನು ತನ್ನ ನಂಬಿಗಸ್ತ ಅಭಿಷಿಕ್ತ ಸೇವಕರನ್ನು ಕಾಪಾಡುವನು. ಸುಳ್ಳು ಧರ್ಮದ ಲೋಕ ಸಾಮ್ರಾಜ್ಯವಾದ ಮಹಾ ಬಾಬೆಲಿನ ವಿನಾಶವು ಆಗ ಪೂರ್ಣಗೊಳ್ಳುವುದು. ಆದರೂ, ಇಂದು ರಾಷ್ಟ್ರಗಳು ಸತ್ಯಾರಾಧನೆಯನ್ನು ತೊಡೆದುಹಾಕಲು ಪ್ರಯತ್ನಿಸುತ್ತಿವೆ. ಅತಿ ಬೇಗನೆ ಯೆಹೋವನ ಸೇವಕರು ಮಾಗೋಗ್‌ ದೇಶದ ಗೋಗನ ಸೇನೆಗಳಿಂದ ಆಕ್ರಮಣಕ್ಕೆ ಒಳಗಾಗುವರು. (ಯೆಹೆಜ್ಕೇಲ 38:1–39:13; ಪ್ರಕಟನೆ 17:1-5, 16-18) ಸೈತಾನನ ಈ ದಾಳಿಯು ಸಫಲವಾಗುವುದೋ? ಇಲ್ಲ! ಆಗ ಯೆಹೋವನು ಕೋಪದಿಂದ ತನ್ನ ವೈರಿಗಳನ್ನು ಕಣದಲ್ಲಿ ಧಾನ್ಯಗಳನ್ನು ತುಳಿದಂತೆ ತನ್ನ ಕಾಲುಗಳ ಕೆಳಗೆ ತುಳಿದುಹಾಕುವನು. ಆದರೆ ತನ್ನನ್ನು ಆತ್ಮ ಹಾಗೂ ಸತ್ಯದಿಂದ ಆರಾಧಿಸುವವರನ್ನು ಆತನು ರಕ್ಷಿಸುವನು.—ಯೋಹಾನ 4:24.

13. ಹಬಕ್ಕೂಕ 3:13 ಹೇಗೆ ನೆರವೇರಿಸಲ್ಪಡುವುದು?

13 ದುಷ್ಟರ ಸಂಪೂರ್ಣ ವಿನಾಶವು ಈ ಮಾತುಗಳಲ್ಲಿ ಮುಂತಿಳಿಸಲ್ಪಟ್ಟಿದೆ: “[ಯೆಹೋವನೇ] ತಲೆಯನ್ನು ಕುತ್ತಿಗೆಯ ಬುಡದ ವರೆಗೆ ಹೊಡೆದು ಹಾಕಿದ ಹಾಗೆ ತಳಾದಿಯು ಬೈಲಾಗುವಷ್ಟರ ಮಟ್ಟಿಗೆ ನೀನು ದುಷ್ಟನ ಮನೆಯನ್ನು ಹೊಡೆದಿದ್ದೀ.” (ಹಬಕ್ಕೂಕ 3:13) ಈ ‘ಮನೆಯು’ ಪಿಶಾಚನಾದ ಸೈತಾನನ ಪ್ರಭಾವದಿಂದ ಹುಟ್ಟಿಕೊಂಡಿರುವ ದುಷ್ಟ ವ್ಯವಸ್ಥೆಯಾಗಿದೆ. ಅದು ನುಚ್ಚುನೂರಾಗುವುದು. ಅದರ “ತಲೆ” ಅಥವಾ ದೇವವಿರೋಧಿ ನಾಯಕರು ಜಜ್ಜಿಹಾಕಲ್ಪಡುವರು. ಇಡೀ ಕಟ್ಟಡವು ಅದರ ತಳಹದಿಯ ವರೆಗೂ ಧ್ವಂಸಗೊಳಿಸಲ್ಪಡುವುದು. ಅದು ಇನ್ನುಮುಂದೆ ಅಸ್ತಿತ್ವದಲ್ಲಿರುವುದಿಲ್ಲ. ಅದು ಎಂತಹ ಅದ್ಭುತಕರ ಪರಿಹಾರವಾಗಿರುವುದು!

14-16. ಹಬಕ್ಕೂಕ 3:14, 15ಕ್ಕನುಸಾರ, ಯೆಹೋವನ ಜನರಿಗೆ ಮತ್ತು ಅವರ ವೈರಿಗಳಿಗೆ ಏನು ಸಂಭವಿಸುವುದು?

14 ಅರ್ಮಗೆದೋನಿನಲ್ಲಿ, ಯೆಹೋವನ “ಅಭಿಷಿಕ್ತ”ನನ್ನು ನಾಶಮಾಡಲು ಪ್ರಯತ್ನಿಸುತ್ತಿದ್ದವರೆಲ್ಲರೂ ಗಲಿಬಿಲಿಗೆ ಒಳಗಾಗುವರು. ಹಬಕ್ಕೂಕ 3:14, 15ಕ್ಕನುಸಾರ ಹೀಗೆ ಹೇಳುತ್ತಾ ಪ್ರವಾದಿಯು ದೇವರೊಂದಿಗೆ ಮಾತಾಡುತ್ತಾನೆ: “ದಿಕ್ಕಿಲ್ಲದವರನ್ನು ಮರೆಯಲ್ಲಿ ನುಂಗಲು ಹೆಚ್ಚಳಪಡುವವರಾಗಿ ನನ್ನನ್ನು ಚದರಿಸಬೇಕೆಂದು ನನ್ನ ಮೇಲೆ ಬಿರುಗಾಳಿಯಂತೆ ನುಗ್ಗಿದ ಅವನ ಭಟರ ತಲೆಯನ್ನು ಅವನ ದೊಣ್ಣೆಗಳಿಂದಲೇ ಒಡೆದಿದ್ದೀ. ನಿನ್ನ ಅಶ್ವಗಳನ್ನು ಏರಿದವನಾಗಿ ಸಮುದ್ರವನ್ನು ತುಳಿಯುತ್ತಾ ಮಹಾಜಲರಾಶಿಯನ್ನು ಹಾದುಹೋಗಿದ್ದೀ.”

15 ‘ನನ್ನನ್ನು ಚದರಿಸಬೇಕೆಂದು ನನ್ನ ಮೇಲೆ ಬಿರುಗಾಳಿಯಂತೆ ನುಗ್ಗಿದ ಅವನ ಭಟರು’ ಎಂದು ಹಬಕ್ಕೂಕನು ಹೇಳುವಾಗ, ಪ್ರವಾದಿಯು ಯೆಹೋವನ ಅಭಿಷಿಕ್ತ ಸೇವಕರ ಪರವಾಗಿ ಮಾತಾಡುತ್ತಾನೆ. ಹೊಂಚುಹಾಕಿ ಕಾದುಕೊಂಡಿರುವ ದಾರಿಗಳ್ಳರಂತೆ, ರಾಷ್ಟ್ರಗಳವರು ದೇವರ ಆರಾಧಕರ ಮೇಲೆ ಬಿದ್ದು, ಅವರನ್ನು ನಾಶಪಡಿಸಲು ಪ್ರಯತ್ನಿಸುವರು. ತಾವು ಖಂಡಿತವಾಗಿಯೂ ಸಫಲರಾಗುವೆವು ಎಂಬ ಆತ್ಮವಿಶ್ವಾಸದಿಂದ ಅವರು ‘ಹೆಚ್ಚಳಪಡುವರು.’ ನಂಬಿಗಸ್ತ ಕ್ರೈಸ್ತರು ‘ದಿಕ್ಕಿಲ್ಲದವರಂತೆ’ ಬಲಹೀನರಾಗಿ ಕಂಡುಬರುವರು. ಆದರೆ ದೇವವಿರೋಧಿಗಳು ಆಕ್ರಮಣವನ್ನು ಆರಂಭಿಸುವಾಗ, ಅವರ ಆಯುಧಗಳು ಅವರಿಗೇ ತಿರುಗುಬಾಣವಾಗುವಂತೆ ಯೆಹೋವನು ಮಾಡುವನು. ಅವರು ತಮ್ಮ ಅಸ್ತ್ರಗಳನ್ನು ಇಲ್ಲವೆ ‘ದೊಣ್ಣೆಗಳನ್ನು’ ತಮ್ಮ ಸ್ವಂತ ಭಟರ ವಿರುದ್ಧವೇ ಉಪಯೋಗಿಸುವರು.

16 ಇನ್ನೂ ಹೆಚ್ಚಿನ ಸಂಗತಿಗಳು ಸಂಭವಿಸಲಿಕ್ಕಿವೆ. ತನ್ನ ವೈರಿಗಳ ವಿನಾಶವನ್ನು ಪೂರ್ಣಗೊಳಿಸಲಿಕ್ಕಾಗಿ ಯೆಹೋವನು ಅಮಾನುಷ ಆತ್ಮ ಸೇನೆಗಳನ್ನು ಉಪಯೋಗಿಸುವನು. ಯೇಸು ಕ್ರಿಸ್ತನ ನೇತೃತ್ವದಲ್ಲಿ ತನ್ನ ಸ್ವರ್ಗೀಯ ಸೇನೆಗಳೆಂಬ “ಅಶ್ವಗಳ” ಜೊತೆಗೆ ಆತನು “ಸಮುದ್ರ” ಮತ್ತು ‘ಮಹಾಜಲರಾಶಿಯ’ ಮೂಲಕ, ಅಂದರೆ ವೈರಿಗಳ ನುಗ್ಗುತ್ತಿರುವ ಜನಸಮೂಹದೊಳಗಿಂದ ವಿಜಯಿಯಾಗಿ ಮುಂದೆಸಾಗುವನು. (ಪ್ರಕಟನೆ 19:11-21) ಆಗ ದುಷ್ಟರು ಭೂಮಿಯಿಂದ ತೆಗೆದುಹಾಕಲ್ಪಡುವರು. ದೈವಿಕ ಶಕ್ತಿ ಮತ್ತು ನ್ಯಾಯದ ಎಂತಹ ಒಂದು ಶಕ್ತಿಶಾಲಿ ಪ್ರದರ್ಶನ!

ಯೆಹೋವನ ದಿನವು ಬರುತ್ತಿದೆ!

17. (ಎ) ಹಬಕ್ಕೂಕನ ಮಾತುಗಳ ನೆರವೇರಿಕೆಯಲ್ಲಿ ನಾವೇಕೆ ದೃಢಭರವಸೆಯನ್ನು ಇಡಬಲ್ಲೆವು? (ಬಿ) ಯೆಹೋವನ ಮಹಾ ದಿನಕ್ಕಾಗಿ ಕಾಯುತ್ತಿರುವಾಗ, ನಾವು ಹೇಗೆ ಹಬಕ್ಕೂಕನಂತಿರಬಲ್ಲೆವು?

17 ಹಬಕ್ಕೂಕನ ಮಾತುಗಳು ಬೇಗನೆ ನೆರವೇರುವವು ಎಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. ಅವು ತಡವಾಗುವುದಿಲ್ಲ. ಈ ಮುನ್ನರಿವಿಗೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಹಬಕ್ಕೂಕನು ದೈವಿಕ ಪ್ರೇರಣೆಯ ಕೆಳಗೆ ಇದನ್ನು ಬರೆಯುತ್ತಿದ್ದನು ಎಂಬುದು ನಿಮಗೆ ನೆನಪಿರಲಿ. ಯೆಹೋವನು ಕ್ರಿಯೆಗೈಯುವನು, ಮತ್ತು ಅದು ಸಂಭವಿಸಿದಾಗ ಭೂಮಿಯ ಪರಿಸ್ಥಿತಿಯು ಅಲ್ಲೋಲಕಲ್ಲೋಲವಾಗುವುದು. ಪ್ರವಾದಿಯು ಹೀಗೆ ಬರೆದಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ: “ಅದು ನನಗೆ ಕೇಳಿಸಲು ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು. ವಿಪತ್ಕಾಲವು ಜನರನ್ನು ಎದುರಾಯಿಸಿ ಅವರ ಮೇಲೆ ಬೀಳುವಾಗ ನಾನು ಅದನ್ನು ತಾಳ್ಮೆಯಿಂದ ಕಾದಿರಬೇಕೆಂದು ನನಗೆ ತಿಳಿಯಲು ಕ್ಷಯವು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು.” (ಹಬಕ್ಕೂಕ 3:16) ಹಬಕ್ಕೂಕನು ತುಂಬ ಕಳವಳಗೊಂಡನು—ಇದು ಗ್ರಹಿಸಲು ಸಾಧ್ಯವಿರುವ ಸಂಗತಿಯೇ. ಆದರೆ ಅವನ ನಂಬಿಕೆಯು ಕದಲಿತೋ? ಖಂಡಿತವಾಗಿಯೂ ಇಲ್ಲ! ಅವನು ಯೆಹೋವನ ಮಹಾ ದಿನಕ್ಕಾಗಿ ತಾಳ್ಮೆಯಿಂದ ಕಾದುಕೊಂಡಿರಲು ಸಿದ್ಧನಾಗಿದ್ದನು. (2 ಪೇತ್ರ 3:11, 12) ನಮ್ಮ ಮನೋಭಾವವೂ ಅದೇ ಆಗಿರುವುದಿಲ್ಲವೊ? ಖಂಡಿತವಾಗಿಯೂ ಹೌದು! ಹಬಕ್ಕೂಕನ ಪ್ರವಾದನೆಯು ನೆರವೇರುವುದೆಂಬ ಪೂರ್ಣ ನಂಬಿಕೆ ನಮಗಿದೆ. ಆದರೂ, ಅಲ್ಲಿಯ ವರೆಗೆ ನಾವು ತಾಳ್ಮೆಯಿಂದ ಕಾದಿರುವೆವು.

18. ಹಬಕ್ಕೂಕನು ಕಷ್ಟತೊಂದರೆಗಳನ್ನು ನಿರೀಕ್ಷಿಸಿದರೂ ಅವನ ಮನೋಭಾವವೇನಾಗಿತ್ತು?

18 ಜಯಗಳಿಸುವವರಿಗೂ ಯುದ್ಧವು ಯಾವಾಗಲೂ ಕಷ್ಟತೊಂದರೆಗಳನ್ನು ತರುತ್ತದೆ. ಆಹಾರದ ಅಭಾವವು ಉಂಟಾಗಬಹುದು. ಆಸ್ತಿಯ ನಷ್ಟವಾಗಬಹುದು. ಜೀವನಮಟ್ಟಗಳು ಇಳಿಮುಖಗೊಳ್ಳಬಹುದು. ಅದು ನಮಗೆ ಸಂಭವಿಸುವಲ್ಲಿ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯಿಸುವೆವು? ಹಬಕ್ಕೂಕನ ಮನೋಭಾವವು ಆದರ್ಶಪ್ರಾಯವಾಗಿತ್ತು. ಏಕೆಂದರೆ ಅವನು ಹೇಳಿದ್ದು: “ಆಹಾ, ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೇಹೋದರೂ ಹಿಂಡು ಹಟ್ಟಿಯೊಳಗಿಂದ ನಾಶವಾದರೂ ಮಂದೆಯು ಕೊಟ್ಟಿಗೆಗಳೊಳಗೆ ಇಲ್ಲದಿದ್ದರೂ ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.” (ಹಬಕ್ಕೂಕ 3:17, 18) ವ್ಯಾವಹಾರಿಕ ಜ್ಞಾನವುಳ್ಳವನಾಗಿದ್ದ ಹಬಕ್ಕೂಕನು ಕಷ್ಟತೊಂದರೆಗಳನ್ನು ಮತ್ತು ಕ್ಷಾಮವನ್ನು ಕೂಡ ನಿರೀಕ್ಷಿಸಿದನು. ಆದರೂ, ತನ್ನ ರಕ್ಷಣೆಯ ಮೂಲನಾಗಿದ್ದ ಯೆಹೋವನಲ್ಲಿ ತನಗಿದ್ದ ಆನಂದವನ್ನು ಮಾತ್ರ ಅವನೆಂದಿಗೂ ಕಳೆದುಕೊಳ್ಳಲಿಲ್ಲ.

19. ಅನೇಕ ಕ್ರೈಸ್ತರಿಗೆ ಯಾವ ಕಷ್ಟತೊಂದರೆಗಳು ಇವೆ, ಆದರೂ ನಮ್ಮ ಜೀವಿತಗಳಲ್ಲಿ ನಾವು ಯೆಹೋವನಿಗೆ ಪ್ರಥಮ ಸ್ಥಾನವನ್ನು ಕೊಡುವಲ್ಲಿ ನಾವು ಯಾವುದರ ಬಗ್ಗೆ ಖಾತ್ರಿಯಿಂದಿರಬಲ್ಲೆವು?

19 ದುಷ್ಟರ ವಿರುದ್ಧ ಯೆಹೋವನ ಯುದ್ಧವು ಆರಂಭವಾಗುವ ಮುಂಚೆ, ಅನೇಕರು ಇಂದು ಅತ್ಯಧಿಕ ಸಂಕಟವನ್ನು ಅನುಭವಿಸುತ್ತಾರೆ. ಯುದ್ಧಗಳು, ಕ್ಷಾಮಗಳು, ಭೂಕಂಪಗಳು ಮತ್ತು ರೋಗಗಳು, ರಾಜ್ಯಾಧಿಕಾರದಿಂದ ಕೂಡಿದ ‘ತನ್ನ ಸಾನ್ನಿಧ್ಯದ ಸೂಚನೆಯ’ ಭಾಗವಾಗಿರುವವೆಂದು ಯೇಸು ಮುಂತಿಳಿಸಿದನು. (ಮತ್ತಾಯ 24:3-14; ಲೂಕ 21:10, 11) ನಮ್ಮ ಸಹೋದರರಲ್ಲಿ ಅನೇಕರು, ಯೇಸುವಿನ ಮಾತುಗಳ ನೆರವೇರಿಕೆಯಿಂದ ಬಾಧಿಸಲ್ಪಟ್ಟಿರುವ ದೇಶಗಳಲ್ಲಿ ಜೀವಿಸುತ್ತಿದ್ದಾರೆ ಮತ್ತು ಇದರ ಫಲಿತಾಂಶವಾಗಿ ತುಂಬ ಕಷ್ಟತೊಂದರೆಗಳನ್ನು ಅನುಭವಿಸುತ್ತಾರೆ. ಭವಿಷ್ಯತ್ತಿನಲ್ಲಿ ಇತರ ಕ್ರೈಸ್ತರು ಕೂಡ ತದ್ರೀತಿಯಲ್ಲಿ ಬಾಧಿಸಲ್ಪಡಬಹುದು. ಆದರೆ ನಮ್ಮಲ್ಲಿ ಇನ್ನೂ ಹೆಚ್ಚಿನವರಿಗೆ, ಅಂತ್ಯವು ಬರುವ ಮೊದಲು ‘ಅಂಜೂರವು ಚಿಗುರದೆ’ ಹೋಗುವ ಸಾಧ್ಯತೆಗಳಿರುವುದು ಖಂಡಿತ. ಹಾಗಿದ್ದರೂ, ಈ ಸಂಗತಿಗಳು ಏಕೆ ಸಂಭವಿಸುತ್ತಿವೆ ಎಂಬುದು ನಮಗೆ ಗೊತ್ತು ಮತ್ತು ಇದು ನಮಗೆ ಬಲವನ್ನು ಕೊಡುತ್ತದೆ. ಅಷ್ಟುಮಾತ್ರವಲ್ಲ ನಮಗೆ ಬೆಂಬಲವಿದೆ. ಯೇಸು ವಾಗ್ದಾನಿಸಿದ್ದು: “ಹೀಗಿರುವದರಿಂದ, ನೀವು ಮೊದಲಾಗಿ ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾಯ 6:33) ಇದು ಸುಖಭೋಗದ ಜೀವನದ ಖಾತ್ರಿಯನ್ನು ಕೊಡುವುದಿಲ್ಲ, ಬದಲಿಗೆ ನಮ್ಮ ಜೀವಿತಗಳಲ್ಲಿ ನಾವು ಯೆಹೋವನಿಗೆ ಪ್ರಥಮ ಸ್ಥಾನವನ್ನು ಕೊಡುವುದಾದರೆ ಆತನು ನಮ್ಮನ್ನು ಪರಾಮರಿಸುವನು ಎಂಬ ಆಶ್ವಾಸನೆಯನ್ನು ನಮಗೆ ನೀಡುತ್ತದೆ.—ಕೀರ್ತನೆ 37:25.

20. ತಾತ್ಕಾಲಿಕ ಕಷ್ಟತೊಂದರೆಗಳು ಇದ್ದರೂ ನಾವು ಯಾವ ನಿರ್ಧಾರವನ್ನು ಮಾಡತಕ್ಕದ್ದು?

20 ಆದಕಾರಣ, ನಾವು ತಾತ್ಕಾಲಿಕವಾಗಿ ಯಾವುದೇ ಕಷ್ಟತೊಂದರೆಗಳನ್ನು ಸಹಿಸಬೇಕಾಗಿರಲಿ, ಯೆಹೋವನ ರಕ್ಷಣಾ ಶಕ್ತಿಯಲ್ಲಿರುವ ನಮ್ಮ ನಂಬಿಕೆಯನ್ನು ನಾವು ಕಳೆದುಕೊಳ್ಳೆವು. ಆಫ್ರಿಕ, ಪೂರ್ವ ಯೂರೋಪ್‌, ಮತ್ತು ಇನ್ನಿತರ ಸ್ಥಳಗಳಲ್ಲಿರುವ ನಮ್ಮ ಸಹೋದರ ಸಹೋದರಿಯರಲ್ಲಿ ಅನೇಕರು ವಿಪರೀತ ಕಷ್ಟತೊಂದರೆಗಳನ್ನು ಎದುರಿಸಬೇಕಾಗಿರುವುದಾದರೂ, ಅವರು ‘ಯೆಹೋವನಲ್ಲಿ ಉಲ್ಲಾಸಿಸುತ್ತಾ’ ಇರುತ್ತಾರೆ. ಅವರಂತೆ ನಾವು ಕೂಡ ದೇವರಲ್ಲಿ ಉಲ್ಲಾಸಿಸುತ್ತಾ ಇರೋಣ. ಪರಮಾಧಿಕಾರಿ ಪ್ರಭುವಾದ ಯೆಹೋವನು ನಮ್ಮ ‘ಬಲದ’ ಮೂಲನಾಗಿದ್ದಾನೆ ಎಂಬುದು ಜ್ಞಾಪಕವಿರಲಿ. (ಹಬಕ್ಕೂಕ 3:19) ಆತನು ನಮ್ಮನ್ನು ಎಂದೂ ಅಸಫಲಗೊಳಿಸುವುದಿಲ್ಲ. ಅರ್ಮಗೆದೋನ್‌ ಖಂಡಿತವಾಗಿಯೂ ಬರುವುದು, ಮತ್ತು ಅದನ್ನು ಹಿಂಬಾಲಿಸಿ ಹೊಸ ಲೋಕವು ಬರುವುದೆಂಬುದರಲ್ಲಿ ಯಾವ ಸಂಶಯವೂ ಇಲ್ಲ. (2 ಪೇತ್ರ 3:13) ಆಗ “ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಮಹಿಮೆಯ ಜ್ಞಾನವು ತುಂಬಿಕೊಂಡಿರುವದು.” (ಹಬಕ್ಕೂಕ 2:14) ಆ ಅದ್ಭುತಕರ ಸಮಯವು ಬರುವ ತನಕ ನಾವು ಹಬಕ್ಕೂಕನ ಒಳ್ಳೆಯ ಮಾದರಿಯನ್ನು ಅನುಸರಿಸೋಣ. ನಾವು ಯಾವಾಗಲೂ ‘ನಮ್ಮ ರಕ್ಷಣೆಯ ದೇವರಲ್ಲಿ ಆನಂದಿಸುವುದನ್ನು’ ಸದಾ ಮುಂದುವರಿಸುತ್ತಿರೋಣ.

ನೀವು ಜ್ಞಾಪಿಸಿಕೊಳ್ಳುವಿರೋ?

• ಹಬಕ್ಕೂಕನ ಪ್ರಾರ್ಥನೆಯು ನಮ್ಮ ಮೇಲೆ ಹೇಗೆ ಪ್ರಭಾವವನ್ನು ಬೀರಬಹುದು?

• ಯೆಹೋವನು ಏಕೆ ಮುನ್ನಡೆಯುತ್ತಾನೆ?

• ರಕ್ಷಣೆಯ ಕುರಿತು ಹಬಕ್ಕೂಕನ ಪ್ರವಾದನೆಯು ಏನು ಹೇಳುತ್ತದೆ?

• ಯಾವ ಮನೋಭಾವದೊಂದಿಗೆ ನಾವು ಯೆಹೋವನ ಮಹಾ ದಿನವನ್ನು ಎದುರುನೋಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 23ರಲ್ಲಿರುವ ಚಿತ್ರ]

ಅರ್ಮಗೆದೋನಿನಲ್ಲಿ ದೇವರು ದುಷ್ಟರ ವಿರುದ್ಧ ಯಾವ ಶಕ್ತಿಗಳನ್ನು ಉಪಯೋಗಿಸುವನೆಂಬುದು ನಿಮಗೆ ಗೊತ್ತೋ?