ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯಶಸ್ಸಿಗೆ ಕೀಲಿಕೈ ಯಾವುದು?

ಯಶಸ್ಸಿಗೆ ಕೀಲಿಕೈ ಯಾವುದು?

ಯಶಸ್ಸಿಗೆ ಕೀಲಿಕೈ ಯಾವುದು?

ಇಬ್ಬರು ಸಾಹಸಿ ಯುವಕರು, ವಿಚಿತ್ರವಾಗಿ ಕಾಣುತ್ತಿದ್ದ ಒಂದು ಯಂತ್ರವನ್ನು ಬಹುಮುಖ್ಯ ಪರೀಕ್ಷೆಗಾಗಿ ಕ್ರಮಬದ್ಧವಾಗಿ ಜೋಡಿಸುತ್ತಿದ್ದರು. ಇದ್ದಕ್ಕಿದ್ದಂತೆ ಬಿರುಸಾಗಿ ಬೀಸಿಬಂದ ಗಾಳಿಯು, ಆ ಸೂಕ್ಷ್ಮರಚನೆಯ ಯಂತ್ರವನ್ನು ಪಕ್ಕನೆ ಮೇಲಕ್ಕೆತ್ತಿತು. ಅದನ್ನು ವೇಗವಾಗಿ ತಿರುಗಿಸುತ್ತಾ, ಕರ್ಕಶ ಶಬ್ದದೊಂದಿಗೆ ‘ಧಡ್‌’ ಎಂದು ನೆಲಕ್ಕಪ್ಪಳಿಸುವಂತೆ ಮಾಡಿತು. ನಿರಾಶೆಗೊಂಡ ಆ ಇಬ್ಬರು ಯುವಕರು ಮೌನವಾಗಿ ನಿಂತುಬಿಟ್ಟರು. ಏಕೆಂದರೆ, ಬಹಳ ಎಚ್ಚರವಹಿಸಿ ಮಾಡಿದ ಅವರ ಕಠಿಣ ಪರಿಶ್ರಮದ ಕೆಲಸವು, ಈಗ ಮರ ಮತ್ತು ಲೋಹದ ಮುದ್ದೆಯಾಗಿ ಬಿದ್ದಿತ್ತು.

ಈ ಘಟನೆಯು 1900ರ ಅಕ್ಟೋಬರ್‌ನಲ್ಲಿ ನಡೆಯಿತು. ಆ ಇಬ್ಬರು ಯುವಕರು ಆರ್ವಿಲ್‌ ಮತ್ತು ವಿಲ್ಬರ್‌ ರೈಟ್‌ ಆಗಿದ್ದರು. ವಾಯುವಿಗಿಂತ ಭಾರವಿರುವ ಯಂತ್ರವನ್ನು ತಯಾರಿಸಲು ಅವರು ಮಾಡಿದ ಪ್ರಯತ್ನವು ವಿಫಲವಾದದ್ದು ಇದೇ ಮೊದಲ ಬಾರಿಯಾಗಿರಲಿಲ್ಲ. ಏಕೆಂದರೆ, ಈ ಪ್ರಯೋಗವನ್ನು ಈಗಾಗಲೇ ಅವರು ಕೆಲವು ವರ್ಷಗಳಿಂದ ಮಾಡುತ್ತಿದ್ದು, ಅದಕ್ಕಾಗಿ ಸಾಕಷ್ಟು ಮೊತ್ತದ ಹಣವನ್ನು ಖರ್ಚುಮಾಡಿದ್ದರು.

ಆದಾಗ್ಯೂ, ಅವರ ಪಟ್ಟುಹಿಡಿಯುವಿಕೆಯು ಕೊನೆಗೂ ಪ್ರತಿಫಲವನ್ನು ನೀಡಿತು. 1903ರ ಡಿಸೆಂಬರ್‌ 17ರಂದು, ಅಮೆರಿಕದ ಉತ್ತರ ಕರಲೈನದ ಕಿಟಿಹಾಕ್‌ ಎಂಬ ಸ್ಥಳದಲ್ಲಿ ರೈಟ್‌ ಸಹೋದರರು, ಮೋಟಾರಿನ ಸಹಾಯದಿಂದ ಚಲಿಸುವ ಪ್ರಯೋಗಮಾದರಿಯ ವಿಮಾನವನ್ನು 12 ಸೆಕೆಂಡುಗಳ ವರೆಗೆ ಹಾರಿಸಲು ಶಕ್ತರಾದರು. ಅದು, ಇಂದಿನ ವಿಮಾನಗಳ ಹಾರಾಟ ಸಾಮರ್ಥ್ಯಕ್ಕೆ ಹೋಲಿಸುವಾಗ ಅಷ್ಟೇನೂ ದೊಡ್ಡ ವಿಷಯವಾಗಿರಲಿಲ್ಲ. ಆದರೂ, ಲೋಕವನ್ನು ಎಂದೆಂದಿಗೂ ಬದಲಾಯಿಸಲು ಇದು ಸಾಕಾಗಿತ್ತು!

ಹೆಚ್ಚಿನ ಪ್ರಯತ್ನಗಳಲ್ಲಿ, ತಾಳ್ಮೆಯಿಂದ ಕೂಡಿದ ಪಟ್ಟುಹಿಡಿಯುವಿಕೆಯು ಯಶಸ್ಸಿಗೆ ಮುಖ್ಯ ಕಾರಣವಾಗಿರುತ್ತದೆ. ಒಂದು ಹೊಸ ಭಾಷೆಯಲ್ಲಿ ಪರಿಣತರಾಗುವುದಾಗಿರಲಿ, ಇಲ್ಲವೇ ಒಂದು ಕಸಬನ್ನು ಕಲಿಯುವುದಾಗಿರಲಿ, ಅಥವಾ ಸಂಬಂಧವನ್ನು ಬೆಳೆಸಿಕೊಳ್ಳುವುದಾಗಿರಲಿ, ಮಹತ್ವವಿರುವ ಹೆಚ್ಚಿನ ವಿಷಯಗಳನ್ನು ಬಿಟ್ಟುಕೊಡದೆ ಪ್ರಯತ್ನಿಸುವ ಮೂಲಕವೇ ಸಾಧಿಸಲಾಗುತ್ತದೆ. “ಹತ್ತರಲ್ಲಿ ಒಂಬತ್ತು ಸಾರಿ ಯಶಸ್ಸಿಗೆ ಕಾರಣವಾಗಿರುವ ಏಕಮಾತ್ರ ವಿಷಯವು, ಪರಿಶ್ರಮವೇ ಆಗಿದೆ” ಎಂದು ಗ್ರಂಥಕರ್ತರಾದ ಚಾರ್ಲ್ಸ್‌ ಟೆಮ್‌ಪಲ್‌ಟನ್‌ ಹೇಳುತ್ತಾರೆ. ಅಂಕಣಕಾರ ಲೆನರ್ಡ್‌ ಪಿಟ್ಸ್‌ ಜೂನಿಯರ್‌ ಗಮನಿಸುವುದು: “ನಾವು ಹುಟ್ಟು ಸಾಮರ್ಥ್ಯಗಳ ಕುರಿತು ಮಾತಾಡುತ್ತೇವೆ, ಅಲ್ಲದೆ ಅದೃಷ್ಟವೂ ಇರಬೇಕೆಂದು ಒಪ್ಪಿಕೊಳ್ಳುತ್ತೇವೆ. ಆದರೆ ಅನೇಕವೇಳೆ ಹೆಚ್ಚು ಪ್ರಾಮುಖ್ಯವಾದ ವಿಷಯಗಳನ್ನು ಕಡೆಗಣಿಸುತ್ತೇವೆ. ಅವು ಯಾವುವೆಂದರೆ, ಹೆಚ್ಚು ಪರಿಶ್ರಮ ಹಾಗೂ ಅನೇಕ ಸೋಲುಗಳು, ಹೊತ್ತಿಗೆ ಮುಂಚೆ ಬಂದು ಹೊತ್ತಾದ ಮೇಲೂ ಇದ್ದು ಕೆಲಸಮಾಡುವುದು.”

ಇದು, ಬೈಬಲ್‌ ಬಹಳ ಹಿಂದೆಯೇ ಹೇಳಿದ ವಿಷಯವನ್ನು ರುಜುಪಡಿಸುತ್ತದೆ: “ಚುರುಕುಗೈಯವನಿಗೆ ರಾಜ್ಯಾಧಿಕಾರ.” (ಜ್ಞಾನೋಕ್ತಿ 12:24) ಚುರುಕುಗೈ ಎಂದರೆ ನಮ್ಮ ಪ್ರಯತ್ನಗಳಲ್ಲಿ ಪಟ್ಟುಹಿಡಿಯುವುದು. ನಾವು ಏನನ್ನು ಸಾಧಿಸಬೇಕೆಂದುಕೊಂಡಿರುತ್ತೇವೋ ಅದು ನೆರವೇರಬೇಕಾದರೆ, ಈ ಗುಣವು ಬಹಳ ಪ್ರಾಮುಖ್ಯ. ಹಾಗಾದರೆ ಪಟ್ಟುಹಿಡಿಯುವಿಕೆ ಎಂದರೇನು? ನಮ್ಮ ಗುರಿಗಳನ್ನು ಬೆನ್ನಟ್ಟಲು ನಾವು ಹೇಗೆ ಪಟ್ಟುಹಿಡಿಯಬಹುದು ಮತ್ತು ನಾವು ಯಾವ ವಿಷಯಗಳಲ್ಲಿ ಪಟ್ಟುಹಿಡಿಯಬೇಕು? ಈ ಪ್ರಶ್ನೆಗಳು ನಮ್ಮ ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.

[ಪುಟ 3ರಲ್ಲಿರುವ ಚಿತ್ರ ಕೃಪೆ]

U.S. National Archives photo