ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೆದರ್ಲೆಂಡ್ಸ್‌ನಲ್ಲಿರುವ ಎಲ್ಲಾ ರೀತಿಯ ಜನರಿಗೆ ಸಹಾಯಮಾಡುವುದು

ನೆದರ್ಲೆಂಡ್ಸ್‌ನಲ್ಲಿರುವ ಎಲ್ಲಾ ರೀತಿಯ ಜನರಿಗೆ ಸಹಾಯಮಾಡುವುದು

ರಾಜ್ಯ ಘೋಷಕರು ವರದಿಮಾಡುತ್ತಾರೆ

ನೆದರ್ಲೆಂಡ್ಸ್‌ನಲ್ಲಿರುವ ಎಲ್ಲಾ ರೀತಿಯ ಜನರಿಗೆ ಸಹಾಯಮಾಡುವುದು

ಅಬ್ರಹಾಮನು ಅಸಾಧಾರಣವಾದ ನಂಬಿಕೆಯುಳ್ಳ ಒಬ್ಬ ವ್ಯಕ್ತಿಯಾಗಿದ್ದನು. ಅವನ ಕುರಿತು ಅಪೊಸ್ತಲ ಪೌಲನು ಹೇಳುವುದು, “ಕರೆಯಲ್ಪಟ್ಟ ಕೂಡಲೆ” ದೇವರ ಮಾತಿಗೆ ವಿಧೇಯನಾಗಿ ಅಬ್ರಹಾಮನು “ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು.” ತನ್ನ ಇಡೀ ಪರಿವಾರವನ್ನು ಬೇರೆ ಕಡೆಗೆ ಸ್ಥಳಾಂತರಿಸಿದ ನಂತರ, ಅವನು ತನ್ನ ಜೀವನದ ಮುಂದಿನ ನೂರು ವರ್ಷಗಳ ವರೆಗೆ ‘ವಾಗ್ದತ್ತ ದೇಶದಲ್ಲಿ . . . ಪ್ರವಾಸಿಯಂತೆ ಬದುಕಿದನು.’—ಇಬ್ರಿಯ 11:8-9.

ಅದೇ ರೀತಿಯಲ್ಲಿ, ಇಂದು ಸಹ ಯೆಹೋವನ ಸಾಕ್ಷಿಗಳಲ್ಲಿ ಅನೇಕರು, ಅಗತ್ಯವು ಎಲ್ಲಿ ಹೆಚ್ಚಾಗಿದೆಯೋ ಅಲ್ಲಿ ಸೇವೆಮಾಡುವ ಸಲುವಾಗಿ ಮತ್ತೊಂದು ದೇಶಕ್ಕೆ ಹೋಗುವ ಪಂಥಾಹ್ವಾನವನ್ನು ಸ್ವೀಕರಿಸಿದ್ದಾರೆ. ಇನ್ನೂ ಕೆಲವರು, ತಮ್ಮ ದೇಶಕ್ಕೆ ವಲಸೆ ಬಂದಿರುವ ಹೊರದೇಶದವರಿಗೆ ಸಾಕ್ಷಿನೀಡಸಾಧ್ಯವಾಗುವಂತೆ ಇತರ ಭಾಷೆಯನ್ನು ಕಲಿತಿದ್ದಾರೆ. ಮುಂದಿನ ಉದಾಹರಣೆಗಳು ತೋರಿಸುವಂತೆ, ಅವರ ಈ ಉತ್ತಮ ಹುಮ್ಮಸ್ಸು, ನೆದರ್ಲೆಂಡ್ಸ್‌ನಲ್ಲಿ “ಚಟುವಟಿಕೆಗೆ ನಡೆಸುವ ಒಂದು ಮಹಾ ದ್ವಾರ”ವನ್ನು ತೆರೆದಿದೆ. ಆ ದೇಶದಲ್ಲಿರುವ 1.5 ಕೋಟಿ ಜನರಲ್ಲಿ ಸುಮಾರು ಹತ್ತು ಲಕ್ಷ ಜನರು ಬೇರೆ ದೇಶದವರಾಗಿದ್ದಾರೆ.—1 ಕೊರಿಂಥ 16:9, NW.

◻ ಬಾರಾಮ್‌ ಎಂಬುವನು ಮಧ್ಯಪೂರ್ವ ದೇಶದಿಂದ ಬಂದವನಾಗಿದ್ದು, ಕುಂಗ್‌ ಫೂ ವಿದ್ಯೆಯನ್ನು ಕಲಿಸುವ ಒಬ್ಬ ಮಾಜಿ ಶಿಕ್ಷಕನಾಗಿದ್ದನು. ಅವನು ಬೈಬಲಿನ ಒಂದು ಪ್ರತಿಯನ್ನು ಮತ್ತು ಅದರೊಂದಿಗೆ ಕೆಲವೊಂದು ವಾಚ್‌ ಟವರ್‌ ಪ್ರಕಾಶನಗಳನ್ನು ಪಡೆದುಕೊಂಡಿದ್ದನು. ಒಂದು ತಿಂಗಳೊಳಗೆ ತನಗೆ ಸತ್ಯವು ದೊರಕಿರುವುದು ಬಾರಾಮನಿಗೆ ಸ್ಪಷ್ಟವಾಗಿ ತಿಳಿಯಿತು. ಅವನೊಂದಿಗೆ ಮತ್ತು ಅವನ ಹೆಂಡತಿಯೊಂದಿಗೆ ಒಂದು ಬೈಬಲ್‌ ಅಭ್ಯಾಸವನ್ನು ಪ್ರಾರಂಭಿಸಲಾಯಿತು. ಆದರೆ, ಅವರಿಗೆ ಒಂದು ಸಮಸ್ಯೆಯಿತ್ತು. ಅದೇನೆಂದರೆ, ಅವರ ಬೈಬಲ್‌ ಶಿಕ್ಷಕನಿಗೆ ಅವರ ಭಾಷೆಯು ಬರುತ್ತಿರಲಿಲ್ಲ. ಅವರು ಹಾವಭಾವಗಳ ಮೂಲಕ ಮಾತಾಡುತ್ತಿದ್ದರು. ಅವರೇ ಜ್ಞಾಪಿಸಿಕೊಳ್ಳುತ್ತಾ ಹೇಳುವಂತೆ, ಅವರು “ಕೈಕಾಲುಗಳನ್ನು” ಉಪಯೋಗಿಸಿ ಮಾತನಾಡುತ್ತಿದ್ದರಂತೆ. ಕಾಲಾನಂತರ, ಬಾರಾಮ್‌ ಮತ್ತು ಅವನ ಹೆಂಡತಿಯು ತಮ್ಮ ಭಾಷೆಯಲ್ಲಿ ಕೂಟಗಳು ನಡೆಯುತ್ತಿದ್ದ ಒಂದು ಸಭೆಯನ್ನು ಕಂಡುಹಿಡಿದರು. ಇದಾದ ನಂತರ, ಅವರಿಬ್ಬರು ತ್ವರಿತಗತಿಯಲ್ಲಿ ಪ್ರಗತಿಯನ್ನು ಮಾಡಿದರು. ಬಾರಾಮ್‌ ಈಗ ಒಬ್ಬ ದೀಕ್ಷಾಸ್ನಾನವಾಗಿರುವ ಸಾಕ್ಷಿಯಾಗಿದ್ದಾನೆ.

◻ ಒಬ್ಬ ಡಚ್‌ ಪಯನೀಯರ್‌ ದಂಪತಿ, ಸೂಪರ್‌ಮಾರ್ಕೆಟ್‌ನ ಮುಂದೆ ನಿಂತಿದ್ದ ಇಂಡೋನೇಶಿಯದ ಒಬ್ಬ ವ್ಯಕ್ತಿಯನ್ನು ಸಮೀಪಿಸಿದರು. ಈ ದಂಪತಿಯರು ಆ ವ್ಯಕ್ತಿಯೊಂದಿಗೆ ಅವನ ಸ್ವಂತ ಭಾಷೆಯಲ್ಲಿ ಮಾತಾಡಿದಾಗ ಅವನಿಗೆ ಆನಂದದ ಅಚ್ಚರಿಯನ್ನುಂಟುಮಾಡಿತು. ಅವನನ್ನು ಮನೆಯಲ್ಲಿ ಸಂಧಿಸಲು ಏರ್ಪಾಡುಗಳನ್ನು ಮಾಡಲಾಯಿತು. ಅವನು ರಷ್ಯಾದಲ್ಲಿ 20 ವರ್ಷಕ್ಕಿಂತಲೂ ಹೆಚ್ಚು ಸಮಯದ ವರೆಗೆ ಜೀವಿಸಿದ್ದನು ಮತ್ತು ಆ ಸಮಯದಲ್ಲಿ ಅವನೊಬ್ಬ ಸ್ತ್ರೀರೋಗತಜ್ಞನಾದನೆಂದು ಅನಂತರ ಗೊತ್ತಾಯಿತು. ತಾನೊಬ್ಬ ನಾಸ್ತಿಕನೆಂದು ಅವನು ಹೇಳಿಕೊಳ್ಳುತ್ತಿದ್ದನು. ಆದರೆ, ಪ್ರತಿ ಸಾರಿ ಅವನು ಹೆರಿಗೆಮಾಡಿಸುತ್ತಿದ್ದಾಗ “ಮಾನವ ದೇಹವು ಎಷ್ಟು ಪರಿಪೂರ್ಣವಾಗಿದೆ! ಇದು ಎಂಥ ಒಂದು ಅದ್ಭುತ!” ಎಂದು ವಿಸ್ಮಯಗೊಳ್ಳದೆ ಇರಲು ಅವನಿಗೆ ಸಾಧ್ಯವಾಗಲಿಲ್ಲ. ಅವನು ಬೈಬಲನ್ನು ಅಭ್ಯಾಸಮಾಡಲು ಒಪ್ಪಿಕೊಂಡನು ಮತ್ತು ಸ್ವಲ್ಪ ಸಮಯದೊಳಗಾಗಿ ಮಾನವರ ಕುರಿತು ಕಾಳಜಿವಹಿಸುವ ಒಬ್ಬ ಸೃಷ್ಟಿಕರ್ತನಿದ್ದಾನೆ ಎಂಬುದನ್ನು ನಂಬಲಾರಂಭಿಸಿದನು. (1 ಪೇತ್ರ 5:6, 7) ಈಗ, ಅವನು ದೀಕ್ಷಾಸ್ನಾನವಾಗಿರುವ ಸಹೋದರನಾಗಿದ್ದಾನೆ ಮತ್ತು ಆ್ಯಮ್‌ಸ್ಟರ್‌ಡ್ಯಾಮ್‌ನಲ್ಲಿರುವ ಇಂಡೋನೇಶಿಯನ್‌ ಸಭೆಯಲ್ಲಿ ಸೇವೆಸಲ್ಲಿಸುತ್ತಿದ್ದಾನೆ.

◻ ಜಗತ್ತಿನ ಅತ್ಯಂತ ದೊಡ್ಡ ರೇವುಪಟ್ಟಣಗಳಲ್ಲಿ ಒಂದಾಗಿರುವ ರಾಟರ್‌ಡ್ಯಾಮ್‌ನಲ್ಲಿ, ಪಯನೀಯರರ ಒಂದು ಗುಂಪು, ಪ್ರತಿದಿನವು ಬಂದರಿಗೆ ಬರುವ ಹಲವಾರು ಭಾಷೆಗಳನ್ನಾಡುವ ಜನರಿಗೆ ಸಾಕ್ಷಿನೀಡುವುದರಲ್ಲಿ ನಿಪುಣರಾಗಿದ್ದಾರೆ. ಈ ಉತ್ಸಾಹಭರಿತ ಸೌವಾರ್ತಿಕರ ಗುಂಪಿನ ಚಟುವಟಿಕೆಯ ಫಲಿತಾಂಶವಾಗಿ, ಹಡಗಿನ ಕ್ಯಾಪ್ಟನ್‌, ಮರೀನ್‌ ಆಫೀಸರ್‌ ಮತ್ತು ಮಾಜಿ ಅಂಗರಕ್ಷಕನನ್ನು ಸೇರಿಸಿ ಹಲವಾರು ಸಮುದ್ರಯಾನಿಗಳು ಸತ್ಯವನ್ನು ಸ್ವೀಕರಿಸಿದ್ದಾರೆ. ಈಗ ಅವರೂ ದೇವರ ರಾಜ್ಯದ ಸುವಾರ್ತೆಯನ್ನು ಲೋಕದಾದ್ಯಂತ ಹಬ್ಬಿಸುವುದರಲ್ಲಿ ಸಹಾಯಮಾಡುತ್ತಿದ್ದಾರೆ.—ಮತ್ತಾಯ 24:14.

ಲೋಕದ ಇನ್ನಿತರ ಕಡೆಗಳಲ್ಲಿರುವಂತೆಯೇ, ನೆದರ್ಲೆಂಡ್ಸ್‌ನಲ್ಲಿರುವ ಯೆಹೋವನ ಸಾಕ್ಷಿಗಳು, ಸಕಲ ಜನಾಂಗ, ಕುಲ, ಪ್ರಜೆಗಳವರಿಗೂ, ಸಕಲ ಭಾಷೆಗಳನ್ನಾಡುವವರಿಗೂ ನಿತ್ಯವಾದ ಶುಭವರ್ತಮಾನವನ್ನು ಸಾರಿಹೇಳುವುದರಲ್ಲಿ ತಮ್ಮ ಪಾತ್ರವನ್ನು ವಹಿಸಲು ದೃಢಸಂಕಲ್ಪವುಳ್ಳವರಾಗಿದ್ದಾರೆ.—ಪ್ರಕಟನೆ 14:6.